21 November 2018

ಮರೆಯಲಾರೆ (ಕವನ)

              *ಮರೆಯಲಾರೆ*

ಸವಿಯಾದ ನೆನಪು ಮರೆಯಲಾರೆ
ಕವಿಯಾಗಿ ಅವುಗಳ ವರ್ಣಿಸಲಾರೆ

ಅಕ್ಷರ ಕಾಗುಣಿತ ತಪ್ಪಿ ಬ್ಯಾ ಬ್ಯಾ
ಅಂದಾಗ ಬೆತ್ತದಿ ಬಾರಿಸಿ
ಬಾಸುಂಡೆ ಬರುವಂತೆ ಬಾರಿಸಿ
ಜೀವನ ಪಾಠ  ಕಲಿಸಿದ
ಭಗವಂತನಂತಹ ಗುರುವ ಮರೆಯಲಾರೆ

ಬುಗುರಿ ಚಿನ್ನಿದಾಂಟು ಕುಂಟೊಬಿಲ್ಲೆ
ಆಟಗಳಲ್ಲಿ ನಲಿದಾಡಿ
ಬೇಲಿ ಸಾಲಲಿ‌ ಸುತ್ತಿ
ಕಾರೆ ತೊಂಡೆ ಹಣ್ಣುಗಳ ಸವಿವಾಗ
ಜೊತೆಗಿದ್ದ  ಬಾಲ್ಯದ ಗೆಳೆಯರ ಮರೆಯಲಾರೆ

ಅಪ್ಪನಿಲ್ಲದಿದ್ದರೂ ಒಪ್ಪವಾಗಿ ಬೆಳೆಸಿ
ಹೆತ್ತು ಹೊತ್ತು ಸಾಕಿ ಸಲಹಿ
ಹೊತ್ತಿಗೆ ತುತ್ತು ಅನ್ನ ನೀಡಿ
ಹೊತ್ತಗೆ  ಹಿಡಿಯುವಂತೆ ಮಾಡಿ
ಅತಿ‌ಮುದ್ದಾಗಿ ಬೆಳೆಸಿದ ಅಮ್ಮನ ಮರೆಯಲಾರೆ

ಮರಳಿನಲಿ ಗೂಡನ್ನು ಕಟ್ಟಿ
ಕೈ ಕೈ ಹಿಡಿದು ನೆಡೆದಾಡಿ
ನಿನ್ನನೇ ಮದುವೆಯಾಗುವೆನೆಂದು
ಅಪ್ಪ ಅಮ್ಮನ ಆಟವನಾಡಿದ
ಮೊದಲ ಒಲವನು ಮರೆಯಲಾರೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: