31 March 2024

ಕಲ್ಮುರುಡೇಶ್ವರನ ಬಿಲ್ವ ವನ




 


ಕಲ್ಮುರುಡೇಶ್ವರನ ಬಿಲ್ವ ವನ  


ಚಿಕ್ಕಮಗಳೂರಿನ ನಿಸರ್ಗದ ಒಡಲಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಹೊರಟ ನಮ್ಮ ಸಮಾನ ಮನಸ್ಕ ತಂಡ ಮೊದಲು ಭೇಟಿ ನೀಡಿದ್ದು ಕಡೂರು ತಾಲೂಕಿನ ಸಖರಾಯಪಟ್ಟಣದ " ಕಲ್ಮುರುಡೇಶ್ವರ ದೇವಾಲಯ " ಕ್ಕೆ  ದೇವಾಲಯದ ಶಿಲ್ಪಕಲೆ ವಿಶೇಷವಾಗಿ ನಮ್ಮ ಕಣ್ಮನ ಸೆಳೆಯುತ್ತದೆ. ದೇವರ ಆಶೀರ್ವಾದ ಪಡೆದು ಹೊರಬಂದ ನಮಗೆ ಮತ್ತೊಂದು ಅಚ್ಚರಿ ಕಾದಿತ್ತು! ದೇವಳದ ಸುತ್ತಲೂ ಎತ್ತ ನೋಡಿದಡತ್ತ ಬಿಲ್ವ ಪತ್ರೆ ಮರಗಳು.ಒಂದಲ್ಲ ಎರಡಲ್ಲ ನೂರಲ್ಲ  ಹತ್ತತ್ತರ ಸಾವಿರ ಬಿಲ್ವ ಮರಗಳು ಅಲ್ಲಿ ಕಾಣಸಿಗುತ್ತವೆ ಎಂದು ಸ್ಥಳೀಯರು ಮಾಹಿತಿಯನ್ನು ನೀಡಿದರು.

ಈ   ಬಿಲ್ವಪತ್ರೆ ಮರಗಳನ್ನ ಯಾರೊಬ್ಬರು ನೆಟ್ಟಿಲ್ಲ, ಬೆಳೆಸಿಲ್ಲ. ಈ ಬಿಲ್ವಪತ್ರೆಯ ಪಾರ್ಕ್ ಶಿವನ ತವರೆಂಬುದು ಭಕ್ತರ ನಂಬಿಕೆ. ಈ 

ಬಿಲ್ವಪತ್ರೆಯ ವನ ಹುಟ್ಟಿರೋದಕ್ಕೆ ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಾರೆ. ಸುಮಾರು 800 ವರ್ಷಗಳ ಹಿಂದೆ ಸನ್ಯಾಸಿಯೊಬ್ಬರು ಇಲ್ಲಿನ ಮಠದ ಬಳಿ ತಪಸ್ಸಿಗೆ ಕುಳಿತ್ತಿದ್ದರಂತೆ   ಆಗ ಪ್ರಶಾಂತತೆಗಾಗಿ ತನ್ನ ಕೊರಳಲ್ಲಿದ್ದ ರುದ್ರಾಕ್ಷಿ ಸರವನ್ನ ಋಷಿ ಮುನಿಗಳು ಚಿಮ್ಮಿದರಂತೆ, ಇದರಿಂದ ಬಿದ್ದ ರುದ್ರಾಕ್ಷಿಗಳಿಂದಲೇ ಸಾವಿರಾರು ಬಿಲ್ವಪತ್ರೆಯ ಮರಗಳು ಬೆಳೆದು ನಿಂತು, ಬಿಲ್ವವನ ನಿರ್ಮಾಣವಾಯಿತೆಂಬುದು ಸ್ಥಳಿಯ ನಂಬಿಕೆ. ಇನ್ನೂ ಹಲವರು ವೀರಶೈವ ಧರ್ಮದ ಗುರುಗಳಾದ ಮರುಳಸಿದ್ದರು ಇಲ್ಲಿ ಐಕ್ಯರಾಗಿರುವುದರಿಂದ ಕಲ್ಮರಡಿ ಮಠದ ಸುತ್ತಲೂ ಬಿಲ್ವಮರಗಳು ಬೆಳೆದು ನಿಂತಿವೆ ಎಂದು ನಂಬಿಕೊಂಡಿದ್ದಾರೆ. ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರೋ ಇಲ್ಲಿನ ಬಿಲ್ವಮರಗಳನ್ನ ಯಾರೂ ಎಣಿಸಬಾರದಂತೆ. ಹಿರಿಯರ ಪ್ರಕಾರದ ಇಲ್ಲಿನ ಮರಗಳನ್ನ ಯಾರೂ ನೆಟ್ಟು ಬೆಳೆಸಿದ್ದಲ್ಲವಂತೆ. ಜೊತೆಗೆ ಇಲ್ಲಿರೊ ಮರಗಳಿಗೆ ಯಾರೂ ಗೊಬ್ಬರ, ನೀರನ್ನ ಹಾಕಿ ಪೋಷಣೆ ಮಾಡುತ್ತಿಲ್ಲ. ಆದರೂ ಕೂಡ ಇಲ್ಲಿ ಬಿಲ್ವ ಮರಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ. 

  ಕಲ್ಮರಡಿ ಮಠದಲ್ಲಿ ದೈವಿ ಶಕ್ತಿಯಿಂದ ಬಿಲ್ವಮರಗಳು ಹುಟ್ಟಿಕೊಂಡಿವೆ ಎಂಬುದು ಭಕ್ತರ ನಂಬಿಕೆ. ಆದ್ರೆ, ಮಣ್ಣಿನಲ್ಲಿ ಹೆಚ್ಚು ಗಂಧಕದ ಅಂಶವಿರುವಲ್ಲಿ ಈ ಅಪರೂಪದ ಮರಗಳು ಹುಟ್ಟಿ ಬೆಳೆಯುತ್ತವೆ ಅನ್ನೋದು ವೈಜ್ಞಾನಿಕ ಕಾರಣ. ಆದ್ರೆ, ಈ ಮರಗಳನ್ನ ಜನಸಾಮಾನ್ಯರು ನೆಟ್ಟಿ ಬೆಳೆಸೋದು ಅಸಾಧ್ಯ. ಈ ಮರದಡಿಯಲ್ಲಿ ವಿಹರಿಸಿದರೆ ಆರೋಗ್ಯ ವೃದ್ಧಿಯಾಗುತ್ತಂತೆ. ನಾವು ಸಹ ಕೆಲ ಕಾಲ ಆ ವನದಲ್ಲಿ ವಿಹರಿಸಿದೆವು.  ಸುತ್ತಮುತ್ತಲಿನ ಜನರು ಮತ್ತು ಭಕ್ತರು ತಮ್ಮ ವಿಶ್ರಾಂತಿ ಸಮಯದಲ್ಲೆಲ್ಲಾ ಇಲ್ಲಿಗೆ ಬಂದು ವಿಹರಿಸುತ್ತಾರೆ. ಕಲ್ಮುರುಡೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸುತ್ತಾನೆ ಎಂಬ ನಂಬಿಕೆ. ಅದಕ್ಕಾಗಿಯೇ ದೂರದೂರಿಂದಲೂ ಭಕ್ತರ ದಂಡೇ ಹರಿದುಬರುತ್ತಿದೆ. ಶಿವಪೂಜೆಗೆ ಬಿಲ್ವಪತ್ರೆ ಶ್ರೇಷ್ಠವಾಗಿರೋದ್ರಿಂದ ಶಿವರಾತ್ರಿಯಂದು ಭಕ್ತರು ಬಿಲ್ವಪತ್ರೆಯ ಮರವೇರಿ ಪತ್ರೆಯನ್ನ ಕೊಯ್ದು ದೇವರಿಗೆ ಸಮರ್ಪಿಸಿ ಧನ್ಯತಾ ಭಾವ ವ್ಯಕ್ತಪಡಿಸುತ್ತಾರೆ.

ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿರೋ ಕಲ್ಮರಡಿ ಮಠಕ್ಕೆ ಕೇವಲ ಚಿಕ್ಕಮಗಳೂರಿನ ಭಕ್ತರಷ್ಟೆ ಇಲ್ಲ. ರಾಜ್ಯದ ಮೂಲೆ-ಮೂಲೆಗಳಿಂದಲೂ ಭಕ್ತರ ಮಾಹಾಪುರವೇ ಹರಿದು ಬರುತ್ತಿದೆ. ಸಖರಾಯಪಟ್ಟಣ ಸುತ್ತಮುತ್ತಲಿನ ಗ್ರಾಮಸ್ಥರು ಯಾವುದೇ ಕೆಲಸ ಮಾಡಬೇಕಾದರೂ ಕಲ್ಮುರುಡೇಶ್ವರ ಪ್ರಸಾದ ಪಡೆದು, ಅನುಮತಿ ಕೇಳಿಯೇ ಮುಂದಿನ ಹೆಜ್ಜೆ ಇಡುವುದು. ಇನ್ನು ಕ್ಷೇತ್ರದಲ್ಲಿ ಮರುಳಸಿದ್ದೇಶ್ವರನೂ ಐಕ್ಯವಾಗಿರೋದ್ರಿಂದ ಕ್ಷೇತ್ರದಲ್ಲಿ ತ್ರಿಕಾಲ ಪೂಜೆ, ಕಾರ್ತಿಕಾ ಮಾಸದಲ್ಲಿ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯುತ್ತವೆ. ಇಲ್ಲಿನ ಕಲ್ಮುರುಡೇಶ್ವರನಿಗೆ ಭಕ್ತರು ಬಿಲ್ವಪತ್ರೆಯನ್ನ ಸಮರ್ಪಿಸಿ  ನಿತ್ಯವೂ  ಬಿಲ್ವಪತ್ರೆಯಿಂದಲೇ ಅಭಿಷೇಕ ಮಾಡುವರು.


ಅಲ್ಲದೇ ಬಿಲ್ವಪತ್ರೆಯನ್ನೇ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡ್ತಿರೋದು ಇಲ್ಲಿನ ಮತ್ತೊಂದು ವಿಶೇಷ. ಬಿಲ್ವವನದಲ್ಲಿರೋ ಪತ್ರೆಯನ್ನ ಕೊಯ್ದು ಇತರರಿಗೆ ದಾನ ಮಾಡಿದ್ರೆ ಒಳಿತಾಗುತ್ತೆಂಬುದು ಭಕ್ತರ ನಂಬಿಕೆ. ಅದಕ್ಕಾಗಿಯೇ ಚಿಕ್ಕಮಗಳೂರು, ಕಡೂರು ಸೇರಿದಂತೆ ಸುತ್ತಮುತ್ತಲಿನ ಜನ ವಾರಕ್ಕೊಮ್ಮೆ ಬಂದು ಪತ್ರೆ ಕೊಯ್ದು ದೇವಾಲಯ ಹಾಗೂ ನೆರೆಹೊರೆಯವರಿಗೆ ದಾನ ಮಾಡುತ್ತಾರೆ. ಶಿವರಾತ್ರಿಯ ದಿನದಂದು ಇಲ್ಲಿಗೆ ಬರೋ ಭಕ್ತರು ಬಿಲ್ವವನದಲ್ಲಿಯೇ ರಾತ್ರಿಯೆಲ್ಲಾ ಜಾಗರಣೆ ಮಾಡುತ್ತಾರೆ. ನೈಸರ್ಗಿಕವಾಗಿ ಬೆಳೆದಿರೋ ಬಿಲ್ವಪತ್ರೆ ವನ ವರ್ಷ ಕಳೆದಂತೆ ಸಮೃದ್ಧಿಯಾಗ್ತಿದೆ. ಬೇರೆಡೆ ಪಾಲನೆ-ಪೋಷಣೆ ಮಾಡಿದ್ರು ಬೆಳೆಯದ ಬಿಲ್ವಪತ್ರೆ ಮರಗಳು ಈ ನೆಲದಲ್ಲಿ ಸಾವಿರಾರು ಬೆಳೆದು ನಿಂತಿರೋದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.

ದೈವಿಕ ಮತ್ತು ಪ್ರಾಕೃತಿಕ ಶಿಲ್ಪಕಲಾ ಮಹತ್ವದ ಈ ತಾಣಕ್ಕೆ ನೀವು ಒಮ್ಮೆ ಭೇಟಿ ಕೊಡಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529





No comments: