*ಹಿತ್ತಲ ಗಿಡ.....*
ನ್ಯಾನೋ ಕಥೆ
"ಏ ಅವರೇನು ಬೇಡ ಸಿಟೀಲಿ ಇರೋ ಟ್ಯೂಷನ್ ಮೇಷ್ಟ್ರು ಬಾಳ ಸೆನಾಗಿ ಹೇಳ್ಕೊಡ್ತಾರಂತೆ ಅಲ್ಲಿಗೇ ಹೋಗು ಮೂವತ್ತು ಕಿಲೋಮೀಟರ್ ಆದ್ರೂ ಪರವಾಗಿಲ್ಲ ,ಪೀಜ್ ನಾನು ಕೊಡ್ತೀನಿ ಒಟ್ನಲ್ಲಿ ನೀನು ಡಾಕುಟ್ರು ಆಗ್ಬೇಕು"
ಎಂದು ಜೋರು ಧ್ವನಿಯಲ್ಲಿ ಹೇಳುತ್ತಿದ್ದರು ,ರಶ್ಮಿಕಾಳ ತಂದೆ ಪರಮೇಶ್.
" ರೀ ನಮ್ಮೂರಾಗೆ ಇರೋ ಲೋಹಿತಪ್ಪ ಪ್ರೀಯಾಗಿ ಪಾಠ, ಮಾಡ್ತಾರೆ,ಸೆನಾಗೂ ಮಾಡ್ತಾರಂತೆ, ಅವರತ್ರಾನೆ ಕಳ್ಸಾನ ನಮ್ಮುಡಿಗೀನಾ ಯಾಕೆ ಪ್ಯಾಟೆ ಸವಾಸ? " ಎಂಬ ಹೆಂಡತಿಯ ಮಾತು ಕೇಳಿ ಕೋಪಗೊಂಡ ಪರಮೇಶ್ "ಇದೆಲ್ಲಾ ನಿನಿಗೆ ಗೊತ್ತಾಗಲ್ಲ ,ಸುಮ್ಮನೆ ಮುದ್ದೆ ಮಾಡೋಗು" ಎಂದರು.
ಗೊನಗುತ್ತ ಅಡಿಗೆ ಮನೆಗೆ ಹೋದರು ಪವಿತ್ರ .
ದ್ವಿತೀಯ ಪಿ ಯು ಸಿ ಫಲಿತಾಂಶ ಪ್ರಕಟವಾದ ದಿನ ಅದೇ ಊರಿನ ಬಾಲಾಜಿ ೯೮℅ ಅಂಕ ಪಡೆದ ಎಂದು ಪರಮೇಶ್ ರವರ ಮನೆಗೆ ಬಂದು ಸಿಹಿನೀಡಿದ .
" ಯಾರತ್ರ ಟೂಷನ್ ಗೆ ಹೋಗಿದ್ದಪ್ಪ " ಪ್ರಶ್ನೆ ಮಾಡಿದರು ಪರಮೇಶ್ . ಬಾಲಾಜಿಯು " ಟ್ಯೂಷನ್ ಏನೂ ಇಲ್ಲ ಅಂಕಲ್ ನಮ್ಮೂರ ಲೋಹಿತ್ ಸರ್ ವಾರಕ್ಕೊಂದ್ ಎರಡ್ಸಾರಿ ಸಾರಿ ಗೈಡ್ ಮಾಡ್ತಿದ್ರು " ಎಂದ.
" ನೋಡಮ್ಮ ನೀನು ಇದಿಯಾ, ಟೌನ್ ಗೆ ಟೂಷನ್ ಕಳಿಸಿದ್ರೂ ೬೫℅ ಸಾಕಾ?
ಮಗಳು ತಲೆ ತಗ್ಗಿಸಿಕೊಂಡು ಅಡಿಗೆ ಮನೆ ಕಡೆ ನಡೆದಳು.
ಅಡಿಗೆ ಮನೆಯಲ್ಲಿ ರಶ್ಮಿಕಾಳ ತಾಯಿ "ಹಿತ್ತಲ ಗಿಡ ಮದ್ದಲ್ವಂತೆ " ಎಂದು ಹೇಳಿದ್ದು ಪರಮೇಶ್ ಕಿವಿಗೂ ಬೀಳದಿರಲಿಲ್ಲ...
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
No comments:
Post a Comment