25 September 2022

ವಂದೇ ಭಾರತಂ

 


ವಿಮರ್ಶೆ ೫೨
ವಂದೇ  ಭಾರತಂ 

ನನ್ನ ಪುಸ್ತಕಗಳನ್ನು ಪೋಸ್ಟ್ ಮಾಡಲು ಕ್ಯಾತ್ಸಂದ್ರ ಪೋಸ್ಟ್ ಆಫೀಸ್ ಗೆ ತೆರಳಿದಾಗ ಅಲ್ಲಿಯ ಪೋಸ್ಟ್ ಮಾಸ್ಟರ್ ರವರು " ಸರ್ ನಿಮ್ಮಂಗೆ ಒಬ್ರು ಪುಸ್ತಕ ಬರೀತಾರೆ ಅವರ ಹೆಸರು ರೇಣುಕಾರಾಧ್ಯ ಅಂತ ನಂಬರ್ ತಗೊಳಿ"  ಎಂದು ಕೊಟ್ಟರು .ಒಂದು ದಿನ  ಮಗಳನ್ನು ಶಾಲೆಗೆ ಬಿಡಲು ಬಸ್ ನಿಲ್ದಾಣದ ಬಳಿ ನಿಂತಿದ್ದಾಗ   ರೇಣುಕಾರಾಧ್ಯ ರವರು " ವಂದೇ ಭಾರತಂ " ಪುಸ್ತಕ ನೀಡಿ ಓದಲು ಹೇಳಿದರು.
ಮುನ್ನೂರಾ ನಲವತ್ತನಾಲ್ಕು  ಪುಟಗಳ ಪುಸ್ತಕವನ್ನು ಎರಡು ದಿನಗಳಲ್ಲಿ ಓದಿದೆ. ಪ್ರತಿಯೊಬ್ಬ ಭಾರತೀಯನು ಓದಲೇ ಬೇಕಾದ ಪುಸ್ತಕ ಇದು.ಇದರಲ್ಲಿ ದೇಶಭಕ್ತಿ ಉಕ್ಕಿಸುವ ಲೇಖನಗಳಿವೆ.ಮಕ್ಕಳಿಗೆ ಕಿವಿಮಾತುಗಳಿವೆ, ಹಿರಿಯರ ಆದರ್ಶಗಳ ನಿದರ್ಶನಗಳಿವೆ.ಭಾರತೀಯ ಸಂಸ್ಕೃತಿಯ ದರ್ಶನವಿದೆ. ಜವಾಬ್ದಾರಿಯುತ ನಾಗರಿಕನಾಗಲು ಮಾಡಬೇಕಾದ ಕರ್ತವ್ಯಗಳೇನು ಎಂದು ಎಚ್ಚರಿಸುವ ಅಂಶಗಳಿವೆ .

ಕರ್ನಾಟಕರತ್ನ, ಪದ್ಮಭೂಷಣ, ಮಹಾದಾಸೋಹಿ, ನಿರಂಜನಪ್ರಣವಸ್ವರೂಪಿ ಪರಮಪೂಜ್ಯ ಡಾ॥ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ ಈ ಕೃತಿಯನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದ ಲೇಖಕರು ಶ್ರೀಗಳೊಂದಿಗಿನ ಒಡನಾಟದ ಚಿತ್ರಣವನ್ನು ಓದುಗರೊಂದಿಗೆ ಇಲ್ಲಿಯ ಕೆಲ ಅಧ್ಯಾಯಗಳಲ್ಲಿ  ಹಂಚಿಕೊಂಡಿದ್ದಾರೆ.

ಶ್ರೀ ಎಸ್. ರೇಣುಕಾರಾಧ್ಯ ಅವರು ಈಗ ಎಪ್ಪತ್ತೈದರ ಹರೆಯದಲ್ಲಿದ್ದಾರೆ. ಇವರು ಪ್ರೌಢಶಾಲಾ ಶಿಕ್ಷಕರಾಗಿ ಸಹಸ್ರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದಾರೆ. ನಲವತ್ತು ವರ್ಷಗಳ ಕಾಲ ಶಿಕ್ಷಕರಾಗಿ ಮಕ್ಕಳಿಗೆ ಜ್ಞಾನವನ್ನು ಉಣಬಡಿಸಿದ್ದಾರೆ . ಬಡಕುಟುಂಬವೊಂದರಲ್ಲಿ ಜನಿಸಿ, ತಮ್ಮ ಇಚ್ಚಾಶಕ್ತಿಯಿಂದಲೂ ಸ್ವಸಾಮರ್ಥ್ಯದಿಂದಲೂ, ಪರಮಪೂಜ್ಯ ಸಿದ್ಧಗಂಗಾಶ್ರೀಗಳ ಆಶೀರ್ವಾದದಿಂದಲೂ ಹಂತಹಂತವಾಗಿ ಮೇಲೇರಿದ್ದಾರೆ! ಅವರು ಶಿಕ್ಷಕರಾಗಿ ಕೇವಲ ಬೋಧನೆಯಲ್ಲೇ ವಿರಮಿಸದೆ, ಸಹಸ್ರಾರು ಮಸ್ತಕಗಳನ್ನು ಓದಿ, ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಡನೆ ಹಂಚಿಕೊಂಡಿದ್ದಾರೆ. ಸಾಹಿತ್ಯ, ತತ್ತ್ವಜ್ಞಾನ, ಸಮಾಜವಿಜ್ಞಾನ, ರಾಜಕೀಯಶಾಸ್ತ್ರ, ಮನಃಶಾಸ್ತ್ರ ಇವೇನು ಒಂದೇ ಎರಡೇ? ಹಲವು ಜ್ಞಾನಕ್ಷೇತ್ರಗಳ ಜ್ಞಾನಭಂಡಾರವನ್ನು ಶ್ರೀ ಎಸ್.ರೇಣುಕಾರಾಧ್ಯ ಅವರು ತಮ್ಮದನ್ನಾಗಿಸಿಕೊಂಡಿದ್ದಾರೆ. 'ವಂದೇಭಾರತಂ' ಎಂಬ ಈ ಕೃತಿಯನ್ನು ಓದಿದರೆ ನಿಮಗೆ ಅವರ ಬಗ್ಗೆ ಅಪಾರ ಗೌರವ ಉಂಟಾಗುವುದರಲ್ಲಿ ಸಂದೇಹವಿಲ್ಲ.

344 ಪುಟಗಳ ಈ ಪುಸ್ತಕದಲ್ಲಿ ಪುರಾಣ-ಸಂಸ್ಕೃತಿ-ಪರಂಪರೆ ಎಂಬ ಭಾಗದಲ್ಲಿ 11ಲೇಖನಗಳಿವೆ. ಇತಿಹಾಸ-ವ್ಯಕ್ತಿಚಿತ್ರ ಎಂಬ ಭಾಗದಲ್ಲಿ 7 ಲೇಖನಗಳಿವೆ. ವಚನಕಾರರು -ಸಿದ್ಧಗಂಗಾಶ್ರೀಗಳು ಎಂಬ ಭಾಗದಲ್ಲಿ 15 ಲೇಖನಗಳಿವೆ. ಶಿಕ್ಷಣ-ಸಂಸ್ಕೃತಿ ಎಂಬ ಭಾಗದಲ್ಲಿ 5 ಲೇಖನಗಳು, ರಾಷ್ಟ್ರಪ್ರೇಮ-ಅಸ್ಮಿತೆ ಎಂಬ ಭಾಗದಲ್ಲಿ 7 ಲೇಖನಗಳು ವ್ಯಕ್ತಿಚಿತ್ರದಲ್ಲಿ 6 ಲೇಖನಗಳು, ಆಶಯ-ಚಿಂತನೆ ಭಾಗದಲ್ಲಿ 14 ಲೇಖನಗಳು, ಲಘುಬರಹ  -ಚಿಂತನೆಯಲ್ಲಿ 8 ಲೇಖನಗಳಿದ್ದು ಒಟ್ಟು 75 ಲೇಖನಗಳಿರುವ ಈ ಪುಸ್ತಕ ಸರ್ವಜನ ಪ್ರಿಯ ಆಗುವುದಕ್ಕೆ ಎಲ್ಲ ಬಗೆಯ ಅರ್ಹತೆಯನ್ನೂ ಪಡೆದಿದೆ.

ನಾಡಿನ ವಿವಿಧ ಮಠ ಮಾನ್ಯಗಳ ಸ್ವಾಮೀಜಿಗಳು ಗುರು ಹಿರಿಯರು, ಲೇಖಕರ ಹಿತೈಷಿಗಳು ಪುಸ್ತಕದ ಬಗ್ಗೆ ತಮ್ಮ ಸದಭಿಪ್ರಾಯಗಳನ್ನು ದಾಖಲಿಸಿದ್ದಾರೆ.
ಪ್ರೊ . ಮಲ್ಲೇಪುರಂ ಜಿ ವೆಂಕಟೇಶ ರವರು ಈ ಪುಸ್ತಕಕ್ಕೆ ತಮ್ಮ ಮುನ್ನುಡಿ ಬರೆದು ಹಾರೈಸಿದ್ದಾರೆ. ಅವರ ಮಾತುಗಳನ್ನು ಉಲ್ಲೇಖಿಸಿ ಹೇಳುವುದಾದರೆ......

ಶ್ರೀ ಎಸ್. ರೇಣುಕಾರಾಧ್ಯರ ಚೊಚ್ಚಲಕೃತಿಯಲ್ಲಿ ಕನ್ನಡ ಗದ್ಯವು ಮಾತು ಮತ್ತು ಬರೆಹ ಎರಡರ ಸೂಕ್ಷ್ಮನೇಯ್ಗೆಯನ್ನು ಹೊಂದಿದೆ. ಈ ನೇಯ್ಗೆಯಲ್ಲಿ ಆರ್ದತೆ, ಸರಳತೆ, ಹಾಸ್ಯ ಮತ್ತು ಗಾಂಭೀರ್ಯತೆ ಮನೆಮಾಡಿಕೊಂಡಿವೆ. ಇವೆಲ್ಲವನ್ನು ಇಲ್ಲಿರುವ ಎಪ್ಪತ್ತೈದು ಲೇಖನಗಳಲ್ಲಿ ಸಹೃದಯ ಓದುಗರು ದಿಟಕ್ಕೂ ಕಾಣಬಹುದು. ಒಬ್ಬ ಪ್ರಬುದ್ಧ ಸಾಹಿತಿಯ ಬರೆಹಕ್ಕೆ ಸಮಾನಾಂತರವಾದ ಬರೆಹವನ್ನು ಶ್ರೀ ಎಸ್.ರೇಣುಕಾರಾಧ್ಯ ಅವರು ಹೊಂದಿದ್ದಾ ರೆಂಬುದೇ ನಾವು ಗಮನಿಸತಕ್ಕ ಸಂಗತಿ, ಇಲ್ಲಿಯ ಎಲ್ಲಾ ಲೇಖನಗಳು ಮುಖ್ಯವಾಗಿ ರಾಷ್ಟ್ರಚಿಂತನೆ, ರಾಷ್ಟ್ರಭಕ್ತಿ, ರಾಷ್ಟೋನ್ನತಿಯನ್ನೇ ಕೇಂದ್ರ ಮಾಡಿಕೊಂಡಿವೆ. ರೇಣುಕಾರಾಧ್ಯರು ವ್ಯಕ್ತಿಗಳನ್ನು ಕುರಿತು ಬರೆಯಲಿ, ಸನ್ನಿವೇಶವನ್ನು ಕುರಿತು ಬರೆಯಲಿ, ಯಾವುದೇ ವಸ್ತುಸಂಚಯವನ್ನು ಕುರಿತು ಬರೆಯಲಿ ಅವರು 'ರಾಷ್ಟ್ರ' ಚಿಂತನೆಯ ಮೂಲಕವೇ ತಮ್ಮ ಆಶಯವನ್ನು ವ್ಯಕ್ತಪಡಿಸುತ್ತಾರೆ. ನಾವು ಜಾತಿ, ಮತ, ವರ್ಗ ಮುಂತಾದ ಸಣ್ಣಸಣ್ಣ ಕಮರಿಯಲ್ಲಿ ಬಿದ್ದು ಹೊರಳಾಡುತ್ತಿದ್ದೇವೆ. ನಮಗೆ ದೇಶ ಮುಖ್ಯವಾಗುತ್ತಿಲ್ಲ. ಇಲ್ಲೆಲ್ಲಾ ಸ್ವಾರ್ಥಮಯತೆ ತುಂಬಿ ತುಳುಕಾಡುತ್ತಿದೆ. ಇಲ್ಲಿ ಸಮಷ್ಟಿ ಪ್ರಜ್ಞೆ ದೂರವಾಗಿ ವೃಷ್ಟಿ ನಿಲುವನ್ನು ನಾವು ಅಪ್ಪಿಕೊಂಡು ಬಿಟ್ಟಿದ್ದೇವೆ. ಇದು ಇಂದಿನ ದುಃಸ್ಥಿತಿ, ನಾವು ಸ್ವಾತಂತ್ರ್ಯ ಪಡೆದ ಮೇಲೆ, ನಮ್ಮ ಸಮಾಜ ಸಾಗಬೇಕಾಗಿದ್ದ ದಿಕ್ಕುದೆಸೆಗಳು ವಿಮುಖಗೊಂಡಿರುವುದಕ್ಕಾಗಿ ಸಾತ್ವಿಕ ಕ್ರೋಧವನ್ನು ಶ್ರೀಮಾನ್ ರೇಣುಕಾರಾಧ್ಯ ಅವರು ತಮ್ಮ ಲೇಖನಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಇಲ್ಲಿಯ ಬರೆಹಗಳು ಪ್ರಾಚೀನ, ಮಧ್ಯಕಾಲೀನ, ಅರ್ವಾಚೀನ ಕಾಲಗಳಲ್ಲಿ ನಡೆದ ಸಂಗತಿಗಳನ್ನು ಮರು ರೂಪಿಸುತ್ತಿವೆ. ಇಲ್ಲಿ ವ್ಯಕ್ತಿ, ಕುಟುಂಬ, ಸಮುದಾಯ, ರಾಷ್ಟ್ರ,
ವಿಶ್ವದವರೆಗಿನ ವಿಚಾರಗಳು ಪರಿಕಲ್ಪಿತಗೊಂಡಿವೆ. ಪೂರ್ವ-ಪಶ್ಚಿಮದ ವ್ಯಕ್ತಿ, ವಸ್ತು ವಿಚಾರಗಳು ಬಂದು ಕೂಡಿಕೊಂಡಿವೆ. ಆದರೆ, ಭಾರತದ ಸಮಗ್ರ ಅಭಿವೃದ್ಧಿಯ ಬಗೆಗೆ ಅಪಾರವಾದ ತುಡಿತ-ಮಿಡಿತಗಳು ಪ್ರಧಾನ ಆಶಯಗಳಾಗಿರುವುದಂತೂ ನಿತ್ಯಸತ್ಯ ಶ್ರೀ ರೇಣುಕಾರಾಧ್ಯರು 'ಶ್ರೀಸಾಮಾನ್ಯನೆ ಭಗವನ್ ಮಾನ್ಯಂ' ಎಂಬ ತತ್ವೋಪಾಸನೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ಮಾತು ಅವರ ಬರೆಹಗಳಿಗೂ ಅವುಗಳ ಹಿಂದಿರುವ ಆಶಯಗಳಿಗೂ ಅನ್ವಯವಾಗುತ್ತವೆ. ರೇಣುಕಾರಾಧ್ಯರು ವಿಫುಲವಾದ ಸಂಗತಿಗಳನ್ನು ನಮ್ಮ ಮುಂದೆ ಹರಡುತ್ತಾರೆ. ನಾವು ಎಷ್ಟು ಬೇಕಾದರೂ ಹೆಕ್ಕಿಕೊಳ್ಳಬಹುದು. ಅವುಗಳ ಮೂಲಕ 'ವಿಚಾರಕಲ್ಪ'ದ ಬೀಜ ಅಲ್ಲಿರುವುದನ್ನು ಕಾಣಬಹುದು. ಆರಾಧ್ಯರು ಶ್ರೀಕೃಷ್ಣ-ಸುಧಾಮರ ಬಗೆಗೆ ಬರೆದ ಲೇಖನದಲ್ಲಿ 'ಸ್ನೇಹ'ದ ಸಾಮಾಜಿಕ ತಂತುವನ್ನು ತಂದು ಲೇಖನದಲ್ಲಿ ಜೋಡಿಸುತ್ತಾರೆ. ನಮ್ಮ 'ರಾಷ್ಟ್ರಗೀತೆ” ಯಾರಿಗೆ ಗೊತ್ತಿಲ್ಲ! ಆ ಗೀತೆಯ ಇತಿಹಾಸವನ್ನು ಸರಳವಾಗಿ  ತಿಳಿಸುತ್ತಾರೆ. 'ಸಂವಿಧಾನ ರಚನೆಗೊಂಡ ಹಂತಹಂತದ ವಿವರಗಳು ಇಲ್ಲಿ ಸೊಗಸಾಗಿ ಮೂಡಿಬಂದಿವೆ. ಭಾರತದ ಸಂವಿಧಾನದ ಆಶಯ-ದೂರದೃಷ್ಟಿ-ಸಂಕಲ್ಪಗಳನ್ನು ವಿವರಗಳ ಸಮೇತ ಓದುಗರಿಗೆ ಆರಾಧ್ಯರು ಮನವರಿಕೆ ಮಾಡಿಕೊಡುತ್ತಾರೆ. ಈ ಅಂಶಗಳನ್ನು ಶಿಕ್ಷಕನಾಗಿ ನಾನೂ ತರಗತಿ ಕೋಣೆಗಳಲ್ಲಿ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಪರಮಪೂಜ್ಯ ಶ್ರೀಶಿವಕುಮಾರಸ್ವಾಮಿಗಳ ವ್ಯಕ್ತಿತ್ವ, ಅವರ ದೃಷ್ಟಿ, ಸ್ವಭಾವ, ದಿನಚರಿ ಇವುಗಳನ್ನು ಒಳಗೊಂಡ ಏಳೆಂಟು ಲೇಖನಗಳು ಇಲ್ಲಿವೆ. ಒಂದೊಂದು ಲೇಖನಗಳಲ್ಲೂ ನಾವು ಅರಿತುಕೊಂಡು ಅನುಸರಿಸಬೇಕಾದ 'ಮಾರ್ಗದರ್ಶಿ' ಸೂತ್ರಗಳು ಇಲ್ಲಿವೆ. ಗಾಂಧೀಜಿ, ವಿವೇಕಾನಂದ, ರಮಣಮಹರ್ಷಿ, ಅರವಿಂದರು, ಮುಂತಾದ ಆಧುನಿಕ ವಿಭೂತಿಪುರುಷರ ಸಂಕಥನಗಳು ನಮ್ಮನ್ನು ಎಚ್ಚರಿಸುತ್ತವೆ. ಪ್ರಾಚೀನ ಸಂಸ್ಕೃತ ಸಾಹಿತ್ಯದ ವಾಲ್ಮೀಕಿ, ವ್ಯಾಸ, ಕಾಳಿದಾಸ ಮುಂತಾದ ಕವಿಗಳನ್ನ ಕುರಿತಾದ ಲೇಖನಗಳಲ್ಲಿ ನಮ್ಮ ಸಂಸ್ಕಾರ-ಸಂಸ್ಕೃತಿಯನ್ನು ಪುನಃ ರೂಪಿಸಿಕೊಳ್ಳಬೇಕಾದ ಕಡೆ ಲೇಖಕರು ಬೊಟ್ಟುಮಾಡಿ ತೋರಿಸುತ್ತಾರೆ. ಅಲ್ಲಿಂದಾಚೆಗೆ ಉಪನಿಷತ್ ಕಾಲಕ್ಕೆ ಹೋಗಿ ಯಾಜ್ಞವಲ್ಕ ಮುಂತಾದ ಋಷಿಗಳ ತತ್ತ್ವಮಸಿ, ಅಹಂಬ್ರಹ್ಮಾಸ್ಮಿ ಎಂಬ ಋಷಿಚಿಂತನೆಗಳನ್ನು ಇಂದಿನ ಕಾಲಕ್ಕೆ ಅನ್ವಯಿಸಿ ಮಾತನಾಡುತ್ತಾರೆ. ಮೆಕಾಲೆ ಮಹಾಶಯ ಇಂಗ್ಲಿಷ್ ಭಾಷೆಯನ್ನು ನಮ್ಮ ದೇಶದಲ್ಲಿ ಬಿತ್ತುವ ಮೂಲಕ, ಸಹಸ್ರಾರು ಪಾರಂಪರಿಕ ಗುರುಕುಲಗಳು ನಾಶವಾಗಿ, ತನ್ಮೂಲಕ ಸಂಸ್ಕೃತ ಶಿಕ್ಷಣ ನಾಶವಾಗಿದ್ದಕ್ಕೆ ಲೇಖಕರು ಅಪಾರವಾಗಿ ನೊಂದುಕೊಳ್ಳುತ್ತಾರೆ. 

ಈ ಪುಸ್ತಕದ ಪ್ರತಿ ಪುಟವೂ ಮೌಲ್ಯಯುತ ಪ್ರತಿ ಅಧ್ಯಾಯದ ಕೊನೆಯಲ್ಲಿ ಉಳಿವ ಜಾಗದಲ್ಲಿ ಜಗದ ಉದಾತ್ತ ಚಿಂತಕರ ನುಡಿ ಮತ್ತುಗಳನ್ನು ಮುದ್ರಿಸಿದ್ದಾರೆ .ಓದುಗರಿಗೆ ಅವು ಬೋನಸ್!  ಇಂತಹ ಅಮೂಲ್ಯ ಕೃತಿ ಮೌಲ್ಯಗಳ ಅಧಃಪತನದ  ಇಂದಿನ ಸಮಾಜಕ್ಕೆ ಪಂಜು ಇದ್ದಂತೆ ಆ ಪಂಜನಿಡಿದು ಸಾಧ್ಯವಾದಷ್ಟು ನಮ್ಮ ದಾರಿಯಲ್ಲಿ ಬೆಳಕು ಪಡೆದು ಇತರರಿಗೂ ಬೆಳಕು ನೀಡಲು ಈ ಪುಸ್ತಕವನ್ನು ಎಲ್ಲರೂ ಕೊಂಡು ಓದೋಣ.ನಮ್ಮ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯೋಣ .ಉತ್ತಮ ನಾಗರೀಕರಾಗೋಣ.

ಪುಸ್ತಕದ ಹೆಸರು: ವಂದೇ ಭಾರತಂ
ಲೇಖಕರು: ಎಸ್ ರೇಣುಕಾರಾಧ್ಯ.
ಪ್ರಕಾಶನ : ದಾಸೇನ ಹಳ್ಳಿ ಎಸ್ ರೇಣುಕಾರಾಧ್ಯ. ತುಮಕೂರು
ಬೆಲೆ: 330.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


No comments: