14 September 2023

ಪ್ರಜಾಪ್ರಭುತ್ವ ದಿನ... ಸೆಪ್ಟಂಬರ್ 15:


 

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಸೆಪ್ಟೆಂಬರ್ 15



ರಾಜಪ್ರಭುತ್ವ, ನಿರಂಕುಶ ಪ್ರಭುತ್ವ, ಪ್ರಜಾಪ್ರಭುತ್ವ ಹೀಗೆ 
ಪ್ರಪಂಚದಲ್ಲಿ ವಿವಿಧ ರೀತಿಯ ಸರ್ಕಾರಗಳು ಅಸ್ತಿತ್ವದಲ್ಲಿವೆ.ಈ ಎಲ್ಲಾ ಪ್ರಭುತ್ವಗಳಿಗೆ ಹೋಲಿಸಿದರೆ  ಪ್ರಜಾಪ್ರಭುತ್ವ ಉತ್ತಮ ಸರ್ಕಾರ ಪಧ್ಧತಿ ಎಂದು ಎಲ್ಲರೂ ಒಪ್ಪುತ್ತಾರೆ.
ವಿಶ್ವ ಸಂಸ್ಥೆಯ ಸಾಮನ್ಯ ಸಭೆಯು 2007 ರ ಸೆಪ್ಟೆಂಬರ್ 15 ರಂದು ಒಂದು ನಿರ್ಣಯ ಕೈಗೊಳ್ಳುವ ಮೂಲಕ ಪ್ರತಿವರ್ಷವೂ ವಿಶ್ವ ಪ್ರಜಾಪ್ರಭುತ್ವ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವವುದು ಈ ದಿನಾಚರಣೆಯ ಪ್ರಮುಖ ಉದ್ದೇಶಗಳಲ್ಲೊಂದು.

ಪ್ರಜಾಪ್ರಭುತ್ವದ ವಿಚಾರ ಇಂದು ನಿನ್ನೆಯದಲ್ಲ. ಪ್ರಜಾಪ್ರಭುತ್ವ ಎಂಬ ಪದವನ್ನು ಹಲವಾರು ಅರ್ಥಗಳಲ್ಲಿ ಬಳಸಲಾಗುತ್ತದೆ. ಹಾಗೂ ಪ್ರಜಾ ಪ್ರಭುತ್ವವನ್ನು ಅಬ್ರಹಾಂ ಲಿಂಕನ್ ರವರು ಹೇಳಿರುವಂತೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಸರಕಾರವೇ ಪ್ರಜಾಪ್ರಭುತ್ವ.ಪುರಾತನ ಕಾಲದಲ್ಲಿ ಗ್ರೀಕ್ ನಗರ ರಾಜ್ಯವಾದ ಆತೆನ್ಸ್ನಲ್ಲಿ ಪ್ರತ್ಯಕ್ಷ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿತ್ತು.  ಅಲ್ಲದೆ ಪ್ರಾಚೀನ ಭಾರತದಲ್ಲಿದ್ದ ಗಣರಾಜ್ಯಗಳ ಬಗ್ಗೆ ಸಾಕಷ್ಟು ಸಂಶೋಧನೆಯಾಗಿದೆ. ಇತರ ಕೆಲವು ದೇಶಗಳಲ್ಲೂ ಇಂಥ ಪ್ರಜಾಪ್ರಭುತ್ವವಿದ್ದುದನ್ನು ಕಾಣಬಹುದಾಗಿದೆ.

ಪ್ರಜಾಪ್ರಭುತ್ವ ಸರ್ಕಾರದ ರಚನೆಯ ಪ್ರಶ್ನೆ ಮೊಟ್ಟಮೊದಲು ಉದ್ಭವವಾದದ್ದು 19ನೆಯ ಶತಮಾನದಲ್ಲಿ. 18ನೆಯ ಶತಮಾನದವರೆಗೆ ಇದರ ಪೂರ್ಣ ಪರಿಕಲ್ಪನೆಯಿರಲಿಲ್ಲ. ಸಾಮಾಜಿಕ ಜೀವನದಲ್ಲೂ ರಾಜಕೀಯ ಜೀವನದಲ್ಲೂ ಸಮಾನತೆಗಾಗಿ ಕಾರ್ಖಾನೆಗಳ ಮಾಲಿಕರಿಗೂ ಕಾರ್ಮಿಕರಿಗೂ ಘರ್ಷಣೆ ಮೊದಲಾಗಿ ಸಮಾನತೆಯನ್ನು ಪ್ರಜಾಪ್ರಭುತ್ವದ ತತ್ವವಾಗಿ ಪರಿಗಣಿಸಲಾದ್ದು 18ನೆಯ ಶತಮಾನದಿಂದ ಈಚೆಗೆ. ಆ ಕಾಲದಲ್ಲಿ ಪ್ರಜಾಪ್ರಭುತ್ವ ಪ್ರಚಲಿತವಾಗಿರಲಿಲ್ಲ. ಆಧುನಿಕ ಕಾಲದವರೆಗೆ ಪ್ರಚಲಿತವಾಗಿದ್ದ ಪ್ರಮುಖ ರಾಜ್ಯ ಪದ್ಧತಿ ಎಂದರೆ ಅರಸೊತ್ತಿಗೆ. ಆದರೆ ಇಂದಿನ ಪರಿಸ್ಥಿತಿಯೇ ಬೇರೆ. ಹದಿನಾರನೆಯ ಶತಮಾನದಿಂದೀಚೆಗೆ ಅರಸೊತ್ತಿಗೆ ಕ್ಷೀಣಿಸುತ್ತ ಬಂದಿದೆ. ಈಗ ಪ್ರಜಾಪ್ರಭುತ್ವದ ತತ್ವಗಳು, ಆದರ್ಶಗಳು ಆಳವಾಗಿ ಬೇರೂರಿಕೊಂಡಿವೆ. ಪ್ರಪಂಚದ ಕೆಲವು ಭಾಗಗಳನ್ನು ಬಿಟ್ಟರೆ ಎಲ್ಲೆಡೆಯಲ್ಲೂ ಸರ್ಕಾರಗಳನ್ನು ಪ್ರಜಾಪ್ರಭುತ್ವದ ಕೆಲವು ತತ್ವಗಳಿಗೆ ಅನುಕೂಲವಾಗಿ ರಚಿಸಲಾಗಿದೆ. ಅವುಗಳ ಸ್ವರೂಪದಲ್ಲಿ ಭಿನ್ನತೆಗಳಿದ್ದರೂ ಕೆಲವು ತತ್ವಗಳೂ ಆಚರಣೆಗಳೂ ವಿವಾದಾಸ್ಪದವಾಗಿದ್ದರೂ ಪ್ರಜಾಪ್ರಭುತ್ವ ಪದ್ಧತಿಗೆ ಬಹುತೇಕ ಎಲ್ಲರೂ ನಿಷ್ಠೆ ತೋರಿಸುತ್ತಿದ್ದಾರೆ.

ಪ್ರಜಾಪ್ರಭುತ್ವ ಅರಸೊತ್ತಿಗೆಯಂತೆ ನಿರಂಕುಶ ಪ್ರಭುತ್ವವಲ್ಲ, ಅಥವಾ ಶ್ರೀಮಂತ ವರ್ಗದ ರಾಜ್ಯವಲ್ಲ, ಇದು ಪ್ರಜೆಗಳ ರಾಜ್ಯ. ಲೋಕವಾಣಿಯೇ ದೇವವಾಣಿ ಎಂದು ಪ್ರತಿಪಾದಿಸುವ ಪದ್ಧತಿ ಇದು. ಇಂದಿನ ಪ್ರಜಾಪ್ರಭುತ್ವದಲ್ಲಿ ಆಳುವವರೂ ಆಳಲ್ಪಡುವವರೂ ಪ್ರಜೆಗಳೇ ಆಗಿರುವುದರಿಂದ ಹೆಚ್ಚು ಕಡಿಮೆ ಎಂಬ ತಾರತಮ್ಯವಿಲ್ಲ.

ಇಂದು ಜಾರಿಯಲ್ಲಿರುವ ಪ್ರಾತಿನಿಧಿಕ ಅಥವಾ ಪರೋಕ್ಷ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಯೇ ಆಗಲಿ ಕೆಲವು ವ್ಯಕ್ತಿಗಳೇ ಆಗಲಿ ಸ್ವೇಚ್ಛೆಯಾಗಿ ಆಳಲು ಎಡೆಯಿಲ್ಲ. ಪ್ರಜೆಗಳ ಪ್ರತಿನಿಧಿಗಳು ಪ್ರಜೆಗಳ ಹತೋಟಿಯೊಳಗೆ ಇರಬೇಕಾಗುತ್ತದೆ. ಇಂಥ ಹತೋಟಿಗಳನ್ನು ಪರಿಣಾಮಕಾರಿಯಾಗಿಸಲು  ಸಂವಿಧಾನದಲ್ಲಿ ಮತ್ತು ಶಾಸನಗಳಲ್ಲಿ ಸೂಕ್ತ ನಿರ್ದೇಶನಗಳಿರುತ್ತವೆ.  ಸಂವಿಧಾನ ಹಾಗೂ ಕಾನೂನುಗಳ ಆಚೆಗೂ ಹಲವಾರು ಹತೋಟಿಗಳಿವೆ.




ಪ್ರಜೆಗಳು ಅದರಲ್ಲೂ ಮತದಾರರು ತಮ್ಮ ಪ್ರತಿನಿಧಿಗಳ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನಿಟ್ಟುಕೊಳ್ಳಲು ಪ್ರಾತಿನಿಧಿಕ ಪ್ರಜಾಪ್ರಭುತ್ವ ಅನುವು ಮಾಡಿಕೊಡುತ್ತದೆ. ನಿಯಮಿತ ಕಾಲದಲ್ಲಿ ಚುನಾವಣೆಗಳು ನಡೆಯುತ್ತವೆ. ಪ್ರತಿನಿಧಿಗಳು ನಿಶ್ಚಿತ ಅವಧಿಯಲ್ಲಿ ಮಾತ್ರ ಅಧಿಕಾರದಲ್ಲಿರುತ್ತಾರೆ. ಇಂದಿನ ಪ್ರತಿನಿಧಿಗಳು ಚೆನ್ನಾಗಿ ಕಾರ್ಯ ಮಾಡದಿದ್ದರೆ, ತಮ್ಮ ಕ್ಷೇತ್ರಗಳ ಬಗ್ಗೆ ಉಪೇಕ್ಷೆ ತೋರಿದರೆ ಮುಂದಿನ ಚುನಾವಣೆಗಳಲ್ಲಿ ಅವರ ಬದಲಾಗಿ ಬೇರೆ ಅಭ್ಯರ್ಥಿಗಳನ್ನು ಆರಿಸಬಹುದಾಗಿದೆ. ಅಯೋಗ್ಯನೆನಿಸಿದ ಪ್ರತಿನಿಧಿಯನ್ನು ಅವಧಿ ಮುಗಿಯುವ ಮುಂಚೆಯೇ ಕರೆಯಿಸಿಕೊಳ್ಳುವ ಅಧಿಕಾರ ಕೆಲವು ದೇಶಗಳಲ್ಲಿ ಮತದಾರರಿಗೆ ಇರುತ್ತದೆ. ಜಾಗೃತ ಶಾಸಕರು ಕಾರ್ಯಾಂಗದ ವಿವಿಧ ಚಟುವಟಿಕೆಗಳನ್ನು ಗಮನವಿಟ್ಟು ನೋಡುತ್ತಿರುತ್ತಾರೆ. ಲೋಪದೋಷಗಳು ಕಂಡುಬಂದರೆ ಶಾಸನ ಸಭೆಗಳಲ್ಲಿ ಟೀಕೆ, ಟಿಪ್ಪಣೆ ಮಾಡುತ್ತಾರೆ ಸೂಚನೆಗಳನ್ನು ನೀಡುತ್ತಾರೆ. ಸರ್ಕಾರದ ಇಂಥ ಲೋಪದೋಷಗಳನ್ನು ಪತ್ರಿಕೆಗಳು ಪ್ರಕಟಿಸುವುದರಿಂದ ಅವು ಜನತೆಯ ಗಮನಕ್ಕೆ ಬರುವುದು ಸಹಜ.




ಮತ ಎಂಬುದು ಪ್ರಜೆಗಳ ಕೈಯಲ್ಲಿಯ ಒಂದು ಪ್ರಬಲ ಅಸ್ತ್ರ. ಅದನ್ನು ಜಾಣತನದಿಂದ ಪರಿಣಾಮಕಾರಿಯಾಗಿ ಉಪಯೋಗಿಸದಿದ್ದರೆ ಜನತಂತ್ರ ಸರಿಯಾಗಿ ನಡೆಯಲಾರದು. ಪ್ರಜೆಗಳು ರಾಜಕೀಯ ವಿಷಯಗಳ ಬಗ್ಗೆ ಅನಾಸಕ್ತಿ ತೋರುವುದರಿಂದ ಅವರಿಗೆ ಹಾನಿ. ತಮ್ಮ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಪ್ರಪಂಚದಲ್ಲಿ ಏನು ನಡೆದಿದೆ ಎಂಬುವುದರ ಅರಿವು ಅವರಿಗಿರಬೇಕಾಗುತ್ತದೆ.

ಚಿರಂತನ ಜಾಗೃತಿಯೇ ಪ್ರಜಾಪ್ರಭುತ್ವದ ಬೆಲೆ. ತಮಗೆ ಹಕ್ಕುಗಳೊಂದಿಗೆ ಕರ್ತವ್ಯಗಳೂ ಇವೆ ಅನ್ನುವುದರ ಪ್ರಜ್ಞೆ ಪ್ರಜೆಗಳಿಗಿರಬೇಕು. ಪ್ರಜೆಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಿ ಉಳಿಸಿಕೊಳ್ಳುವುದರಲ್ಲಿ ಸ್ವತಂತ್ರ ಹಾಗೂ ನಿರ್ಭೀತ ಪತ್ರಿಕೆಗಳ ಪಾತ್ರ ಹಿರಿಯದು. ರಾಜಕೀಯ ಪಕ್ಷಗಳು ಪತ್ರಿಕೆಗಳಂತೆ ಪ್ರಜಾಪ್ರಭುತ್ವದ ಜೀವಾಳವಾಗಿವೆ. ಅವು ಜನರ ಹಾಗೂ ಸರ್ಕಾರದ ನಡುವಣ ಸೇತುವೆಗಳು. ಚುನಾವಣೆಗೆ ಮುನ್ನ ನೀಡಿದ ಆಶ್ವಾಸನೆಗಳನ್ನು ಪೂರೈಸಲು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನದಲ್ಲಿ ತರುವ ಅತಿ ಮುಖ್ಯ ಕಾರ್ಯ ರಾಜಕೀಯ ಪಕ್ಷಗಳದ್ದಾಗಿದೆ. ಅಧಿಕಾರರೂಢ ಪಕ್ಷವಷ್ಟೇ ವಿರೋಧ ಪಕ್ಷವೂ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಇಂದಿನ ಪ್ರಜಾಪ್ರಭುತ್ವವನ್ನು ಬಹುಮತದ ಸರ್ಕಾರವೆಂದು ಕರೆಯಲಾಗಿದೆ. ಬಹುಮತ ಗಳಿಸಿದ ಪಕ್ಷ ಸರ್ಕಾರ ರಚಿಸಿದರೂ ಅಲ್ಪಸಂಖ್ಯಾತರಿಗೆ ಹಾಗೂ ರಾಜಕೀಯ ವಿರೋಧಿಗಳಿಗೆ ತೊಂದರೆ, ಅನಾನುಕೂಲತೆಗಳು ಒದಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ಪರಸ್ಪರ ತಿಳಿವಳಿಕೆ, ವಿಚಾರ ವಿನಿಮಯಗಳು ಪ್ರಜಾಪ್ರಭುತ್ವದ ಮುಖ್ಯ ಲಕ್ಷಣಗಳು.

ಭಾರತದಂತಹ ರಾಷ್ಟ್ರಗಳಲ್ಲಿ  ಪ್ರಜಾಪ್ರಭುತ್ವ ಒಂದು ಜೀವನ ವಿಧಾನವೇ ಆಗಿದೆ. ಆರ್ಥಿಕ ಸಾಮಾಜಿಕ ಸಮಾನತೆ ಹಾಗೂ ರಾಜಕೀಯ ಸ್ವಾತಂತ್ರ್ಯ ಒದಗಿಸಿಕೊಡಲು ಅದು ಹೋರಾಡುತ್ತದೆ. ನಾಗರಿಕರಲ್ಲಿ ಪರಸ್ಪರ ತಿಳಿವಳಿಕೆ, ವಿಚಾರ ವಿನಿಮಯ, ಸಹಕಾರ, ಸಹಾನುಭೂತಿ, ರಚನಾತ್ಮಕ ವಿಮರ್ಶೆ ಜೀವಂತ ಪ್ರಜಾಪ್ರಭುತ್ವದ ಲಕ್ಷಣಗಳಾಗಿರುತ್ತವೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

No comments: