27 September 2018

ಪ್ರೀತಿಸೋಣ (ಕವನ) ಸ್ನೇಹ ಸಂಗಮ ಬಳಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಕವನ ಎಂದು ಪುರಸ್ಕೃತ ಕವನ


              *ಪ್ರೀತಿಸೋಣ*

ನಮ್ಮ ಸುತ್ತಮುತ್ತಲಿರುವರುವರು
ನಮಗೆ ಪರಿಚಿತರಾಗಿಲ್ಲ
ನೆರೆಯಲ್ಲಿರುವವರ ಹೊರೆಯಂತೆ ಕಾಣುವೆವು
ಹಗೆ ಸಾದಿಸುವೆವು ಯಾವುದೋ ಊರಿನ ಯಾರನ್ನೋ ಮುಖಪುಟದಲ್ಲಿ
ಬಲವಂತದಿ ಪ್ರೆಂಡ್ ರಿಕ್ವೆಸ್ಟ್ ಕಳಿಸಿ ಅವರ ಮುಖ ಹೇಗಿದ್ದರೂ ಲೈಕ್ ಒತ್ತಿದ್ದೇ ಒತ್ತಿದ್ದು .


ನಮ್ಮ ಬಂಧುಗಳ ಕಷ್ಟಗಳಿಗೆ ಸ್ಪಂದಿಸಲಿಲ್ಲ
ಸಾವು ತಿಥಿಗಳಿಗೆ ಹೋಗಲೇಇಲ್ಲ
ಟಿ ವಿ ಧಾರಾವಾಹಿಗಳಲಿ ಬರುವ ಪುಟ್ಟ ಗೌರಿ
ರಾಧಾ ಳ ಸಂಕಟಕ್ಕೆ ಮರುಗಿ ಕಣ್ಣೀರಿನ
ಕೋಡಿ ಹರಿಸುವರು ಸಾಲದೆಂಬಂತೆ
ಮತ್ತೊಮ್ಮೆ ವೂಟ್ ನಲ್ಲಿ ನೋಡಿ
ಅವರ ನಾಟಕದ ಕಷ್ಟಕ್ಕೆ ಅತ್ತಿದ್ದೇ ಅತ್ತಿದ್ದು

ಮನೆಯಲಿ‌ಗಂಟು ಕಟ್ಟಿಕೊಂಡ ಮುಖ
ಮಕ್ಕಳು‌ ಬಂದು‌ ನಗಿಸಿದರೂ ಅರಳೆಣ್ಣೆ
ಕುಡಿದವರ ಹಾಗೆ ನಗಲು ಚೌಕಾಸಿ ಮಾಡಿ
ಕೋಣೆಗೆ ಹೋಗಿ ಯೂಟ್ಯೂಬ್ ನಲ್ಲಿ
ಸ್ಟಾಂಡ್ಅಪ್ ಕಾಮಿಡಿ ಎಪಿಸೋಡ್
ನೋಡಿ ನಕ್ಕುದ್ದೇ ನಕ್ಕಿದ್ದು

ದೇವರಂತಹ ಅಪ್ಪ ಅಮ್ಮಂದಿರ ಪೂಜೆಯಿಲ್ಲ
ಇನ್ನೆಲ್ಲೋ ಇರುವ ದೇವರ ಕಾಣುವ ಹಂಬಲ
ಬ್ರಹ್ಮಾಂಡ ಬೃಹತ್‌ ಬ್ರಹ್ಮಾಂಡದ ಲ್ಲಿ  ದೇವರ
ಕಾಣಲು ಟಿ ವಿ ಯೂಟೂಬ್ ಪೇಸ್ ಬುಕ್
ಗಳಲಿ ಹುಡುಕಿದ್ದೇ ಹುಡುಕಿದ್ದು

ಈ ಸಾಮಾಜಿಕ ಮಾದ್ಯಮಗಳಿಗೆ
ನಾವು ದಾಸರಾಗಿದ್ದು ಸಾಕು
ಇನ್ನಾದರೂ ಮನುಷ್ಯರನ್ನು  ಪ್ರೀತಿಸೋಣ
ಸಾಮಾಜಿಕ ಮಾಧ್ಯಮಗಳನ್ನು
ವಿವೇಚನೆಯಿಂದ ಬಳಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: