*
*ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸೋಣ*
ಭಾರತೀಯ ಸನಾತನ ಸಂಸ್ಕೃತಿಯು ವಿಶ್ವದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ. "ಸರ್ವೇ ಜನಾಃ ಸುಖಿನೋಭವಂತು" ಎಂಬ ಆಶಯವನ್ನು ಹೊಂದಿದ ಪ್ರಪಂಚದ ಜನರೆಲ್ಲಾ ಸುಖವಾಗಿರಲಿ ಎಂಬ ಉದಾತ್ತ ಚಿಂತನೆಯನ್ನು ಹೊಂದಿರುವ ದೇಶ ನಮ್ಮ ಭಾರತ.
ನಮ್ಮ ಸಂಸ್ಕೃತಿಯು ತನ್ನದೇ ಆದ ವೈಜ್ಞಾನಿಕ ಹಿನ್ನಲೆ ಹೊಂದಿದೆ. ನಮ್ಮ ಆಚರಣೆ ,ವಿಚಾರಗಳು, ಇಂದಿಗೂ ಇತರೆ ದೇಶಗಳಿಗೆ ಮಾದರಿ ಎಂದರೆ ತಪ್ಪಾಗಲಾರದು. ಇದಕ್ಕೆ ತಾಜಾ ಉದಾಹರಣೆ ಎಂದರೆ ನಮ್ಮ ದೇಶವು ಬೇರೆ ದೇಶಗಳಿಗಿಂತ ಕೊರೋನಾ ಸಮಯದಲ್ಲಿ ಕಡಿಮೆ ಸಾವು ನೋವು ಅನುಭವಿಸಿತು ಇದಕ್ಕೆ ನಮ್ಮ ಸಂಸ್ಕೃತಿ ಜೀವನ ಶೈಲಿ, ಪದೆ ಪದೆ ಕೈತೊಳೆಯುವುದು, ಆಯುರ್ವೇದದ ಸಮರ್ಪಕವಾದ ಬಳಕೆ, ಸ್ವಚ್ಚತೆ , ಮುಂತಾದವುಗಳನ್ನು ನಾವು ಉದಾಹರಣೆ ಕೊಡಬಹುದು.
ವಿಪರ್ಯಾಸವೆಂದರೆ ಇತ್ತೀಚೆಗೆ ವಿದೇಶಿಯರ ಅನುಕರಿಸುವ ,ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯು ಹೆಚ್ಚಾಗಿ ಕ್ರಮೇಣವಾಗಿ ನಮ್ಮ ಸಂಸ್ಕೃತಿಯ ಕಣ್ಮರೆಯಾಗುವುದೇನೋ ಎಂಬ ಆತಂಕ ನಮ್ಮನ್ನು ಕಾಡದಿರದು. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಪರಿಣಾಮವಾಗಿ ಪ್ರಪಂಚವೇ ಒಂದು ಹಳ್ಳಿಯಾಗಿ ಬದಲಾಗಿದೆ ಜೊತೆಗೆ ತರವಲ್ಲದ ,ತಲೆಬುಡವಿಲ್ಲದ ಆಚರಣೆಗಳು ನಮ್ಮ ಹಳ್ಳಿಯನ್ನು ಆಕ್ರಮಿಸುತ್ತಿವೆ.
ಭಾರತೀಯ ಸಂಸ್ಕೃತಿಯಲ್ಲಿ ಹುಟ್ಟು ಹಬ್ಬದ ಆಚರಣೆಯನ್ನು ದೀಪವನ್ನು ಬೆಳಗುವ ಮೂಲಕ ದೇವರ ಆಶೀರ್ವಾದ ಪಡೆದು ,ಹಿರಿಯರ ಸಮ್ಮುಖದಲ್ಲಿ ನಡೆಯುವುದು. ಆದರೆ ಇಂದು ನಮ್ಮ ಯುವ ಸಮುದಾಯ ಯಾವುದೋ ಪಬ್ಗಳಲ್ಲೋ, ಬಾರ್ ಗಳಲ್ಲೋ ಕಂಠ ಪೂರ್ತಿ ಕುಡಿದು ಕಿರುಚಾಡಿ, ಮನೆ ಸೇರುವಾಗ ಕುಡಿದ ಮತ್ತಿನಲ್ಲಿ ಅಪಘಾತದಲ್ಲಿ ಜನ್ಮದಿನದಂದೆ ಶಿವನ ಪಾದ ಸೇರಿರುವ ಹಲವಾರು ನಿದರ್ಶನಗಳು ನಮ್ಮ ಮುಂದಿವೆ.ಇಂತಹ ಅನರ್ಥ ಪಾಶ್ಚಿಮಾತ್ಯ ಸಂಸ್ಕೃತಿ ನಮಗೆ ಬೇಕೆ? ಎಂದು ಚಿಂತನೆ ಮಾಡಬೇಕಿದೆ.
ಭಾರತೀಯ ಸಂಸ್ಕೃತಿಯಲ್ಲಿ ನಾವು ಚಾಂದ್ರಮಾನ ಪದ್ದತಿಯನ್ನು ಅನುಸರಿಸಿ ಉಗಾದಿ ಹಬ್ಬದ ದಿನದಂದು ಹೊಸ ವರ್ಷ ಆಚರಣೆ ಮಾಡುವೆವು, ವಸಂತಕಾಲದಲ್ಲಿ ಚಿಗುರಿದ ಮರಗಿಡಗಳು ಹೊಸ ತನ ತೋರುತ ಪ್ರಕೃತಿಯೇ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಕಾರ ಭಾರತೀಯರು ಕೂಡಾ ನಾ ಮುಂದು ತಾ ಮುಂದು ಎಂದು ಜನವರಿ ಒಂದನ್ನು ಹೊಸ ವರ್ಷ ಎಂದು ಆಚರಣೆ ಮಾಡುವುದು, ಅರ್ಧರಾತ್ರಿಯಲ್ಲಿ ಅರೆ ಬರೆ ಬಟ್ಟೆಗಳನ್ನು ಧರಿಸಿ , ಕೇಕ್ ಕತ್ತರಿಸಿ ದೆವ್ವಗಳು ತಿನ್ನುವ ಹೊತ್ತಲ್ಲಿ ತಿಂದು, ಮತ್ತಲ್ಲಿ ತೇಲುವುದು ಯಾವ ಸಂಸ್ಕೃತಿ?
ಭಾರತೀಯ ಸಂಸ್ಕೃತಿಯಲ್ಲಿ ಪ್ರೀತಿ, ಪ್ರೇಮಕ್ಕೆ ತನ್ನದೇ ಆದ ಸ್ಥಾನಮಾನವಿದೆ, ಪೌರಾಣಿಕ ಹಿನ್ನೆಲೆ ಇದೆ, ಪ್ರತಿ ದಿನದಲ್ಲಿ ವಿಶಾಲವಾದ ಅರ್ಥದಲ್ಲಿ, ತಾಯಿ ತನ್ನ ಮಗನನ್ನು, ತಂದೆ ತನ್ನ ಮಗನನ್ನು, ಮಕ್ಕಳು ಪ್ರಾಣಿಗಳನ್ನು , ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿ ಸುತ್ತಲೇ ಇರುವೆವು. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಬಿದ್ದು ಪ್ರೀತಿಯ ಹೆಸರಲ್ಲಿ ವ್ಯಾಲೆಂಟೇನ್ ಡೇ ನೆಪದಲ್ಲಿ ಹೆಣ್ಣುಮಕ್ಕಳು ಸ್ವೇಚ್ಚಾಚಾರದಲ್ಲಿ ತೊಡಗಿ ಬೀದಿಗಳಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ತಬ್ಬಿಕೊಂಡು ಅಸಭ್ಯವಾಗಿ ,ಸಾರ್ವಜನಿಕರು ಮುಜುಗರ ಪಡುವಂತೆ ವರ್ತನೆ ಮಾಡುವ ಅಂಧಾನುಕರಣೆಯ ಸಂಸ್ಕೃತಿ ನಮಗೆ ಬೇಕಾ?
ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ತತ್ವದಲ್ಲಿ ನಂಬಿಕೆಯನ್ನು ಇಟ್ಟ ನಮ್ಮ ನಮ್ಮ ಪೂರ್ವಜರು ಅನಕ್ಷರಸ್ಥ ರಾದರೂ ಉತ್ತಮ ಅರ್ಥಶಾಸ್ತ್ರಜ್ಞರಂತೆ ಜೀವಿಸಿದ್ದರು. ಆದರೆ ಇಂದಿನ ಮಾಲ್ ಗಳು, ಸೂಪರ್ ಮಾರ್ಕೆಟ್ ಗಳು ,ಕ್ರೆಡಿಟ್ ಕಾರ್ಡ್ ಗಳು ನಮ್ಮನ್ನು ಕೊಳ್ಳುಬಾಕರನ್ನಾಗಿ ಮಾಡಿ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಮಾಡಿ ಸಾಲಗಾರರನ್ನಾಗಿ ಮಾಡಿ ತನ್ಮೂಲಕ ದೇಶಗಳೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವವುದಕ್ಕೆ ಅಮೇರಿಕಾದ ಮಹಾ ಆರ್ಥಿಕ ಕುಸಿತವೇ ಸಾಕ್ಷಿ, ಆದರೂ ಕಣ್ಣು ಮುಚ್ಚಿ ನಾವು ಅದೇ ಮಾಲ್ , ಪಬ್ ,ಕ್ಲಬ್ ಸಂಸ್ಕೃತಿಗೆ ಜೋತು ಬಿದ್ದಿರುವುದು ದುರದೃಷ್ಟಕರ.
ನಮ್ಮ ಉಡುಗೆ ತೊಡುಗೆಗಳು ನಮ್ಮ ವ್ಯಕ್ತಿತ್ವದ ಪ್ರತಿಬಿಂಬ ಭಾರತೀಯ ಉಡುಗೆ ತೊಡುಗೆಗಳಿಗೆ ಪ್ರಪಂಚದಲ್ಲೇ ಒಂದು ಗೌರವದ ಸ್ಥಾನವಿದೆ, ಆದರೆ ನಮ್ಮ ಯುವ ಪೀಳಿಗೆ ಅರೆಬರೆ ಬಟ್ಟೆಗಳನ್ನು ಹಾಕಿಕೊಂಡು, ಅಸಭ್ಯವಾಗಿ ವರ್ತಿಸುವುದನ್ನು ನೋಡಿದಾಗ ನಾವು ಯಾವ ದೇಶಗಳಲ್ಲಿ ಇರುವೆವು ಎಂಬ ಅನುಮಾನ ನಮ್ಮನ್ನು ಕಾಡದಿರದು.
ನಮ್ಮ ಆಹಾರ ನಮ್ಮ ಸಂಸ್ಕೃತಿಯ ಪ್ರತೀಕ ಉತ್ತಮವಾದ ಆಹಾರವು ಉತ್ತಮ ಆರೋಗ್ಯಕ್ಕೆ ಅಗತ್ಯ ಅದನ್ನು ಕಂಡ ನಮ್ಮ ಭಾರತೀಯರು ಪುರಾತನ ಕಾಲದಿಂದಲೂ ಸಿರಿಧಾನ್ಯದ ಆದಿಯಾಗಿ ಉತ್ತಮ ಆಹಾರದ ಕ್ರಮಗಳನ್ನು ಅನುಸರಿಸುತ್ತಿದ್ದರು. ಪಾಶ್ಚಿಮಾತ್ಯ ಅಂಧಾನುಕರಣೆಯ ಪರಿಣಾಮವಾಗಿ ,ಪಿಜಾ ಬರ್ಗರ್, ಕೆ ಎಪ್ ಸಿ , ಗೋಬಿಮಂಚೂರಿ, ಮುಂತಾದ ಆಹಾರಗಳು ಇಂದು ಹಳ್ಳಿಗಳಿಗೂ ಲಗ್ಗೆ ಇಟ್ಟು ಎಲ್ಲರ ಅನಾರೋಗ್ಯಕ್ಕೆ ಕಾರಣವಾಗಿವೆ , ಇಂತಹ ಕೆಟ್ಟ ಆಹಾರ ಕ್ರಮಗಳು ಬಗ್ಗೆ ನಮ್ಮಲ್ಲಿ ಜಾಗೃತಿ ಮೂಡುವುದು ಯಾವಾಗ?
ಬೇರೆ ದೇಶಗಳಲ್ಲಿ ಟಾಯ್ಲೆಟ್ ತೊಳೆಯಲು ಬಳಸುವ ಕೋಲಾ, ಪೆಪ್ಸಿ ಮುಂತಾದ ತಂಪು ಪಾನೀಯಗಳನ್ನು ಮಳೆಗಾಲದಲ್ಲೂ ಕುಡಿಯುತ್ತಿರುವ ನಮ್ಮ ಯುವಕರು ವಿದೇಶಿ ಸಂಸ್ಕೃತಿ ಹೆಸರಿನಲ್ಲಿ ತಮ್ಮ ಆರೋಗ್ಯ ಹಾಳುಮಾಡಿಕೊಳ್ಳತ್ತಿದ್ದರೆ. ಆರೋಗ್ಯಕ್ಕೆ ಪೂರಕವಾದ ನಮ್ಮ ರೈತರು ಬೆಳೆದ ಎಳನೀರನ್ನು ತಾತ್ಸಾರವಾಗಿ ನೋಡುವ ನಮ್ಮ ಜನರಿಗೆ ಬುದ್ದಿ ಬರುವುದು ಯಾವಾಗ?
ಭಾರತೀಯ ಸಂಸ್ಕೃತಿಯೇ ಶ್ರೇಷ್ಠ ಇತರ ದೇಶಗಳ ಸಂಸ್ಕೃತಿ ನಿಕೃಷ್ಠ ಎಂಬುದು ನನ್ನ ಅಭಿಪ್ರಾಯವಲ್ಲ . ಪಾಶ್ಚಿಮಾತ್ಯ ದೇಶಗಳಲ್ಲಿ ಇರುವ ಒಳ್ಳೆಯ ಅಂಶಗಳನ್ನು ನಾವೀಗಾಗಲೇ ಅಳವಡಿಸಿಕೊಂಡಿದ್ದೇವೆ . ನಮ್ಮ ಆರೋಗ್ಯಕ್ಕೆ, ನಮ್ಮ ಜೀವನಕ್ಕೆ, ನಮ್ಮ ಸಂಸ್ಕೃತಿ ಗೆ ಮಾರಕವಾಗುವ ಅಂಧಾನುಕರಣೆಗಳನ್ನು ನಾವು ತ್ಯಜಿಸೋಣ, ನಮ್ಮ ಭವ್ಯವಾದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸೋಣ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
1 comment:
ಉತ್ತಮ ನೀತಿಯುಳ್ಳ ಸಂದೇಶ ಸರ್👏👏💐
Post a Comment