#ಶಿವಾನಂದಪ್ಪ ಮಾಸ್ಟರ್
ಪ್ರಾಥಮಿಕ ಶಾಲೆಯಲ್ಲಿ ತಿಪ್ಪೇಶಪ್ಪ ಗುರುಗಳು ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದರು .ನನ್ನ ಶಿಕ್ಷಣ ಮತ್ತು ಕಲೆಗಳಿಗೆ ಪ್ರೋತ್ಸಾಹ ನೀಡಿದರು.ಅವರ ಬಗ್ಗೆ ಈಗಾಗಲೇ ಹಲವಾರು ಬಾರಿ ಮಾತನಾಡಿದ್ದೇನೆ. ಪ್ರೌಢಶಾಲೆಯಲ್ಲಿ ಉಪ್ಪೇರಿಗೇನ ಹಳ್ಳಿಯಲ್ಲಿ ಓದುವಾಗ ಶಿವಾನಂದಪ್ಪ ಮಾಸ್ಟರ್ ನನಗೆ ಮೆಚ್ಚಿನ ಶಿಕ್ಷಕರಾಗಿದ್ದರು.ಅವರು ನಮಗೆ ಸಮಾಜ ವಿಜ್ಞಾನ ಪಾಠವನ್ನು ಮಾಡುತ್ತಿದ್ದರು. (ನಾನೂ ಈಗ ಸಮಾಜ ವಿಜ್ಞಾನ ಶಿಕ್ಷಕ ಎನಿಸಿಕೊಳ್ಳಲು ಹೆಮ್ಮೆ ಇದೆ) ತರಗತಿಯ ಒಳಗೆ ಬಂದೊಡನೆ ನಮ್ಮ ನಮಸ್ಕಾರ ಸ್ವೀಕರಿಸಿ ಒಂದು ನಗೆ ಬೀರಿ ಪುಸ್ತಕ ತೆಗೆದುಕೊಂಡು ಬ್ಲಾಕ್ ಬೋರ್ಡ್ ನ ಮೂಲೆಯಲ್ಲಿ ಚಿಕ್ಕದಾಗಿ ಅವರಿಗೆ ಗೊತ್ತಾಗುವ ಹಾಗೆ ಏನೋ ಬರೆದುಕೊಳ್ಳುತ್ತಿದ್ದರು. ನಂತರ ಪುಸ್ತಕ ಮುಚ್ಚಿಟ್ಟು ಪಾಠ ಶುರುಮಾಡಿದರೆ ಗಂಗರು ,ಕದಂಬರು, ರಾಷ್ಟ್ರಕೂಟ ಅರಸರು ನಮ್ಮ ತರಗತಿಯಲ್ಲಿ ಬಂದು ಬಿಡುತ್ತಿದ್ದರು. ಅಭಿನಯದ ಮೂಲಕ ಮಾಡುವ ಅವರ ಬೋಧನೆ ನೋಡುವಾಗ ಸಿನಿಮಾ ನೋಡಿದಂತೆ ಭಾಸವಾಗುತ್ತಿತ್ತು. ಆದರೆ ಅವರ ಪಾಠದ ಮಧ್ಯ ಯಾರಾದರೂ ಮಾತನಾಡಿದರೆ ಅಷ್ಟೇ ಅವರ ದೂರ್ವಾಸ ಮುನಿಯ ರೂಪ ಪ್ರಕಟವಾಗಿಬಿಡುತ್ತಿತ್ತು. ಅವರ ಪೀರಿಯಡ್ ನ ನಲವತ್ತು ನಿಮಿಷ ಹೇಗೆ ಕಳೆಯಿತು ಎಂಬುದೇ ಗೊತ್ತಾಗುತ್ತಿರಲಿಲ್ಲ . ಮುಂದಿನ ತರಗತಿಯ ಶಿಕ್ಷಕರು ಬಂದು ಒಮ್ಮೆ ಬಾಗಿಲಲ್ಲಿ ಇಣುಕಿದಾಗ ಅವರ ನೋಡಿ ನಗುತ್ತಾ ಅಂದಿನ ಪಾಠ ಮುಗಿಸುತ್ತಿದ್ದರು. ಅವರು ಪಾಠ ಮಾಡುವಾಗ ಮುಖ್ಯಾಂಶಗಳನ್ನು ರಫ್ ನೋಟ್ ನಲ್ಲಿ ಗುರುತು ಹಾಕಿಕೊಳ್ಳಲು ಸೂಚನೆ ನೀಡುತ್ತಿದ್ದರು. ಅದರ ಆಧಾರದ ಮೇಲೆ ಪ್ರಶ್ನೆಗಳನ್ನು ನೀಡಿ ಮನೆಯಲ್ಲಿ ಬರೆಯಲು ಹೇಳುತ್ತಿದ್ದರು .ನಾವು ಬರೆದ ಉತ್ತರ
ಗಳನ್ನು ತಿದ್ದುವಾಗ ನಮ್ಮ ಉತ್ತರದ ಆಧಾರದ ಮೇಲೆ ಅವರು ಫೀಡ್ ಬ್ಯಾಕ್ ಬರೆಯುತ್ತಿದ್ದರು. ಉತ್ತರ ಸಾದಾರಣವಾಗಿದ್ದರೆ "ಸೀನ್ " ಎಂದು , ಪರವಾಗಿಲ್ಲ ಎನಿಸಿದರೆ "ನೋಡಿದೆ" ಎಂದು, ಇನ್ನೂ ಸ್ವಲ್ಪ ಚೆನ್ನಾಗಿದ್ದರೆ "ಪರಿಶೀಲಿಸಿದೆ" ಎಂದು , ತಪ್ಪು ಇಲ್ಲದೆ ಉತ್ತಮ ಬರವಣಿಗೆ ಮತ್ತು ಉತ್ತರ ಇದ್ದರೆ "ಅತ್ಯುತ್ತಮ" ಎಂದು ಬರೆದು ಸಹಿ ಹಾಕುತ್ತಿದ್ದರು. ನನ್ನ ಪುಸ್ತಕದಲ್ಲಿ ಪರಿಶೀಲಿಸಿದೆ ಮತ್ತು ಅತ್ಯುತ್ತಮ ಎಂಬ ಅವರ ಬರಹ ಹೆಚ್ಚು ಇದ್ದದ್ದು ನನಗೆ ಹೆಮ್ಮೆ ನನ್ನ ಸಹಪಾಠಿಗಳ ಹೊಟ್ಟೆ ಉರಿಗೂ ಕಾರಣವಾಗಿತ್ತು. ಅಂದು ಹೈಸ್ಕೂಲಿನಲ್ಲೇ ಶಿಕ್ಷಕರ ಮಾರ್ಗದರ್ಶನದಲ್ಲಿ ನಾವೇ ನೋಟ್ಸ್ ತಯಾರಿಸಿ ಓದಿದ್ದು ನಮಗೆ ಹೆಮ್ಮೆ ಇದೆ .ಪ್ರಸ್ತುತ ಮಕ್ಕಳಿಗೆ ನಾವೇ ನೋಟ್ಸ್ ಮಾಡಿ ನೀಡಿ ಓದಲು ಹೇಳಿದರೆ ನಾವೇ ಓದಿ ಪರೀಕ್ಷೆ ಬರೆಯುವುದೊಂದು ಬಾಕಿ ಇದೆ. ನಾನು ಹತ್ತನೇ ತರಗತಿಗೆ ಯರಬಳ್ಳಿಗೆ ಓದಲು ನನ್ನ ಅಮ್ಮ ತೀರ್ಮಾನ ತೆಗೆದುಕೊಂಡು ಟಿ ಸಿ ಪಡೆಯಲು ಹೋದಾಗ ಇವನು ಚೆನಾಗಿ ಓದ್ತಾನೆ ಇಂತ ಒಳ್ಳೆಯ ಹುಡಗನ್ ಟಿ ಸಿ ನಾವ್ ಕೊಡಲ್ಲ ಕಣಮ್ಮ ಎಂದು ಅವರು ಹೇಳಿದ ಮಾತು ಕೇಳಿ ನನ್ನ ಅಮ್ಮನ ಕಣ್ಣಲ್ಲಿ ನೀರು ಜಿನುಗಿತ್ತು. ಇಂದು ಶಿಕ್ಷಕರ ದಿನ ಶಿಕ್ಷಕನಾಗಿ ನಮ್ಮ ಶಿವಾನಂದಪ್ಪ ಮಾಸ್ಟರ್ ನೆನಪಾದರು . ನೀವೀಗ ಎಲ್ಲಿದ್ದೀರೋ ಗೊತ್ತಿಲ್ಲ ಸರ್. ಹ್ಯಾಪಿ ಟೀಚರ್ಸ್ ಡೇ ಸರ್ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment