ಆಧುನಿಕ ಸೊಸೆ.
ಹೊಸ ಸಂಸಾರ ಹಾಲು ಉಕ್ಕಿದಂತೆ ಉಕ್ಕಿ ಹರಿಯಬೇಕು ಸೊಸೆಗೆ ಅತ್ತೆ ಸಲಹೆ ನೀಡಿದರು. ದಿನಕ್ಕೆರಡು ಲೀಟರ್ ಹಾಲು ಉಕ್ಕಿಸುತ್ತಾ ಉಕ್ಕಿ ಹರಿದ ಮೇಲೆ ಉಳಿದ ಹಾಲಿನಲ್ಲಿ ಟೀ ಮಾಡಿಕೊಂಡು ಕುಡಿದು ಎರಡು ತಿಂಗಳಿಗೇ ಸ್ಟವ್ ಕಮರಿ ವಾಸನೆ ಹೊಡೆದದ್ದಕ್ಕೆ ಹೊಸ ಸ್ಟವ್ ಖರೀದಿಸಿದ್ದಾಳೆ.ಏಕೆಂದರೆ ಇವಳು ಆಧುನಿಕ ಸೊಸೆ.
ಹೊಸ ಕೆಲಸ ಕಲಿತುಕೋ ಎಂಬ ಅತ್ತೆಯ ಮಾತಿಗೆ ಬೆಲೆ ಕೊಟ್ಟು ನಿತ್ಯ 5 ಗಂಟೆಗಳು ಧಾರಾವಾಹಿ ನೋಡುತ್ತಾ ಅದರಲ್ಲಿ ಬರುವ ಸೊಸೆಯ ತರಹ ಕೆಲಸ ಮಾಡಲು ಕಲಿಯುತ್ತಿದ್ದಾಳೆ.ಇವಳೇ ಹೊಸ ಸೊಸೆ.
ಅತ್ತೆ ಅವರ ಮಗನ ಆರೋಗ್ಯದ ಬಗ್ಗೆ ಎಚ್ಚರ ವಹಿಸಲು ಸೊಸೆಗೆ ಹೇಳಿದರು .ಆರೋಗ್ಯದ ದೃಷ್ಟಿಯಿಂದ ನಿತ್ಯ ಒಂದು ಸಲ ಮಾತ್ರ ಗಂಡನಿಗೆ ಊಟ ನೀಡುತ್ತಿದ್ದಾಳೆ.ಇವಳೇ ಅಧುನಿಕ ಸೊಸೆ.
ಗಂಡನಿಗೆ ಕಷ್ಟ ಕೊಡಬಾರದು ಎಂಬ ಸಮಾಜದ ಮಾತು ನೆನಪಾಗಿ ಬೆಳಗ್ಗೆ ಮಾತ್ರ ಅಡುಗೆ ಗಂಡನಿಂದ ಮಾಡಿಸುತ್ತಿದ್ದಾಳೆ ಕಾರಣ ಇವಳು ಆಧುನಿಕ ಸೊಸೆ.
ಉಳಿತಾಯ ಮಾಡು ಎಂಬ ಮಾವನವರ ಮಾತಿನಿಂದ ವಾರಕ್ಕೆ ಒಂದು ಹೊಸ ಡ್ರೆಸ್ ಮಾತ್ರ ಕೊಳ್ಳುತ್ತಿದ್ದಾಳೆ. ಎರಡು ಸಿನಿಮಾಗಳನ್ನು ಮಾತ್ರ ನೋಡುತ್ತಿದ್ದಾಳೆ. ಅದಕ್ಕೆ ಅವಳಿಗೆ ಹೇಳುವುದು ಅಧುನಿಕ ಸೊಸೆ.
ಪತಿಯೇ ಪ್ರತ್ಯಕ್ಷ ದೇವರು ಎಂದು ಅವಳ ಅಮ್ಮ ಹೇಳಿದ್ದು ನೆನಪಾಗಿ, ವೈಕುಂಠ ಏಕಾದಶಿಯಂದು ಪತಿಯ ಪೂಜೆ ಮಾಡಿ ಮುಖಕ್ಕೆ ಮಂಗಳಾರತಿ ಎತ್ತಿ,ಅವನ ಕಾಲುಗಳ ಮೇಲೆ ತೆಂಗಿನಕಾಯಿ ಹೊಡೆದಳು ಪಾಪ ಕಾಲಿನ ಬೆರಳು ಜಜ್ಜಿಹೋಗಿ ರಕ್ತ ಬಂದು,ಕಟ್ಟನ್ನೂ ಕಟ್ಟಿದ್ದಾಳೆ ಶೀಘ್ರದಲ್ಲೇ ಗುಣಮುಖವಾದರೆ
ತಿರುಪತಿಗೆ ಬರುವೆ ಎಂದು ಹರಕೆ
ಹೊತ್ತಿದ್ದಾಳೆ.ಇವಳೇ ಆಧುನಿಕ ಸೊಸೆ.
(ಇದು ಎಲ್ಲಾ ಆಧುನಿಕ ಸೊಸೆಯಂದಿರಿಗೆ ಅನ್ವಯವಾಗುವುದಿಲ್ಲ ಹಾಗೇನಾದರೂ ಆದರೆ ಅದು ಕಾಕಾತಾಳೀಯ ಅಷ್ಟೇ)
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment