ನಾನಾಗ ಎಂಟನೇ ತರಗತಿಯಲ್ಲಿ ಓದುತ್ತಿದ್ದೆ.
ನಮ್ಮಮ್ಮ ಗ್ರಾಮೀಣ ಬ್ಯಾಂಕ್ ನಲ್ಲಿ ಸಾಲ ಮಾಡಿ ಒಂದು ಕರೆಯುವ ಎಮ್ಮೆ ತಂದಿದ್ದರು. ಹಾವೇರಿ ಕಡೆಯಿಂದ ತಂದ ಮುರಾ ತಳಿಯ ಎಮ್ಮೆ ಅಂದು ನಮ್ಮ ಊರಿನ ಪ್ರಮುಖ ಆಕರ್ಷಣೆಯಾಗಿತ್ತು. ಅದೇ ಮೊದಲ ಬಾರಿಗೆ ಅಂತಹ ಎಮ್ಮೆ ನೋಡಿದ ನಮ್ಮೂರ ಜನರು ಎಮ್ಮೆಯ ಬಣ್ಣ, ಮೈಕಟ್ಟು, ಕೆಚ್ಚಲು, ಕೊಂಬು ಹೀಗೆ ಅದರ ವಿಶೇಷಣಗಳನ್ನು ವರ್ಣಿಸುವಾಗ ನನಗೆ ಹೆಮ್ಮೆ! ಅದಕ್ಕೆ ಆಗಾಗ ಹೇಳುತ್ತಲೇ ಇದ್ದೆ ನಮ್ಮನೆಯ ಎಮ್ಮೆ ನಮ್ಮ ಹೆಮ್ಮೆ!
ಯಾವ ಮಟ್ಟಿಗೆ ನಮ್ಮ ಎಮ್ಮೆಯ ಪ್ರಖ್ಯಾತಿ ಹೆಚ್ಚಾಯಿತೆಂದರೆ ಉಪ್ಪರಿಗೇನಹಳ್ಳಿ ,ಕೆರೆಯಾಗಳ ಹಳ್ಳಿ ಮುಂತಾದ ಹಳ್ಳಿಗಳ ಜನ ಬಂದು ನಮ್ಮ ಎಮ್ಮೆಯ ದರ್ಶನ ಪಡೆದು ಮೆಚ್ಚುಗೆ ಸೂಚಿಸಿ ಹೋಗುತ್ತಿದ್ದರು.ಇದರ ಪರಿಣಾಮ ಎಮ್ಮೆಗೆ ಕಣ್ಣಾಸರ ಆಗಿ ಒಂದೇ ಸಮನೆ ಭೇದಿ ಶುರುವಾಯಿತು. ಅಮ್ಮ ಒಂದು ಒಣಗಿದ ತೆಂಗಿನ ಚಿಪ್ಪನ್ನು ಕೊರಳಿಗೆ ಕಟ್ಟಿ ,ಒಂದನ್ನು ಅದರ ತಲೆಗೆ ನೇವಳಿಸಿ ಮೂರು ಹಾದಿ ಕೂಡೋ ಜಾಗದಲ್ಲಿ ಸುಟ್ಟರು. ಅದು ಸುಡುವಾಗ ಕಟಿ ಕಟಿ ಸದ್ದು ಕೇಳಿ" ನೋಡು ಎಮ್ಮೆಗೆ ಶ್ಯಾನೆ ಕಣ್ಣಸರ ಅಗೈತೆ" ಎಂದರು.
ಕೂಲಿಯ ಕೆಲಸದ ಜೊತೆಯಲ್ಲಿ ಅಮ್ಮ ಎಮ್ಮೆಯನ್ನು ಸಂಬಾಳಿಸಬೇಕಿತ್ತು .ರಜೆ ಇದ್ದಾಗ ನಾನೂ ಎಮ್ಮೆಯ ಮೇಯಿಸಲು ಹೋಗುತ್ತಿದ್ದೆ. ಇದರ ಜೊತೆಗೆ ನನಗೆ ಎಮ್ಮೆ ಬಂದಾಗಿನಿಂದ ಹೆಚ್ಚುವರಿ ಕೆಲಸ ಶುರುವಾಯಿತು. ಬೆಳಿಗ್ಗೆ ಬೇಗ ಎದ್ದು ಸಗಣಿ ಬಾಸಿ ಕಸ ಹೊಡೆದು ಓದಲು ಕೂರಬೇಕಿತ್ತು. ಹುಲ್ಲುಗಾಲದಲ್ಲಿ ಹುಲ್ಲು ತರಲು ನಮ್ಮ. ಮನೆಯ ಮುಂದಿನ ಕಂಚಮಾಮ, ನಾಗತ್ತೆ ಮುಂತಾದವರ ಕೂಡಿಕೊಂಡು ರಾತ್ರಿ ನಾಲ್ಕುವರೆ ಐದು ಗಂಟೆಗೆ ಎದ್ದು ಕುಡುಗೋಲು ಹಗ್ಗ ತೆಗೆದುಕೊಂಡು ಸುಮಾರು ಐದು ಕಿಲೋಮೀಟರ್ ನಡೆದು ಹುಲ್ಲು ತರುತ್ತಿದ್ದೆವು . ಕೆಲವೊಮ್ಮೆ ಹೊಲದ ಮಾಲಿಕರ ಬೈಗುಳ ಸಹ ಕೇಳಿದ್ದಿದೆ. ಹೊಂಬಾಳೆ ಹುಲ್ಲು, ಗಂಟಿಗನ ಹಲಬು ಮುಂತಾದ ಹುಲ್ಲು ಕಿತ್ತು ದೇವರ ಅಲಂಕಾರದಂತೆ ಹೊರೆ ಕಟ್ಟಿ ತಲೆ ಮೇಲೆ ಹೊತ್ತು ನಡೆದು ಮನೆ ಸೇರುತ್ತಿದ್ದೆವು. ಮೊದ ಮೊದಲು ನಮ್ಮ ಎಮ್ಮೆಯ ಹಾಲಿಗೆ ಬಹಳ ಡಿಮಾಂಡ್ ಇತ್ತು ಒಂದು ವಾರದ ನಂತರ ಗೊತ್ತಾಯಿತು ಹಾಲಿನ ಬಾಕಿ ಹಣ ಕೇಳಿದಾಗ ಅದೇ ಜನ ಕುರಿ ಹಟ್ಟಿಯ ಕಡೆ ಮುಖ ಮಾಡಿದ್ದರು .ಅದಕ್ಕೆ ಅಮ್ಮ ಒಂದು ಉಪಾಯ ಮಾಡಿ ಉಪ್ಪರಿಗೇನಹಳ್ಳಿಯ ರುದ್ರಣ್ಣನವರ ಹೋಟೆಲ್ ಗೆ ನಮ್ಮ ಹಾಲು ಮಾರಲು ತೀರ್ಮಾನ ಮಾಡಿ ಪ್ರತಿದಿನ ಬೆಳಿಗ್ಗೆ ನಾನೇ ಹಾಲು ಕರೆದು ಹೋಟೆಲ್ ಗೆ ಕೊಡುವ ಹೊಸ ಜವಾಬ್ದಾರಿ ವಹಿಸಿದರು. ಬೆಳಿಗ್ಗೆ ಎದ್ದು ಸ್ಟೀಲ್ ಚೊಂಬಿನಲ್ಲಿ ಹಾಲು ಕರೆದು ಅದೇ ಒಂದು ಲೀಟರ್ ಸ್ಟೀಲ್ ಚೊಂಬನ್ನು ಹಿಡಿದು ಉಪ್ಪರಿಗೇನಹಳ್ಳಿಯ ಹೋಟೆಲ್ ಗೆ ಹೋಗಿ ಹಾಲು ಹಾಕಿ ಹಣ ಪಡೆದು ಮನೆಗೆ ಬಂದು ಊಟ ಮಾಡಿ ಮತ್ತೆ ಮತ್ತೆ ಪುಸ್ತಕ ಜೋಡಿಸಿಕೊಂಡು ಪುನಃ ಗೆಳೆಯರ ಜೊತೆಯಲ್ಲಿ ಉಪ್ಪರಿಗೇನಹಳ್ಳಿಯ ಹಾದಿ ಹಿಡಿಯುತ್ತಿದ್ದೆ.ನನ್ನ ಜೊತೆಗೆ ರಾಗಿ ಮುದ್ದೆ ಮತ್ತು ಸಾರಿನ ಸ್ಟೀಲ್ ಕ್ಯಾರಿಯರ್ ಕೂಡಾ ಇರುತ್ತಿತ್ತು! ಇಂದು ಪತ್ರಿಕೆಯಲ್ಲಿ ಹಾಲು ಉತ್ಪಾದನೆಯಲ್ಲಿ ಭಾರತ ನಂಬರ್ ಒನ್ ಎಂಬ ಸುದ್ದಿ ಓದಿದಾಗ ನಾನು ಕೂಡಾ ಒಂದು ಕಾಲದಲ್ಲಿ ಹಾಲು ಉತ್ಪಾದಕ ಮತ್ತು ಸರಬರಾಜದಾರ ಎಂಬುದನ್ನು ನೆನೆದು ಎಮ್ಮೆ ಅಲ್ಲಲ್ಲ ಹೆಮ್ಮೆ ಆಯಿತು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment