ಆತ್ಮಕಥೆ ೩೭ .
ಹಾರನ ಕಣಿವೆ ಜಾತ್ರೆ ಮತ್ತು ಮಾರಿಕಣಿವೆ .
ನಮ್ಮದು ವಾಲಾಜಿ ಕುಟುಂಬ ನಾವು ಮೊದಲಿನಿಂದಲೂ ಮಾರ್ನಾಮಿ ಹಬ್ಬವನ್ನು ಬಹಳ ಶ್ರದ್ಧೆಯಿಂದ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದೇವೆ .ನಾನು ಚಿಕ್ಕವನಿದ್ದಾಗ ಕೊಟಗೇಣೇರ ಮನೆ ಎಂದು ಇಂದಿಗೂ ಪರಿಚಿತವಾಗಿರುವ ಉಪ್ಪರಿಗೇನಹಳ್ಳಿಯ ನಮ್ಮ ಬಂಧುಗಳಾಗ ಜುಂಜಪ್ಪ ರವರ ಮನೆಯಲ್ಲಿ ಆಚರಿಸುತ್ತಿದ್ದೆವು . ನಮ್ಮ ಪೂಜೆ ವಿಧಿ ವಿಧಾನಗಳು ,ಹಿರಿಯರ ಪೂಜೆ ಮಾಡುವುದು .ಮೂಡ್ಲ ಮಣೇವು ಕಟ್ಟೋದು ದಾಸಯ್ಯನ ಗೋವಿಂದ ಮುಂತಾದವುಗಳು ಮುಗಿದು ಹಾ... ಈಗ ಎಲ್ಲರೂ ಊಟ ಮಾಡಿ ಎನ್ನುವಾಗ ಸಮಯ ರಾತ್ರಿ ಬರೋಬ್ವರಿ ಹನ್ನೆರಡು ಗಂಟೆಯ ಮೇಲಾಗಿರುತ್ತಿತ್ತು .ಹಿರಿಯರಿಗೆ ಎಡೆ ಇಟ್ಟ ಮೇಲೆ ಕೆಲ ಹಿರಿಯರು ಆ ಸಮಯದಲ್ಲೇ ಊಟ. ಮಾಡುತ್ತಿದ್ದರು .ನಾವು ಚಿಕ್ಕ ಮಕ್ಕಳು ನಿದ್ರಾ ದೇವಿಯ ವಶದಿಂದ ಹೊರಬರಲು ಇಷ್ಟವಿಲ್ಲ ಎಂದು ಗೊತ್ತಾದ ಮೇಲೆ ದೊಡ್ಡವರು ನಮ್ಮನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿರಲಿಲ್ಲ. ಬೆಳಿಗ್ಗೆ ಎದ್ದ ಮೇಲೆ ಹಾಳು ಹೊಟ್ಟೆಗೆ ಉಗ್ಗಿ ತಿನ್ನುವ ಕಾಯಕ ಶುರುಮಾಡಿಬಿಡುತ್ತಿದ್ಧೆವು . ಗೋದಿ ರವೆ ಬೆಲ್ಲ ಹಾಕಿ ಮಾಡಿದ ಉಗ್ಗಿ ರಾತ್ರಿ ದ್ರವರೂಪದಲ್ಲಿ ಇದ್ದರೂ ಬೆಳಿಗ್ಗೆ ಅದು ಕೇಕ್ ರೀತಿಯಲ್ಲಿ ಗಟ್ಟಿಯಾಗಿರುತ್ತಿತ್ತು.ಹೊಟ್ಟೆ ಚೆನ್ನಾಗಿ ಹಸಿದಿದ್ದರಿಂದ ನಾವೆಲ್ಲರೂ ಗಬಗಬನೆ ತಿಂದು ಇನ್ನಷ್ಟು ಬೇಕು ಎಂದು ದೊಡ್ಡ ಪಾತ್ರೆಯ ಕಡೆಗೆ ನೋಡುತ್ತಿದ್ದೆವು. ತಂಪಾಗಿದ್ದರೂ ಸಿಹಿಯಾದ ಆ ಉಗ್ಗಿಯ ಸವಿ ಸವಿದವರಿಗೇ ಗೊತ್ತು.
ಮಾರ್ನಾಮಿ ಹಬ್ಬ ನನಗೆ ಬಹಳ ಅಚ್ಚುಮೆಚ್ಚು ಅದಕ್ಕೆ ಮತ್ತೊಂದು ಕಾರಣ ಹಬ್ಬದ ಮರುದಿನ ಹಾರ್ನ ಕಣಿವೆ ರಂಗಪ್ಪನ ಅಂಬು!
ನಮ್ಮ ಭಾಗದಲ್ಲಿ ಚಿತ್ರಳ್ಳಿ ಅಂಬು ಮತ್ತು ಹಾರನಕಣಿವೆ ಅಂಬುಗಳು ಬಹು ಪ್ರಸಿಧ್ಧ . ಮಹಾನವಮಿಯಲ್ಲಿ ನಡೆವ ಈ ಎರಡು ಅಂಬುಗಳಿಗೆ ಪ್ರತಿ ಮನೆಯಿಂದ ಓರ್ವ ಸದಸ್ಯ ಹಾಜರಾಗಿ ಸ್ವಾಮಿಗಳಿಗೆ ಹಣ್ಣು ಕಾಯಿ ಮಾಡಿಸಿಕೊಂಡು ತೀರ್ಥ ತಂದು ಹೊಲ ಮನೆಗಳಿಗೆ ಹಾಕಿದರೇನೇ ಜೀವನ ಎಂಬ ಪದ್ದತಿ ಈಗಲೂ ಜಾರಿಯಲ್ಲಿದೆ. ಚರ್ಮ ವ್ಯಾಧಿಯ ನಿವಾರಣೆ ಗೆ ಚಿತ್ರಳ್ಳಿ ಚಿತ್ರಲಿಂಗೇಶ್ವರನ ಮೊರೆ ಹೋಗುವ ಭಕ್ತರು ಹೊಲ ಮನೆಗಳಲ್ಲಿ ಕಂಡು ಬರುವ ಹಾವು ಚೇಳು ಮುಂತಾದವುಗಳಿಂದ ರಕ್ಷಿಸು ಎಂದು ಹಾರನ ಕಣಿವೆ ರಂಗಪ್ಪನ ಬೇಡುವರು.
ಆಗ ರಸ್ತೆಗಳು ಮತ್ತು ಬಸ್ ಸೌಕರ್ಯ ಬಹಳ ಕಡಿಮೆ ಇತ್ತು ಜನ ಕೊಟಗೇಣಿ ಮತ್ತು ಉಪ್ಪರಿಗೇನಹಳ್ಳಿಯ ಕಡೆಯಿಂದ ಕಾಲ್ನಡಿಗೆಯಲ್ಲಿ ಆರನಕಣಿವೆ ಜಾತ್ರೆಗೆ ಹೋಗಿಬರುತ್ತಿದ್ದರು .ನಾನು ಒಂಭತ್ತನೆಯ ತರಗತಿಯಲ್ಲಿ ಓದುವಾಗ ಅಮ್ಮನನ್ನು ಒಪ್ಪಿಸಿ ನಾನೂ ಹಾರನಕಣಿವೆಜಾತ್ರೆಗೆ ಕಾಲ್ನಡಿಗೆಯಲ್ಲಿ ಹೋಗಲು ತೀರ್ಮಾನಿಸಿದ್ದೆ. ಮಾಡದಕೆರೆ ಮತ್ತು ಹಿರಿಯೂರು ಮಾರ್ಗದಲ್ಲಿ ಬಸ್ ಮೂಲಕ ಸಂಚರಿಸುವ ರಸ್ತೆ ಮಾರ್ಗವಿದ್ದರೂ ಅದು ಮೂವತ್ತು ಕಿಲೋಮೀಟರ್ ಗೂ ಹೆಚ್ಚು ದೂರ ಅದರ ಬದಲಿಗೆ ಕೆರೆಯಾಗಳ ಹಳ್ಳಿಯ ಪಕ್ಕದ ಕಾಡ ಹಾದಿಯಗುಂಟ ನಡೆದು ಹಾರನ ಕಣಿವೆ ಸೇರಲು ಸುಮಾರು ಹದಿನೈದು ಕಿಲೋಮೀಟರ್ ಆಗುತ್ತಿತ್ತು.
ಮಾರ್ನಾಮಿ ಹಬ್ಬದ ನಂತರದ ದಿನ ಅಡಿಕೆ ಪಟ್ಟಿಯಲ್ಲಿ ಅಮ್ಮ ಮಾಡಿಕೊಟ್ಟ ಬುತ್ತಿ ಅನ್ನ ಮೊಸರು ಕಟ್ಟಿಕೊಂಡು ಗೆಳೆಯರು ಹಿರಿಯರ ಜೊತೆಗೂಡಿ ಬೆಳಗಿನ ಜಾವ ಐದು ಗಂಟೆಗೆ ಕಾಡ ಹಾದಿಯಲ್ಲಿ ಪಯಣ ಆರಂಬಿಸಿಯೇ ಬಿಟ್ಟೆವು .ಆರಂಭದಲ್ಲಿ ಬಹಳ ಜೋರಾಗಿ ಓಡುತ್ತಾ ಕಿರುಚುತ್ತಾ ಸಾಗಿದ ನಾವು ಐದಾರು ಕಿಲೋಮೀಟರ್ ದಾರಿ ಕ್ರಮಿಸಿದಾಗ ಚಪ್ಪಲಿಗಳಿಲ್ಲದ ದೂರ ನಡೆಯದ ನಮ್ಮ ಕಾಲುಗಳು ಮಾತಾಡುತ್ತಿದ್ದವು.ಅಲ್ಲಲ್ಲಿ ವಿಶ್ರಾಂತಿ ತೆಗೆದುಕೊಂಡು ಅಲ್ಲೇ ಕಾಣುವ ಕೆರೆ ಕಟ್ಟೆಯ ನೀರು ಕುಡಿದು ನಡೆಯಲು ಶುರು ಮಾಡಿದೆವು .ಮಾದಿಹಳ್ಳಿಯ ನಮ್ಮ ಸಂಬಂಧಿಯವರ ಮನೆಯಲ್ಲಿ ಟೀ ಕುಡಿದು ಸುಮಾರು ಹತ್ತು ಗಂಟೆಗೆ ಹಾರನ ಕಣಿವೆ ಜನಸಾಗರಕ್ಕೆ ಸೇರಿದೆವು .ಮೊದಲ ಬಾರಿಗೆ ಕಂಡ ಜಾತ್ರೆಯ ವೈಭವ ನೋಡುವಾಗ ಅಷ್ಟು ದೂರ ನಡೆದಾಗ ಇದ್ದ ಕಾಲು ನೋವು ಮಾಯವಾಗಿತ್ತು . "ಜಾತ್ರೆಯಲ್ಲಿ ನಿನ್ನ ಗೆಣೆಕಾರರ ಕೈ ಹಿಡಿದುಕೊಂಡು ಸಾಗು ಇಲ್ಲವಾದರೆ ಕಳೆದು ಹೋಗುತ್ತೀಯಾ " ಎಂದು ಅಮ್ಮ ಎಚ್ಚರಿಕೆ ನೀಡಿದ್ದು ನೆನಪಾಗಿ ನನ್ನ ಗೆಳೆಯರ ಕೈಹಿಡಿದೇ ಜಾತ್ರೆಯಲ್ಲಿ ಸುತ್ತಾಡಿದೆ .ಮೊದಲಿಗೆ ದೂರದಿಂದಲೇ ಅಂಬು ನೋಡುವ ಪ್ರಯತ್ನ ಮಾಡಿದೆ ಬರೀ ಜನರ ಕೂಗು ಮಾತ್ರ ಕೇಳಿಸಿತು ಏನೂ ಕಾಣಲಿಲ್ಲ ಯಾರೋ ಹೇಳಿದರು ಬನ್ನಿ ಮರಕ್ಕೆ ದೇವರು ಮೂರು ಬಾಣ ಬಿಟ್ಟಿತು ಅದೇ ಅಂಬು ಎಂದು. ನಾವು ಮನೆಯಿಂದ ತಂದ ಕಾಯಿ ಮತ್ತು ಹಣ್ಣು ಕೊಟ್ಟು ದೇವಾಲಯದ ಹೊರಗಡೆ ಪೂಜೆ ಮಾಡಿಸಿಕೊಂಡು ತಗಡಿನ ಚೇಳು ಉಳ ಎಂಬ ಬೊಂಬೆಗಳನ್ನು ಖರೀದಿಸಿ ಸ್ವಾಮಿಗೆ ಹಾಕಿದೆವು .ಹಾಗೆ ಮಾಡುವುದರಿಂದ ನಮ್ಮ ಮನೆ ಮತ್ತು ಹೊಲದಲ್ಲಿ ಹಾವು ಚೇಳುಗಳ ತೊಂದರೆ ಬರದು ಎಂಬ ನಂಬಿಕೆ. ಅಂಬಿನ ನಂತರ ಹಾಗೆ ಮುಂದೆ ಸಾಗಿದಾಗ ಪ್ರತಿಯೊಂದು ತಂಗಟೆ ಗಿಡದ ಕೆಳಗೆ ಬಾಳೆ ಹಣ್ಣು ಸಕ್ಕರೆ ಕಲೆಸಿ ದೇವರಿಗೆ ನೈವೇದ್ಯ ಮಾಡುವ ಭಕ್ತರ ಸಾಲು ನೋಡಿದಾಗ ಹೊಸ ಸಂಪ್ರದಾಯ ಗೋಚರವಾಯಿತು. ಎಲ್ಲರೂ ಕರೆದು ನಮಗೆ ಸಕ್ಕರೆ ಬಾಳೆಹಣ್ಣು ನೀಡಿದರು. ನಾಲ್ಕೈದು ಕಡೆ ತಿನ್ನುವಷ್ಟರಲ್ಲಿ ಹೊಟ್ಟೆ ತುಂಬಿ ಆಕಡೆ ಹೋಗಲಿಲ್ಲ. ಹಾಗೆ ಜಾತ್ರೆಯ ಕಡೆಗೆ ಹೆಜ್ಜೆ ಹಾಕುವಾಗ ವಿವಿಧ ಪ್ರಸಂಗಗಳು ನನ್ನ ಮನ ಸೆಳೆದವು .ತಮ್ಮ ಕೈ ಕೊಯ್ದುಕೊಂಡು ಭಿಕ್ಷೆ ಬೇಡುವ ಮೊಂಡರು ಒಂದೆಡೆಯಾದರೆ , ತಮ್ಮ ಮೈ ಮೇಲೆ ತಾವೇ ಚಾಟಿ ಬೀಸಿಕೊಂಡು ರಕ್ತ ಬರುವ ಹಾಗೆ ಹೊಡೆದುಕೊಂಡ ಹಣ ಕೇಳುವವರು ಮತ್ತೊಂದು ಕಡೆ.ಅಲ್ಲೊಂದು ವೃತ್ತಾಕಾರದ ಗುಂಪಿನ ಕಡೆ ಸಾಗಿ ನೋಡಿದರೆ ಅಲ್ಲಿ ಹಾವಾಡಿಗ ಹಾವಾಡಿಸುತ್ತಿದ್ದ. ಅಮ್ಮ ಕೊಟ್ಟ ಹತ್ತು ರೂಪಾಯಿ ಯಲ್ಲಿ ಮೊದಲಿಗೆ ಐವತ್ತು ಪೈಸೆ ಕೊಟ್ಟು ಒಂದು ಐಸ್ ಕ್ಯಾಂಡಿ ತಿಂದೆ .ಹಾಗೆ ನಡೆದು ಜಾತ್ರೆಯ ಆಟಿಕೆ ಅಂಗಡಿ ನೋಡುತ್ತಾ ಒಂದು ರೂಪಾಯಿ ಕೊಟ್ಟು ನನಗೆ ಇಷ್ಟವಾದ ಒಂದು ಕೊಳಲು ಕೊಂಡೆ . ಬಿಸಿಲಿನ ಧಗೆ ನಿಧಾನವಾಗಿ ಶುರುವಾಯಿತು .ಅಲ್ಲೇ ಶೀಶೆಯಲ್ಲಿ ಇಟ್ಟ ಬಣ್ಣ ಬಣ್ಣದ ಶರಭತ್ತು ನೋಡಿದೆ .ಇಪ್ಪತ್ತೈದು ಪೈಸೆ ಕೊಟ್ಟು ಬಣ್ಣದ ಶರಭತ್ತು ಕುಡಿದೆ. ಒಂದೂವರೆಗೆ ಗೆಳೆಯರೆಲ್ಲ ಊಟ ಮಾಡಲು ಕೆರೆಯಂಗಳಕ್ಕೆ ಕರೆದುಕೊಂಡು ಹೋದರು ನಾವು ಮನೆಯಿಂದ ತಂದ ಬುತ್ತಿ ಅನ್ನವನ್ನು ತಿಂದು ಅಲ್ಲೇ ಕೆರೆಯ ನೀರು ಕುಡಿದು ಮತ್ತೆ ಜಾತ್ರೆಯ ಕಡೆ ಹೊರೆಟೆವು ಈಗ ನಿಧಾನವಾಗಿ ಕಾಲು ನೋಯಲು ಆರಂಭವಾದವು . ನನ್ನ ಗೆಳೆಯರು ಮಾರಿಕಣಿವೆ ಡ್ಯಾಂ ನೋಡೋಣ ಎಂದು ಸಿದ್ದರಾದರು .ನನ್ನ ಕಾಲಿನ ನೋವಿನ ಬಗ್ಗೆ ಹೇಳಿದಾಗ ಬಲವಂತ ಮಾಡಿ ಮತ್ತೆ ಎರಡು ಕಿಲೋಮೀಟರ್ ನಡೆಸಿಕೊಂಡು ಹೊರಟರು. ದೂರದಿಂದಲೇ ಡ್ಯಾಂ ಕಂಡಿತ್ತು .ಹತ್ತಿರ ಹೋದಂತೆಲ್ಲ ಅದರ ಗಾತ್ರ ಮತ್ತು ನೀರು ನೋಡಿ ಬಹಳ ಖುಷಿಯಾಯಿತು. ಡ್ಯಾಂ ನ ಕೆಳಭಾಗದಲ್ಲಿ ನಿಂತು ಡ್ಯಾಂ ನ ಮೇಲ್ಭಾಗಕ್ಕೆ ಕಲ್ಲು ಹೊಡೆಯುವ ಸ್ಪರ್ಧೆ ನಮ್ಮಲ್ಲಿ ಶುರುವಾಯಿತು. ಕೆಲವರು ಕಾಲು ಭಾಗದಷ್ಟು ದೂರಕ್ಕೆ ಕೆಲವರು ಅರ್ಧ ಭಾಗಕ್ಕೆ ಮಾತ್ರ ಕಲ್ಲು ಎಸೆದರು ಯಾರೂ ಡ್ಯಾಂ ನ ಸಮವಾಗಿ ಕಲ್ಲು ಎಸೆಯಲೇ ಇಲ್ಲ. ಮೊನ್ನೆ ಎಂಬತ್ತೆಂಟು ವರ್ಷಗಳ ನಂತರ ಕೋಡಿ ಬಿದ್ದ ಮಾರಿಕಣಿವೆ ಕೆರೆ ನೋಡಲು ಕುಟುಂಬ ಸಮೇತ ಕಾರಿನಲ್ಲಿ ಮಾರಿಕಣಿವೆಗೆ ಹೋದಾಗ ಬಾಲ್ಯದ ಎಲ್ಲಾ ನೆನಪುಗಳು ಡ್ಯಾಂ ನ ಅಲೆಗಳಂತೆ ಮನದಲ್ಲಿ ಅಪ್ಪಳಿಸಿದವು ಆ ಅಲೆಗಳು ಇನ್ನೂ ನಿಂತಿಲ್ಲ....
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment