ಆನ್ಲೈನ್ ಶಿಕ್ಷಣ ವ್ಯವಸ್ಥೆ - ಇದರ ಪ್ರಯೋಜನಗಳು ಮತ್ತು ಅದನ್ನು ಹೇಗೆ ಇನ್ನಷ್ಟು ಸುಧಾರಿಸಬಹುದು. ಲೇಖನ
"ಶಿಕ್ಷಣವು ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯ ಅಭಿವ್ಯಕ್ತಿಗೊಳಿಸುವುದಾಗಿದೆ "
______ಸ್ವಾಮಿ ವಿವೇಕಾನಂದ.
ಸ್ವಾಮಿ ವಿವೇಕಾನಂದರ ಪ್ರಕಾರ, ಶಿಕ್ಷಣವು ನಮ್ಮನ್ನು ಪರಿಪೂರ್ಣತೆಗೆ ಕರೆದೊಯ್ಯಬೇಕು ಅಂತಹ ಶಿಕ್ಷಣ ಇಂದಿನ ಅಗತ್ಯವಾಗಿದೆ, ಮಹಾತ್ಮಾ ಗಾಂಧೀಜಿಯವರು ಹೇಳಿದಂತೆ ಮಗುವಿನ ಸರ್ವತೋಮುಖ ಬೆಳವಣಿಗೆ ಶಿಕ್ಷಣದ ಮೂಲ ಉದ್ದೇಶವಾಗಿದೆ.ಈ ಉದ್ದೇಶಗಳ ಹಿನ್ನೆಲೆಯಲ್ಲಿ ಶಿಕ್ಷಣ ಪಡೆಯಲು ನಾವು ಔಪಚಾರಿಕ ಮತ್ತು ಅನೌಪಚಾರಿಕ ಕಲಿಕೆಯ ವಿಧಾನಗಳನ್ನು ಅನುಸರಿಸುತ್ತಿದ್ದೇವೆ.
ವೇದಗಳ, ಉಪನಿಷತ್ ಕಾಲದಿಂದ
20 ನೇ ಶತಮಾನದವರೆಗೆ ನಾವು ಔಪಚಾರಿಕ ಶಿಕ್ಷಣ ಪದ್ದತಿಯನ್ನು ಬಳಸಿಕೊಂಡು ಮಕ್ಕಳಿಗೆ ಸಾಂಪ್ರದಾಯಿಕ ಪದ್ದತಿಗಳ ಸಹಾಯದಿಂದ ಶಿಕ್ಷಣ ನೀಡುತ್ತಿದ್ದೆವು.
ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣಗಳ ಪರಿಣಾಮವಾಗಿ ಜಗತ್ತು ಇಂದು ಒಂದು ಕುಟುಂಬ ವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಹಲವಾರು ಆವಿಷ್ಕಾರಗಳು ತ್ವರಿತ ಅಭಿವೃದ್ಧಿಗೆ ಕಾರಣವಾಗಿವೆ. ಇದರ ಜೊತೆಗೆ ಟೆಲಿಕಾಂ ರಂಗದಲ್ಲಾದ ಕ್ರಾಂತಿಯೂ ಡಿಜಿಟಲ್ ಕ್ರಾಂತಿ ಗೆ ಪೂರಕವಾಗಿದೆ. ಈ ಎಲ್ಲಾ ಅಂಶಗಳು ಆನ್‌ಲೈನ್ ಶಿಕ್ಷಣಕ್ಕೆ ಉತ್ತಮ ಬೆಂಬಲವನ್ನು ನೀಡಿವೆ . ಅದರಲ್ಲೂ ಕೋವಿಡ್ 19 ಸಮಯದ ಕಾರಣ ಲಾಕ್ ಡೌನ್ ಸಮಯದಲ್ಲಿ ಔಪಚಾರಿಕ ಶಿಕ್ಷಣದ ಮೂಲಗಳಾದ ಶಾಲಾ ಕಾಲೇಜುಗಳು ಅನಿರ್ದಿಷ್ಟ ಅವಧಿಯವರೆಗೆ ಮುಚ್ಚಿದ ಸಂಧರ್ಭದಲ್ಲಿ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಯಿತು.
ವಿಭಿನ್ನ ಮಾಧ್ಯಮಗಳ ಮೂಲಕ ತಂತ್ರಜ್ಞಾನದ ಬಳಕೆಯಿಂದ ದೈಹಿಕವಾಗಿ ಹಾಜರಾಗದೆ ಬೋಧನೆ ಮತ್ತು ಕಲಿಕೆ ನಡೆಯುವ ಪ್ರಕ್ರಿಯೆಯನ್ನು ಆನ್‌ಲೈನ್ ಶಿಕ್ಷಣ ಎಂದು ಕರೆಯಬಹುದು.
ಈ ಉದ್ದೇಶಕ್ಕಾಗಿ ನಾವು ಜೂಮ್, ಗೂಗಲ್ ಮೀಟ್, ಮುಂತಾದ ವಿಭಿನ್ನ ಅಪ್ಲಿಕೇಶನ್‌ಗಳನ್ನು ಬಳಸುತ್ತೇವೆ. ನೆಟ್‌ವರ್ಕ್ ಮತ್ತು ಮೊಬೈಲ್ ಫೋನ್‌ಗಳ ಕೊರತೆಯಿಂದಾಗಿ ನಾವು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗದ ಆನ್‌ಲೈನ್ ತರಗತಿಗಳಿಗೆ ಟೆಲಿವಿಷನ್ ಸಹ ಒಂದು ಸಾಧನವಾಗಿ ಬಳಸಲಾಗುತ್ತದೆ.
ಆನ್‌ಲೈನ್ ಶಿಕ್ಷಣದ ಪ್ರಯೋಜನಗಳು
1 ಒಂದು ಸಮಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪಲು ಆನ್ ಶಿಕ್ಷಣದಿಂದ ಸಾಧ್ಯವಿದೆ.
2 ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯ, ಏಕೆಂದರೆ ಒಬ್ಬ ಶಿಕ್ಷಕನು ಹೆಚ್ಚಿನ ವಿದ್ಯಾರ್ಥಿಗಳಿಗೆ ನಿಗದಿತ ಸಮಯದಲ್ಲಿ ಅನುಕೂಲಿಸಬಹುದು. ಇದರಿಂದಾಗಿ ಬಹಳಷ್ಟು ಖಾಸಗಿ ಶಾಲೆಗಳು ಹೆಚ್ಚುವರಿ ಶಿಕ್ಷಕರನ್ನು ಕೆಲಸದಿಂದ ತೆಗೆದಿದ್ದನ್ನು ನಾವು ಗಮನಿಸಬಹುದು.
3 ನಗರದಿಂದ ಬಹು ದೂರವಿರುವ, ಗುಡ್ಡಗಾಡು ಪ್ರದೇಶದ ವಿದ್ಯಾರ್ಥಿಗಳು ಸಾರಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವವರು ತಮ್ಮ ಮನೆಗಳಿಂದ ಶಿಕ್ಷಣ ಪಡೆಯಲು ಆನ್ಲೈನ್ ಶಿಕ್ಷಣ ನೆರವಾಗುತ್ತದೆ.
4 ವಿದ್ಯಾರ್ಥಿಗಳಿಗೆ ತಮ್ಮದೇ ಆದ ವೇಗದಲ್ಲಿ ಕಲಿಯಲು ಈ ವಿಧಾನವನ್ನು ಪರಿಣಾಮವಾಗಿ ಬಳಸಿಕೊಳ್ಳಬಹುದು. ಇದರಿಂದಾಗಿ ಮಕ್ಕಳ ಕಲಿಕೆಯಲ್ಲಿ ಅನವಶ್ಯಕ ಒತ್ತಡವನ್ನು ಕಡಿಮೆ ಮಾಡುತ್ತದೆ.
5 ಆನ್ಲೈನ್ ಶಿಕ್ಷಣವು ಮಕ್ಕಳಿಗೆ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವ ಮತ್ತು ನಿರ್ವಹಿಸುವ ಕೌಶಲಗಳನ್ನು ಬೆಳೆಸುತ್ತದೆ ಇದು ವಿದ್ಯಾರ್ಥಿಗಳಿಗೆ ಅವರ ಮುಂದಿನ ಜೀವನದಲ್ಲಿ ಪರೋಕ್ಷವಾಗಿ ಸಹಾಯ ಮಾಡುತ್ತದೆ.
ಆನ್ಲೈನ್ ಶಿಕ್ಷಣದ ಅವಗುಣಗಳು
1.ತರಗತಿಯ ಕೋಣೆಯಲ್ಲಿ ಉತ್ತಮ ಬೋಧನೆ ಮಾಡುವ ಎಲ್ಲಾ ಶಿಕ್ಷಕರು ಆನ್ಲೈನ್ ಪಾಠ ಮಾಡುವ ಕೌಶಲಗಳನ್ನು ಮತ್ತು ತಾಂತ್ರಿಕವಾದ ಜ್ಞಾನವನ್ನು ಹೊಂದಿರುವುದಿಲ್ಲ .
2 ನೇರಾ ನೇರಾ ಕುಳಿತು ಪಾಠಗಳನ್ನು ಮಾಡುವಾಗ ಇರುವ ಆತ್ಮೀಯತೆ , ಭಾವನೆಗಳನ್ನು ,ವ್ಯಕ್ತಪಡಿಸುವ ರೀತಿಗೆ ಈ ಮಾದ್ಯಮ ಅಡಚಣೆಯಾಗುವುದೇನೋ ಎನಿಸದಿರದು.
3 ಕೆಲ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳೇ ಮರೀಚಿಕೆಯಾಗಿರುವಾಗ ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗುವುದನ್ನು ನಾವು ಅಪೇಕ್ಷೆ ಪಡಲಾಗುವುದಿಲ್ಲ ಇದರಿಂದಾಗಿ ಆನ್ಲೈನ್ ಪಾಠಕ್ಕೆ ತೊಂದರೆಯಾಗುವುದು
4 ಬಹುತೇಕ ಜನರಿಗೆ ಸ್ಮಾರ್ಟ್ ಪೋನ್ ಕೊಳ್ಳಲು ಆರ್ಥಿಕವಾಗಿ ಸಮಸ್ಯೆ ಇರುವುದು ಕೆಲ ಪೋಷಕರು ಇಂತಹ ಫೋನ್ ಕೊಳ್ಳಲು ತಾಳಿ , ಜಾನುವಾರುಗಳನ್ನು ಮಾರಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ.
5 ಕೆಲ ಯುವ ಜನರು ಆನ್ಲೈನ್ ಹೆಸರಿನಲ್ಲಿ ಮೊಬೈಲ್ ಮತ್ತು ಅಂತರ್ಜಾಲವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯಿದೆ.
6 ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಆನ್‌ಲೈನ್ ಶಿಕ್ಷಣವನ್ನು ಹೇಗೆ ಸುಧಾರಿಸಬಹುದು?
1 ಮೊಬೈಲ್ ನೆಟ್‌ವರ್ಕ್‌ನಂತಹ ಮೂಲಸೌಕರ್ಯಗಳು, ಸಾರ್ವಕಾಲಿಕ ವಿದ್ಯುತ್ ಸಂಪರ್ಕ ಒದಗಿಸಬೇಕು.
2 ಆನ್ಲೈನ್ ನಲ್ಲಿ ಬೋಧಿಸುವ ಶಿಕ್ಷಕರಿಗೆ ಸಾಧನಗಳು ಮತ್ತು ತಂತ್ರಜ್ಞಾನವನ್ನು ನಿರ್ವಹಿಸಲು ಸರಿಯಾದ ತರಬೇತಿ ನೀಡಬೇಕು.
3 ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಪೋಷಕರು ವಿದ್ಯಾರ್ಥಿಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡಬೇಕು.
4 ಕಲಿಸುವವರು ಮತ್ತು ಕಲಿಯುವವರು ಆನ್ಲೈನ್ ಬೋಧನೆ ಮಾಡುವಾಗ ಅನಪೇಕ್ಷಿತ ನಡವಳಿಕೆಗಳನ್ನು ನಿಯಂತ್ರಿಸುವ ಆನ್‌ಲೈನ್ ನಡವಳಿಕೆಯನ್ನು (Online mannered) ಬೆಳೆಸಿಕೊಳ್ಳಬೇಕು.
5 ಅತಿಯಾದ ಆನ್ಲೈನ್ ಪಾಠಗಳಿಂದ ಎಲ್ಲರೂ ನಮ್ಮ ಕಣ್ಣು ಮತ್ತು ಕಿವಿಗಳ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಶಿಕ್ಷಣದ ಜೊತೆ ನಮ್ಮ ಅಮೂಲ್ಯವಾದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಎಷ್ಟೇ ತಂತ್ರಜ್ಞಾನ ಮುಂದುವರೆದರೂ
ಎಷ್ಟೇ ಆನ್ಲೈನ್ ಮತ್ತಿತರ ಮೂಲದ ಅನೌಪಚಾರಿಕ ಬೋಧನಾಕ್ರಮಗಳು ಬಂದರೂ ಭೌತಿಕವಾಗಿ ಮಕ್ಕಳು ಹಾಜರಾಗಿ ಶಿಕ್ಷಣ ಪಡೆಯುವುದಕ್ಕೆ ಈ ಮಾರ್ಗಗಳು ಪರ್ಯಾಯವಾಗಲಾರವು ಬದಲಿಗೆ ಪೂರಕವಾಗಬಲ್ಲವು.
ಸಿ ಜಿ ವೆಂಕಟೇಶ್ವರ.
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
ತುಮಕೂರು
No comments:
Post a Comment