16 March 2024

ಮೆದುಳಿನ ಮೂಲ ಕರುಳು! (ಪುಸ್ತಕ ವಿಮರ್ಶೆ)


 



 ಮೆದುಳಿನ ಮೂಲ ಕರುಳು..


ಆತ್ಮೀಯರಾದ ಗುಬ್ಬಚ್ಚಿ ಸತೀಶ್ ರವರ ಗುಬ್ಬಚ್ಚಿ ಪುಸ್ತಕ ಉದ್ಘಾಟನೆಗೆ ಅತಿಥಿಯಾಗಿ ಹೋದಾಗ ಖರೀದಿಸಿದ ಡಾ ಕೆ ಎನ್ ಗಣೇಶಯ್ಯ ರವರ ಹೊಕ್ಕಳ ಮೆದುಳು ಕಥಾಂಬರಿ ಓದಿದಾಗ ಹೌದು ಇದು ಕಥೆಯೂ ಅಲ್ಲ ಕಾದಂಬರಿಯೂ ಅಲ್ಲ ಅವೆರಡರ ಮಧ್ಯದ ಒಂದು ಪ್ರಕಾರ ಎಂದು ಲೇಖಕರ ಮಾತಿನಲ್ಲಿ ಗಣೇಶಯ್ಯ ರವರು ಹೇಳಿದ್ದು ಸತ್ಯ ಎನಿಸಿತು.


ಕಳೆದ ಭಾನುವಾರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ಅಂಕಣದಲ್ಲಿ ಬೆಂಕಿಯ ಆವಿಷ್ಕಾರ ನಮ್ಮ ಮೆದುಳಿನ ವಿಕಾಸಕ್ಕೆ ಹೇಗೆ ನಾಂದಿಯಾಯಿತು ಎಂಬುದನ್ನು ವೈಜ್ಞಾನಿಕವಾಗಿ ವಿವರಣೆ ನೀಡಿದ ಅಂಕಣ ಓದಿದ ನನಗೆ ಈ ಹೊಕ್ಕಳ ಮೆದುಳು ಪುಸ್ತಕದ ಬಗ್ಗೆ ಕುತೂಹಲ ಹೆಚ್ಚಾಗಿ ಓದಿದೆ.


ಇಲ್ಲಿಯೂ ಗಣೇಶಯ್ಯ ರವರ ಕಾದಂಬರಿ ಶೈಲಿ ಪೂರಕ ಮಾಹಿತಿಗೆ ಅಡಿಟಿಪ್ಪಣಿಗಳು ಗಮನ ಸೆಳೆಯುತ್ತವೆ ಎಂದಿನಂತೆ ವಿಷಯದ ಆಯ್ಕೆಯಲ್ಲಿ ಈ ಬಾರಿಯೂ ಅವರು ಹೊಸತೊಂದು ಪ್ರಚಲಿತ ವೈಜ್ಞಾನಿಕ ಮತ್ತು ಜೀವಶಾಸ್ತ್ರದ ವಿಷಯ ತೆಗೆದುಕೊಂಡು ಬಹಳ ಚೆಂದವಾಗಿ ನಿರೂಪಿಸಿದ್ದಾರೆ.


ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ 'ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಕತೆ' ಎಂಬ ಅಂತಾರಾಷ್ಟ್ರೀಯ ಕಮ್ಮಟದಲ್ಲಿ ಭಾಗವಹಿಸಿಲು ಆಹ್ವಾನಿತಗೊಂಡಿದ್ದ ಭಾರತದ ಧರ್ಮಗುರುಗಳು ಅಚ್ಚರಿಯ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲಿನ ಮಾನಸಿಕ ಆಸ್ಪತ್ರೆಯಲ್ಲಿ ನಡೆದ ದುರಂತವೊಂದಕ್ಕೆ ಇಂದಿನ ನ್ಯಾಯಪದ್ಧತಿಯ ಆವರಣದಲ್ಲಿ ಸೂಕ್ತ ಮತ್ತು ಸಿದ್ಧ ಪರಿಹಾರ ಸಿಗದ ಕಾರಣ, ವಿಜ್ಞಾನಿಗಳ, ನ್ಯಾಯಪಾಲಕರ ಮತ್ತು ಧರ್ಮಗುರುಗಳ ನಡುವೆ ಒಂದು ಜಾಗತಿಕ ಚರ್ಚೆಯನ್ನು ಏರ್ಪಡಿಸಲಾಗಿರುತ್ತದೆ. ಮಾನಸಿಕ ಸ್ಥಿತಿಯಲ್ಲಾಗುವ ಪಲ್ಲಟಗಳ ಬಗ್ಗೆ ನಡೆದ ಈ ಚರ್ಚೆಯಲ್ಲಿ ಎದುರಾಗುವ ಅಂಶಗಳು ಕುತೂಹಲಕಾರಿ ಹಾಗೂ ಹೊಸ ಹೊಳವುಗಳನ್ನು ನೀಡುತ್ತವೆ.

ಆ ಚರ್ಚೆ ಕೆಲವೊಮ್ಮೆ ನಾನು ನಾನಾ ಅಥವಾ ನಾವಾ ಎಂಬ ಅನುಮಾನ ಮೂಡಿಸಿ ಕೊನೆಗೆ ನಮ್ಮ ದೇಹ ಕೇವಲ ನಾನಲ್ಲ ನಾವು ಎಂಬ ತೀರ್ಮಾನಕ್ಕೆ ಬರಲಾಯಿತು.ಈಗ ನಿಮ್ಮಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು ಅದಕ್ಕೆ ನೀವು ಪುಸ್ತಕ ಓದಿಯೇ ಪರಿಹಾರ ಕಂಡುಕೊಳ್ಳಬೇಕು.


ಕೊಲೆ ಮಾಡಿದ ವೈಸರ್ ಈ ಕೊಲೆ ನಾನೊಬ್ಬನೇ ಮಾಡಿಲ್ಲ ಬೇರೆಯವರು ಸೇರಿ ಮಾಡಿದೆವು ಎಂದು ಜಡ್ಜ್ ಮುಂದೆ  ದೃಢವಾಗಿ ಹೇಳಿದಾಗ ಅದರಂತೆ  ತನಿಖೆ ಕೈಗೊಂಡಾಗ ಹೊರಬಂದ ಸತ್ಯಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಬ್ಯಾಕರ್ ನ ಸ್ವಾರ್ಥ ಮತ್ತು ಫಾರ್ಮ ಕಂಪನಿಗಳ ಅನೈತಿಕ ಮತ್ತು ಲಾಭಕೊರತನದ ಆಸೆಯ ಬಗ್ಗೆ ಕಾದಂಬರಿಕಾರರು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ.

ನಮ್ಮ ಕರುಳಿಗೂ ಮೆದುಳಿಗೂ ಅವಿನಾಭಾವ ಸಂಬಂದವಿದೆ ಎಂಬುದನ್ನು ಗಟ್ ಬ್ರೈನ್ ಆಕ್ಸಿಸ್ ನಲ್ಲಿ ಜೀವ ವಿಜ್ಞಾನಿಗಳು ವಿವರಿಸಿದ್ದಾರೆ. ಕರುಳು ಮತ್ತು ಮೆದುಳಿನ ನಡುವೆ ಇರುವ ಸಂಬಂಧದಿಂದಾಗಿ ಮಾನವನ ಅದೆಷ್ಟು ಜೀವನ ಕ್ರಮಗಳು ಮತ್ತು ವರ್ತನೆಗಳು ಈ ಸೂಕ್ಷ್ಮಾಣುಗಳಿಂದ ನಿಗ್ರಹಿಸಲ್ಪಟ್ಟಿವೆ ಎನ್ನುವ ಬಗ್ಗೆ ದಿನನಿತ್ಯವೂ ಹೊಸ ಹೊಸ ಅನ್ವೇಷಣೆಗಳು ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಈ ಕಥಾಂಬರಿ ನಮಗೆ ಹೊಸ ಜ್ಞಾನ ನೀಡುತ್ತದೆ.


ಮೂಲತಃ ವೈಸರ್ ಒಳ್ಳೆಯವನಾದರೂ ಅವನ ದೇಹದಲ್ಲಿ ಅವನಿಗೆ ಗೊತ್ತಾಗದಂತೆ ಕ್ರೂರ ಮನಸ್ಸಿನ ವ್ಯಕ್ತಿಯಾದ ಕಾರ್ಲೋಸ್ ನ ಕರುಳಿನ ಜೀವ ಕೋಶಗಳನ್ನು ಕಲ್ಚರ್ ಮಾಡಿ  ಅವನ ದೇಹ  ಸೇರುವಂತೆ ಮಾಡಿದಾಗ ಉಂಟಾಗುವ ಬೆಳವಣಿಗೆಯಲ್ಲಿ ವೈಸರ್ ನು   ಬ್ಯಾಕರ್ ಸಾವಿಗೆ ಕಾರಣನಾಗಿದ್ದು ಹೊರಗಿನಿಂದ ಬಂದ ಜೀವಕೋಶಗಳಿಂದ! ಆಗ ಶಿಕ್ಷೆ ಯಾರಿಗೆ ಕೊಡಬೇಕು? ವೈಸರ್ಗೊ? ಅಥವಾ ಅನಾಹುತಕಾರಿ ಜೀವಕೋಶಕ್ಕೋ? 

ಈ ಗೊಂದಲದ ಹಿನ್ನೆಲೆಯಲ್ಲಿ ನಡೆದ ಚರ್ಚೆಯಲ್ಲಿ ನಮ್ಮನ್ನು ಚಿಂತನೆಗೀಡು ಮಾಡುವ ಅಂಶಗಳು ಬಯಲಿಗೆ ಬರುತ್ತವೆ. 

ಇಂತಹ ವೈಜ್ಞಾನಿಕ ಸಂಶೋಧನೆ ಮತ್ತು   ಎ ಐ ಬಳಕೆಯ ಸಮಾಜದಲ್ಲಿ ನಮ್ಮ ಇಂದಿನ ಎಲ್ಲ ನ್ಯಾಯಾಂಗ ನಿಯಮಗಳು ಮತ್ತು ಕಾನೂನುಗಳು

ಮಾನವನನ್ನು ಪ್ರಕೃತಿಯಿಂದ ಬೇರ್ಪಡಿಸಿ, ಹೊರಗೆಳೆದು ಆತನೊಬ್ಬ ವಿಶೇಷ ಜೀವಿ

ಎಂಬ ಕಲ್ಪನೆಯಲ್ಲಿ ರೂಪುಗೊಂಡಿವೆ ಎನ್ನುವುದು ವಿದಿತ. ಆ ಕಾರಣದಿಂದಾಗಿಯೇ

ನಮ್ಮ ನ್ಯಾಯನಿಯಮಗಳಲ್ಲಿ ಕಾನೂನುಗಳಲ್ಲಿ  ಹಲವು ವೈರುಧ್ಯಗಳು ನುಸುಳಿವೆ  ನಮ್ಮನ್ನು ಪ್ರಕೃತಿಯಿಂದ ಬೇರ್ಪಡಿಸಿಕೊಳ್ಳದೆಯೇ, ನಾವೆಲ್ಲರೂ ಅದರ ಭಾಗವಷ್ಟೆ ಎಂಬ ಚಿಂತನೆಯ ಆವರಣದಲ್ಲಿ ನಮ್ಮ ಕಾನೂನು ವ್ಯವಸ್ಥೆಯನ್ನು

ರೂಪಿಸಲು ಕಾಲ ಬಂದಿದೆ 

ವ್ಯವಸ್ಥೆಯನ್ನು, ನಿಯಮಗಳನ್ನು ವಿವಿಧ ದೃಷ್ಟಿಕೋನದಲ್ಲಿ ನೋಡುವುದರಿಂದ  ಈ ಕಾಲಕ್ಕೆ ತಕ್ಕಂತೆ 

ಕಾನೂನುಗಳನ್ನು ರಚಿಸುವ ಅವಶ್ಯಕತೆಗಳು ಮತ್ತು ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ.

ಪರಿಸರದತ್ತ ನಮ್ಮ ದೃಷ್ಟಿ ಬದಲಾಗುತ್ತಿರುವ ಈ ಪರ್ವಕಾಲದಲ್ಲಿ ಅಂತಹ ಚಿಂತನೆಗಳ ಅವಶ್ಯಕತೆ ಹೆಚ್ಚಿದೆ. ಮಾನವನನ್ನು ಪ್ರಕೃತಿಯ ತುಟ್ಟತುದಿಯಲ್ಲಿಟ್ಟು, ಅವನಿಗೆಂದೇ ಪಕೃತಿ, ಅವನಿಂದಲೇ ಪ್ರಕೃತಿ ಎಂಬ ಭಾವವೂ ಬದಲಾಗಬೇಕು. 


ಕಥಾಂಬರಿಯು ಸುಖಾಂತವಾಗಿ ವೈಜರ್ ನಿರಪರಾಧಿ ಎಂದು ತೀರ್ಪು ಕೊಟ್ಟಾಗ ಕ್ಯಾಥರೀನ್ ಮತ್ತು ವೈಜರ್ ನಡುವಿನ ಸಂಭಾಷಣೆ ನಮ್ಮನ್ನು ವಿವಿಧ ಆಯಾಮಗಳಲ್ಲಿ ಚಿಂತನೆ ಒಡ್ಡುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

No comments: