10 May 2024

ಹ್ಯಾವ್ಲಾಕ್ ಐಲ್ಯಾಂಡ್ ನ ಕಾಲಾಪತ್ತರ್ ಬೀಚ್

 

ಅಂಡಮಾನ್ ೧೦ 


ಹ್ಯಾವ್ಲಾಕ್ ಐಲ್ಯಾಂಡ್ ನ  ಕಾಲಾಪತ್ತರ್ ಬೀಚ್


ಪೋರ್ಟ್ ಬ್ಲೇರ್ ನಿಂದ ಎಪ್ಪತ್ತು ಕಿಲೋಮೀಟರ್ ದೂರದ ಹ್ಯಾವ್ ಲಾಕ್ ದ್ವೀಪ ಅಥವಾ ಸ್ವರಾಜ್ ದ್ವೀಪದ ಕಡೆಗೆ ನಮ್ಮ ಪ್ರವಾಸ ಮುಂದುವರೆಯಿತು. ಆ ಪ್ರವಾಸದಲ್ಲಿ ಸಾವಿರಾರು ಕಿಲೋಮೀಟರ್ ವಿಮಾನಯಾನ ಮಾಡಿದ ನಾವು ಎಪ್ಪತ್ತು ಕಿಲೋಮೀಟರ್ ಸಾಗರಯಾನ ಕ್ಕೆ ಸಿದ್ದರಾಗಿದ್ದೆವು.ಆ ಕ್ರೂಸ್ ಪ್ರಯಾಣ ನನ್ನ ಜೀವನದ ಮೊದಲ ಕ್ರೂಸ್ ಪ್ರಯಾಣವಾಗಿತ್ತು.ಪ್ರಯಾಣ ಆರಂಭಕ್ಕೆ ಮೊದಲು ವಿಮಾನದಲ್ಲಿ ಗಗನ ಸಖಿಯರು ಹೇಳುವಂತೆ ಕೆಲ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಪೋರ್ಟ್ ಬ್ಲೇರ್ ನಿಂದ ಕ್ರೂಸ್ ನ ವಿಶಿಷ್ಠವಾದ ಅನುಭವದ ಸಾಗರ ಯಾನದ ನಂತರ ನಾವು ಹ್ಯಾವ್ ಲಾಕ್ ದ್ವೀಪದ ತಲುಪಿದೆವು ವಿಮಾನ ಯಾನದಂತೆ ಇಲ್ಲಿಯೂ ನಮ್ಮ ಲಗೇಜ್ ಗಳನ್ನು ನಮ್ಮ ಬಳಿ ಇಟ್ಟು ಕೊಳ್ಳಲು ಅವಕಾಶವಿರಲಿಲ್ಲ. ಕ್ರೂಸ್ ನಿಂದ ಇಳಿದು ನಮ್ಮ ಲಗೇಜ್ ತೆಗೆದುಕೊಂಡು ಜೆಟ್ಟಿಯಿಂದ ನಮಗಾಗಿ ಕಾಯುತ್ತಿದ್ದ ಎರಡು ವಾಹನಗಳನ್ನು ಏರಿ ಕಾಲಾ ಪತ್ತರ್ ಬೀಚ್ ಕಡೆಗೆ ಪ್ರಯಾಣ ಬೆಳೆಸಿದೆವು.ಕಾಲಾ ಪತ್ತರ್ ಗ್ರಾಮದ ಆಚೆಗೆ ಭತ್ತದ ಗದ್ದೆಗಳು ಮತ್ತು ಬಾಳೆ ತೋಟಗಳ ಸುಂದರವಾದ ದೃಶ್ಯಾವಳಿ ಗೋಚರಿಸುತ್ತದೆ. ಈ ಭೂದೃಶ್ಯವು ದ್ವೀಪಗಳಲ್ಲಿನ ಪ್ರವಾಸಿಗರ ಗದ್ದಲದ ಜೀವನದಿಂದ ವಿಭಿನ್ನವಾದ ಚಿತ್ರವನ್ನು ಚಿತ್ರಿಸುತ್ತವೆ.

ದ್ವೀಪವಾಸಿಗಳ ಶಾಂತ ಜೀವನವನ್ನು ಪ್ರದರ್ಶಿಸುತ್ತದೆ. ಕಾಲಾ ಪತ್ತರ್ ಬೀಚ್‌ಗೆ ಹೋಗುವ ರಸ್ತೆಯ ವಿಶಾಲವಾಗಿದೆ ವಾಹನಗಳ ದಟ್ಟಣೆಯೂ ಅಂದು ಹೆಚ್ಚಿರಲಿಲ್ಲ. ಅತಿ ಕಡಿಮೆ ಅವದಿಯ ಪಯಣದ ನಂತರ ನಾವು ಕಾಲಾ ಪತ್ತರ್ ಬೀಚ್ ತಲುಪಿದೆವು.


ಕಲಾಪತ್ತರ್ ಬೀಚ್ ಹ್ಯಾವ್ಲಾಕ್ ದ್ವೀಪದ ಪ್ರಮುಖವಾದ ದ್ವೀಪಗಳಲ್ಲೊಂದು. ನಾವು ಅಲ್ಲಿಗೆ ತಲುಪಿದಾಗ ಸಂಜೆಯಾದ್ದರಿಂದ ಸಂಜೆಯ ಸಮುದ್ರ ತೀರದ ನಡಿಗೆ ನಮ್ಮ ಮನಕ್ಕೆ ಮುದ ನೀಡಿತು.ಸೂರ್ಯನು ನಿಧಾನವಾಗಿ ಕಡಲ ಅಡಿಯನ್ನು ಸೇರಲು ಹೊರಟನು. ಆಗ ನೀರಿನ ಹೋಳಿಯ ಬಣ್ಣವು ಸಾಗರಕ್ಕೆ ‌ಮತ್ತಷ್ಟು  ಕಳೆ ನೀಡಿತು.ನಾವು ನಡೆಯುವಾಗ ಅಲ್ಲಲ್ಲಿ ಕಪ್ಪು ಬಣ್ಣದ ಕಲ್ಲುಗಳು ನಮ್ಮನ್ನು ಸ್ವಾಗತಿಸಿದವು.ಆ ಕಲ್ಲುಗಳ ನೆನಪಿಗಾಗಿಯೇ ಈ ದ್ವೀಪಕ್ಕೆ ಕಾಲಾ ಪತ್ತರ್ ಬೀಚ್ ಅಂದರೆ ಕಪ್ಪು ಕಲ್ಲಿನ ತೀರ ಎಂಬ ಹೆಸರು ಬಂದಿದೆ.


ನಾವು ಆ ಬೀಚ್ ಗೆ   ಹೋದಾಗ ಸಮುದ್ರ ಶಾಂತವಾಗಿತ್ತು.ಅಲೆಗಳು ಹೆಚ್ಚಾಗಿರಲಿಲ್ಲ.ಆದರೆ ಕೆಲ ಮಳೆಗಾಲದ ತಿಂಗಳು , ಹಾಗೂ ವಿಕೋಪದ ಸಮಯದಲ್ಲಿ ದೈತ್ಯ ಅಲೆಗಳು ಬಂದು ಪ್ರವಾಸಿಗಳನ್ನು ಹೊತ್ತೊಯ್ದ ಉದಾಹರಣೆ ಇವೆ ಎಂಬ ಸ್ಥಳೀಯರ ಮಾತು ಕೇಳಿ ಭಯವಾಯಿತು.


ಕಡಲತೀರದಲ್ಲಿ ಪ್ರೇಮಿಗಳು ರೊಮ್ಯಾಂಟಿಕ್ ಆಗಿ  ಲಾಂಗ್ ವಾಕ್ ಮಾಡಲು, ಕುಟುಂಬದ ಜೊತೆಯಲ್ಲಿ ಬದಲಾಗುವ ಸಮುದ್ರದ ಬಣ್ಣಗಳ ಹಿನ್ನೆಲೆಯಲ್ಲಿ ಗ್ರೂಪ್ ಪೋಟೋ ತೆಗೆಸಿಕೊಳ್ಳಲು, ರೇಷ್ಮೆಯ ಮರಳಿನ ಮೇಲೆ ಮೃದುವಾಗಿ ನಡೆಯಲು,  ಸೂರ್ಯಾಸ್ತದ ಮತ್ತು ಸೂರ್ಯೋದಯ ದ ಸೌಂದರ್ಯವನ್ನು ಕಣ್ತುಂಬಿಸಿಕೊಂಡು ರಿಪ್ರೆಶ್ ಆಗಲು ನೀವು ಒಮ್ಮೆ ಸ್ವರಾಜ್ ದೀಪದ ಕಾಲಾ ಪತ್ತರ್ ಬೀಚ್ ಗೆ ಹೋಗಿ ಬನ್ನಿ...


ಸಿಹಿಜೀವಿ ವೆಂಕಟೇಶ್ವರ

ತುಮಕೂರು

  

No comments: