19 June 2022

ಎಲ್ಲರೊಳಗೊಂದಾಗೋಣ

 


*ಎಲ್ಲರೊಳಗೊಂದಾಗೋಣ*



ಡಿವಿಜಿ ರವರ ಮುಕ್ತಕಗಳೆ ಹಾಗೆ ಓದಲು ಒಂದು ಅರ್ಥ ವಿವರವಾಗಿ ನೋಡಿದರೆ ನೂರಾರು ಅರ್ಥಗಳು ಹೊಮ್ಮುವವು.


ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು 

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ

ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ

ಎಲ್ಲರೊಳಗೊಂದಾಗು ಮಂಕುತಿಮ್ಮ


ಎಂಬ ಮುಕ್ತಕದಲ್ಲಿ ಪ್ರಸ್ತಾಪಿಸಿದಂತೆ ಮಾನವ ಜನ್ಮ ದೊಡ್ಡದು ಇದ ಹಾಳು ಮಾಡದಿರಿ ಹುಚ್ಚಪ್ಪಗಳಿರಾ ಎಂಬಂತೆ ನಮ್ಮ ಜನ್ಮ ಸಾರ್ಥಕವಾಗುವುದು ನಾವು ಇತರರ ಒಳಿತಿಗೆ ನಮ್ಮ ಜೀವನದ ಕೆಲ ಕ್ಷಣಗಳಾದರೂ ಮೀಸಲಿಟ್ಟಾಗ.

ಬೆಟ್ಟದಲಿ ಹುಲ್ಲಾದರೆ ಪ್ರಾಣಿಪಕ್ಷಿಗಳಿಗೆ ಆಹಾರವಾಗಿ ಅವುಗಳ ಹಸಿವು ನೀಗಿಸಿದ ಸಾರ್ಥಕತೆ ದೊರೆಯುತ್ತದೆ.

ಮನೆಗೆ ಮಲ್ಲಿಗೆಯಾಗು ಎಂಬ ಸಾಲು ನೋಡಿದಾಗ ಮನೆಯು ನಂದನವನ. ಮನೆಯೇ ಮಂತ್ರಾಲಯ ಎಂದು ಭಾವಿಸಬೇಕು ಆಗ ಮನೆಯಲ್ಲಿ ಶಾಂತಿ ನೆಲೆಸುವುದು .ಹಾಗೆ ಆಗಬೇಕಾದರೆ ಮನೆಯವರೆಲ್ಲರೂ ಒಂದೊಂದು ಮಲ್ಲಿಗೆಯಾಗಿ ಸುವಾಸನೆ ಭರಿತವಾದ ಕಂಪು ಸೂಸಿದರೆ ಮನೆಯ ಒಳ ಹೊರಗು ಮತ್ತು ಮನೆಯವರ ಮನ ಬೆಳಗಿ ಸುಖ ಶಾಂತಿ ನೆಲೆಸುವುದರಲ್ಲಿ  ಸಂದೇಹವಿಲ್ಲ.


ಕಷ್ಟಗಳಿಲ್ಲದ ಸಮಸ್ಯೆಗಳಿಲ್ಲದ ಮನುಷ್ಯ ಜಗದಲಿ ಬಹುತೇಕ ಯಾರೂ ಇಲ್ಲವೆಂದೇ ಹೇಳಬಹುದು.ಕಷ್ಟಗಳು  ಬಂದ  ಸಂಧರ್ಭದಲ್ಲಿ  ಡಿ ವಿ ಜಿ ರವರು ಹೇಳಿದಂತೆ "ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ"  ನಾವು ಕಲ್ಲಿನಂತೆ ನಿಂತು ಕಷ್ಟಗಳ ಸಹಿಸಿಕೊಂಡು ಮುನ್ನುಗ್ಗಲು ನಮ್ಮ ಕಷ್ಟಗಳು ಕಡಿಮೆಯಾಗಿ ಕಷ್ಟದ ಮತ್ತೊಂದು ಮುಖ ಸುಖ ಬಂದೇ ಬರುತ್ತದೆ.

ಸ್ವಾಮಿ ವಿವೇಕಾನಂದರು ಹೇಳಿದಂತೆ ಜನತಾ ಸೇವೆಯು ಜನಾರ್ದನನ ಸೇವೆಗೆ ಸಮ . ದೀನ ದುರ್ಬಲರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕು ಎಂಬುದನ್ನು "ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ" ಎಂದಿರುವರು .

ಮಾನವ ಸಂಘಜೀವಿ ಜೊತೆಗೆ ಅಹಂ ಇರುವ  ಹಾಗೂ ಪ್ರತಿಷ್ಠೆ ಉಳಿಸಿಕೊಳ್ಳಲು ಯಾವ ದಾರಿ ಹಿಡಿಯಲು ಯೋಚಿಸದ  ಜೀವಿಯೂ ಹೌದು. ಇದರಿಂದಾಗಿ ವೈಯಕ್ತಿಕ ಸಂಘರ್ಷ ಹೆಚ್ಚಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುವುದನ್ನು ಇಂದಿನ ದಿನಗಳಲ್ಲಿ ಹೆಚ್ಚು ನೋಡುತ್ತಲೇ ಇದ್ದೇವೆ .ಇದಕ್ಕೆ ಪರಿಹಾರ ನಮ್ಮ ಡಿ ವಿಜಿರವರು ಹೇಳಿದ " ಎಲ್ಲರೊಳಗೊಂದಾಗು ಮಂಕುತಿಮ್ಮ" 

ಎಲ್ಲರೊಳಗೊಂದಾಗಿ ಸಹಬಾಳ್ವೆ ಮಾಡುತ್ತಾ ಪರೋಪಕಾರಿಗಳಾದರೆ ನಮ್ಮ ಮನ ಬೆಳಗಿ,  ಮನೆ ನಂದನವನವಾಗಿ, ಸಮಾಜ ಉತ್ತಮವಾಗಿ ದೇಶ ಮತ್ತು ಜಗವು ಸುಂದರವಾಗುವುದರಲ್ಲಿ ಸಂದೇಹವಿಲ್ಲ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


No comments: