25 September 2022

ವಿ ವಿ ಸಾಗರದ ಕೋಡಿ


 


ಪ್ರವಾಸ ೨ 

ವಿ ವಿ ಸಾಗರದ  ಕೋಡಿ.


ನನ್ನಣ್ಣ ಪದೇ ಪದೇ ಫೋನ್ ಮಾಡಿ ಮಾರಿಕಣಿವೆ ನೋಡಲು ಯಾವಾಗ ಬರ್ತಿರಾ? ಎನ್ನುತ್ತಿದ್ದ  ನನಗೆ ಹೋಗಲು ಆಸೆಯಿದ್ದರೂ ಮಕ್ಕಳ ಶಾಲೆ, ಪರೀಕ್ಷೆ, ಲ್ಯಾಬ್ ಹೀಗೆ ಪದೇ ಪದೇ ಮುಂದೂಡಿ ಕೊನೆಗೆ ನಾನೊಬ್ಬನೇ ಶನಿವಾರದ ಶಾಲೆಯ ಅವಧಿಯ ನಂತರ ಕಾರಿನ ಸ್ಟೇರಿಂಗ್ ಹಿಡಿದು ತುಮಕೂರಿನಿಂದ  ಹೈವೆಯಲ್ಲಿ ದುರ್ಗದ ಕಡೆ ಪಯಣ ಆರಂಭಿಸಿಯೇಬಿಟ್ಟೆ .ಮಾರ್ಗ ಮಧ್ಯ ಅಣ್ಣ ಕರೆ ಮಾಡಿ ತಾನು ಮಾರಿಕಣಿವೆಯ ಬಳಿ ಬಂದಿರುವುದಾಗಿ ತಿಳಿಸಿದ. ಹಿರಿಯೂರಿನಲ್ಲಿ ಕಾರ್ ನಿಲ್ಲಿಸಿ ವಿಶ್ರಾಂತಿ ಪಡೆದು ಟೀ ಕುಡಿದು ನಾನು ಮೊದಲು ಶಿಕ್ಷಕನಾಗಿ ಕೆಲಸ ಮಾಡಿದ ಹುಚ್ಚವ್ಬನ ಹಳ್ಳಿಯ ಶಾಲೆಯ ನೋಡಿ.ಹಳೆಯ ನೆನಪುಗಳ ಮೆಲುಕು ಹಾಕುತ್ತಾ  ಮಾಯಸಂದ್ರ ,ಬೀರೇನಹಳ್ಳಿ ,ಭರಂಗಿರಿ ದಾಟಿ ಮಾರಿಕಣಿವೆಗೆ ಸೇರಿದಾಗ ಬಾಲ್ಯದಲ್ಲಿ ನೋಡಿದ ಜಾತ್ರೆಯ ಜನದ ನೆನಪಾಯಿತು. ವಾಹನಗಳ ಸ್ಲೋ ಮೂವಿಂಗ್ ಟ್ರಾಪಿಕ್ ನಲ್ಲಿ ಕಣಿವೆ ಮಾರಮ್ಮನ ದೇವಾಲಯ ಸೇರಿದ್ದು ಹರಸಾಹಸ ಮಾಡಿದಂತಾಗಿತ್ತು. 

ಅಣ್ಣ ಅತ್ತಿಗೆಯ ಜೊತೆಗೂಡಿ ಕಣಿವೆ ಮಾರಮ್ಮನ ದರ್ಶನ ಪಡೆದು ಬೆಟ್ಟದ ಮೇಲೇರಿದಾಗ ಹೊಟ್ಟೆ ತಾಳ ಹಾಕುತ್ತಿತ್ತು . ಅಮ್ಮ ಕಟ್ಟಿಕೊಟ್ಟಿದ್ದ  ನನ್ನ ಫೇವರಿಟ್ ಅನ್ನ ಮೊಸರ ಬುತ್ತಿಯ ಜೊತೆಯಲ್ಲಿ ಅಣ್ಣ ಆಗ ತಾನೆ ತಂದ ಬಿಸಿ ಬೋಂಡಾದ ಜೊತೆಯಲ್ಲಿ 89 ವರ್ಷಗಳ ನಂತರ ಸಂಪೂರ್ಣವಾಗಿ ತುಂಬಿದ ವಿ ವಿ ಸಾಗರದ ನೀರು ನೋಡುತ್ತಾ  ತಿನ್ನಲು ಶುರು ಮಾಡಿದೆವು .ಸ್ವರ್ಗ ಮೂರೇ ಗೇಣು! 


 1933ರ ಬಳಿಕ  ಮಾರಿ ಕಣಿವೆ ಡ್ಯಾಂ ಕೋಡಿ ಬಿದ್ದಿದ್ದು, ಅಂದು ಶನಿವಾರ ರಜೆ ದಿನವಾಗಿದ್ದರಿಂದ ಡ್ಯಾಂ ನೋಡಲು ಜನಸಾಗರವೇ ಹರಿದು ಬಂದಿತ್ತು.

ಬೆಳಗ್ಗೆಯಿಂದಲೇ ಪ್ರವಾಸಿಗರು ಜಲಾಶಯದ ಕಡೆ ಮುಖ ಮಾಡಿದ್ದು, ಜಲಾಶಯ, ಮಾರಿ ಕಣಿವೆ ಮಾರಮ್ಮ ದೇವಸ್ಥಾನ, ಪಾರ್ಕ್, ಪ್ರವಾಸಿ ಮಂದಿರ, ಕೋಡಿ ಬಿದ್ದಿರುವ ಜಾಗ ಹಾಗೂ ಹಾರನ ಕಣಿವೆ ರಂಗನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಡ್ಯಾಂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪ್ರವಾಸಿಗರೇ ತುಂಬಿ ತುಳುಕುತ್ತಿದ್ದರು.


ಪ್ರವಾಸಿಗರು ದೂರದ ಊರುಗಳಿಂದ ಜಲಾಶಯ ನೋಡಲು ಬಂದಿದ್ದರು. ಕುಟುಂಬದ ಸದಸ್ಯರು ಮತ್ತು ಮಕ್ಕಳು, ಸ್ನೇಹಿತರು, ಪ್ರೇಮಿಗಳು ಸೇರಿದಂತೆ ಮತ್ತಿತರರು ಜಲಾಶಯಕ್ಕೆ ಆಗಮಿಸಿದ್ದರು. ಅಂದಾಜು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಜಲಾಶಯ ನೋಡಲು ಬಂದಿದ್ದರು. ಆಟೋ, ಕಾರು, ಬೈಕ್, ಬಸ್, ಇನ್ನಿತರ ವಾಹನಗಳಲ್ಲಿ  ಚಿತ್ರದುರ್ಗ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಮತ್ತಿತರರ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಜಲಾಶಯದ ಸರ್ಕಲ್‌ನಿಂದ, ಮಾರಿಕಣಿವೆ ಗ್ರಾಮ, ಕೋಡಿ ಬೀಳುವ ಜಾಗ ಹಾಗೂ ಹೊಸದುರ್ಗ ರಸ್ತೆ ಸೇರಿದಂತೆ ಸುಮಾರು 3 ಕಿಲೋ ಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಜಾಮ್ ಉಂಟಾಗಿತ್ತು.   ಸಿಂಗಲ್ ರಸ್ತೆ ಹಾಗೂ ಚಿಕ್ಕ ರಸ್ತೆ ಇರುವುದರಿಂದ ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜಲಾಶಯದ ನೀರು ಕೋಡಿ ಹೋಗುವ ಜಾಗದ ನೀರಿನಲ್ಲಿ ಪ್ರವಾಸಿಗರು ನೆನೆದು ಮಿಂದೆದ್ದರು. ಕೆಲವರು ಕೈಕಾಲು ಮುಖ ತೊಳೆದರೆ, ಇನ್ನು ಕೆಲವರು ಸ್ನಾನವನ್ನೇ ಮಾಡಿದರು. ಇನ್ನು ಕೆಲವರು ಸೆಲ್ಫೀ, ಫೋಟೋ, ವೀಡಿಯೋ ತೆಗೆಯುವುದರಲ್ಲಿ ನಿರತರಾಗಿದ್ದರು. ಸಾಮಾನ್ಯವಾಗಿ ಮೊದಲು ಯಾವುದಾದರೂ ಪ್ರವಾಸಿ ಸ್ಥಳಗಳನ್ನು ನೋಡುವಾಗ ನಾನು ಪೋಟೊ ತೆಗೆಯಲು ಹೋದರೆ " ಅದೇನ್ ಪೋಟೋ ಹುಚ್ ನಿನಿಗೆ ,ಬಾರಪ್ಪ ಸಾಕು" ಎನ್ನುತ್ತಿದ್ದ ನನ್ನಣ್ಣ " ಇಗ ಇಲ್ಲೊಂದು ಪೋಟಾ ಹೊಡ್ಕ, ಇಗ ಇಲ್ಲಿ ತೆಗಿ, ಬಾರೆ ಮಂಗಳ " ಎಂದು ಅತ್ತಿಗೆಯ ಜೊತೆಗೆ ಪೋಸ್ ಕೊಟ್ಟು ನಗುತ್ತಾ ನಿಂತು ಬಿಡುತ್ತಿದ್ದ ಸಾಲದ್ದಕ್ಕೆ " ಎಲ್ಲಿ ತೋರ್ಸು  ಎಂಗ್ ಬಂದೈತೆ ಪೋಟಾ? " ಎಂದು ಚೆಕ್ ಮಾಡುತ್ತಿದ್ದ. 


ಡ್ಯಾಂ ಮೇಲೆ ಪೋಲಿಸ್ ಕಾವಲಿತ್ತು ಯಾರನ್ನೂ ಬಿಡುತ್ತಿರಲಿಲ್ಲ ದೂರದಿಂದಲೇ ಫೋಟೋ ತೆಗೆದುಕೊಂಡು ಬರುವಾಗ ಯಾರೋ ಡ್ಯಾಂ ಬಗ್ಗೆ  ಮಾತನಾಡು‌ವುದು ಕಿವಿಯ ಮೇಲೆ ಬಿತ್ತು ಆಗ ನಾನು ಓದಿದ ವಿಷಯ ನೆನಪಾಯಿತು.


ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ ವೇದಾ ಎಂಬ ನದಿ ಕಡೂರಿನ ಬಳಿ ಅವತಿ ನದಿಯನ್ನು ಸೇರುತ್ತದೆ. ಅವು ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಚಿತ್ರದುರ್ಗದ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರದ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಡ್ಯಾಂ.

ಇನ್ನೂ ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು 1897ರಲ್ಲಿ ಮೈಸೂರು ಮಹಾ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಿಸಿತ್ತು. ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ನಿರ್ಮಿಸಿ 1907ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರು. ಅಲ್ಲದೇ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿ ವಿಲಾಸ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.

89 ವರ್ಷಗಳ ಬಳಿಕ ಬಹುತೇಕ ಭರ್ತಿಯಾದ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬಿದ್ದಿರುವುದು ಜನತೆಯಲ್ಲಿ ಅತೀವ ಸಂತಸ ಉಂಟುಮಾಡಿದೆ.


ನೀವು ಈ ಕೌತುಕ ಕಣ್ತುಂಬಿಕೊಳ್ಳಲು 

ಜಲಾಶಯ ದೃಶ್ಯ ಸವಿಯಲು ಒಮ್ಮೆ ಭೇಟಿ ನೀಡಿ.

ಹೊಸಬರಿಗೆ  ಈ ಜಲಾಶಯ ತಲುಪಲು ಮಾರ್ಗ ಹೀಗಿದೆ 

 ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ, 21 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಬಂದರೆ ಜಲಾಶಯವನ್ನು ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಜಲಾಶಯವನ್ನು ಪ್ರವೇಶಿಸಬಹುದು. ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಾಣಿ ವಿಲಾಸಪುರ ಕ್ರಾಸ್ ಮೂಲಕ ಬಂದು ಡ್ಯಾಂ ವೀಕ್ಷಿಸಬಹುದಾಗಿದೆ. 


ನಾವು ಡ್ಯಾಂ ನೋಡಿದ ಬಳಿಕ ಕೋಡಿ ಬಿದ್ದ ಸ್ಥಳಕ್ಕೆ ಹೊರಟೆವು ಅಲ್ಲಿಯೂ ಜನಜಂಗುಳಿ ,ಆಗ ತಾನೆ ಶುರುವಾದ ತುಂತುರು ಮಳೆ ,ಹಸಿರೊದ್ದ ಗುಡ್ಡ ಇವು ಮಲೆನಾಡ ದೃಶ್ಯಗಳನ್ನು ನೆನಪು ಮಾಡಿದವು. ನಂತರ ಹಾರನ ಕಣಿವೆ ರಂಗನಾಥಸ್ವಾಮಿಯ  ದರ್ಶನ ಪಡೆದು ದೇವಾಲಯದ ಹಿಂಭಾಗಕ್ಕೆ ಬಂದು ನೋಡಿದಾಗ ವಾಣಿ ವಿಲಾಸ "ಸಾಗರ " ನಿಜವಾಗಿಯೂ ಅನ್ವರ್ಥವಾಗಿ ಬಯಲು ಸೀಮೆಯಲ್ಲಿ ಸಾಗರ ನೋಡಿದ ಅನುಭವವಾಯಿತು.  ನಿಧಾನವಾಗಿ ಸೂರ್ಯ ದೇವ ಸಾಗರದಲ್ಲಿ ಲೀನವಾದ .ಮಳೆಯ ಮಧ್ಯದಲ್ಲೇ ಬೇವಿನಹಳ್ಳಿಯ ಕಡೆ ಹೊರಟೆವು . ಬೇವಿನಹಳ್ಳಿಗೆ ಸಂಪರ್ಕ ರಸ್ತೆ  ನೀರಿನಿಂದ  ಮುಳುಗಡೆಯಾದ ಪರಿಣಾಮವಾಗಿ ಕಾಡಿನ ದಾರಿಯಲ್ಲಿ ಕಾರ್ ಚಲಾಯಿಸುವ ಸಾಹಸ ಮಾಡುತ್ತಾ ಹೊರಟೆ. ಕಾರ್ ನ ಕೆಳ ಭಾಗಕ್ಕೆ ಕಡ್ಡಿಗಳು ಪಟ ಪಟ ಬಡಿಯುವಾಗ ಕೆಲವೊಮ್ಮೆ ಆತಂಕವಾಗುತ್ತಿತ್ತು.  ಏಳು ಕಿಲೋಮೀಟರ್ ಕ್ರಮಿಸಲು ಅರ್ಧ ಗಂಟೆಯಾಗಿತ್ತು. ಅಂತೂ ಬೇವಿನಳ್ಳಮ್ಮನ ಗುಡ್ಡ ಏರಿ ತಾಯಿಯ ದರ್ಶನ ಪಡೆದಾಗ ರಾತ್ರಿ ಏಳು ಗಂಟೆ ! ಅಲ್ಲಿಂದ ವಿ ವಿ ಸಾಗರದ ಅದ್ಭುತವಾದ ದೃಶ್ಯಗಳನ್ನು ನೋಡುವ ನಮ್ಮ ಆಸೆ ಈಡೇರಲಿಲ್ಲ. ಅದೇ ದುರ್ಗಮ ದಾರಿಯಲ್ಲಿ ಹಿಂತಿರುಗಿ ಮಾಡದಕೆರೆಯ ಮಾರ್ಗವಾಗಿ ಚೌಡಗೊಂಡನಹಳ್ಳಿಯ ನಮ್ಮ   ಮನೆ ತಲುಪಿದಾಗ ರಾತ್ರಿ  ಎಂಟೂವರೆ.ಅಮ್ಮ ಬಿಸಿ ಬಿಸಿ ಮುದ್ದೆ ಮಾಡಿಕೊಟ್ಟರು ಹೊಟ್ಟೆ ತುಂಬಾ ಮುದ್ದೆ ಉಂಡು ನಾನು ಮಲಗಲು ಸಿದ್ದನಾದೆ ನನ್ನಣ್ಣ ಮೊಬೈಲ್ ನಲ್ಲಿ ಇದ್ದ ಮಾರಿಕಣಿವೆಯ ಫೋಟೋಗಳನ್ನು ಮತ್ತೊಮ್ಮೆ ನೋಡಿ ಖುಷಿಪಡುತ್ತಿದ್ದ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

No comments: