ಕ್ಯಾತ್ಸಂದ್ರ ದ ಪ್ರಖ್ಯಾತ ಪವಿತ್ರ ಇಡ್ಲಿ ಹೋಟೆಲ್ ನಲ್ಲಿ ಇಡ್ಲಿ ವಡೆ ತಿನ್ನುವಾಗ ಆ ರಷ್ ನೋಡಿಯೇ ಗೊತ್ತಾಯಿತು ಅದರ ಪ್ರಖ್ಯಾತಿ .ಎಣಿಸಿದ್ದಕ್ಕಿಂತ ರುಚಿ ಕಡಿಮೆಯೇನಿರಲಿಲ್ಲ ನನಗಂತೂ ಇಡ್ಲಿಗಿಂತ ವಡೆ ಬಹಳ ಹಿಡಿಸಿತು . ಪ್ರಕಾಶಕರು ಹಾಗೂ ಲೇಖಕರಾದ ಎಂ .ವಿ. ಶಂಕರಾನಂದ ರವರ ಜೊತೆಗೂಡಿ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿಗುಂಟ ಬೆಂಗಳೂರಿನ ಕಡೆ ನಮ್ಮ ಪಯಣ ಆರಂಬಿಸಿದೆವು. ಬೇಸಿಗೆ ರಜೆಯಲ್ಲಿ ನಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಂಪರೆಯ ತಾಣಗಳ ನೋಡುವ ನಮ್ಮ ಅಭಿಯಾನದ ಭಾಗವಾಗಿ ನಮ್ಮ ನಾಡನ್ನಾಳಿದ ಗಂಗರ ರಾಜಧಾನಿಗಳಲ್ಲಿ ಒಂದಾದ "ಮಣ್ಣೆ " ನೋಡಲು ಹೊರಟಿದ್ದೆವು. ಮಾರ್ಗಮಧ್ಯದಲ್ಲಿ ಬಲಕ್ಕೆ ನೋಡಿದೆ ನಿಜಗಲ್ ಬೆಟ್ಟ ಕಂಡಿತು " ನನ್ನ ನೋಡಲು ಯಾವಾಗ ಬರುವಿರಿ? ಎಂದು ಕೇಳಿದಂತಿತ್ತು. ಖಂಡಿತವಾಗಿಯೂ ಬರುವೆ ಎಂದು ಮನದಲ್ಲೇ ಹೇಳಿ ನಮ್ಮ ಬೈಕ್ ಪಯಣ ಮಂದುವರೆಸಿದೆವು. ಡಾಬಾಸ್ ಪೇಟೆಯಿಂದ ಎಡಕ್ಕೆ ತಿರುಗಿ ಏಳು ಕಿಲೋಮೀಟರ್ ಸಾಗಿ ಎಡಕ್ಕೆ ತಿರುಗಿ ಕೆರೆಯ ಏರಿಯ ಮೇಲೆ ಒಂದು ಕಿಲೋಮೀಟರ್ ಕ್ರಮಿಸಿದಾಗ ನಮಗೆ ಗಂಗರ ರಾಜಧಾನಿ ಮಣ್ಣೆಗೆ ಸ್ವಾಗತ ಎಂಬ ಕಮಾನು ಕಂಡಿತು .ಆಗ ನಮಗೆ ಬಹಳ ಸಂತಸವಾಯಿತು.ಅದೊಂದೆ ಸಂತಸದ ಸಂಗತಿ ಮಿಕ್ಕಿದ್ದೆಲ್ಲಾ ಬೇಸರದ ಸಂಗತಿಯೇ!
ಸ್ವಾಗತ ಕಮಾನು ದಾಟಿ ಮುಂದೆ ಸಾಗಿದ ನಾವು ಹೊಲದಿಂದ ತಲೆಯ ಮೇಲೆ ಹುಲ್ಲು ಹೊತ್ತು ತರುವ ಮಹಿಳೆಯರ ಬಳಿ ಈ ಊರಿನ ಸ್ಮಾರಕಗಳ ಬಗ್ಗೆ ಕೇಳಿದಾಗ "ಸ್ಮಾರಕ ಗೀರಕ ಇಲ್ಲ ಸಾ.. ಆ ತೋಟದ ಕಡೆ ಸೂಳೆ ಮನೆ ,ಇನ್ನೊಂದು ಮನೆ ಐತೆ ಹೋಗ್ರಿ "ಅಂದರು.
ಅವರು ಕೈತೋರಿದ ಕಡೆ ಸಾಗಿದೆವು.
ಪಾಳುಬಿದ್ದ ಕಲ್ಲಿನ ರಚನೆಗಳು ನಮ್ಮ ಸ್ವಾಗತಿಸಿದವು .ಅಲ್ಲಲ್ಲಿ ಮದ್ಯದ ಬಾಟಲ್ ಗಳು ಸಿಗರೇಟ್ ಪ್ಯಾಕ್ ಗಳು , ಬಿದ್ದಿದ್ದನ್ನು ನೋಡಿದ ಮೇಲೆ ಊರವರು ಈ ಸ್ಮಾರಕಗಳನ್ನು ಯಾಕೆ ಸೂಳೆ ಗುಡಿ ಎಂದು ಕರೆಯುತ್ತಾರೆ ಎಂದು ನನಗೆ ಮನವರಿಕೆಯಾಯಿತು.
ಪಶ್ಚಿಮ ಗಂಗಾ ರಾಜವಂಶದ ಹಿಂದಿನ ರಾಜಧಾನಿ ನೆಲಮಂಗಲದ ಮನ್ನೆಯ ಭಾರತೀಯ ಪುರಾತತ್ವ ಇಲಾಖೆಯು ತಕ್ಷಣ ಗಮನ ಹರಿಸ ಬೇಕು. ಒಂದು ಕಾಲದಲ್ಲಿ ಸುಂದರವಾದ ರಚನೆಗಳನ್ನು ಹೊಂದಿದ್ದ ಮನ್ನೆ ಈಗ ಬರೀ ಅವಶೇಷಗಳ ತಾಣವಾಗಿರುವುದು ಬೇಸರದ ಸಂಗತಿ. ಅಲ್ಲಿರುವ ಪುರಾತನ ಅವಶೇಷಗಳ ರೂಪದ ದೇವಾಲಯಗಳಲ್ಲಿ ಒಂದು ಸೋಮೇಶ್ವರ ದೇವಾಲಯ. ಈ ದೇವಾಲಯವನ್ನು ಕ್ರಿ.ಶ.9-10ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈಗ ಈ ಸುಂದರವಾದ ದೇವಾಲಯವು ಪಾಳುಬಿದ್ದಿದೆ. ಅತ್ಯಂತ ಸುಂದರವಾದ ಬೃಹತ್ ಗಾತ್ರದ ದ್ವಾರಪಾಲಕರು ಪ್ರವೇಶದ್ವಾರದಲ್ಲಿ ನಮ್ಮನ್ನು ಸ್ವಾಗತಿಸುತ್ತಾರೆ. ಪುರಾತನ ದೇವಾಲಯ ಮತ್ತು ಗಂಗರ ವಿಶಿಷ್ಟವಾದ ಅಲಂಕಾರಿಕ ಕಂಬದ ಕೆತ್ತನೆಗಳೊಂದಿಗೆ ಮಂಟಪದ ಭವ್ಯವಾದ ಪ್ರಭಾವವನ್ನು ನೀಡುತ್ತದೆ. ಎರಡೂ ಬದಿಯಲ್ಲಿರುವ ಕಿಟಕಿ ಫಲಕವು ಅದರ ಸೌಂದರ್ಯದ ಪರಿಮಾಣವನ್ನು ಹೇಳುತ್ತದೆ. ಅಲ್ಲಿ ಅನೇಕ ಇತರ ರಚನೆಗಳು ಉಳಿವಿಗಾಗಿ ಹೋರಾಡುತ್ತಿವೆ. ಈ ದೇವಾಲಯ ಮತ್ತು ಗ್ರಾಮದ ಇತರ ದೇವಾಲಯಗಳ ಅಧ್ಯಯನವು ಶಾಸನಗಳೊಂದಿಗೆ ಇಂದಿನ ಅಗತ್ಯವಾಗಿದೆ.
“ಮನ್ನೆಯಲ್ಲಿ ಕೆರೆಯ ಬಳಿ ಗಂಗರ ಕಾಲದ ಸುಂದರ ಸಪ್ತಮಾತೃಕೆಯ ಪ್ರತಿಮೆಗಳಿವೆ . ಹದಿನೇಳು ಕಂಬಗಳಿದ್ದು, ರಚನೆಯು ಕೆಡವಲ್ಪಟ್ಟ, ನಾಶವಾದ ಅಥವಾ ಪಾಳುಬಿದ್ದ ಸ್ಥಿತಿಯಲ್ಲಿದೆ. ಪ್ರತಿಯೊಂದು ಕಂಬವೂ ಸಂಶೋಧನೆಗೆ ಯೋಗ್ಯವಾಗಿದೆ. ಮತ್ತೊಂದು ದೇವಾಲಯದ ಅವಶೇಷದ ಕಡೆ ಸಾಗಿದ ನಾವು ಛಾವಣಿಯು ಪದ್ಮಾವತಿ ದೇವತೆ ಮತ್ತು ಇತರ ತೀರ್ಥಂಕರರ ಕೆತ್ತನೆಗಳನ್ನು ಗಮನಿಸಿದೆವು. ಪದ್ಮಾವತಿ ಮತ್ತು ಅಂಬಿಕಾ ದೇವತೆಗಳು ಜೈನ ಧರ್ಮದ ದೇವತೆಗಳಾಗಿರುವುದರಿಂದ ಇದು ಪ್ರಮುಖ ಚಿಹ್ನೆಯಾಗಿದೆ. ಆದರೆ ಈಗ ಅದು ಕೆಟ್ಟ ಸ್ಥಿತಿಯಲ್ಲಿದೆ.
ಒಂದು ಸುಂದರ ಐತಿಹಾಸಿಕ ಸ್ಥಳ ನೋಡಿದ ಸಂತಸ ಹಾಗೂ ಅದರ ಸರಿಯಾದ ನಿರ್ವಹಣೆ ಇಲ್ಲದ ಬಗ್ಗೆ ಬೇಸರದಿಂದ ಕೆರೆಯ ಏರಿಯ ಮೇಲೆ ಬರುವಾಗ ಓರ್ವ ತರುಣ ಮರದ ಕೆಳೆಗೆ ಕುಳಿತು ಓದುವುದು ಕಂಡು ನಮ್ಮ ಬೈಕ್ ನಿಲ್ಲಿಸಿ ಅವನೊಂದಿಗೆ ಮಾತುಕತೆ ಆರಂಭಿಸಿದೆವು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿದ್ದ ಆ ಯುವಕನನ್ನು ಈ ಸ್ತಳದ ಬಗ್ಗೆ ಮಾಹಿತಿಯನ್ನು ಕೇಳಿದಾಗ ಅವನು ನೀಡಿದ ಮಾಹಿತಿಯನ್ನು ಕೇಳಿ ಸ್ವಲ್ಪ ಸಮಾಧಾನವಾಯಿತು .ನಮ್ಮ ನಾಡಿನ ಇತಿಹಾಸ ಕೆಲವರಿಗಾದರೂ ಕೆಲ ಮಟ್ಟಿಗೆ ತಿಳಿದಿದೆ ಎಂದು ಆ ಯುವಕನ ಬಗ್ಗೆ ಮೆಚ್ಚುಗೆ ಉಂಟಾಯಿತು. ಯುವಕನ ಮಾತಿನಲ್ಲೇ ಹೇಳುವುದಾದರೆ...
" ಪಶ್ಚಿಮ ಗಂಗಾ ರಾಜವಂಶವು ಕ್ರಿ.ಶ. 350 ರಿಂದ ಕ್ರಿ.ಶ. ಹತ್ತನೇ ಶತಮಾನದ ಅಂತ್ಯದವರೆಗೆ ದಕ್ಷಿಣ ಕರ್ನಾಟಕದ ದೊಡ್ಡ ಭಾಗಗಳನ್ನು ಆಳಿತು.
4 ನೇ ಶತಮಾನದ ಮೊದಲು ಗಂಗಾ ಕುಲದ ಮೂಲವು ದಂತಕಥೆಗಳು ಮತ್ತು ಪುರಾಣಗಳಲ್ಲಿ ಮುಚ್ಚಿಹೋಗಿದೆ. ಅವರ ಇತಿಹಾಸದ ಬಗ್ಗೆ ಸ್ಪಷ್ಟತೆಯು ಕನ್ನಡದಲ್ಲಿ ಚಾವುಂಡರಾಯ ಪುರಾಣ ಮತ್ತು ಪ್ರಾಕೃತದಲ್ಲಿ ಲೋಕವಿಭಾಗದಂತಹ ಸಮಕಾಲೀನ ಬರಹಗಳಿಂದ ಮತ್ತು ಮೈಸೂರು, ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಮತ್ತು ಅನಂತಪುರ ಜಿಲ್ಲೆಯಲ್ಲಿ (ಈಗ ಸೀಮಾಂಧ್ರ ರಾಜ್ಯದಲ್ಲಿ) ಉತ್ಖನನಗೊಂಡ ಹಲವಾರು ಶಾಸನಗಳಿಂದ ಬರುತ್ತದೆ.
ಪಾಶ್ಚಿಮಾತ್ಯ ಗಂಗರು ಈ ಪ್ರದೇಶದಲ್ಲಿ ತಮ್ಮ ಸುದೀರ್ಘ ಆಳ್ವಿಕೆಯಲ್ಲಿ ರಾಜಕೀಯ, ಸಂಸ್ಕೃತಿ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು, ಕೆಲವೊಮ್ಮೆ ಸ್ವತಂತ್ರ ರಾಜರಾಗಿ ಮತ್ತು ಇತರ ಸಮಯದಲ್ಲಿ ಅವರ ದೊಡ್ಡ ನೆರೆಹೊರೆಯವರ ಅಧೀನರಾಗಿ, ಬಾದಾಮಿ ಚಾಲುಕ್ಯರು ಮತ್ತು ನಂತರ ಮಾನ್ಯಖೇಟದ ರಾಷ್ಟ್ರಕೂಟರು. ಕನ್ನಡ ಮತ್ತು ಸಂಸ್ಕೃತದಲ್ಲಿ ಸಾಹಿತ್ಯಕ್ಕೆ ಅವರ ಪ್ರೋತ್ಸಾಹ, ಗೋಮಟೇಶ್ವರನ ಪ್ರಸಿದ್ಧ ಏಕಶಿಲೆ ಸೇರಿದಂತೆ ವಾಸ್ತುಶಿಲ್ಪದಲ್ಲಿನ ಅವರ ಸಾಧನೆಗಳು, ದಕ್ಷಿಣ ಕರ್ನಾಟಕದ ಅವರ ಹಿಂದೂ ದೇವಾಲಯಗಳು ಮತ್ತು ಶ್ರವಣಬೆಳಗೊಳ ಮತ್ತು ಕಂಬದಹಳ್ಳಿಯ ಅವರ ಜೈನ ಬಸದಿಗಳು ಈ ಪ್ರದೇಶಕ್ಕೆ ಅವರು ನೀಡಿದ ಶ್ರೀಮಂತ ಕೊಡುಗೆಗೆ ಸಾಕ್ಷಿಯಾಗಿದೆ"
ಆ ಯುವಕನ ಮಾತು ಕೇಳಿದಾಗ, ನಾನು ಪದವಿಯಲ್ಲಿ ಪಾಲಾಕ್ಷ ರವರು ಬರೆದ ಕರ್ನಾಟಕದ ಇತಿಹಾಸ ಹಾಗೂ
ನಾಡಿನ ಹಿರಿಯ ಸಾಹಿತಿ ವಿದ್ಯಾವಾಚಸ್ಪತಿ ಕವಿತಾ ಕೃಷ್ಣ ರವರ ಮನ್ನೆಯ ಬಗ್ಗೆ ಬರೆದ ಪುಸ್ತಕ ಓದಿದ ಅಂಶಗಳು ನೆನಪಿಗೆ ಬಂದವು .
ಆ ಯುವಕನ ಐತಿಹಾಸಿಕ ಜ್ಞಾನದ ಬಗ್ಗೆ ಮೆಚ್ಚುಗೆ ಸೂಚಿಸಿ ತುಮಕೂರಿನ ಕಡೆಗೆ ನಾವು ಹಿಮ್ಮುಖವಾಗಿ ಪಯಣ ಆರಂಭಿಸಿದಾಗ ಆ ಯುವಕನ ರೂಪದಲ್ಲಿ ಒಂದು ಬೆಳ್ಳಿಯ ಗೆರೆ ಗೋಚರಿಸಿತು. ಇನ್ನು ಮುಂದಾದರೂ ಐತಿಹಾಸಿಕ ಪ್ರಜ್ಞೆಬೆಳೆಸಿಕೊಳ್ಳೋಣ . ನಮ್ಮ ಪಾರಂಪರಿಕ ತಾಣಗಳ ರಕ್ಷಣೆಗೆ ಪಣ ತೊಡೋಣ .
ಅಂದ ಹಾಗೆ ಇಂದು "ವಿಶ್ವ ಪರಂಪರೆಯ ದಿನ "(18-4-2022)
ಎಲ್ಲರಿಗೂ ವಿಶ್ವ ಪರಂಪರೆಯ ದಿನದ ಶುಭಕಾಮನೆಗಳು.
ಈ ಸ್ಥಳಕ್ಕೆ ತಲುಪುವುದು ಹೇಗೆ?
ಮಣ್ಣೆ (MANNE) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಹೋಬಳಿಯಲ್ಲಿನ ಒಂದು ಊರು. ಇದು ಗಂಗರ ರಾಜಧಾನಿಯಾಗಿತ್ತು.ಡಾಬಸ್ ಪೇಟೆ ಇಂದ ದೊಡ್ಡಬಳ್ಳಾಪುರಕ್ಕೆ ಹೋಗುವ ರಸ್ತೆಯಲ್ಲಿ ಡಾಬಸ್ ಪೇಟೆ ಇಂದ ಸುಮಾರು ೮ ಕಿ.ಮೀ ಗಳಷ್ಟು ಕ್ರಮಿಸಿದರೆ ಮುದ್ದಲಿಂಗನ ಹಳ್ಳಿ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ರೈಲು ಹಳಿ ಹಾದುಹೋಗುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿದರೆ ಮಣ್ಣೆ ಕೆರೆ, ಅದರ ಏರಿಯ ಮೇಲೆ ೧.೫ ಕಿ.ಮೀ ಸಾಗಿದರೆ ಮನ್ನೆ ಸಿಗುತ್ತದೆ.
ಬೆಂಗಳೂರು ಮತ್ತು ತುಮಕೂರು ಕಡೆಯಿಂದ ರೈಲಿನಲ್ಲಿಯೂ ಬರಬಹುದು.
ಆಗಬೇಕಾದ್ದು ಏನು?
ಮುಖ್ಯ ರಸ್ತೆಯಿಂದ ಐತಿಹಾಸಿಕ ಸ್ಥಳದ ಬಗ್ಗೆ ನಾಮಫಲಕ ಅಳವಡಿಸಬೇಕಿದೆ.ವಿವಿಧ ಸ್ಮಾರಕಗಳ ಬಳಿ ಅವುಗಳ ಮಾಹಿತಿ ಫಲಕ ಅಳವಡಿಸಬೇಕಿದೆ.ಸ್ಮಾರಕಗಳ ಸುತ್ತ ರಕ್ಷಣಾ ಬೇಲಿ ನಿರ್ಮಾಣ ಮಾಡಬೇಕಿದೆ. ಪ್ರವಾಸಿಗರಿಗೆ ಬೇಕಾದ ಮೂಲಭೂತವಾದ ಸೌಕರ್ಯಗಳನ್ನು ಒದಗಿಸಬೇಕಿದೆ.
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು