07 September 2022

ಸಾಕ್ಷರ ಭಾರತ ಜಾಗೃತ ಭಾರತ

 

ಸಾಕ್ಷರ ಭಾರತ ಜಾಗೃತ ಭಾರತ

"ನನಗೆ  ಯಾವುದಾದರೂ ಮಂತ್ರದಂಡ ದೊರೆತರೆ
ಅದರಿಂದ ಪ್ರಪಂಚದ ಜನರೆಲ್ಲಾ ಸಾಕ್ಷರತೆ ಪಡೆಯಲಿ ಎಂದು ಮಂತ್ರಿಸುತ್ತಿದ್ದೆ"

ಅಂಬೇಡ್ಕರ್ ರವರು ಹೇಳಿದಂತೆ ಶಿಕ್ಷಣ ,ಸಂಘಟನೆ ಮತ್ತು ಹೋರಾಟ ನಮ್ಮ ಜೀವನವನ್ನು ಮುನ್ನಡೆಸುವ ಚಾಲಕ ಶಕ್ತಿಗಳು.
ಸರ್ವಜ್ಞ ರವರ ಪ್ರಕಾರ "ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು  ವಿದ್ಯೆ ಇಲ್ಲದವನ ಮುಖವು ಹಾಳೂರು ಹದ್ದಿನಂತಿಕ್ಕು ಸರ್ವಜ್ಞ" ಎಂದು ವಿದ್ಯೆಯ ಮಹತ್ವದ ಕುರಿತು ಹೇಳಿದ್ದಾರೆ.
ಶಿಕ್ಷಣ ಮಾನವನಿಗೆ ಒಡವೆಯಿದ್ದಂತೆ ಜೀವನಕ್ಕೆ ದೀವಿಗೆ ಇದ್ದಂತೆ.

ಯಾವುದೇ ದೇಶದ ಪ್ರಗತಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಂಕದಲ್ಲಿ ಸಹ ಶಿಕ್ಷಣಕ್ಕೆ ಅಗ್ರ ಸ್ಥಾನವಿದೆ.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಸಾಕ್ಷರತೆಯು ಅಭಿವೃದ್ಧಿಯ ಬೆನ್ನೆಲುಬಾಗಿದೆ.  ಇದು ಜೀವನದ ಗುಣಮಟ್ಟ, ಅರಿವು ಮತ್ತು ಜನರ ಕೌಶಲ್ಯಗಳನ್ನು ಹೆಚ್ಚಿಸುತ್ತದೆ.

ಸಾಕ್ಷರತೆ ಎಂದರೆ "ಪರಿಣಾಮಕಾರಿಯಾಗಿ ಸಂವಹನ ಮಾಡಲು ಮಾಹಿತಿಯನ್ನು ಓದುವ, ಬರೆಯುವ ಮತ್ತು ಗ್ರಹಿಸುವ ಸಾಮರ್ಥ್ಯ.  ವೃತ್ತಪತ್ರಿಕೆಯನ್ನು ಓದುವುದರಿಂದ ಹಿಡಿದು ರಸ್ತೆ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವವರೆಗೆ ಸಾಕ್ಷರತೆಯು ನಮ್ಮ ಸುತ್ತಮುತ್ತಲಿನ ವಿಷಯಗಳ ತಿಳಿಯಲು  ಸಹಾಯ ಮಾಡುವ ಏಕೈಕ ಸಾಧನವಾಗಿದೆ". 

ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ
ಯುನೆಸ್ಕೋ ಸಾಕ್ಷರತೆಯನ್ನು ಹೀಗೆ ವ್ಯಾಖ್ಯಾನಿಸಿದೆ "ವಿಭಿನ್ನ ಸನ್ನಿವೇಶಗಳಿಗೆ ಸಂಬಂಧಿಸಿದ ಮುದ್ರಿತ ಮತ್ತು ಲಿಖಿತ ವಸ್ತುಗಳನ್ನು ಬಳಸಿಕೊಂಡು ಗುರುತಿಸುವ, ಅರ್ಥಮಾಡಿಕೊಳ್ಳುವ, ಅರ್ಥೈಸುವ, ಸೃಷ್ಟಿಸುವ, ಸಂವಹನ ಮಾಡುವ ಮತ್ತು ಲೆಕ್ಕಾಚಾರ ಮಾಡುವ ಸಾಮರ್ಥ್ಯ".

ಒಂದು ಕಾಲದಲ್ಲಿ  ಸಾಕ್ಷರತೆಯು " ಓಬಲೆ"   ಅಂದರೆ ಓದು, ಬರಹ, ಲೆಕ್ಕಾಚಾರದ ಆಧಾರದ ಮೇಲೆ ನಿರ್ಧಾರ ಆಗುತ್ತಿತ್ತು ಈಗ " ಓಬಲೆಕಂಕೃ" ಆಗಿದೆ ಅಂದರೆ ಓದು ಬರಹ ಲೆಕ್ಕಾಚಾರದ ಜೊತೆಯಲ್ಲಿ " ಕಂಪ್ಯೂಟರ್ ಜ್ಞಾನ, ಕೃತಕ ಬುದ್ಧಿಮತ್ತೆ " ಪರಿಚಯ ಕೂಡಾ ಅಗತ್ಯ ಇದರ ಪರಿಚಯ ಇಲ್ಲದವರು ಪರೋಕ್ಷವಾಗಿ ಅನಕ್ಷರಸ್ಥರೇ. ಈ ರೀತಿಯಲ್ಲಿ ಸಾಕ್ಷರತೆಯ ಅರ್ಥ ಕಾಲ ಕಾಲಕ್ಕೆ ಬದಲಾಗುತ್ತದೆ . ನಾವು ಅಪ್ಡೇಟ್ ಆಗುತ್ತಾ ಸಾಕ್ಷರರಾಗಿಯೇ ಉಳಿಯಬೇಕು.

2011 ರ ಜನಗಣತಿಯ ಪ್ರಕಾರ, ಏಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮತ್ತು ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಹೊಂದಿರುವ ಯಾವುದೇ ವ್ಯಕ್ತಿಯನ್ನು ಸಾಕ್ಷರ ಎಂದು ಪರಿಗಣಿಸಲಾಗುತ್ತದೆ.  ಭಾರತದಲ್ಲಿ ಸರಾಸರಿ ಸಾಕ್ಷರತೆಯ ಪ್ರಮಾಣ 74.04%ರಷ್ಟಿದೆ.  ಕೇರಳವು ಭಾರತದಲ್ಲಿ 93.91%ನಷ್ಟು ಸಾಕ್ಷರತೆಯನ್ನು ಹೊಂದಿದ್ದರೆ, ಬಿಹಾರವು ಭಾರತದಲ್ಲಿ 63.82%ನಷ್ಟು ಕಡಿಮೆ ಸಾಕ್ಷರತೆಯ
ಭಾರತದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿಯನ್ನು ನಡೆಸುತ್ತದೆ. 

2011 ರ ಜನಗಣತಿ ಭಾರತದಲ್ಲಿ 15 ನೇ ಅಧಿಕೃತ ಸಮೀಕ್ಷೆಯಾಗಿದೆ.
ಕೋವಿಡ್ ಕಾರಣದಿಂದ 2021 ರಲ್ಲಿ ನಡೆಯಬೇಕಾದ 16ನೇ   ಜನಗಣತಿ ಸಾದ್ಯವಾಗಿಲ್ಲ  1947 ರಲ್ಲಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಅಂತ್ಯದ ನಂತರ, ಭಾರತದ ಸಾಕ್ಷರತೆಯ ಪ್ರಮಾಣವು 12%ರಷ್ಟಿತ್ತು.  ಅಂದಿನಿಂದ, ದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಜಾಗತಿಕವಾಗಿ ಮುಂದುವರಿದಿದೆ ಆದರೆ ಇನ್ನೂ ಬಹಳಷ್ಟು ಅಭಿವೃದ್ಧಿ ಕಾಣಬೇಕಿದೆ.

ಶೇಕಡಾ 12 ಇದ್ದ ಸಾಕ್ಷರತೆ ಇಂದು ಶೇಕಡಾ 74 ತಲುಪಿರುವುದರ ಹಿಂದೆ ನಮ್ಮ ಸಂವಿಧಾನ ಮತ್ತು ಸರ್ಕಾರಗಳ ಪಾತ್ರ ಉಲ್ಲೇಖಾರ್ಹ.
ಭಾರತದ ಸಂವಿಧಾನವು ಎಲ್ಲರಿಗೂ ಶಿಕ್ಷಣದ ಮಹತ್ವವನ್ನು ಗುರುತಿಸಿದೆ.  ಆದ್ದರಿಂದ, ಇದು ದೇಶದಲ್ಲಿ ಶೈಕ್ಷಣಿಕ ಹಕ್ಕುಗಳ ಸರಿಯಾದ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಹಲವಾರು ನಿಬಂಧನೆಗಳನ್ನು ವಿಧಿಸುತ್ತದೆ.

ಭಾರತೀಯ ಸಂವಿಧಾನದ  30 ನೇ ವಿಧಿಯು ಎಲ್ಲಾ ಅಲ್ಪಸಂಖ್ಯಾತರಿಗೂ ತಮ್ಮ ಆಯ್ಕೆಯ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡುತ್ತದೆ.
ಭಾರತದ ಸಂವಿಧಾನ 41, 45 ಮತ್ತು 46 ನೇ ವಿಧಿಗಳು ಮತ್ತು ರಾಜ್ಯ ನೀತಿಯ ನಿರ್ದೇಶನ ತತ್ವಗಳು ಎಲ್ಲಾ ನಾಗರಿಕರು ಉಚಿತ ಶಿಕ್ಷಣ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಕ್ಕೆ ಸೂಚನೆ ನೀಡುತ್ತದೆ.
ಸಮಾನತೆಯ ಮೂಲಭೂತ ಹಕ್ಕು ಕಾನೂನಿನ ದೃಷ್ಟಿಯಲ್ಲಿ ಯಾರನ್ನೂ ಸ್ಥಾನಮಾನ, ಜಾತಿ, ಲಿಂಗ, ವರ್ಗ ಅಥವಾ ಪಂಥದ ಆಧಾರದ ಮೇಲೆ ತಾರತಮ್ಯ ಮಾಡಲಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.  ಶಿಕ್ಷಣಕ್ಕೆ ಸಂಬಂಧಿಸಿದ ಅವಕಾಶಗಳು ಸೇರಿದಂತೆ ದೇಶದ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುತ್ತದೆ.
ನಮ್ಮ ಸಂವಿಧಾನದ ಪರಿಚ್ಛೇದ 21 (A) ಅನ್ನು 6-14 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ನೀಡಲು ತಿದ್ದುಪಡಿ ಮಾಡಲಾಗಿದೆ. ಭಾರತೀಯ ಸಂವಿಧಾನದ 15, 17 ಮತ್ತು 46 ನೇ ವಿಧಿಗಳು ಸಮಾಜದ ದುರ್ಬಲ ವರ್ಗಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಕಾಪಾಡುತ್ತದೆ.

ಸಂವಿಧಾನದ ಬಲದ ಜೊತೆಗೆ ಸರ್ಕಾರದ ಕೆಲ ನೀತಿ ನಿಯಮಗಳ ಅನುಷ್ಠಾನ ಸಹ ಸಾಕ್ಷರತೆ ಹೆಚ್ಚಾಗಲು ಕಾರಣವಾದವು.
ಅವುಗಳಲ್ಲಿ ಕೆಲವು ಉಲ್ಲೇಖ ಮಾಡುವುದಾದರೆ
ವಿದ್ಯಾರ್ಥಿಗಳು ಮತ್ತು ವಯಸ್ಕರನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರವು ವಿವಿಧ ವಿದ್ಯಾರ್ಥಿವೇತನ ಪರೀಕ್ಷೆಗಳನ್ನು ನಡೆಸುತ್ತದೆ ಮತ್ತು ಶಾಲಾ ಸಮವಸ್ತ್ರ, ಪಠ್ಯಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ಒದಗಿಸುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ, ಹಾಜರಾತಿ ಮತ್ತು ಉಳಿಸಿಕೊಳ್ಳುವಿಕೆಯನ್ನು ಸುಧಾರಿಸಲು ವಿದ್ಯಾರ್ಥಿಗಳಿಗೆ ಉಚಿತ ಆಹಾರ ಧಾನ್ಯವನ್ನು ಒದಗಿಸಲು ಸರ್ಕಾರವು 1995 ರಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಆರಂಭಿಸಿದೆ.
ಶಾಲಾ ಪರಿಣಾಮಕಾರಿತ್ವವನ್ನು ಸುಧಾರಿಸುವ ವಿಶಾಲ ಗುರಿಯೊಂದಿಗೆ ಸರ್ಕಾರವು  ಸರ್ವ ಶಿಕ್ಷಾ ಅಭಿಯಾನ್ , ಸಮಗ್ರ ಶಿಕ್ಷಾ ಕಾರ್ಯಕ್ರಮವನ್ನು ಆರಂಭಿಸಿತು.  ಇದನ್ನು ಶಾಲಾ ಶಿಕ್ಷಣ ಮತ್ತು ಸಮಾನ ಕಲಿಕೆಯ ಫಲಿತಾಂಶಗಳಿಗೆ ಸಮಾನ ಅವಕಾಶಗಳ ಆಧಾರದ ಮೇಲೆ ಜಾರಿಗೊಳಿಸಿದೆ.
ಶಿಕ್ಷಣದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳನ್ನು ಆರಂಭಿಸಲಾಯಿತು.  ಅವರು ತಮ್ಮ ಮಕ್ಕಳನ್ನು ಶಾಲೆಗೆ ಹಾಜರಾಗಲು ಅಥವಾ ಕಳುಹಿಸಲು ಪ್ರೋತ್ಸಾಹಿಸಲಾಗಿದೆ.ಈಗ 2021 ಇಸವಿಯಲ್ಲಿ ಹೊಸ ಶಿಕ್ಷಣ ನೀತಿಯು ಜಾರಿ ಮಾಡುವ ಮೂಲಕ  ಉತ್ತಮ ಶಿಕ್ಷಣ ನೀಡಲು ಸರ್ಕಾರಗಳು ಪಣ ತೊಟ್ಟಿವೆ.

ಇಷ್ಟೆಲ್ಲಾ ಪ್ರಯತ್ನಗಳ ನಡುವೆ
ವಿಶ್ವದ 287 ಮಿಲಿಯನ್ ಅನಕ್ಷರಸ್ಥ ವಯಸ್ಕರಲ್ಲಿ ಭಾರತವು ಅತಿದೊಡ್ಡ ಜನಸಂಖ್ಯೆ ಹೊಂದಿದೆ.  ಇದು ಜಾಗತಿಕ ಒಟ್ಟು ಮೊತ್ತದ 37%. ಎಂಬುದು ಬೇಸರದ ಸಂಗತಿ
ಭಾರತದಲ್ಲಿ ಅನಕ್ಷರತೆಯು ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ವಿಭಜನೆಯ ಸಂಕೀರ್ಣ ಜಾಲದಿಂದಾಗಿ.  ಆರ್ಥಿಕ ಅಸಮಾನತೆಗಳು, ಲಿಂಗ ತಾರತಮ್ಯ, ಜಾತಿ ತಾರತಮ್ಯ ಮತ್ತು ತಾಂತ್ರಿಕ ಅಡೆತಡೆಗಳು ಭಾರತದಲ್ಲಿ ಅನಕ್ಷರತೆಗೆ ಕಾರಣವಾಗುತ್ತವೆ.  ಭಾರತವು ಅನಕ್ಷರಸ್ಥ ವಯಸ್ಕರಲ್ಲಿ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿದೆ, ಇದು ಭಾರತದ ಅನಕ್ಷರತೆಯ ಕೆಟ್ಟ ವೃತ್ತಕ್ಕೆ ಮತ್ತಷ್ಟು ಕೊಡುಗೆ ನೀಡುತ್ತದೆ.
ಅನಕ್ಷರತೆಯು ವ್ಯಕ್ತಿಯ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ.  ಅನಕ್ಷರಸ್ಥ ವ್ಯಕ್ತಿಯು ಓದಲು ಮತ್ತು ಬರೆಯಲು ಸಾಧ್ಯವಿಲ್ಲ, ಮತ್ತು ಅದರ ಪರಿಣಾಮವಾಗಿ ಕೌಶಲ್ಯದ  ಕೆಲಸಕ್ಕೆ ಸೇರಲು  ಸಾಧ್ಯವಿಲ್ಲ .ತಿಳುವಳಿಕೆಯ ಕೊರತೆಯು ಅವರ ಮತ್ತು ಅವರ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ.  ಮುಂದೆ, ಅನಕ್ಷರಸ್ಥ ಪೋಷಕರ ಮಕ್ಕಳು ವಿದ್ಯಾವಂತ ಪೋಷಕರ ಮಕ್ಕಳಷ್ಟೇ ಶಿಕ್ಷಣವನ್ನು ಪಡೆಯುವುದಿಲ್ಲ.  ಅವರು ಒಂದೇ ಶಾಲೆಗೆ ಹೋದರೂ, ಅನಕ್ಷರಸ್ಥ ಪೋಷಕರ ಮಕ್ಕಳಿಗೆ ಶಿಕ್ಷಣ ಪಡೆದ ಪೋಷಕರು ತಮ್ಮ ಮಕ್ಕಳಿಗೆ ನೀಡುವ ರೀತಿಯ ಅರಿವು ಇರುವುದಿಲ್ಲ ಆದ್ದರಿಂದ, ಅನಕ್ಷರತೆಯು ಭಾರತದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ವಿಷವರ್ತುಲವಾಗುತ್ತದೆ.ಆದ್ದರಿಂದ
ಇಪ್ಪತ್ತೊಂದನೇ ಶತಮಾನದ ಈ ಪರ್ವ ಕಾಲದಲ್ಲಿ ಸಂವಿಧಾನದ ಆಶಯದಂತೆ ಸರ್ಕಾರಗಳು ಶಿಕ್ಷಣಕ್ಕೆ ಇನ್ನೂ ಒತ್ತು ನೀಡಬೇಕಿದೆ ಮುಂದುವರಿದ ದೇಶಗಳಂತೆ ಶಿಕ್ಷಣ ಕ್ಷೇತ್ರಕ್ಕೆ ಜಿ ಡಿ ಪಿ ಯ ಶೇಕಡಾ ಹತ್ತಕ್ಕೂ ಹೆಚ್ಚು ಹೂಡಿಕೆ ಮಾಡಿ ಶಿಕ್ಷಣ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರಮಾಣಿಕ ಪ್ರಯತ್ನ ಮಾಡಬೇಕು .ಇದಕ್ಕೆ ಸಮುದಾಯ, ಶಿಕ್ಷಕರು ,ಮತ್ತು ಸಾರ್ವಜನಿಕರು ಹೆಗಲು ಕೊಟ್ಟು ನಿಲ್ಲಬೇಕಿದೆ.ಆಗ ಮಾತ್ರ ಸಾಕ್ಷರ ಭಾರತ ಜಾಗೃತ ಭಾರತವಾಗಿ ಮಾರ್ಪಾಡಾಗಿ ತನ್ಮೂಲಕ ಅಭಿವೃದ್ಧಿಯ ಪಥದೆಡೆಗೆ ಸಾಗುವುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ. ಕ್ಯಾತ್ಸಂದ್ರ
ತುಮಕೂರು
9900925529


No comments: