ಲೇಖನ ೪೫
*ಕರೋನಾ ಕಾಲದಲ್ಲಿ ಮಕ್ಕಳ ಪೋಷಕರೇನು ಮಾಡಬೇಕು*
ಇಂದು ಕರೋನ ದಂತಹ ವೈರಾಣು ಪ್ರಪಂಚದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡು ತನ್ನ ಕಬಂಧ ಬಾಹುಗಳನ್ನು ವಿಸ್ತರಣೆ ಮಾಡಿಕೊಂಡು ಅಟ್ಟಹಾಸಗೈಯುತ್ತಾ, ನಮಗೆ ಭಯವನ್ನು ಉಂಟು ಮಾಡಿದ್ದರೆ ಅದಕ್ಕೆ ನೂರಾರು ಕಾರಣಗಳನ್ನು ನೀಡಬಹುದಾದರೂ ಇಂದಿನ ಜನರಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆ ಇರುವುದು ಸಹಾ ಒಂದು ಅಂಶ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇದಕ್ಕೆ ನಮ್ಮ ಜೀವನಕ್ರಮ ನಾವು ಸೇವಿಸುವ ಆಹಾರ, ಪರಿಸರ ಮಾಲಿನ್ಯ ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ನಮ್ಮಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಹಲವು ಕಾರಣಗಳು ತಿಳಿದಿವೆ . ಇದರ ಮೂಲವನ್ನು ಹುಡುಕಿ ಹೊರಟರೆ ನಮ್ಮ ಶಿಕ್ಷಣ ವ್ಯವಸ್ಥೆಯ ಕಡೆ ಬೊಟ್ಟು ಮಾಡುವುದು. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆ ಕೇವಲ ತಲೆ, ಮೆದುಳಿಗೆ ಮಾತ್ರ ಮಹತ್ವ ನೀಡಿ ಉಳಿದ ಅಂಗಗಳ ಕಡೆಗಣಿಸಿರುವುದು ಎಲ್ಲರಿಗೂ ತಿಳಿದ ಸಂಗತಿ. ಸೇವಾ ಕ್ಷೇತ್ರವಾಗಿದ್ದ ಶಿಕ್ಷಣ ಮತ್ತು ಆರೋಗ್ಯವನ್ನು ವ್ಯಾಪಾರೀಕರಣ ಮಾಡಿದ ಪರಿಣಾಮವಾಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತಿದವು. ವ್ಯವಸ್ಥೆಯ ದುರುಪಯೋಗ ಪಡೆದು ಮೂಲಸೌಕರ್ಯವಿಲ್ಲದಿದ್ದರೂ ಶಾಲೆಗಳಿಗೆ ಅನುಮತಿ ಸಿಕ್ಕಿತು.ಇತ್ತೀಚಿನ ನಡೆದ ಸಮೀಕ್ಷೆಯ ಪ್ರಕಾರ ನಮ್ಮ ರಾಜ್ಯದ 29154 ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಆಟದ ಮೈದಾನವಿಲ್ಲ . ಇದರ ಅರ್ಥ ಆ ಮಕ್ಕಳು ಆಟವಾಡುವ ಭಾಗ್ಯವಿಲ್ಲ ಕೇವಲ ಪಾಠಗಳು ಮಾತ್ರ, ಆಟಗಳು ಇಲ್ಲವೇ ಇಲ್ಲ. ಇದು ಸಹ ಮಕ್ಕಳಿಗೆ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಕಾರಣ ಎಂದರೆ ತಪ್ಪಾಗಲಾರದು.
ಕಳೆದ ವರ್ಷ ಕೊರೋನಾ ಕಾಟದಿಂದ 1 ರಿಂದ 9 ನೇ ತರಗತಿಯ ಮಕ್ಕಳು ಪರೀಕ್ಷೆ ಇಲ್ಲದೆ ಉತ್ತೀರ್ಣರಾದರು. ಈ ವರ್ಷವೂ ಅದೇ ದಾರಿಯಲ್ಲಿ ಸಾಗಿ ಒಂದರಿಂದ ಐದನೇಯ ತರಗತಿಯ ಮಕ್ಕಳು ಒಂದು ದಿನವೂ ಶಾಲೆಯ ಮುಖವನ್ನು ಸಹ ನೋಡದೇ ಮುಂದಿನ ತರಗತಿಗೆ ಪಾಸ್ ಆಗಿರುವರು.
ಇನ್ನೂ 5 ರಿಂದ ಒಂಭತ್ತನೆಯ ತರಗತಿಯ ಮಕ್ಕಳು ವಿದ್ಯಾಗಮ, ಮತ್ತು ಒಂದೆರಡು ತಿಂಗಳ ಭೌತಿಕ ಮತ್ತು ಆನ್ ಲೈನ್ ತರಗತಿಯ ಅಧಾರದ ಮೇಲೆ ಅವರು ಉತ್ತೀರ್ಣರಾದರು.
ಕರೋನಾದ ಎರಡನೇ ಅಲೆಯ ಅಬ್ಬರದಲ್ಲಿ ಮತ್ತೆ ಅನಿವಾರ್ಯವಾಗಿ ಮಕ್ಕಳು ಮನೆಯಲ್ಲಿ ಬಂಧಿಯಾಗಬೇಕಿದೆ. ಇಂತಹ ಸಂದರ್ಭಗಳಲ್ಲಿ ಪೋಷಕರು ಮಕ್ಕಳಿಗೆ ಬರೀ ಮೊಬೈಲ್ ಕೊಟ್ಟು ,ಅಥವಾ ಟಿ ವಿ ಕಂಪ್ಯೂಟರ್ ನೋಡುತ್ತಾ ಕಾಲ ಕಳೆಯುವ ಬದಲಾಗಿ ಈ ಕೆಳಗಿನ ಚಟುವಟಿಕೆಗಳನ್ನು ಮಕ್ಕಳಿಗೆ ನೀಡಬಹುದು.
ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ತಮ್ಮ ಆಟಿಕೆಗಳನ್ನು ತೊಳೆಯುವ ಕಾರ್ಯದಲ್ಲಿ ತೊಡಗಿಸಬಹುದು. ಪೋಷಕರು ಸ್ವಲ್ಪ ಸಾಬೂನು ಮತ್ತು ನೀರಿನಿಂದ ಟಬ್ ಅಥವಾ ಸಿಂಕ್ ಅನ್ನು ಭರ್ತಿ ಮಾಡಿ, ಟವೆಲ್ ಅನ್ನು ಪಕ್ಕಕ್ಕೆ ಇರಿಸಿ ಮಕ್ಕಳಿಗೆ ತಮ್ಮ ಆಟಿಕೆಗಳನ್ನು ತೊಳೆಯಲು ಹೇಳಬಹುದು. ಈ ಚಟುವಟಿಕೆಯು ಅವರನ್ನು ಕಾರ್ಯನಿರತವಾಗಿಸುವುದಲ್ಲದೆ ಅವುಗಳಲ್ಲಿ ಸ್ವಚ್ಛತೆಯ ಅಭ್ಯಾಸವನ್ನು ಬೆಳೆಸುತ್ತದೆ. ಮಕ್ಕಳು ಈ ಚಟುವಟಿಕೆಯನ್ನು ಮಾಡುವುದನ್ನು ಇಷ್ಟಪಡುತ್ತಾರೆ. ಏಕೆಂದರೆ ಅವರಲ್ಲಿ ಹೆಚ್ಚಿನವರು ನೀರಿನೊಂದಿಗೆ ಆಟವಾಡುವುದನ್ನು ಇಷ್ಟಪಡುತ್ತಾರೆ.
ಯಾವುದೇ ಮಗು ಸ್ವಲ್ಪ ಸ್ಕೆಚಿಂಗ್, ಬಣ್ಣ ಮತ್ತು ಕರಕುಶಲ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಹೇಳಿದರೆ ನಿರಾಕರಿಸುವುದಿಲ್ಲ. ಅವರಿಗೆ ಬಣ್ಣ ತುಂಬಲು ಪುಸ್ತಕವನ್ನು ನೀಡುವುದರ ಜೊತೆಗೆ, ತಮ್ಮ ಕಲ್ಪನೆಗೆ ಅನುಗುಣವಾಗಿ ಮಕ್ಕಳಿಗೆ ಡ್ರಾಯಿಂಗ್ ಮಾಡಲು ಪೋಷಕರು ಹೇಳಬಹುದು. ಈ ಚಟುವಟಿಕೆಯು ಅವರ ಸೃಜನಶೀಲತೆ ಮತ್ತು ಕಲ್ಪನೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಮಣ್ಣಿನ ಅಥವಾ ಲೋಳೆಯೊಂದಿಗೆ ಆಟವಾಡಲು ಮಕ್ಕಳನ್ನು ಸ್ವಲ್ಪ ಸಡಿಲಗೊಳಿಸಬೇಕು. ಖಚಿತವಾಗಿ ಇದು ಗೊಂದಲಮಯ ಚಟುವಟಿಕೆಯಾಗಿದೆ, ಆದರೆ ಮಕ್ಕಳು ಅದರೊಂದಿಗೆ ವಿಚಲಿತರಾಗಿರುವಾಗ ಇದು ಪೋಷಕರಿಗೆ ಅಮೂಲ್ಯವಾದ ಕೆಲಸದ ಸಮಯವನ್ನು ನೀಡುತ್ತದೆ.
ಪೋಷಕರು ಮಕ್ಕಳನ್ನು ವ್ಯಾಯಾಮವನ್ನು ಮಾಡಲು ಪ್ರಯತ್ನಿಸುವಂತೆ ಹೇಳಬಹುದು ಯೋಗ ,ವ್ಯಾಯಾಮ ಮಾಡುವುದರಿಂದ ಮಕ್ಕಳು ಸದೃಢವಾಗಿ ಮತ್ತು ಸಕ್ರಿಯವಾಗಿರುತ್ತವೆ. ಮಾತ್ರವಲ್ಲದೆ ಈ ಸಾಂಕ್ರಾಮಿಕ ಸಮಯದಲ್ಲಿ ಸುರಕ್ಷಿತವಾಗಿರಲು ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಗುವಿನ ವಯಸ್ಸಿಗೆ ಅನುಗುಣವಾಗಿ ಇಂತಹ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು ,ಜೊತೆಗೆ ಒಳಾಂಗಣ ಆಟಗಳಾದ ಚೌಕಾಬಾರ, ಚೆಸ್, ಮುಂತಾದ ಆಟಗಳನ್ನು ಆಡಲು ಸಹ ಪ್ರೋತ್ಸಾಹ ನೀಡಬಹುದು .
ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿದರೆ ಅದು ಮಕ್ಕಳ ವ್ಯಕ್ತಿತ್ವ ವಿಕಸನದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುವುದು ಅದಕ್ಕೆ ಪೋಷಕರು ಅವರ ವಯಸ್ಸಿಗೆ ಅನುಗುಣವಾಗಿ, ಮಕ್ಕಳಿಗೆ ಮೊದಲು ಕೆಲ ಕಥೆ ಪುಸ್ತಕಗಳನ್ನು, ಮಹಾತ್ಮರ ಜೀವನ ಚರಿತ್ರೆಯನ್ನು , ಮಕ್ಕಳ ವಾರಪತ್ರಿಕೆ ತಂದು ಓದುವ ಹವ್ಯಾಸವನ್ನು ಬೆಳೆಸಬಹುದು, ಸಾದ್ಯವಾದರೆ ಸಣ್ಣ ಪುಟ್ಟ ಬರಹಗಳನ್ನು ಬರೆಯಲು ಸಹ ಪ್ರೇರೇಪಣೆ ನೀಡಬಹುದು.
ಕೊರೋನಾದೊಂದಿಗಿನ ಜೀವನದ ಈ ಸಮಯದಲ್ಲಿ ನಮ್ಮ ಜೀವ ,ಮತ್ತು ಜೀವನವನ್ನು ಉಳಿಸಿಕೊಳ್ಳಬೇಕಾದ ಈ ಪರ್ವ ಕಾಲದಲ್ಲಿ ಪೋಷಕರು ತಮ್ಮ ವೃತ್ತಿಯ ಕಡೆಗೆ ಗಮನ ಹರಿಸಬೇಕಾದ್ದು ಅಗತ್ಯವಾದರೂ ,ಶಾಲೆಗಳು ಮುಚ್ಚಿರುವ ಸಂಧರ್ಭದಲ್ಲಿ ಮನೆಯೇ ಶಾಲೆಯಾಗಿ ಕೆಲಸ ಮಾಡಬೇಕಿದೆ .ಆದ್ದರಿಂದ ಪೋಷಕರು ತಮ್ಮ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುತ್ತಲೇ ಇದುವರೆಗೆ ಕಲಿತ ಕಲಿಕೆ ಪುನರ್ಬಲನ ಹೊಂದುವ ಚಟುವಟಿಕೆಗಳನ್ನು ಹಮ್ಮಿಕೊಂಡು, ಮಕ್ಕಳ ಕ್ರಿಯಾಶೀಲತೆಯನ್ನು ಪ್ರೇರೇಪಿಸುವ ಚಟುವಟಿಕೆಗಳನ್ನು ಮನೆಯಲ್ಲಿ ಹಮ್ಮಿಕೊಳ್ಳುವ ಮೂಲಕ ನಮ್ಮ ದೇಶದ ಭಾವಿ ಪ್ರಜೆಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment