17 March 2020

ಕರೋನ ರಜೆಯಲ್ಲಿ ಎಸ್ ಎಸ್ ಎಲ್ ಸಿ ಪೋಷಕರ ಪಾತ್ರ

ಕರೋನ ರಜೆಯಲಿ ಎಸ್‌ ಎಸ್ ಎಲ್ ಸಿ   ಪೋಷಕರ ಪಾತ್ರ

"ಕರೋನ  ಬಿಟ್ಟು ಎಲ್ಲಾ ಪರೀಕ್ಷೆ ರದ್ದು " ." ನಮ್ಮ ಕಾಲದಲ್ಲಿ ನಾವು ಎಲ್ಲಾ ದೇವರಿಗೆ ಪೂಜೆ ಮಾಡಿದರೂ ಪರೀಕ್ಷೆ ನಿಲ್ಲಲಿಲ್ಲ ಇಂದಿನ ಮಕ್ಕಳು ದೇವರಿಗೆ ಕೈ ಮುಗಿಯುವುದೇ ಇಲ್ಲ ಆದರೂ ಪರೀಕ್ಷೆಯಿಲ್ಲದೇ ಎಲ್ಲರೂ ಪಾಸ್ " ಇಂತಯ ಜೋಕ್ ಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೂ ನನಗೇಕೋ ನಗು ಬರಲಿಲ್ಲ. ನನಗೇ ಅಲ್ಲ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಕಾಳಜಿ ಇರುವ ಯಾವ ಶಿಕ್ಷಕರಿಗೂ ಇಂತಹ ಜೋಕ್ ನಿಂದ  ನಗು ಬರುವುದಿಲ್ಲ.
ಕೊರೋನೋ ಭೀತಿಯಿಂದ ಅದನ್ನು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ನಾವು ಸ್ವಾಗತಿಸಲೇಬೇಕು.ಇದರ ಪರಿಣಾಮವಾಗಿ ರಾಜ್ಯಾದ್ಯಂತ ಆರನೇಯ ತರಗತಿಯವರೆಗಿನ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಅವರ ಈ ವರ್ಷದ ಹಿಂದಿನ ಘಟಕ ಪರೀಕ್ಷೆ ಸಂಕಲನಾತ್ಮಕ ಪರೀಕ್ಷೆ  ಪಾಸು ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.ಇತ್ತೀಚಿನ ಅದೇಶದ ಪ್ರಕಾರ ಏಳು.ಎಂಟು ಮತ್ತು ಒಂಭತ್ತನೆಯ ತರಗತಿಯ ಪರೀಕ್ಷೆಗಳನ್ನು ಮಾರ್ಚ್ ತಿಂಗಳ ಮೂವತ್ತೊಂದನೇ ತಾರೀಖಿನ ವರೆಗೆ ಸ್ಟಡಿ ಹಾಲಿಡೆ ನೀಡಿದ್ದಾರೆ.ಇದರ ಜೊತೆಗೆ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಸ್ಟಡಿ ಹಾಲಿಡೆ ನೀಡಿರುವುದು ಮಕ್ಕಳ ಆರೋಗ್ಯ ದೃಷ್ಟಿಯಿಂದ ಮತ್ತು ರೋಗ ಹರಡುವುದನ್ನು ತಡೆಗಟ್ಟಲು ಸ್ವಾಗತಾರ್ಹ.ಆದರೆ ಇದು ಹತ್ತನೇ ತರಗತಿಯ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು. ನಮ್ಮ ಶಾಲೆಯ ಕೆಲ  ಸಹೋದ್ಯೋಗಿಗಳು ಮಕ್ಕಳಿಗೆ ಸ್ಡಡಿಹಾಲಿಡೆ ಬಿಡಲು ಮನಸ್ಸಿಲ್ಲ ಅದರಲ್ಲೂ ಹತ್ತನೆಯ ತರಗತಿ ಮಕ್ಕಳಿಗೆ ಸ್ಟಡಿ ಹಾಲಿಡೆ ಮೂಲಕ  ಮನೆಯಲ್ಲಿ ಕುಳಿತುಕೊಂಡು ಓದಲು ಕಳಿಸಲು ನಮಗೆ ಇಷ್ಟವಿಲ್ಲ ಆದರೂ ಸರ್ಕಾರದ ನಿಯಮ ಮಕ್ಕಳ ಆರೋಗ್ಯ ದೃಷ್ಟಿಯಿಂದ, ಮತ್ತು ರೋಗವು ಹರಡದಂತೆ  ಜಾಗೃತಿ ಮೂಡಿಸಲು ಒಲ್ಲದ ಮನಸ್ಸಿನಿಂದ ನಮ್ಮ ಮಕ್ಕಳು ಶಾಲೆಯಿಂದ ಮನೆಗೆ ಕಳಿಸಲು ನಾವು ಒಪ್ಪಿಕೊಂಡು ಮಕ್ಕಳನ್ನು ಮನೆಗೆ ಕಳಿಸಲಾಗಿದೆ.ಆದರೆ ಮಕ್ಕಳು ನಿಜಕ್ಕೂ ಮನೆಯಲ್ಲಿ ಓದುವರೆ? ಇದು ನಮ್ಮನ್ನು ಕಾಡುವ ಪ್ರಶ್ನೆ.
ನಗರ ,ಪಟ್ಟಣ ಹಳ್ಳಿಗಳು ಎಂಬ ಭೇದವಿಲ್ಲದೆ ಇಂದು ಮಕ್ಕಳು ಮನೆಯಲ್ಲಿ ಕುಳಿತು ಸ್ವಂತವಾಗಿ ಓದುವ ಮಕ್ಕಳ ಸಂಖ್ಯೆ ತೀರಾ ವಿರಳ ಅದರಲ್ಲೂ ಇಂದಿನ ಆಧುನಿಕತೆಯ ನಗರಗಳಲ್ಲಿ ಮೊಬೈಲ್ ಟಿವಿ ಮುಂತಾದವುಗಳಿಗೆ ಮನಸೋತ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಓದುವ ಬಗ್ಗೆ ಸಂದೇಹವಿದೆ.
ಶಾಲೆಗಳಲ್ಲಿ ಶಿಕ್ಷಕರ ಓದಲೇಬೇಕು ಎಂಬ ಒತ್ತಾಸೆಗೆ,ಸ್ನೇಹಿತರ ನೋಡಿ ಪ್ರೇರಣೆ, ಕಲಿಯುವ ವಾತಾವರಣ ಇವುಗಳ ಪ್ರಭಾವದಿಂದಾಗಿ ಕಲಿಕೆ ನಡೆಯುತ್ತಿತ್ತು. ಅದರಲ್ಲೂ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವುದಾದರೆ ಕೊನೆಯ ಓವರ್‌ಗಳಲ್ಲಿ ಇಂತಿಷ್ಟು ಕಡಿಮೆ ಬಾಲ್ಗಳಲ್ಲಿ ಗೆಲ್ಲಲು ನಿಗದಿಪಡಿಸಿದ ರನ್ ಹೊಡೆಯಲು ತಂಡಗಳು ಶ್ರಮ ಪಡುವಂತೆ .ನಮ್ಮ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಇದು ಒಂದು ರೀತಿಯಲ್ಲಿ ಸ್ಲಾಗ್ ಓವರ್ ಇದ್ದ ಹಾಗೆ ಇಂತಹ ಸಮಯದಲ್ಲಿ ಅವರಿಗೆ ಮೈದಾನದಲ್ಲಿ ಸಹ ಆಟಗಾರ ಇಲ್ಲವೇ ನಾಯಕ ಸರಿಯಾದ ಸಲಹೆ ನೀಡಿ ಪೋರ್ ಸಿಕ್ಸ್ ಹೊಡೆದು ಗೆಲ್ಲುವ ಹುಮ್ಮಸ್ಸು ತುಂಬಬೇಕು. ಆದರೆ ಇಂತಹ ಸಮಯದಲ್ಲಿ ಸಲಹೆ ನೀಡಲು ಇರುವ ನಾಯಕ, ಅಂದರೆ ಶಿಕ್ಷಕರ ಮಾರ್ಗದರ್ಶನ  ಈಗ ನಮ್ಮ ಮಕ್ಕಳಿಗೆ ಲಭ್ಯವಿಲ್ಲ .ಈಗ ಈ ಸ್ಥಾನವನ್ನು ಮನೆಯಲ್ಲಿ ಪೋಷಕರು ಮತ್ತು ಸಮುದಾಯ ತೆಗೆದುಕೊಳ್ಳುವ ಮೂಲಕ ನಮ್ಮ ಮಕ್ಕಳು ಎಸ್ ಎಸ್ ಎಲ್ ಸಿ ಕಪ್ ಗೆಲ್ಲಲು ಸಹಕರಿಸಬೇಕಿದೆ

ಹಾಗಾದರೆ ಪೋಷಕರೇನು ಮಾಡಬೇಕು.

 1 ಸಮಯಕ್ಕೆ ಸರಿಯಾಗಿ ಮಕ್ಕಳಿಗೆ  ಪೌಷ್ಟಿಕ ಆಹಾರ ನೀಡಿ.                            2. ಓದಲು ಶಾಂತವಾದ ವಾತಾವರಣ ಕಲ್ಪಿಸಿ ಕೊಡಿ                                         3ಎಲ್ಲಾ ಭಾವನೆಗಳನ್ನು ಹಂಚಿಕೊಳ‍್ಳಲು ನಾನಿದ್ದೇನೆಂದು ಭರವಸೆ ಕೊಡಿ.                4 ಓದಿದ ಮನಸಿಗೆ ವಿರಾಮ ನಿದ್ರೆ ಅವಶ್ಕಕ ಅದಕ್ಕೆ ಅವಕಾಶ ಮಾಡಿಕೊಡಿ. 
5 ಎಲ್ಲಾ ಸಮಯದಲ್ಲಿ ಓದು ಓದು ಎಂದು “ಕಿರಿ ಕಿರಿ “ಮಾಡದಿರಿ                   6ಮತ್ತೆ ಮತ್ತೆ “ಪರೀಕ್ಷೆ ಹತ್ತಿರ ಬರುತ್ತಿದೆ “ಎಂದು ಭಯಪಡಿಸಬೇಡಿ .                   7 ಮಕ್ಕಳು ಪ್ರತಿನಿತ್ಯ ಇಷ್ಟಪಟ್ಟು ಓದುವಂತೆಪ್ರೇರೇಪಿಸಿ .     
8 ಹಬ್ಬ. ಜಾತ್ರೆ ,ಮದುವೆ ಮುಂತಾದ ಸಮಾರಂಭಗಳಿಗೆ ಮಕ್ಕಳನ್ನು ‌ಕರೆದುಕೊಂಡು ಹೋಗಬೇಡಿ.
9 ಸ್ವಚ್ಚತೆಯ ಬಗ್ಗೆ ಹೆಚ್ಚು ಗಮನ ಕೊಡಿ
10 ಮಕ್ಕಳಿಗೆ ಮೊಬೈಲ್ ಹೆಚ್ಚು ನೀಡದಿರಿ
11 ನೀವೂ ಟಿ ವಿ ನೋಡದಿರಿ ಮಕ್ಕಳಿಗೆ ಟಿ ವಿ ತೋರಿಸದಿರಿ
12 ವೇಳಾಪಟ್ಟಿಯ ಪ್ರಕಾರ ಮಕ್ಕಳು ಓದಲು ಪ್ರೇರೇಪಿಸಿ.
13 ಹಳೆಯ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ಸಮಯದಲ್ಲಿ ಬಿಡಿಸಲು‌ ಹೇಳಿ ಸಾದ್ಯವಾದರೆ ನೀವು ಕೊಠಡಿ ಮೇಲ್ವಿಚಾರಕರಂತೆ ಅವರ ಜೊತೆ ಕುಳಿತಿರಿ.
14 ಮನೆಯಲ್ಲಿ ಜೋರಾಗಿ ಸಂಗೀತ ಉಪಕರಣಗಳ ಬಳಕೆ ಕಡಿಮೆ ಮಾಡಿ.
15 ಪರೀಕ್ಷೆ ಹತ್ತಿರ ಸಮೀಪಿಸಿದಂತೆ ಮಕ್ಕಳಿಗೆ ಧೈರ್ಯದಿಂದ ಪರೀಕ್ಷೆ ಎದುರಿಸಲು ಯೋಗ ಧ್ಯಾನ ಪ್ರಾಣಾಯಾಮ ಮಾಡಲು ಸಲಹೆ ನೀಡಿ.

ಇದುವರೆಗೆ ಶಿಕ್ಷಕರು ಬೆಳಿಗ್ಗೆ ವಿಶೇಷ ತರಗತಿ ,ಸಂಜೆ ಗುಂಪು ಅದ್ಯಯನ, ದತ್ತು ಯೋಜನೆ, ಪೋಷಕರ ಭೇಟಿ ,ಗುರು ಬಂದ ಗುರುವಾರ, ರಾತ್ರಿ ಶಾಲೆ, ಬೆಳಗಿನ ಜಾವ ವಿದ್ಯಾರ್ಥಿಗಳಿಗೆ ಕರೆ ಮಾಡುವ, ರಸಪ್ರಶ್ನೆ ಕಾರ್ಯಕ್ರಮ, ಹೀಗೆ  ನೂರೊಂದು ಕಾರ್ಯಕ್ರಮ ಹಾಕಿಕೊಂಡು ಮಕ್ಕಳ ಪ್ರಗತಿಗೆ ಶಿಕ್ಷಕರು ಶ್ರಮ ಪಟ್ಟಿದ್ದರೂ ಈ ಪರ್ವ ಕಾಲದಲ್ಲಿ ಕೊರೊನೋ ರಜೆಯ ನೆಪದಲ್ಲಿ ಅದು ನಿರರ್ಥಕವಾಗದಿರಲಿ .
ಒಟ್ಟಾರೆ ಶಾಲೆಯಲ್ಲಿ ಶಿಕ್ಷಕರು ಮಾಡುವ ಕೆಲ ಕೆಲಸಗಳನ್ನು ಪಾಲಕರು ತಮ್ಮ ಮನೆಗಳಲ್ಲಿ ಮಾಡಿ ಮಕ್ಕಳು ಸರಿಯಾದ ರೀತಿಯಲ್ಲಿ ‌ವ್ಯಾಸಾಂಗ ಮಾಡಲು ಸಲಹೆ ‌ಸೂಚನೆಗಳನ್ನು ನೀಡಬೇಕಿದೆ.ಮತ್ತು ನಮ್ಮ ಮಕ್ಕಳ ಫಲಿತಾಂಶ ಉತ್ತಮ ಪಡಿಸಲು ಪೋಷಕರು ಮತ್ತು ಸಮುದಾಯ ನಮ್ಮ ಬೆನ್ನಿಗಿದೆ ಎಂದು ಸಾಬೀತು ಪಡಿಸಲು ಇದು ಸೂಕ್ತ ಕಾಲ.

ಸಿ ಜಿ‌ ವೆಂಕಟೇಶ್ವರ
ತುಮಕೂರು


2 comments:

minakesham said...

ಈ ಸಂದರ್ಭದಲ್ಲಿ ನಿಮ್ಮ ಲೇಖನ ಸೂಕ್ತ ಸರ್

C g VENKATESHWARA said...

ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯಾಗಿ ಧನ್ಯವಾದಗಳು🙏🙏