19 April 2022

ನಾನು ಮತ್ತು ಸೌದೆ


 


*ನಾನು ಮತ್ತು ಸೌದೆ. 


ನಮ್ಮ ಬಾಲ್ಯದಲ್ಲಿ ಅಡಿಗೆ ಮಾಡಲು ಉರುವಲು ಎಂದರೆ ಬಹುತೇಕ ಕಾಡನ್ನು ಮತ್ತು ಕಟ್ಟಿಗೆಯನ್ನು ಅವಲಂಬಿಸಿದ್ದೆವು. ಸೌದೆ ಒಲೆಗಳು ಪ್ರತಿಯೊಂದು ಮನೆಯಲ್ಲೂ ಇದ್ದವು. ಸೌದೆ ತರವುದು, ಗಂಡು ಹೆಣ್ಣು ಎಂಬ ಭೇದವಿರದೇ ಎಲ್ಲರೂ ಮಾಡುತ್ತಿದ್ದ ಕಾಯಕವಾಗಿತ್ತು. ದಿನದ ಸೌದೆಯ ಅಗತ್ಯಕ್ಕಿಂತ ಹೆಚ್ಚಿನ ಸೌದೆ ತಂದು ಮಳೆಗಾಲಕ್ಕೆ ಸೌದೆಯನ್ನು ಸಂಗ್ರಹ ಮಾಡುವುದೂ ಸಾಮಾನ್ಯವಾಗಿತ್ತು. ಹೊಲೆಯನ್ನು ಮೊದಲು ಹಚ್ಚಲು ಅಡಿಕೆ ಗರಿ, ತೊಗರಿ ಗಿಡಗಳ ಒಣಗಿದ ಸೌದೆಯನ್ನು ಸಾಮಾನ್ಯವಾಗಿ ಬಳಸುತ್ತಿದ್ದರು. ಕ್ರಮೇಣವಾಗಿ ಒಲೆ ಉರಿದಂತೆ ಗಟ್ಟಿ ಸೌದೆಗಳಾದ ತಂಗಟೆ ಸೌದೆ, ಬಂದ್ರೆ ಸೌದೆ, ಲಂಟಾನ್ ಸೌದೆ ಇತ್ಯಾದಿಗಳು ಬಳಕೆಯಾಗುತ್ತಿದ್ದವು. ಕೆಲವೊಮ್ಮೆ ಗೆಳೆಯರ ಜೊತೆಯಲ್ಲಿ ನಾನೂ ಸೌದೆತರಲು ಹೊರಡುತ್ತಿದ್ದೆ .ಮೊದಲಿಗೆ ಊರಿನ ಸುತ್ತಮುತ್ತಲಿನ ಹೊಲಗಳಲ್ಲಿ ಒಣಗಿದ ಅಳ್ಳ ಮರಗಳು( ಔಡಲ), ತೊಗರಿ ಗಿಡಗಳು, ಲಂಟಾನ್ ಗಿಡಗಳನ್ನು ತಂದು ಮನೆಯ ಮುಂದೆ ಹಾಕಿದ ನಾವು ಸುಮಾರು ಐದಾರು ಕಿಲೋಮೀಟರ್ ದೂರದ ಗುಡ್ಡದ ಕಡೆಗೆ ನೋಟ ಬೀರುತ್ತಿದ್ದೆವು .ಕಾಲ್ನಡಿಗೆಯಲ್ಲಿ ಅಷ್ಟು ದೂರ ಸಾಗಿ ಕಾಡಿನಲ್ಲಿ ಅಲ್ಲಲ್ಲಿ ಒಣಗಿ ಬಿದ್ದ ಬಂದ್ರೆ, ತಂಗಟೆ ಮುಂತಾದ ಗಿಡಗಳನ್ನು ಸಂಗ್ರಹಿಸಿ ,ಕಾಲ ಕಾಲಕ್ಕೆ ಸಿಗುವ ಕಾಡಿನ ಹಣ್ಣುಗಳಾದ ಬಿಕ್ಕೇಕಾಯಿ, ದ್ಯಾದಾರೆ ಹಣ್ಣು, ಗೇರು ಹಣ್ಣು, ಲಂಟಾನ್ ಹಣ್ಣು, ಕಾರೆ ಹಣ್ಣು,ಮುಂತಾದ ಹಣ್ಣುಗಳನ್ನು ತಿನ್ನುತ್ತಿದ್ದೆವು.ಕೆಲವೊಮ್ಮೆ ಎಡವಟ್ಟಾಗಿ ಗೇರು ಹಣ್ಣ ತಿಂದ ನಮ್ಮ ಗೆಳೆಯರಿಗೆ ಮೈಯೆಲ್ಲಾ ತುರಿಕೆ ಉಂಟಾಗಿ ಅಳುತ್ತಾ ಮನೆ ಕಡೆಗೆ ನಡೆದ ಉದಾಹರಣೆಗಳಿವೆ.

 ಬಾಯಾರಿಕೆ ಆದಾಗ ಅಲ್ಲೇ  ಗುಂಡಿಯಲ್ಲಿ ನಿಂತಿದ್ದ ನೀರು ಕುಡಿದು ಸೌದೆ ಹೊರೆಹೊತ್ತು ಮನೆ ಕಡೆ ಸಾಗುತ್ತಿದ್ದೆವು. ಐದಾರು ಕಿಲೋಮೀಟರ್ ದೂರ ಸಾಗಲು ಉದ್ದನೆಯ ಹೊರೆ ಕಟ್ಟಿ ತಲೆಯ ಮೇಲೆ ಎರಡು ಮೂರು ಬಟ್ಟೆಗಳ ಸಿಂಬೆ ಮಾಡಿಕೊಂಡು ಸೌದೆ ಹೊರೆ ಹೊತ್ತು ಊರ ಕಡೆ ಸಾಗುವಾಗ ಮಾರ್ಗ ಮಧ್ಯದಲ್ಲಿ ಒಮ್ಮೆ ಹೊರೆ ಕೆಳಗಿಳಿಸಿ ,ಸುಧಾರಿಸಿಕೊಂಡು ಮತ್ತೆ ಊರ ಕಡೆ ಪಯಣ ಬೆಳೆಸಿ ಮನೆಯ ಮುಂದೆ ಸೌದೆ ಹೊರೆ ತಂದು ದೊಪ್ ಎಂದ ಹಾಕಿದಾಗ ಅಮ್ಮ ಹೆಮ್ಮೆಯಿಂದ ನನ್ನ ಕಡೆ ಮೆಚ್ಚುಗೆ ಸೂಚಿಸಿ ಕುಡಿಯಲು ನೀರು ಕೊಟ್ಟು ತಿನ್ನಲು ಸಜ್ಜೆರೊಟ್ಟಿ ಹಾಗೂ ಚಿನಕುರುಳಿ ನೀಡುತ್ತಿದ್ದರು.ಆಗ ಕಾಡು ಸುತ್ತಿದ ದಣಿವೆಲ್ಲಾ ಒಂದೇ ಕ್ಷಣದಲ್ಲಿ ಮಾಯವಾಗುತ್ತಿತ್ತು.


ಊರಿನಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳು ಜರುಗಿದರೆ ಐದಾರು ಎತ್ತಿನ ಗಾಡಿಗಳಲ್ಲಿ ಜನರು ಕಾಡಿಗೆ ಹೋಗಿ ಸೌದೆ ತರುತ್ತಿದ್ದೆವು.ಆಗ ಹತ್ತು ಕಿಲೋಮೀಟರ್ ಗೂ ದೂರದ ಕಾಡಿಗೆ ಹೋಗಿ ಒಣಗಿದ  ದಪ್ಪ ಸೌದೆ ಗಳನ್ನು ಗಾಡಿಯಲ್ಲಿ ತರುತ್ತಿದ್ದೆವು.ಆಗ ನಮ್ಮದು ಎತ್ತಿನ ಗಾಡಿ ಇರಲಿಲ್ಲ ಒಮ್ಮೆ ಅಮಲ್ದಾರರ ಮನೆಯ ಮದುವೆಗೆ ಸೌದೆ ತರಲು ಹೋದಾಗ ನಾನೂ ಅವರ ಜೊತೆಯಲ್ಲಿ ಹೋಗಿ ಒಂದು ಹೊರೆ ಗಟ್ಟಿ  ಸೌದೆ ತಂದಿದ್ದೆ. ಇದನ್ನು ಗಮನಿಸಿದ ನಮ್ಮ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ತಿಪ್ಪೇಸ್ವಾಮಿ ಮೆಷ್ಟ್ರು "ಏ... ವೆಂಕಟೇಶ ಅಡಿಗೆ ಮಾಡಾಕೆ ನಿಮ್ಮ ಮನೆ ಸೌದೆ ಕೊಡೊ "  ಅಂದರು .ಕಾಡು ಅಲೆದು ಕಷ್ಟ ಪಟ್ಟು ಸೌದೆ ತಂದದ್ದು ನೆನಪಾಗಿ ಇಲ್ಲ ಸಾ ...ಸೌದೆ ಕೊಡಲ್ಲ ಅಂದೆ.ನಮ್ಮ ಮೇಷ್ಟ್ರಿಗೆ ಪಿತ್ತ ನೆತ್ತಿಗೇರಿ ನನಗೇ ಇಲ್ಲ ಎನ್ನುತ್ತೀಯಾ ಎಂದು ಚೆನ್ನಾಗಿ ಬಾರಿಸುತ್ತಾ " ನೀನು ಹೆಂಗೆ ಪಾಸಾಗ್ತಿಯ ನೋಡ್ತೀನಿ "ಎಂದು ಎಗರಾಡಿದರು.   ಅಲ್ಲಲ್ಲಿ ಬಾಸುಂಡೆ ಬಂದಿದ್ದವುಗಳನ್ನು ನೋಡಿಕೊಳ್ಳುತ್ತಾ ,  ಅಳುತ್ತಾ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನ ಬಳಿ ನಮ್ಮ ಮೇಷ್ಟ್ರು ವಿರುದ್ದ ದೂರು ನೀಡಿದೆ.ಅಮ್ಮಾ ನನ್ನ ಸಮಾಧಾನ ಮಾಡಿ ಮೇಷ್ಟ್ರ ಹತ್ತಿರ ಯಾಕೆ ನಿನ್ನ ಹೊಡೆದರು ಅಂತ ಕೇಳ್ತೀನಿ. ಮನೆಗೆ ನಡಿ ಅಂದರು.ಅಮ್ಮ ಮೇಷ್ಟ್ರನ್ನು ಬೈಯುತ್ತಾರೆ ಎಂದು ಮನೆಗೆ ಹಿಂತಿರುಗಿದೆ. ಒಂದು ವಾರ ಕಳೆದರೂ ಅಮ್ಮ ಮೇಷ್ಟ್ರ ಬಳಿ ಬೈಯುವುದಿರಲಿ ಕನಿಷ್ಟ ಪಕ್ಷ ಯಾಕೆ ಹೊಡಿದಿರಿ ಎಂದು ಕೇಳಲಿಲ್ಲ.ಸಿಟ್ಟಿನಿಂದ ಅಮ್ಮನ ಕೇಳಿದೆ ಯಾಕಮ್ಮ ಮೇಷ್ಟ್ರು ನ ಬೈಯಲಿಲ್ಲ ಅಂದು ಕೇಳಿದೆ."ಇದ್ಯೆ ಕೊಡ ಮೇಷ್ಟ್ರು ,ನಾಕ್ ಏಟ್ ಹಾಕಿದ್ರೆ ಆಶೀರ್ವಾದ ಇದ್ದಂಗೆ  ಹೋಗ್ಲಿ ಬಿಡು" ಅಂದಿದ್ದರು . ಈಗ ಆ ಮೇಷ್ಟ್ರ ಆಶೀರ್ವಾದ ಮತ್ತು ಅಮ್ಮನ ಹಾರೈಕೆಯಿಂದ ನಾನು ಮೇಷ್ಟ್ರು ಆಗಿರುವೆ.ನಮ್ಮ ಮೇಷ್ಟ್ರು ಸ್ವರ್ಗವಾಸಿಗಳಾಗಿರುವರು.

ಮೊನ್ನೆ ಊರಿಗೆ ಹೋದಾಗ ನಮ್ಮ ಅತ್ತಿಗೆ ಅಡಿಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ ಅಂದಾಗ ಅಮ್ಮ ಪ್ರೀತಿಯಿಂದ "ಹೋಗಪ್ಪ ಗುಡ್ಡುಕ್ ಹೋಗಿ ಸೌದೆ ಕಡ್ಕಂಬಾ" ಎಂದು ನಗುತ್ತಾ ಹೇಳಿ ,ಆ ಕಾಲದಲ್ಲಿ ಸೌದೆ ತರಲು ನಾವು ಪಟ್ಟ ಪಾಡುಗಳನ್ನು ನನ್ನ ಮಕ್ಕಳಿಗೆ ವಿವರವಾಗಿ ಹೇಳಿದರು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

No comments: