ವಿಭಿನ್ನವಾಗಿ ಯೋಚಿಸಿ....
ವಿಭಿನ್ನವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗುವವರಿಗೆ ಎಂದಿಗೂ ಸೋಲಾಗುವುದಿಲ್ಲ ಎಂಬುದಕ್ಕೆ ದಿನಕ್ಕೊಂದು ಸ್ಟಾರ್ಟಪ್, ಯೂನಿಕಾರ್ನ್ ಕಂಪನಿಗಳು ಹುಟ್ಟಿ ಕೋಟಿಗಳ ಲೆಕ್ಕದಲ್ಲಿ ವ್ಯವಹಾರ ಮಾಡುತ್ತ ನೂರಾರು ಜನರಿಗೆ ಉದ್ಯೋಗವನ್ನು ನೀಡಿ ನವೋದ್ಯಮಿಗಳಿಗೆ ಲಾಭವನ್ನು ತಂದುಕೊಡುತ್ತಿವೆ. ಇದಕ್ಕೆ ಉದಾಹರಣೆಯಾಗಿ ಅಮೇಜಾನ್ ,ಪ್ಲಿಪ್ ಕಾರ್ಟ್, ಜೊಮ್ಯಾಟೊ, ರೆಡ್ ಬಸ್, ಇತ್ಯಾದಿ ನೂರಾರು ಹೇಳಬಹುದು. ಹೀಗೆ ವ್ಯವಹಾರದಲ್ಲಿ ಯಶಸ್ವಿಯಾಗಲು ಕೊಂಚ ವಿಭಿನ್ನವಾಗಿ ಆಲೋಚಿಸಿ ಧೈರ್ಯದಿಂದ ಮುನ್ನುಗ್ಗಿದವರೇ ಮುಂದೊಂದು ದಿನ ಯದ್ಯಮಿಗಳಾಗಿ ಹೊರಹೊಮ್ಮುತ್ತಾರೆ.
ಬಹುಕಾಲದ ಹಿಂದೆ ಚೀನಾದಲ್ಲಿ ಒಬ್ಬ ಯಶಸ್ವೀ ಉದ್ಯಮಿ ಇದ್ದರು. ಅವರದ್ದು ಬಾಚಣಿಗೆ ಬ್ಯುಸಿನೆಸ್. ಅವರಿಗೆ ವಯಸ್ಸಾಗಿತ್ತು.
ಇನ್ನೇನು ನಿವೃತ್ತಿ ಹತ್ತಿರವಾಗಿತ್ತು.
ಅವರಿಗೆ ಮೂರು ಮಂದಿ ಗಂಡು ಮಕ್ಕಳಿದ್ದರು. ತನ್ನ ಉದ್ಯಮವನ್ನು ಸುರಕ್ಷಿತ ಕೈಗಳಲ್ಲಿ ಇಡಬೇಕು ಎಂಬ ಆಸೆಯಿಂದ ಅವರು ಮಕ್ಕಳಿಗೆ ಒಂದು ಸಣ್ಣ ಪರೀಕ್ಷೆಯನ್ನು ಒಡ್ಡಿದರು.
"ನೀವು ಒಂದು ಬೌದ್ಧ ಆಶ್ರಮಕ್ಕೆ ಹೋಗಿ ಅಲ್ಲಿನ ಸನ್ಯಾಸಿಗಳಿಗೆ ಬಾಚಣಿಗೆ ಮಾರಿ ಬರಬೇಕು" ಎಂದರು ತಂದೆ. ಮೂರು ದಿನದ ಬಳಿಕ ವರದಿ ನೀಡಬೇಕು ಎಂದರು.
ಮಕ್ಕಳಿಗೆ ಆಘಾತ. ಸನ್ಯಾಸಿಗಳಿಗೆ ತಲೆ ಕೂದಲೇ ಇರುವುದಿಲ್ಲ. ಅವರಿಗೆ ಬಾಚಣಿಗೆ ಯಾಕೆ? ಯಾಕಾದರೂ ಅವರು ತೆಗೆದುಕೊಂಡಾರು ಎಂದು ಯೋಚಿಸಿದರು. ಅಷ್ಟಾದರೂ ಅಪ್ಪನ ಮಾತು ಮೀರಲಾರದೆ ಆಶ್ರಮಕ್ಕೆ ತೆರಳಿದರು.ಮೂರು ದಿನಗಳ ಬಳಿಕ ಒಬ್ಬ ಮಗ ಬಂದ. "ನನಗೆ ಎರಡು ಬಾಚಣಿಗೆ ಮಾರಲು ಸಾಧ್ಯವಾಯಿತು ಅಪ್ಪ"ಅಂದ. ಅಪ್ಪ ಕುತೂಹಲದಿಂದ ಕೇಳಿದ" ಬಾಚಣಿಗೆ ತೆಗೆದುಕೊಳ್ಳುವಂತೆ ಹೇಗೆ ಅವರನ್ನು ಒಪ್ಪಿಸಿದೆ ಮಗನೇ?"ಮಗ ಹೇಳಿದ "ನಿಮಗೇನಾದರೂ ಬೆನ್ನು ತುರಿಸಿದರೆ ಆಗ ತುರಿಸಿಕೊಳ್ಳಲು ಅನುಕೂಲವಾಗುತ್ತದೆ" ಎಂದು
ಅಷ್ಟು ಹೊತ್ತಿಗೆ ಎರಡನೇಯವನು ಬಂದ. ಅವನು 10 ಬಾಚಣಿಗೆ ಮಾರಿಬಂದಿದ್ದ.
ಅವನು ಹೇಳಿದ"ನೀವು ಈ ಬಾಚಣಿಗೆಗಳನ್ನು ಖರೀದಿ ಆಶ್ರಮದಲ್ಲಿ ಇಟ್ಟರೆ ಬರುವ ಪ್ರವಾಸಿಗರಿಗೆ ಅನುಕೂಲವಾದೀತು ಅಂದೆ. ಎಲ್ಲೋ ದೂರದಿಂದ ಬಂದಿರ್ತಾರೆ, ಕೂದಲು ಕೆದರಿಕೊಂಡಿದ್ದರೆ ಇದರ ಮೂಲಕ ಬಾಚಿಕೊಳ್ಳಬಹುದು ಎಂದು ಅವರಿಗೆ ಹೇಳಿದೆ. ಒಮ್ಮೆ ನಿರಾಕರಿಸಿದರೂ ಕೊನೆಗೆ 10 ತೆಗೆದುಕೊಳ್ಳಲು ಒಪ್ಪಿದರು" ಅಂದ.
ಅಷ್ಟು ಹೊತ್ತಿಗೆ ಮೂರನೇ ಮಗ ಬಂದ. "ಎಷ್ಟು ಬಾಚಣಿಗೆ ಮಾರಿದೆ ಮಗನೇ "ಅಂತ ಅಪ್ಪ ಕೇಳಿದ. "ಒಂದು ಸಾವಿರ ಬಾಚಣಿಗೆ ಸೇಲ್ ಆಯ್ತಪ್ಪ"ಅಂತ ಅವನು ಹೇಳುತ್ತಿದ್ದಂತೆಯೇ ಎಲ್ಲರಿಗೂ ಭಾರಿ ಅಚ್ಚರಿ!
ಇದು ಹೇಗೆ ಸಾಧ್ಯ ಎಂದು ಎಲ್ಲರೂ ಮುಖ ಮುಖ ನೋಡಿಕೊಂಡರು.
ಅಪ್ಪ ಕೇಳಿದರು"ಹೇಗಪ್ಪಾ ಇದು ಸಾಧ್ಯವಾಯಿತು, ಸ್ವಲ್ಪ ವಿವರಿಸಿ ಹೇಳು."
ಮಗ ವಿವರಿಸಿದ "ನಾನು ಆಶ್ರಮವಾಸಿ ಸನ್ಯಾಸಿಗಳ ಬಳಿಗೆ ಹೋಗಿ ಅವರಿಗೊಂದು ಐಡಿಯಾ ಕೊಟ್ಟೆ. ಅದೇನೆಂದರೆ, ಈ ಬಾಚಣಿಗೆಗಳಲ್ಲಿ ಬುದ್ಧನ ಸಂದೇಶವನ್ನು ಅಂಟಿಸಿದರೆ ಇಲ್ಲವೇ ಪ್ರಿಂಟ್ ಮಾಡಿದರೆ ಅದನ್ನು ಸಂದರ್ಶಕರು ಮತ್ತು ಭಕ್ತರಿಗೆ ಕಾಣಿಕೆಯಾಗಿ ಕೊಡಬಹುದು ಅಂದೆ. ಹಾಗೆ ಪಡೆದುಕೊಂಡವರು ಪ್ರತಿ ದಿನವೂ ತಲೆ ಬಾಚುವಾಗ ಬುದ್ಧನ ಬೋಧನೆಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾದೀತು ಎಂದು ಹೇಳಿದೆ.
ಅವರಿಗೆ ಹೌದೆನಿಸಿತು. ಕೇವಲ ಎರಡು ರೂಪಾಯಿಯ ಬಾಚಣಿಗೆ ಮೂಲಕ ಬುದ್ಧನ ಸಂದೇಶವನ್ನು ಮನೆ ಮನೆಗೆ ತಲುಪಿಸಬಹುದು ಎಂಬ ಐಡಿಯಾವೇ ರೋಚಕವಾಗಿದೆ ಅಂದರು. ಒಂದು ಸಾವಿರ ಬಾಚಣಿಗೆಗೆ ಆರ್ಡರ್ ಮಾಡಿದರು."
ಮಗ ಮುಂದುವರಿಸಿದ "ಅಷ್ಟೇ ಅಲ್ಲ ಅಪ್ಪ. ಬುದ್ಧನ ಸಂದೇಶಗಳನ್ನು ನಾವೇ ಮುದ್ರಿಸಿ ಕೊಡುವುದಾದರೆ ಬೇರೆ ಆಶ್ರಮಗಳ ಆರ್ಡರ್ ಕೂಡಾ ಪಡೆಯಲು ಸಹಾಯ ಮಾಡುವುದಾಗಿ ಅಲ್ಲಿನ ಸನ್ಯಾಸಿಗಳು ಹೇಳಿದರು."
ಈ ಮೇಲಿನ ಕಥೆಯನ್ನು ಓದಿದಾಗ ಅಸಾಧ್ಯವಾದದು ಯಾವುದೂ ಇಲ್ಲ ಸ್ವಲ್ಪ ನಮ್ಮ ಮೆದುಳಿಗೆ ಕೆಲಸ ಕೊಡಬೇಕು .ಪ್ರಾಮಣಿಕ ಪ್ರಯತ್ನ ಮಾಡಬೇಕು. ಥಿಂಕ್ ಔಟ್ ಆಪ್ ದಿ ಬಾಕ್ಸ್ ಎಂದರೆ ಇದೇ ಅಲ್ಲವೇ..? ಬೋಳು ತಲೆಯವರಿಗೂ ಬಾಚಣಿಗೆ ಮಾರುವುದಾದರೆ ಇನ್ನೂ ಎಂತಹ ಅವಕಾಶಗಳು ಇರಬಹುದು? ನನಗೆ ಉದ್ಯೋಗವಿಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಬದಲು ವಿಭಿನ್ನವಾಗಿ ಆಲೋಚಿಸುವ ಮೂಲಕ ತಾನೇ ಉದ್ಯಮಿಯಾಗಿ ಬೆಳೆಬಹುದಲ್ಲವೆ...
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment