28 February 2021

ವಿಜ್ಞಾನದ ಸದುಪಯೋಗ .ಹನಿ


 *ವಿಜ್ಞಾನದ ಸದುಪಯೋಗ*


ವಿಜ್ಞಾನವೇ ಬದಲಾವಣೆಗೆ ಕಾರಣ

ಜ್ಞಾನ ಅದರ ಬೇರು 

ಎಂಬುದನ್ನು ನೆನಪಿನಲ್ಲಿಡೋಣ

ವಿಜ್ಞಾನವನ್ನು ಸದುಪಯೋಗ 

ಪಡಿಸಿಕೊಳ್ಳೋಣ

ಅಜ್ಞಾನವನ್ನು ತೊಲಗಿಸೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಓ ಗಿಳಿರಾಮ ... ಕವನ


 




*ಓ ಗಿಳಿರಾಮ*


ಓ ಗಿಳಿರಾಮ ....

ಎಲ್ಲಿರುವನು ನನ್ನ ರಾಮ

ತಿಳಿಸಿಬಿಡು ಸಲ್ಲಿಸುವೆ 

ನಿನಗೆ ನನ್ನ ಪ್ರಣಾಮ .


ದಿನಪ ಬರುವ ಮೊದಲೇ

ದಿನವೂ ಬಂದು

ಕದ್ದು ನೋಡುತ್ತಿದ್ದ, ಈಗೀಗ

ಅವನ ಸುದ್ದಿಯಿಲ್ಲ ನೀನೇ ಹೇಳು 

ನಲ್ಲನಿಲ್ಲದೆ ಹೇಗಿರಲಿ?


ಮಣಿ ಸರವ ನೀಡಿ

ಹಣೆಗೊಂದು ಮುತ್ತನಿತ್ತು 

ಸ್ವರ್ಗಕ್ಕೆ ಕರೆದೊಯ್ದಿದ್ದನು

ಕಣಿ ಹೇಳು ನನಗಿಂದು 

ಅವನೆಂದು ಬರುವನು ?


ಅಕ್ಕರೆಯ ಮಾತನಾಡಿ

ಸಕ್ಕರೆಯ ಸವಿ ನೀಡಿ 

ಪ್ರೇಮ ಲೋಕ ಸೃಷ್ಟಿಸಿದ್ದ ನನಗಾಗಿ

ಸಿಕ್ಕರೆ ನನ್ನ ಮಾರನಿಗೇಳು

ಕಾಯುತಿಹಳು ನಿನ್ನರಸಿ ನಿನಗಾಗಿ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


ಗುರುದಕ್ಷಿಣೆ .ನ್ಯಾನೋ ಕಥೆ


 




*ನ್ಯಾನೊ ಕಥೆ*


*ಗುರುದಕ್ಷಿಣೆ*


"ನಾನು ಆರ್ಥಿಕವಾಗಿ ಸಮಸ್ಯೆಯಲ್ಲಿರುವೆ ಅಂತ ತಿಳಿದು ನನಗೆ ಈ ಸಹಾಯ ಮಾಡಲು ಬರಬೇಡಿ , ನಿಮ್ಮ ಅಭಿಮಾನ ಸಾಕು ,ಇದೆಲ್ಲಾ ಬೇಡ ಇಂತಹ ದುಬಾರಿ ಉಡುಗೊರೆ ಬೇಡ, ದಯವಿಟ್ಟು ಹೊರಡಿ "ಎಂದು ತಮ್ಮ ದಪ್ಪನೆಯ ಕನ್ನಡಕವನ್ನು ಸರಿಪಡಿಸಿಕೊಂಡು ಕೋಲನಿಡಿದು ಎದ್ದು ಹೊರಗೆ ಹೋಗಲು ಸಿದ್ದರಾದರು." ತಿಪ್ಪೇಸ್ವಾಮಿ ಗಳು " ಗುರುಗಳೆ ನೀವು ಕಲಿಸಿದ ವಿದ್ಯೆಯಿಂದ ನಾವೆಲ್ಲರೂ ಇಂದು  ಜೀವನದಲ್ಲಿ ಒಂದು ಹಂತಕ್ಕೆ ಬಂದಿದ್ದೇವೆ , ದಯವಿಟ್ಟು ನಮ್ಮ ಉಡುಗೊರೆ ಸ್ವೀಕರಿಸುಲೇ ಬೇಕು ಇದನ್ನು ಗುರುದಕ್ಷಿಣೆ ಎಂದು ಸ್ವೀಕರಿಸಿ " ಎಂದು ಎಲ್ಲರೂ ಒಕ್ಕೊರಲಿನಿಂದ ಹೇಳಿದಾಗ ,ಅವರ ಬಲವಂತಕ್ಕೆ ಕಾರಿನಲ್ಲಿ ಕುಳಿತು,  ಒಂದು ಹೊಸ  ಮನೆಯ ಮುಂದೆ ನಿಂತರು .ಎಲ್ಲಾ ಶಿಷ್ಯರು ಗುರುಗಳ ಕೈಗೆ ಮನೆಯ ಬೀಗದ ಕೀಯನ್ನು ನೀಡಿದರು.

ಹೊಸ ಮನೆಯ ಬಾಗಿಲ ತೆರೆದ ಗುರುಗಳ ಕಣ್ಣಿನಿಂದ, ಹೊಸಿಲ ಮೇಲೆ ನಾಲ್ಕು ಹನಿಗಳು ಉದುರಿದವು....


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಪ್ರಜಾಪ್ರಗತಿ .೨೮/೨/೨೦೨೧

 


27 February 2021

ಹಿತ್ತಲ ಗಿಡ...... ಪುಟ್ಟ ಕಥೆ

 


*ಹಿತ್ತಲ ಗಿಡ.....*

ನ್ಯಾನೋ ಕಥೆ

"ಏ ಅವರೇನು ಬೇಡ ಸಿಟೀಲಿ ಇರೋ ಟ್ಯೂಷನ್ ಮೇಷ್ಟ್ರು ಬಾಳ ಸೆನಾಗಿ ಹೇಳ್ಕೊಡ್ತಾರಂತೆ  ಅಲ್ಲಿಗೇ ಹೋಗು ಮೂವತ್ತು ಕಿಲೋಮೀಟರ್ ಆದ್ರೂ ಪರವಾಗಿಲ್ಲ ,ಪೀಜ್ ನಾನು ಕೊಡ್ತೀನಿ ಒಟ್ನಲ್ಲಿ ನೀನು ಡಾಕುಟ್ರು ಆಗ್ಬೇಕು"
ಎಂದು ಜೋರು ಧ್ವನಿಯಲ್ಲಿ ಹೇಳುತ್ತಿದ್ದರು ,ರಶ್ಮಿಕಾಳ ತಂದೆ ಪರಮೇಶ್.
" ರೀ ನಮ್ಮೂರಾಗೆ ಇರೋ ಲೋಹಿತಪ್ಪ ಪ್ರೀಯಾಗಿ ಪಾಠ, ಮಾಡ್ತಾರೆ,ಸೆನಾಗೂ  ಮಾಡ್ತಾರಂತೆ,  ಅವರತ್ರಾನೆ ಕಳ್ಸಾನ ನಮ್ಮುಡಿಗೀನಾ ಯಾಕೆ ಪ್ಯಾಟೆ ಸವಾಸ? " ಎಂಬ ಹೆಂಡತಿಯ ಮಾತು ಕೇಳಿ ಕೋಪಗೊಂಡ ಪರಮೇಶ್ "ಇದೆಲ್ಲಾ  ನಿನಿಗೆ ಗೊತ್ತಾಗಲ್ಲ ,ಸುಮ್ಮನೆ ಮುದ್ದೆ ಮಾಡೋಗು" ಎಂದರು.
ಗೊನಗುತ್ತ ಅಡಿಗೆ ಮನೆಗೆ ಹೋದರು ಪವಿತ್ರ .
ದ್ವಿತೀಯ ಪಿ ಯು ಸಿ ಫಲಿತಾಂಶ ಪ್ರಕಟವಾದ ದಿನ ಅದೇ ಊರಿನ ಬಾಲಾಜಿ ೯೮℅  ಅಂಕ ಪಡೆದ ಎಂದು ಪರಮೇಶ್ ರವರ ಮನೆಗೆ ಬಂದು ಸಿಹಿ‌ನೀಡಿದ .
" ಯಾರತ್ರ ಟೂಷನ್ ಗೆ ಹೋಗಿದ್ದಪ್ಪ " ಪ್ರಶ್ನೆ ಮಾಡಿದರು ಪರಮೇಶ್  . ಬಾಲಾಜಿಯು " ಟ್ಯೂಷನ್ ಏನೂ ಇಲ್ಲ ಅಂಕಲ್ ನಮ್ಮೂರ ಲೋಹಿತ್ ಸರ್ ವಾರಕ್ಕೊಂದ್ ಎರಡ್ಸಾರಿ ಸಾರಿ ಗೈಡ್ ಮಾಡ್ತಿದ್ರು " ಎಂದ.
" ನೋಡಮ್ಮ ನೀನು ಇದಿಯಾ, ಟೌನ್ ಗೆ ಟೂಷನ್ ಕಳಿಸಿದ್ರೂ ೬೫℅ ಸಾಕಾ?
ಮಗಳು ತಲೆ ತಗ್ಗಿಸಿಕೊಂಡು ಅಡಿಗೆ ಮನೆ ಕಡೆ ನಡೆದಳು.
ಅಡಿಗೆ ಮನೆಯಲ್ಲಿ ರಶ್ಮಿಕಾಳ ತಾಯಿ "ಹಿತ್ತಲ ಗಿಡ ಮದ್ದಲ್ವಂತೆ " ಎಂದು ಹೇಳಿದ್ದು ಪರಮೇಶ್ ಕಿವಿಗೂ ಬೀಳದಿರಲಿಲ್ಲ...

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

24 February 2021

ನೀರಿರದ ಮೀನು


 



*ನೀರಿರದ ಮೀನು* 

ಕವನ 


ಒಲವಿನ ಉಡುಗೊರೆ 

ನೀಡಲು ಕಾದಿಹೆನು

ಚೆಲುವಿನ ಗೆಳತಿಯ

ನೋಡಲು ನಿಂದಿಹೆನು||


ನನ್ನ ಬಾಳ ಹಾಡಿನ 

ಪಲ್ಲವಿ ಅವಳು 

ಅವಳನೇ ಜಪಿಸುವೆನು

ಉಸಿರುಸಿರಲೂ||


ಅವಳಿಲ್ಲದೆ ನಾನು

ಧಗ ಧಗಿಸುವ ಇಳೆ

ಬರುವಳು ತಂಪಾಗಿಸಲು

ಅವಳೇ ಮಳೆ||


ವಿಶಾಲತೆಗೆ ಹೆಸರೇ ಅವಳು

ಅದೋ ನೋಡಲ್ಲಿ ಬಾನು 

ಅವಳಿರದಿರೆ ನಾನು

ನೀರಿರದ ಮೀನು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಪ್ರಜಾಪ್ರಗತಿ


 

23 February 2021

ಕರೋನ ಮೀಸಲಾತಿ .ಹನಿ

 *ಕರೋನಾ ಮೀಸಲಾತಿ*


ಸರ್ಕಾರದ  ಮೇಲೆ 

ಒತ್ತಡ ಹಾಕುತಾ 

ಮೀಸಲು ಕೇಳಲು

ಪ್ರತಿಭಟನೆ ಮಾಡುತಿಹವು

ದಿನಕ್ಕೊಂದು ಜಾತಿ|

ನಾವು ಮೈಮರೆತರೆ 

ಯಾರನ್ನೂ ಕೇಳದೆ 

ಕೊರೋನಾ ತೆಗೆದುಕೊಳ್ಳಲಿದೆ

ಅತಿ ಹೆಚ್ಚು ಮೀಸಲಾತಿ||

22 February 2021

ಗಜಲ್


*ಗಜಲ್*

ಹನಿ ಹನಿ ಇಬ್ಬನಿಯ ನೋಡುವುದೇ ಸಂಭ್ರಮ|
ಸ್ವರ ಸ್ವರ ಬೆರೆಸಿ ಹಾಡುವುದೇ ಸಂಭ್ರಮ||

ಕಷ್ಟ ಕೋಟಲೆಗಳು ನೂರಾರು ಅನ್ನದಾತಗೆ|
ಕೊನೆಗವನು ಸುಗ್ಗಿಯ ಮಾಡುವುದೇ ಸಂಭ್ರಮ ||

ನವಮಾಸ ಹೊತ್ತು ನೋವ ಅನುಭವಿಸುವಳು ತಾಯಿ|
ಕಂದನು ಅಂಗಾಲಲಿ ಜಾಡಿಸಿ ಕಾಡುವುದೇ ಸಂಭ್ರಮ||

ಎಷ್ಟೇ ಕಡೆದರೂ ಶಿಲ್ಪವಾಗಲಿಲ್ಲ ಎಂಬ ಕೊರಗು ಗುರುಗಳಿಗೆ |
ಶಿಷ್ಯರ ಸಾಧನೆಯ ಕಂಡು ಹೆಮ್ಮೆ ಪಡುವುದೇ ಸಂಭ್ರಮ||

ವಿರಹದ ಬೇಗೆಯಲಿ ಸುಡುತಿಹಳು ಪ್ರಿಯಸಖಿ|
ಏನೇ ಆದರೂ  ಸಿಹಿಜೀವಿಯ ಕೂಡುವುದೇ ಸಂಭ್ರಮ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ


21 February 2021

ತಾಯ್ನುಡಿ ಹನಿ.


 ನನ್ನಮ್ಮನ ಭಾಷೆ ನನ್ನ ಕನ್ನಡಿ

ನಾನು ನನ್ನಮ್ಮನ ಕುಡಿ

ಕಲಿಸಿದಳು ನನಗೆ ಹೊನ್ನುಡಿ

ಅದೇ ನನ್ನ  ತಾಯ್ನುಡಿ 


(ಇಂದು ವಿಶ್ವ ಮಾತೃಭಾಷಾದಿನ )

ಆನ್ಲೈನ್ ಶಿಕ್ಷಣ .ಲೇಖನ

 



ಆನ್‌ಲೈನ್ ಶಿಕ್ಷಣ ವ್ಯವಸ್ಥೆ - ಇದರ ಪ್ರಯೋಜನಗಳು ಮತ್ತು ಅದನ್ನು ಹೇಗೆ ಇನ್ನಷ್ಟು ಸುಧಾರಿಸಬಹುದು. ಲೇಖನ



 "ಶಿಕ್ಷಣವು ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯ ಅಭಿವ್ಯಕ್ತಿಗೊಳಿಸುವುದಾಗಿದೆ "

 ______ಸ್ವಾಮಿ ವಿವೇಕಾನಂದ.


 ಸ್ವಾಮಿ ವಿವೇಕಾನಂದರ ಪ್ರಕಾರ, ಶಿಕ್ಷಣವು ನಮ್ಮನ್ನು ಪರಿಪೂರ್ಣತೆಗೆ ಕರೆದೊಯ್ಯಬೇಕು ಅಂತಹ ಶಿಕ್ಷಣ ಇಂದಿನ ಅಗತ್ಯವಾಗಿದೆ, ಮಹಾತ್ಮಾ ಗಾಂಧೀಜಿಯವರು  ಹೇಳಿದಂತೆ ಮಗುವಿನ ಸರ್ವತೋಮುಖ ಬೆಳವಣಿಗೆ ಶಿಕ್ಷಣದ ಮೂಲ ಉದ್ದೇಶವಾಗಿದೆ.ಈ ಉದ್ದೇಶಗಳ ಹಿನ್ನೆಲೆಯಲ್ಲಿ ಶಿಕ್ಷಣ ಪಡೆಯಲು ನಾವು   ಔಪಚಾರಿಕ  ಮತ್ತು ಅನೌಪಚಾರಿಕ ಕಲಿಕೆಯ ವಿಧಾನಗಳನ್ನು ಅನುಸರಿಸುತ್ತಿದ್ದೇವೆ.


ವೇದಗಳ, ಉಪನಿಷತ್ ಕಾಲದಿಂದ

 20 ನೇ ಶತಮಾನದವರೆಗೆ ನಾವು ಔಪಚಾರಿಕ ಶಿಕ್ಷಣ ಪದ್ದತಿಯನ್ನು ಬಳಸಿಕೊಂಡು ಮಕ್ಕಳಿಗೆ ಸಾಂಪ್ರದಾಯಿಕ ಪದ್ದತಿಗಳ ಸಹಾಯದಿಂದ ಶಿಕ್ಷಣ ನೀಡುತ್ತಿದ್ದೆವು.

ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣಗಳ ಪರಿಣಾಮವಾಗಿ ಜಗತ್ತು ಇಂದು ಒಂದು ಕುಟುಂಬ ವಾಗಿದೆ.  ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಹಲವಾರು ಆವಿಷ್ಕಾರಗಳು ತ್ವರಿತ ಅಭಿವೃದ್ಧಿಗೆ ಕಾರಣವಾಗಿವೆ.  ಇದರ ಜೊತೆಗೆ  ಟೆಲಿಕಾಂ  ರಂಗದಲ್ಲಾದ  ಕ್ರಾಂತಿಯೂ ಡಿಜಿಟಲ್ ಕ್ರಾಂತಿ ಗೆ ಪೂರಕವಾಗಿದೆ. ಈ ಎಲ್ಲಾ ಅಂಶಗಳು   ಆನ್‌ಲೈನ್ ಶಿಕ್ಷಣಕ್ಕೆ ಉತ್ತಮ ಬೆಂಬಲವನ್ನು ನೀಡಿವೆ . ಅದರಲ್ಲೂ   ಕೋವಿಡ್ 19 ಸಮಯದ ಕಾರಣ ಲಾಕ್ ಡೌನ್ ಸಮಯದಲ್ಲಿ ಔಪಚಾರಿಕ ಶಿಕ್ಷಣದ ಮೂಲಗಳಾದ ಶಾಲಾ ಕಾಲೇಜುಗಳು ಅನಿರ್ದಿಷ್ಟ ಅವಧಿಯವರೆಗೆ ಮುಚ್ಚಿದ ಸಂಧರ್ಭದಲ್ಲಿ  ಆನ್‌ಲೈನ್ ಶಿಕ್ಷಣ ಅನಿವಾರ್ಯವಾಯಿತು. 


 ವಿಭಿನ್ನ ಮಾಧ್ಯಮಗಳ ಮೂಲಕ ತಂತ್ರಜ್ಞಾನದ ಬಳಕೆಯಿಂದ ದೈಹಿಕವಾಗಿ  ಹಾಜರಾಗದೆ  ಬೋಧನೆ ಮತ್ತು ಕಲಿಕೆ ನಡೆಯುವ ಪ್ರಕ್ರಿಯೆಯನ್ನು ಆನ್‌ಲೈನ್ ಶಿಕ್ಷಣ ಎಂದು ಕರೆಯಬಹುದು.


 ಈ ಉದ್ದೇಶಕ್ಕಾಗಿ ನಾವು ಜೂಮ್,  ಗೂಗಲ್ ಮೀಟ್, ಮುಂತಾದ ವಿಭಿನ್ನ ಅಪ್ಲಿಕೇಶನ್‌ಗಳನ್ನು ಬಳಸುತ್ತೇವೆ. ನೆಟ್‌ವರ್ಕ್ ಮತ್ತು ಮೊಬೈಲ್ ಫೋನ್‌ಗಳ ಕೊರತೆಯಿಂದಾಗಿ ನಾವು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗದ ಆನ್‌ಲೈನ್ ತರಗತಿಗಳಿಗೆ ಟೆಲಿವಿಷನ್ ಸಹ ಒಂದು ಸಾಧನವಾಗಿ ಬಳಸಲಾಗುತ್ತದೆ.


 ಆನ್‌ಲೈನ್ ಶಿಕ್ಷಣದ ಪ್ರಯೋಜನಗಳು


 1 ಒಂದು ಸಮಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪಲು ಆನ್ ಶಿಕ್ಷಣದಿಂದ ಸಾಧ್ಯವಿದೆ.

 2 ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯ, ಏಕೆಂದರೆ ಒಬ್ಬ ಶಿಕ್ಷಕನು ಹೆಚ್ಚಿನ ವಿದ್ಯಾರ್ಥಿಗಳಿಗೆ ನಿಗದಿತ ಸಮಯದಲ್ಲಿ ಅನುಕೂಲಿಸಬಹುದು. ಇದರಿಂದಾಗಿ ಬಹಳಷ್ಟು ಖಾಸಗಿ ಶಾಲೆಗಳು ಹೆಚ್ಚುವರಿ ಶಿಕ್ಷಕರನ್ನು ಕೆಲಸದಿಂದ ತೆಗೆದಿದ್ದನ್ನು ನಾವು ಗಮನಿಸಬಹುದು. 

 3 ನಗರದಿಂದ ಬಹು ದೂರವಿರುವ, ಗುಡ್ಡಗಾಡು ಪ್ರದೇಶದ ವಿದ್ಯಾರ್ಥಿಗಳು ಸಾರಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವವರು ತಮ್ಮ ಮನೆಗಳಿಂದ ಶಿಕ್ಷಣ ಪಡೆಯಲು ಆನ್ಲೈನ್ ಶಿಕ್ಷಣ ನೆರವಾಗುತ್ತದೆ.

 4 ವಿದ್ಯಾರ್ಥಿಗಳಿಗೆ ತಮ್ಮದೇ ಆದ ವೇಗದಲ್ಲಿ ಕಲಿಯಲು ಈ ವಿಧಾನವನ್ನು ಪರಿಣಾಮವಾಗಿ ಬಳಸಿಕೊಳ್ಳಬಹುದು.  ಇದರಿಂದಾಗಿ ಮಕ್ಕಳ ಕಲಿಕೆಯಲ್ಲಿ ಅನವಶ್ಯಕ ಒತ್ತಡವನ್ನು ಕಡಿಮೆ ಮಾಡುತ್ತದೆ.

5 ಆನ್ಲೈನ್ ಶಿಕ್ಷಣವು ಮಕ್ಕಳಿಗೆ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವ  ಮತ್ತು  ನಿರ್ವಹಿಸುವ ಕೌಶಲಗಳನ್ನು   ಬೆಳೆಸುತ್ತದೆ ಇದು ವಿದ್ಯಾರ್ಥಿಗಳಿಗೆ  ಅವರ ಮುಂದಿನ ಜೀವನದಲ್ಲಿ ಪರೋಕ್ಷವಾಗಿ ಸಹಾಯ ಮಾಡುತ್ತದೆ.


ಆನ್ಲೈನ್ ಶಿಕ್ಷಣದ ಅವಗುಣಗಳು


1.ತರಗತಿಯ ಕೋಣೆಯಲ್ಲಿ ಉತ್ತಮ ಬೋಧನೆ ಮಾಡುವ ಎಲ್ಲಾ ಶಿಕ್ಷಕರು ಆನ್ಲೈನ್ ಪಾಠ ಮಾಡುವ ಕೌಶಲಗಳನ್ನು ಮತ್ತು ತಾಂತ್ರಿಕವಾದ ಜ್ಞಾನವನ್ನು ಹೊಂದಿರುವುದಿಲ್ಲ .

 2 ನೇರಾ ನೇರಾ ಕುಳಿತು ಪಾಠಗಳನ್ನು ಮಾಡುವಾಗ ಇರುವ ಆತ್ಮೀಯತೆ , ಭಾವನೆಗಳನ್ನು ,ವ್ಯಕ್ತಪಡಿಸುವ ರೀತಿಗೆ ಈ ಮಾದ್ಯಮ ಅಡಚಣೆಯಾಗುವುದೇನೋ ಎನಿಸದಿರದು.

 3 ಕೆಲ   ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳೇ ಮರೀಚಿಕೆಯಾಗಿರುವಾಗ  ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗುವುದನ್ನು ನಾವು ಅಪೇಕ್ಷೆ ಪಡಲಾಗುವುದಿಲ್ಲ ಇದರಿಂದಾಗಿ ಆನ್ಲೈನ್ ಪಾಠಕ್ಕೆ ತೊಂದರೆಯಾಗುವುದು

4 ಬಹುತೇಕ ಜನರಿಗೆ ಸ್ಮಾರ್ಟ್ ಪೋನ್ ಕೊಳ್ಳಲು ಆರ್ಥಿಕವಾಗಿ ಸಮಸ್ಯೆ ಇರುವುದು ಕೆಲ ಪೋಷಕರು ಇಂತಹ ಫೋನ್ ಕೊಳ್ಳಲು ತಾಳಿ , ಜಾನುವಾರುಗಳನ್ನು ಮಾರಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ.

5 ಕೆಲ ಯುವ ಜನರು ಆನ್ಲೈನ್ ಹೆಸರಿನಲ್ಲಿ ಮೊಬೈಲ್ ಮತ್ತು ಅಂತರ್ಜಾಲವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯಿದೆ.

6 ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.


 ಆನ್‌ಲೈನ್ ಶಿಕ್ಷಣವನ್ನು ಹೇಗೆ ಸುಧಾರಿಸಬಹುದು?


 1 ಮೊಬೈಲ್ ನೆಟ್‌ವರ್ಕ್‌ನಂತಹ ಮೂಲಸೌಕರ್ಯಗಳು, ಸಾರ್ವಕಾಲಿಕ ವಿದ್ಯುತ್ ಸಂಪರ್ಕ ಒದಗಿಸಬೇಕು.

2 ಆನ್ಲೈನ್ ನಲ್ಲಿ   ಬೋಧಿಸುವ ಶಿಕ್ಷಕರಿಗೆ ಸಾಧನಗಳು ಮತ್ತು ತಂತ್ರಜ್ಞಾನವನ್ನು ನಿರ್ವಹಿಸಲು  ಸರಿಯಾದ ತರಬೇತಿ ನೀಡಬೇಕು.

 3 ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಪೋಷಕರು ವಿದ್ಯಾರ್ಥಿಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡಬೇಕು.

 4 ಕಲಿಸುವವರು  ಮತ್ತು ಕಲಿಯುವವರು ಆನ್ಲೈನ್ ಬೋಧನೆ ಮಾಡುವಾಗ ಅನಪೇಕ್ಷಿತ ನಡವಳಿಕೆಗಳನ್ನು ನಿಯಂತ್ರಿಸುವ ಆನ್‌ಲೈನ್ ನಡವಳಿಕೆಯನ್ನು (Online mannered)   ಬೆಳೆಸಿಕೊಳ್ಳಬೇಕು.

 5  ಅತಿಯಾದ ಆನ್ಲೈನ್ ಪಾಠಗಳಿಂದ  ಎಲ್ಲರೂ ನಮ್ಮ ಕಣ್ಣು ಮತ್ತು ಕಿವಿಗಳ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಶಿಕ್ಷಣದ ಜೊತೆ ನಮ್ಮ ಅಮೂಲ್ಯವಾದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.


ಎಷ್ಟೇ ತಂತ್ರಜ್ಞಾನ ಮುಂದುವರೆದರೂ

ಎಷ್ಟೇ ಆನ್ಲೈನ್ ಮತ್ತಿತರ ಮೂಲದ ಅನೌಪಚಾರಿಕ ಬೋಧನಾಕ್ರಮಗಳು ಬಂದರೂ  ಭೌತಿಕವಾಗಿ ಮಕ್ಕಳು ಹಾಜರಾಗಿ ಶಿಕ್ಷಣ ಪಡೆಯುವುದಕ್ಕೆ ಈ ಮಾರ್ಗಗಳು ಪರ್ಯಾಯವಾಗಲಾರವು ಬದಲಿಗೆ ಪೂರಕವಾಗಬಲ್ಲವು.


 ಸಿ ಜಿ ವೆಂಕಟೇಶ್ವರ.

ಸಮಾಜ ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು

 

Online Education System – Its benefits and how it can be improved further.


"Education is manifestation of perfection which is already in man"

                   Swami Vivekananda.


According to Swami  Vivekananda, education must lead us to perfection and we are getting education by means of formal and informal methods  of learning.


Up to the 20 th century we depend on formal education , liberalization, globalization,and privatization leads to rapid development in technology. At the same time telecom revolution also took place ,these gave good support to non formal education and online education. Online education inevitable at the time of lock down due to covid 19 time 


Teaching and learning take  place even without physical contact by means of different Media and technology is called online education.

For this purpose we use different apps like zoom ,google meet ,etc.television  also used as a tool for online classes where we cannot reach students due to lack of network and mobile phones.


Benefits  of online education


1 It is possible to reach more students at a time .

2 It's cost effective because one teacher facilitates   more students in stipulated time.

3 Remote area students those who facing transportation problems get education from their homes

4 There  is flexibility for students to learn at their  own pace, so it reduces stress on children to learn.

5 Technical skills like using gadgets operating computers will indirectly help in their future life .

6 There is    More Opportunities for interaction in online classes than traditional bulky classrooms  .


How online education can be improved


1 Infrastructure like the mobile Network , all time electricity  should be improved .

2 Proper training should be given to teachers to handle the devices and technology 

3 Parents should guide students properly to attend the online classes 

4 Both facilitators and learner's should cultivate online manners

5 All must take care about our eyes and ears and preventive measures can be taken


C G VENKATESHWARA.

TEACHER

GOVERNMENT HIGH SCHOOL

KYATSANDRA.

TUMKUR. TQ

TUMKUR. DIST

KARNATAKA.





ಸೌಂದರ್ಯರಾಶಿ .ಕವನ


 


*ಸೌಂದರ್ಯ ರಾಶಿ* ಕವನ

ಭತ್ತದ ಹೊಲದಲಿರುವ ನಿಂದಿರುವ
ಬತ್ತದ ಸೌಂದರ್ಯ ರಾಶಿ ನೀನು|
ಘಮಘಮಿಸುವ ಹೂವಂತವಳೆ
ಹುಷಾರು ಮುತ್ತಿದಾವು ಜೇನು||

ಮತ್ತೆ ಮತ್ತೆ ನಿನ್ನ ನೋಡುತ್ತಿದ್ದರೆ
ಸಮಯ ಜಾರಿದ ಪರಿವೆಯೇ ಇರದು|
ಮಧು ಬಟ್ಟಲನಿಡಿದಿರುವ ಮುಗುದೆ
ನಿನ್ನ ನೋಡಿದರೆ ಮತ್ತೇರುವುದು ||

ಸಿಂಹಕಟಿ ,ಸಂಪಿಗೆ ಮೂಗಿನವಳೆ
ಹುಚ್ಚು ಹಿಡಿಸಿದೆ ನಿನ್ನ ಮೈಮಾಟ|
ನನ್ನನು ಕೂಡ ಬಲ್ಲೆಯಾ ಒಮ್ಮೆ
ಆಡಬಹುದು ನಾವು ಸರಸದಾಟ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

19 February 2021

ಅಳುಕದಿರು ಮನವೆ ... ಹನಿ

 ಅಳುಕದಿರು ಮನವೆ...


ಅಳುವ ದಿನಗಳು ಅಳಿಯುವವು

ಅಳಿಲಿಗೂ ಸೇವಾ ಭಾಗ್ಯ ಲಬಿಸುವುದು

ಅಳಿಯುವ ಮುನ್ನ 

ಆಳಾಗಿ ದುಡಿದು 

ಅರಸನಾಗಿ ಉಣ್ಣು |

ಸತ್ಕರ್ಮ ಮಾಡುತ 

ಧರ್ಮ ಮಾರ್ಗದಿ ನಡೆ

ಕ್ರಮೇಣವಾಗಿ ತೆರೆಯುವುದು

ನಿನ್ನ ಒಳಗಣ್ಣು ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ದಿನಕರ ಹನಿ


 ದಿನಕರ


(ರಥ ಸಪ್ತಮಿಯ ನೆನಪಲ್ಲಿ)


ಮೂಡಣದರಮನೆಯ

ಬಾಗಿಲ ತೆರೆದು 

ಜಗಬೆಳಗಲು ದಿನವೂ

ಬರುವ ದಿನಕರ|

ಬನ್ನಿ ನಾವೆಲ್ಲರೂ

ನಮಿಸೋಣ ಆ ರವಿಗೆ

ಮುಗಿದು ನಮ್ಮ ಕರ|

18 February 2021

ನಡೆ ನುಡಿ ಹನಿ .

 ನಡೆ ನುಡಿ


 ನಮ್ಮ  ನಡೆ ನುಡಿ 

ಬಂಗಾರದಂತಿರಬೇಕು

ಬದುಕು ಬಂಗಾರವಾಗಲು

ಬಾಳು ಹಸನಾಗಲು

ನಾವು ನಿಜವಾದ

ಮಾನವರಾಗಲು



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

17 February 2021

ಹೇಗೆ .ಹನಿ

 *ಹೇಗೆ?*


ಚಳಿ ಬಹಳ ಇದೆ

ನೀನೂ ಇಲ್ಲ

ಬೆಚ್ಚಗೆ ಇರುವುದು ಹೇಗೆ?



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ನಮ್ಮವರು . ಹನಿ

 *ನಮ್ಮವರು*


ಸಮಯ ಕಳೆದದ್ದೆ ತಿಳಿಯುವುದಿಲ್ಲ

ಜೊತೆಯಾಗಿದ್ದರೆ ನಮ್ಮವರು|

ಸಮಯ ಕಳೆದಂತೆ  ನಮಗೆ

ಕ್ರಮೇಣವಾಗಿ ಅರಿವಾಗುವುದು

ಯಾರು ನಮ್ಮವರು?||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

16 February 2021

ಸಂಪಾದನೆ . ಹನಿ


*ಸಂಪಾದನೆ?*

ಸಂಪಾದನೆಯೆಂದರೆ
ಕೆಲವರು ತಿಳಿದಿರುವರು
ಕೇವಲ ಹಣ|
ಪಾಪ ಬಹಳ ಜನರಿಗೆ
ತಿಳಿದಿರುವುದಿಲ್ಲ ನಾವು
ಸಂಪಾದಿಸಬೇಕಿರುವುದು
ಅನುಭವ, ಸಂಬಂಧ, ಗೌರವ,
ಪ್ರೀತಿ ,ತ್ಯಾಗ ಮತ್ತು ಗುಣ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

15 February 2021

13 February 2021

ಸಾಂಸ್ಕೃತಿಕ ಪರಂಪರೆ ಉಳಿಸೋಣ .ಲೇಖನ

 

*


*ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸೋಣ*

ಭಾರತೀಯ  ಸನಾತನ ಸಂಸ್ಕೃತಿಯು ವಿಶ್ವದಲ್ಲಿ ತನ್ನದೇ ಆದ  ಮಹತ್ವ ಪಡೆದಿದೆ. "ಸರ್ವೇ ಜನಾಃ ಸುಖಿನೋಭವಂತು" ಎಂಬ ಆಶಯವನ್ನು ಹೊಂದಿದ ಪ್ರಪಂಚದ ಜನರೆಲ್ಲಾ ಸುಖವಾಗಿರಲಿ ಎಂಬ  ಉದಾತ್ತ ಚಿಂತನೆಯನ್ನು ಹೊಂದಿರುವ ದೇಶ ನಮ್ಮ ಭಾರತ.

ನಮ್ಮ ಸಂಸ್ಕೃತಿಯು ತನ್ನದೇ ಆದ ವೈಜ್ಞಾನಿಕ ಹಿನ್ನಲೆ ಹೊಂದಿದೆ. ನಮ್ಮ ಆಚರಣೆ ,ವಿಚಾರಗಳು, ಇಂದಿಗೂ ಇತರೆ ದೇಶಗಳಿಗೆ ಮಾದರಿ ಎಂದರೆ ತಪ್ಪಾಗಲಾರದು. ಇದಕ್ಕೆ ತಾಜಾ ಉದಾಹರಣೆ ಎಂದರೆ ನಮ್ಮ ದೇಶವು ಬೇರೆ ದೇಶಗಳಿಗಿಂತ ಕೊರೋನಾ ಸಮಯದಲ್ಲಿ ಕಡಿಮೆ ಸಾವು ನೋವು ಅನುಭವಿಸಿತು ಇದಕ್ಕೆ ನಮ್ಮ ಸಂಸ್ಕೃತಿ ಜೀವನ ಶೈಲಿ, ಪದೆ ಪದೆ ಕೈತೊಳೆಯುವುದು, ಆಯುರ್ವೇದದ ಸಮರ್ಪಕವಾದ ಬಳಕೆ, ಸ್ವಚ್ಚತೆ ,  ಮುಂತಾದವುಗಳನ್ನು ನಾವು ಉದಾಹರಣೆ ಕೊಡಬಹುದು.

ವಿಪರ್ಯಾಸವೆಂದರೆ ಇತ್ತೀಚೆಗೆ ವಿದೇಶಿಯರ ಅನುಕರಿಸುವ ,ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯು ಹೆಚ್ಚಾಗಿ ಕ್ರಮೇಣವಾಗಿ ನಮ್ಮ ಸಂಸ್ಕೃತಿಯ ಕಣ್ಮರೆಯಾಗುವುದೇನೋ ಎಂಬ ಆತಂಕ ನಮ್ಮನ್ನು ಕಾಡದಿರದು. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಪರಿಣಾಮವಾಗಿ ಪ್ರಪಂಚವೇ ಒಂದು ಹಳ್ಳಿಯಾಗಿ ಬದಲಾಗಿದೆ ಜೊತೆಗೆ ತರವಲ್ಲದ ,ತಲೆಬುಡವಿಲ್ಲದ ಆಚರಣೆಗಳು ನಮ್ಮ ಹಳ್ಳಿಯನ್ನು ಆಕ್ರಮಿಸುತ್ತಿವೆ.

ಭಾರತೀಯ ಸಂಸ್ಕೃತಿಯಲ್ಲಿ ಹುಟ್ಟು ಹಬ್ಬದ ಆಚರಣೆಯನ್ನು ದೀಪವನ್ನು ಬೆಳಗುವ ಮೂಲಕ ದೇವರ ಆಶೀರ್ವಾದ ಪಡೆದು ,ಹಿರಿಯರ ಸಮ್ಮುಖದಲ್ಲಿ ನಡೆಯುವುದು. ಆದರೆ ಇಂದು ನಮ್ಮ ಯುವ ಸಮುದಾಯ ಯಾವುದೋ ಪಬ್ಗಳಲ್ಲೋ, ಬಾರ್ ಗಳಲ್ಲೋ ಕಂಠ ಪೂರ್ತಿ ಕುಡಿದು ಕಿರುಚಾಡಿ, ಮನೆ ಸೇರುವಾಗ ಕುಡಿದ ಮತ್ತಿನಲ್ಲಿ ಅಪಘಾತದಲ್ಲಿ  ಜನ್ಮದಿನದಂದೆ ಶಿವನ ಪಾದ ಸೇರಿರುವ ಹಲವಾರು ನಿದರ್ಶನಗಳು ನಮ್ಮ ಮುಂದಿವೆ.ಇಂತಹ ಅನರ್ಥ ಪಾಶ್ಚಿಮಾತ್ಯ ಸಂಸ್ಕೃತಿ ನಮಗೆ ಬೇಕೆ?  ಎಂದು ಚಿಂತನೆ ಮಾಡಬೇಕಿದೆ.

ಭಾರತೀಯ ಸಂಸ್ಕೃತಿಯಲ್ಲಿ ನಾವು ಚಾಂದ್ರಮಾನ ಪದ್ದತಿಯನ್ನು ಅನುಸರಿಸಿ ಉಗಾದಿ ಹಬ್ಬದ ದಿನದಂದು ಹೊಸ ವರ್ಷ ಆಚರಣೆ ಮಾಡುವೆವು, ವಸಂತಕಾಲದಲ್ಲಿ ಚಿಗುರಿದ ಮರಗಿಡಗಳು ಹೊಸ ತನ ತೋರುತ ಪ್ರಕೃತಿಯೇ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಕಾರ ಭಾರತೀಯರು ಕೂಡಾ ನಾ ಮುಂದು ತಾ ಮುಂದು ಎಂದು  ಜನವರಿ ಒಂದನ್ನು ಹೊಸ ವರ್ಷ ಎಂದು ಆಚರಣೆ ಮಾಡುವುದು, ಅರ್ಧರಾತ್ರಿಯಲ್ಲಿ ಅರೆ ಬರೆ ಬಟ್ಟೆಗಳನ್ನು ಧರಿಸಿ , ಕೇಕ್ ಕತ್ತರಿಸಿ ದೆವ್ವಗಳು ತಿನ್ನುವ ಹೊತ್ತಲ್ಲಿ ತಿಂದು, ಮತ್ತಲ್ಲಿ ತೇಲುವುದು ಯಾವ ಸಂಸ್ಕೃತಿ?

ಭಾರತೀಯ ಸಂಸ್ಕೃತಿಯಲ್ಲಿ ಪ್ರೀತಿ, ಪ್ರೇಮಕ್ಕೆ ತನ್ನದೇ ಆದ ಸ್ಥಾನಮಾನವಿದೆ, ಪೌರಾಣಿಕ ಹಿನ್ನೆಲೆ ಇದೆ, ಪ್ರತಿ ದಿನದಲ್ಲಿ  ವಿಶಾಲವಾದ ಅರ್ಥದಲ್ಲಿ, ತಾಯಿ ತನ್ನ ಮಗನನ್ನು, ತಂದೆ ತನ್ನ ಮಗನನ್ನು, ಮಕ್ಕಳು ಪ್ರಾಣಿಗಳನ್ನು , ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿ ಸುತ್ತಲೇ ಇರುವೆವು. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಬಿದ್ದು  ಪ್ರೀತಿಯ ಹೆಸರಲ್ಲಿ ವ್ಯಾಲೆಂಟೇನ್ ಡೇ ನೆಪದಲ್ಲಿ ಹೆಣ್ಣುಮಕ್ಕಳು ಸ್ವೇಚ್ಚಾಚಾರದಲ್ಲಿ ತೊಡಗಿ ಬೀದಿಗಳಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ತಬ್ಬಿಕೊಂಡು ಅಸಭ್ಯವಾಗಿ ,ಸಾರ್ವಜನಿಕರು ಮುಜುಗರ ಪಡುವಂತೆ ವರ್ತನೆ ಮಾಡುವ ಅಂಧಾನುಕರಣೆಯ ಸಂಸ್ಕೃತಿ ನಮಗೆ ಬೇಕಾ?

ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ತತ್ವದಲ್ಲಿ ನಂಬಿಕೆಯನ್ನು ಇಟ್ಟ ನಮ್ಮ  ನಮ್ಮ ಪೂರ್ವಜರು ಅನಕ್ಷರಸ್ಥ ರಾದರೂ ಉತ್ತಮ ಅರ್ಥಶಾಸ್ತ್ರಜ್ಞರಂತೆ ಜೀವಿಸಿದ್ದರು. ಆದರೆ ಇಂದಿನ ಮಾಲ್ ಗಳು, ಸೂಪರ್ ಮಾರ್ಕೆಟ್ ಗಳು ,ಕ್ರೆಡಿಟ್ ಕಾರ್ಡ್ ಗಳು ನಮ್ಮನ್ನು ಕೊಳ್ಳುಬಾಕರನ್ನಾಗಿ ಮಾಡಿ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಮಾಡಿ ಸಾಲಗಾರರನ್ನಾಗಿ ಮಾಡಿ ತನ್ಮೂಲಕ ದೇಶಗಳೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವವುದಕ್ಕೆ ಅಮೇರಿಕಾದ ಮಹಾ ಆರ್ಥಿಕ ಕುಸಿತವೇ ಸಾಕ್ಷಿ, ಆದರೂ ಕಣ್ಣು ಮುಚ್ಚಿ ನಾವು ಅದೇ ಮಾಲ್ , ಪಬ್ ,ಕ್ಲಬ್ ಸಂಸ್ಕೃತಿಗೆ ಜೋತು ಬಿದ್ದಿರುವುದು ದುರದೃಷ್ಟಕರ.

ನಮ್ಮ ಉಡುಗೆ ತೊಡುಗೆಗಳು ನಮ್ಮ ವ್ಯಕ್ತಿತ್ವದ ಪ್ರತಿಬಿಂಬ ಭಾರತೀಯ ಉಡುಗೆ ತೊಡುಗೆಗಳಿಗೆ ಪ್ರಪಂಚದಲ್ಲೇ ಒಂದು ಗೌರವದ ಸ್ಥಾನವಿದೆ, ಆದರೆ ನಮ್ಮ ಯುವ ಪೀಳಿಗೆ ಅರೆಬರೆ ಬಟ್ಟೆಗಳನ್ನು ಹಾಕಿಕೊಂಡು, ಅಸಭ್ಯವಾಗಿ ವರ್ತಿಸುವುದನ್ನು ನೋಡಿದಾಗ ನಾವು ಯಾವ ದೇಶಗಳಲ್ಲಿ ಇರುವೆವು ಎಂಬ ಅನುಮಾನ ನಮ್ಮನ್ನು ಕಾಡದಿರದು.

ನಮ್ಮ ಆಹಾರ ನಮ್ಮ ಸಂಸ್ಕೃತಿಯ ಪ್ರತೀಕ  ಉತ್ತಮವಾದ ಆಹಾರವು ಉತ್ತಮ ಆರೋಗ್ಯಕ್ಕೆ ಅಗತ್ಯ ಅದನ್ನು ಕಂಡ ನಮ್ಮ ಭಾರತೀಯರು ಪುರಾತನ ಕಾಲದಿಂದಲೂ ಸಿರಿಧಾನ್ಯದ ಆದಿಯಾಗಿ ಉತ್ತಮ ಆಹಾರದ ಕ್ರಮಗಳನ್ನು ಅನುಸರಿಸುತ್ತಿದ್ದರು. ಪಾಶ್ಚಿಮಾತ್ಯ ಅಂಧಾನುಕರಣೆಯ  ಪರಿಣಾಮವಾಗಿ ,ಪಿಜಾ ಬರ್ಗರ್, ಕೆ ಎಪ್ ಸಿ , ಗೋಬಿಮಂಚೂರಿ, ಮುಂತಾದ ಆಹಾರಗಳು ಇಂದು ಹಳ್ಳಿಗಳಿಗೂ ಲಗ್ಗೆ ಇಟ್ಟು ಎಲ್ಲರ ಅನಾರೋಗ್ಯಕ್ಕೆ ಕಾರಣವಾಗಿವೆ , ಇಂತಹ ಕೆಟ್ಟ ಆಹಾರ ಕ್ರಮಗಳು ಬಗ್ಗೆ ನಮ್ಮಲ್ಲಿ ಜಾಗೃತಿ ಮೂಡುವುದು ಯಾವಾಗ?

ಬೇರೆ ದೇಶಗಳಲ್ಲಿ ಟಾಯ್ಲೆಟ್ ತೊಳೆಯಲು ಬಳಸುವ ಕೋಲಾ, ಪೆಪ್ಸಿ ಮುಂತಾದ ತಂಪು ಪಾನೀಯಗಳನ್ನು ಮಳೆಗಾಲದಲ್ಲೂ ಕುಡಿಯುತ್ತಿರುವ ನಮ್ಮ ಯುವಕರು ವಿದೇಶಿ ಸಂಸ್ಕೃತಿ ಹೆಸರಿನಲ್ಲಿ ತಮ್ಮ ಆರೋಗ್ಯ ಹಾಳುಮಾಡಿಕೊಳ್ಳತ್ತಿದ್ದರೆ. ಆರೋಗ್ಯಕ್ಕೆ ಪೂರಕವಾದ ನಮ್ಮ ರೈತರು ಬೆಳೆದ ಎಳನೀರನ್ನು ತಾತ್ಸಾರವಾಗಿ ನೋಡುವ ನಮ್ಮ ಜನರಿಗೆ ಬುದ್ದಿ ಬರುವುದು ಯಾವಾಗ?

ಭಾರತೀಯ ಸಂಸ್ಕೃತಿಯೇ ಶ್ರೇಷ್ಠ ಇತರ ದೇಶಗಳ ಸಂಸ್ಕೃತಿ ನಿಕೃಷ್ಠ ಎಂಬುದು ನನ್ನ ಅಭಿಪ್ರಾಯವಲ್ಲ . ಪಾಶ್ಚಿಮಾತ್ಯ ದೇಶಗಳಲ್ಲಿ ಇರುವ ಒಳ್ಳೆಯ ಅಂಶಗಳನ್ನು ನಾವೀಗಾಗಲೇ ಅಳವಡಿಸಿಕೊಂಡಿದ್ದೇವೆ . ನಮ್ಮ ಆರೋಗ್ಯಕ್ಕೆ, ನಮ್ಮ ಜೀವನಕ್ಕೆ, ನಮ್ಮ ಸಂಸ್ಕೃತಿ ಗೆ ಮಾರಕವಾಗುವ ಅಂಧಾನುಕರಣೆಗಳನ್ನು ನಾವು ತ್ಯಜಿಸೋಣ, ನಮ್ಮ ಭವ್ಯವಾದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸೋಣ.

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು

ನಿರ್ಧಾರ .ಹನಿ

 *ಸಿಹಿಜೀವಿಯ ಹನಿ*


*ನಿರ್ಧಾರ*


ಆಸೆಯಿದ್ದರೆ ನಮಗೆ

ನಾವೂ ಸಹ 

ಮರದಂತೆ  ಎತ್ತರಕ್ಕೆ

ಬೆಳೆಯಬೇಕು.|

ಜೀವನದಿ ಮೊದಲು

ಬೇರಿನಂತೆ ಆಳಕ್ಕೆ

ಇಳಿಯಬೇಕು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

12 February 2021

ಬವಣೆ. ಹನಿ.

 *ಬವಣೆ*


ಅಂಗವಿಕಲರು

ವಿಕಲಚೇತನರಾದರು

ವಿಶೇಷಚೇತನರಾದರು

ದಿವ್ಯಾಂಗರಾದರು

ಹೆಸರುಗಳಲ್ಲಿ ಮಾತ್ರ

ಏನೇನೋ ಬದಲಾವಣೆ|

ಇನ್ನೂ ತಪ್ಪಲಿಲ್ಲ

ಅವರ ಬವಣೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

10 February 2021

ವಿಧಿ

 ನಿಯಮ

ಯಮ

ಕ್ರೂರಿ

ನಿಶ್ಚಿತ

ಅನಿಶ್ಚಿತ

ಶಿಕ್ಷಕ

ಆಟಗಾರ

ಮಾಟಗಾರ

ಊಹಿಸಲಾರದ್ದು

ತಪ್ಪಿಸಲಾರದ್ದು


ಅದುವೇ....


ವಿಧಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಅಪ್ಪ .ಅಮ್ಮ

 ನಾಗಪ್ಪನ

ಕಾರಣದಿಂದ

ರೆಕ್ಕೆ ಬಲಿಯುವ

ಮೊದಲೆ " ಗೋವಿಂದ"

ನ ಪಾದ ಸೇರಿದ 



ಅಪ್ಪ



ಅಪ್ಪನಿಲ್ಲದ

ಕೊರಗ ನೀಗಿ

"ಶ್ರೀದೇವಿ" ಯಂತೆ

ಸಾಕಿ ಸಲಹಿದಳು


ಅಮ್ಮ 



*ಸಿಹಿಜೀವಿ*

ಗೋವಿಂದಪ್ಪ ಶ್ರೀದೇವಮ್ಮನ ತನಯ 

ಸಿ ಜಿ ವೆಂಕಟೇಶ್ವರ


09 February 2021

ಎಚ್ಚರವಿರಲಿ ಹನಿ

 *ಸಿಹಿಜೀವಿಯ ಹನಿ*


*ಎಚ್ಚರವಿರಲಿ!*


ಏನೆಂದರೆ ಅದನ್ನು ತೆರೆಯದಿರಿ

ಎಲ್ಲೆಂದರಲ್ಲಿ ಒತ್ತದಿರಿ 

ಕಳ್ಳಗಣ್ಣುಗಳಿವೆ,ಕಳ್ಳಗಿವಿಗಳಿವೆ

ನಿಮ್ಮ ಮಾನ ಹರಾಜಾಗಬಹುದು

ನಿಮ್ಮ ಹಣ ಸಂಪತ್ತು

ಮಂಗಮಾಯವಾಗಬಹುದು.

ಎಲ್ಲೆಲ್ಲೂ ಹರಡಿದೆ 

ಮೋಸದ ಜಾಲ |

ಮೈಮರೆತರೆ ವರವಾಗಿರುವುದೇ

ಶಾಪವಾಗುವುದು

ಎಚ್ಚರವಿರಲಿ! ಇದು

ಅಂತರ್ಜಾಲ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

(ಇಂದು ವಿಶ್ವ ಅಂತರ್ಜಾಲ ಸುರಕ್ಷತಾ ದಿನ)

04 February 2021

ನನ್ನ ಬಂಧು .ಹನಿ

 *ನನ್ನ ಬಂಧು*


ಅಸಹಾಯಕತೆಯಿಂದ ನಿಂತಿದ್ದೆ

ಕೈಹಿಡಿದು ಮುನ್ನೆಡೆಸಿದ

ಸಾಂತ್ವನ ನೀಡಿ ಹೋದ

ಧೈರ್ಯವಾಗಿರೆಂದು ಹೇಳಿದ

ಸರಳತೆಯ ಮೈಗೂಡಿಸಿದ

ಆಡಂಬರವ ತೊರೆ ಎಂದ 

ದಿಟ್ಟತನವನು ಕಲಿಸಿದ 


ಅವನೇ ನನ್ನ ಬಂಧು ಮುಕುಂದ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

01 February 2021

ಸ್ವಚ್ಚ ಮನೆ . ಸ್ವಚ್ಚ ನಗರ ? ಕವನ


 *ಸ್ವಚ್ಛ ಮನೆ ಸ್ವಚ್ಛ ನಗರ?*


(ಇಂದೋರ್ ನಲ್ಲಿ ವೃದ್ದರನ್ನು ಲಾರಿ ಯಲ್ಲಿ ತುಂಬಿಕೊಂಡು ಪಶುಗಳಂತೆ ರಸ್ತೆಯಲ್ಲಿ ಬಿಸಾಡಿ ಬಂದ ಘಟನೆ ನೋಡಿ ಮನ ನೊಂದು ಬರೆದ ಕವನ)


ಹೌದು ನಮ್ಮದು

ಸ್ವಚ್ಛ ನಗರ, ಸ್ವಚ್ಛ ಮನೆ,

ಇದು ನಮಗೆ ಹೆಮ್ಮೆಯ ವಿಷಯ.


ನಮ್ಮ ಮನೆಯಲ್ಲಿ 

ನಾನು ನಮ್ಮವರು ಮಾತ್ರ

ನಮ್ಮ ಜನ್ಮದಾತರನ್ನು 

ಮಹಾನಗರ ಮಾಲಿಕೆಗೆ

ಒಪ್ಪಿಸಿ ನಮ್ಮ ಮನೆಯನ್ನು

ಸ್ವಚ್ಛ ಮಾಡಿಕೊಂಡಿರುವೆವು.


ಅವರೂ ಅಷ್ಟೇ ನಗರದಲ್ಲಿ

ಸೌಂದರ್ಯವನ್ನು ಕಾಪಾಡಿಕೊಳ್ಳಲು

ವಯಸ್ಸಾದವರನ್ನೆಲ್ಲಾ ಒಂದು ಕಸದ

ಲಾರಿ ಯಲ್ಲಿ ತುಂಬಿಕೊಂಡು

ನಗರದ ಹೊರವಲಯದ ರಸ್ತೆಗೆ 

ಎಸೆದು ಬಂದಿದ್ದಾರೆ.


ಮುಂದಿನ ವಾರ ನಮ್ಮ 

ಮನೆಗೆ ನಮ್ಮ ನಗರಕ್ಕೆ ರಾಷ್ಟ್ರದ ಮಟ್ಟದ

ಸ್ವಚ್ಛ ಮನೆ ಸ್ವಚ್ಛ ನಗರ ಬಹುಮಾನ

ಕೊಡುವರಂತೆ ನಾವೂ 

ಸಜ್ಜಾಗಿದ್ದೇವೆ ಇನ್ನೂ ಸ್ವಚ್ಛವಾಗಲೂ

ಮಾನವೀಯತೆ ,ಮೌಲ್ಯಗಳ ತೊರೆದು.


ನಮ್ಮ ಮಕ್ಕಳು ,ನಮ್ಮನ್ನು 

ಗಮನಿಸುತ್ತಿದ್ದಾರೆ 

ಅಂತರರಾಷ್ಟ್ರೀಯ ಮಟ್ಟದ ಸ್ವಚ್ಛತಾ ಬಹುಮಾನ ಪಡೆಯಲು.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ