26 June 2022

ನಮ್ಮೂರ ಅಂಗಡಿ ಮತ್ತು ನಾನು.


 


ಅಯ್ಯನೋರ ಅಂಗಡಿ ಮತ್ತು ನಾನು

ನನ್ನ ಬಾಲ್ಯದಲ್ಲಿ ಅಂಗಡಿ ಮನೆಗೂ ನನಗೂ ಒಂದು ಅವಿನಾಭಾವ ಸಂಬಂಧವಿತ್ತು .ಅಮ್ಮ ದುಡ್ಡು ಕೊಟ್ಟರೆ ತಿಂಡಿ ತರಲು ಕಾಲುಗಳು ನನಗೆ  ಅರಿವಿಲ್ಲದೇ ಅಂಗಡಿ ಮನೆ ಕಡೆ ಓಡುತ್ತಿದ್ದವು . ನಾನು ಅಂಗಡಿ ಎನ್ನದೇ ಅಂಗಡಿ ಮನೆ ಎನ್ನಲು ಕಾರಣ ನಮ್ಮ ಊರಿನಲ್ಲಿ ಅಂದು ಇದ್ದ ಎರಡು ಅಂಗಡಿಗಳು ಒಂದು ಐಯ್ಯನೋರ ಅಂಗಡಿ ಮತ್ತೊಂದು ಗುಂಡಜ್ಜರ ಅಂಗಡಿ .ಇವೆರಡೂ ಮನೆ ಕಂ ಅಂಗಡಿಯಾಗಿದ್ದವು ಅದಕ್ಕೆ ನಾವು ಅಂಗಡಿ ಮನೆ ಎಂದೇ ಕರೆಯುತ್ತಿದ್ದೆವು.
ಆಗ ನನಗೆ ಐದು ಪೈಸೆ ದೊರೆತರೆ ಐದು ಬೋಟಿ ಕೊಂಡು ಐದು ಬೆರಳಿಗೆ ಸಿಕ್ಕಿಸಿಕೊಂಡು ಗೆಳೆಯರಿಗೆ ತೋರಿಸಿ ಒಂದೊಂದೇ ಬೆರಳನ್ನು ಕಚ್ಚಿ ಕರುಮ್...ಕರುಮ್..ಎಂದು ತಿನ್ನುವುದೇ ಮಜ! 
ಹತ್ತು ಪೈಸೆ ಕೊಟ್ಟರೆ ಮಂಡಕ್ಕಿ ಉಂಡೆ( ಪುರಿ ಉಂಡೆ) ಸಿಗುತ್ತಿತ್ತು ಅದು ನನ್ನ ಎರಡನೇ ಫೇವರೇಟ್ ತಿನಿಸು .ಬೆಲ್ಲದ ಪಾಕದಲ್ಲಿ ಅದ್ದಿ ಉಂಡೆ ಕಟ್ಟಿದ ಮಂಡಕ್ಕಿ ತಿಂದೇ  ಅನುಭವಿಸಬೇಕು ಅದರ ಸ್ವಾದ.
ಇನ್ನೂ ಕೆಲವೊಮ್ಮೆ ಕಲರ್ ಕಲರ್ ದುಂಡನೆಯ ಪೆಪ್ಪರ್ಮೆಂಟ್ , ನಿಂಬಿಹುಳಿ ಪೆಪ್ಪರ್ಮೆಂಟ್ ಸಹ ಕೊಂಡು ತಿನ್ನುತ್ತಿದ್ದೆ. ಅಪರೂಪಕ್ಕೆ ಒಮ್ಮೆ ಬಿಳಿಯ ಬಣ್ಣದ ಅಗಲವಾದ ಶುಂಠಿ ಪೆಪ್ಪರ್ಮೆಂಟ್ ಸಹ ತಿಂದು ಗಂಟಲೆಲ್ಲಾ ತಂಪಾದಾಗ ಹೊರಗಿನ ಗಾಳಿಯನ್ನು ಬಾಯಿ ಮೂಲಕ ಒಳಗೆಳೆದುಕೊಂಡು ಇನ್ನೂ ತಂಪು ಮಾಡಿಕೊಂಡು ಸಂತಸ ಪಡುತ್ತಿದ್ದೆ.
ತಿನ್ನುವ ಚಾಕಲೇಟ್ ಗೆ ತೂತು ಮಾಡಿ ದಾರ ಸೇರಿಸಿದ ಗಿರಗಿಟ್ಲೇ ನನ್ನ ನೆಚ್ಚಿನ ಆಟಿಕೆ ಕಮ್ ತಿನಿಸಾಗಿತ್ತು.ಬಣ್ಣ ಗಾತ್ರದಲ್ಲಿ ವೈವಿಧ್ಯತೆ ಇದ್ದ ಗಿರಿಗಿಟ್ಲೆಗಳನ್ನು ದಾರ ತುಂಡಾಗುವವರೆಗೆ ಆಡಿಸಿ ಸಿಹಿಯಾದ ಪೆಪ್ಪರ್ಮೆಂಟ್ ನ್ನು ನನ್ನ ಬಾಯಲ್ಲಿ ಹಾಕಿ ಚಪ್ಪರಿಸುತ್ತಿದ್ದೆ.
ಆಗಾಗ ಗುಂಡಜ್ಜನ ಅಂಗಡಿಯ ಕಾರ ( ಮಿಕ್ಸಚೆರ್ )ಸಹ ನನ್ನ ಫೇವರೇಟ್ ತಿನಿಸಾಗಿತ್ತು .ಇಪ್ಪತ್ತೈದು ಪೈಸೆ, ಐವತ್ತು ಪೈಸೆ ಕೊಟ್ಟರೆ ಒಂದಿಡಿ ಕಾರವನ್ನು ಪೇಪರ್ ನಲ್ಲಿ ಹಾಕಿ ಕೊಡುತ್ತಿದ್ದರು .ಆ ಕಾರದ ಸ್ವಾಧವೇ ವಿಭಿನ್ನ ಅದನ್ನು ನೆನದರೆ  ಈಗಲೂ ನನ್ನ ಬಾಯಲ್ಲಿ ನೀರೂರುತ್ತದೆ.

ಅಮ್ಮನ ಕಾಡಿ ಬೇಡಿ ಹಣ ಪಡೆದು ತಿಂಡಿ ತಿನ್ನುತ್ತಿದ್ದ ನಾನು ಸುಗ್ಗಿ ಕಾಲದಲ್ಲಿ ಹಣಕ್ಕಾಗಿ ಅಮ್ಮನ ಕೇಳುತ್ತಿರಲಿಲ್ಲ. ಗೆಳೆಯರ ಜೊತೆಯಲ್ಲಿ ರಾಗಿ ನವಣೆಯ ಕಣದಲ್ಲಿ ಸುಮ್ಮನೆ ನಿಂತಿದ್ದರೆ ಕಣದ ಮಾಲಿಕರು ನಮ್ಮ ಕರೆದು ನಮಗೂ ರಾಗಿಯ ರಾಶಿಯಲ್ಲಿ ಮೊರದಲ್ಲಿ ರಾಗಿ ಕೊಡುತ್ತಿದ್ದರು .ನಾವು ನಮ್ಮ ಅಂಗಿಯಲ್ಲಿ ರಾಗಿ ಹಾಕಿಸಿಕೊಂಡು ಸೀದಾ ಅಂಗಡಿಗೆ ಹೋಗಿ ರಾಗಿ ಕೊಟ್ಟು ತಿನಿಸು ಪಡೆದು ತಿಂದು ಸಂಭ್ರಮಿಸಿ ನಾಳೆ ಯಾರ ಸುಗ್ಗಿಯ ಕಣ ಇದೆ ಎಂದು ವಿಷಯ ಸಂಗ್ರಹ ಮಾಡುತ್ತಿದ್ದೆವು.
ಇಂದು ದೇವರ ದಯೆಯಿಂದ ಹಣಕ್ಕೇನೂ ಕೊರತೆಯಿಲ್ಲ .ದೇಶ ವಿದೇಶಗಳ ಬಗೆ ಗೆಯ ತಿನಿಸುಗಳನ್ನು ಸವಿದಿರುವೆ .ಮಾಲ್ ಗಳಲ್ಲಿ ಹಾಗೂ ದೊಡ್ಡ ಹೋಟೆಲ್ ಗಳಲ್ಲಿ ಮಾಕ್ಡೊನಾಲ್ಡ್ ಕೆ ಎಪ್ ಸಿ ಸೇರಿದಂತೆ ಬ್ರಾಂಡ್ ಕಂಪನಿಗಳ  ದುಬಾರಿ ಬೆಲೆಯ  ತಿಂಡಿಗಳ ಸವಿದಿದ್ದರೂ ಆ ತಿನಿಸುಗಳು  ಬಾಲ್ಯದ  ನಮ್ಮೂರ ಅಯ್ಯನೋರ ಅಂಗಡಿಯ ಸೊಂಡಿಗೆ, ಮಂಡಕ್ಕಿ ಉಂಡೆ ,ಪೆಪ್ಪರ್ಮೆಂಟ್ ರುಚಿ ನೀಡಲೇ ಇಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ತುಮಕೂರು

No comments: