*ಬದುಕು*
ಬದುಕು ನಮ್ಮದು
ನಾವು ಬದುಕಲು
ನಮ್ಮವರ ಬದುಕಿಸಲು
ಸತ್ತಂತಿಹರನು ಬದುಕಿಸಲು
ಸಾವಿಗಂಜಿದವರ ಬದುಕಿಸಲು
ಬದುಕನ್ನು ಪ್ರೀತಿಸಬೇಕು.....
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಬದುಕು*
ಬದುಕು ನಮ್ಮದು
ನಾವು ಬದುಕಲು
ನಮ್ಮವರ ಬದುಕಿಸಲು
ಸತ್ತಂತಿಹರನು ಬದುಕಿಸಲು
ಸಾವಿಗಂಜಿದವರ ಬದುಕಿಸಲು
ಬದುಕನ್ನು ಪ್ರೀತಿಸಬೇಕು.....
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಅತಿಯಾಸೆ ಗತಿಗೇಡು*
ಶಿಶುಗೀತೆ
ರಾಮನಳ್ಳಿಯಲ್ಲಿ ರಾಮಪ್ಪನೆಂಬ
ರೈತನಿದ್ದನು
ಬೇಸಾಯದೊಂದಿಗೆ ಒಂದು
ಕೋಳಿ ಸಾಕಿದ್ದನು.
ಕೋಳಿ ಬೆಳೆದು ಮೊಟ್ಟೆ
ಇಡಲು ಶುರು ಮಾಡಿತು
ಅಚ್ಚರಿಯೆಂಬಂತೆ ಬಂಗಾರದ
ಮೊಟ್ಟೆ ಇಟ್ಟಿತು.
ಕೋಳಿ ದಿನವೂ ಬಂಗಾರದ
ಮೊಟ್ಟೆಯನು ಇಟ್ಟಿತು
ರಾಮಪ್ಪನ ಮನವು
ಸಂತೋಷದಿ ಕುಣಿದಾಡಿತು.
ಅವನಲಿ ಅತಿಯಾಸೆಯ
ಬೀಜವೊಂದು ಮೊಳಕೆಯೊಡೆಯಿತು
ಒಂದೆ ದಿನ ಎಲ್ಲಾ ಮೊಟ್ಟೆಗಳ
ಪಡೆಯಲು ಆಸೆಯಾಯಿತು.
ಕೋಳಿ ಹಿಡಿದು ಚೂರಿಯಿಂದ
ಹೊಟ್ಟೆ ಬಗೆದನು
ಬಂಗಾರವಿಲ್ಲ ಬರೀ ಕರುಳು
ಮಾಂಸವನ್ನು ಕಂಡನು.
ನಿರಾಸೆಯಿಂದ ಅಳುತಲಿ
ಜನರ ನೋಡಿದ
ಅತಿಯಾಸೆ ಪಡದಿರೆಂದು
ಜನಕೆ ಬುದ್ದಿ ಹೇಳಿದ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಜನನಾಯಕರೆ
ಜನರು ಸಂಕಷ್ಟದಲ್ಲಿ
ಇರುವಾಗ ಸಾದ್ಯವಾದರೆ
ಅವರ ಕಣ್ಣೀರ ಒರೆಸಿ
ನೀಡಿ ಸಾಂತ್ವನ ಭರವಸೆ|
ಅದು ಬಿಟ್ಟು ನೊಂದವರ
ಮೇಲೆ ನಡೆಸಲೇ ಬೇಡಿ
ಅಮಾನವೀಯವಾಗಿ
"ಕತ್ತಿ ವರಸೆ"||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಒಗ್ಗಟ್ಟಿನಲ್ಲಿ ಬಲವಿದೆ*
ಒಂದು ಊರಿನಲ್ಲಿ ಒಬ್ಬ
ರೈತನಿದ್ದನು
ಅವನಿಗೆ ಮೂರು ಗಂಡು
ಮಕ್ಕಳಿದ್ದರು.
ದಿನವು ಅವರು ತಮ್ಮ ತಮ್ಮಲ್ಲೆ
ಕಚ್ಚಾಡುತ್ತಿದ್ದರು
ಅಪ್ಪನ ಕಿವಿಮಾತು ಕೇಳದೆ
ಬಡಿದಾಡುತ್ತಿದ್ದರು.
ಮಕ್ಕಳಿಗೆ ಬುದ್ದಿ ಹೇಳಲು
ಅಪ್ಪ ಯೋಚಿಸಿದ
ಒಂದು ಉಪಾಯವನ್ನು
ಅವನು ಯೋಜಿಸಿದ.
ಮೂರು ಕಡ್ಡಿಯ ಗಂಟನ್ನು
ಅವರಿಗೆ ನೀಡಿದನು
ಒಬ್ಬೊಬ್ಬರು ಮುರಿಯಲು
ಪ್ರಯತ್ನಿಸಲು ಹೇಳಿದನು.
ಕಷ್ಟಪಟ್ಟರೂ ಯಾರಿಗೂ
ಮುರಿಯಲಾಗಲಿಲ್ಲ
ಮಕ್ಕಳ ಪೆಚ್ಚು ಮೋರೆ
ಅಪ್ಪಗೆ ನೋಡಲಾಗಲಿಲ್ಲ.
ಅಪ್ಪನೆದರು ಮೂವರು
ತಲೆ ತಗ್ಗಿಸಿ ನಿಂತರು
ದಾರಬಿಚ್ಚಿದ ಒಂದೊಂದು
ಕಟ್ಟಿಗೆಯ ಪಡೆದರು.
ಈಗ ಮುರಿಯಿರೆಂದು
ಅಪ್ಪ ಆಜ್ಞೆ ನೀಡಿದರು
ಸುಲಭವಾಗಿ ಮಕ್ಕಳು ಕಟ್ಟಿಗೆ
ಮುರಿದು ಹಾಕಿದರು.
ಒಗ್ಗಟ್ಟಿನಲ್ಲಿ ಬಲವಿದೆ ಎಂದು
ಅಪ್ಪ ಹೇಳಿದರು
ಜಗಳವಾಡದೆ ಬದುಕುವುದನು
ಮಕ್ಕಳು ಕಲಿತರು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಕೊರೋನಾ ಮೆಟ್ಟಿ ನಿಲ್ಲಬಹುದು*
ಕರ್ನಾಟಕ ಮತ್ತು ಭಾರತದ ಇಂದಿನ ಕೊರೋನಾದ ಭೀಕರತೆಯನ್ನು ನೋಡಿ ಆಡಳಿತ ಮತ್ತು ವಿರೋಧ ಪಕ್ಷದವರು ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪರಸ್ಪರ ಕೆಸರೆರೆಚಿಕೊಂಡು ತಾವೂ ಬಟಾಬಯಮಸೀದಿುದರ ಜೊತೆಗೆ ನೋವಿನಿಂದಾಗಿ ನರಳುವವರ ಗಾಯಕ್ಕೆ ಉಪ್ಪು ಸವರುವ ಕಾರ್ಯ ಮಾಡುವದಲ್ಲದೇ ಮತ್ತೇನೂ ಅಲ್ಲ ,ಸಂಕಷ್ಟ ಕಾಲದಲ್ಲಿ ನಾವೆಲ್ಲರೂ ಕಚ್ಚಾಡದೇ ಕೆಲಸ ಮಾಡಬೇಕೆಂದು ಯಾರೋ ಜಾಲ ತಾಣದಲ್ಲಿ ಚೆನ್ನಾಗಿ ಹೇಳಿ ರಾಜಕಾರಣಿಗಳ ಬಾಯಿ ಮುಚ್ಚಿಸಿದ್ದಾರೆ"ಮಧ್ಯಪ್ರದೇಶದಲ್ಲಿ ಕೊರೋನ ಬಂದಿದೆ ಎಂದರೆ ಅದು ಬಿ ಜೆಪಿ ಸರ್ಕಾರದ ವೈಫಲ್ಯ ಎನ್ನಬೇಕೆ? ಚತ್ತೀಸ್ಘಡ ಮತ್ತು ಪಂಜಾಬ್ ನಲ್ಲಿ ಕೊರೋನ ಬಂದರೆ ಅದು ಕಾಂಗ್ರೆಸ್ ಸರ್ಕಾರದ ವಿಫಲತೆ ಎನ್ನಬೇಕೆ? ಮಹಾರಾಷ್ಟ್ರದ ಕೊರೋನ ಹರಡಿದರೆ ಶಿವಸೇನೆಯ ವೈಫಲ್ಯದ ಸಂಕೇತವೆ?ಭಾರತದಲ್ಲಿ ಕೊರೋನ ಹರಡಿದರೆ ಅದು ಮೋದಿಯವರ ವೈಫಲ್ಯ ಎಂಬುದಾದರೆ ಇಡೀ ಪ್ರಪಂಚದಲ್ಲಿ ಕೊರೋನ ಹರಡಿದರೆ ಪ್ರಪಂಚದಲ್ಲಿ ಯಾರೂ ಉತ್ತಮ ನಾಯಕರಿಲ್ಲ ಎಂದು ಅರ್ಥವೆ? ದುಡ್ಡು ಇದ್ದವರ ಬಳಿ ಕೊರೋನ ಹೋಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಹಾಗಿದ್ದಿದ್ದರೆ ಅಮೆರಿಕ, ಜಪಾನ್ ಮುಂತಾದ ದೇಶಗಳಲ್ಲಿ ಕೊರೊನ ಸುಳಿಯುತ್ತಿರಲಿಲ್ಲ."
ಈ ಸಂದೇಶವು ಚಿಂತನಾರ್ಹ
ಅದ್ದರಿಂದ ಸ್ನೇಹಿತರೆ ಇದು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸಿಕೊಂಡು ಕಚ್ಚಾಟ ಆಡುವ ಸಮಯವಲ್ಲ , ಹಳ್ಳಿ,ತಾಲ್ಲೂಕು, ಜಿಲ್ಲೆ,ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಸಹಕಾರದಿಂದ ಈ ಮಹಾಮಾರಿಯನ್ನು ತೊಲಗಿಸಲು ಪಣ ತೊಡಬೇಕಿದೆ, ಇದರಲ್ಲಿ ಎಲ್ಲರೂ ಪಕ್ಷ, ಜಾತಿ, ಮತಗಳ ಎಲ್ಲೆ ಮೀರಿ ನಮ್ಮ ಉಳಿವಿಗೆ ನಾವು ಕಾರ್ಯ ಪ್ರವೃತ್ತವಾಗಬೇಕಿದೆ.
ಯುದ್ದ ಆರಂಭವಾದಾಗ ಸೈನಿಕರ, ನಮ್ಮ ಸಂಪನ್ಮೂಲಗಳ ನಿಜವಾದ ಶಕ್ತಿ ಮತ್ತು ಉಳುಕು ಹೊರಬರುವುದು. ಈಗಿನ ಕರೋನ ವಿರುದ್ಧದ ಯುದ್ದದಲ್ಲಿ ಬಹುತೇಕ ವಿಶ್ವದ ಎಲ್ಲಾ ರಾಷ್ಟ್ರಗಳು ಮತ್ತು ನಮ್ಮ ದೇಶದಲ್ಲಿ ಎಲ್ಲಾ ರಾಜ್ಯಗಳು ನಮ್ಮ ಆರೋಗ್ಯ ಸೇವೆಯ ಉಳುಕುಗಳನ್ನು ಬಿಚ್ಚಿಟ್ಟು ಬಟಾ ಬಯಲಾಗಿವೆ . ಇದಕ್ಕೆ ಆಳುವವರು ,ಜನ ನಾಯಕರು ಎಷ್ಟು ಕಾರಣರೋ ಸಾಮಾನ್ಯ ಜನರಾದ ನಾವೂ ಸಹ ಅಷ್ಟೇ ಕಾರಣರು.
ನಾವು ಆರೋಗ್ಯವಾಗಿದ್ದಾಗ ಬರೀ ,ಮಂದಿರ ,ಮಸೀದಿ, ಚರ್ಚು,ಜಾತಿ ಮೀಸಲಾತಿ, ಗಡಿಗಳು, ಎಂದು ಮುಷ್ಕರ, ಹೋರಾಟ ಮಾಡಿದೆವೇ ವಿನಃ ಉತ್ತಮ ಆಸ್ಪತ್ರೆ, ಶಾಲಾ ಕಾಲೇಜುಗಳಿಗಾಗಿ ಮುಷ್ಕರ ಮಾಡಲಿಲ್ಲ ಹಾಗೆ ಮಾಡಿದ್ದರೆ ಇಂದು ಡಾಕ್ಟರ್ ,ಆಸ್ಪತ್ರೆಗಳ ಮುಂದೆ ವೆಂಟಿಲೇಟರ್ ಆಕ್ಸಿಜನ್, ಬೆಡ್ ಗಳಿಗಾಗಿ ಕಣ್ಣೀರಿಡುತ್ತಾ ಜಗಳ ಮಾಡಬೇಕಿರಲಿಲ್ಲ.
ಇನ್ನೂ ಭಾರತದ ಆರೋಗ್ಯ ವ್ಯವಸ್ಥೆಯ ನೈಜ ಚಿತ್ರಣ ಕಂಡು ಎಂತವರು ಸಹ ಬೆಚ್ಚಿ ಬೀಳುವಂತಿದೆ . ನಮ್ಮ ಜನಸಂಖ್ಯೆ ಹೆಚ್ಚಾದಂತೆ ನಮ್ಮ ಆರೋಗ್ಯ ಮೂಲಸೌಕರ್ಯಗಳು ಇನ್ನೂ ಓಬಿರಾಯನ ಕಾಲದಲ್ಲಿ ಇರುವುದು ದುರದೃಷ್ಟಕರ.
ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಹತ್ತು ಸಾವಿರ ಜನಸಂಖ್ಯೆ ಗೆ ಕೇವಲ 7 ಜನ ವೈದ್ಯ ರು ಇದ್ದರೆ, ಅಮೆರಿಕಾದಲ್ಲಿ 25 ವೈದ್ಯರು, ಅಷ್ಟೇ ಏಕೆ ಪಾಕಿಸ್ತಾನದಲ್ಲಿ 9 ವೈದ್ಯರು ಲಭ್ಯ.
ಇನ್ನೂ ಇಷ್ಟೇ ಜನಸಂಖ್ಯೆಗೆ ಭಾರತದ ಆಸ್ಪತ್ರೆಯಲ್ಲಿ ಸರಾಸರಿ 7 ಬೆಡ್ ಲಭ್ಯವಿರುವ ಕಾಲದಲ್ಲಿ ಚೀನಾದಲ್ಲಿ42, ಶ್ರೀಲಂಕಾ ದಲ್ಲಿ 36 ಹಾಸಿಗೆಗಳು ಲಭ್ಯವಿವೆ
ರೋಗಿಗಳನ್ನು ಶುಶ್ರೂಷೆ ಮಾಡಲು ನರ್ಸಿಂಗ್ ವಿಷಯಕ್ಕೆ ಬಂದರೆ ,ಅಮೆರಿಕಾ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ 86 ನರ್ಸ್ ಗಳು ಸೇವೆಗೆ ಲಭ್ಯವಿದ್ದರೆ, ಅದು ಭಾರತದಲ್ಲಿ ಕೇವಲ 21 ಅಂದರೆ ನಿಮಗೆ ಆಶ್ಚರ್ಯಕರವಾಗಿ ಕಾಣಬಹುದು. ಮತ್ತು ಆರೋಗ್ಯ ಸಮಸ್ಯೆಗಳ ಮೂಲ ತಿಳಿಯಬಹುದು.
ಭಾರತವನ್ನು ಹೊರತು ಪಡಿಸಿ ಈ ಮೇಲೆ ತಿಳಿಸಿದ ಕೆಲ ದೇಶಗಳಲ್ಲಿ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಇದ್ದದ್ದರಲ್ಲೇ ವಾಸಿ ಎಂದು ಹೇಳಲು ಕಾರಣ ಆ ದೇಶಗಳು ಆರೋಗ್ಯಕ್ಕೆ ಮೀಸಲಿಡುವ ಹಣ, ಅಮೇರಿಕಾವು ತನ್ನ ಜಿ ಡಿ ಪಿ ಯ 17% ಹಣವನ್ನು ಆರೋಗ್ಯ ಕ್ಕೆ ಮೀಸಲು ಇಡುತ್ತದೆ .ನಮ್ಮ ಭಾರತದಲ್ಲಿ ಇದು ಕೇವಲ 3.7%.
ಈ ನಿಟ್ಟಿನಲ್ಲಿ ನಾವು ಇಂದು ಬಹಳ ಚಿಂತನೆ ಮಾಡಿ ಮುಂದೆ ನಮ್ಮ ಆದ್ಯತೆ ಯಾವುದಾಗಬೇಕು ಎಂದು ಚಿಂತನ ಮಂಥನ ಮಾಡಿ ಕಾರ್ಯ ಪ್ರವೃತ್ತರಾಗಬೇಕಿದೆ .
ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಎಂದು ಯಾವುದೊ ದೇಶವನ್ನೋ, ಯಾವುದೋ ನಾಯಕರನ್ನು ದೂಷಿಸುತ್ತಾ ಕೂರುವುದನ್ನು ಬಿಟ್ಟು, ಕಷ್ಟ ಬಂದಾಗ ಎಲ್ಲಾ ಸೇರಿ ಆ ಕಷ್ಟ ಪರಿಹಾರ ಮಾಡುವ ಮಾರ್ಗದ ಕಡೆ ಯೋಚಿಸೋಣ ಯೋಜಿಸೋಣ.
ಸ್ನೇಹಿತರೇ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಮನಸ್ಥಿತಿಯನ್ನು ಬಿಟ್ಟು , ಮುಂದೆ ಬರುವ ಆಪತ್ತುಗಳನ್ನು ಎದುರಿಸುವ ಕಡೆ ಯೋಚಿಸಬೇಕಿದೆ. ಆರೋಗ್ಯ,ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನ ಪಡೋಣ. ಇದೆಲ್ಲಕ್ಕಿಂತ ಮಿಗಿಲಾಗಿ ಓರ್ವ ಪ್ರಜ್ಞಾವಂತ ಪ್ರಜೆಯಾಗಿ ಸರ್ಕಾರದೊಂದಿಗೆ ನಿಂತರೆ ಇಂತಹ ನೂರಾರು ಕರೋನ ಗಳು ಮೆಟ್ಟಿ ನಿಲ್ಲಬಹುದು .ನೀವೇನಂತೀರಿ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಓ ರಾಜಕಾರಣಿಗಳೆ
ನೀವು ನಮ್ಮ ಬಳಿ
ಬರಬೇಡಿ ಕೇಳಲು
ಓಟು |
ಈ ಕೊರೋನಾ
ಕಾಲದಲ್ಲಿ ಮೊದಲು
ನಮಗೆ ನೀಡಿ
O2||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಒಲವಿನ ಉಡುಗೊರೆ*
೧
ಅವನೆಂದನು
ಪ್ರಿಯೆ ಒಲವಿನ
ಉಡುಗೊರೆಯಾಗಿ ತರಲೆ
ನಿನಗೆ ದುಬಾರಿ ಕಾರು
ಫಾರ್ಚುನರ್|
ಬೇಡ ನಲ್ಲ ತಂದು
ಕೊಡು ಈಗಲೆ
ಸ್ಯಾನಿಟೈಸರ್ ಮತ್ತು
ರೇಮ್ ಡೆಸಿವರ್||
೨
ಅವಳೆಂದಳು
ಪ್ರಿಯಾ ಪತ್ರಿಕೆಯಲ್ಲಿ
ಓದಿದೆ ಬೆಲೆ
ಇಳಿಕೆಯಾಗಿದೆಯಂತೆ
ಯಾವಾಗ ಕೊಡಿಸುವೆ
ಗೋಲ್ಡ್?|
ಪ್ರಿಯೆ ಕೊರೋನ
ಏರಿಕೆಯಾಗುತ್ತಲೇ ಇದೆ
ಯಾವಾಗ ಕೊಡಿಸಲಿ
ಕೋವೀಶೀಲ್ಡ್||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಜೀವನ ಕಲೆ*
ನಾವುಗಳು ಕೆಂಪಿರುವೆಗಳು
ಹಸುರಿನ ಎಲೆಯ ಮೇಲೆ
ವೃತ್ತಾಕಾರದಿ ಸೇರಿಹೆವವು.
ನಮ್ಮ ಚಿತ್ತವೆಲ್ಲವೂ
ಜೇನ ಹನಿಯ ಮೇಲೆ
ನೋಡಿ ನಮ್ಮ ಲೀಲೆ.
ಸಮಾನತೆಗೆ ಹೆಸರೇ ನಾವು
ಸಮಾನವಾಗಿ ಸೇವಿಸುವೆವು
ಇದು ನಾವು ಕಲಿತ ಕಲೆ.
ಮೂಢ ಮಾನವನೆ
ಕಲಿತುಕೋ ನಮ್ಮಿಂದ
ನೀ ಜೀವನ ಕಲೆ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಸಿಹಿಜೀವಿಯ ಉಸಿರು*
ಉಸಿರಿರುವವರೆಗೂ
ಮತ್ತೊಂದು ಉಸಿರನ್ನು
ಉಸಿರಾಡಿಸಲು
ಹೋರಾಡೋಣ.
ಉಸಿರು ನಿಂತರೂ
ಹೆಸರಿರುವ ಹಾಗೆ
ಉಸಿರ ಬೆಲೆ
ಉಳಿಸೋಣ.
ಉಸಿರಿದ್ದರೆ ದೇಹಕ್ಕೆ
ಬೆಲೆ ಎಂಬುದನ್ನು
ಸುಳ್ಳು ಮಾಡಿ
ತೋರಿಸೋಣ.
ಉಸಿರಿರುವಾಗ
ಹುಸಿ ಜಂಭ ತೋರದೆ
ಪರರ ಜೀವಕೆ
ಹಸಿರಾಗೋಣ..
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಲೇಖನ ೪೫
*ಕರೋನಾ ಕಾಲದಲ್ಲಿ ಮಕ್ಕಳ ಪೋಷಕರೇನು ಮಾಡಬೇಕು*
ಇಂದು ಕರೋನ ದಂತಹ ವೈರಾಣು ಪ್ರಪಂಚದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡು ತನ್ನ ಕಬಂಧ ಬಾಹುಗಳನ್ನು ವಿಸ್ತರಣೆ ಮಾಡಿಕೊಂಡು ಅಟ್ಟಹಾಸಗೈಯುತ್ತಾ, ನಮಗೆ ಭಯವನ್ನು ಉಂಟು ಮಾಡಿದ್ದರೆ ಅದಕ್ಕೆ ನೂರಾರು ಕಾರಣಗಳನ್ನು ನೀಡಬಹುದಾದರೂ ಇಂದಿನ ಜನರಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆ ಇರುವುದು ಸಹಾ ಒಂದು ಅಂಶ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇದಕ್ಕೆ ನಮ್ಮ ಜೀವನಕ್ರಮ ನಾವು ಸೇವಿಸುವ ಆಹಾರ, ಪರಿಸರ ಮಾಲಿನ್ಯ ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ನಮ್ಮಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಹಲವು ಕಾರಣಗಳು ತಿಳಿದಿವೆ . ಇದರ ಮೂಲವನ್ನು ಹುಡುಕಿ ಹೊರಟರೆ ನಮ್ಮ ಶಿಕ್ಷಣ ವ್ಯವಸ್ಥೆಯ ಕಡೆ ಬೊಟ್ಟು ಮಾಡುವುದು. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆ ಕೇವಲ ತಲೆ, ಮೆದುಳಿಗೆ ಮಾತ್ರ ಮಹತ್ವ ನೀಡಿ ಉಳಿದ ಅಂಗಗಳ ಕಡೆಗಣಿಸಿರುವುದು ಎಲ್ಲರಿಗೂ ತಿಳಿದ ಸಂಗತಿ. ಸೇವಾ ಕ್ಷೇತ್ರವಾಗಿದ್ದ ಶಿಕ್ಷಣ ಮತ್ತು ಆರೋಗ್ಯವನ್ನು ವ್ಯಾಪಾರೀಕರಣ ಮಾಡಿದ ಪರಿಣಾಮವಾಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತಿದವು. ವ್ಯವಸ್ಥೆಯ ದುರುಪಯೋಗ ಪಡೆದು ಮೂಲಸೌಕರ್ಯವಿಲ್ಲದಿದ್ದರೂ ಶಾಲೆಗಳಿಗೆ ಅನುಮತಿ ಸಿಕ್ಕಿತು.ಇತ್ತೀಚಿನ ನಡೆದ ಸಮೀಕ್ಷೆಯ ಪ್ರಕಾರ ನಮ್ಮ ರಾಜ್ಯದ 29154 ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಆಟದ ಮೈದಾನವಿಲ್ಲ . ಇದರ ಅರ್ಥ ಆ ಮಕ್ಕಳು ಆಟವಾಡುವ ಭಾಗ್ಯವಿಲ್ಲ ಕೇವಲ ಪಾಠಗಳು ಮಾತ್ರ, ಆಟಗಳು ಇಲ್ಲವೇ ಇಲ್ಲ. ಇದು ಸಹ ಮಕ್ಕಳಿಗೆ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಕಾರಣ ಎಂದರೆ ತಪ್ಪಾಗಲಾರದು.
ಕಳೆದ ವರ್ಷ ಕೊರೋನಾ ಕಾಟದಿಂದ 1 ರಿಂದ 9 ನೇ ತರಗತಿಯ ಮಕ್ಕಳು ಪರೀಕ್ಷೆ ಇಲ್ಲದೆ ಉತ್ತೀರ್ಣರಾದರು. ಈ ವರ್ಷವೂ ಅದೇ ದಾರಿಯಲ್ಲಿ ಸಾಗಿ ಒಂದರಿಂದ ಐದನೇಯ ತರಗತಿಯ ಮಕ್ಕಳು ಒಂದು ದಿನವೂ ಶಾಲೆಯ ಮುಖವನ್ನು ಸಹ ನೋಡದೇ ಮುಂದಿನ ತರಗತಿಗೆ ಪಾಸ್ ಆಗಿರುವರು.
ಇನ್ನೂ 5 ರಿಂದ ಒಂಭತ್ತನೆಯ ತರಗತಿಯ ಮಕ್ಕಳು ವಿದ್ಯಾಗಮ, ಮತ್ತು ಒಂದೆರಡು ತಿಂಗಳ ಭೌತಿಕ ಮತ್ತು ಆನ್ ಲೈನ್ ತರಗತಿಯ ಅಧಾರದ ಮೇಲೆ ಅವರು ಉತ್ತೀರ್ಣರಾದರು.
ಕರೋನಾದ ಎರಡನೇ ಅಲೆಯ ಅಬ್ಬರದಲ್ಲಿ ಮತ್ತೆ ಅನಿವಾರ್ಯವಾಗಿ ಮಕ್ಕಳು ಮನೆಯಲ್ಲಿ ಬಂಧಿಯಾಗಬೇಕಿದೆ. ಇಂತಹ ಸಂದರ್ಭಗಳಲ್ಲಿ ಪೋಷಕರು ಮಕ್ಕಳಿಗೆ ಬರೀ ಮೊಬೈಲ್ ಕೊಟ್ಟು ,ಅಥವಾ ಟಿ ವಿ ಕಂಪ್ಯೂಟರ್ ನೋಡುತ್ತಾ ಕಾಲ ಕಳೆಯುವ ಬದಲಾಗಿ ಈ ಕೆಳಗಿನ ಚಟುವಟಿಕೆಗಳನ್ನು ಮಕ್ಕಳಿಗೆ ನೀಡಬಹುದು.
ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ತಮ್ಮ ಆಟಿಕೆಗಳನ್ನು ತೊಳೆಯುವ ಕಾರ್ಯದಲ್ಲಿ ತೊಡಗಿಸಬಹುದು. ಪೋಷಕರು ಸ್ವಲ್ಪ ಸಾಬೂನು ಮತ್ತು ನೀರಿನಿಂದ ಟಬ್ ಅಥವಾ ಸಿಂಕ್ ಅನ್ನು ಭರ್ತಿ ಮಾಡಿ, ಟವೆಲ್ ಅನ್ನು ಪಕ್ಕಕ್ಕೆ ಇರಿಸಿ ಮಕ್ಕಳಿಗೆ ತಮ್ಮ ಆಟಿಕೆಗಳನ್ನು ತೊಳೆಯಲು ಹೇಳಬಹುದು. ಈ ಚಟುವಟಿಕೆಯು ಅವರನ್ನು ಕಾರ್ಯನಿರತವಾಗಿಸುವುದಲ್ಲದೆ ಅವುಗಳಲ್ಲಿ ಸ್ವಚ್ಛತೆಯ ಅಭ್ಯಾಸವನ್ನು ಬೆಳೆಸುತ್ತದೆ. ಮಕ್ಕಳು ಈ ಚಟುವಟಿಕೆಯನ್ನು ಮಾಡುವುದನ್ನು ಇಷ್ಟಪಡುತ್ತಾರೆ. ಏಕೆಂದರೆ ಅವರಲ್ಲಿ ಹೆಚ್ಚಿನವರು ನೀರಿನೊಂದಿಗೆ ಆಟವಾಡುವುದನ್ನು ಇಷ್ಟಪಡುತ್ತಾರೆ.
ಯಾವುದೇ ಮಗು ಸ್ವಲ್ಪ ಸ್ಕೆಚಿಂಗ್, ಬಣ್ಣ ಮತ್ತು ಕರಕುಶಲ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಹೇಳಿದರೆ ನಿರಾಕರಿಸುವುದಿಲ್ಲ. ಅವರಿಗೆ ಬಣ್ಣ ತುಂಬಲು ಪುಸ್ತಕವನ್ನು ನೀಡುವುದರ ಜೊತೆಗೆ, ತಮ್ಮ ಕಲ್ಪನೆಗೆ ಅನುಗುಣವಾಗಿ ಮಕ್ಕಳಿಗೆ ಡ್ರಾಯಿಂಗ್ ಮಾಡಲು ಪೋಷಕರು ಹೇಳಬಹುದು. ಈ ಚಟುವಟಿಕೆಯು ಅವರ ಸೃಜನಶೀಲತೆ ಮತ್ತು ಕಲ್ಪನೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಮಣ್ಣಿನ ಅಥವಾ ಲೋಳೆಯೊಂದಿಗೆ ಆಟವಾಡಲು ಮಕ್ಕಳನ್ನು ಸ್ವಲ್ಪ ಸಡಿಲಗೊಳಿಸಬೇಕು. ಖಚಿತವಾಗಿ ಇದು ಗೊಂದಲಮಯ ಚಟುವಟಿಕೆಯಾಗಿದೆ, ಆದರೆ ಮಕ್ಕಳು ಅದರೊಂದಿಗೆ ವಿಚಲಿತರಾಗಿರುವಾಗ ಇದು ಪೋಷಕರಿಗೆ ಅಮೂಲ್ಯವಾದ ಕೆಲಸದ ಸಮಯವನ್ನು ನೀಡುತ್ತದೆ.
ಪೋಷಕರು ಮಕ್ಕಳನ್ನು ವ್ಯಾಯಾಮವನ್ನು ಮಾಡಲು ಪ್ರಯತ್ನಿಸುವಂತೆ ಹೇಳಬಹುದು ಯೋಗ ,ವ್ಯಾಯಾಮ ಮಾಡುವುದರಿಂದ ಮಕ್ಕಳು ಸದೃಢವಾಗಿ ಮತ್ತು ಸಕ್ರಿಯವಾಗಿರುತ್ತವೆ. ಮಾತ್ರವಲ್ಲದೆ ಈ ಸಾಂಕ್ರಾಮಿಕ ಸಮಯದಲ್ಲಿ ಸುರಕ್ಷಿತವಾಗಿರಲು ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಗುವಿನ ವಯಸ್ಸಿಗೆ ಅನುಗುಣವಾಗಿ ಇಂತಹ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು ,ಜೊತೆಗೆ ಒಳಾಂಗಣ ಆಟಗಳಾದ ಚೌಕಾಬಾರ, ಚೆಸ್, ಮುಂತಾದ ಆಟಗಳನ್ನು ಆಡಲು ಸಹ ಪ್ರೋತ್ಸಾಹ ನೀಡಬಹುದು .
ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿದರೆ ಅದು ಮಕ್ಕಳ ವ್ಯಕ್ತಿತ್ವ ವಿಕಸನದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುವುದು ಅದಕ್ಕೆ ಪೋಷಕರು ಅವರ ವಯಸ್ಸಿಗೆ ಅನುಗುಣವಾಗಿ, ಮಕ್ಕಳಿಗೆ ಮೊದಲು ಕೆಲ ಕಥೆ ಪುಸ್ತಕಗಳನ್ನು, ಮಹಾತ್ಮರ ಜೀವನ ಚರಿತ್ರೆಯನ್ನು , ಮಕ್ಕಳ ವಾರಪತ್ರಿಕೆ ತಂದು ಓದುವ ಹವ್ಯಾಸವನ್ನು ಬೆಳೆಸಬಹುದು, ಸಾದ್ಯವಾದರೆ ಸಣ್ಣ ಪುಟ್ಟ ಬರಹಗಳನ್ನು ಬರೆಯಲು ಸಹ ಪ್ರೇರೇಪಣೆ ನೀಡಬಹುದು.
ಕೊರೋನಾದೊಂದಿಗಿನ ಜೀವನದ ಈ ಸಮಯದಲ್ಲಿ ನಮ್ಮ ಜೀವ ,ಮತ್ತು ಜೀವನವನ್ನು ಉಳಿಸಿಕೊಳ್ಳಬೇಕಾದ ಈ ಪರ್ವ ಕಾಲದಲ್ಲಿ ಪೋಷಕರು ತಮ್ಮ ವೃತ್ತಿಯ ಕಡೆಗೆ ಗಮನ ಹರಿಸಬೇಕಾದ್ದು ಅಗತ್ಯವಾದರೂ ,ಶಾಲೆಗಳು ಮುಚ್ಚಿರುವ ಸಂಧರ್ಭದಲ್ಲಿ ಮನೆಯೇ ಶಾಲೆಯಾಗಿ ಕೆಲಸ ಮಾಡಬೇಕಿದೆ .ಆದ್ದರಿಂದ ಪೋಷಕರು ತಮ್ಮ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುತ್ತಲೇ ಇದುವರೆಗೆ ಕಲಿತ ಕಲಿಕೆ ಪುನರ್ಬಲನ ಹೊಂದುವ ಚಟುವಟಿಕೆಗಳನ್ನು ಹಮ್ಮಿಕೊಂಡು, ಮಕ್ಕಳ ಕ್ರಿಯಾಶೀಲತೆಯನ್ನು ಪ್ರೇರೇಪಿಸುವ ಚಟುವಟಿಕೆಗಳನ್ನು ಮನೆಯಲ್ಲಿ ಹಮ್ಮಿಕೊಳ್ಳುವ ಮೂಲಕ ನಮ್ಮ ದೇಶದ ಭಾವಿ ಪ್ರಜೆಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಪುಟ್ಟನ ಜಾತ್ರೆ
ಅಪ್ಪನ ಜೊತೆಯಲಿ ಜಾತ್ರೆಗೆ
ಹೋಗಿ ಗೊಂಬೆಗಳ ಕೊಳ್ಳುವೆನು
ಅವುಗಳ ಜೊತೆಯಲ್ಲಿ ಆಟವನಾಡಿ
ಸಂತಸ ಪಡೆಯುವೆನು.
ಕೀಲಿ ಕೊಟ್ಟರೆ ಡೋಲು ಬಡಿಯುವ
ಗೊಂಬೆಯ ಕೊಳ್ಳುವೆನು
ಕಿಟಿ ಕಿಟಿ ಸದ್ದನು ಮಾಡುವ
ಆಟಿಕೆ ಕೇಳುವೆನು.
ಗಾಳಿಯ ಊದುತ ಬೆರಳನು
ಒತ್ತುವ ಕೊಳಲು ಕೊಳ್ಳುವೆನು
ಮುಳ್ಳುಗಳಿದ್ದರೂ ಟಿಕ್ ಟಿಕ್
ಎನ್ನುವ ಗಡಿಯಾರ ಕೇಳುವೆನು
ಬಣ್ಣ ಬಣ್ಣದ ಬಸ್ಸು ಲಾರಿ
ಕಾರನು ಕೊಳ್ಳುವೆನು
ಗಾಳಿಯ ಊದಿದ ದೊಡ್ಡದಾದ
ಬಲೂನು ಕೊಳ್ಳುವೆನು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಜನನಿ ಜನ್ಮ ಭೂಮಿ*
ಜನನಿ ಜನ್ಮಭೂಮಿಯೆ
ಪರಮ ನೀಚರು ನಾವು
ಮಹಾ ಕೃತಘ್ನರು ನಾವು
ನೀಡಿಹೆವು ನಿನಗೆ ನೋವು
ನೀ ಮುನಿದರೆ ನಮಗೆ ಸಾವು
ಹೆಚ್ಚಾದರೂ ಅಡ್ಡಿಯಿಲ್ಲ ಬೇವು
ಕಡಿಮೆಯಾದರೂ ಇರಲಿ ಮಾವು
ನೀ ಉರಿದರೆ ಬಾಳುವುದೇಗೆ ನಾವು?
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
*ಹಾಯ್ಕುಗಳು*
(ಇಂದು ವಿಶ್ವ ಭೂಮಿ ದಿನ )
ವಿಶ್ವ ಭೂ ದಿನ
ಘೋಷಣೆಗಳು ಸಾಕು
ಗಿಡಬೆಳೆಸು
ಭೂಮಿ ಉಳಿಸಿ
ಇರುವುದೊಂದೇ ಭೂಮಿ
ಪ್ಲಾಸ್ಟಿಕ್ ಬೇಡ
ಜೀವ ಜಲವು
ಪೋಲೇಕೆ ಮಾಡುವಿರಿ?
ಇಂದೇ ಉಳಿಸಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಜೀವಿ_ಸಿಹಿಜೀವಿ*
ಇಗೋ ಕನ್ನಡ!
ಎಂದು ನಮಗೆ ತೋರಿ
ಕನ್ನಡಕೆ ಲಕ್ಷಾಂತರ
ಪದಗಳ ನೀಡಿದ
ಪದಗಾರುಡಿಗ
(ಜಿ. ವೆಂಕಟಸುಬ್ಬಯ್ಯ)
ಜೀವಿ|
ನಿಮ್ಮನೆಂದೂ ನೆನೆಯುವೆ
ನಾನು ಸಿಹಿಜೀವಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಜೀವನ ಎಂಬ ಪಯಣದಲ್ಲಿ ನಾವು ಮಾಡಿದ ಪಾಪಗಳು ನಮ್ಮ ಜೊತೆಗೇ ಪಯಣಿಸುತ್ತವೆ ನಮ್ಮನ್ನು ನುಂಗಲು|
ಶ್ರೀರಕ್ಷೆಯಾಗಿ ಸದಾ ನಮ್ಮನ್ನು ಕಾಯುತ್ತಿರುತ್ತವೆ ನಾವು ಮಾಡಿದ ಒಳ್ಳೆಯ ಕಾರ್ಯಗಳು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ವಿಶ್ವ ಪರಂಪರೆಯ ಸ್ಮಾರಕಗಳನ್ನು ಉಳಿಸಿ ಬೆಳೆಸೋಣ
ಇಂದು ವಿಶ್ವ ಪರಂಪರೆ ದಿನ (18/4/2021)ನಮ್ಮ ಹಿರಿಯರು ಪ್ರಪಂಚದ ವಿವಿಧ ಭಾಗಗಳಲ್ಲಿ ನಮ್ಮ ಸಂಸ್ಕೃತಿ, ಕಲೆ ವಾಸ್ತು ಶಿಲ್ಪ, ವನಸಂಪತ್ತು, ವನ್ಯ ಮೃಗಗಳು ಇತ್ಯಾದಿಗಳನ್ನು ಬಳಸಿ ಸಂರಕ್ಷಣೆ ಮಾಡುವ ಮೂಲಕ ನಮಗೆ ಹಸ್ತಾಂತರ ಮಾಡಿದ್ದಾರೆ .ಇದೇ ಕೆಲಸ ನಮ್ಮ ಮುಂದಿನ ಪೀಳಿಗೆಗೆ ನಾವು ಮಾಡಬೇಕಿದೆ.
ಅದಕ್ಕೆ ಜಗತ್ತಿನಲ್ಲಿ ವಿವಿಧ ದೇಶದ ಪರಂಪರೆಯ ತಾಣಗಳನ್ನು ಗುರ್ತಿಸಿ ಸಂರಕ್ಷಣಾ ಕಾರ್ಯವನ್ನು ಯುನೆಸ್ಕೋ ಮಾಡಿಕೊಂಡು ಬರುತ್ತಿದೆ.
ವಿಶ್ವ ಪರಂಪರೆಯ ತಾಣವೆಂದರೆ ಯುನೆಸ್ಕೋ ತನ್ನ ವಿಶೇಷ ಸಾಂಸ್ಕೃತಿಕ ಅಥವಾ ಭೌತಿಕ ಮಹತ್ವಕ್ಕಾಗಿ ಪಟ್ಟಿಮಾಡಿದ ಸ್ಥಳವಾಗಿದೆ. ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಯುನೆಸ್ಕೋ ವಿಶ್ವ ಪರಂಪರೆಯ ಸಮಿತಿಯು ನಿರ್ವಹಿಸುವ ಅಂತರರಾಷ್ಟ್ರೀಯ 'ವಿಶ್ವ ಪರಂಪರೆ ಕಾರ್ಯಕ್ರಮ' ನಿರ್ವಹಿಸುತ್ತದೆ.
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಮಾನವೀಯತೆಗೆ ಮಹೋನ್ನತ ಮೌಲ್ಯವೆಂದು ಪರಿಗಣಿಸಲ್ಪಟ್ಟ ವಿಶ್ವದಾದ್ಯಂತ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ಗುರುತಿಸುವಿಕೆ, ರಕ್ಷಣೆ ಮತ್ತು ಸಂರಕ್ಷಣೆಯ ಕಾರ್ಯ ಮಾಡುತ್ತಿದೆ.
1972 ರಲ್ಲಿ ಯುನೆಸ್ಕೋ ಅಂಗೀಕರಿಸಿದ ವಿಶ್ವ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದ ಕನ್ವೆನ್ಷನ್ ಎಂಬ ಅಂತರರಾಷ್ಟ್ರೀಯ ಒಪ್ಪಂದದ ಪ್ರಕಾರ ಈ ತಾಣಗಳನ್ನು ಗುರ್ತಿಸಿದೆ.
ಪ್ರಸ್ತುತ ಪ್ರಪಂಚದಲ್ಲಿ, 1121ವಿಶ್ವ ಪರಂಪರೆಯ ತಾಣಗಳಿವೆ. ಅವುಗಳನ್ನು 869 ಸಾಂಸ್ಕೃತಿಕ, 213ನೈಸರ್ಗಿಕ ಮತ್ತು 39 ಮಿಶ್ರ ತಾಣಗಳು ಎಂದು ವಿಂಗಡಿಸಿದೆ
ಇಟಲಿ ದೇಶದಲ್ಲಿ ಅತಿ ಹೆಚ್ಚು ಪಾರಂಪರಿಕ ತಾಣಗಳಿವೆ.
ಭಾರತವು 38 ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ, ಇದರಲ್ಲಿ 30 ಸಾಂಸ್ಕೃತಿಕ ಗುಣಲಕ್ಷಣಗಳು, 7 ನೈಸರ್ಗಿಕ ಗುಣಲಕ್ಷಣಗಳು ಮತ್ತು 1 ಮಿಶ್ರ ತಾಣಗಳಿವೆ.
ಭಾರತದಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು
ಭಾರತವು ತನ್ನದೇ ವಿಶಿಷ್ಟವಾದ ಪರಂಪರೆಯನ್ನು ಹೊಂದಿರುವುದಕ್ಕೆ ಭಾರತೀಯರಾದ ನಮಗೆ ಹೆಮ್ಮೆ ಇದೆ. ನಮ್ಮ ದೇಶದಲ್ಲಿ ವಿಶಿಷ್ಟವಾದ ಕಟ್ಟಡಗಳಿವೆ ,ಬೆರಗುಗೊಳಿಸುವ ಸಂಖ್ಯೆಯ ಸ್ಥಳಗಳು ಮತ್ತು ಸ್ಮಾರಕಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಭಾರತವು ವಿಶ್ವ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ.
ನಮ್ಮಲ್ಲಿ ಪ್ರಾಕೃತಿಕ ಪರಂಪರೆಯ ಜೊತೆಗೆ ನೈಸರ್ಗಿಕ ಮತ್ತು ವನ್ಯಜೀವಿ ಪರಂಪರೆಯನ್ನು ಸಹ ಹೊಂದಿದೆ. ಸುಂದರ್‌ಬನ್ ರಾಷ್ಟ್ರೀಯ ಉದ್ಯಾನವನದಲ್ಲಿ ಮೊಸಳೆಗಳ ತೇಲುವಿಕೆಯಿಂದ ಹಿಡಿದು ನಂದಾ ದೇವಿ ಬಯೋಸ್ಫಿಯರ್ ರಿಸರ್ವ್‌ನಲ್ಲಿರುವ ಹಿಮ ಚಿರತೆಗಳ ಮನೆಯವರೆಗೆ, ಭವ್ಯವಾದ ಮನಸ್ ವನ್ಯಜೀವಿ ಅಭಯಾರಣ್ಯದಿಂದ ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ ಮತ್ತು ಕಾಜಿರಂಗ ರಾಷ್ಟ್ರೀಯ ಉದ್ಯಾನವನದವರೆಗೆ ಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ ಪರಂಪರೆಯನ್ನು ಹೊಂದಿದೆ. ಕೆಂಪು ರೋಡೋಡೆಂಡ್ರನ್‌ಗಳಿಂದ ಹಿಡಿದು ನೀಲಕುರಿಂಜಿಯವರೆಗೆ 12 ವರ್ಷಗಳಿಗೊಮ್ಮೆ ಅರಳುವ ಮತ್ತು ಮೂನ್‌ಸ್ಕೇಪ್ ಲಡಾಖ್‌ನಿಂದ ನದಿ ದ್ವೀಪ ಮಜುಲಿ ವನ್ಯಜೀವಿ ಮತ್ತು ಕೆಲಿಡೋಸ್ಕೋಪ್ ವನ್ಯಜೀವಿ ಮತ್ತು ನೈಸರ್ಗಿಕ ಪ್ರದೇಶಗಳವರೆಗೆ ಸೊಂಪಾದ ಸಸ್ಯವರ್ಗ ಮತ್ತು ಅದರ ಸುತ್ತಲಿನ ಭೂದೃಶ್ಯವು ದೇಶದ ಪ್ರಮುಖ ಆಕರ್ಷಣೆಯಾಗಿದೆ.
ಭಾರತದಲ್ಲಿ ಹಲವಾರು ರಾಜಮನೆತನಗಳು ಕಲೆ, ಸಂಗೀತ, ನೃತ್ಯ ಮತ್ತು ಸಾಹಿತ್ಯದಂತಹ ಸೃಜನಶೀಲ ಅಂಶಗಳಿಗೆ ಪ್ರೋತ್ಸಾಹ ನೀಡಿದ ಫಲವಾಗಿ ಈ ರೀತಿಯ ಸ್ಮಾರಕಗಳು ಹೆಚ್ಚು ಇವೆ . ಮತ್ತೊಂದೆಡೆ, ಕರಕುಶಲ ವಸ್ತುಗಳು, ಧರ್ಮ, ಪದ್ಧತಿಗಳು, ಸಂಪ್ರದಾಯಗಳು, ನಂಬಿಕೆಗಳು, ತತ್ವಶಾಸ್ತ್ರ, ಇತಿಹಾಸ, ಆರೋಗ್ಯ, ಪ್ರಯಾಣ, ಪಾಕಪದ್ಧತಿ, ಸ್ಮಾರಕಗಳು, ಸಾಹಿತ್ಯ, ಚಿತ್ರಕಲೆ ಮತ್ತು ಭಾಷೆಗಳು,ಬಹು ಸಂಸ್ಕೃತಿಗಳು ಸಹ ತಮ್ಮದೇ ಆದ ಕೊಡುಗೆ ನೀಡಿವೆ.
ವಿಶ್ವಪ್ರಸಿದ್ಧ ತಾಜ್‌ಮಹಲ್‌ನಿಂದ ಹಿಡಿದು ಸೃಜನಶೀಲ ಪ್ರತಿಭೆ ಖಜುರಾಹೊ ದೇವಾಲಯದವರೆಗೆ, ವಾಸ್ತುಶಿಲ್ಪದ ಅಭಿರುಚಿಯ ಶಕ್ತಿಯು ಭಾರತೀಯ ಸಂಸ್ಕೃತಿ ಮತ್ತು ಭೂದೃಶ್ಯದೊಂದಿಗೆ ಸಂಯೋಜಿಸಲ್ಪಟ್ಟಿದೆ. ಕೊನಾರ್ಕ್‌ನ ಸೂರ್ಯ ದೇವಾಲಯ ಮತ್ತು ತಂಜಾವೂರಿನ ಬೃಹದೇಶ್ವರ ದೇವಾಲಯದಂತಹ ಸುಂದರವಾಗಿ ಕೆತ್ತಿದ ದೇವಾಲಯಗಳು ಪ್ರವಾಸಿಗರಿಗೆ ಸುಂದರ ಅನುಭವ ನೀಡುತ್ತವೆ.
ಕರ್ನಾಟಕದ ಹಂಪೆ ಮತ್ತು ಪಟ್ಟದ ಕಲ್ಲಿನ ಸ್ಮಾರಕಗಳ ಚೆಲುವನ್ನು ನಾವೂ ನೋಡಿಯೇ ಸವಿಯಬೇಕು.
ವಿಶ್ವ ಪರಂಪರೆಯ ತಾಣಗಳ ಕೆಲವು ವೈಶಿಷ್ಟ್ಯಗಳು
ಜೆಕ್ ಗಣರಾಜ್ಯದ ಓಲೊಮೌಕ್‌ನಲ್ಲಿರುವ ಹೋಲಿ ಟ್ರಿನಿಟಿ ಕಾಲಮ್ ಅತ್ಯಂತ ಚಿಕ್ಕ ವಿಶ್ವ ಪರಂಪರೆಯ ತಾಣವಾಗಿದೆ, ಇದು 200ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. 52 ಸೆಕೆಂಡುಗಳಲ್ಲಿ ಮತ್ತು ನಡೆಯುತ್ತಲೇ ಈ ಸ್ಮಾರಕವನ್ನು ವೀಕ್ಷಿಸಬಹುದು.
ವಿಶ್ವ ಪರಂಪರೆಯ ಪಟ್ಟಿಯಲ್ಲಿ ಅತಿ ಹೆಚ್ಚು ಶೇಕಡಾವಾರು ಪ್ರದೇಶವನ್ನು ಹೊಂದಿರುವ ದೇಶ ವ್ಯಾಟಿಕನ್ ನಗರ, ಇದು 100% ಕ್ಕಿಂತ ಹೆಚ್ಚು. ಇದು 100% ಕ್ಕಿಂತ ಹೆಚ್ಚಿರುವ ಕಾರಣವೆಂದರೆ ಅವುಗಳು ನಿಜವಾಗಿ ಎರಡು ವಿಶ್ವ ಪರಂಪರೆಯ ತಾಣಗಳನ್ನು ಹೊಂದಿವೆ. ಒಂದು ವ್ಯಾಟಿಕನ್ ನಗರ ಮತ್ತು ಇನ್ನೊಂದು ರೋಮ್ ನ ಐತಿಹಾಸಿಕ ಕೇಂದ್ರ,
ಅತಿ ಹೆಚ್ಚು ಭೇಟಿ ನೀಡಿದ ವಿಶ್ವ ಪರಂಪರೆಯ ತಾಣವೆಂದರೆ ಪ್ಯಾರಿಸ್, ಬ್ಯಾಂಕ್ಸ್ ಆಫ್ ದಿ ಸೀನ್, ಇದು ವಿಶ್ವದ ಮೂರನೇ ಅತಿ ಹೆಚ್ಚು ಭೇಟಿ ನೀಡಿದ ನಗರವಾಗಿದೆ.
ಮಹಿಳೆಯರಿಗೆ ಮಾತ್ರ ಸೀಮಿತವಾದ ಎರಡು ತಾಣಗಳಿವೆ: ಜಪಾನ್‌ನ ಒಕಿನೋಶಿಮಾ ದ್ವೀಪ ಮತ್ತು ಗ್ರೀಸ್‌ನ ಮೌತ್ ಅಥೋಸ್. ಎರಡೂ ಧಾರ್ಮಿಕ ಸಮುದಾಯಗಳು, ಅದು ಪುರುಷರಿಗೆ ಮಾತ್ರ.
ಒಂದು ಸಮೀಕ್ಷೆ ಪ್ರಕಾರ ಪ್ರಸ್ತುತ 54 ವಿಶ್ವ ಪರಂಪರೆಯ ತಾಣಗಳು "ಅಪಾಯದಲ್ಲಿವೆ" ಎಂದು ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ 38 ಸಾಂಸ್ಕೃತಿಕ ಮತ್ತು 16 ನೈಸರ್ಗಿಕ ತಾಣಗಳು ಸೇರಿವೆ.
ಈ ತಾಣಗಳನ್ನು ಉಳಿಸಿ ಬೆಳೆಸಲು ಯುನೆಸ್ಕೋ ಜೊತೆಗೆ ಎಲ್ಲಾ ದೇಶಗಳಲ್ಲಿಯ ಪ್ರಜೆಗಳು ಪಣ ತೊಡಬೇಕಿದೆ.ನಮ್ಮ ಭವ್ಯ ಸಂಸ್ಕೃತಿ, ಇತಿಹಾಸ, ಕಲೆ ವಾಸ್ತುಶಿಲ್ಪದ ಬಗ್ಗೆ ಮುಂದಿನ ಪೀಳಿಗೆಯವರು ಹೆಮ್ಮೆ ಪಡುವಂತೆ ಮಾಡಬೇಕಿದೆ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಸಂಗಮ*
ಓ ನನ್ನ ನಲ್ಲೆ
ನೀನು ಬಿಸಿಲು,
ನಾನು ಮಳೆ ,
ಎಂದು ಏಕೆ
ಓಡುವೆ ನಿಲ್ಲು|
ಎರಡೂ ಸೇರಲು
ಆಗುವುದು
ಮಳೆಬಿಲ್ಲು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕುಂಚ .ಪ್ರಪಂಚ
ಕಲಾವಿದರು ಕೈಯಲ್ಲಿ
ಹಿಡಿದರೆ ಕುಂಚ|
ತೋರಿಸುವರು
ನಾವು ಕಾಣದ
ಸುಂದರ ಪ್ರಪಂಚ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
೧
*ನಮನ*
ಭಾವನೆಗಳನು ಹೊರಸೂಸಲು
ಚಿತ್ತಾರ ಬಿಡಿಸಿ
ಚಿತ್ರಗಳಿಗೆ ಬಣ್ಣಗಳ ಪೂಸಿ
ಬರೆದ ಚಿತ್ರಗಳು ಸೆಳೆಯುವವು
ನಮ್ಮ ಮನ|
ಚಿತ್ರ ಬರೆವ ಚಿತ್ರಕಲಾವಿದರೆ
ನಿಮಗಿದೋ ನಮ್ಮ ನಮನ||
ಬದುಕು
ಬೇವು ಬೆಲ್ಲದಂತೆ ಬದುಕು
ಉತ್ತಮರ ಮಾರ್ಗದಲಿ ಬದುಕು
ಏಳು ಬೀಳುಗಳಿದ್ದರೂ ಬದುಕು
ನಾವು ನಾವಾಗಿದ್ದಾಗ ಮಾತ್ರ
ಸುಂದರ ಈ ಬದುಕು
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಹೊಸ ವರುಷ*
ಹರುಷ ತರಲಿ ನಮಗೆ
ಹೊಸ ವರುಷ
ತ್ಯಜಿಸೋಣ ದ್ವೇಷ
ಕಳಚೋಣ ಕೆಟ್ಟ ವೇಷ|
ಮಾಡೋಣ ಒಳ್ಳೆಯ
ಗುಣಗಳ, ಒಳ್ಳೆಯವರ
ಸತ್ಸಂಗ ಸಮಾವೇಶ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಲಸಿಕೆ*
ಆಧಾರವಿಲ್ಲದ ವದಂತಿಗಳನ್ನು
ನಂಬಿ ಮುಂಜಾಗ್ರತಾ ಕ್ರಮಕ್ಕೆ
ಏಕೆ ಹಿಂಜರಿಕೆ|
ನಮ್ಮ ಜೀವ ಮತ್ತು
ಜೀವನವನ್ನು ಉಳಿಸಿಕೊಳ್ಳಲು
ಇಂದೇ ಹಾಕಿಸಿಕೊಳ್ಳೋಣ
ಕೊರೋನ ಲಸಿಕೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಮಾದರಿ ಮಾನವ*
ನಾವೂ ಮಾದರಿ
ಮಾನವನಾಗಬೇಕಾದರೆ
ಯಜಮಾನನಾಗಿದ್ದರೂ
ಇರಬೇಕು
ಕ್ಷಮಾಗುಣ|
ಬಡವನಾಗಿದ್ದರೂ
ಇರಬೇಕು
ದಾನಗುಣ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಬರ?*
ರೈತರ ಉತ್ಪನ್ನಗಳಿಗೆ
ಬೆಲೆ ಕಡಿಮೆ
ಈಗ ಗಾಯದ ಮೇಲೆ ಬರೆ
ಗಗನ ಮುಖಿಯಾಗಿದೆ
ರಸಗೊಬ್ಬರ|
ಹೀಗೆ ಮುಂದುವರೆದರೆ
ಕೃಷಿಕ ಕೃಷವಾಗಿ
ಎದುರಿಸಬೇಕಾಗಬಹುದು
ಆಹಾರದ ಬರ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕಷ್ಟ ಪಟ್ಟಾದರೂ,
ಪ್ರೀತಿ ಕೊಟ್ಟಾದರೂ
ಉಳಿಸಿಕೊಳ್ಳಬೇಕು|
ಕೆಟ್ಟ ಸಂಬಂಧಗಳನ್ನು
ಮೌನವಾಗಿದ್ದುಕೊಂಡು
ಕಳೆದುಕೊಳ್ಳಬೇಕು||
*ಸೀ ರಿಯಲ್*√
ದಿನಕ್ಕೊಂದು ತಿರುವು
ಪಡೆಯುತಾ ಸೀಡಿ
ಪ್ರಕರಣ ಆಗುತ್ತಿದೆ
ಮಾಹಾ ಸೀರಿಯಲ್|
ತಲೆ ಕೆರೆದುಕೊಳ್ಳುತ್ತಿರವ
ಸಾಮನ್ಯ ಪ್ರಶ್ನಿಸುವಂತಾಗಿದೆ
ಯಾವುದು ರಿಯಲ್||
*ಸಿಹಿಜೀವಿ*
*ಹಬ್ಬ ಬಾರದು?*
ಜಾತ್ರೆ, ಹಬ್ಬ ,ಸಮಾವೇಶದ
ಹೆಸರಲ್ಲಿ ಜನ ಸೇರಿ
ಕೊರೋನಾ ಹಬ್ಬಬಾರದು|
ಹೀಗೆಯೇ ನಾವೆಲ್ಲರೂ
ಬೇಜವಾಬ್ದಾರಿಯಿಂದ ವರ್ತಿಸಿದರೆ
ನಮಗೆ ಮುಂದಿನ ಬಾರಿ
ಶಾಶ್ವತವಾಗಿ ಹಬ್ಬ ಬಾರದು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸ ವಿ ಲ್ಯಾಬ್ ಸೃಷ್ಟಿಕರ್ತ ಮಲ್ಲಿಕಾರ್ಜುನ್*
ಓರ್ವ ಕ್ರಿಯಾಶೀಲ ಶಿಕ್ಷಕ ಮನಸು ಮಾಡಿದರೆ ಸಾಮಾನ್ಯ ಶಾಲಾಕೊಠಡಿಯನ್ನು ಡಿಜಿಟಲ್ ಕ್ಲಾಸ್ ಆಗಿ ಪರಿವರ್ತಿಸಬಲ್ಲ ತನ್ಮೂಲಕ ಸಮಾಜ ವಿಜ್ಞಾನ ವಿಷಯವನ್ನು ಆಸಕ್ತಿದಾಯಕವಾಗಿ ಕಲಿಸಬಲ್ಲ ಎಂಬುದಕ್ಕೆ ಉದಾಹರಣೆ
ಮಲ್ಲಿಕಾರ್ಜುನ ಸ್ವಾಮಿ ಟಿ ಎಮ್ ಚಿತ್ರದುರ್ಗ ಜಿಲ್ಲೆಯ ಚವಲಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಮಾತುಗಳಲ್ಲೇ ಹೇಳುವುದಾದರೆ
"ನಾನು ಇಷ್ಟ ಪಟ್ಟು ಬಂದ ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಗೆ ಸಂತಸದಾಯಕ ಮತ್ತು ಪರಿಣಾಮಕಾರಿಯಾಗಿ ಬೋಧಿಸುವ ಪಣ ತೊಟ್ಟ ನಾನು ಹಲವಾರು ಚಟುವಟಿಕೆಗಳನ್ನು ಮತ್ತು ತಂತ್ರಜ್ಞಾನವನ್ನು ನನ್ನ ಬೋಧನೆಯಲ್ಲಿ ಅಳವಡಿಸಿಕೊಂಡು ಕಲಿಸುವ ಕಾಯಕ ಮುಂದುವರೆಸಿದೆ , ಫಲಿತಾಂಶಗಳು ಅಚ್ಚರಿದಾಯಕವಾಗಿ ಮಕ್ಕಳು ಖುಷಿಯಿಂದ ಕಲಿಕೆಯಲ್ಲಿ ತೊಡಗಿದರು ಹಿತೈಷಿಗಳು, ಸ್ನೇಹಿತರು, ಇಲಾಖೆಯ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಾ ಬಂದರು ಅದರ ಪರಿಣಾಮವಾಗಿ ಡಿಜಿಟಲ್ ಕ್ಲಾಸ್ ಆರಂಭ, ನನ್ನ ಶಾಲೆಯ ಒಂದು ಬ್ಲಾಗ್, ನನ್ನದೆ ಒಂದು ಬ್ಲಾಗ್ ಮತ್ತು ಸಮಾಜ ವಿಜ್ಞಾನ ಲ್ಯಾಬ್ ಸ್ಥಾಪನೆ." ಎನ್ನುತ್ತಾರೆ ಯುವ ಶಿಕ್ಷಕರು.
ಸಮಾನ ಮನಸ್ಕ ಸ್ನೇಹಿತರು ಸೇರಿಕೊಂಡು ಸಮಾಜ ವಿಜ್ಞಾನ ಡಿಜಿಟಲ್ ಬ್ಲಾಗ್ ಎಂಬ ಬ್ಲಾಗ್ ರಚನೆಯಲ್ಲಿ ಸಮಾಜ ವಿಜ್ಞಾನ ಪಾಠಗಳಿಗೆ ಪಿ ಪಿ ಟಿ , ರಸಪ್ರಶ್ನೆ ಪಿ ಪಿ ಟಿ ರಚನೆ ಮಾಡುವ ಮೂಲಕ ಅವುಗಳನ್ನು ತಮ್ಮ ಶಾಲೆಯಲ್ಲಿ ಹೊಸದಾಗಿ ಸ್ಥಾಪಿತವಾದ ಡಿಜಿಟಲ್ ಕ್ಲಾಸ್ ನಲ್ಲಿ ಮಕ್ಕಳಿಗೆ ತೋರಿಸುತ್ತಾ ಅಮೂರ್ತ ಪರಿಕಲ್ಪನೆಗಳು ಮಕ್ಕಳಿಗೆ ಮನಮುಟ್ಟುವಂತೆ ಬೋದನೆ ಮಾಡುವಲ್ಲಿ ಶ್ರೀ ಮಲ್ಲಿಕಾರ್ಜುನ್ ರವರು ಸಿದ್ದಹಸ್ತರು .
ಲ್ಯಾಬ್ ಎಂದರೆ ಕೇವಲ ಭೌತಶಾಸ್ತ್ರ ರಸಾಯನಶಾಸ್ತ್ರ, ಮುಂತಾದ ವಿಜ್ಞಾನ ವಿಷಯಗಳಿಗಾಗಿ ಎಂಬ ತಪ್ಪು ಕಲ್ಪನೆ ಹೋಗಲಾಡಿಸಲು ಚವಲಿಹಳ್ಳಿ ಗೊಲ್ಲರ ಹಟ್ಟಿ ಪ್ರೌಢಶಾಲೆಯಲ್ಲಿ "ಸಮಾಜ ವಿಜ್ಞಾನ ಲ್ಯಾಬ್ " ಆರಂಭ ಮಾಡುವ ಮನಸ್ಸು ಮಾಡಿ ಈಗ ಒಂದು ಸುಸಜ್ಜಿತವಾದ ಸಮಾಜ ವಿಜ್ಞಾನ ಲ್ಯಾಬ್ ಮಾಡಿರುವರು .ಅದರ ಬಗ್ಗೆ ಮಾಡಿರುವ ಪರಿಚಯದ ವೀಡಿಯೋ ಪೇಸ್ ಬುಕ್ ನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರ ವೀಕ್ಷಿಸಿ ಮೆಚ್ಚುಗೆ ಸೂಚಿಸಿರುವರು.
ಸಮಾಜ ವಿಜ್ಞಾನ ಲ್ಯಾಬ್ ನಲ್ಲಿ ಏನಿದೆ?
ಸಮಾಜ ವಿಜ್ಞಾನ ಲ್ಯಾಬ್ ನಲ್ಲಿ ನಾವು ಕಾಲಿಡುತ್ತಿದ್ದಂತೆ ನಮಗೆ ಕಾಲರೇಖೆಯ ದರ್ಶನಾವಗುವುದು. ಇದರ ಜೊತೆಗೆ ,ಕರ್ನಾಟಕ, ಭಾರತದ, ಮತ್ತು ಪ್ರಪಂಚದ ಇತಿಹಾಸ, ರಾಜಕೀಯ, ಭೂಗೋಳದ ಪರಿಚಯದೊಂದಿಗೆ ಒಂದು ವಿಭಿನ್ನವಾದ ಲೋಕಕ್ಕೆ ತೆರಳಿ ಅಪೂರ್ವ ಜ್ಞಾನವನ್ನು ಪಡೆದ ಅನುಭವ ನೋಡಿದವರಿಗೆ ಖಂಡಿತವಾಗಿ ಸಿಗುವುದು.
ಕ್ರಿ.ಪೂ ದಿಂದ ಆರಂಭವಾಗುವ ಕಾಲ ರೇಖೆಯಲ್ಲಿ ಮಧ್ಯಕಾಲದ, ಮತ್ತು ಆಧುನಿಕ ಇತಿಹಾಸದ ಕೆಲವು ಪ್ರಮುಖ ಘಟನೆಗಳು ಚಿತ್ರಗಳ ಮೂಲಕ ನೋಡುಗರ ಮನ ಸೆಳೆಯುತ್ತವೆ,
ಎಂಟನೆಯ ತರಗತಿಯ ಮೌರ್ಯರು, ಕುಷಾನರು , ಗುಪ್ತರು, ವರ್ಧನರು ಮುಂತಾದ ಸಾಮ್ರಾಜ್ಯಗಳ ಬಗ್ಗೆ ವಿವರಗಳನ್ನು ಹೊಂದಿರುವ ಚಾರ್ಟ್ ಗಳ ಪ್ರದರ್ಶನ ಮಾಡಲಾಗಿದೆ.
ಮುಂದುವರೆದು ಭಾರತದ ರಾಜಕೀಯ ಜ್ಞಾನವನ್ನು ವೃಧ್ದಿಸುವ ಪ್ರಯತ್ನವಾಗಿ ಭಾರತದ ರಾಷ್ಟ್ರಪತಿಗಳು, ಭಾರತದ ಪ್ರಧಾನ ಮಂತ್ರಿಗಳು, ಸಂವಿಧಾನದ ಪೂರ್ವ ಪೀಠಿಕೆ, ಸಂವಿಧಾನ ರಚನಾ ಸಭೆ, ಮತ್ತು ಪ್ರಮುಖ ನಾಯಕರ ಪರಿಚಯದ ಚಾರ್ಟ್ ಮತ್ತು ಮಾಹಿತಿಯನ್ನು ಪ್ರದರ್ಶನ ಮಾಡಲಾಗಿದೆ.
ಭಾರತದ ರಾಷ್ಟ್ರೀಯ ಲಾಂಛನ ,ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಪಕ್ಷಿ ,ರಾಷ್ಟ್ರೀಯ ಮರ ಮುಂತಾದವುಗಳ ಬಗ್ಗೆ ಚಿತ್ರ ಸಮೇತ ವಿವರಗಳು ನೋಡುಗರಿಗೆ ಉತ್ತಮ ಮಾಹಿತಿಯನ್ನು ನೀಡುತ್ತವೆ.
ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕಲೆ ಮತ್ತು ವಾಸ್ತು ಶಿಲ್ಪದ ಚಿತ್ರಗಳಲ್ಲಿ ವಿಜಯನಗರ, ಹಳೇಬೀಡು, ಬಾದಾಮಿ,ಐಹೊಳೆ ಪಟ್ಟದಕಲ್ಲು, ಆಗ್ರಾ ಮುಂತಾದ ಕಡೆಗಳಲ್ಲಿಯ ಚಿತ್ರಗಳು ಲ್ಯಾಬ್ ನ ಗೋಡೆಯಲ್ಲಿ ಅಲಂಕೃತಗೊಂಡು ವಿದ್ಯಾರ್ಥಿಗಳ ಮತ್ತು ನೋಡುಗರ ಕಣ್ಮನ ಸೆಳೆಯುತ್ತಿವೆ.
ವಿವಿಧ ದೇಶಗಳ ರಾಷ್ಟ್ರಧ್ವಜ ಗಳು ,ಭಾರತವನ್ನು ಆಳಿದ ಪ್ರಮುಖವಾದ ರಾಜಮನೆತನದ ವಂಶವೃಕ್ಷಗಳು, ಭಾರತಕ್ಕೆ ಆಗಮಿಸಿದ ಯುರೋಪಿಯನ್ನರ ಮಾಹಿತಿ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ , ಮತ್ತು ಗಾಂಧಿಯುಗದ ಚಿತ್ರಸಹಿತ ಇತಿಹಾಸ ಬಣ್ಣ ಬಣ್ಣದ ಚಿತ್ರ ಪಟಗಳು ನಮಗೆ ಇತಿಹಾಸದ ಪಾಠವನ್ನು ಹೇಳುತ್ತವೆ.
ಕೋವಿಡ್ ೧೯ ರ ಸಂಕಷ್ಟ ಕಾಲದಲ್ಲಿ ಶಾಲೆಗಳು ಮುಚ್ಚಿದಾಗ ಚಂದನ ವಾಹಿನಿಯಲ್ಲಿ ಪ್ರಸಾರವಾದ ಎಲ್ಲಾ ವಿಷಯಗಳ ಪಾಠಗಳನ್ನು ಮಕ್ಕಳಿಗೆ ತಲುಪಿಸಲು ತರಗತಿವಾರು ವಾಟ್ಸಪ್ ಗುಂಪು ಮಾಡಿ ಮಕ್ಕಳಿಗೆ ವೀಡಿಯೋ ಪಾಠಗಳನ್ನು ತಲುಪಿಸಲು ಪ್ರಯತ್ನ ಮಾಡಲಾಗಿದೆ, ಆಯಾ ತರಗತಿಯ ವೀಡಿಯೋ ಪಾಠಗಳ ಲಿಂಕ್ ಗಳನ್ನು ಅವರ ಬ್ಲಾಗ್ ನಲ್ಲಿ ಶೇರ್ ಮಾಡಿ ಸುಮಾರು 5 ಲಕ್ಷ ಕ್ಕು ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿರುವುದು ಅವರ ಬದ್ದತೆಗೆ ಸಾಕ್ಷಿಯಾಗಿದೆ.
ಈ ರೀತಿಯಲ್ಲಿ ಮಕ್ಕಳ ಕಲಿಕೆಯು ಸಂತಸದಾಯಕವಾಗಿಸಲು ಹಲವಾರು ಹೊಸ ಉಪಕ್ರಮಗಳನ್ನು ಅಳವಡಿಸಿಕೊಂಡು ಬೋಧಿಸುವ ಅವರ ಕಾರ್ಯ ನಿರಂತರ ವಾಗಿರಲಿ ಇದಕ್ಕೆ ಇಲಾಖೆಯ ಅಧಿಕಾರಿಗಳು, ಹಿತೈಷಿಗಳು, ಸ್ನೇಹಿತರು ನೀಡಿದ ಸಹಕಾರವನ್ನು ಅವರು ಈ ಸಂಧರ್ಭದಲ್ಲಿ ತುಂಬ ಹೃದಯದಿಂದ ಸ್ಮರಿಸುತ್ತಾರೆ.
ಇಂತಹ ಶಿಕ್ಷಕರು ಹೆಚ್ಚಾಗಲಿ ಎಂದು ಆಶಿಸುತ್ತಾ
ಬನ್ನಿ ಸ್ನೇಹಿತರೆ ಎಲ್ಲರೂ ಸೇರಿ ಶಾಲೆಗಳನ್ನು ಗುಣಾತ್ಮಕ ಕಲಿಕೆಯನ್ನು ಉಂಟುಮಾಡುವ ತಾಣಗಳನ್ನಾಗಿ ಮಾಡೋಣ , ಶಿಕ್ಷಣವೇ ಶಕ್ತಿ ಎಂದು ತೋರೋಣ.
ಶಿಕ್ಷಕರಾದ ಮಲ್ಲಿಕಾರ್ಜುನ್ ಟಿ ಎಮ್ ರವರ ಬಗ್ಗೆ ತಿಳಿಯಲು ಅವರ ಈ ಬ್ಲಾಗ್ ವಿಳಾಸಕ್ಕೆ ಭೇಟಿ ನೀಡಿ
https://socialsciencetm.blogspot.com/
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ.
ಕ್ಯಾತ್ಸಂದ್ರ
*ನಾನು ಮಾನವ*
ಜಗವೇ ನನ್ನ ಕಾಲ ಕೆಳಗಿರಬೇಕು
ಎಲ್ಲರೂ ನನ್ನ ಅಡಿಯಾಳಾಗಿರಬೇಕು
ಜಗದೆಲ್ಲಾ ಸುಖ ನನಗೇ ದಕ್ಕಬೇಕು
ನನ್ನ ಸಂತತಿಗೆ ಎಲ್ಲಾ ಸೇರಬೇಕು.
ಯಾರಾದರೂ ಮೇಲೇರಿದರೆ
ಅವರನ್ನು ಕೆಳಗೆಳೆಯದೇ ಬಿಡೆನು
ಮತ್ಸರ ನನ್ನ ರಕ್ತಗತವಾಗಿದೆ
ನನ್ನ ಕೆಣಕಿದರೆ ಮಾಡುವೆ ಹತ.
ಈ ಭುವಿಯೂ ನನದೇ
ಇತರೆ ಜೀವಿಗಳು ನಾನಾದ ಮೇಲೆ
ನೀರು ,ಗಾಳಿ ಕಾಡು ನನ್ನ ಸ್ವಂತ
ನಾನೇ ಸ್ವಘೋಷಿತ ಭಗವಂತ
ನಾನಳಿದರೂ ನನಗಿಲ್ಲ ಚಿಂತೆ
'ನಾನು' ಎಂದಿಗೂ ಹೋಗುವುದಿಲ್ಲ
ಏಕೆಂದರೆ "ನಾನು" ಮಾನವ
ನರರೂಪದ ದಾನವ !
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಬದಲಾಗು*
ಇನ್ನೂ ಸುಂದರವಾಗಿ
ಕಾಣಬೇಕೆಂಬ ಹಂಬಲದಿ
ಮುಖವನೇಕೆ ಬದಲಾಯಿಸುವೆ?
ನಿನ್ನನ್ನೇ ನೀ
ಸರಿಯಾಗಿ ನೋಡು|
ನೀನಿರುವುದೇ ಸುಂದರ
ಮೊದಲು
ಬದಲಾವಣೆಯ ಕಡೆ
ಮುಖ ಮಾಡು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸಿಹಿಜೀವಿಯ ವಚನ*
ಸತತ ಮಾತನಾಡುವರೊಂದಿಗೆ
ರಹಸ್ಯ ಹೇಳಬೇಡ
ವಾದಿಸುವವರೊಂದಿಗೆ
ಪ್ರತಿ ವಾದ ಮಾಡಬೇಡ
ಬುದ್ಧಿವಂತರೊಂದಿಗೆ
ಸ್ಪರ್ಧೆಗಿಳಿಯಬೇಡ
ಎಲ್ಲಬಿಟ್ಟವರೊಂದಿಗೆ
ಜಗಳವಾಡಬೇಡೆಂದ ಸಿಹಿಜೀವಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ