ಉದ್ಯೋಗ ಮತ್ತು ಆತ್ಮ ತೃಪ್ತಿ..
ಈಗ ಉದ್ಯೋಗಂ ಪುರುಷ ಲಕ್ಷಣ ಎಂಬ ಮಾತು ಬದಲಾಗಿ ಉದ್ಯೋಗ ಮಾನವ ಲಕ್ಷಣ, ರೋಬಾಟ್ ಲಕ್ಷಣ ಮುಂದುವರೆದು ಯಾಂಬು (ಯಾಂತ್ರಿಕ ಬುದ್ದಿ ಮತ್ತೆ) ಲಕ್ಷಣವಾಗಿದೆ.ಉದ್ಯೋಗ ಗಳಿಸಿದ ಕೂಡಲೆ ತಾನು ಮಾಡುವ
ಉದ್ಯೋಗ ಕ್ಷೇತ್ರದಲ್ಲಿ ನಿಂತ ನೀರಾಗಿರಲು ಯಾರೂ ಇಷ್ಟಪಡುವುದಿಲ್ಲ. ಆದರೆ ಕೆಲವೊಂದು ಕಾರಣಗಳಿಂದ ಹಲವು ವರ್ಷಗಳಿಂದ ಉದ್ಯೋಗದಲ್ಲಿ ಒಂದೇ ಸ್ಥಿತಿಯಲ್ಲಿ ಬಹುತೇಕರು ಇರುತ್ತಾರೆ. ಕರಿಯರ್ನಲ್ಲಿ ಪ್ರಗತಿಯಾಗದೆ ಇರುವುದಕ್ಕೆ ಹಲವು ಕಾರಣಗಳು ಇರಬಹುದು. ಕಂಪನಿಯ ಸ್ಥಿತಿ ಕಾರಣ ಇರಬಹುದು, ಕಂಪನಿಯೊಳಗಿನ ಪೈಪೋಟಿ ಕಾರಣ ಇರಬಹುದು. ಆದರೆ ಕರಿಯರ್ ಯಶಸ್ಸಿಗೆ ನಾವು ಕೂಡ ಕಾರಣ. ನಮ್ಮೊಳಗಿನ ಕೆಲವೊಂದು ಮನೋಧೋರಣೆಗಳು, ತೊಂದರೆಗಳು ನಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ ಎಂಬುದು ನಮ್ಮ ಅರಿವಿಗೆ ಬರುವ ಮುನ್ನ ನಮ್ಮ ಕೆರಿಯರ್ ಗ್ರಾಪ್ ಏರದೇ ಕೆಲವೊಮ್ಮೆ ವಿರುದ್ಧ ದಿಕ್ಕಿನಲ್ಲಿ ಪಯಣಿಸಿದ ಉದಾಹರಣೆಗಳಿವೆ.
ಉತ್ತಮವಾದ ಹಾಗೂ ಪ್ರಗತಿಶೀಲ ಜೀವನ ನನ್ನದಾಗಬೇಕೆಂಬುದು ಪ್ರತಿಯೊಬ್ಬರ ಆಸೆ. ಹೀಗಾಗಿ ಮಹತ್ವಾಕಾಂಕ್ಷೆಯ ಹಂಬಲವಿರುವುದು ಮಾನವಸಹಜ ಗುಣ. ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಇನ್ನಷ್ಟು ಬೆಳೆಯಬೇಕು ಎನ್ನುವುದು ಬಹುತೇಕರ ಆಸೆ. ನಮ್ಮನ್ನು ನಾವು ಸುಧಾರಿಸಿಕೊಳ್ಳುವ ಮೂಲಕ ಚಿಕ್ಕ ಚಿಕ್ಕ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿರೀಕ್ಷಿತ ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ.
ಸ್ವಾಮಿ ವಿವೇಕಾನಂದರು ಹೇಳಿದಂತೆ ನಿನ್ನ ಮುಂದಿರುವ ಮತ್ತು ಹಿಂದಿರುವ ಶಕ್ತಿಗಿಂತ ನಿನ್ನೊಳಗಿನ ಶಕ್ತಿ ಅಧಿಕ ಆ ಶಕ್ತಿಯನ್ನು ಬಳಸಿಕೊಂಡು
ಸ್ವಯಂ ಬೆಳವಣಿಗೆಯ ಪಯಣ ಮುಂದುವರೆಸಬೇಕು. ಹುಟ್ಟಿನಿಂದ ಚಟ್ಟದವರೆಗೆ ಕಲಿಯುವುದು ಸಾಕಷ್ಟಿರುತ್ತದೆ. ನಮ್ಮನ್ನು ನಾವು ಸುಧಾರಿಸುವ ಅವಕಾಶವೂ ಇರುತ್ತದೆ. ಆ ಅವಕಾಶ ಬಂದಾಗ ಸದುಪಯೋಗ ಪಡಿಸಿಕೊಳ್ಳಲು ಸದಾ ಕಾತರರಾಗಿರೋಣ.
ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಪುಸ್ತಕಗಳು ಬುದ್ಧಿಮತ್ತೆಯನ್ನು ಹೆಚ್ಚಿಸುವ ಮೂಲಗಳಾಗಿವೆ. ಹೆಚ್ಚೆಚ್ಚು ಪುಸ್ತಕಗಳನ್ನು ಓದಿದಂತೆಲ್ಲ ಹೆಚ್ಚು ಬುದ್ಧಿವಂತರಾಗುತ್ತೇವೆ ನಮ್ಮನ್ನು ನಾವು ಜ್ಞಾನಸಮೃದ್ಧಗೊಳಿಸಿಕೊಳ್ಳಲು ಪುಸ್ತಕಗಳನ್ನು ಓದಲು ಪ್ರಾರಂಭಿಸೋಣ. ಪ್ರಾರಂಭದಲ್ಲಿ ಪುಸ್ತಕ ಓದುವುದಕ್ಕೆ ಆಸಕ್ತಿ ಇರುವುದಿಲ್ಲ.ಓದಲು ಆರಂಭಿಸಿದೊಡನೇ ಬೋರ್ ಆಗಿ ಅದನ್ನು ಮುಚ್ಚಿಡಬೇಕೆನ್ನಿಸುತ್ತದೆ. ಆದರೂ ಪುಸ್ತಕ ಓದುವುದನ್ನು ನಿಲ್ಲಿಸಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಪುಸ್ತಕ ಓದುವ ಹವ್ಯಾಸ ಒಮ್ಮೆ ರುಚಿಸಿದರೆ ಅದರ ಮಜವೇ ಬೇರೆ ಕಳೆದ ವರ್ಷ ನನ್ನ ಕೆಲಸದ ಒತ್ತಡದ ನಡುವೆಯೂ ಐವತ್ತು ಕನ್ನಡ ಪುಸ್ತಕ ಓದಿರುವುದನ್ನು ನಾನು ಹೆಮ್ಮೆಯಿಂದ ಹೇಳುವೆ.
ಇದರ ಜೊತೆಗೆ ಬಹು ಭಾಷೆಯ ಕಲಿಕೆ ನಮ್ಮ ಕೆರಿಯರ್ ಬೆಳವಣಿಗೆಗೆ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿದೆ. ನಮ್ಮ ಮಾತೃಭಾಷೆ ಹಾಗೂ ಇಂಗ್ಲಿಷ್ ಗೊತ್ತಿದ್ದರೆ ಮಾತ್ರ ಸಾಕು ಎಂದುಕೊಳ್ಳಬೇಡಿ. ಹೇಗಾದರೂ ಸರಿ, ಬೇರೆ ಭಾಷೆಗಳನ್ನು ಕಲಿಯೋಣ. ಸಾಧ್ಯವಾದರೆ ಭಾಷಾ ಕೋರ್ಸ್ಗಳ ಮೂಲಕ, ಒಂದಾದರೂ ವಿದೇಶಿ ಭಾಷೆಯನ್ನು ಕಲಿಯುವುದು ಉತ್ತಮ. ಅನ್ಯ ಭಾಷೆಯನ್ನು ಕಲಿಯುವುದರಿಂದ ಹೊಸ ಕೌಶಲ ಬೆಳೆಸಿಕೊಂಡಂತಾಗುತ್ತದೆ ಜೊತೆಗೆ ಅಲ್ಲಿನ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ಈ ನಿಟ್ಟಿನಲ್ಲಿ ಈ ವರ್ಷದಿಂದ ನಾನು ಸಂಸ್ಕೃತ ಭಾಷೆಯನ್ನು ಕಲಿಯಲು ಆರಂಭಿಸಿರುವೆ.
ಇಂದಿನ ಆಧುನಿಕ ಜಗದಲ್ಲಿ ಇಂದು ಟ್ರೆಂಡಿಂಗ್ ನಾಳೆ ಹಳತಾಗುತ್ತದೆ.ಅದಕ್ಕೆ ತಕ್ಕಂತೆ ನಾವೂ ಅಪ್ಡೇಟ್ ಆಗುತ್ತಲೇ ಇರಬೇಕು ಇಲ್ಲದಿದ್ದರೆ ಔಟ್ಡೇಟ್ ಆಗುವ ಸಂಭವಿರುತ್ತದೆ. ನಾವು ಸೇರಬಹುದಾದ ಹೊಸ ಕೋರ್ಸ್ ಏನಾದರೂ ಇದೆಯೇ ಎಂಬುದನ್ನು ಪರಿಶೀಲಿಸಿ. ಹೊಸ ಜ್ಞಾನ ಮತ್ತು ಕೌಶಲಗಳನ್ನು ಗಳಿಸಲು ಕೋರ್ಸ್ಗಳು ಉಪಯುಕ್ತ. ಇದಕ್ಕಾಗಿ ದೀರ್ಘಾವಧಿಯ ಸೆಮಿನಾರ್ ವರ್ಕ್ಷಾಪ್ಗಳ ಅಗತ್ಯವಿಲ್ಲ. ಆನ್ಲೈನ್ ತರಬೇತಿಯಾದರೂ ಆದೀತು. ಒಂದೆರಡು ವರ್ಕ್ಷಾಪ್ಗಳಿಂದಲೇ ಹೊಸ ಒಳದೃಷ್ಟಿಕೋನವನ್ನು ಪಡೆಯಬಹುದು.
ಕೆಲಸದ ಪರಿಸರ ಮತ್ತು ಮನೆಯ ಪರಿಸರ ನಮ್ಮ ಉದ್ಯೋಗದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ.ನಮ್ಮ ಸುತ್ತಮುತ್ತಲಿನ ಪರಿಸರವೂ ನಮಗೊಂದು ಒಳ್ಳೆಯ ಮೂಡ್ ತಂದುಕೊಡಬಲ್ಲದು. ನಾವು ವಾಸಿಸುವ ಮತ್ತು ಕಚೇರಿಯಲ್ಲಿನ ಸ್ಥಳವು ಸ್ಪೂರ್ತಿದಾಯಕ ಪರಿಸರದಲ್ಲಿದ್ದರೆ ಅದುವೇ ನಮಗೆ ಪ್ರತಿದಿನವೂ ಪ್ರೇರಣೆ ನೀಡಬಲ್ಲದು.
ಉತ್ತಮ ಹವ್ಯಾಸಗಳು ನಮ್ಮ ಮಾನಸಿಕ ಆರೋಗ್ಯಕ್ಕೆ ಪೂರಕ.ಕೆಲವೊಮ್ಮೆ ಈ ಹವ್ಯಾಸಗಳು ನಮ್ಮ ವೃತ್ತಿ ಜೀವನದ ಬೆಳವಣಿಗೆಗೂ ಸಹಕಾರಿಯಾಗುತ್ತವೆ.
ನಮಗಿಷ್ಟವಾದ ಕೆಲವು ಹವ್ಯಾಸಗಳ ಜೊತೆಯಲ್ಲಿ. ಅದಲ್ಲದೇ ನಾವು ಕಲಿಯಬೇಕಿರುವ ಯಾವುದಾದರೂ ಆಟ ಇದೆಯೆ?. ಗಾಲ್ಫ್, ಚಾರಣ, ಬೆಟ್ಟ ಹತ್ತುವುದು, ಡ್ಯಾನ್ಸ್ ಇತ್ಯಾದಿಗಳಿಗೆ ಪ್ರಯತ್ನಿಸಿ ನೋಡಬಹುದು. ಏನಾದರೂ ಹೊಸತನ್ನು ಕಲಿಯುವುದರಿಂದ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕ ಯಾವುದಾದರೂ ವಿಭಿನ್ನ ದೃಷ್ಟಿಕೋನಗಳಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ.
ನಮ್ಮ ಕೆರಿಯರ್ ನಲ್ಲಿ ಮುಂದುವರೆಯಲು ಅನವಶ್ಯಕ ಹೆದರಿಕೆ ತ್ಯಜಿಸಬೇಕು.
ಹೆದರಿಕೆ ಎನ್ನುವುದು ಎಲ್ಲರಲ್ಲಿಯೂ ಇರುವಂಥಾದ್ದೇ. ಅನಿಶ್ಚಿತತೆಯ ಭೀತಿ, ಸಾರ್ವಜನಿಕವಾಗಿ ಮಾತನಾಡಲು ಅಂಜಿಕೆ, ರಿಸ್ಕ್ ತೆಗೆದುಕೊಳ್ಳುವಾಗಿನ ಗಾಬರಿ ಇವು ನಮ್ಮನ್ನು ನಾವಿರುವ ಸ್ಥಾನಕ್ಕೇ ಸೀಮಿತಗೊಳಿಸಿಬಿಡುತ್ತವೆ. ನಮ್ಮ ಬೆಳವಣಿಗೆಗೆ ಇವು ಅಡ್ಡಿಯಾಗಿಬಿಡುತ್ತವೆ. ಯಾವ ಕ್ಷೇತ್ರದಲ್ಲಿ ಬೆಳೆಯಬೇಕು ಎಂದುಕೊಳ್ಳುವಿರೋ ಅದರ ಮೇಲೆ ಹೆದರಿಕೆಯ ಛಾಯೆ ಬೀಳದಂತೆ ನೋಡಿಕೊಳ್ಳಬೇಕು.
ವಾಸ್ತವದಲ್ಲಿ ಜೀವಿಸುತ್ತಾ ಗತದಲ್ಲಿ ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಕಾಲಕಾಲಕ್ಕೆ ನಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ನಮ್ಮ ಕರ್ತವ್ಯ ನಿಭಾಹಿಸಿದರೆ ನಾವೊಬ್ಬ ಉತ್ತಮ ಕೆಲಸಗಾರರಾಗುವುದರಲ್ಲಿ ಸಂದೇಹವಿಲ್ಲ. ಒಟ್ಟಿನಲ್ಲಿ ಕೆಲಸ ಯಾವುದೇ ಇರಲಿ ಶ್ರದ್ಧೆಯಿಂದ ಬದ್ದತೆಯಿಂದ ಮಾಡಬೇಕು ಎಲ್ಲಕ್ಕಿಂತ ಮಿಗಿಲಾಗಿ ನಾವು ಮಾಡುವ ಕಾರ್ಯ ಆತ್ಮತೃಪ್ತಿ ನೀಡಬೇಕು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment