03 April 2022

ಸಿಹಿಜೀವಿಯ ಹಬ್ಬದ ದಿನಚರಿ .


 


ಸಿಹಿಜೀವಿಯ ಹಬ್ಬದ ದಿನಚರಿ


ಯುಗಾದಿಯ ಮರುದಿನ ಉಳಿದ ಕರಿಗಡುಬು ತಿಂದು ನೀರು ಎರೆಚುವ ಆಟ, ಉಯ್ಯಾಲೆ ಆಟ, ಮುಂತಾದ ಆಟಗಳನ್ನು ಆಡಿ ನಲಿವ ಜನರು .ಕೆಲವೆಡೆಗಳಲ್ಲಿ ಅಂದು ತಮ್ಮ ಗ್ರಾಮ ದೇವತೆಗಳು ದರ್ಶನ ಪಡೆದು ಹಿರಿಯರ ಕಾಲಿಗೆರಗಿ ಅವರ  ಆಶೀರ್ವಾದ ಪಡೆಯುವರು ಇಂದು ನಾವು ಕುಟುಂಬ ಸಮೇತ  ನಮ್ಮ ಗ್ರಾಮ ದೇವತೆ  ಚೌಡೇಶ್ವರಿ ತಾಯಿಯ ಆಶೀರ್ವಾದ ಪಡೆದೆವು .ನಂತರ ಹೊಳಲ್ಕೆರೆಯ ಇಂದಿರಾಗಾಂಧಿ ಶಾಲೆಯಲ್ಲಿ ಹತ್ತನೆಯ ತರಗತಿಯಲ್ಲಿ ವ್ಯಾಸಾಂಗ ಮಾಡುವ ನಮ್ಮ ಅಣ್ಣನ ಮಗಳಾದ ದೀಪಿಕಾ ಳನ್ನು ಭೇಟಿ ಮಾಡಿ ಮುಂದಿನ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಹಾರೈಸಿ ಬರುವ ಮಾರ್ಗದಲ್ಲಿ ಬಾಲ್ಯದಲ್ಲಿ ನನ್ನ ಬೆಳೆಸಿದ  ಸಾರಂಬಿ ಅತ್ತೆಯನ್ನು ಮಾತನಾಡಿಸಿ,  ಕುಟುಂಬ ಸಮೇತವಾಗಿ ಹೊರಕೆರೆದೇವರ ಪುರದ ಲಕ್ಷ್ಮಿ ನರಸಿಂಹ ಸ್ವಾಮಿಯ ದರ್ಶನ ಪಡೆದು ಸಿಜಿ ಹಳ್ಳಿಗೆ ಹಿಂತಿರುಗಿ ಎಳನೀರು ಕುಡಿದು ಯರಬಳ್ಳಿ ತಲುಪಿ ಮಾರಮ್ಮನ ಆಶೀರ್ವಾದ ಪಡೆದು ನಂತರ ಶಿರಾ ತಾಲ್ಲೂಕಿನ ಭೂತರಾಯ ಸ್ವಾಮಿಯ ಜಾತ್ರೆಯಲ್ಲಿ ಪಾಲ್ಗೊಂಡು ದೇವರಿಗೆ ಕೈಮುಗಿದು ಕುಂಬಾರಹಳ್ಳಿ ತಲುಪಿದೆವು. .ಕೆಲ ಊರುಗಳಲ್ಲಿ ಹೊಸತೊಡಕು ಅಥವಾ ವರ್ಷದ ತೊಡಕು ಕಾರ್ಯಕ್ರಮದ ಅಂಗವಾಗಿ  ನಾನ್ ವೆಜ್ ಆಹಾರ ಸೇವನೆ ಮಾಡುವರು . ಕುಂಬಾರಹಳ್ಳಿಯ ನಮ್ಮ ಮಾವನ ಮಗಳು ಗಿರಿಜಾ ಮತ್ತು ಅವರ ಕುಟುಂಬದ ಆಹ್ವಾನದ ಮೇರೆಗೆ ನಮ್ಮ ಊಟ ಅವರ ಮನೆಯಲ್ಲಿ ಆಯಿತು. ಸಂಜೆ ಎಲ್ಲರ ಚಿತ್ತ ಪಶ್ಚಿಮಾಭಿಮುಖವಾಗಿ ಹರಿಯಿತು.ಸಂಜೆ  ಐದೂವರೆಯಿಂದ ಚಾಂದ್ರಮಾನ ಯುಗಾದಿಯ ಚಂದ್ರನ ದರ್ಶನಕ್ಕೆ ಜನ ಹಾತೊರೆಯುತ್ತಾರೆ. ಕಣ್ಣು ಚುರುಕಾದ ಯಾರಿಗಾದರೂ ಮೊದಲು ಕಂಡರೆ "ಆ... ಅಗ ನೋಡು...ಆ ಕರೆಂಟಿನ ಕಂಬದ ನೀಟಿಗೆ ನೋಡು...." " ನನ್ ಕೈ ಪಕ್ಕ ನೋಡು.... " ಈ ತೆಂಗಿನ ಗಿಡದ ಮೇಲೆ ನೋಡು.....ಎಂದು  ಚಂದ್ರ ಕಾಣದವರಿಗೆ ದರ್ಶನ ಮಾಡಿಸಲು ಹರಸಾಹಸ ಮಾಡುವುದು ಪ್ರತಿಯೊಂದು ಹಳ್ಳಿಯಲ್ಲಿ ಕಂಡು ಬರುವ ಚಿತ್ರಣ. ಚಂದ್ರ ಕಂಡ ತಕ್ಷಣ ಭಕ್ತಿಯಿಂದ ಕೈಮುಗಿದು ಈ ವರ್ಷದ ಹಬ್ಬ ಈಗ ಅಧಿಕೃತವಾಗಿ ಮುಗಿಯಿತು ಎಂದು ಧನ್ಯತಾ ಭಾವ ಹೊಂದುತ್ತಾರೆ ನಮ್ಮ ಹಳ್ಳಿಯ ಜನ. ಚಂದ್ರನ ನೋಡಿ ವರ್ಷದ ಭವಿಷ್ಯ ನುಡಿವ ವಾಡಿಕೆ ಕೆಲ ಗ್ರಾಮಗಳಲ್ಲಿ ಇದೆ. ಸ್ವಲ್ಪ ಬಲಕ್ಕೆ ಚಂದ್ರ ವಾಲಿದರೆ ಒಂದು ರೀತಿ, ಎಡಕ್ಕೆ ವಾಲಿದರೆ ಮತ್ತೊಂದು ರೀತಿಯಲ್ಲಿ ಅರ್ಥಗಳನ್ನು ಬಿಡಿಸಿ ಹೇಳುವರು . ಅಂದ ಹಾಗೆ ನಾನು ಈ ವರ್ಷ ಚಂದ್ರನ ದರ್ಶನ ಮಾಡಿದ್ದು ತಾವರೆಕೆರೆಯಲ್ಲಿ .ಸಂಜೆ ಆರು ಮೂವತ್ತಕ್ಕೆ ಯಾವ ಕಡೆಯೂ ಬಾಗದ ನೇರವಾದ ಚಂದ್ರನ ದರ್ಶನವಾಯಿತು. ಈ ವರ್ಷದಲ್ಲಿ ಎಲ್ಲವೂ ಸಮಾನವಾಗಿರಲಿವೆ, ಒಳಿತಾಗಲಿದೆ ಶುಭಕೃತವಾಗಲಿದೆ ಎಂಬುದು ನನ್ನ ಅನಿಸಿಕೆ ... ಹತ್ತು ಗಂಟೆಗೆ ಕಾರಿನಲ್ಲಿ ಆರಂಭವಾದ ನಮ್ಮ ಹಬ್ಬದ ಪಯಣ ತುಮಕೂರಿಗೆ ಸೇರುವ ಮೂಲಕ ಮುಕ್ತಾಯವಾಯಿತು. ಕಾರಿನ ಕಿಲೋಮೀಟರ್ ಲೆಕ್ಕ ಇಂದು 275 ಕಿಲೋಮೀಟರ್ ಸಂಚಾರ ಮಾಡಿರುವಿರಿ ಎಂದು ಲೆಕ್ಕ ನೀಡಿತು...

ಇಂದು ಭೇಟಿ ಮಾಡಿದ ಜನರ ಅಭಿಮಾನ ,ಹಿರಿಯರ ಆಶೀರ್ವಾದ, ಪಡೆದ ಅನುಭವ, ಸಂಬಂಧಿಕರೊಂದಿಗೆ ಸಂವಾದ ,ಅನುಬಂಧ ಇವುಗಳು ಇನ್ನೂ ಲೆಕ್ಕಕ್ಕೆ ಸಿಗುತ್ತಿಲ್ಲ.....

ಮತ್ತೊಮ್ಮೆ ಸರ್ವರಿಗೂ ಶುಭಕೃತ ಚಾಂದ್ರಮಾನ ಉಗಾದಿಯ ಶುಭಾಶಯಗಳು....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: