28 June 2022

ತಿಂಮ ರಸಾಯನ .

 


ತಿಂಮ ರಸಾಯನ . ವಿಮರ್ಶೆ


ಬೀಚಿ ಯವರ ತಿಂಮ ರಸಾಯನ ಓದಿದಾಗ ಇದು ಒಮ್ಮೆ ಓದಿ ಎತ್ತಿಡುವ  ಪುಸ್ತಕ ಅಲ್ಲ ಎಂಬುದು ಮನವರಿಕೆ ಆಯಿತು. ಒಮ್ಮೆ ಓದಿದಾಗ ಒಂದು ರೀತಿಯ ಅರ್ಥ ಧ್ವನಿಸಿದರೆ ಮತ್ತೊಮ್ಮೆ ಮಗದೊಮ್ಮೆ ವಿವಿಧ ಅರ್ಥ ಹೊರಹೊಮ್ಮಿಸಿ ನಮ್ಮನ್ನು ಮುಗಳ್ನಗುವಂತೆ ಮಾಡುತ್ತದೆ.

ಪ್ರೊ. ಅ. ರಾ. ಮಿತ್ರ ರವರು ತಮ್ಮ ನುಡಿಗಳಲ್ಲಿ ಹೇಳಿರುವಂತೆ 

ತಿಂಮ ರಸಾಯನ ಒಂದು ಶಬ್ದಕ್ರೀಡೆ . ಶಬ್ದಕ್ಕೆ ಒಂದೇ ಅರ್ಥವಿರಬೇಕೆಂಬ ನಿಯಮವೇನೂ ಇಲ್ಲವಷ್ಟೆ, ನಿಘಂಟುಗಳೇ ಒಂದು ಶಬ್ದದ ನಾನಾ ಅರ್ಥದ ಕವಲುಗಳನ್ನು ಗುರುತಿಸುತ್ತವೆ. ಆದರೆ ವಿನೋದಶೀಲರಾದವರು ಆ ನಿಘಂಟುಗಳಿಗೂ ಸಿಲುಕದ ಬೇರೆಯೇ ಅರ್ಥದ ಚಕ್ಕೆಯನ್ನು ಕೆತ್ತುವುದರಲ್ಲ ಸಿದ್ಧಹಸ್ತರು. ಕನ್ನಡದಲ್ಲಿ ಕೈಲಾಸಂ, ರಾಶಿ, ರಾಜರತ್ನಂ, ಲಾಂಗೂಲಾಚಾರ್ಯ, ನಾ. ಕಸ್ತೂರಿ, ವೇಣುಗೋಪಾಲ ಸೊರಬ ಮೊದಲಾದವರು ಈ ಕ್ರೀಡೆಯಲ್ಲಿ ಕುಶಲರಾದರೆ, ಬೀchiಯವರು 'ಉಗ್ರಗಣ್ಯರು' ಎಂದು ಹೇಳಬಹುದು. ಉದಾಹರಣೆಗೆ ಮಹತ್ವಾಕಾಂಕ್ಷೆ ಎಂದರೆ ಆತ್ಮಕ್ಕೆ ಬರುವ ಉದರ ರೋಗ – ಎಷ್ಟು ಅರ್ಥಗರ್ಭಿತವಾಗಿದೆ ನೋಡಿ. ಪತ್ರ ವ್ಯವಹಾರ ಎಂದರೆ ಜಾಣತನದಿಂದ ಸಮಯವನ್ನು ಹಾಳು ಮಾಡುವ ಒಂದೇ ಯೋಗ್ಯ ಉಪಾಯವಾಗುತ್ತದೆ. ಜಾತಿ ಎಂದರೆ ದೇವರು ಕೊಡುವ ಬುದ್ಧಿಗೆ ದೆವ್ವ ಕೂಡುವ ಆಫೀಮಂತೆ! ಸೋಮವಾರದ ದಿನ ರಜೆ ಕೇಳುವವನು ಸೋಮಾರಿ"ಯಂತೆ! ಈ ಬಗೆಯ ದುರ್ವ್ಯಾಖ್ಯೆಗಳನ್ನು ಅರ್ಥಪೂರ್ಣವಾಗಿ ರಚಿಸಿದ ಆಂಬ್ರೋಸ್ ಬಿಯರ್ಸ್  ಬರೆದ ಡೆವಿಲ್ಸ್ ಡಿಕ್ಷನರಿ ಜಾಡಿನಲ್ಲಿ ಸಾಗುತ್ತದೆ. ತಿಂಮ ರಸಾಯನ ಮಿದುಳಿನ ಉನ್ನತ ಕ್ರೀಡೆಗೆ ಒಂದು ಶ್ರೇಷ್ಠ ಮಾದರಿಯಾಗಿದೆ.

ಈ ಪುಸ್ತಕದ ಬಗ್ಗೆ ಬೀಚಿ ಯವರ ಮಾತುಗಳಲ್ಲಿ ಹೇಳುವುದಾದರೆ

ಇದು ಒಂದು ನಿಘಂಟು, ಜಾತಿ ನಿಘಂಟಲ್ಲ-ನಿಘಂಟು ಮಾಡಬೇಕಾದ ಕೆಲಸ ಮಾಡುತ್ತಿಲ್ಲ ಅಷ್ಟೇ ಅಲ್ಲ. ಅದು ಮಾಡಲಾರದ ಮತ್ತು ಮಾಡಬಾರದ ಕೆಲಸವನ್ನೂ ಇದು ಮಾಡುತ್ತದೆ. ಕತೆ, ಕಾದಂಬರಿ, ನಾಟಕ ಅಥವಾ ಬೇರಿನ್ನಾದರೂ ಆಗಲು ಆಕಾರ ಮಾತ್ರವೇ ಅಲ್ಲ. ಆಚಾರವೂ ಅಡ್ಡಬರುತ್ತದೆ. ಒಂದೇ ವಿಷಯ ಅಥವಾ ಸನ್ನಿಹಿತ ವಿಷಯಗಳು ಇದರ ಸಾಮಗ್ರಿಯಲ್ಲ, ಆಡು ಮೇದಂತೆ ಕಾಡನ್ನೆಲ್ಲ ಬಾಯಾಡಿದೆ. ಕಣಿವೆಯ ಆಳದ ಒಳಗೂ ಇಳಿದಿದೆ. ಬೆಟ್ಟದ ತುಟ್ಟ ತುದಿಯನ್ನು ಮುಟ್ಟಿದೆ. ಆನೆಗೆ ಆಗದ ಕೆಲಸವನ್ನು ಆಡು ಆಡುತ್ತಾ ಮಾಡುತ್ತದೆ. ತಕ್ಷಣವೇ ಕೊಲ್ಲುವ ವಿಷದ ಎಲೆಯೊಂದಿಗೆ, ಮರುಕ್ಷಣವೇ ಬದುಕಿಸುವ ಸಂಜೀವಿನಿಯೂ ಈ 'ರಸಾಯನ'ದ ಹೊಟ್ಟೆಗೆ ಸೇರಿ ಸರ್ವಸಮರ್ಪಕವಾಗಿದೆ.

ಈ ರಸಾಯನದ ಅನುಪಾನಕ್ಕೂ ಒಂದು ಕ್ರಮವಿದೆ ಎಂಬುದನ್ನು ಇಲ್ಲಿ ಹೇಳದಿದ್ದರೆ ತಿಂಮನಿಗೆ ದ್ರೋಹ ಬಗೆದಂತಾಗುವ ಅಪಾಯವಿದೆ. 'ಆ'ದಿಂದ ಹಿಡಿದು 'ಕ್ಷ'ದವರೆವಿಗೂ ದುಡುದುಡು ಓಡುತ್ತ ಓದಿದರೆ ಗಂಟೆಯೊಳಗಾಗಿ ಮುಗಿದೇ ಹೋಗುತ್ತದೆ. ಹಾಗೆ ಪಠಿಸಲು ಇದೇನು ಅರ್ಥವಾಗಲಾರದ ಶ್ರಾದ್ಧಮಂತ್ರವೇ? ಹಲ್ಲಿಲ್ಲದವರು ಕಬ್ಬಿನ ತುಂಡನ್ನು ಹಾಗೂಮ್ಮೆ ಹೀಗೊಮ್ಮೆ ಬಾಯಲ್ಲಿ ಹೊರಳಿಸಿ ಉಗಿದರೆ ಕಬ್ಬಿನ ತಪ್ಪೇ ? ಹಲ್ಲಿನ ತಪ್ಪೇ? ಹಲ್ಲಿನ ಗಾಣಕ್ಕೆ ಹಾಕಿ ಆಗಿದಂತೆ ನಾಲಗೆಯ ಮೇಲೆ ರಸವು ಸುರಿಯುತ್ತದೆ, ಬಾಯಿ ತಾನೇ ಚಪ್ಪರಿಸುತ್ತದೆ. ತನಗೆ ತಿಳಿಯದೆ. ಇದಾದರೂ ಹಾಗೆಯೇ, ಆಗೊಮ್ಮೆ, ಈಗೊಮ್ಮೆ, ಹಾಗಿಷ್ಟು. ಹೀಗಿಷ್ಟು, ನಿದ್ರೆ ದೂರವಿದ್ದಾಗ ಊಟದ ನಂತರ, ಆಟದ ಮುಂಚೆ, ಗೆಳೆಯರ ಗುಂಪಿನಲ್ಲಿ ಮನೆಯವಳ ಮುಂದೆ ಅಥವಾ ಹಿಂದೆ ಓದಿ ಓದಿ ಗುಟುಕರಿಸಿಟ್ಟರೆ, ಮತ್ತಾವಾಗಲೋ ಇನ್ನೆಲ್ಲಿಯೋ ಯಾವುದೋ ತುಣುಕು ಸ್ಮರಣಿಗೆ ಬಂದು ನಗು ಮುಸಿಮುಸಿಯುತ್ತದೆ. ರಸಾಯನವು ಅನ್ನವಲ್ಲ, ಔಷಧಿಯೂ ಅಲ್ಲ, ಮನಸಿಗೊಂದು ಟಾನಿಕ್.ನಿಜ 

ಈ ಟಾನಿಕ್ ಅನ್ನು ನಾನು ಆಗಾಗ ಸವಿಯುವೆನು. ನೀವು ಸಹ ಆಗಾಗ್ಗೆ ತಿಂಮ ರಸಾಯನ ಸವಿಯಬೇಕೆಂದರೆ ನಿಮ್ಮ ಬಳಿ ರಸಾಯನ ಖಂಡಿತವಾಗಿಯೂ ಇರಲೇಬೇಕು.

ಮುಗಿಸುವ ಮುನ್ನ ತಿಂಮ ರಸಾಯನದ ರುಚಿಯ ಸ್ಯಾಂಪಲ್ ನೀಡುವೆ ಅವುಗಳನ್ನು ಓದಿದ ಮೇಲೆಯು ನೀವು ರಸಾಯನ ಓದಲಿಲ್ಲ ಎಂದರೆ ಅದು ನಿಮಗೆ ಬಿಟ್ಟಿದ್ದು.

ಚಂದ್ರ ಎಂದರೆ ಪಕ್ಕಾ ದೇಶಭಕ್ತ ,ಪರಧನದಂತಿರುವ ಸೂರ್ಯನ ಪ್ರಕಾಶವನ್ನು ಕೈಬಾಡಿಗೆ ತಂದು ತನ್ನ ಪ್ರತಿಷ್ಠೆ ಬೆಳೆಸಿಕೊಂಡವ.

ವಿಮೆ ಎಂದರೆ ಬಡವನಾಗಿ ಬಾಳಿ ಸತ್ತು ಧನಿಕನಾಗಲು ಏಕಮಾತ್ರ ಉಪಾಯ.

ವಿರಕ್ತ ಎಂದರೆ ರಕ್ತ ವಿಹೀನ,ನಂಬಿ ಬಂದ ತಿಗಣೆಗಳನ್ನು ಆಹಾರ ಕೊಡದೆ ಕೊಲ್ಲುವವನು.ವಿರಹ ಎಂದರೆ ಪ್ರೇಮಕ್ಕೆ ವಿರಹವು, ಬೆಂಕಿಗೆ ಗಾಳಿ ಇದ್ದಂತೆ-ಚಿಕ್ಕದನ್ನು ಕೊಲ್ಲುತ್ತದೆ. ದೊಡ್ಡದನ್ನು ಪ್ರಜ್ವಲಿಸುತ್ತದೆ.ವಿರಾಮ

ಎಂದರೆ ವಿರಾಮವಿದ್ದಾಗಲೇ ಕೆಲಸ ಮಾಡು - ಕೆಲಸವಿದ್ದಾಗ ಕೆಲಸ ಮಾಡಲು ವಿರಾಮವು ಅಡ್ಡ ಬರುತ್ತದೆ...

ಇನ್ನೂ ಇಂತಹ ನಿಘಂಟಿನ ಸ್ವಾದ ಸವಿಯಲು ತಿಂಮ ರಸಾಯನ ಸವಿಯಲೇಬೇಕು.


ಪುಸ್ತಕದ ಹೆಸರು: ತಿಂಮ ರಸಾಯನ

ಲೇಖಕರು: ಬೀಚಿ

ಪ್ರಕಾಶನ: ಬೀಚಿ ಪ್ರಕಾಶನ ಬೆಂಗಳೂರು

ಬೆಲೆ:120₹ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


No comments: