16 March 2024

ಪರೋಪಕಾರಾರ್ಥಂ ಇದಂ ಶರೀರಂ"(ಮಾನವರಾಗೋಣ)

 


ಪರೋಪಕಾರಾರ್ಥಂ ಇದಂ ಶರೀರಂ"


ನಾನು ಗೌರಿಬಿದನೂರಿನಲ್ಲಿ  ಕೆಲಸ ಮಾಡುವಾಗ ತೆಲುಗು ‌ಪಿಲ್ಮ್ ಗಳನ್ನು ಫಸ್ಟ್ ಡೇ ಫಸ್ವ್ ಶೋ ನೋಡುವ ಅಭ್ಯಾಸವಿತ್ತು. ಆಗ ನೋಡಿದ ಕೆಲವು ಚಿತ್ರಗಳಲ್ಲಿ ಮೆಗಾ ಸ್ಟರ್ ಚಿರಂಜೀವಿ ಅಭಿನಯದ ಟ್ಯಾಗೋರ್ ಚಿತ್ರ ನನಗೆ ಬಹಳ ಮೆಚ್ಚುಗೆಯಾಗಿತ್ತು ಅದಕ್ಕೆ ಕಾರಣ ಆ ಚಿತ್ರದ ಸಂದೇಶ! 

" ಯಾರಿಂದಲಾದರೂ ನೀನು  ಸಹಾಯ ಪಡೆದರೆ , ನೀನು ಮೂವರಿಗೆ  ಸಹಾಯ ಮಾಡು.ಪ್ರತಿಯಾಗಿ ಏನನ್ನೂ ಅಪೇಕ್ಷಿಸದೇ ಸಹಾಯ ಪಡೆದವರು  ಮತ್ತೆ ಮೂವರಿಗೆ ಸಹಾಯ ಮಾಡಲಿ" 

ಇದೇ ರೀತಿಯ ಸಂದೇಶ ಹೊತ್ತ ಒಂದು ಲೇಖನವನ್ನು ಮುಖ ಪುಟದಲ್ಲಿ ಓದಿದೆ...


ಕಾರು ನಿಂತಿತು,ಅದರಿಂದ ತರುಣಿಯೊಬ್ಬಳು ಕೆಳಗಿಳಿದಳು.ಟೈರ್ ಪಂಕ್ಚರ್ ಆಗಿತ್ತು.ಸ್ಟೆಪ್ನಿ ಇದ್ದರೂ ಅವಳಿಗೆ ಟೈಯರ್ ಚೇಂಜ್ ಮಾಡಲು ಬರುತ್ತಿರಲಿಲ್ಲ.

ರಸ್ತೆಯ ಬದಿಗೆ ನಿಂತು ಸಹಾಯಕ್ಕಾಗಿ ಯಾರನ್ನಾದರೂ ಹುಡುಕುತ್ತಿದ್ದಳು  ಯಾರೂ ನಿಲ್ಲುತ್ತಿಲ್ಲ. ಕೈಯಲ್ಲಿನ ವಾಚ್ ನೋಡಿಕೊಂಡಳು ಸಂಜೆ ಆರು ದಾಟಿದೆ.  ನಿಧಾನವಾಗಿ  ಕತ್ತಲಾಗುತ್ತಿದೆ.ಮನದಲ್ಲಿ ಆತಂಕ.ತಾನಿರುವುದು ಒಬ್ಬಳೇ.  ಬೇರೆ ಯಾರೂ ಇಲ್ಲ.ಇನ್ನೂ ಕತ್ತಲಾದರೆ???!!


ಸಮೀಪದಲ್ಲಿ ಯಾವುದೇ ಮನೆಗಳಿಲ್ಲ.ಸೆಲ್ ಕಾರ್ಯನಿರ್ವಹಿಸುತ್ತಿಲ್ಲ .ಆಗಲೇ ಸುಮಾರು ಒಂದು ಗಂಟೆ ಕಳೆದಿತ್ತು.ಭಯವಾಗಲು ಶುರುವಾಯಿತು. ಚಳಿಯೂ ಹೆಚ್ಚುತ್ತಿತ್ತು.


ಹಾದು ಹೋಗುತ್ತಿದ್ದ ಬೈಕೊಂದು ಮುಂದೆ ಹೋಗಿ  ಹಿಂತಿರುಗಿ ಬಂತು.ಒಬ್ಬ ವ್ಯಕ್ತಿ ಬೈಕ್ ಸ್ಟ್ಯಾಂಡ್ ಹಾಕಿ ಆಕೆಯ ಬಳಿ ಬಂದ.ಆಕೆಗೆ ಸಹಜವಾಗಿಯೇ ಭಯವಾಯಿತು.ಯಾರು?  ಅವನು ಯಾಕೆ ಬರುತ್ತಿದ್ದಾನೆ?


ಅವನು ನಗುತ್ತಾ ಹತ್ತಿರ ಬಂದನು.ಟೈರ್ನಲ್ಲಿ ಗಾಳಿ ಇಲ್ಲದಿರುವುದನ್ನು ನೋಡಿದ. ಅವಳು ಭಯಪಡುತ್ತಿದ್ದಾಳೆಂದು ಅವನಿಗೆ ಅರಿವಾಯಿತು.

"ಭಯ ಬೇಡ,ನಿಮಗೆ ಸಹಾಯ ಮಾಡಲು ಬಂದಿದ್ದೇನೆ.ತುಂಬಾ ಚಳಿಯಿದೆ.ನೀವು ಕಾರಿನಲ್ಲಿ ಕುಳಿತುಕೊಳ್ಳಿ.ನಾನು ಸ್ಟೆಪ್ನಿಯನ್ನು ಬದಲಾಯಿಸುತ್ತೇನೆ"ಎಂದು ಅವನು ಹೇಳಿದ.ಅವಳು ಹೆದರುತ್ತಲೇ ಇದ್ದಳು.


"ನನ್ನ ಹೆಸರು ಮಹೇಶ್.ನಾನು ಇಲ್ಲಿಯೇ ಸಮೀಪದ ಮೆಕ್ಯಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ   ಎಂದನು.ಅವನು ಡಿಕ್ಕಿಯನ್ನು ತೆರೆದು ಅಗತ್ಯ ಸಾಮಾನುಗಳನ್ನು ತೆಗೆದುಕೊಂಡು ಕಾರಿನ ಕೆಳಗೆ ತೂರಿಕೊಂಡು ಜಾಕ್ ಎತ್ತಿ  ಟೈರ್ ಬದಲಿಸುವ ಕಾಯಕ ಆರಂಭಿಸಿದ.  ಡಾಂಬರು ರಸ್ತೆಯಲ್ಲಿ ಕೈಗಳು ತರಚಿಕೊಳ್ಳುತ್ತಿದ್ದವು.ಆದರೂ ಕಷ್ಟಪಟ್ಟು ಟೈರ್ ಬದಲಾಯಿಸಿದ.ಸಾಮಾನುಗಳನ್ನು ಮತ್ತೆ ಕಾರಿಗೆ ಹಾಕಿದ.ಅವಳು ಪರ್ಸ್ ತೆಗೆದು ಹಣ ಕೊಡಲು ಹೋಗುತ್ತಿದ್ದಂತೆ ಅವನು ಬೇಡ ಎಂದ.  


ಆಗ ಅವಳು ನೀವು ಇದನ್ನು ನಿರಾಕರಿಸಬೇಡಿ. ನೀವು ಈ ಸಹಾಯವನ್ನು ಮಾಡಿರದಿದ್ದರೆ....

"ನನ್ನ ಪರಿಸ್ಥಿತಿಯನ್ನು ನೆನೆದರೆ.ನನಗೇ ಭಯವಾಗುತ್ತಿದೆ" ಎಂದಳು 

ಆಗ ಅವನು ನಾನು ಕಷ್ಟದಲ್ಲಿದ್ದಾಗ ಯಾರೋ ನನಗೆ ಸಹಾಯ ಮಾಡಿದರು ಅಷ್ಟಕ್ಕೂ

ನೀವು ಸಹಾಯ ಮಾಡಲು ಬಯಸಿದರೆ ಯಾರಾದರೂ ತೊಂದರೆಯಲ್ಲಿದ್ದಾರೆ ಎಂದು ನಿಮಗೆ ತಿಳಿದರೆ ನನ್ನ ಹೆಸರಲ್ಲಿ ಅವರಿಗೆ ಸಹಾಯ ಮಾಡಿಬಿಡಿ" ಎನ್ನುತ್ತಲೇ ನಿಲ್ಲದೆ ಹೊರಟೇ ಬಿಟ್ಟನು.


ಮನಸ್ಸಿನಲ್ಲಿ ಅವನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಕಾರನ್ನು ಓಡಿಸ ತೊಡಗಿದಳು.ಆಗ ಹಸಿವಾಗ ತೊಡಗಿತು.ಅಲ್ಲದೆ ಅವಳು ಇನ್ನೂ ಬಹಳ ದೂರ ಸಾಗಬೇಕಾಗಿತ್ತು.ಹಸಿವು ಮತ್ತು ಚಳಿ ಅವಳನ್ನು ರಸ್ತೆ ಬದಿಯ ಹೋಟೆಲ್‌ಗೆ ಹೋಗುವಂತೆ ಮಾಡಿತು. ಅದೊಂದು ಚಿಕ್ಕ ಹೋಟೆಲ್.ಗರ್ಭಿಣಿ ಮಹಿಳೆ ಗ್ರಾಹಕರ ಟೇಬಲ್ಗಳಿಗೆ ಸೇವೆ ಸಲ್ಲಿಸುತ್ತಿದ್ದಾಳೆ.  ಅವಳನ್ನು ನೋಡುತ್ತಿದ್ದರೆ ತುಂಬು ಗರ್ಭಿಣಿ ಅನ್ನಿಸಿತು. ಪ್ರಸವದ  ದಿನಗಳು ಸಮೀಪಿಸುತ್ತಿರುವಂತೆ ತೋರುತ್ತಿತ್ತು ಭಾರವಾಗಿ ನಡೆಯುವುದು,

ಎಲ್ಲಾ ಟೇಬಲ್ಗಳಿಗೆ ಹೋಗುವುದು,ಬೇಕಾದ ಆರ್ಡರ್ ತೆಗೆದುಕೊಳ್ಳುವುದು,ಬಡಿಸುವುದು,ಬಿಲ್ ತೆಗೆದುಕೊಳ್ಳುವುದು,ಚಿಲ್ಲರೆ ವಾಪಾಸ್ ಕೊಡುವುದು ಹೀಗೆ ಎಲ್ಲವನ್ನೂ ಒಬ್ಬಳೇ ಮಾಡುತ್ತಿದ್ದಳು.

ಆದರೂ ಅವಳ ಮುಖದಲ್ಲಿ ಮಾಸದ ನಗು!!


ಅವಳು ಈ ತರುಣಿಯ ಮೇಜಿನ ಬಳಿ ಬಂದಳು.  ನಗುತ್ತಾ "ನಿನಗೆ ಏನು ಬೇಕು?ಎಂದು ಕೇಳಿದಳು.

ಅಷ್ಟು ಕಷ್ಟಪಡುತ್ತಿದ್ದರೂ ಆಕೆಯ ಮುಖದಲ್ಲಿ ಮರೆಯಾಗದ ನಗು ಹೇಗಿದೆ?ಎಂದು ತರುಣಿ ಮನದಲ್ಲಿ ಆಶ್ಚರ್ಯಪಡುತ್ತಾ  ಆರ್ಡರ್ ಮಾಡಿದಳು.ಆಹಾರ ಬಂತು,ಊಟ ಮುಗಿಸಿ ಅವಳಿಗೆ 2000 ರೂಪಾಯಿಯ ನೋಟು ಕೊಟ್ಟಳು.

ಹೋಟೆಲ್ನಾಕೆ ಚಿಲ್ಲರೆ ತರಲು ಕೌಂಟರ್ನೆಡೆಗೆ ಹೋದಳು.ಹಿಂತಿರುಗಿ ಬಂದಾಗ ತರುಣಿ ಕಾಣಲಿಲ್ಲ. ಅವಳು ಕುಳಿತಿದ್ದ ಮೇಜಿನ ಮೇಲಿದ್ದ ನೀರಿನ ಲೋಟದ ಕೆಳಗೆ ಒಂದು ಕಾಗದ ಮತ್ತು ನಾಲ್ಕು 2000 ನೋಟುಗಳು ಕಾಣಿಸಿದವು.

ಹೋಟೆಲ್ನವಳಿಗೆ ಆ ಕಾಗದ ಓದಿ ಅಳು ತಡೆಯಲಾಗಲಿಲ್ಲ.

ಅದರಲ್ಲಿ ಬರೆದಿತ್ತು 

"ನಿಮ್ಮ ನಗುತ್ತಿರುವ ಮುಖವು ನೀವು ಬಳಲುತ್ತಿಲ್ಲ ಎಂದು ತೋರುತ್ತಿದೆಯಾದರೂ ತುಂಬು ಗರ್ಭಿಣಿಯಾದ ನೀವು ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವೆರೆಂದರೆ ನಿಮಗೆ ಖಂಡಿತಾ ಹಣದ ಅವಶ್ಯಕತೆ ಇರುವಂತಿದೆ.ನನಗೆ ಈಗಷ್ಟೇ ಒಬ್ಬ ಮಹನೀಯ ಸಹಾಯ ಮಾಡಿದ್ದಾನೆ.

ನಾನು ನಿಮಗೆ ಸಹಾಯ ಮಾಡುತ್ತಿದ್ದೇನೆ.ಅದೇ ರೀತಿಯಲ್ಲಿ ನೀವೂ ಇತರರಿಗೆ ಸಹಾಯ ಮಾಡಿ." ಎಂದು ಬರೆದಿತ್ತು.


ಹೋಟೆಲ್ ಮುಚ್ಚಿ ಮನೆಗೆ ಬಂದಳು.ಅಷ್ಟರಲ್ಲೇ ಕೆಲಸಕ್ಕೆ ಹೋಗಿದ್ದ ಅವಳ ಗಂಡ ಮನೆಗೆ ಬಂದು ದಣಿವಾರಿಸಿಕೊಳ್ಳಲು ಮಂಚದಲ್ಲಿ ಮಲಗಿದ್ದ. ಅವನ ಕೈಗಳು ತರಚಿಕೊಂಡು ರಕ್ತದ ಕಲೆಗಳಿಂದ ಕೂಡಿದ್ದವು.ಅವಳ ಗಂಡ ಬೇರೆ ಯಾರೂ ಆಗಿರದೆ ಆ ಯುವತಿಗೆ ಟೈರ್ ಬಲಾಯಿಸಿ ಕೊಟ್ಟಿದ್ದ ಅದೇ ಮೆಕ್ಯಾನಿಕ್ ಆಗಿದ್ದ!


ಇವಳು ಅವನ ಪಕ್ಕದಲ್ಲಿ ಹಾಸಿಗೆಯ ಮೇಲೆ ಕೂಡುತ್ತಾ,ತನ್ನ ಪ್ರಸವವಾದರೆ ದುಡ್ಡನ್ನು ಹೊಂದಿಸುವುದು ಹೇಗೆ ಎಂದು ನಾವು ಚಿಂತಿತರಾಗಿದ್ದೆವಲ್ಲವೇ? ಇನ್ನು ಆ ಆತಂಕ ಬೇಡ!  ದೇವರು ನಮಗೆ ಸಹಾಯ ಮಾಡಿದನು ಎನ್ನುತ್ತಾ ನಡೆದುದೆಲ್ಲವನ್ನೂ ಶಾಂತವಾಗಿ ಹೇಳಿದಳು, ಅವನ ಕಣ್ಣಂಚಿನಲ್ಲಿ ಎರಡು ಹನಿ ಜಾರಿದವು...


ಅಗತ್ಯವಿರುವಾಗ ನಾವು ಇತರರಿಗೆ ಸಹಾಯ ಮಾಡುವ ಗುಣ ನಮ್ಮ ಭಾರತೀಯರಲ್ಲಿ ರಕ್ತಗತವಾಗಿ ಬಂದಿದೆ."ಪರೋಪಕಾರಾರ್ಥಂ ಇದಂ ಶರೀರಂ" ಎಂಬಂತೆ ನಾವು 

ನಿಜವಾಗಿಯೂ ಸಹಾಯಕ್ಕೆ ಅರ್ಹರಾಗಿರುವವರಿಗೆ ಸಹಾಯ ಮಾಡೋಣ. ಈ ಪ್ರಪಂಚ ಸಮಾಜ ಸರಿಯಿಲ್ಲ ಎಂಬ ಸಿನಿಕತನ ಬಿಟ್ಟು ಇನ್ನ ಒಳ್ಳೆಯತನವಿದೆ ಎಂದು ಸಾಬೀತುಮಾಡೋಣ.



ಸಿಹಿಜೀವಿ ವೆಂಕಟೇಶ್ವರ

ತುಮಕೂರು

No comments: