ಮಾನವೀಯ ಗುಣಗಳ ಒರತೆ
"ಕಾಲ ಕೆಟ್ಟೋಯ್ತು, ಮಾನವೀಯತೆಗೆ ಬೆಲೆ ಇಲ್ಲ. ಎಲ್ಲಾ ಸ್ವಾರ್ಥಿಗಳು.ಮೌಲ್ಯಗಳು ಅದಃಪತನ ಹೊಂದಿವೆ" ಹೀಗೆ ನಾವು ಆಗಾಗ್ಗೆ ಮಾತನಾಡಿಕೊಳ್ಳುತ್ತೇವೆ.ಯಾವುದೋ ಘಟನೆ, ಅಥವಾ ವ್ಯಕ್ತಿಗಳ ಅಧಾರದ ಮೇಲೆ ಸಾರಾಸಗಟಾಗಿ ಇಡೀ ಸಮಾಜವನ್ನು ಮೌಲ್ಯಮಾಪನ ಮಾಡುವಲ್ಲಿ ನಾವು ನಿಸ್ಸೀಮರಾಗಿದ್ದೇವೆ.ನಾವಂದುಕೊಂಡಂತೆ ಸಮಾಜದಲ್ಲಿ ಎಲ್ಲರೂ ಕೆಟ್ಟವರಲ್ಲ ಒಳ್ಳೆಯವರು ಇಲ್ಲದೇ ಇಲ್ಲ.ಸುಮ್ಮನೆ ನಿಮ್ಮ ಬೈಕ್ ಸ್ಟ್ಯಾಂಡ್ ತೆಗೆಯದೆ ಬೈಕ್ ಓಡಿಸಿ ನೋಡಿ ಹತ್ತಾರು ಕೈಗಳು ನಿಮ್ಮ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಬೈಕ್ ಸ್ಟಾಂಡ್ ತೆಗೆಯಲು ಹೇಳುತ್ತಾರೆ. ಮಾನವೀಯತೆಯ ಒರತೆ ಕಡಿಮೆಯಗಿರಬಹುದು ಆದರೆ ನಮ್ಮಲ್ಲಿ ಈಗಲೂ ಹರಿಯುತ್ತಿದೆ.ಇದಕ್ಕೆ ಪೂಕವಾಗಿ ನಾನಿರುವ ಒಂದು ಗುಂಪಿನಲ್ಲಿ ಸಹೃದಯರೊಬ್ಬರು ಒಂದು ಸಂದೇಶ ಮುನ್ನಾಯಿಸಿದ್ದರು ಅದು ಹೀಗಿದೆ.
ಮನೆಗೆ ಹೊರಟಿದ್ದೆ ಎಲೆಕ್ರ್ಟಿಕ್ ಕಂಬಕ್ಕೆ ಯಾರೋ ಒಂದು ಬೋರ್ಡ್ ನೇತು ಹಾಕಿದ್ದರು. ಅದರಲ್ಲಿ ಏನು ಬರೆದಿರಬಹುದು ಎಂದು ಕುತೂಹಲ ಉಂಟಾಯಿತು ಹತ್ತಿರ ಹೋಗಿ ನೋಡಿದರೆ ಅದರಲ್ಲಿ ಬರೆದಿತ್ತು
ಈ ರಸ್ತೆಯಲ್ಲೆಲ್ಲೊ ಐವತ್ತು ರುಪಾಯಿಯನ್ನು ಕಳೆದುಕೊಂಡಿದ್ದೇನೆ ನಿಮಗೆ ಯಾರಿಗಾದರೂ ಸಿಕ್ಕರೆ, ಈ ವಿಳಾಸದಲ್ಲಿರುವ ನನಗೆ ತಲುಪಿಸಿ. ನನ್ನ ಕಣ್ಣಿನ ದೃಷ್ಟಿ ತುಸು ಮಂಜಾಗಿದೆ ದಯವಿಟ್ಟು ಸಹಾಯ ಮಾಡಿ.
ನಾನು ಆವಿಳಾಸವನ್ನು ಗಮನಿಸಿದೆ. ಅಲ್ಲಿರುವ ವ್ಯಕ್ತಿಯನ್ನು ನೋಡಬೇಕು ಎಂದು ಬಲವಾಗಿ ಅನಿಸಿತು. ಆ ವಿಳಾಸದ ಬಳಿ ಹೋದಾಗ ಗುಡಿಸಲಿನಂತ ಮನೆಯ ಮುಂದೆ ಮುದುಕಿಯೊಬ್ಬಳು ಕುಳಿತಿದ್ದಳು. ಆಕೆ ಬಸವಳಿದಿದ್ದಳು ನಾನು ಬರುತ್ತಿರುವ ಸದ್ದನ್ನು ಕೇಳಿ ಯಾರು? ಎಂದಳು ನಾನು ಅಜ್ಜಿ ,ಈ ದಾರಿಯಲ್ಲಿ ಬರುವಾಗ ಐವತ್ತು ರೂಪಾಯಿ ಸಿಕ್ಕಿತು. ಕರೆಂಟ್ ಕಂಬದ ಮೇಲೆ ಬರೆದ ಬೋರ್ಡ್ ನೋಡಿದೆ. ನಿಮಗೆ ಕೊಟ್ಟು ಹೋಗೋಣ ಎಂದು ಬಂದೆ ಅಂದೆ.
ನನ್ನ ಮಾತು ಕೇಳಿ ಅವಳ ಕಣ್ಣು ತೇವವಾದವು. ಈಗಾಗಲೆ 40-50 ಮಂದಿ ಬಂದು ದಾರಿಯಲ್ಲಿ ತಮಗೆ ಐವತ್ತು ರೂಪಾಯಿ ಸಿಕ್ಕಿತೆಂದು ಕೊಟ್ಟು ಹೋಗಿದ್ದಾರೆ. ಆಷ್ಟಕ್ಕೂ ಆ ಕರೆಂಟ್ ಕಂಬದ ಮೇಲೆ ನಾನು ಬೋರ್ಡ್ ನೇತು ಹಾಕಿಲ್ಲ ನನಗೆ ಓದಲು ಬರೆಯಲು ಬರುವುದಿಲ್ಲ, ಎಂದಳು . ಪರವಾಗಿಲ್ಲ ಐವತ್ತು ರುಪಾಯಿ ಇಟ್ಟುಕೊಳ್ಳಿ ಎಂದೆ.
ನೀವು ಇಲ್ಲಿಂದ ಹೋಗುವಾಗ ಆ ಕಂಬದ ಮೇಲೆ ಬರೆದ ಬೋರ್ಡ್ ತೆಗೆದುಹಾಕಿ ಎಂದು ನನ್ನನ್ನು ವಿನಂತಿಸಿದಳು. ಸೋಜಿಗವೆಂದರೆ ತನ್ನನ್ನು ನೋಡಲು ಬಂದವರಿಗೆಲ್ಲ ಬೋರ್ಡ್ ಅನ್ನು ತೆಗೆದು ಹಾಕುವಂತೆ ಹೇಳುತ್ತಿದ್ದಳು. ಆದರೆ ಯಾರೂ ಹಾಗೆ ಮಾಡಿರಲಿಲ್ಲ.
ನಾನು ವಾಪಸ್ ಬರುವಾಗ ಯೋಚಿಸಲಾರಂಬಿಸಿದೆ, ಕರೆಂಟ್ ಕಂಬದ ಮೇಲೆ ಯಾರು ಈ ಬೋರ್ಡ್ ತಗುಲಿ ಹಾಕಿರಬಹುದು? ತನ್ನನ್ನು ನೋಡಲು ಬಂದವರಿಗೆಲ್ಲ ಅದನ್ನು ತೆಗೆದು ಹಾಕಿ ಎಂದು ಹೇಳಿದರೂ ಯಾರೂ ತೆಗೆದು ಹಾಕಲಿಲ್ಲ?
ಯಾರೋ ಒಬ್ಬನಿಗೆ ಆ ಮುದುಕಿಗೆ ಸಹಾಯ ಮಾಡಬೇಕೇಂದು ಅನಿಸಿರಬೇಕು, ಆತ ಬೋರ್ಡ್ ಅನ್ನು ಹಾಕಿರಬೇಕು.
ಒಬ್ಬರಿಗೆ ಸಹಾಯ ಮಾಡಬೇಕು ಅನಿಸಿದರೆ ಎಷ್ಟೋಂದು ದಾರಿಗಳಿವೆಯಲ್ಲ.
ಅಷ್ಟೊತ್ತಿಗೆ ಯಾರೋ ಕರೆದಂತಾಯಿತು. "ಸಾರ್ ಈ ಅಡ್ರೆಸ್ ನಲ್ಲಿರುವ ವ್ಯಕ್ತಿಯನ್ನು ಬೇಟಿ ಮಾಡುವುದು ಹೇಗೆ? ಅಲ್ಲಿಗೆ ಹೋಗುವುದು ಹೇಗೆ? ನನಗೆ ದಾರಿಯಲ್ಲಿ ಐವತ್ತು ರೂಪಾಯಿ ಸಿಕ್ಕಿತು ಅವರಿಗೆ ತಲುಪಿಸಬೇಕಾಗಿದೆ" ಎಂದು ದಾರಿಹೋಕನೊಬ್ಬ ಹೇಳಿದ
ನಾನು ಗದ್ಗದಿತನಾದೆ...
ಕೆಟ್ಟತನವನ್ನೇ ವಿಜೃಂಬಿಸುವ ಅಹಿಂಸೆಯನ್ನು ದಿನಗಟ್ಟಲೇ ವೈಭವೀಕರಿಸುವ ಮಾಧ್ಯಮಗಳು ಬರೀ ಮಚ್ಚು ಕೊಚ್ಚು ಮಾತ್ರವೇ ಸಿನಿಮಾ ಎಂದು ರೀಲು ಸುತ್ತುವವರು ಇಂತಹ ಮಾನವೀಯ ಸಂಬಂಧಗಳು ಮೌಲ್ಯಗಳನ್ನು ಎತ್ತಿ ತೋರಿಸುವ ಮೂಲಕ ಪ್ರೀತಿ, ಕರುಣೆ, ಮಾನವೀಯತೆಯ ಒರತೆಗಳ ಹೆಚ್ಚಿಸುವ ಕೆಲಸ ಮಾಡಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಶಿಕ್ಷಕರು
9900925529
No comments:
Post a Comment