*ಸ ವಿ ಲ್ಯಾಬ್ ಸೃಷ್ಟಿಕರ್ತ ಮಲ್ಲಿಕಾರ್ಜುನ್*
ಓರ್ವ ಕ್ರಿಯಾಶೀಲ ಶಿಕ್ಷಕ ಮನಸು ಮಾಡಿದರೆ ಸಾಮಾನ್ಯ ಶಾಲಾಕೊಠಡಿಯನ್ನು ಡಿಜಿಟಲ್ ಕ್ಲಾಸ್ ಆಗಿ ಪರಿವರ್ತಿಸಬಲ್ಲ ತನ್ಮೂಲಕ ಸಮಾಜ ವಿಜ್ಞಾನ ವಿಷಯವನ್ನು ಆಸಕ್ತಿದಾಯಕವಾಗಿ ಕಲಿಸಬಲ್ಲ ಎಂಬುದಕ್ಕೆ ಉದಾಹರಣೆ
ಮಲ್ಲಿಕಾರ್ಜುನ ಸ್ವಾಮಿ ಟಿ ಎಮ್ ಚಿತ್ರದುರ್ಗ ಜಿಲ್ಲೆಯ ಚವಲಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಮಾತುಗಳಲ್ಲೇ ಹೇಳುವುದಾದರೆ
"ನಾನು ಇಷ್ಟ ಪಟ್ಟು ಬಂದ ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಗೆ ಸಂತಸದಾಯಕ ಮತ್ತು ಪರಿಣಾಮಕಾರಿಯಾಗಿ ಬೋಧಿಸುವ ಪಣ ತೊಟ್ಟ ನಾನು ಹಲವಾರು ಚಟುವಟಿಕೆಗಳನ್ನು ಮತ್ತು ತಂತ್ರಜ್ಞಾನವನ್ನು ನನ್ನ ಬೋಧನೆಯಲ್ಲಿ ಅಳವಡಿಸಿಕೊಂಡು ಕಲಿಸುವ ಕಾಯಕ ಮುಂದುವರೆಸಿದೆ , ಫಲಿತಾಂಶಗಳು ಅಚ್ಚರಿದಾಯಕವಾಗಿ ಮಕ್ಕಳು ಖುಷಿಯಿಂದ ಕಲಿಕೆಯಲ್ಲಿ ತೊಡಗಿದರು ಹಿತೈಷಿಗಳು, ಸ್ನೇಹಿತರು, ಇಲಾಖೆಯ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಾ ಬಂದರು ಅದರ ಪರಿಣಾಮವಾಗಿ ಡಿಜಿಟಲ್ ಕ್ಲಾಸ್ ಆರಂಭ, ನನ್ನ ಶಾಲೆಯ ಒಂದು ಬ್ಲಾಗ್, ನನ್ನದೆ ಒಂದು ಬ್ಲಾಗ್ ಮತ್ತು ಸಮಾಜ ವಿಜ್ಞಾನ ಲ್ಯಾಬ್ ಸ್ಥಾಪನೆ." ಎನ್ನುತ್ತಾರೆ ಯುವ ಶಿಕ್ಷಕರು.
ಸಮಾನ ಮನಸ್ಕ ಸ್ನೇಹಿತರು ಸೇರಿಕೊಂಡು ಸಮಾಜ ವಿಜ್ಞಾನ ಡಿಜಿಟಲ್ ಬ್ಲಾಗ್ ಎಂಬ ಬ್ಲಾಗ್ ರಚನೆಯಲ್ಲಿ ಸಮಾಜ ವಿಜ್ಞಾನ ಪಾಠಗಳಿಗೆ ಪಿ ಪಿ ಟಿ , ರಸಪ್ರಶ್ನೆ ಪಿ ಪಿ ಟಿ ರಚನೆ ಮಾಡುವ ಮೂಲಕ ಅವುಗಳನ್ನು ತಮ್ಮ ಶಾಲೆಯಲ್ಲಿ ಹೊಸದಾಗಿ ಸ್ಥಾಪಿತವಾದ ಡಿಜಿಟಲ್ ಕ್ಲಾಸ್ ನಲ್ಲಿ ಮಕ್ಕಳಿಗೆ ತೋರಿಸುತ್ತಾ ಅಮೂರ್ತ ಪರಿಕಲ್ಪನೆಗಳು ಮಕ್ಕಳಿಗೆ ಮನಮುಟ್ಟುವಂತೆ ಬೋದನೆ ಮಾಡುವಲ್ಲಿ ಶ್ರೀ ಮಲ್ಲಿಕಾರ್ಜುನ್ ರವರು ಸಿದ್ದಹಸ್ತರು .
ಲ್ಯಾಬ್ ಎಂದರೆ ಕೇವಲ ಭೌತಶಾಸ್ತ್ರ ರಸಾಯನಶಾಸ್ತ್ರ, ಮುಂತಾದ ವಿಜ್ಞಾನ ವಿಷಯಗಳಿಗಾಗಿ ಎಂಬ ತಪ್ಪು ಕಲ್ಪನೆ ಹೋಗಲಾಡಿಸಲು ಚವಲಿಹಳ್ಳಿ ಗೊಲ್ಲರ ಹಟ್ಟಿ ಪ್ರೌಢಶಾಲೆಯಲ್ಲಿ "ಸಮಾಜ ವಿಜ್ಞಾನ ಲ್ಯಾಬ್ " ಆರಂಭ ಮಾಡುವ ಮನಸ್ಸು ಮಾಡಿ ಈಗ ಒಂದು ಸುಸಜ್ಜಿತವಾದ ಸಮಾಜ ವಿಜ್ಞಾನ ಲ್ಯಾಬ್ ಮಾಡಿರುವರು .ಅದರ ಬಗ್ಗೆ ಮಾಡಿರುವ ಪರಿಚಯದ ವೀಡಿಯೋ ಪೇಸ್ ಬುಕ್ ನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರ ವೀಕ್ಷಿಸಿ ಮೆಚ್ಚುಗೆ ಸೂಚಿಸಿರುವರು.
ಸಮಾಜ ವಿಜ್ಞಾನ ಲ್ಯಾಬ್ ನಲ್ಲಿ ಏನಿದೆ?
ಸಮಾಜ ವಿಜ್ಞಾನ ಲ್ಯಾಬ್ ನಲ್ಲಿ ನಾವು ಕಾಲಿಡುತ್ತಿದ್ದಂತೆ ನಮಗೆ ಕಾಲರೇಖೆಯ ದರ್ಶನಾವಗುವುದು. ಇದರ ಜೊತೆಗೆ ,ಕರ್ನಾಟಕ, ಭಾರತದ, ಮತ್ತು ಪ್ರಪಂಚದ ಇತಿಹಾಸ, ರಾಜಕೀಯ, ಭೂಗೋಳದ ಪರಿಚಯದೊಂದಿಗೆ ಒಂದು ವಿಭಿನ್ನವಾದ ಲೋಕಕ್ಕೆ ತೆರಳಿ ಅಪೂರ್ವ ಜ್ಞಾನವನ್ನು ಪಡೆದ ಅನುಭವ ನೋಡಿದವರಿಗೆ ಖಂಡಿತವಾಗಿ ಸಿಗುವುದು.
ಕ್ರಿ.ಪೂ ದಿಂದ ಆರಂಭವಾಗುವ ಕಾಲ ರೇಖೆಯಲ್ಲಿ ಮಧ್ಯಕಾಲದ, ಮತ್ತು ಆಧುನಿಕ ಇತಿಹಾಸದ ಕೆಲವು ಪ್ರಮುಖ ಘಟನೆಗಳು ಚಿತ್ರಗಳ ಮೂಲಕ ನೋಡುಗರ ಮನ ಸೆಳೆಯುತ್ತವೆ,
ಎಂಟನೆಯ ತರಗತಿಯ ಮೌರ್ಯರು, ಕುಷಾನರು , ಗುಪ್ತರು, ವರ್ಧನರು ಮುಂತಾದ ಸಾಮ್ರಾಜ್ಯಗಳ ಬಗ್ಗೆ ವಿವರಗಳನ್ನು ಹೊಂದಿರುವ ಚಾರ್ಟ್ ಗಳ ಪ್ರದರ್ಶನ ಮಾಡಲಾಗಿದೆ.
ಮುಂದುವರೆದು ಭಾರತದ ರಾಜಕೀಯ ಜ್ಞಾನವನ್ನು ವೃಧ್ದಿಸುವ ಪ್ರಯತ್ನವಾಗಿ ಭಾರತದ ರಾಷ್ಟ್ರಪತಿಗಳು, ಭಾರತದ ಪ್ರಧಾನ ಮಂತ್ರಿಗಳು, ಸಂವಿಧಾನದ ಪೂರ್ವ ಪೀಠಿಕೆ, ಸಂವಿಧಾನ ರಚನಾ ಸಭೆ, ಮತ್ತು ಪ್ರಮುಖ ನಾಯಕರ ಪರಿಚಯದ ಚಾರ್ಟ್ ಮತ್ತು ಮಾಹಿತಿಯನ್ನು ಪ್ರದರ್ಶನ ಮಾಡಲಾಗಿದೆ.
ಭಾರತದ ರಾಷ್ಟ್ರೀಯ ಲಾಂಛನ ,ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಪಕ್ಷಿ ,ರಾಷ್ಟ್ರೀಯ ಮರ ಮುಂತಾದವುಗಳ ಬಗ್ಗೆ ಚಿತ್ರ ಸಮೇತ ವಿವರಗಳು ನೋಡುಗರಿಗೆ ಉತ್ತಮ ಮಾಹಿತಿಯನ್ನು ನೀಡುತ್ತವೆ.
ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕಲೆ ಮತ್ತು ವಾಸ್ತು ಶಿಲ್ಪದ ಚಿತ್ರಗಳಲ್ಲಿ ವಿಜಯನಗರ, ಹಳೇಬೀಡು, ಬಾದಾಮಿ,ಐಹೊಳೆ ಪಟ್ಟದಕಲ್ಲು, ಆಗ್ರಾ ಮುಂತಾದ ಕಡೆಗಳಲ್ಲಿಯ ಚಿತ್ರಗಳು ಲ್ಯಾಬ್ ನ ಗೋಡೆಯಲ್ಲಿ ಅಲಂಕೃತಗೊಂಡು ವಿದ್ಯಾರ್ಥಿಗಳ ಮತ್ತು ನೋಡುಗರ ಕಣ್ಮನ ಸೆಳೆಯುತ್ತಿವೆ.
ವಿವಿಧ ದೇಶಗಳ ರಾಷ್ಟ್ರಧ್ವಜ ಗಳು ,ಭಾರತವನ್ನು ಆಳಿದ ಪ್ರಮುಖವಾದ ರಾಜಮನೆತನದ ವಂಶವೃಕ್ಷಗಳು, ಭಾರತಕ್ಕೆ ಆಗಮಿಸಿದ ಯುರೋಪಿಯನ್ನರ ಮಾಹಿತಿ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ , ಮತ್ತು ಗಾಂಧಿಯುಗದ ಚಿತ್ರಸಹಿತ ಇತಿಹಾಸ ಬಣ್ಣ ಬಣ್ಣದ ಚಿತ್ರ ಪಟಗಳು ನಮಗೆ ಇತಿಹಾಸದ ಪಾಠವನ್ನು ಹೇಳುತ್ತವೆ.
ಕೋವಿಡ್ ೧೯ ರ ಸಂಕಷ್ಟ ಕಾಲದಲ್ಲಿ ಶಾಲೆಗಳು ಮುಚ್ಚಿದಾಗ ಚಂದನ ವಾಹಿನಿಯಲ್ಲಿ ಪ್ರಸಾರವಾದ ಎಲ್ಲಾ ವಿಷಯಗಳ ಪಾಠಗಳನ್ನು ಮಕ್ಕಳಿಗೆ ತಲುಪಿಸಲು ತರಗತಿವಾರು ವಾಟ್ಸಪ್ ಗುಂಪು ಮಾಡಿ ಮಕ್ಕಳಿಗೆ ವೀಡಿಯೋ ಪಾಠಗಳನ್ನು ತಲುಪಿಸಲು ಪ್ರಯತ್ನ ಮಾಡಲಾಗಿದೆ, ಆಯಾ ತರಗತಿಯ ವೀಡಿಯೋ ಪಾಠಗಳ ಲಿಂಕ್ ಗಳನ್ನು ಅವರ ಬ್ಲಾಗ್ ನಲ್ಲಿ ಶೇರ್ ಮಾಡಿ ಸುಮಾರು 5 ಲಕ್ಷ ಕ್ಕು ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿರುವುದು ಅವರ ಬದ್ದತೆಗೆ ಸಾಕ್ಷಿಯಾಗಿದೆ.
ಈ ರೀತಿಯಲ್ಲಿ ಮಕ್ಕಳ ಕಲಿಕೆಯು ಸಂತಸದಾಯಕವಾಗಿಸಲು ಹಲವಾರು ಹೊಸ ಉಪಕ್ರಮಗಳನ್ನು ಅಳವಡಿಸಿಕೊಂಡು ಬೋಧಿಸುವ ಅವರ ಕಾರ್ಯ ನಿರಂತರ ವಾಗಿರಲಿ ಇದಕ್ಕೆ ಇಲಾಖೆಯ ಅಧಿಕಾರಿಗಳು, ಹಿತೈಷಿಗಳು, ಸ್ನೇಹಿತರು ನೀಡಿದ ಸಹಕಾರವನ್ನು ಅವರು ಈ ಸಂಧರ್ಭದಲ್ಲಿ ತುಂಬ ಹೃದಯದಿಂದ ಸ್ಮರಿಸುತ್ತಾರೆ.
ಇಂತಹ ಶಿಕ್ಷಕರು ಹೆಚ್ಚಾಗಲಿ ಎಂದು ಆಶಿಸುತ್ತಾ
ಬನ್ನಿ ಸ್ನೇಹಿತರೆ ಎಲ್ಲರೂ ಸೇರಿ ಶಾಲೆಗಳನ್ನು ಗುಣಾತ್ಮಕ ಕಲಿಕೆಯನ್ನು ಉಂಟುಮಾಡುವ ತಾಣಗಳನ್ನಾಗಿ ಮಾಡೋಣ , ಶಿಕ್ಷಣವೇ ಶಕ್ತಿ ಎಂದು ತೋರೋಣ.
ಶಿಕ್ಷಕರಾದ ಮಲ್ಲಿಕಾರ್ಜುನ್ ಟಿ ಎಮ್ ರವರ ಬಗ್ಗೆ ತಿಳಿಯಲು ಅವರ ಈ ಬ್ಲಾಗ್ ವಿಳಾಸಕ್ಕೆ ಭೇಟಿ ನೀಡಿ
https://socialsciencetm.blogspot.com/
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ.
ಕ್ಯಾತ್ಸಂದ್ರ
No comments:
Post a Comment