30 June 2022

ಜನಮಿಡಿತ ೩೦/೬/೨೨


 

ನಾವಿಕನಿಲ್ಲದ ನಾವೆ

 

ನಾವಿಕನಿಲ್ಲದ ನಾವೆ.


ನಮ್ಮ ಜೀವನದ 

ಗುರಿಯನ್ನು ನಿರ್ಧರಿಸಿಕೊಳ್ಳ 

ಬೇಕು ನಾವೆ|

ಗುರಿಯಲ್ಲದ ವ್ಯಕ್ತಿಗಳ ಜೀವನ

ನಾವಿಕನಿಲ್ಲದ ನಾವೆ.||

29 June 2022

ಪ್ರೇಮ ಬರಹ


 


ಪ್ರೇಮ ಬರಹ ಕೋತಿ ತರಹ 


ಪ್ರೇಮದಲ್ಲಿ ಬಿದ್ದವನು

ಪದೇ ಪದೇ ಹಾಡುತ್ತಿದ್ದ

ಪ್ರೇಮ ಬರಹ ಕೋಟಿ ತರಹ|

ಪ್ರೇಮಿ ಕೈ ಕೊಟ್ಟಾಗ 

ಭಗ್ನ ಗೊಂಡ ಹೃದಯದಿ 

ಈಗ ರಾಗ ಬದಲಿಸಿಹನು

ಪ್ರೇಮ ಬರಹ ಕೋತಿ ತರಹ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಸಿಂಹ ಧ್ವನಿ ಲೇಖನ .೨೮/೬/೨೨


 

ದೂರವಿರು


 


*ದೂರವಿರು*


ಯಾರು ನಂಬಿಕಾರ್ಹರೋ 

ಯಾರು  ಕಷ್ಟದಲ್ಲಿರುವರೋ ಸದಾ 

ಅಂತಹವರ ಜೊತೆಗಿರು|

ಯಾರು ನಂಬಿಕೆಗೆ 

ಅರ್ಹರಲ್ಲವೋ ಅಂತಹವರಿಂದ

ದುಡ್ಡುಕೊಟ್ಟದರೂ ದೂರವಿರು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

28 June 2022

ತಿಂಮ ರಸಾಯನ .

 


ತಿಂಮ ರಸಾಯನ . ವಿಮರ್ಶೆ


ಬೀಚಿ ಯವರ ತಿಂಮ ರಸಾಯನ ಓದಿದಾಗ ಇದು ಒಮ್ಮೆ ಓದಿ ಎತ್ತಿಡುವ  ಪುಸ್ತಕ ಅಲ್ಲ ಎಂಬುದು ಮನವರಿಕೆ ಆಯಿತು. ಒಮ್ಮೆ ಓದಿದಾಗ ಒಂದು ರೀತಿಯ ಅರ್ಥ ಧ್ವನಿಸಿದರೆ ಮತ್ತೊಮ್ಮೆ ಮಗದೊಮ್ಮೆ ವಿವಿಧ ಅರ್ಥ ಹೊರಹೊಮ್ಮಿಸಿ ನಮ್ಮನ್ನು ಮುಗಳ್ನಗುವಂತೆ ಮಾಡುತ್ತದೆ.

ಪ್ರೊ. ಅ. ರಾ. ಮಿತ್ರ ರವರು ತಮ್ಮ ನುಡಿಗಳಲ್ಲಿ ಹೇಳಿರುವಂತೆ 

ತಿಂಮ ರಸಾಯನ ಒಂದು ಶಬ್ದಕ್ರೀಡೆ . ಶಬ್ದಕ್ಕೆ ಒಂದೇ ಅರ್ಥವಿರಬೇಕೆಂಬ ನಿಯಮವೇನೂ ಇಲ್ಲವಷ್ಟೆ, ನಿಘಂಟುಗಳೇ ಒಂದು ಶಬ್ದದ ನಾನಾ ಅರ್ಥದ ಕವಲುಗಳನ್ನು ಗುರುತಿಸುತ್ತವೆ. ಆದರೆ ವಿನೋದಶೀಲರಾದವರು ಆ ನಿಘಂಟುಗಳಿಗೂ ಸಿಲುಕದ ಬೇರೆಯೇ ಅರ್ಥದ ಚಕ್ಕೆಯನ್ನು ಕೆತ್ತುವುದರಲ್ಲ ಸಿದ್ಧಹಸ್ತರು. ಕನ್ನಡದಲ್ಲಿ ಕೈಲಾಸಂ, ರಾಶಿ, ರಾಜರತ್ನಂ, ಲಾಂಗೂಲಾಚಾರ್ಯ, ನಾ. ಕಸ್ತೂರಿ, ವೇಣುಗೋಪಾಲ ಸೊರಬ ಮೊದಲಾದವರು ಈ ಕ್ರೀಡೆಯಲ್ಲಿ ಕುಶಲರಾದರೆ, ಬೀchiಯವರು 'ಉಗ್ರಗಣ್ಯರು' ಎಂದು ಹೇಳಬಹುದು. ಉದಾಹರಣೆಗೆ ಮಹತ್ವಾಕಾಂಕ್ಷೆ ಎಂದರೆ ಆತ್ಮಕ್ಕೆ ಬರುವ ಉದರ ರೋಗ – ಎಷ್ಟು ಅರ್ಥಗರ್ಭಿತವಾಗಿದೆ ನೋಡಿ. ಪತ್ರ ವ್ಯವಹಾರ ಎಂದರೆ ಜಾಣತನದಿಂದ ಸಮಯವನ್ನು ಹಾಳು ಮಾಡುವ ಒಂದೇ ಯೋಗ್ಯ ಉಪಾಯವಾಗುತ್ತದೆ. ಜಾತಿ ಎಂದರೆ ದೇವರು ಕೊಡುವ ಬುದ್ಧಿಗೆ ದೆವ್ವ ಕೂಡುವ ಆಫೀಮಂತೆ! ಸೋಮವಾರದ ದಿನ ರಜೆ ಕೇಳುವವನು ಸೋಮಾರಿ"ಯಂತೆ! ಈ ಬಗೆಯ ದುರ್ವ್ಯಾಖ್ಯೆಗಳನ್ನು ಅರ್ಥಪೂರ್ಣವಾಗಿ ರಚಿಸಿದ ಆಂಬ್ರೋಸ್ ಬಿಯರ್ಸ್  ಬರೆದ ಡೆವಿಲ್ಸ್ ಡಿಕ್ಷನರಿ ಜಾಡಿನಲ್ಲಿ ಸಾಗುತ್ತದೆ. ತಿಂಮ ರಸಾಯನ ಮಿದುಳಿನ ಉನ್ನತ ಕ್ರೀಡೆಗೆ ಒಂದು ಶ್ರೇಷ್ಠ ಮಾದರಿಯಾಗಿದೆ.

ಈ ಪುಸ್ತಕದ ಬಗ್ಗೆ ಬೀಚಿ ಯವರ ಮಾತುಗಳಲ್ಲಿ ಹೇಳುವುದಾದರೆ

ಇದು ಒಂದು ನಿಘಂಟು, ಜಾತಿ ನಿಘಂಟಲ್ಲ-ನಿಘಂಟು ಮಾಡಬೇಕಾದ ಕೆಲಸ ಮಾಡುತ್ತಿಲ್ಲ ಅಷ್ಟೇ ಅಲ್ಲ. ಅದು ಮಾಡಲಾರದ ಮತ್ತು ಮಾಡಬಾರದ ಕೆಲಸವನ್ನೂ ಇದು ಮಾಡುತ್ತದೆ. ಕತೆ, ಕಾದಂಬರಿ, ನಾಟಕ ಅಥವಾ ಬೇರಿನ್ನಾದರೂ ಆಗಲು ಆಕಾರ ಮಾತ್ರವೇ ಅಲ್ಲ. ಆಚಾರವೂ ಅಡ್ಡಬರುತ್ತದೆ. ಒಂದೇ ವಿಷಯ ಅಥವಾ ಸನ್ನಿಹಿತ ವಿಷಯಗಳು ಇದರ ಸಾಮಗ್ರಿಯಲ್ಲ, ಆಡು ಮೇದಂತೆ ಕಾಡನ್ನೆಲ್ಲ ಬಾಯಾಡಿದೆ. ಕಣಿವೆಯ ಆಳದ ಒಳಗೂ ಇಳಿದಿದೆ. ಬೆಟ್ಟದ ತುಟ್ಟ ತುದಿಯನ್ನು ಮುಟ್ಟಿದೆ. ಆನೆಗೆ ಆಗದ ಕೆಲಸವನ್ನು ಆಡು ಆಡುತ್ತಾ ಮಾಡುತ್ತದೆ. ತಕ್ಷಣವೇ ಕೊಲ್ಲುವ ವಿಷದ ಎಲೆಯೊಂದಿಗೆ, ಮರುಕ್ಷಣವೇ ಬದುಕಿಸುವ ಸಂಜೀವಿನಿಯೂ ಈ 'ರಸಾಯನ'ದ ಹೊಟ್ಟೆಗೆ ಸೇರಿ ಸರ್ವಸಮರ್ಪಕವಾಗಿದೆ.

ಈ ರಸಾಯನದ ಅನುಪಾನಕ್ಕೂ ಒಂದು ಕ್ರಮವಿದೆ ಎಂಬುದನ್ನು ಇಲ್ಲಿ ಹೇಳದಿದ್ದರೆ ತಿಂಮನಿಗೆ ದ್ರೋಹ ಬಗೆದಂತಾಗುವ ಅಪಾಯವಿದೆ. 'ಆ'ದಿಂದ ಹಿಡಿದು 'ಕ್ಷ'ದವರೆವಿಗೂ ದುಡುದುಡು ಓಡುತ್ತ ಓದಿದರೆ ಗಂಟೆಯೊಳಗಾಗಿ ಮುಗಿದೇ ಹೋಗುತ್ತದೆ. ಹಾಗೆ ಪಠಿಸಲು ಇದೇನು ಅರ್ಥವಾಗಲಾರದ ಶ್ರಾದ್ಧಮಂತ್ರವೇ? ಹಲ್ಲಿಲ್ಲದವರು ಕಬ್ಬಿನ ತುಂಡನ್ನು ಹಾಗೂಮ್ಮೆ ಹೀಗೊಮ್ಮೆ ಬಾಯಲ್ಲಿ ಹೊರಳಿಸಿ ಉಗಿದರೆ ಕಬ್ಬಿನ ತಪ್ಪೇ ? ಹಲ್ಲಿನ ತಪ್ಪೇ? ಹಲ್ಲಿನ ಗಾಣಕ್ಕೆ ಹಾಕಿ ಆಗಿದಂತೆ ನಾಲಗೆಯ ಮೇಲೆ ರಸವು ಸುರಿಯುತ್ತದೆ, ಬಾಯಿ ತಾನೇ ಚಪ್ಪರಿಸುತ್ತದೆ. ತನಗೆ ತಿಳಿಯದೆ. ಇದಾದರೂ ಹಾಗೆಯೇ, ಆಗೊಮ್ಮೆ, ಈಗೊಮ್ಮೆ, ಹಾಗಿಷ್ಟು. ಹೀಗಿಷ್ಟು, ನಿದ್ರೆ ದೂರವಿದ್ದಾಗ ಊಟದ ನಂತರ, ಆಟದ ಮುಂಚೆ, ಗೆಳೆಯರ ಗುಂಪಿನಲ್ಲಿ ಮನೆಯವಳ ಮುಂದೆ ಅಥವಾ ಹಿಂದೆ ಓದಿ ಓದಿ ಗುಟುಕರಿಸಿಟ್ಟರೆ, ಮತ್ತಾವಾಗಲೋ ಇನ್ನೆಲ್ಲಿಯೋ ಯಾವುದೋ ತುಣುಕು ಸ್ಮರಣಿಗೆ ಬಂದು ನಗು ಮುಸಿಮುಸಿಯುತ್ತದೆ. ರಸಾಯನವು ಅನ್ನವಲ್ಲ, ಔಷಧಿಯೂ ಅಲ್ಲ, ಮನಸಿಗೊಂದು ಟಾನಿಕ್.ನಿಜ 

ಈ ಟಾನಿಕ್ ಅನ್ನು ನಾನು ಆಗಾಗ ಸವಿಯುವೆನು. ನೀವು ಸಹ ಆಗಾಗ್ಗೆ ತಿಂಮ ರಸಾಯನ ಸವಿಯಬೇಕೆಂದರೆ ನಿಮ್ಮ ಬಳಿ ರಸಾಯನ ಖಂಡಿತವಾಗಿಯೂ ಇರಲೇಬೇಕು.

ಮುಗಿಸುವ ಮುನ್ನ ತಿಂಮ ರಸಾಯನದ ರುಚಿಯ ಸ್ಯಾಂಪಲ್ ನೀಡುವೆ ಅವುಗಳನ್ನು ಓದಿದ ಮೇಲೆಯು ನೀವು ರಸಾಯನ ಓದಲಿಲ್ಲ ಎಂದರೆ ಅದು ನಿಮಗೆ ಬಿಟ್ಟಿದ್ದು.

ಚಂದ್ರ ಎಂದರೆ ಪಕ್ಕಾ ದೇಶಭಕ್ತ ,ಪರಧನದಂತಿರುವ ಸೂರ್ಯನ ಪ್ರಕಾಶವನ್ನು ಕೈಬಾಡಿಗೆ ತಂದು ತನ್ನ ಪ್ರತಿಷ್ಠೆ ಬೆಳೆಸಿಕೊಂಡವ.

ವಿಮೆ ಎಂದರೆ ಬಡವನಾಗಿ ಬಾಳಿ ಸತ್ತು ಧನಿಕನಾಗಲು ಏಕಮಾತ್ರ ಉಪಾಯ.

ವಿರಕ್ತ ಎಂದರೆ ರಕ್ತ ವಿಹೀನ,ನಂಬಿ ಬಂದ ತಿಗಣೆಗಳನ್ನು ಆಹಾರ ಕೊಡದೆ ಕೊಲ್ಲುವವನು.ವಿರಹ ಎಂದರೆ ಪ್ರೇಮಕ್ಕೆ ವಿರಹವು, ಬೆಂಕಿಗೆ ಗಾಳಿ ಇದ್ದಂತೆ-ಚಿಕ್ಕದನ್ನು ಕೊಲ್ಲುತ್ತದೆ. ದೊಡ್ಡದನ್ನು ಪ್ರಜ್ವಲಿಸುತ್ತದೆ.ವಿರಾಮ

ಎಂದರೆ ವಿರಾಮವಿದ್ದಾಗಲೇ ಕೆಲಸ ಮಾಡು - ಕೆಲಸವಿದ್ದಾಗ ಕೆಲಸ ಮಾಡಲು ವಿರಾಮವು ಅಡ್ಡ ಬರುತ್ತದೆ...

ಇನ್ನೂ ಇಂತಹ ನಿಘಂಟಿನ ಸ್ವಾದ ಸವಿಯಲು ತಿಂಮ ರಸಾಯನ ಸವಿಯಲೇಬೇಕು.


ಪುಸ್ತಕದ ಹೆಸರು: ತಿಂಮ ರಸಾಯನ

ಲೇಖಕರು: ಬೀಚಿ

ಪ್ರಕಾಶನ: ಬೀಚಿ ಪ್ರಕಾಶನ ಬೆಂಗಳೂರು

ಬೆಲೆ:120₹ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


ಕರುಗಳು

 

ಪಕ್ಷ ತೊರೆಯಲು ಸಜ್ಜಾಗಿ

ಬೇರೆ ರಾಜ್ಯಕ್ಕೆ ಪಲಾಯನ

ಮಾಡಿದ್ದಾರೆ ಶಾಸಕರುಗಳು |

ತಾವು ಆರಿಸಿದ ನಾಯಕರು

ತಮ್ಮ ಕಷ್ಟ ಕೇಳದಿರುವುದ ಕಂಡು

ಅಂಬಾ ಎಂದು ಕೂಗುತ್ತಲೇ 

ಜನರೆಂಬ ಅಮಾಯಕ ಕರುಗಳು||

ಸಿಹಿಜೀವಿ

26 June 2022

ದುರ್ಗದ ಬೇಡರ್ದಂಗೆ.


 




 ದುರ್ಗದ  ಬೇಡರ್ದಂಗೆ  

ಚಾರಿತ್ರಿಕ ಕಾದಂಬರಿ


ಪ್ರಕಾಶಕರು ಮತ್ತು ಲೇಖಕರಾದ ಎಂ ವಿ ಶಂಕರಾನಂದ ಹಾಗೂ ಪತ್ರಕರ್ತರಾದ ಪ್ರೊಫೆಸರ್ ವಿ ಎಲ್ ಪ್ರಕಾಶ್ ರವರೊಂದಿಗೆ ಒಂದು ಭಾನುವಾರ ತುಮಕೂರಿನಿಂದ ಚಿತ್ರದುರ್ಗಕ್ಕೆ  ಚಿತ್ರಸಾಹಿತಿ ಮತ್ತು ಕಾದಂಬರಿಕಾರರಾದ ಬಿ ಎಲ್ ವೇಣುರವರನ್ನು ಭೇಟಿಯಾಗಲು ಹೊರಟೆವು . 

ಅವರ ಮನೆಯಲ್ಲಿ ಅವರ ಭೇಟಿಯ ನಂತರ ನಾನು ಬರೆದ ಎರಡು ಕೃತಿಗಳ ನೀಡಿ , ಅವರೊಂದಿಗೆ ಮಾತಿಗಿಳಿದಾಗ ವಿಷ್ಣುವರ್ಧನ್, ಅಂಬರೀಶ್ ರವರ ಒಡನಾಟ ,ಸಾಹಿತಿಯಾಗಿ ಅವರ ಅನುಭವ, ಐತಿಹಾಸಿಕ ಕಾದಂಬರಿಗಳ ರಚನೆಯ ಒಳಹೊರಗು ಹೀಗೆ ಮಾತನಾಡುತ್ತಾ ಸುಮಾರು ಮೂರು ಗಂಟೆಗಳು ಕಳೆದದ್ದೆ ಗೊತ್ತಾಗಲಿಲ್ಲ .

ಅಲ್ಲಿಂದ ಬರುವಾಗ ಇತ್ತೀಚೆಗೆ ಅವರು ಬರೆದ " ದುರ್ಗದ ಬೇಡರ್ದಂಗೆ "ಹಾಗೂ "ಸುರಪುರ ವೆಂಕಟಪ್ಪನಾಯಕ " ಪುಸ್ತಕಗಳನ್ನು ತಂದೆವು.

ಮೊದಲಿಗೆ ದುರ್ಗದ ಬೇಡರ್ದಂಗೆ ಪುಸ್ತಕ ಓದಲು ಶುರುಮಾಡಿದೆ. ಪುಸ್ತಕ ಓದಿ ಮುಗಿಸಿದಾಗ ಇತಿಹಾಸದ ವಿದ್ಯಾರ್ಥಿಯಾದ ನನಗೆ ಒಂದು ಐತಿಹಾಸಿಕ ಕಾದಂಬರಿ ಓದಿ ಹೊಸ ವಿಚಾರ ತಿಳಿದ ಸಂತಸವುಂಟಾಯಿತು.ಅದರಲ್ಲೂ ದುರ್ಗದವನಾಗಿ,ಕನ್ನಡಿಗನಾಗಿ, ಭಾರತೀಯನಾಗಿ ಬ್ರಿಟಿಷರ ಸಂಕೋಲೆಯಿಂದ ಬಿಡಿಸಲು ಏಳು ಬೇಡರ ಯುವಕರು ಸಿಡಿದೆದ್ದ ಪರಿ ರೋಮಾಂಚಕಾರಿ ಅದೇ ನಿಜವಾದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ .


1857ರದ್ದು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂಬುದು ಇತಿಹಾಸದಲ್ಲಿ ದಾಖಲಾಗಿರುವಂಥದ್ದು. ಆದರೆ ಇದಕ್ಕೂ ಎಂಟು ವರ್ಷ ಮೊದಲೇ (1849) ಚಿತ್ರದುರ್ಗದಲ್ಲಿ ಏಳು ಬೇಡ ಹುಡುಗರು ಬ್ರಿಟಿಷರ ವಿರುದ್ಧ ಮಾಡಿದ ದಂಗೆಯೇ ಮೊದಲ ಸಂಗ್ರಾಮವಾಗಿತ್ತೆಂಬುದು ವೇಣುರವರ  ಕೃತಿಯ ಒಟ್ಟು ಸಾರ. ಇದನ್ನು ಪ್ರತಿಪಾದಿಸಿ ಋಜುವಾತು ಮಾಡುವಲ್ಲಿ ಹಲವು ದಾಖಲೆಗಳನ್ನು ಅವರು ಅವಲಂಬಿಸಿದ್ದಾರೆ; ಇವುಗಳ ಆಧಾರದ ಮೇಲೆ ದಂಗೆಯ ಕಥಾನಕವನ್ನು ಕಟ್ಟಿಕೊಟ್ಟಿದ್ದಾರೆ. ವೇಣು ಸರ್ ರವರ  ಕಥನ ಶೈಲಿ ಹಾಗೂ ದಂಗೆಯ ಕಾಲಘಟ್ಟವನ್ನು ಕಟ್ಟಿಕೊಟ್ಟ ರೀತಿ ನಿಜವಾಗಿಯೂ ಅದ್ಭುತ!

 ಕಥೆಯ ವಿಸ್ತರಣೆ ಮತ್ತು ದಂಗೆಯ ವಿವರಗಳನ್ನು ಕಟ್ಟಿಕೊಡುವಲ್ಲಿ ವೇಣುರವರ  ಕಲ್ಪನೆ. ಮುಪ್ಪುರಿಗೊಳ್ಳುವ ಬಗೆ ನಿಜಕ್ಕೂ ವಿಶಿಷ್ಟ. ಏಳು ಜನ ಬೇಡರ ಹುಡುಗರು ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಕೊನೆಯಲ್ಲಿ ಬ್ರಿಟಿಷರ ಗುಂಡುಗಳಿಗೆ ಬಲಿಯಾದರು. ಇದು ಒಟ್ಟಾರೆ ಕಥೆ. ಈ ಕಥೆ ನಡೆದು ಬರುವ ದಾರಿ, ಪಾತ್ರಗಳ ಒಲವು ನಿಲುವು: ವೈಯಕ್ತಿಕ ಸಂಕಷ್ಟಗಳನ್ನು ಸಹಿಸುತ್ತಲೇ ವ್ಯಕ್ತಿಗತ ನೆಲೆಯಾಚೆಯ ಸಾಮಾಜಿಕ ಬದುಕಿನ ನೆಮ್ಮದಿಯೇ ಬದುಕಿನ ಸಿರಿ ಎಂಬ ಖಚಿತತೆ ಬಂದೊರಗಿರುವ ಸಮಸ್ಯೆ ಸಂಸಾರದಲ್ಲ, ಸಮಾಜದ್ದು, ಸಮಾಜಕ್ಕಾಗಿ ಬಲಿಯಾಗಲೂ ಸಿದ್ಧರಿರಬೇಕು ಎಂಬ ಸ್ಪಷ್ಟತೆ ಇವೆಲ್ಲವೂ ಕಾದಂಬರಿಯನ್ನು ಮೇಲುಸ್ತರಕ್ಕೆ ಏರಿಸುತ್ತವೆ.


ಕಥೆಯನ್ನು ಸೃಜಿಸಿರುವ ರೀತಿ ದುರ್ಗದ ಸೊಗಡಿನ ಭಾಷೆ, ಸಂಭಾಷಣೆ, ಅಲ್ಲಲ್ಲಿ ಬರುವ ಹಾಸ್ಯ ಪ್ರಸಂಗಗಳು ಗಮನಸೆಳೆಯುತ್ತವೆ. ಇಡೀ ಕಾದಂಬರಿ ಓದುವಾಗ ನಾವೊಂದು ಚಲನಚಿತ್ರ ವೀಕ್ಷಣೆ ಮಾಡಿದ ಅನುಭವವಾಗುತ್ತದೆ.ಅಂತೆಯೇ ಗೆಳೆಯ ವಿ ಎಲ್ ಪ್ರಕಾಶ್ ರವರಿಗೆ ಈ ಕಾದಂಬರಿ ಚಲನಚಿತ್ರ ಮಾಡಲು ಸಾಧ್ಯವೇ ಎಂದು ಕೇಳಿಯೂ ಬಿಟ್ಟೆ. 


ಡಾಬ್ಸ್ ಮತ್ತು ಹರ್ಕ್ನೆಸ್ ರವರ ಕ್ರೌರ್ಯ ಬ್ರಿಟಿಷರು ಭಾರತೀಯ ಸಮಾಜದ ಮೇಲೆ ಮಾಡಿದ ದಬ್ಬಾಳಿಕೆಯನ್ನು ಪ್ರತಿನಿಧಿಸುತ್ತದೆ. ವಾಲ್ಮೀಕಿಯಾಗಿ, ನರಸಿಂಹನಾಗಿ, ಮುದುಕನಾಗಿ, ಹರಿಕಥೆಮಾಡುವವನಾಗಿ ಕಥಾ ನಾಯಕ ವಿವಿಧ ಪಾತ್ರಗಳಲ್ಲಿ ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸಿದ ಪರಿ ನಿಜಕ್ಕೂ ಸುಂದರ.

ಎಲೆ ಮರೆ ಕಾಯಿಯಂತೆ ದೊಡ್ಡೇರಿ ಗೌಡರು ಯುವಕರ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ನೈತಿಕ ಬೆಂಬಲದ ಜೊತೆಗೆ ಕಾಲ ಕಾಲಕ್ಕೆ ದವಸ ಧಾನ್ಯಗಳನ್ನು ಒದಗಿಸಿ ಸಂಪನ್ಮೂಲಗಳನ್ನು ಕ್ರೂಢಿಕರಿಸಿದ ರೀತಿಯೂ ಪ್ರಶಂಸಾರ್ಹ.ಇಂತಹ ಸಾವಿರಾರು ಎಲೆಮರೆ ಕಾಯಿಯಾಗಿ ಸ್ವಾತಂತ್ರ್ಯ ಕ್ಕೆ ಹೋರಾಡಿದವರ  ಸೇವೆಯನ್ನು ನಾವು ಸಂಶೋಧನೆಯ ಮೂಲಕ ಗುರ್ತಿಸಬೇಕಿದೆ.


ಕೈಮಾಕ್ಸ್ನಲ್ಲಿ ದುರ್ಗದ ದಂಗೆ ನಿರ್ಣಾಯಕ  ಹಂತ ತಲುಪಿದಾಗ ವಾಲ್ಮೀಕಿಯು ಮೂಲಕ ವೇಣುರವರು ಉತ್ತಮ ಭಾರತೀಯ ಮೌಲ್ಯವನ್ನು ಚಿತ್ರಿಸಿದ್ದಾರೆ .  ಬ್ರಿಟಿಷ್ ಅಧಿಕಾರಿ ಆರ್.ಎಸ್.ಡಾಬ್ಗೆ ದಂಗೆಯ ಅಂತಿಮ ಹಂತದಲ್ಲಿ ಮುಖಾಮುಖಿಯಾದ ಕಥಾನಾಯಕ ಪೆಟ್ಟು ತಿಂದು ಕೊನೆಯುಸಿರೆಳೆಯುತ್ತಿದ್ದ ಸಮಯದಲ್ಲಿ  ತನೆಗೆದುರಾದ ಡಾಬ್ ಮೇಲೆ, ಅವಕಾಶವಿದ್ದರೂ, ಗುಂಡು ಹಾರಿಸುವುದಿಲ್ಲ. ಬದಲಾಗಿ ಬುರುಜಿನ ಮೇಲೆ ಹಾರುವ ಬ್ರಿಟಿಷ್ ಧ್ವಜವನ್ನು ಉಡಾಯಿಸಿ ಸಾಯುತ್ತಾನೆ. ಏಕೆಂದರೆ ಡಾಬ್ಗೆ ಗುರಿಯಿಟ್ಟಾಗ ಆತನ ಪತ್ನಿ ಜೇನ್ ಧಾವಿಸಿ ಅಡ್ಡ ಬಂದು "ಬ್ರದರ್". ಎಂದು ಕೈಮುಗಿದು ಗೋಗರೆಯುತ್ತಾಳೆ.   ಅದನ್ನು ಕಂಡ ವಾಲ್ಮೀಕಿಯ ಮನ ಕರಗುತ್ತದೆ. ಭಾರತೀಯರು ಮನುಷ್ಯನ ಕೌಟು೦ಬಿಕ ವಾಸ್ತವಗಳಿಗೆ ಕೊಡುವ ಬೆಲೆ ಮತ್ತು ಗೌರವವನ್ನು ವೇಣುರವರು   ಈ ಮೂಲಕ ತುಂಬ ಸೊಗಸಾಗಿ  ಕಟ್ಟಿ ಕೊಟ್ಟಿದ್ದಾರೆ. ಸಂಘರ್ಷ ತಾತ್ವಿಕತೆಗೆ ಮಾತ್ರ ಸೀಮಿತವಾಗಿರಬೇಕು ಎಂಬುದನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಜೊತೆಗೆ ಕಾದಂಬರಿಯ ಕೊನೆಯ ಭಾಗದಲ್ಲಿ ನೆರೆದ ಜನರಿಗೆ ನಾಯಕ ನೀಡಿದ ಸಂದೇಶ ದುರ್ಗದ ಜನರಲ್ಲಿ ಹಾಗೂ ದೇಶವಾಸಿಗಳಲ್ಲಿ ಆ ಕಾಲಕ್ಕೆ ಕ್ರಾಂತಿಯ ಕಿಡಿ ಹಚ್ಚಿದ್ದು ಗಮನಾರ್ಹವಾದದ್ದು. 

ದುರ್ಗದವನಾಗಿ ದುರ್ಗದ ಬೇಡರ್ದಂಗೆ ಶೀರ್ಷಿಕೆ ಸರಿ ಎನಿಸಿದರೂ " ಭಾರತದ ಸ್ವತಂತ್ರ ಸಂಗ್ರಾಮ " ಎಂಬ ಶೀರ್ಷಿಕೆ ಇದ್ದಿದ್ದರೆ ಇನ್ನೂ ವ್ಯಾಪಕತೆ ಬರುತ್ತಿತ್ತು ಎನಿಸಿತು. ಇಂತಹ ಐತಿಹಾಸಿಕ ಕಾದಂಬರಿಯನ್ನು ಎಲ್ಲರೂ ಓದಬೇಕು. ತನ್ಮೂಲಕ ನಿಜವಾದ ಇತಿಹಾಸ ತಿಳಿಯಬೇಕು ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಬೇಕು .ವೇಣು ಸರ್ ರವರು ಇಂತಹ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾದಂಬರಿಗಳನ್ನು ಇನ್ನೂ ಹೆಚ್ಚು ಬರೆಯಲಿ ಹಾಗೂ ಓದುವ ಸೌಭಾಗ್ಯ ನಮ್ಮದಾಗಲಿ ಎಂದು ಆಶಿಸುವೆ.


ಪುಸ್ತಕದ ಹೆಸರು: ದುರ್ಗದ  ಬೇಡರ್ದಂಗೆ  .ಚಾರಿತ್ರಿಕ ಕಾದಂಬರಿ

ಲೇಖಕರು: ಬಿ ಎಲ್ ವೇಣು.

ಪ್ರಕಾಶನ: ಗೀತಾಂಜಲಿ ಪ್ರಕಾಶನ ತುಮಕೂರು.

ಬೆಲೆ:300₹



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

ನಮ್ಮೂರ ಅಂಗಡಿ ಮತ್ತು ನಾನು.


 


ಅಯ್ಯನೋರ ಅಂಗಡಿ ಮತ್ತು ನಾನು

ನನ್ನ ಬಾಲ್ಯದಲ್ಲಿ ಅಂಗಡಿ ಮನೆಗೂ ನನಗೂ ಒಂದು ಅವಿನಾಭಾವ ಸಂಬಂಧವಿತ್ತು .ಅಮ್ಮ ದುಡ್ಡು ಕೊಟ್ಟರೆ ತಿಂಡಿ ತರಲು ಕಾಲುಗಳು ನನಗೆ  ಅರಿವಿಲ್ಲದೇ ಅಂಗಡಿ ಮನೆ ಕಡೆ ಓಡುತ್ತಿದ್ದವು . ನಾನು ಅಂಗಡಿ ಎನ್ನದೇ ಅಂಗಡಿ ಮನೆ ಎನ್ನಲು ಕಾರಣ ನಮ್ಮ ಊರಿನಲ್ಲಿ ಅಂದು ಇದ್ದ ಎರಡು ಅಂಗಡಿಗಳು ಒಂದು ಐಯ್ಯನೋರ ಅಂಗಡಿ ಮತ್ತೊಂದು ಗುಂಡಜ್ಜರ ಅಂಗಡಿ .ಇವೆರಡೂ ಮನೆ ಕಂ ಅಂಗಡಿಯಾಗಿದ್ದವು ಅದಕ್ಕೆ ನಾವು ಅಂಗಡಿ ಮನೆ ಎಂದೇ ಕರೆಯುತ್ತಿದ್ದೆವು.
ಆಗ ನನಗೆ ಐದು ಪೈಸೆ ದೊರೆತರೆ ಐದು ಬೋಟಿ ಕೊಂಡು ಐದು ಬೆರಳಿಗೆ ಸಿಕ್ಕಿಸಿಕೊಂಡು ಗೆಳೆಯರಿಗೆ ತೋರಿಸಿ ಒಂದೊಂದೇ ಬೆರಳನ್ನು ಕಚ್ಚಿ ಕರುಮ್...ಕರುಮ್..ಎಂದು ತಿನ್ನುವುದೇ ಮಜ! 
ಹತ್ತು ಪೈಸೆ ಕೊಟ್ಟರೆ ಮಂಡಕ್ಕಿ ಉಂಡೆ( ಪುರಿ ಉಂಡೆ) ಸಿಗುತ್ತಿತ್ತು ಅದು ನನ್ನ ಎರಡನೇ ಫೇವರೇಟ್ ತಿನಿಸು .ಬೆಲ್ಲದ ಪಾಕದಲ್ಲಿ ಅದ್ದಿ ಉಂಡೆ ಕಟ್ಟಿದ ಮಂಡಕ್ಕಿ ತಿಂದೇ  ಅನುಭವಿಸಬೇಕು ಅದರ ಸ್ವಾದ.
ಇನ್ನೂ ಕೆಲವೊಮ್ಮೆ ಕಲರ್ ಕಲರ್ ದುಂಡನೆಯ ಪೆಪ್ಪರ್ಮೆಂಟ್ , ನಿಂಬಿಹುಳಿ ಪೆಪ್ಪರ್ಮೆಂಟ್ ಸಹ ಕೊಂಡು ತಿನ್ನುತ್ತಿದ್ದೆ. ಅಪರೂಪಕ್ಕೆ ಒಮ್ಮೆ ಬಿಳಿಯ ಬಣ್ಣದ ಅಗಲವಾದ ಶುಂಠಿ ಪೆಪ್ಪರ್ಮೆಂಟ್ ಸಹ ತಿಂದು ಗಂಟಲೆಲ್ಲಾ ತಂಪಾದಾಗ ಹೊರಗಿನ ಗಾಳಿಯನ್ನು ಬಾಯಿ ಮೂಲಕ ಒಳಗೆಳೆದುಕೊಂಡು ಇನ್ನೂ ತಂಪು ಮಾಡಿಕೊಂಡು ಸಂತಸ ಪಡುತ್ತಿದ್ದೆ.
ತಿನ್ನುವ ಚಾಕಲೇಟ್ ಗೆ ತೂತು ಮಾಡಿ ದಾರ ಸೇರಿಸಿದ ಗಿರಗಿಟ್ಲೇ ನನ್ನ ನೆಚ್ಚಿನ ಆಟಿಕೆ ಕಮ್ ತಿನಿಸಾಗಿತ್ತು.ಬಣ್ಣ ಗಾತ್ರದಲ್ಲಿ ವೈವಿಧ್ಯತೆ ಇದ್ದ ಗಿರಿಗಿಟ್ಲೆಗಳನ್ನು ದಾರ ತುಂಡಾಗುವವರೆಗೆ ಆಡಿಸಿ ಸಿಹಿಯಾದ ಪೆಪ್ಪರ್ಮೆಂಟ್ ನ್ನು ನನ್ನ ಬಾಯಲ್ಲಿ ಹಾಕಿ ಚಪ್ಪರಿಸುತ್ತಿದ್ದೆ.
ಆಗಾಗ ಗುಂಡಜ್ಜನ ಅಂಗಡಿಯ ಕಾರ ( ಮಿಕ್ಸಚೆರ್ )ಸಹ ನನ್ನ ಫೇವರೇಟ್ ತಿನಿಸಾಗಿತ್ತು .ಇಪ್ಪತ್ತೈದು ಪೈಸೆ, ಐವತ್ತು ಪೈಸೆ ಕೊಟ್ಟರೆ ಒಂದಿಡಿ ಕಾರವನ್ನು ಪೇಪರ್ ನಲ್ಲಿ ಹಾಕಿ ಕೊಡುತ್ತಿದ್ದರು .ಆ ಕಾರದ ಸ್ವಾಧವೇ ವಿಭಿನ್ನ ಅದನ್ನು ನೆನದರೆ  ಈಗಲೂ ನನ್ನ ಬಾಯಲ್ಲಿ ನೀರೂರುತ್ತದೆ.

ಅಮ್ಮನ ಕಾಡಿ ಬೇಡಿ ಹಣ ಪಡೆದು ತಿಂಡಿ ತಿನ್ನುತ್ತಿದ್ದ ನಾನು ಸುಗ್ಗಿ ಕಾಲದಲ್ಲಿ ಹಣಕ್ಕಾಗಿ ಅಮ್ಮನ ಕೇಳುತ್ತಿರಲಿಲ್ಲ. ಗೆಳೆಯರ ಜೊತೆಯಲ್ಲಿ ರಾಗಿ ನವಣೆಯ ಕಣದಲ್ಲಿ ಸುಮ್ಮನೆ ನಿಂತಿದ್ದರೆ ಕಣದ ಮಾಲಿಕರು ನಮ್ಮ ಕರೆದು ನಮಗೂ ರಾಗಿಯ ರಾಶಿಯಲ್ಲಿ ಮೊರದಲ್ಲಿ ರಾಗಿ ಕೊಡುತ್ತಿದ್ದರು .ನಾವು ನಮ್ಮ ಅಂಗಿಯಲ್ಲಿ ರಾಗಿ ಹಾಕಿಸಿಕೊಂಡು ಸೀದಾ ಅಂಗಡಿಗೆ ಹೋಗಿ ರಾಗಿ ಕೊಟ್ಟು ತಿನಿಸು ಪಡೆದು ತಿಂದು ಸಂಭ್ರಮಿಸಿ ನಾಳೆ ಯಾರ ಸುಗ್ಗಿಯ ಕಣ ಇದೆ ಎಂದು ವಿಷಯ ಸಂಗ್ರಹ ಮಾಡುತ್ತಿದ್ದೆವು.
ಇಂದು ದೇವರ ದಯೆಯಿಂದ ಹಣಕ್ಕೇನೂ ಕೊರತೆಯಿಲ್ಲ .ದೇಶ ವಿದೇಶಗಳ ಬಗೆ ಗೆಯ ತಿನಿಸುಗಳನ್ನು ಸವಿದಿರುವೆ .ಮಾಲ್ ಗಳಲ್ಲಿ ಹಾಗೂ ದೊಡ್ಡ ಹೋಟೆಲ್ ಗಳಲ್ಲಿ ಮಾಕ್ಡೊನಾಲ್ಡ್ ಕೆ ಎಪ್ ಸಿ ಸೇರಿದಂತೆ ಬ್ರಾಂಡ್ ಕಂಪನಿಗಳ  ದುಬಾರಿ ಬೆಲೆಯ  ತಿಂಡಿಗಳ ಸವಿದಿದ್ದರೂ ಆ ತಿನಿಸುಗಳು  ಬಾಲ್ಯದ  ನಮ್ಮೂರ ಅಯ್ಯನೋರ ಅಂಗಡಿಯ ಸೊಂಡಿಗೆ, ಮಂಡಕ್ಕಿ ಉಂಡೆ ,ಪೆಪ್ಪರ್ಮೆಂಟ್ ರುಚಿ ನೀಡಲೇ ಇಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ತುಮಕೂರು

25 June 2022

ಕಾಲನ ಕರೆ


 

ಬದುಕಿರುವಾಗ ಸಂತಸವಾಗಿರಲು
ಅವಕಾಶ ಸಿಕ್ಕಾಗಬಿಂಕ ತೋರದೆ ಭೇಧವೆಣಿಸದೆಅವರು,ಇವರು
ನಮ್ಮವರು,ಪರರು, ಗೆಳೆಯರು
ಹೀಗೇಎಲ್ಲರನ್ನೂ ಕರೆ|
ಪ್ರತಿ ಕ್ಷಣದಲ್ಲೂ ಕೂಡಿ ಬಾಳು.
ಯಾರಿಗೂ ಗೊತ್ತಿಲ್ಲ
ಯಾವಾಗ ಬರುವುದೋ
ಆ ಕಾಲನ ಕರೆ ||

ಸಿಹಿಜೀವಿ


೨೫.೬/೨೨ ಜನಮಿಡಿತ


 

24 June 2022

ಸಡಗರ

 


ಸಡಗರ ಸಂಭ್ರಮ 


ದಶಕ, ಶತಕ ಎನ್ನದೇ 

ಒಂದು ದಿನ ಮಾತ್ರ

ಬಾಳಿ ಬದುಕುವುದು ಸುಮ|

ನೋಡಿ ಕಲಿಯಬೇಕು ನಾವು

ಅದರ ಸಡಗರ ಸಂಭ್ರಮ||


ಸಿಹಿಜೀವಿ

22 June 2022

ನಿನಗಾರು ಸಾಟಿ


 


ನಿನಗಾರು ಸಾಟಿ.


ಜಗದಲಿಹವು

ಅಸಂಖ್ಯಾತ ಜೀವಕೋಟಿ

ಹೇಳು ಅಮ್ಮ

ನಿನಗಾರು ಸಾಟಿ?


ಸಿಹಿಜೀವಿ

ಸಿ ಜಿ ವೆಂಕಟೇಶ್ವರ 

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ* 22/6/22


 

*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

20 June 2022

ಚಿತ್ತಾರ


 ಕಂಡಿದ್ದೇನೆ ನಾನು 

ಸೂರ್ಯ ಮುಳಗಿ 

ಕತ್ತಲಾಯಿತೆಂದು 

ಅಳುವ ಜನರ|

ಅವರಂತಲ್ಲ ನಾನು,

ನೋಡಿ ಸಂತಸ ಪಡುವೆ 

ನಕ್ಷತ್ರಗಳ ಬಗೆ ಬಗೆ  ಚಿತ್ತಾರ ||


ಸಿಹಿಜೀವಿ 

19 June 2022

ಎಲ್ಲರೊಳಗೊಂದಾಗೋಣ

 


*ಎಲ್ಲರೊಳಗೊಂದಾಗೋಣ*



ಡಿವಿಜಿ ರವರ ಮುಕ್ತಕಗಳೆ ಹಾಗೆ ಓದಲು ಒಂದು ಅರ್ಥ ವಿವರವಾಗಿ ನೋಡಿದರೆ ನೂರಾರು ಅರ್ಥಗಳು ಹೊಮ್ಮುವವು.


ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು 

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ

ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ

ಎಲ್ಲರೊಳಗೊಂದಾಗು ಮಂಕುತಿಮ್ಮ


ಎಂಬ ಮುಕ್ತಕದಲ್ಲಿ ಪ್ರಸ್ತಾಪಿಸಿದಂತೆ ಮಾನವ ಜನ್ಮ ದೊಡ್ಡದು ಇದ ಹಾಳು ಮಾಡದಿರಿ ಹುಚ್ಚಪ್ಪಗಳಿರಾ ಎಂಬಂತೆ ನಮ್ಮ ಜನ್ಮ ಸಾರ್ಥಕವಾಗುವುದು ನಾವು ಇತರರ ಒಳಿತಿಗೆ ನಮ್ಮ ಜೀವನದ ಕೆಲ ಕ್ಷಣಗಳಾದರೂ ಮೀಸಲಿಟ್ಟಾಗ.

ಬೆಟ್ಟದಲಿ ಹುಲ್ಲಾದರೆ ಪ್ರಾಣಿಪಕ್ಷಿಗಳಿಗೆ ಆಹಾರವಾಗಿ ಅವುಗಳ ಹಸಿವು ನೀಗಿಸಿದ ಸಾರ್ಥಕತೆ ದೊರೆಯುತ್ತದೆ.

ಮನೆಗೆ ಮಲ್ಲಿಗೆಯಾಗು ಎಂಬ ಸಾಲು ನೋಡಿದಾಗ ಮನೆಯು ನಂದನವನ. ಮನೆಯೇ ಮಂತ್ರಾಲಯ ಎಂದು ಭಾವಿಸಬೇಕು ಆಗ ಮನೆಯಲ್ಲಿ ಶಾಂತಿ ನೆಲೆಸುವುದು .ಹಾಗೆ ಆಗಬೇಕಾದರೆ ಮನೆಯವರೆಲ್ಲರೂ ಒಂದೊಂದು ಮಲ್ಲಿಗೆಯಾಗಿ ಸುವಾಸನೆ ಭರಿತವಾದ ಕಂಪು ಸೂಸಿದರೆ ಮನೆಯ ಒಳ ಹೊರಗು ಮತ್ತು ಮನೆಯವರ ಮನ ಬೆಳಗಿ ಸುಖ ಶಾಂತಿ ನೆಲೆಸುವುದರಲ್ಲಿ  ಸಂದೇಹವಿಲ್ಲ.


ಕಷ್ಟಗಳಿಲ್ಲದ ಸಮಸ್ಯೆಗಳಿಲ್ಲದ ಮನುಷ್ಯ ಜಗದಲಿ ಬಹುತೇಕ ಯಾರೂ ಇಲ್ಲವೆಂದೇ ಹೇಳಬಹುದು.ಕಷ್ಟಗಳು  ಬಂದ  ಸಂಧರ್ಭದಲ್ಲಿ  ಡಿ ವಿ ಜಿ ರವರು ಹೇಳಿದಂತೆ "ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ"  ನಾವು ಕಲ್ಲಿನಂತೆ ನಿಂತು ಕಷ್ಟಗಳ ಸಹಿಸಿಕೊಂಡು ಮುನ್ನುಗ್ಗಲು ನಮ್ಮ ಕಷ್ಟಗಳು ಕಡಿಮೆಯಾಗಿ ಕಷ್ಟದ ಮತ್ತೊಂದು ಮುಖ ಸುಖ ಬಂದೇ ಬರುತ್ತದೆ.

ಸ್ವಾಮಿ ವಿವೇಕಾನಂದರು ಹೇಳಿದಂತೆ ಜನತಾ ಸೇವೆಯು ಜನಾರ್ದನನ ಸೇವೆಗೆ ಸಮ . ದೀನ ದುರ್ಬಲರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕು ಎಂಬುದನ್ನು "ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ" ಎಂದಿರುವರು .

ಮಾನವ ಸಂಘಜೀವಿ ಜೊತೆಗೆ ಅಹಂ ಇರುವ  ಹಾಗೂ ಪ್ರತಿಷ್ಠೆ ಉಳಿಸಿಕೊಳ್ಳಲು ಯಾವ ದಾರಿ ಹಿಡಿಯಲು ಯೋಚಿಸದ  ಜೀವಿಯೂ ಹೌದು. ಇದರಿಂದಾಗಿ ವೈಯಕ್ತಿಕ ಸಂಘರ್ಷ ಹೆಚ್ಚಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುವುದನ್ನು ಇಂದಿನ ದಿನಗಳಲ್ಲಿ ಹೆಚ್ಚು ನೋಡುತ್ತಲೇ ಇದ್ದೇವೆ .ಇದಕ್ಕೆ ಪರಿಹಾರ ನಮ್ಮ ಡಿ ವಿಜಿರವರು ಹೇಳಿದ " ಎಲ್ಲರೊಳಗೊಂದಾಗು ಮಂಕುತಿಮ್ಮ" 

ಎಲ್ಲರೊಳಗೊಂದಾಗಿ ಸಹಬಾಳ್ವೆ ಮಾಡುತ್ತಾ ಪರೋಪಕಾರಿಗಳಾದರೆ ನಮ್ಮ ಮನ ಬೆಳಗಿ,  ಮನೆ ನಂದನವನವಾಗಿ, ಸಮಾಜ ಉತ್ತಮವಾಗಿ ದೇಶ ಮತ್ತು ಜಗವು ಸುಂದರವಾಗುವುದರಲ್ಲಿ ಸಂದೇಹವಿಲ್ಲ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


ಮೇಧಾವಿ


 *ಅಪ್ಪನೇ ಆಸ್ತಿ*


ಎಲ್ಲೆಡೆ ಅಣ್ಣತಮ್ಮಂದಿರಲಿ

ಕಚ್ಚಾಟ ಪಡೆಯಲು

ಅಪ್ಪ ಮಾಡಿದ ಆಸ್ತಿ|

ಎಲ್ಲೋ ಕೆಲವರು

ಈಗಲೂ ನಂಬಿದ್ದಾರೆ

ಅಪ್ಪನೇ ಆಸ್ತಿ ||


09 June 2022

ಎರಡು ಚುಟುಕುಗಳು


ಎರಡು ಚುಟುಕುಗಳು 


ಹಗರಣ 


ನಾಚಿಕೆ ಮತ್ತು ನೈತಿಕತೆಯಿಲ್ಲದ

ರಾಜಕಾರಣಿಗಳು ಮಾಡುತ್ತಲೇ

ಇರುವರು ದಿನವೂ ಹಗರಣ|

ಬಹುಶಃ ಇವರು ತಿಳಿದಿರಬಹುದು

ಸತ್ತಾಗ ಹೊತ್ತೊಯ್ಯಬಹುದು ಹಣ||



ಬಿಲ್ಲು 


ಬರಿಕೈಯಲ್ಲಿ ಕಛೇರಿಗೆ ಹೋದರೆ

ಆಧಿಕಾರಿ ಗದರುವನು ಅಲ್ಲೇ ನಿಲ್ಲು|

ಕೈ ಬಿಸಿ ಮಾಡಿದರೆ ಸಹಿ ಮಾಡಿ

ತಕ್ಷಣವೇ ಕೊಡುವನು ಬಿಲ್ಲು||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

 

07 June 2022

ಬೊಗಸೆ ಪ್ರೀತಿ


 


ಬೊಗಸೆ ಪ್ರೀತಿ 


ಪ್ರಿಯೆ ನಾ ಕೇಳುವುದಿಲ್ಲ 

ಹಣ ಅಂತಸ್ತು ಜಾತಿ|

ನೀಡಿಬಿಡು ಸಾಕು

ಬೊಗಸೆ ತುಂಬ ಪ್ರೀತಿ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

06 June 2022

ಸ್ನೇಹ ಎಂಬ ಹೊತ್ತಗೆ.


 

ಸ್ನೇಹ ಎಂಬ ಹೊತ್ತಗೆ.

ಎಷ್ಟು ಬರೆದರೂ.ಮುದ್ರಿಸಿದರೂ
ಅಪೂರ್ಣವಾಗಿಯೇ ಉಳಿವುದು

ಸ್ನೇಹ ಎಂಬ ಹೊತ್ತಗೆ|


ಅದನ್ನು ಅಗಾಗ್ಗೆ ಪರಿಷ್ಕರಿಸುತ್ತಾ
ಇರಬೇಕು ಹೊತ್ತು ಹೊತ್ತಿಗೆ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

03 June 2022

ಸೈಕಲ್ .ಹನಿಗವನ


 ಸೈಕಲ್ 

ಸೈಕಲ್


ಯಾವಾಗಲೂ ಬ್ಯಾಲೆನ್ಸ್

ಮಾಡುತ್ತಾ ತುಳಿಯಬೇಕು

ಸಂಸಾರವೆಂಬ ಸೈಕಲ್ |

ಆಗಾಗ್ಗೆ ಇರಲೇಬೇಕು

ಸರಸ ವಿರಸಗಳು 

ಊಟದಲ್ಲಿದ್ದಂತೆ ಪಿಕ್ಕಲ್||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

02 June 2022

ದರ್ಪಣ


 

#ದರ್ಪಣ

ಮೊಗ್ಗಿನ ಜಡೆಯ ಅಲಂಕಾರದಿ  ಕಂಗೊಳಿಸುವ ಬಾಲೆಯ ನೋಡಿದರೆ  ಸಂತಸಗೊಳ್ಳುವುದು ಮನ|


ದುಪ್ಪಟ್ಟು ಆನಂದ ಪಡುತ್ತಾ ಅವಳ ಪ್ರತಿಬಿಂಬವ ತೋರುವುದು ದರ್ಪಣ||

#ಸಿಹಿಜೀವ
ಸಿ ಜಿ ವೆಂಕಟೇಶ್ವರ

01 June 2022

ಅರ್ಥ ಮಾಡಿಕೊಳ್ಳಬೇಕು .ಹನಿ


 *ಅರ್ಥ ಮಾಡಿಕೊಳ್ಳಬೇಕು* 


ಸಂಸಾರ ಸುಗಮವಾಗಿ ಸಾಗಲು 

ಗಂಡ ಹೆಂಡತಿಯನ್ನು 

ಅರ್ಥ ಮಾಡಿಕೊಳ್ಳಬೇಕು|

ಅದಕ್ಕಿಂತಲೂ ಮುಖ್ಯ

ಅವಳು ಕೇಳಿದ್ದನ್ನೆಲ್ಲಾ 

ಕೊಡಿಸಬೇಕಾದರೆ 

"ಅರ್ಥ" ಮಾಡಿಕೊಳ್ಳಲೇಬೇಕು||


*ಸಿಹಿಜೀವಿ*