26 June 2022

ದುರ್ಗದ ಬೇಡರ್ದಂಗೆ.


 




 ದುರ್ಗದ  ಬೇಡರ್ದಂಗೆ  

ಚಾರಿತ್ರಿಕ ಕಾದಂಬರಿ


ಪ್ರಕಾಶಕರು ಮತ್ತು ಲೇಖಕರಾದ ಎಂ ವಿ ಶಂಕರಾನಂದ ಹಾಗೂ ಪತ್ರಕರ್ತರಾದ ಪ್ರೊಫೆಸರ್ ವಿ ಎಲ್ ಪ್ರಕಾಶ್ ರವರೊಂದಿಗೆ ಒಂದು ಭಾನುವಾರ ತುಮಕೂರಿನಿಂದ ಚಿತ್ರದುರ್ಗಕ್ಕೆ  ಚಿತ್ರಸಾಹಿತಿ ಮತ್ತು ಕಾದಂಬರಿಕಾರರಾದ ಬಿ ಎಲ್ ವೇಣುರವರನ್ನು ಭೇಟಿಯಾಗಲು ಹೊರಟೆವು . 

ಅವರ ಮನೆಯಲ್ಲಿ ಅವರ ಭೇಟಿಯ ನಂತರ ನಾನು ಬರೆದ ಎರಡು ಕೃತಿಗಳ ನೀಡಿ , ಅವರೊಂದಿಗೆ ಮಾತಿಗಿಳಿದಾಗ ವಿಷ್ಣುವರ್ಧನ್, ಅಂಬರೀಶ್ ರವರ ಒಡನಾಟ ,ಸಾಹಿತಿಯಾಗಿ ಅವರ ಅನುಭವ, ಐತಿಹಾಸಿಕ ಕಾದಂಬರಿಗಳ ರಚನೆಯ ಒಳಹೊರಗು ಹೀಗೆ ಮಾತನಾಡುತ್ತಾ ಸುಮಾರು ಮೂರು ಗಂಟೆಗಳು ಕಳೆದದ್ದೆ ಗೊತ್ತಾಗಲಿಲ್ಲ .

ಅಲ್ಲಿಂದ ಬರುವಾಗ ಇತ್ತೀಚೆಗೆ ಅವರು ಬರೆದ " ದುರ್ಗದ ಬೇಡರ್ದಂಗೆ "ಹಾಗೂ "ಸುರಪುರ ವೆಂಕಟಪ್ಪನಾಯಕ " ಪುಸ್ತಕಗಳನ್ನು ತಂದೆವು.

ಮೊದಲಿಗೆ ದುರ್ಗದ ಬೇಡರ್ದಂಗೆ ಪುಸ್ತಕ ಓದಲು ಶುರುಮಾಡಿದೆ. ಪುಸ್ತಕ ಓದಿ ಮುಗಿಸಿದಾಗ ಇತಿಹಾಸದ ವಿದ್ಯಾರ್ಥಿಯಾದ ನನಗೆ ಒಂದು ಐತಿಹಾಸಿಕ ಕಾದಂಬರಿ ಓದಿ ಹೊಸ ವಿಚಾರ ತಿಳಿದ ಸಂತಸವುಂಟಾಯಿತು.ಅದರಲ್ಲೂ ದುರ್ಗದವನಾಗಿ,ಕನ್ನಡಿಗನಾಗಿ, ಭಾರತೀಯನಾಗಿ ಬ್ರಿಟಿಷರ ಸಂಕೋಲೆಯಿಂದ ಬಿಡಿಸಲು ಏಳು ಬೇಡರ ಯುವಕರು ಸಿಡಿದೆದ್ದ ಪರಿ ರೋಮಾಂಚಕಾರಿ ಅದೇ ನಿಜವಾದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ .


1857ರದ್ದು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂಬುದು ಇತಿಹಾಸದಲ್ಲಿ ದಾಖಲಾಗಿರುವಂಥದ್ದು. ಆದರೆ ಇದಕ್ಕೂ ಎಂಟು ವರ್ಷ ಮೊದಲೇ (1849) ಚಿತ್ರದುರ್ಗದಲ್ಲಿ ಏಳು ಬೇಡ ಹುಡುಗರು ಬ್ರಿಟಿಷರ ವಿರುದ್ಧ ಮಾಡಿದ ದಂಗೆಯೇ ಮೊದಲ ಸಂಗ್ರಾಮವಾಗಿತ್ತೆಂಬುದು ವೇಣುರವರ  ಕೃತಿಯ ಒಟ್ಟು ಸಾರ. ಇದನ್ನು ಪ್ರತಿಪಾದಿಸಿ ಋಜುವಾತು ಮಾಡುವಲ್ಲಿ ಹಲವು ದಾಖಲೆಗಳನ್ನು ಅವರು ಅವಲಂಬಿಸಿದ್ದಾರೆ; ಇವುಗಳ ಆಧಾರದ ಮೇಲೆ ದಂಗೆಯ ಕಥಾನಕವನ್ನು ಕಟ್ಟಿಕೊಟ್ಟಿದ್ದಾರೆ. ವೇಣು ಸರ್ ರವರ  ಕಥನ ಶೈಲಿ ಹಾಗೂ ದಂಗೆಯ ಕಾಲಘಟ್ಟವನ್ನು ಕಟ್ಟಿಕೊಟ್ಟ ರೀತಿ ನಿಜವಾಗಿಯೂ ಅದ್ಭುತ!

 ಕಥೆಯ ವಿಸ್ತರಣೆ ಮತ್ತು ದಂಗೆಯ ವಿವರಗಳನ್ನು ಕಟ್ಟಿಕೊಡುವಲ್ಲಿ ವೇಣುರವರ  ಕಲ್ಪನೆ. ಮುಪ್ಪುರಿಗೊಳ್ಳುವ ಬಗೆ ನಿಜಕ್ಕೂ ವಿಶಿಷ್ಟ. ಏಳು ಜನ ಬೇಡರ ಹುಡುಗರು ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಕೊನೆಯಲ್ಲಿ ಬ್ರಿಟಿಷರ ಗುಂಡುಗಳಿಗೆ ಬಲಿಯಾದರು. ಇದು ಒಟ್ಟಾರೆ ಕಥೆ. ಈ ಕಥೆ ನಡೆದು ಬರುವ ದಾರಿ, ಪಾತ್ರಗಳ ಒಲವು ನಿಲುವು: ವೈಯಕ್ತಿಕ ಸಂಕಷ್ಟಗಳನ್ನು ಸಹಿಸುತ್ತಲೇ ವ್ಯಕ್ತಿಗತ ನೆಲೆಯಾಚೆಯ ಸಾಮಾಜಿಕ ಬದುಕಿನ ನೆಮ್ಮದಿಯೇ ಬದುಕಿನ ಸಿರಿ ಎಂಬ ಖಚಿತತೆ ಬಂದೊರಗಿರುವ ಸಮಸ್ಯೆ ಸಂಸಾರದಲ್ಲ, ಸಮಾಜದ್ದು, ಸಮಾಜಕ್ಕಾಗಿ ಬಲಿಯಾಗಲೂ ಸಿದ್ಧರಿರಬೇಕು ಎಂಬ ಸ್ಪಷ್ಟತೆ ಇವೆಲ್ಲವೂ ಕಾದಂಬರಿಯನ್ನು ಮೇಲುಸ್ತರಕ್ಕೆ ಏರಿಸುತ್ತವೆ.


ಕಥೆಯನ್ನು ಸೃಜಿಸಿರುವ ರೀತಿ ದುರ್ಗದ ಸೊಗಡಿನ ಭಾಷೆ, ಸಂಭಾಷಣೆ, ಅಲ್ಲಲ್ಲಿ ಬರುವ ಹಾಸ್ಯ ಪ್ರಸಂಗಗಳು ಗಮನಸೆಳೆಯುತ್ತವೆ. ಇಡೀ ಕಾದಂಬರಿ ಓದುವಾಗ ನಾವೊಂದು ಚಲನಚಿತ್ರ ವೀಕ್ಷಣೆ ಮಾಡಿದ ಅನುಭವವಾಗುತ್ತದೆ.ಅಂತೆಯೇ ಗೆಳೆಯ ವಿ ಎಲ್ ಪ್ರಕಾಶ್ ರವರಿಗೆ ಈ ಕಾದಂಬರಿ ಚಲನಚಿತ್ರ ಮಾಡಲು ಸಾಧ್ಯವೇ ಎಂದು ಕೇಳಿಯೂ ಬಿಟ್ಟೆ. 


ಡಾಬ್ಸ್ ಮತ್ತು ಹರ್ಕ್ನೆಸ್ ರವರ ಕ್ರೌರ್ಯ ಬ್ರಿಟಿಷರು ಭಾರತೀಯ ಸಮಾಜದ ಮೇಲೆ ಮಾಡಿದ ದಬ್ಬಾಳಿಕೆಯನ್ನು ಪ್ರತಿನಿಧಿಸುತ್ತದೆ. ವಾಲ್ಮೀಕಿಯಾಗಿ, ನರಸಿಂಹನಾಗಿ, ಮುದುಕನಾಗಿ, ಹರಿಕಥೆಮಾಡುವವನಾಗಿ ಕಥಾ ನಾಯಕ ವಿವಿಧ ಪಾತ್ರಗಳಲ್ಲಿ ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸಿದ ಪರಿ ನಿಜಕ್ಕೂ ಸುಂದರ.

ಎಲೆ ಮರೆ ಕಾಯಿಯಂತೆ ದೊಡ್ಡೇರಿ ಗೌಡರು ಯುವಕರ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ನೈತಿಕ ಬೆಂಬಲದ ಜೊತೆಗೆ ಕಾಲ ಕಾಲಕ್ಕೆ ದವಸ ಧಾನ್ಯಗಳನ್ನು ಒದಗಿಸಿ ಸಂಪನ್ಮೂಲಗಳನ್ನು ಕ್ರೂಢಿಕರಿಸಿದ ರೀತಿಯೂ ಪ್ರಶಂಸಾರ್ಹ.ಇಂತಹ ಸಾವಿರಾರು ಎಲೆಮರೆ ಕಾಯಿಯಾಗಿ ಸ್ವಾತಂತ್ರ್ಯ ಕ್ಕೆ ಹೋರಾಡಿದವರ  ಸೇವೆಯನ್ನು ನಾವು ಸಂಶೋಧನೆಯ ಮೂಲಕ ಗುರ್ತಿಸಬೇಕಿದೆ.


ಕೈಮಾಕ್ಸ್ನಲ್ಲಿ ದುರ್ಗದ ದಂಗೆ ನಿರ್ಣಾಯಕ  ಹಂತ ತಲುಪಿದಾಗ ವಾಲ್ಮೀಕಿಯು ಮೂಲಕ ವೇಣುರವರು ಉತ್ತಮ ಭಾರತೀಯ ಮೌಲ್ಯವನ್ನು ಚಿತ್ರಿಸಿದ್ದಾರೆ .  ಬ್ರಿಟಿಷ್ ಅಧಿಕಾರಿ ಆರ್.ಎಸ್.ಡಾಬ್ಗೆ ದಂಗೆಯ ಅಂತಿಮ ಹಂತದಲ್ಲಿ ಮುಖಾಮುಖಿಯಾದ ಕಥಾನಾಯಕ ಪೆಟ್ಟು ತಿಂದು ಕೊನೆಯುಸಿರೆಳೆಯುತ್ತಿದ್ದ ಸಮಯದಲ್ಲಿ  ತನೆಗೆದುರಾದ ಡಾಬ್ ಮೇಲೆ, ಅವಕಾಶವಿದ್ದರೂ, ಗುಂಡು ಹಾರಿಸುವುದಿಲ್ಲ. ಬದಲಾಗಿ ಬುರುಜಿನ ಮೇಲೆ ಹಾರುವ ಬ್ರಿಟಿಷ್ ಧ್ವಜವನ್ನು ಉಡಾಯಿಸಿ ಸಾಯುತ್ತಾನೆ. ಏಕೆಂದರೆ ಡಾಬ್ಗೆ ಗುರಿಯಿಟ್ಟಾಗ ಆತನ ಪತ್ನಿ ಜೇನ್ ಧಾವಿಸಿ ಅಡ್ಡ ಬಂದು "ಬ್ರದರ್". ಎಂದು ಕೈಮುಗಿದು ಗೋಗರೆಯುತ್ತಾಳೆ.   ಅದನ್ನು ಕಂಡ ವಾಲ್ಮೀಕಿಯ ಮನ ಕರಗುತ್ತದೆ. ಭಾರತೀಯರು ಮನುಷ್ಯನ ಕೌಟು೦ಬಿಕ ವಾಸ್ತವಗಳಿಗೆ ಕೊಡುವ ಬೆಲೆ ಮತ್ತು ಗೌರವವನ್ನು ವೇಣುರವರು   ಈ ಮೂಲಕ ತುಂಬ ಸೊಗಸಾಗಿ  ಕಟ್ಟಿ ಕೊಟ್ಟಿದ್ದಾರೆ. ಸಂಘರ್ಷ ತಾತ್ವಿಕತೆಗೆ ಮಾತ್ರ ಸೀಮಿತವಾಗಿರಬೇಕು ಎಂಬುದನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಜೊತೆಗೆ ಕಾದಂಬರಿಯ ಕೊನೆಯ ಭಾಗದಲ್ಲಿ ನೆರೆದ ಜನರಿಗೆ ನಾಯಕ ನೀಡಿದ ಸಂದೇಶ ದುರ್ಗದ ಜನರಲ್ಲಿ ಹಾಗೂ ದೇಶವಾಸಿಗಳಲ್ಲಿ ಆ ಕಾಲಕ್ಕೆ ಕ್ರಾಂತಿಯ ಕಿಡಿ ಹಚ್ಚಿದ್ದು ಗಮನಾರ್ಹವಾದದ್ದು. 

ದುರ್ಗದವನಾಗಿ ದುರ್ಗದ ಬೇಡರ್ದಂಗೆ ಶೀರ್ಷಿಕೆ ಸರಿ ಎನಿಸಿದರೂ " ಭಾರತದ ಸ್ವತಂತ್ರ ಸಂಗ್ರಾಮ " ಎಂಬ ಶೀರ್ಷಿಕೆ ಇದ್ದಿದ್ದರೆ ಇನ್ನೂ ವ್ಯಾಪಕತೆ ಬರುತ್ತಿತ್ತು ಎನಿಸಿತು. ಇಂತಹ ಐತಿಹಾಸಿಕ ಕಾದಂಬರಿಯನ್ನು ಎಲ್ಲರೂ ಓದಬೇಕು. ತನ್ಮೂಲಕ ನಿಜವಾದ ಇತಿಹಾಸ ತಿಳಿಯಬೇಕು ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಬೇಕು .ವೇಣು ಸರ್ ರವರು ಇಂತಹ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾದಂಬರಿಗಳನ್ನು ಇನ್ನೂ ಹೆಚ್ಚು ಬರೆಯಲಿ ಹಾಗೂ ಓದುವ ಸೌಭಾಗ್ಯ ನಮ್ಮದಾಗಲಿ ಎಂದು ಆಶಿಸುವೆ.


ಪುಸ್ತಕದ ಹೆಸರು: ದುರ್ಗದ  ಬೇಡರ್ದಂಗೆ  .ಚಾರಿತ್ರಿಕ ಕಾದಂಬರಿ

ಲೇಖಕರು: ಬಿ ಎಲ್ ವೇಣು.

ಪ್ರಕಾಶನ: ಗೀತಾಂಜಲಿ ಪ್ರಕಾಶನ ತುಮಕೂರು.

ಬೆಲೆ:300₹



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

No comments: