14 September 2023

ಇಂಜಿನಿಯರ್ ದಿನ....

 


ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ.

ಜಗತ್ತು ಕಂಡ ಶ್ರೇಷ್ಠ ಇಂಜಿನಿಯರ್, ದಕ್ಷ ಆಡಳಿತಗಾರ, ಭಾರತದ ಯೋಜನೆಯ ಪಿತಾಮಹ ಸರ್ ಎಂ ವಿಶ್ವೇಶ್ವರಯ್ಯ ಹೆಸರು ಕೇಳದವರಿಲ್ಲ.ಭಾರತಕ್ಕೆ ಅವರ ಅಸಾಧಾರಣ ಕೊಡುಗೆ ಸ್ಮರಿಸುತ್ತಾ ಅವರ ಹುಟ್ಟಿದ ದಿನವಾದ ಸೆಪ್ಟೆಂಬರ್15 ನ್ನು ಪ್ರತಿ ವರ್ಷ "ಇಂಜಿನಿಯರ್ ಗಳ ದಿನ" ಎಂದು ಆಚರಿಸುತ್ತಾ ಬಂದಿದ್ದೇವೆ.

ವಿಶ್ವೇಶ್ವರಯ್ಯನವರು ಜನಿಸಿದ್ದು ಸೆಪ್ಟೆಂಬರ್ 15,1860 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ. ವಿಶ್ವೇಶ್ವರಯ್ಯನವರ ತಂದೆ 'ಶ್ರೀನಿವಾಸ ಶಾಸ್ತ್ರಿ', ತಾಯಿ 'ವೆಂಕಟಲಕ್ಷ್ಮಮ್ಮ'. ಅವರ ಪೂರ್ವಜರು ಈಗಿನ ಆಂದ್ರಪ್ರದೇಶದ 'ಮೋಕ್ಷಗುಂಡಂ' ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಕೊಂಡಿದೆ. ವಿಶ್ವೇಶ್ವರಯ್ಯ ನವರ ತಂದೆ ಸಂಸ್ಕೃತ ವಿದ್ವಾಂಸರು. ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ಅವರು 15 ವರ್ಷದವರಿರುವಾಗಲೆ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. 1881 ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.
1884 ರಲ್ಲಿ  ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು. ಇದಾದ ಮೇಲೆ ಭಾರತೀಯ ನೀರಾವರಿ ಆಯೋಗದಿಂದ ಅವರಿಗೆ ಆಮಂತ್ರಣ ಬಂದಿತು. ಈ ಆಯೋಗವನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ 18ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟಾದ ಗ್ರಾಂಡ್ ಅಣಿಕಟ್ ನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ 'ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ' ವೂಂದನ್ನು ಕಂಡು ಹಿಡಿದು ಅದಕ್ಕಾಗಿ 'ಪೇಟೆಂಟ್' ಪಡೆದರು. ಮೊದಲ ಬಾರಿಗೆ 1903 ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ 'ಖಡಕ್ವಾಸ್ಲಾ' ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ 'ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು' ಮತ್ತು ಕರ್ನಾಟಕದ 'ಕೃಷ್ಣರಾಜಸಾಗರ' ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು.
1908ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು.ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು.
ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಬ್ರಿಟೀಷ ಸರ್ಕಾರ ಅವರಿಗೆ "ಸರ್" ಪದವಿಯನ್ನು ನೀಡಿತು.

1955 ರಲ್ಲಿ ಭಾರತ ಸರ್ಕಾರದ ಅತ್ಯುಚ್ಚ ಗೌರವವಾದ ಭಾರತ ರತ್ನ ಲಭಿಸಿತು. ಸರ್. ಎಂ. ವಿಶ್ವೇಶ್ವರಯ್ಯನವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು
ಕರ್ನಾಟಕದಲ್ಲಿ ಹೆಚ್ಚಿನ ಶಾಲಾ ಕಾಲೇಜುಗಳು, ಐ.ಟಿ.ಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಇವರ ಹೆಸರಿಟ್ಟು ಗೌರವಿಸಲಾಗಿದೆ.

ನಾನು   ಗೌರಿಬಿದನೂರಿನಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸುವಾಗ ವಿಶ್ವೇಶ್ವರಯ್ಯ ರವರ ಹುಟ್ಟೂರಾದ ಮುದ್ದೇನಹಳ್ಳಿಗೆ ಮಕ್ಕಳನ್ನು ಪ್ರವಾಸ ಕರೆದುಕೊಂಡುಹೋಗಿದ್ದೆ.ಅಲ್ಲಿಯ ಅವರ ಮನೆಯು ವಸ್ತು ಸಂಗ್ರಾಹಾಲಯವಾಗಿ ಮಾರ್ಪಾಡಾಗಿದೆ.ಅಲ್ಲಿರುವ ಭಾರತ ರತ್ನ ಪದಕ ಮುಟ್ಟಿ ಪುಳಕಗೊಂಡಿದ್ದೆನು.
ಸರ್ ಎಂ ವಿಶ್ವೇಶ್ವರಯ್ಯ ರವರು ಮುಂದಿನ ಅನೇಕ ಪೀಳಿಗೆಗೆ ಮಾದರಿ ಮತ್ತು ಸ್ಪೂರ್ತಿದಾಯಕ ವ್ಯಕ್ತಿತ್ವ .

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529




No comments: