ವೃತ್ತಿ ಬದುಕಿನ ಹಿನ್ನೋಟಕ್ಕೆ
ಸಿಹಿಜೀವಿಯ ಮುನ್ನೋಟ.
ನಾನು ಎಪ್ ಬಿ ನಲ್ಲಿ ಮತ್ತು ಕೆಲ ಬಳಗದಲ್ಲಿ ನಮ್ಮ ಊರು ಮತ್ತು ನನ್ನ ಬಾಲ್ಯದ ಬಗ್ಗೆ ಲೇಖನ ಬರೆದಾಗ ಲೇಖನ ಚೆನ್ನಾಗಿದೆ, ನಾನು ನಿಮ್ಮ ಊರ ಪಕ್ಕದ ಊರು ಉಪ್ಪರಿಗೇನಹಳ್ಳಿಯಲ್ಲಿ ಉಪನ್ಯಾಸಕಿಯಾಗಿದ್ದೆ ಎಂದು ಪರಿಚಯ ಮಾಡಿಕೊಂಡಿದ್ದರು.
ಕಳೆದ ವಾರ ನುಡಿತೋರಣ
ಸಂಭ್ರಮದಲ್ಲಿ ಅವರನ್ನು ನೇರವಾಗಿ ಭೇಟಿಯಾಗುವ ಅವಕಾಶ ಲಭಿಸಿತು.ಅಂದೇ ಅವರ ಹೊಸ ಪುಸ್ತಕ ಬಿಡುಗಡೆಯಾದ ಸಂತಸ! ನಾನು "ನನ್ನಮ್ಮ ನಮ್ಮೂರ ಪ್ಲಾರೆನ್ಸ್ ನೈಟಿಂಗೇಲ್" ಪುಸ್ತಕವನ್ನು ಅವರಿಗೆ ನೀಡಿದೆ. ಅವರು ಅಂದು ಲೋಕಾರ್ಪಣೆಯಾದ "ವೃತ್ತಿ ಜೀವನದ ಹಿನ್ನೋಟ" ಕೃತಿ ನೀಡಿದರು. ಅವರೇ ಚಿತ್ರದುರ್ಗದ ಹೆಮ್ಮೆಯ ಉಪನ್ಯಾಸಕಿ, ಲೇಖಕಿ, ಕಥೆಗಾರ್ತಿ, ಸಂಪನ್ಮೂಲ ವ್ಯಕ್ತಿ, ಸಿ ಬಿ ಶೈಲಾ ಜಯಕುಮಾರ್.
ವಿದ್ಯಾರ್ಥಿ ದಿಸೆಯಲ್ಲಿ 'ತೀನಂಶ್ರೀ ಚಿನ್ನದ ಪದಕ' ಪಡೆದ ಪ್ರತಿಭಾನ್ವಿತರು.
ಸಾಹಿತ್ಯದ ಒಲವಿನಿಂದಾಗಿ ಓದು ಬರಹದಲ್ಲೂ ನಿಪುಣರಾದ ಮೇಡಂರವರು ವೈವಿಧ್ಯಮಯವಾದ ವಿಷಯ ವಸ್ತುಗಳ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ನುರಿತ ಬರಹಗಾರರು, ಸೂಜಿಗಲ್ಲಿನಂತೆ ಆಕರ್ಷಿಸುವ ವಾಗ್ಮಿಗಳು. ಇಂತಹ ಬಹುಮುಖ ಪ್ರತಿಭೆಯಾದ ಶೈಲಾ ಮೇಡಂ ರವರು ಇತ್ತೀಚಿನ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಪುಸ್ತಕ ವೃತ್ತಿ ಬದುಕಿನ ಹಿನ್ನೋಟ.
ಪುಸ್ತಕವನ್ನು ನನ್ನ ಕಾರ್ಯದ ಒತ್ತಡದ ನಡುವೆಯೂ ಎರಡು ದಿನಗಳಲ್ಲಿ ಪೂರ್ಣವಾಗಿ ಓದಿದೆ.
ಮೇಡಂ ರವರ ಈ ಬರಹಗಳ ಗುಚ್ಛ ಸುಲಲಿತವಾಗಿ ಓದಿಸಿಕೊಳ್ಳುತ್ತವೆ. ಕಾವ್ಯದ ಲಹರಿ, ತಿಳಿ ಹಾಸ್ಯದ ಪರಿ, ಲಾಲಿತ್ಯದ ಬಿನ್ನಾಣ, ಗದ್ಯಗಂಧಿ ಭಾಷಾಬನಿಗಳಿಂದ ಮುದ ನೀಡುತ್ತವೆ.ಎಂಬ ನಾಗರಾಜ ಸಿರಿಗೆರೆ ರವರು ಮುನ್ನುಡಿಯಲ್ಲಿ ಹೇಳಿದ ಅಭಿಪ್ರಾಯ ನೂರಕ್ಕೆ ನೂರು ಸತ್ಯ ಎನಿಸಿತು.
ಒಟ್ಟು ಮೂವತ್ತು ಅಧ್ಯಾಯಗಳ ಈ ಕೃತಿಯಲ್ಲಿ ಮೇಡಂರವರು ತಮ್ಮ ವೃತ್ತಿ ಬದುಕಿನ ಸಿಹಿಕಹಿ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಅವರ ಶೈಕ್ಷಣಿಕ ಸಾಧನೆ, ಮುಖ್ಯಶಿಕ್ಚಕಿಯಾಗಿ, ಪ್ರೌಢಶಾಲಾ ಶಿಕ್ಷಕಿಯಾಗಿ, ಕಾಲೇಜಿನ ಉಪನ್ಯಾಸಕಿಯಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ನಿರ್ವಹಿಸಿದ ಕಾರ್ಯಗಳ ಬಗ್ಗೆ ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.
ಭೌಗೋಳಿಕವಾಗಿ ನಾನು ಓಡಾಡಿದ ಜಾಗಗಳಲ್ಲಿ ಅವರು ಕಾರ್ಯನಿರ್ವಹಿಸಿದ ಕಾರಣದಿಂದಾಗಿ ಪುಸ್ತಕ ಓದುವಾಗ ಚಿತ್ರಣಗಳು ನನ್ನ ಕಣ್ಣ ಮುಂದೆ ಹಾದು ಹೋಗುತ್ತಿದ್ದವು.ಅದರಲ್ಲೂ ಉಪ್ಪರಿಗೇನ ಹಳ್ಳಿಯ ಕಾಲೇಜಿನ ವಿವರಣೆ, ಬಸ್ ಪಯಣ, ಚಳ್ಳಕೆರೆ ಕಾಲೇಜುಗಳ ಅನುಭವದ ಬರಹಗಳು ನನಗೆ ಹೆಚ್ಚು ಆಪ್ತವಾದವು.
ನಾನೂ ಸಹ ವೃತ್ತಿಯಲ್ಲಿ ಶಿಕ್ಷಕನಾಗಿ ಇಪ್ಪತ್ತೈದು ವರ್ಷ ಪೂರೈಸಿ ಮುಂದುವರೆಯುತ್ತಿರುವ ಈ ದಿನದಲ್ಲಿ ಕೃತಿಯನ್ನು ಓದುವಾಗ ನನ್ನ ವೃತ್ತಿ ಜೀವನದ ಕೆಲ ನೆನಪುಗಳು ಒತ್ತರಿಸಿ ಬಂದವು. ಮೇಡಂ ರವರ ಬಹುತೇಕ ಅನುಭವಗಳು ನನ್ನ ಅನುಭವಗಳೇನೋ ಎಂದು ಭಾಸವಾದದ್ದು ಸುಳ್ಳಲ್ಲ.
ನಾನೂ ಕೂಡಾ ಕೆಲಸಕ್ಕೆ ಸೇರಿದ ನಂತರ ಎಂ ಎ, ಎಂ ಎಡ್ ಮಾಡಿದ್ದು , ಕೆ ಇ ಎಸ್ ,ಕೆ ಎ ಎಸ್ ಪರೀಕ್ಷೆ ಬರೆದದ್ದು, ನೆನಪಾಗುತ್ತದೆ. ವೃತ್ತಿ ಮತ್ಸರ ಎಲ್ಲಾ ಕ್ಷೇತ್ರದಲ್ಲಿ ಇರುವಂತೆ ನಮ್ಮಲ್ಲೂ ಇದೆ ಅದನ್ನು ಮೇಡಂ ಸಮರ್ಥವಾಗಿ ಎದುರಿಸಿದ್ದು ಓದಿ ಸಂತಸಗೊಂಡೆ.
ಎಲ್ಲಾ ಲೇಖನಗಳು ನನಗೆ ವೈಯಕ್ತಿಕವಾಗಿ ಇಷ್ಟವಾಗುವ ಜೊತೆಗೆ ನಾನೂ ಸಹ ನನ್ನ ವೃತ್ತಿ ಜೀವನದ ಕೆಲ ಅನುಭವಗಳನ್ನು ದಾಖಲಿಸಬೇಕು ಎಂಬ ಪ್ರೇರಣೆಯಾಯಿತು.ಇದಕ್ಕೆ ಶೈಲಾ ಮೇಡಂ ರವರಿಗೆ ಧನ್ಯವಾದಗಳನ್ನು ಸಮರ್ಪಿಸುವೆ.
ಪ್ರಚಂಡ ವಿದ್ಯಾರ್ಥಿಗಳೊಂದಿಗೆ ಎಂಬ ಲೇಖನ ಹಾಗೂ ಚಳ್ಳಕೆರೆಯ ಕಾಲೇಜಿನ ಅನುಭವಗಳನ್ನು ಓದುವಾಗ ನಾನು ಗೌರಿಬಿದನೂರಿನ ಶಾಲೆಯಲ್ಲಿ ಹದಿನೈದು ವರ್ಷಗಳ ಕಾಲದ ಶಿಕ್ಷಕ ವೃತ್ತಿ ನೆನಾಪಾಯಿತು.24 ಸೆಕ್ಷನ್ ಎರಡು ಸಾವಿರ ವಿದ್ಯಾರ್ಥಿಗಳು ನಲವತ್ತು ಶಿಕ್ಷಕರು ಅಬ್ಬಾ ನಿಜಕ್ಕೂ ಅದೊಂದು ಸಮುದ್ರ!
ತಮ್ಮ ವಿದ್ಯಾರ್ಥಿಗಳಿಂದ ಅತಿಯಾದ ಮನ್ನಣೆ ಸನ್ಮಾನಗಳನ್ನು ಸ್ವೀಕರಿಸಿದ ಜೊತೆಗೆ ಚಿತ್ರದುರ್ಗದ ಸಿಂಡ್ರೆಲಾ ನಾಟಕ ನೋಡುವಾಗ ತಮ್ಮ ಹಳೆಯ ವಿದ್ಯಾರ್ಥಿ ನಡೆದುಕೊಂಡು ರೀತಿ ಓದಿ ಬೇಸರವಾಯಿತು.ನನಗೂ ಇಂತಹ ಹಲವು ಅನುಭವಗಳಾಗಿವೆ.
ಕೈ ಬಾಯಿ ಕಚ್ಚೆ ಸರಿಯಿಲ್ಲದ ಉಪನ್ಯಾಸಕರಿಗೆ ತಕ್ಕ ಪಾಠ ಕಲಿಸಿ ವಿದ್ಯಾರ್ಥಿನಿಯರ ಬಾಳಲ್ಲಿ ದೇವತೆಯಾದ ಮೇಡಂ ರವರ ಬಗ್ಗೆ ಗೌರವ ಇಮ್ಮಡಿಯಾಗುತ್ತದೆ.
4 E ಗಳಾದ ಎನುಮರೇಷನ್ ,ಇವ್ಯಾಲುಯೇಶನ್, ಎಕ್ಸಾಮ್ ಹಾಗೂ ಎಲೆಕ್ಷನ್ ಅನುಭವಗಳನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ.
ಇನ್ನೂ ಪರೀಕ್ಷೆಯಲ್ಲಿ ಕಾಪಿ ಸಂಸ್ಕೃತಿಯನ್ನು ವಿರೋಧಿಸಿದ ದಿಟ್ಟತನವನ್ನು ಮೆಚ್ಚಲೇಬೇಕು. ಪ್ರಾಮಾಣಿಕವಾಗಿ ಪಾಠ ಮಾಡುವ ಯಾವ ಶಿಕ್ಷಕರೂ ಮಾಲ್ ಪ್ರಾಕ್ಟೀಸ್ ಅನ್ನು ಬೆಂಬಲಿಸುವುದಿಲ್ಲ.ಈ ವರ್ಷ ನಡೆದ ಹತ್ತನೇ ತರಗತಿಯ ಪರೀಕ್ಷಾ ಕ್ರಮ ಮೇಡಂ ಮತ್ತು ನನ್ನಂತಹ ಶಿಕ್ಷಕರು ಸ್ವಾಗತಿಸಿದ್ದೇವೆ. ಇದು ಹೀಗೆಯೇ ಕಟ್ಟುನಿಟ್ಟಾಗಿ ನಡೆದು ನಿಜವಾಗಿ ಕಷ್ಟ ಪಟ್ಟು ಓದುವ ಮಕ್ಕಳ ಶ್ರಮಕ್ಕೆ ಪ್ರತಿಫಲ ಲಭಿಸಲಿ ಎಂದು ನನ್ನ ಬಯಕೆ.
ಮೇಡಂ ರವರು ಪ್ರತಿ ಲೇಖನದ ಆರಂಭ ಕೊನೆ ಮತ್ತು ಮಧ್ಯದಲ್ಲಿ ಉಲ್ಲೇಖಿಸಿರುವ ಪೂರಕ ನುಡಿ ಮತ್ತುಗಳು, ವಚನ, ತ್ರಿಪದಿಗಳು ಲೇಖನದ ತೂಕವನ್ನು ಹೆಚ್ಚಿಸಿವೆ.
ಚೆಂದವಾದ ಉತ್ತಮ ಮುಖಮುಟ ವಿನ್ಯಾಸ ಓದುಗರನ್ನು ಸೆಳೆಯುತ್ತವೆ ಎಂದು ಪುಸ್ತಕ ಬಿಡುಗಡೆ ಮಾಡಿ ಹೇಳಿದ ವಿದ್ವಾಂಸರಾದ ತನಾಶಿ ರವರ ಮಾತು ದಿಟ.ಅದೇ ರೀತಿ ಪುಸ್ತಕ ಒಳಪುಟ ವಿನ್ಯಾಸವೂ ಚೆನ್ನಾಗಿದೆ.ಶೈಲಾ ಮೇಡಂ ರವರ ವೃತ್ತಿ ಜೀವನದ ಕೆಲ ಪ್ರಮುಖ ಘಟನೆಗಳ ಬಿಂಬಿಸುವ ಪೋಟೋಗಳು ಪುಸ್ತಕಕ್ಕೆ ಪೂರಕವಾಗಿವೆ. ಕೈಗೆಟುಕುವ ಬೆಲೆಯಲ್ಲಿ ಮೈಸೂರಿನ ಅಮೃತ ಪ್ರಕಾಶನ ದವರು ಪ್ರಕಟಿಸಿರುವ ಈ ಪುಸ್ತಕ ಓದಲು ನಿಮಗೂ ಆಸೆಯಿದ್ದರೆ ಈ ನಂಬರ್ ಸಂಪರ್ಕ ಮಾಡಬಹುದು.9482200056
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment