19 September 2018

ಪ್ರಕೃತಿ ನ್ಯಾಯಾಲಯ (ಕವನ)

                *ಪ್ರಕೃತಿ ನ್ಯಾಯಾಲಯ*

ಬೀದಿಯಲಿದ್ದವನು
ಬಿಡಿಗಾಸು ಕಾಣದವನು
ಒಮ್ಮಿದೊಮ್ಮೆಲೆ ರಾಜಕಾರಣ
ಉದ್ಯಮ ಸೇರಿದನು

ಉದ್ಯಮಕ್ಕೆ ಬೇಕಾದ
ಅಕ್ರಮ ಅನ್ಯಾಯ ಅನೈತಿಕತೆ
ಭ್ರಷ್ಟಾಚಾರಗಳನ್ನು ಬೇಗನೆ
ಕರಗತಮಾಡಿಕೊಂಡನು

ಸಾವಿರ ಲಕ್ಷ ಗಳೆಲ್ಲಾ  ಅಲಕ್ಷ್ಯ
ಕೋಟಿಗಳ ಲೆಕ್ಕಾಚಾರ
ನೂರಾರು ಎಕರೆಗಳಷ್ಟು
ಜಮೀನು ಖರೀದಿಸಿದ್ದಾಯ್ತು
ಅಕ್ರಮಗಳ ಬೆನ್ನಟ್ಟಿ ಬಂದ
ನ್ಯಾಯಾಲಯದ ಜಾಮೀನು
ಪಡೆದಾಯ್ತು

ಪ್ರಕೃತಿಯ ವಿಕೋಪಕ್ಕೆ ಬಂಗಲೆ
ನೂರಾರು ಎಕರೆ ಜಮೀನು
ಕೊಚ್ಚಿ ಹೋಗಿತ್ತು ಭಯ ಆವರಿಸಿತ್ತು
ಸರಿ ತಪ್ಪುಗಳ ಮಾಡಿದ ಅಕ್ರಮಗಳ
ನೆನಪಾಗಿತ್ತು ಆದರೆ ಕಾಲ ಮಿಂಚಿತ್ತು
ಪ್ರಕೃತಿ ನ್ಯಾಯಾಲಯದಲ್ಲಿ ಜಾಮೀನು
ಸಿಗಲೇ ಇಲ್ಲ

ಎರಡು ದಿನ ಅನ್ನ ಆಹಾರವಿಲ್ಲದೆ
ಬಳಲಿದವನು ಮೂರನೇ ದಿನ
ಸಾಮಾನ್ಯ ನಿರಾಶ್ರಿತರ ಜೊತೆಗೆ
ತಟ್ಟೆ ಹಿಡಿದು ಕೈಯೊಡ್ಡಿದ್ದ


*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

No comments: