31 December 2023

ಸೋಮನಗೌಡರ ಮೋತಿ.


 





ಸೋಮನಗೌಡರ ಮೋತಿ.


ಕೆಲವು ಪ್ರಾಣಿಗಳು ಮಾನವರಿಗಿಂತಲೂ ಸೂಕ ಸಂವೇದನೆ ಹೊಂದಿರುತ್ತವೆ.ನಾಯಿಯಂತಹ ಪ್ರಾಣಿಗಳು ನಿಯತ್ತಿಗೆ ಹೆಸರುವಾಸಿ.ಅನ್ನ ಹಾಕಿದ ಮನೆಗೆ ಕನ್ನ ಹಾಕಲು ಬಂದ ಕಳ್ಳರ ಸಂಚನ್ನು ಬಯಲು ಮಾಡಿ ಮಾಲೀಕನ ಸಂಪತ್ತನ್ನು ರಕ್ಷಣೆ ಮಾಡಿದ ಮೋತಿಯ ಕಥೆ   ನಾವು ಪ್ರಾಥಮಿಕ ಹಂತದಲ್ಲಿ ಓದುವಾಗ ನಮ್ಮ ಪಠ್ಯ ವಾಗಿತ್ತು ಈ ಕಥೆಯನ್ನು ನೀವೂ ಓದಿರುತ್ತೀರಿ. ಮತ್ತೊಮ್ಮೆ ಜ್ಞಾಪಿಸಿಕೊಳ್ಳೋಣ.

ಸೋಮನಗೌಡರು ಊರಿಗೆಲ್ಲ ದೊಡ್ಡ ಶ್ರೀಮಂತರು. ಅವರು ಒಂದು ನಾಯಿಯನ್ನು ಸಾಕಿದ್ದರು. ಅದರ ಹೆಸರು ಮೋತಿ, ಮೋತಿ ಬಲು ನಂಬಿಗೆಯ ಪ್ರಾಣಿ. ಜಾಣತನಕ್ಕೆ ಅದು ಊರಿಗೆಲ್ಲ ಹೆಸರಾಗಿತ್ತು. ಗೌಡರ ಮನೆ ಊರ ಹೊರಗೆ ಇತ್ತು. ಪ್ರತಿ ರಾತ್ರಿಯೆಲ್ಲ ಎಚ್ಚರವಾಗಿದ್ದು ಮನೆ ಕಾಯುತ್ತಿತ್ತು. 


ಒಂದು ದಿನ ಆಪ್ತರ ಮದುವೆಗೆ ಗೌಡರ ಮನೆಯವರೆಲ್ಲ ನೆರೆಯೂರಿಗೆ ಹೋದರು. ಮೋತಿಯನ್ನು ಮನೆ ಕಾಯಲು ಬಿಟ್ಟು ಹೋದರು. ಗೌಡರ ಮನೆಯಲ್ಲಿ ಬಹಳ ಬಂಗಾರವಿತ್ತು, ಕಳ್ಳರು ಸಮಯ ಸಾಧಿಸುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಈ ಸಮಯ ನೋಡಿ ಗೌಡರ ಮನೆಗೆ ಹಿಂಬದಿಯಿಂದ ಕನ್ನ ಹಾಕಿದರು. ಕಳ್ಳರ ಗುಂಪಿನಲ್ಲಿ ಮೂರು ನಾಲ್ಕು ಜನರಿದ್ದರು. ಮೋತಿ ಅವರನ್ನು ನೋಡಿತು. ಆದರೆ ಬೊಗಳಲಿಲ್ಲ. ಎಲ್ಲವನ್ನು ನೋಡುತ್ತ ಮರೆಯಲ್ಲಿ ನಿಂತಿತು.

  

ಗೌಡರ ಬಂಗಾರ ಮತ್ತು ಹಣ ತುಂಬಿದ ಪೆಟ್ಟಿಗೆ ಭಾರವಾಗಿತ್ತು. ಕಳ್ಳರಿಗೆ ಅವಸರದಲ್ಲಿ ದೂರ ಒಯ್ಯಲು ಸಾಧ್ಯವಾಗಲಿಲ್ಲ. ಅವರಿಗೆ ಏನು ಮಾಡಬೇಕೆಂದು ತಿಳಿಯದಾಯಿತು. ಅಷ್ಟರಲ್ಲಿ ಬೆಳಗಾಗುತ್ತ ಬಂತು. ಬಹಳ ಯೋಚನೆ ಮಾಡಿದರು. ಕೊನೆಗೆ ಊರ ಹೊರಗಿನ ಗುಡ್ಡದ ಸಮೀಪ ಅದನ್ನು ಒಯ್ದರು. ಅಲ್ಲಿ ಅದನ್ನು ಹೂಳಿಟ್ಟರು. ಮೋತಿ ಗೊತ್ತಾಗದಂತೆ ಅವರನ್ನು ಹಿಂಬಾಲಿಸಿತು. ಹೂಳಿಟ್ಟ ಸ್ಥಳವನ್ನು ನೋಡಿತು. ಮರುದಿನ ಪೆಟ್ಟಿಗೆಯನ್ನು ಒಡೆದು ಕಳ್ಳರು ಅದನ್ನು ಹಂಚಿಕೊಳ್ಳುವವರಿದ್ದರು.


ಮದುವೆ ಮುಗಿಸಿ ಗೌಡರು ಮನೆಗೆ ಬಂದರು. ಮೋತಿ ಎಂದಿನಂತೆ ಒಡೆಯನನ್ನು ಸ್ವಾಗತಿಸಲಿಲ್ಲ. ಮೋತಿಯ ಜೋಲುಮೋರೆ ನೋಡಿ ಗೌಡರಿಗೆ ಗಾಬರಿಯಾಯಿತು, ಬಾಗಿಲು ತೆಗೆದು ಒಳಗೆ ಬಂದರು. ಹಿಂಬದಿಯ ಗೋಡೆ ಒಡೆದಿತ್ತು. ಪೆಟ್ಟಿಗೆ ಮಾಯವಾಗಿತ್ತು.


ಮೋತಿ ದೀನ ಸ್ವರದಿಂದ ಕೂಗಿತು. ಗೌಡರು ಹೊರಗೆ ಬಂದರು. ಮೋತಿ ಗೌಡರ ಧೋತರವನ್ನು ಹಿಡಿದೆಳೆಯಿತು. ಗೌಡರು ಮೋತಿಯ ಹಿಂದೆ ಹೋದರು. ಮೋತಿ ಪೆಟ್ಟಿಗೆ ಹುಗಿದ ಸ್ಥಳವನ್ನು ಕಾಲಿನಿಂದ ಕೆದರಿತು. ಗೌಡರಿಗೆ ಅನುಮಾನ ಬಂದಿತು. ತಮ್ಮ ಆಳುಗಳನ್ನು 

ಕರೆಯಿಸಿದರು. ಆ ಸ್ಥಳದಲ್ಲಿ ಅಗೆಯಿಸಿದರು. ಅಲ್ಲಿ ಅವರಿಗೆ ತಮ್ಮ ಪೆಟ್ಟಿಗೆಯು ಕಾಣಿಸಿತು. ಆಳುಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಗೌಡರ ಮನೆಗೆ ತಂದರು. ಗೌಡರು ಮೋತಿಯ ಜಾಣತನಕ್ಕೆ ಮೆಚ್ಚಿದರು. ಪ್ರೀತಿಯಿಂದ ಮೈಮೇಲೆ ಕೈಯಾಡಿಸಿದರು. ಮೋತಿಗೆ ಸಂತೋಷವಾಯಿತು.


ಇಂದಿನ ಪ್ರಸ್ತುತ ಸಮಾಜದಲ್ಲಿ ಬಹುತೇಕ ಕಡೆಯಲ್ಲಿ ಕಾಣಸಿಗುವ ಅಪ್ರಮಾಣಿಕತೆ, ಸೋಮಾರಿತನ, ಕಾರ್ಯಬದ್ದತೆಯ ಕೊರತೆ ಮುಂತಾದವುಗಳ ನೋಡಿ ಯಾಕೋ ಸೋಮನ ಗೌಡರ ಮೋತಿ ನೆ‌ನಪಾಯಿತು..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

28 December 2023

ವಿಶ್ವ ಮಾನವ ಸಂದೇಶ ಪಾಲಿಸೋಣ..


 


ವಿಶ್ವ ಮಾನವ ಸಂದೇಶ ಪಾಲಿಸೋಣ..


ಧರ್ಮ ಜಾತಿಗಳ ಮಧ್ಯೆ ಕಚ್ಚಾಟ, ಇಸಂಗಳ ಮೇಲಾಟ, ದೇಶ ದೇಶಗಳ ಮಧ್ಯ ತಾಕಲಾಟಗಳ ಪರಿಣಾಮವಾಗಿ ಜಗತ್ತಿನಲ್ಲಿ ಇಂದು ಯಾರೂ ನೆಮ್ಮದಿಯಾಗಿಲ್ಲದ ವಾತಾವರಣದಲ್ಲಿ ವಾಸಿಸುವ ಅನಿವಾರ್ಯತೆಯಿದೆ.ಇದನ್ನು ಹೋಗಲಾಡಿಸಲು ಮದ್ದು ನಮ್ಮ ರಾಷ್ಟ್ರಕವಿ, ರಸ ಋಷಿಯ ಚಿಂತನೆ "ವಿಶ್ವ ಮಾನವ ತತ್ವ ".

ಕುವೆಂಪು ರವರ ವಿಶ್ವ ಮಾನವ ತತ್ವ ಸಾರ್ವಕಾಲಿಕ  ಈ ತತ್ವ ಅಳವಡಿಸಿಕೊಂಡರೆ ಉದಾತ್ತ ಚಿಂತನೆ ನಮ್ಮನ್ನು ಆವರಿಸುತ್ತದೆ.ಈ ನಿಟ್ಟಿನಲ್ಲಿ ಕುವೆಂಪು ಅವರ ಚಿಂತನೆಗಳನ್ನು ಪ್ರಚಾರ ಮಾಡಿ ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಪ್ರತಿ ವರ್ಷ ಅವರು ಹುಟ್ಟಿದ ದಿನವನ್ನು ವಿಶ್ವ ಮಾನವ ದಿನವಾಗಿ ಆಚರಿಸಲಾಗುತ್ತದೆ. ಆದರೆ ಇದು ಕೇವಲ ಆಚರಣೆಗೆ ಮಾತ್ರ ಸೀಮಿತಾವಾಗಿರುವುದು ದುರದೃಷ್ಟಕರ.


ಕುವೆಂಪು ರವರು ತಮ್ಮ ವಿಶ್ವ ಮಾನವ ಸಂದೇಶ ಸಾರಿದ ಓ ನನ್ನ ಚೇತನ.... ಆಗು ನೀ ಅನಿಕೇತನ ...ಜಗದ ರಾಷ್ಟ್ರಗೀತೆಯಾಗಬೇಕಿದೆ..

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು "ಜಾತಿ,ಮತ"ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.


ವಿಶ್ವ ಮಾನವ ಗೀತೆಯು ನಮಗೆ " ಪಂಚ ಮಂತ್ರ"ಗಳನ್ನು  ಕಟ್ಟಿಕೊಡುತ್ತದೆ. 


ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು 'ಅಲ್ಪಮಾನವ'ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು 'ವಿಶ್ವಮಾನವ'ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.

ಹುಟ್ಟುವಾಗ 'ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿಗಳಿಂದ ಬಂಧನ  ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು 'ಬುದ್ಧ'ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ 'ಅನಿಕೇತನ'ರಾಗಬೇಕು.

ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ  ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪುಗುಂಪಾಗಿ ಜನತೆಯನ್ನು ಒಡೆದಿವೆ.ಯುದ್ಧಗಳನ್ನು ಹೊತ್ತಿಸಿವೆ. ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆಂಬಂತೆ ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ 'ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.'

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿ, ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; "ಮನುಜಮತ". ಆ ಪಥ ಈ ಪಥ ಅಲ್ಲ; "ವಿಶ್ವಪಥ". ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ "ಸರ್ವೋದಯ". ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; "ಸಮನ್ವಯ"ಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ.ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ "ಪೂರ್ಣದೃಷ್ಟಿ".

ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ.ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸಂಖ್ಯೆಯ ಮತಗಳಿರು ವುದು ಸಾಧ್ಯ.ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. ಈ 'ದರ್ಶನ'ವನ್ನೆ 'ವಿಶ್ವಮಾನವ ಗೀತೆ' ಸಾರುತ್ತದೆ.

 

ಕುವೆಂಪುರವರ ವಿಶ್ವ ಮಾನವ ಸಂದೇಶವನ್ನು ನಾವೆಲ್ಲರೂ ಪಾಲಿಸಿ ಅದರಂತೆ ಬಾಳೋಣ.ಜಗದ ಶಾಂತಿಗೆ ಪಣ ತೊಡೋಣ.ಸರ್ವರಿಗೂ ವಿಶ್ವ ಮಾನವ ದಿನದ ಶುಭಾಶಯಗಳು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


27 December 2023

ನುಡಿ ಹಬ್ಬಕ್ಕೆ ಸಿಹಿಜೀವಿಯ ಹನಿಗಳು*


 *ನುಡಿ ಹಬ್ಬಕ್ಕೆ ಸಿಹಿಜೀವಿಯ ಹನಿಗಳು*


*ಎಲ್ಲರೂ ಪಾಲ್ಗೊಳ್ಳೋಣ*


ತುಮಕೂರಿನಲ್ಲಿ ನಡೆಯಲಿದೆ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ|

ಸಕುಟುಂಬ ಸಪರಿವಾರ ಸಮೇತ

ಎಲ್ಲರೂ ಪಾಲ್ಗೊಳ್ಳೋಣ|


*ಕನ್ನಡಮ್ಮನ ತೇರು*


ಕಲ್ಪತರು ನಾಡಲ್ಲಿ

ಕನ್ನಡ ಹಬ್ಬಕ್ಕೆ ಸಿದ್ದತೆ ಜೋರು|

ಬನ್ನಿ ಎಲ್ಲರೂ ಸೇರಿ ಎಳೆಯೋಣ

ಕನ್ನಡಮ್ಮನ ತೇರು||


*ಇಪ್ಪತ್ತೊಂಭತ್ತು ಮೂವತ್ತು*


ಮರೀ ಬೇಡಿ  ದಿನಾಂಕಗಳ 

ಡಿಸೆಂಬರ್ ಇಪ್ಪತ್ತೊಂಭತ್ತು 

ಮೂವತ್ತು|

ಕನ್ನಡ ಜಾತ್ರೆಗೆ  ಬಂದು ಬಿಡಿ ಗಾಜಿನ ಮನೆಗೆ ಆವತ್ತು||

 

*ಸಿಹಿಜೀವಿ ವೆಂಕಟೇಶ್ವರ*

ತುಮಕೂರು



 

21 December 2023

#ರಸ್ತೆ ಸುರಕ್ಷತೆ #Roadsafty

 


ನಿಯಮ...


ರಸ್ತೆಯಲ್ಲಿ ಸಂಚರಿಸುವಾಗ

ಪಾಲನೆ ಮಾಡು ನಿಯಮ|

ಇಲ್ಲದಿದ್ದರೆ ಸ್ವಾಗತ ಮಾಡಲು

ನಿಂತಿರುವನು ಯಮ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಅಕ್ಷರ ಸಂತ ಡಾ.ಕವಿತಾ ಕೃಷ್ಣ















 

*ಅಕ್ಷರ ಸಂತ ಡಾ.ಕವಿತಾ ಕೃಷ್ಣ*

ವಿದ್ಯಾ ವಾಚಸ್ಪತಿ ,ಸರ್ವೊತ್ತಮ ಆಚಾರ್ಯ ಡಾ. ಕವಿತಾ ಕೃಷ್ಣ ರವರು ನಮ್ಮೊಂದಿಗೆ ಇರುವ ಸರಳತೆಯ ಸಾಕಾರ ಮೂರ್ತಿ,  ಜ್ಞಾನದ ಆಗರ, ಪ್ರಖರ ವಾಗ್ಮಿ,  ಅಕ್ಷರ ಸಂತ.

ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರೆದ ಮಹಾನ್ ಜ್ಞಾನ ಶಿಖರ ಇವರು.ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಪಡೆದ ಇವರು ಆದರ್ಶ ಶಿಕ್ಷಕರು, ಕಾದಂಬರಿಕಾರರು, ಮಕ್ಕಳ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿದವರು,  ಕರ್ನಾಟಕ ಶಾಲಾ ಶಿಕ್ಷಣ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿದ್ದವರು, ಉತ್ತಮ ಸಂಘಟಕರು ,ಪ್ರಕಾಶಕರು, ಪ್ರಖರ ವಾಗ್ಮಿ, ಜನಾನುರಾಗಿ, ಯುವ ಬರಹಗಾರರ ಬೆನ್ತಟ್ಟುವ ಗುರುಗಳು. ಇನ್ನೂ ಇವರ ಬಗ್ಗೆ ಹೇಳುತ್ತಾ ಹೋದರೆ ಗ್ರಂಥಗಳನ್ನೇ ಬರೆಯಬೇಕಾದೀತು.

20ಕವನ ಸಂಕಲನಗಳು,20 ನಾಟಕಗಳು,10 ಅಭಿನಂದನಾ ಗ್ರಂಥಗಳು, 42 ಜೀವನ ಚರಿತ್ರೆಗಳು,25 ಮಕ್ಕಳ ಸಾಹಿತ್ಯ ಕೃತಿಗಳು,2 ಕಾದಂಬರಿಗಳು,14 ಮಹಾನ್ ಕೃತಿಗಳು, 26 ಸಂಪಾದನಾ ಕೃತಿಗಳು,13 ಶೈಕ್ಷಣಿಕ ಕೃತಿಗಳು,6 ಸಂಶೋಧನಾ ಕೃತಿಗಳು ಸೇರಿ ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ 30 ಕ್ಕು ಹೆಚ್ಚು ಕೃತಿಗಳು ಸದ್ಯದಲ್ಲೇ ಪ್ರಕಟಗೊಳ್ಳಲಿವೆ. ಇದನ್ನು ನೋಡಿದಾಗ ನಮಗೆ ಡಾ ಕವಿತಾ ಕೃಷ್ಣ ರವರು ಸಾಹಿತ್ಯದ ಮೇರು ಪರ್ವತ ಎಂದರೆ ಅತಿಶಯವೇನಲ್ಲ.

ಇವರ ಮಹಾನ್ ಕೃತಿಗಳಾದ ವಾಲ್ಮೀಕಿ ವಚನ ರಾಮಾಯಣ,  ಹಾಗೂ ವ್ಯಾಸ ಭಾರತ ಕೃತಿಗಳು ಹಲವಾರು ಮರುಮುದ್ರಣ ಕಂಡಿವೆ. ನಾಡಿನೆಲ್ಲೆಡೆ ಸಹೃದಯರು ಈ ಪುಸ್ತಕಗಳನ್ನು ಓದಿ ಪುನೀತರಾಗಿದ್ದಾರೆ.
ತಮ್ಮದೇ ಕವಿತಾ ಪ್ರಕಾಶನ ಆರಂಭಿಸಿ ಏಕಕಾಲಕ್ಕೆ ಅವರು ಬರೆದ 30 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ್ದು ಒಂದು ದಾಖಲೆಯಾಗಿ ಉಳಿದಿದೆ.ತಾನೂ ಬೆಳೆದು ಇತರರ ಬೆಳೆಸುವ ಉದಾತ್ತ ಗುಣದ ಇವರು ನಾಡಿನ ಉದಯೋನ್ಮುಖ ಬರಹಗಾರರಿಗೆ ತಮ್ಮ ಪ್ರಕಾಶನದ ವತಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಪುಸ್ತಕ ಪ್ರಕಾಶನ ಮಾಡಿಸಿದ ಪ್ರೋತ್ಸಾಹ ನೀಡುವ ಕವಿಸ್ನೇಹಿ ನಮ್ಮ ಕವಿತಾ ಕೃಷ್ಣ ರವರು.
ಸುಮಾರು ನಾಲ್ಕು ನೂರು ಕೃತಿಗಳಿಗೆ ಅವರು ಮುನ್ನುಡಿ ಬೆನ್ನುಡಿ ಬರೆದಿರುವುದು  ಸಾಹಿತಿಗಳಿಗೆ ಅವರು  ಬೆಂಬಲ ನೀಡುತ್ತಿರುವುದಕ್ಕೆ  ಮತ್ತೊಂದು  ಉದಾಹರಣೆ.

ಮನೆಯನ್ನೇ ಸಾಹಿತ್ಯ ಮಂದಿರವನ್ನಾಗಿ ಪರಿವರ್ತಿಸಿರುವ ಅವರು ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ನುಡಿಸೇವೆಗೈದ ಇವರು ವಿದೇಶಗಳಲ್ಲೂ ಕನ್ನಡ ಪಸರಿಸುವ ಕಾಯಕ ಮಾಡಿದ್ದಾರೆ.ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಕನ್ನಡದ ಕಟ್ಟಾಳು ನಮ್ಮ ಡಾ. ಕವಿತಾ ಕೃಷ್ಣ ರವರು.

ತಮ್ಮ ಎಪ್ಪತೈದನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾಡಿನ ಇಬ್ಬರು ಮಹಾನ್ ಸ್ವಾಮೀಜಿಗಳು ಅವರನ್ನು ಆಶೀರ್ವದಿಸಿದ ಕ್ಷಣಗಳನ್ನು ಅವರು ಸಂತಸದಿಂದ ನೆನೆಯುತ್ತಾರೆ. ನಡೆದಾಡುವ ದೈವ ಶ್ರೀ ಶ್ರೀ  ಡಾ. ಶಿವಕುಮಾರ ಸ್ವಾಮೀಜಿಯವರು,ಜ್ಞಾನ ದಾಸೋಹಿ ಚುಂಚನಗಿರಿ ಕ್ಷೇತ್ರದ ಶ್ರೀ ಡಾ. ಬಾಲ ಗಂಗಾಧರನಾಥ ಸ್ವಾಮೀಜಿಯವರು ಅಂದು ಇವರನ್ನು ಆಶೀರ್ವದಿಸಿದ್ದರು.
ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು  ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ನೀಡಿ ಗೌರವಿಸಿದೆ. ಅವರ ಸಮ್ಮೇಳನದ ಭಾಷಣವನ್ನು ಈಗಲೂ ಹಲವರು ಉಲ್ಲೇಖ ಮಾಡುವುದುಂಟು.

ಇವರ ಸಾಹಿತ್ಯ ಮತ್ತು  ಸಂಘಟನಾ ಶಕ್ತಿ ಗುರುತಿಸಿ ದೇಶ ವಿದೇಶಗಳಲ್ಲಿ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ.

ಅವುಗಳಲ್ಲಿ ಪ್ರಮುಖವಾದ
ನವದೆಹಲಿಯ ಭಾರತೀಯ ವಿದ್ಯಾಭವನ ನೀಡುವ ಸರ್ವೋತ್ತಮ ಆಚಾರ್ಯ ಪುರಸ್ಕಾರವು ಬಹಳ ಅತ್ಯನ್ನತವಾದುದು. ಡಾ.ರಾಧಾಕೃಷ್ಣನ್ ರಂತವರಿಗೆ ಇಂತಹ ಪುರಸ್ಕಾರ ನೀಡಲಾಗುತ್ತು ಎಂಬುದನ್ನು ಸ್ಮರಿಸಿಕೊಳ್ಳಬಹುದು. ದಕ್ಷಿಣ ಭಾರತದ ಕೆಲವೇ ಕೆಲವರಿಗೆ ಇಂತಹ ಪುರಸ್ಕಾರ ಲಭಿಸಿರುವುದು. 
ಇದರ ಜೊತೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಇವರ ಸಾಹಿತ್ಯ ಸೇವೆಯನ್ನು ಗುರ್ತಿಸಿ ಸನ್ಮಾನಿಸಿವೆ. ಇಂತಹ ಮಹಾನ್ ಸಾಹಿತಿ ನಮ್ಮ ಕಾಲಘಟ್ಟದಲ್ಲಿ ಇದ್ದು ನಮಗೆ ಸಲಹೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬುದೇ ನಮಗೆ ಸಂತಸದ ವಿಷಯ.  ಇಳಿ ವಯಸ್ಸಿನಲ್ಲೂ ಅವರದು ಯುವಕನ ಚೈತನ್ಯ. ಇಂತಹ ಮಹಾನ್ ಚೇತನ ನಮ್ಮೊಂದಿಗೆ ನೂರ್ಕಾಲ ಬಾಳಲಿ ಎಂದು ಎಲ್ಲಾ ಸಾಹಿತ್ಯಾಭಿಮಾನಿಗಳ ಪರವಾಗಿ ದೇವರಲ್ಲಿ ಬೇಡುವೆ....

*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
9900925529

ನೀರೆಯರಿಗೆ ಸೀರೆ ದಿನದ ಶುಭಾಶಯಗಳು.


 


ನೀರೆಯರಿಗೆ ಸೀರೆ ದಿನದ ಶುಭಾಶಯಗಳು.


 ನಮ್ಮ ಸಹೋದ್ಯೋಗಿಗಳೊಂದಿಗೆ  ಹೀಗೆ ಮಾತುಕತೆ ನಡೆಯುತ್ತಿತ್ತು. "ಅಯ್ಯೋ ನಮ್ ಮನೆ ಬೀರು ತುಂಬಾ ನಮ್ ಮನೇರ ಸೀರೇನೇ ಸರ್, ಆ ಬೀರ್ ನಲ್ಲಿ ಒಂದ್ ಮೂಲೇನಲ್ಲಷ್ಟೇ ನನ್ ಬಟ್ಟೆಗೆ ಜಾಗ" ಎಂದು ಅವರಿನ್ನೂ ಮಾತು ಮುಗಿಸಿರಲಿಲ್ಲ ಮತ್ತೊಬ್ಬ ಸಹೋದ್ಯೋಗಿ "ಅಯ್ಯೋ ನಮ್ ಮನೆ ಕಥೆನೂ ಅದೇ ಸಾ" ಎಂದರು.

ಇತ್ತೀಚಿನ ದಿನಗಳಲ್ಲಿ ನೈಟಿಯು ಸೀರೆಯ ಸ್ಥಾನ ಆಕ್ರಮಿಸಿಕೊಂಡಿದೆಯೇನೋ ಎಂಬ ಅನುಮಾನ ಮೂಡುತ್ತದೆ.


ನೀರೆಯರು

ಸೀರೆಯಿಂದ ದೂರ

ಪಾಶ್ಚಾತ್ಯ ಮೋಹ.


ಅವ್ಯಾವುದೋ ಪಾಶ್ಚಾತ್ಯ ಮಾದರಿಯ ಡ್ರೆಸ್ ಬಂದರೂ ನಮ್ಮ ಮಹಿಳೆಯರು ಸೀರೆ ಕೊಳ್ಳುವುದು ಮತ್ತು  ಉಡುವುದು ಕಮ್ಮಿಯಾಗಿಲ್ಲ.


ಗಂಡ ಹೆಂಡಿರ ನಡುವೆ ಜಗಳ ಆಗಲು ಸಾಮನ್ಯ ಕಾರಣಗಳಲ್ಲಿ ಸೀರೆ ಕೊಳ್ಳುವ ಕಾರಣಕ್ಕೆ ಹೆಚ್ಚು ಜಗಳವಾಗುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

ಇಂತಹ ಜಗಳ ನೋಡಿದ ಮೇಲೆ ನಾನು ಬರದ ಹನಿಗವನ...


ಪ್ರತಿ ಬಾರಿಯೂ

ನಾನು ಸೀರೆ ಕೊಡಿಸಿ

ಎಂದಾದಲೆಲ್ಲಾ ನಿರಾಕರಿಸುವಿರಿ

ನಿಮಗೆ ಅರ್ಥವಾಗುವುದಿಲ್ಲ

ನನ್ನ ಮನಸ್ಥಿತಿ|

ಅವನು ಗೊಣಗಿದ

ನಿನಗೂ ಅರ್ಥವಾಗುವುದಿಲ್ಲ

ನನ್ನ ಆರ್ಥಿಕ ಪರಿಸ್ಥಿತಿ||


ಸೀರೆ ಮಹತ್ವ ತಿಳಿದ ನಮ್ಮವರು ಸೀರೆಗೂ ಒಂದು ದಿನ ಮೀಸಲಿಟ್ಟಿದ್ದಾರೆ ಪ್ರತಿವರ್ಷ ಡಿಸೆಂಬರ್ 21 ನ್ನೂ ಸೀರೆ ದಿನವಾಗಿ ಆಚರಿಸಲಾಗುತ್ತದೆ.

ಸೀರೆಯ ವಿಧಗಳು ನೂರಾರು ಆಯಾ ಪ್ರಾಂತ್ಯ ಸಂಸ್ಕಾರ, ಸಂಪ್ರದಾಯದ ಆಧಾರದ ಮೇಲೆ ಹಲವಾರು ವಿಧಗಳಿವೆ.

ನಮ್ಮ ನಾಡಲ್ಲಿ ಸೀರೆ ಎಂದರೆ ತಟ್ಟನೆ ಹೊಳೆವುದು ಮೈಸೂರು ಸಿಲ್ಕ್ ಜೊತೆಯಲ್ಲಿ ‌ಇಳಕಲ್ ಮೊಳಕಾಲ್ಮೂರು ಸೀರೆಗಳು ಪ್ರಖ್ಯಾತಿ ಪಡೆದಿವೆ. 


ಆಂದ್ರ ಮತ್ತು ತೆಲಾಂಗಣದಲ್ಲಿ 

ಪೋಚಂಪಲ್ಲಿ ಸೀರೆ, ವೆಂಕಟಕಿರಿ ಸೀರೆ, ಗಡ್ವಾಲ್ ಸೀರೆ, ಗುಂಟೂರ ಸೀರೆ, ನಾರಾಯಣ ಪೇಠ್ ಸೀರೆ,ಮಂಗಲಮುರಿ ಸೀರೆ ,ಧರ್ಮಾವರಂ ಸೀರೆ ಎಂಬ ವಿಧಗಳಿವೆ.  ಬಿಹಾರ, ಚತ್ತೀಸ್ ಘಡ ದಲ್ಲಿ ಈರಿರೇಷ್ಮೆ ಸೀರೆ (ಕಾಡು ರೇಷ್ಮೆಯ ಸೀರೆ ) ಪ್ರಸಿದ್ಧ.

ಗುಜರಾತ್, ಹರ್ಯಾಣ, ಗಳಲ್ಲಿ

ತಾರಿನ್ ಜೋಯಿ ಬ್ರೋಕೇಡ್ಪ ,(ಪಟೋಲಾ ) ಟೋಲಾ ಸೀರೆ , 

ಕೇರಳದಲ್ಲಿ ಬಾಂಧಣಿ ಸೀರೆ , ಭಂದೇಜ ಸೀರೆ,ಬಕರಾಂಪುರಂ ಸೀರೆ ಹೆಚ್ಚು ಬಳಕೆಯಲ್ಲಿವೆ.


 ಈಶಾನ್ಯ ರಾಜ್ಯಗಳಲ್ಲಿ

ಚಂದ್ರಗಿರಿ ಸೀರೆ , ಮಹೆಶ್ವರಿ ಸೀರೆ  ಹೆಚ್ಚು ಜನಪ್ರಿಯ.

ತಮಿಳುನಾಡಿನಲ್ಲಿ

ಕಾಂಜೀವರಂ ಸೀರೆ, ಧರ್ಮಾವರಂ ಸೀರೆ, ಅರನಿ ಸೀರೆ, ಮಧುರೈ ಸೀರೆ, ಚಟ್ಟಿನಾಡು ಸೀರೆ, ಛಿನ್ನಲಪತ್ತಿ ಸೀರೆ, ಕೊಯಂಬತ್ತೋರ ಸೀರೆ ಬಹುಬೇಡಿಕೆ ಹೊಂದಿವೆ.

ಉತ್ತರ ಪ್ರದೇಶದಲ್ಲಿ  

ಬನಾರಸಿ ಸೀರೆ (ಬಫ್ಟಾ ಮತ್ತು ಅಮೃ ಶೈಲಿ), ಶಾಲು ಸೀರೆ, ಕಿಂಕಾಬ್ ಸೀರೆ 

ಪಶ್ಚಿಮ ಬಂಗಾಳದಲ್ಲಿ

ಜಾಮ್ದಾನಿ’ ಎಂಬ ಹೆಸರಿನ ಕುಸುರಿ ಕಲೆ ಹಾಗೂ ಜರಿಯುಳ್ಳ ಮಸ್ಲಿನ್ ಸೀರೆ, ಬಿರ್ ಭೌಮ್ ಸೀರೆ, ಕಲ್ಕತ್ತಾ ಕಾಟನ್ ಸೀರೆ ಧಾನಿಖಾಲಿ ಹತ್ತಿ, ಬುಲುಛರಿ, ಫುಲಿಯ ಮತ್ತು ಸಮುದ್ರಗಡದ ವಿಶಿಷ್ಟ ಸೀರೆಗಳು ಢಾಕಾ ಜಾಮ್ದಾನಿ, ಢಾಕಾ ಕಾಟನ್, ಢಾಕಾ ಸಿಲ್ಕ್, ಐದು ಗ್ರಾಂ ಸೀರೆ, ಕೈಯಿಂದ ನೇಯ್ದ ಫೂಲಿಯಾ, ತಾನ್‌ಚೂಡಿ ಸಿಲ್ಕ್, ಬಾಪಾ ಬುಟ್ಟಿ, ಓಂಕೈ ಕಾಟನ್, ಬನಾರಸಿ, ಟಾಂಗೈ ಬಾಲುಚೂಡಿ, ಮಲ್‌ಮಲೈ ಹೀಗೆ ಹಲವು ಬಗೆಯ ಸೀರೆಗಳು 

ಅಬ್ಬಾ! ನಮ್ಮ ಭಾರತದಲ್ಲಿ ಇಷ್ಟೆಲ ಸೀರೆಗಳ ವಿಧಗಳಿವೆ. ಕರ್ನಾಟಕದ ಸೀರೆಗಳ ಕೊಂಡೇ ನಮ್ಮ ಮನೆಗಳ ಬೀರುಗಳು ತುಂಬಿವೆ ಇನ್ನೂ ಈ ಸೀರೆಗಳ ಮಾಹಿತಿ ನಮ್ಮ ನೀರೆಯರಿಗೆ ಸಿಕ್ಕರೆ ನಮ್ಮ ಪುರುಷರನ್ನು ದೇವರೇ ಕಾಪಾಡಬೇಕು.

ಇರಲಿ ಎಲ್ಲಾ ನೀರೆಯರಿಗೆ ಸೀರೆ ದಿನದ ಶುಭಾಶಯಗಳು...


ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 December 2023

ನಿಸರ್ಗಕ್ಕೆ ಋಣಿಯಾಗಿರೋಣ.



 


ನಿಸರ್ಗಕ್ಕೆ ಋಣಿಯಾಗಿರೋಣ.


ನಿಸರ್ಗಕ್ಕೆ ನಾವು ಋಣಿಯಾಗಿರಬೇಕು ಎಂದು ಅಂತಃಪ್ರಜ್ಞೆ ಜಾಗೃತಿ ಕೇಂದ್ರದ ಸಂಸ್ಥಾಪಕರಾದ ಶ್ರೀನಿವಾಸ ಅರ್ಕ ಗುರೂಜಿಯವರು ಕರೆ ನೀಡಿದರು.


ಅನನ್ಯ ಕಾಲೇಜು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಗುರೂಜಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 


ನಮ್ಮ ಸುತ್ತಲಿನ ಪರಿಸರವನ್ನು ಗಮನಿಸಿದರೆ ಚಳಿ, ಮಳೆ, ಬಿಸಿಲು, ಬಿರುಗಾಳಿಯಂತಹ ವಿಭಿನ್ನ ಋತುಮಾನಗಳನ್ನು ಕಾಣುತ್ತೇವೆ.  ನಮಗೆ ನಿಸರ್ಗ  ಎಲ್ಲವನ್ನೂ ನೀಡಿದೆ. ಅದಕ್ಕೆ ನಾವು ಋಣಿಯಾಗಿರಬೇಕು.  ಯಾವಾಗಲೂ ಸಕಾರಾತ್ಮಕವಾಗಿರಬೇಕು. ಯಾವುದೇ ಸನ್ನಿವೇಶಗಳಲ್ಲಿ ರಚನಾತ್ಮಕ ದೃಷ್ಟಿಯಿಂದ ನೋಡುವ ಮನೋಭಾವವನ್ನು ನಾವು ಬೆಳೆಸಿಕೊಂಡಾಗ  ನಮ್ಮೊಳಗೆ ನಿರಾಳವಾದ ಹಾಗೂ  ಹಗುರ ಎಂದೆನಿಸುವ ಭಾವ ಒಡಮೂಡುತ್ತದೆ. ಇಂತಹ ಭಾವ ನಿಮ್ಮ ಉನ್ನತ ವ್ಯಕ್ತಿತ್ವ ರೂಪಿಸುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅದ್ಯಕ್ಷರಾದ ಗೀತಾ ನಾಗೇಶ್ ರವರು ಶ್ರೀನಿವಾಸ ಅರ್ಕ ಗುರೂಜಿಯವರು ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿತ್ವ ವಿಕಸನ ತರಬೇತುದಾರ ರಾಗಿದ್ದು ಅವರು ನೀಡುವ ಜ್ಞಾನದ ಸದುಪಯೋಗ ಪಡೆದು ನಿಮ್ಮ ವ್ಯಕ್ತಿತ್ವ ಉತ್ತಮಪಡಿಕೊಳ್ಳಿ, ಹಾಗೂ ಕನ್ನಡ ಭಾಷೆಯ ಮಹತ್ವ ಅರಿತು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳು ಕೈಜೋಡಿಸಿ ಎಂದು ನುಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡಿದ ಗುರೂಜಿಯವರು ವಿದ್ಯಾರ್ಥಿಗಳ ಸಂದೇಹಗಳಿಗೆ ಪರಿಹಾರ ಸೂಚಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಿಕ್ಕ ಬೆಳ್ಳಾವಿ ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಕಾರ್ಯದರ್ಶಿಗಳಾದ ಚಾಂದು, ಸಿಹಿಜೀವಿ ವೆಂಕಟೇಶ್ವರ,

ಅನನ್ಯ ಕಾಲೇಜಿನ ಪ್ರಾಂಶುಪಾಲರಾದ   ಡಾಕ್ಟರ್ ವಿಶ್ವಾಸ್  ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸುಗುಣದೇವಿ, ಲತಾ ವೆಂಕಟೇಶ್ ಅನನ್ಯ ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು. 

ಅಹಂಕಾರ...

 ಅಹಂಕಾರ.

ಸುಂದರ ಶಿಲೆಯಾಗಿ ಕೆತ್ತಬಹುದು ಕಲ್ಲನ್ನು ಇಲ್ಲದಿದ್ದರೂ ಯಾವುದೇ ಆಕಾರ|

ಬದಲಿಸಲಾಗುವುದೇ ಇಲ್ಲ

ಮನುಷ್ಯರಲ್ಲಿ ತುಂಬಿಕೊಂಡರೆ ಅಹಂಕಾರ||

18 December 2023

ಚಿತ್ತಾರ...


 ಓ ನಲ್ಲೆ..  ಮನೆಯ ಬಣ್ಣ ಮಾಸಿರಬಹುದು ಕೊಂಚ|

ಚಿತ್ತಾರ ಬಿಡಿಸುವೆನು ತನು,ಮನದಲಿ ಹಿಡಿದು ಕುಂಚ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

15 December 2023

ಹೊಣೆ ಯಾರು...?



 


ಯಾರು ಹೊಣೆ...

ಅವನ  ತಂದೆ ಸರ್ಕಾರಿ ನೌಕರಿಯಲ್ಲಿದ್ದರು.ಅವರ ಅಕಾಲಿಕ ಮರಣದಿಂದ ಆ ಹುಡುಗನ ಅಕ್ಕನಿಗೆ ಅನುಕಂಪದ ಸರ್ಕಾರಿ ನೌಕರಿ ದೊರೆಯಿತು. ನೌಕರಿಯ ಬಲದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಯಿತು. ಹೋಗಿ ಬರುವ ಪಯಣ
ಸುಮಾರು 100 ಕಿಲೋಮೀಟರ್ ಆದರೂ ಕೆಲಸ ಸಿಕ್ಕ ಖುಷಿಯಲ್ಲಿ ಅದೇನು ಅಷ್ಟು ತೊಂದರೆ ಎನಿಸಲಿಲ್ಲ.  ತನ್ನ ಹಳ್ಳಿಯಿಂದ ನಗರಕ್ಕೆ, ಪುನಃ ನಗರದಿಂದ ಮತ್ತೊಂದು ನಗರಕ್ಕೆ ಕೆಲಸ ಮಾಡಲು ಹೋಗಿ ಬರಬೇಕಾಗಿತ್ತು. ಆರಂಭದಲ್ಲಿ ಇದು ಕಷ್ಟವಾದರೂ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಅಷ್ಟೇ ಸಾಕು ಎಂದು ಬರು ಬರುತ್ತಾ ಕಷ್ಟದ ಜೀವನಕ್ಕೆ ಹೊಂದಿಕೊಂಡಿದ್ದಳು. ದೂರದ ಪ್ರಯಾಣವಾದ್ದರಿಂದ ಬಸ್ ಗಳು ಸಕಾಲದಲ್ಲಿ ಸಿಗದೆ ಕೆಲವೊಮ್ಮೆ ನಗರಕ್ಕೆ ತಲುಪುವುದೇ ರಾತ್ರಿ ಒಂಭತ್ತರ ಮೇಲಾಗುತ್ತಿತ್ತು.ಅಲ್ಲಿಂದ ಹಳ್ಳಿಯ ಮನೆ ಸೇರಲು ಮತ್ತೆ ಕಾಲು ಗಂಟೆ ಬೇಕಾಗುತ್ತಿತ್ತು.
ಕೆಲವು ದಿನ ಡ್ಯೂಟಿಯಿಂದ ರಾತ್ರಿ  ಲೇಟಾಗಿ ಬಂದರೆ ನಗರದಿಂದ ಅಕ್ಕನ ಕರೆತರಲು ಹತ್ತನೇ ತರಗತಿಯಲ್ಲಿ ಓದುವ ತಮ್ಮ ಪಕ್ಕದ ಮನೆಯ ಗೆಳೆಯ ನನ್ನು ಕರೆದುಕೊಂಡು ತನಗೆ ಪರಿಚಿತವಾಗಿರುವ ಅಂಕಲ್ ನಿಂದ  ಬೈಕ್ ಕೇಳಿ ಪಡೆದು ನಗರದಿಂದ ಹಳ್ಳಿಗೆ ಕರೆ ತರುತ್ತಿದ್ದ. ರಾತ್ರಿ ಹತ್ತರ ನಂತರ ಬರುವ ಮಗಳ ಸ್ಥಿತಿಯನ್ನು ನೋಡಿ " ಅಲ್ಲೇ ಟೌನ್ ನಲ್ಲಿ ಒಂದು ರೂಮೋ ಪಿ ಜಿ ನೋ ಮಾಡ್ಕಂಡಿರಮ್ಮ ರಾತ್ರಿ ಹೊತ್ತು ಇಂಗ್ ಬಂದ್ರೆ ಎಂಗಮ್ಮ" ಎಂದು ತಾಯಿ ಸಲಹೆ ನೀಡಿದ್ದರು. ಮಗಳು ಇದನ್ನು ನಯವಾಗಿಯೇ ನಿರಾಕರಿಸಿದ್ದಳು.
ತಂದೆಯ ಅನುಪಸ್ಥಿತಿಯಲ್ಲಿ ತಾಯಿ,  ಮಗಳು, ಮಗ ಸಂತೋಷವಾಗಿ ಜೀವನ ಸಾಗಿಸುತ್ತಿದ್ದರು. ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ..
ಅಂದು ರಾತ್ರಿ ಒಂಭತ್ತು ಗಂಟೆಗೆ ಅಕ್ಕ ಪೋನ್ ಮಾಡಿದರು.ತಮ್ಮನು  ಪಕ್ಕದ ಮನೆಯ ಅಂಕಲ್ ನಿಂದ  ಬೈಕ್ ಪಡೆದು ತನ್ನ ಗೆಳೆಯನ ಜೊತೆಯಲ್ಲಿ ನಗರದ ಕಡೆ ಸ್ವಲ್ಪ ಜೋರಾಗಿಯೇ ಎಕ್ಸಲೇಟರ್  ಒತ್ತಿದ. 
ಅತ್ತ ಅಕ್ಕ ಕಾಯುತ್ತಿದ್ದರು.ಈ ಮಧ್ಯ ರಾತ್ರಿ ಹತ್ತರ ಸಮಯದಲ್ಲಿ ಒಂಟಿ ಯುವತಿ ನಿಂತಿರುವುದನ್ನು ಕಂಡ ಪುಂಡರ ಗುಂಪು ಚುಡಾಯಿಸಲಾರಂಭಿಸಿದೆ.ಯುವತಿ ಅಲ್ಲಿಂದ ನಿಧಾನವಾಗಿ ಮುಂದೆ ಚಲಿಸಿದ್ದಾಳೆ. ಗಾಬರಿಯಿಂದ ತಮ್ಮನಿಗೆ ಮತ್ತೆ ಕರೆ ಮಾಡಿದಳು.ಕರೆ ಸ್ವೀಕರಿಸಿದ ತಮ್ಮ ಗಾಡಿಯ ಎಕ್ಸಲೇಟರ್ ಮತ್ತೂ ಒತ್ತಿದ.  ಸ್ಪೀಡೋಮೀಟರ್ ಮುಳ್ಳು ಏರುತ್ತಾ ಬೈಕ್ ಮುಂದೆ ಚಲಿಸಿತು.ಆಗಲೇ ಅವಘಡ ಸಂಭವಿಸಿದ್ದು! ಕ್ಷಣಾರ್ಧದಲ್ಲಿ   ಅತಿ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕರು ಆರು ಅಡಿ ಜಿಗಿದು ದೂರದಲ್ಲಿ ಬಿದ್ದರು. ರಸ್ತೆ ಅಕ್ಕ ಪಕ್ಕದ ಜನರು ಸೇರಿ ಮಕ್ಕಳ ಎತ್ತಿದ್ದರು.ಅಷ್ಟರಲ್ಲಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿತ್ತು. ಕಾರಿನ ಚಾಲಕನೂ ಗಾಯಗೊಂಡು ಆಸ್ಪತ್ರೆ ಸೇರಿದ.ಸ್ಥಳಕ್ಕೆ ಬಂದ ಪೋಲಿಸರು ಮಹಜರು ಮಾಡಿ ಬೈಕ್ ಮಾಲೀಕನನ್ನು ಪತ್ತೆ ಹಚ್ಚಿ ಅಪ್ರಾಪ್ತ ಬಾಲಕರಿಗೆ ಬೈಕ್ ಕೊಟ್ಟ ಅರೋಪದ ಮೇಲೆ ಬಂದಿಸಲಾಯಿತು. 
ಸ್ಥಳದಲ್ಲಿದ್ದ ಜನ ಆ ಬಾಲಕರ ಸ್ಥಿತಿಯನ್ನು ಕಂಡು ಮರುಗುತ್ತಿದ್ದರು.ಕೆಲವರು ಅದು ಕಾರ್ ನ ಚಾಲಕನ  ಅಜಾಗರೂಕತೆಯಿಂದ ಆದ ಅವಘಡ ಎಂದರೆ ಕೆಲವರು ಅಪ್ರಾಪ್ತ ಮಕ್ಕಳು ಬೈಕ್ ಯಾಕೆ ಓಡಿಸಬೇಕಿತ್ತು? ಎಂದು ಮಾತನಾಡುವ ವೇಳೆಯಲ್ಲಿ ಸ್ಥಳಕ್ಕೆ ಬಂದ ಸಹೋದರಿ ಈ ದುರ್ಘಟನೆಗೆ ನಾನೇ ಕಾರಣವೆಂದು ಗೋಳಾಡತೊಡಗಿದಳು.ಅಂಬುಲೆನ್ಸ್ ಶಬ್ದ ದೂರದಲ್ಲಿ ಕೇಳುತ್ತಿತ್ತು... ಪಾಪ  ಈ ಹುಡುಗ್ರ ಸಾವಿಗೆ ಯಾರ್ ಹೊಣೆ ಎಂದು ಪ್ರಶ್ನಿಸುತ್ತಿರುವಾಗ ಮೂಲೆಯಲ್ಲಿ ಬೆಡ್ ಶೀಟ್ ಹೊದ್ದು ನಿಂತ ವಯೋವೃದ್ದರು ಹಣೆ ಬರಹಕ್ಕೆ ಯಾರು ಹೊಣೆನಪ್ಪ? ಎಂದಾಗ ನೀರವ ಮೌನ ಆವರಿಸಿತು..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

ಮದ್ಯ ಪ್ರಿಯರ ಮನವಿ

 


ಮದ್ಯ ಪ್ರಿಯರ ಮನವಿ


ನಮಗೂ ಮರ್ಯಾದೆ ಕೊಡಿ

ಕುಡಿಯುಬಹದು ನಾವು

ಬ್ರಾಂದಿ ,ವಿಸ್ಕಿ ,ಬೀರು|

ಕುಡುಕರೆಂದು ಅವಮಾನಿಸಬೇಡಿ

ಗೌರವದಿ ಹೇಳಿ ಮದ್ಯಪ್ರಿಯರು||


ನಮ್ಮ ಘೋಷವಾಕ್ಯ ನಿತ್ಯ ದುಡಿ,

ಸ್ವಲ್ಪ ಕುಡಿ, ಸತ್ಯ ನುಡಿ|

ಬೈಯಬೇಡಿ ನಮ್ಮನ್ನು ಕುಡಿದಾಗ

ಸ್ವಲ್ಪ ಅಲ್ಲಾಡಬಹುದು ಬಾಡಿ ||


ನಮಗೋಸ್ಕಕರ ಸ್ಥಾಪಿಸಿ ಬಿಡಿ

ಮದ್ಯಪ್ರಿಯರ ಕಲ್ಯಾಣ ನಿಧಿ|

ಇರಲಿ ಒಂದು ಅಂಬುಲೆನ್ಸ್

ನಮಗಾಗಿ ಬಾರ್ ಬದಿ ||


ಸರ್ಕಾರದ ಆದಾಯದಲ್ಲಿ ನಮ್ಮದೂ ಪಾಲಿದೆ ಅದು ಹೆಮ್ಮೆ|

ನಮ್ಮ ಬೇಡಿಕೆಗಳನ್ನು ಪರಿಶೀಲಿಸಿ

ನಮ್ಮ ಕಡೆ ಕೃಪೆ ತೋರಿ ಒಮ್ಮೆ||


(ಮದ್ಯಪಾನ ಆರೋಗ್ಯಕ್ಕೆ ಹಾನಿಕರ)


ಸಿಹಿಜೀವಿ ವೆಂಕಟೇಶ್ವರ

ತುಮಕೂರು


12 December 2023

ಕುದುರೆಗೊಂದು ದಿನ


 


ಕುದುರೆಗೊಂದು ದಿನ 


ಆಕರ್ಷಕವಾಗಿ ಕಾಣುವ ಹಲವು ಪ್ರಾಣಿಗಳಲ್ಲಿ ಕುದುರೆಯೂ ಒಂದು. ಮಹಾರಾಜರು ಕುದುರೆ ಏರಿ ಹೊರಟರೆ ಆ ಗತ್ತೇ ಬೇರೆ. ಸೈನಿಕರ ,ಸಾರಿಗೆಯ ಬಹು ಮುಖ್ಯ ಪ್ರಾಣಿಯಾಗಿದ್ದ   ಕುದುರೆ ಅಶ್ವ ಮೇಧಯಾಗಕ್ಕೂ ಸಿದ್ದ ವಾಗಿದ್ದನ್ನ  ಕಂಡಿದ್ದೇವೆ.ಇಂತಹ ಬಹುಪಯೋಗಿ ಕುದುರೆ ಈಗ    ರೇಸ್  ಓಡುವ ಕುದುರೆಯಾಗಿ ಜೂಜಿಗೆ ಸೀಮಿತವಾಗಿದೆ.

ಅಶ್ವ ,ವಾಜಿ ,ತುರುಗ, ಎಂಬಿತ್ಯಾದಿ ನಾಮಗಳಿಂದ ಪರಿಚಿತವಾದ ಕುದುರೆಗೂ ವಿಶ್ವ ಸಂಸ್ಥೆ ಒಂದು ದಿನ ನಿಗದಿ ಮಾಡಿ ಪ್ರತಿ ವರ್ಷವೂ ಆಚರಿಸಲು ಅನುವು ಮಾಡಿಕೊಟ್ಟಿದೆ. ಪ್ರತಿವರ್ಷ ಡಿಸೆಂಬರ್ 13 ರಂದು ರಾಷ್ಟ್ರೀಯ ಕುದುರೆ ದಿನವಾಗಿ ಆಚರಿಸಲಾಗುತ್ತದೆ.

ಕುದುರೆಗೆ, ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮಹತ್ವವಿದೆ.  ಜಾನಪದರ ಬಾಯಲ್ಲಿ ಕುದುರೆ ನಲಿದಾಡಿದೆ.

ಕುದುರೆಯ ಹೆಸರಲ್ಲಿ ಕನ್ನಡದ ಹಲವಾರು ಹಾಡುಗಳು ಬಂದಿವೆ. "ಕುದುರೆ ಏರಿ ಸೂರ್ಯ ಬಂದವ್ನೆ...." ಎಂಬ ಲಾಲಿ ಹಾಡು ಚಿತ್ರದ ಹಾಡು ಈಗಲೂ ಕಿವಿಯಲ್ಲಿ ಗುಂಯ್ಗುಡುತ್ತದೆ. "ಕಾಡು ಕುದುರೆ ಓಡಿ ಬಂದಿತ್ತಾ...." ಎಂಬ ಹಾಡಿನಲ್ಲಿ ಶಿವಮೊಗ್ಗ ಸುಬ್ಬಣ್ಣ ರವರ ಧ್ವನಿಯು ಎಲ್ಲರನ್ನೂ ಆಕರ್ಷಿಸಿದ್ದು ಸುಳ್ಳಲ್ಲ. ಎಲ್ಲಾ ಆರ್ಕೆಸ್ಟ್ರಾಗಳಲ್ಲಿ ಈಗಲೂ ಅತಿ ಹೆಚ್ಚು ಬೇಡಿಕೆಯ ಹಾಡು ಅಣ್ಣಾವ್ರ "ಹೃದಯ ಸಮುದ್ರ ಕಲಕಿ ಹೊತ್ತಿದ ದ್ವೇಷದ ಬೆಂಕಿ..." ಅಶ್ವದೊಂದಿಗೆ ಚಿತ್ರಿತವಾದ ಈ ಹಾಡನ್ನು ಈಗ ನೋಡಿದರೂ  ರೋಮಾಂಚನವಾಗುತ್ತದೆ.

ಇನ್ನೂ "ಕುದುರೇನ ತಂದೀನಿ ಜೀನಾವಾ ಬಿಗಿದೀನಿ ಬರಬೇಕು ತಂಗಿ ಮದುವೇಗೆ" ಜಾನಪದ ಗೀತೆ ಯಾರು ಕೇಳಿಲ್ಲ ಹೇಳಿ?

ಇತ್ತೀಚಿನ ಶಿವಣ್ಣ ಅಭಿನಯದ ಕವಚ ಚಿತ್ರದ "ರೆಕ್ಕೆಯ ಕುದುರೆ ಏರಿ..." ಹಾಡು ಸುಮಧುರ.

ಹೀಗೆ ಕುದುರೆಯ ಮೇಲೆ ಬಂದಿರುವ ಹಾಡುಗಳು ಒಂದಕ್ಕಿಂತ ಒಂದು ಸುಮಧುರ ಮತ್ತು ಅರ್ಥಗರ್ಭಿತ. ಮುಂದೆಯೂ ನಾಟಕಗಳಲ್ಲಿ ಮತ್ತು ಸಿನಿಮಾದಲ್ಲಿ ಇನ್ನೂ ಹೆಚ್ಚಿನ ಕುದುರೆ ಹಾಡುಗಳ ನಿರೀಕ್ಷೆ ಮಾಡೋಣ...

ಎಲ್ಲರಿಗೂ ಅಂತರರಾಷ್ಟ್ರೀಯ ಕುದುರೆ ದಿನದ ಶುಭಾಶಯಗಳು..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ಹೆಣ್ಣಿನ ದಶಗುಣಗಳು.


 


ಹೆಣ್ಣಿನ ದಶಗುಣಗಳು.


ಹೆಣ್ಣು ಎಂಬ ಎರಡಕ್ಷರದಲ್ಲಿ ಏನಿದೆ?ಏನಿಲ್ಲ? ಜಗದ ಆದಿ ಅಂತ್ಯವೇ ಹೆಣ್ಣು. ತಾಯಿಯಾಗಿ,ತಂಗಿಯಾಗಿ,ಅತ್ತೆಯಾಗಿ,ಸೊಸೆಯಾಗಿ, ಸಹೋದರಿಯಾಗಿ,ಗೆಳತಿಯಾಗಿ...ನಾನಾ ರೂಪಗಳಲ್ಲಿ ನಮ್ಮ ನಡುವೆ ಇರುವ ಹೆಣ್ಣು ಅವಳ ಮಹಾನ್ ಗುಣಗಳಿಂದ ಅಚ್ಚರಿ ಮೂಡಿಸುತ್ತಾಳೆ. ಅಂತಹ ಗುಣಗಳ ಪಟ್ಟಿ ಮಾಡುವಾಗ ನನಗೆ ದಕ್ಕಿದ್ದು ಈ ಕೆಳಗಿನ ಗುಣಗಳು.


 1. ಅವಳು ಬುದ್ಧಿವಂತೆ.


 ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದಿದ್ದರೂ  ಬುದ್ದಿವಂತಿಕೆಯೆಂದರೆ ಹೆಣ್ಣು ಎನ್ನುವಂತಾಗಿದೆ.  ಅವಳು ಬಾಯ್ತೆರೆದು ಮಾತಾನಾಡಲಾರಂಬಿಸಿದರೆ   ಬುದ್ಧಿವಂತಿಕೆಯನ್ನು ಹೊರಹಾಕುತ್ತಾಳೆ.  ಒಬ್ಬರು ಅವಳೊಂದಿಗೆ ಕಠಿಣ ಮತ್ತು ಗಂಭೀರವಾಗಿ ಮಾತನಾಡಬಹುದು.ಅದಕ್ಕೆ ತಕ್ಕಂತೆ ಅವಳ ಉತ್ತರ ಸಿದ್ದವಿರುತ್ತದೆ.


 2. ಅವಳು ಭಾವನಾತ್ಮಕವಾಗಿ ಸ್ಥಿರವಾಗಿರುತ್ತಾಳೆ.


 ಹೌದು ಹೆಣ್ಣು ಗಂಡಿಗಿಂತ ಹೆಚ್ಚು ಭಾವನಾತ್ಮಕ ಜೀವಿ. ಅವಳು  ಕೆಲವೊಮ್ಮೆ ನಗುತ್ತಾಳೆ, ಕೆಲವೊಮ್ಮೆ ಅಳು, ಮತ್ತೆ ಸಿಟ್ಟು ಸೆಡೆವು, ಕರುಣೆ , ಶಾಂತ   ಹೀಗೆ ತನ್ನ ವಿವಿಧ ಭಾವನೆಗಳನ್ನು ವ್ಯಕ್ತಪಡಿಸುವ ಅವಳನ್ನು     ತನ್ನ ಭಾವನೆಗಳ ಮಾಸ್ಟರ್ ಎಂದರೆ ತಪ್ಪಾಗಲಾರದು.


 3. ಅವಳು ಗುಣಿಸುತ್ತಾಳೆ.


ಹೆಣ್ಣಿನ ಕಾರ್ಯ ವರ್ಣಿಸುವಾಗ ಅವಳಿಗೆ ಹತ್ತು ಕೈ ಒಂದೊಂದರಲ್ಲಿ ಒಂದು ಕೆಲಸ ಮಾಡುವ ಗೌರವಪೂರ್ವಕವಾದ ಚಿತ್ರ ನೋಡಿದ್ದೇವೆ.ಅದೇ ಅವಳ ತಾಕತ್ತು 

 ಅವಳು ನೂರನ್ನು   ಸಾವಿರವಾಗಿ, ಸಾವಿರವನ್ನು ಮಿಲಿಯನ್ ಆಗಿ ಪರಿವರ್ತಿಸುತ್ತಾಳೆ. ಅದು ಬರೀ ಹಣದ ಮತ್ತು ಸಂಪತ್ತಿನ ಲೆಕ್ಕಾಚಾರವಲ್ಲ  ಅದರಲ್ಲಿ ಎಲ್ಲವೂ ಇದೆ. 


 4. ಅವಳು ಪ್ರೀತಿಸಲ್ಪಡುವುದನ್ನು ಪ್ರೀತಿಸುತ್ತಾಳೆ.


ಪ್ರೀತಿಗೆ ಮನಸೋಲದವರು ಈ ಜಗದಲ್ಲಿ ಯಾರೂ ಇಲ್ಲ.ಅದಕ್ಕೆ ಅವಳು ಹೊರತಲ್ಲ.ಹಾಗೆ ನೋಡಿದರೆ ಅವಳ ಬಿಟ್ಟು ಪ್ರೀತಿಯಿಲ್ಲ.

 ಹೌದು,  ನೀವು ಅವಳನ್ನು ಪ್ರೀತಿಸಿದಾಗ ಮತ್ತು ಅವಳಿಗೆ ಒಳ್ಳೆಯದನ್ನು ಮಾಡಿದಾಗ, ಅವಳು ಸ್ವೀಕರಿಸುವಳು ಮತ್ತು ಶ್ಲಾಘಿಸುವವಳು.  


 5. ಅವಳು ಆಹಾರದ ಮೂಲಕ ಪ್ರೀತಿಸುತ್ತಾಳೆ.


ಪಾಕ ಪ್ರವೀಣ ಗಂಡಸರು ಇಬ್ಬರೇ ನಮಗೆ ಗೊತ್ತಿರುವವರು ಅವರೇ ನಳ ಮತ್ತು ಭೀಮ ಉಳಿದೆಲ್ಲಾ ಪಾಕ ಪಾಂಡಿತ್ಯವನ್ನು ಅವಳು ಗುತ್ತಿಗೆ ಪಡೆದಾಗಿದೆ.

 ಅವಳು  ಅತ್ಯುತ್ತಮ ಆಹಾರ   ಸಿದ್ದಪಡಿಸಲು  ಪ್ರಯತ್ನಿಸುತ್ತಾಳೆ  ಮತ್ತು  ಪಾಕ ಪ್ರಕ್ರಿಯೆಯಲ್ಲಿ  ನಮ್ಮ ಆತ್ಮಕ್ಕೂ ಆಹಾರವನ್ನು ನೀಡುತ್ತಾಳೆ.


 6. ಅವಳಂದರೆ ಮೋಜು. 


 ಅವಳು ಬುದ್ಧಿವಂತಳಾಗಿದ್ದರೂ, ಅವಳು ಮೂರ್ಖಳಾಗಿ ತನ್ನ ತಾನು ಅಪಹಾಸ್ಯ ಮಾಡಿಕೊಂಡು ಕೆಲವೊಮ್ಮೆ  ಹಾಸ್ಯ ಚಟಾಕಿ ಹಾರಿಸುತ್ತಾಳೆ, ಕೀಟಲೆ ಮಾಡುತ್ತಾಳೆ, ನಗುತ್ತಾಳೆ, ಅವಳಿದ್ದರೆ ಮೋಜಿಗೂ ಬರವಿಲ್ಲ.


 7. ಸಹಾಯ ಪಡೆಯುವಳು 


 ಅವಳು ಯಾವುದಾದರೂ ತೊಂದರೆಯಲ್ಲಿ ಸಿಲುಕಿಕೊಂಡಾಗ ಅಥವಾ ತೊಂದರೆಯಲ್ಲಿದ್ದಾಗ, ಸಹಾಯವನ್ನು ಹೇಗೆ ಕೇಳಬೇಕೆಂದು ಅವಳು ತಿಳಿದಿದ್ದಾಳೆ.  ಅವಳು ಒಬ್ಬಂಟಿಯಾಗಿ ಬಳಲುವುದಿಲ್ಲ. ನಾವು ಆಪತ್ತಿನಲ್ಲಿದ್ದಾಗ . ಸಮಯಕ್ಕೆ ಸರಿಯಾಗಿ ಸೂಕ್ತ ಸಹಾಯ ಬೇಡುವದು ತಪ್ಪಲ್ಲ.


 8. ಅವಳು ದೇವರ ಪ್ರತಿಬಿಂಬ.


ಅವಳು ಕಾಳಿ, ದುರ್ಗೆ, ದೇವಿ, ಶಾರದೆ, ಹೀಗೆ ನಾನಾ ರೂಪಗಳ ಪ್ರತಿಬಿಂಬವಾಗಿ

 ನೀವು ಅವಳನ್ನು ನೋಡುತ್ತೀರಿ ಮತ್ತು ದೇವರನ್ನು ನೋಡುತ್ತೀರಿ, ಅವಳು ಹೆಚ್ಚು ಹೆಚ್ಚು ದೇವರಂತೆ ಆಗುತ್ತಿದ್ದಾಳೆ  ಪ್ರೀತಿಸುವ, ಕ್ಷಮಿಸುವ, ಆಕರ್ಷಕವಾದ, ಬಲವಾದ ಮೌಲ್ಯಯುತ ಜೀವನವನ್ನು ಅವಳಿಂದ ಕಲಿಯಬಹುದು.


 9. ಅವಳೆಂದರೆ ಆತ್ಮವಿಶ್ವಾಸ 


 ಅವಳು ಅಂತರ್ಮುಖಿಯಾಗಿರಲಿ ಅಥವಾ ಬಹಿರ್ಮುಖಿಯಾಗಿರಲಿ, ಅವಳು ಹೆಚ್ಚಿನ ಸ್ವಾಭಿಮಾನವನ್ನು ಹೊಂದಿರುತ್ತಾಳೆ. ಆತ್ಮವಿಶ್ವಾಸದ ವಿಷಯದಲ್ಲಿ  ನೀವು ಅವಳನ್ನು ಬೀಟ್ ಮಾಡಲು  ಸಾಧ್ಯವಿಲ್ಲ.  ಅವಳು ಪ್ರಶಂಸನೀಯ ಗುಣಗಳನ್ನು ಹೊಂದಿದ್ದಾಳೆ


 10. ಅವಳು ಸಂಬಂಧಗಳಿಗೆ ಬೆಲೆ ಕೊಡುತ್ತಾಳೆ.


 ಉತ್ತಮ ಸ್ನೇಹಿತ, ಗೆಳತಿಯರ ಗುಂಪು ಅಥವಾ ಆಪ್ತ ಸ್ನೇಹಿತರ ಗುಂಪೇ ಆಗಿರಲಿ, ಅವಳು ಅವಳನ್ನು ಸುತ್ತುವರೆದಿರುವ ಬಲವಾದ ಜನರನ್ನು ಸುಲಭವಾಗಿ ಬೆರೆಯುತ್ತಾಳೆ.  ಅವಳು ತನ್ನ  ಗಂಡ ಅಥವಾ ಸ್ನೇಹಿತನ ಜೊತೆಯಲ್ಲಿ  ಸಂಬಂಧಕ್ಕೆ   ಬೆಲೆ ಕೊಡುವುದು  ಮಾತ್ರವಲ್ಲ      ಕುಟುಂಬದೊಂದಿಗಿನ ಸಂಬಂಧವನ್ನು ಸಹ  ಗೌರವಿಸುತ್ತಾಳೆ.


ಒಟ್ಟಾರೆ ಹೆಣ್ಣು ಅಗಣಿತ ಗುಣಗಳ ಗಣಿ ಅವಳಿಲ್ಲದ ಈ ಜಗವ ಉಳಿಸಿಕೊಳ್ಳಲು ಸಹ ಕಷ್ಟ. ಆದ್ದರಿಂದ ಹೆಣ್ಣನ್ನು ಗೌರವಿಸೋಣ. 



ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

 

11 December 2023

ತಂದೆ ತಾಯಿಗಳೇ ಅಸ್ತಿ... ಪುಸ್ತಕ ವಿಮರ್ಶೆ..

 



ತಂದೆ ತಾಯಿಗಳೇ ಅಸ್ತಿ...


ಮಾತೃದೇವೋಭವ ಪಿತೃದೇವೊಭವ ಆಚಾರ್ಯ ದೇವೋಭವ ಎಂದ ಪುಣ್ಯ ಭೂಮಿ ನಮ್ಮದು.  ಅದರಲ್ಲೂ ಮಾತಾಪಿತರ  ಋಣ ತೀರಿಸಲು ಅಸಾಧ್ಯ. ಪ್ರಮೋದ್ ಶ್ರೀಪಾದರಾವ್ ಕುಲಕರ್ಣಿ ರವರು ತಮ್ಮ ತಂದೆ ತಾಯಿಗಳು ಮಾಡಿದ ಆಸ್ತಿಯನ್ನು ಬಯಸದೇ ಅವರನ್ನೇ ನನ್ನ ಆಸ್ತಿ ಎಂದರು! ಎಂತಹ ಉದಾತ್ತ ಚಿಂತನೆ.  ಸ್ವಾರ್ಥವೇ ತುಂಬಿ ತುಳುಕುವ ಇಂದಿನ ಆಧುನಿಕ ಜಗತ್ತಿನಲ್ಲಿ ಕುಲಕರ್ಣಿ ರವರು ರಚಿಸಿರುವ ಈ ಕೃತಿ ಒಂದು ಆಶಾಕಿರಣದಂತೆ ತೋರುತ್ತದೆ.ಎಲ್ಲಾ ಮಕ್ಕಳು ತಮ್ಮ  ಹೆತ್ತವರನ್ನು   ಇಳಿವಯಸ್ಸಿನಲ್ಲಿ ಗೌರವದಿಂದ ಪ್ರೀತಿಯಿಂದ ನೋಡಿಕೊಂಡರೆ ವೃದ್ದಾಶ್ರಮಗಳ ಅಗತ್ಯವೇ ಇರುವುದಿಲ್ಲ.ಎಲ್ಲರೂ ಈ ಪುಸ್ತಕ ಓದೋಣ ನಮ್ಮ ತಂದೆ ತಾಯಿಗಳು ಬೆಲೆ ಕಟ್ಟದ ಆಸ್ತಿ ಎಂಬುದನ್ನು ಮನಗಂಡು ಅವರನ್ನು ಚೆನ್ನಾಗಿ ‌ನೋಡಿಕೊಳ್ಳೊಣ.ಹಾಗೂ ಮೌಲ್ಯಯುತ ಸಮಾಜದ ನಿರ್ಮಾಣಕ್ಕೆ ಒಣ ತೊಡೋಣ.


ಪುಸ್ತಕ: ಮಾತಾ ಪಿತೃಗಳ ಕೊಡುಗೆ

ಲೇಖಕರು: ಪ್ರಮೋದ್ ಶ್ರೀಪಾದರಾವ್ ಕುಲಕರ್ಣಿ


ಸಿಹಿಜೀವಿ ವೆಂಕಟೇಶ್ವರ

ತುಮಕೂರು.


06 December 2023

ಸಿಹಿಜೀವಿಯ ಹಾಯ್ಕುಗಳು

 



ಹಾಯ್ಕುಗಳು 


ಸುಮ್ಮನೇ ಅಲ್ಲ 

ಲೇಖನದ  ಕಿರೀಟ

ತಲೆಬರಹ.



ಕಲಿಸುವುದು 

ತಗ್ಗಿಬಗ್ಗುವುದನು 

ತಲೆಬಾಗಿಲು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಗಜ ನಮನ

 



ಗಜ ನಮನ 


ಅಕಾಲಿಕ ಸಾವಿಗೀಡಾದ ಅಮ್ಮನ

ಅಂಬಾರಿ ಹೊತ್ತ ಅರ್ಜುನ|

ನಾಡಿನ ಜನರೆಲ್ಲರ ಪರವಾಗಿ

ಜಗ ಮೆಚ್ಚಿದ ಗಜ ಗೆ ನಮನ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

01 December 2023

ಯಶಸ್ವಿ ದಿನಕ್ಕೆ ದಶಸೂತ್ರಗಳು.


 ಯಶಸ್ಸಿ ದಿನಕ್ಕೆ ದಶಸೂತ್ರಗಳು.


"ನೀನು ಟೈಮ್ ಹೇಗೆ ಮೇನೇಜ್ ಮಾಡ್ತೀಯಾ? ಪೇಪರ್ ಗೆ ಬರೀತಿಯಾ, ಪುಸ್ತಕ ಬರೀತಿಯಾ, ಹಾಡು ಹೇಳ್ತಿಯಾ, ಪ್ಯಾಮಿಲಿ ಜೊತೆಯಲ್ಲಿ ಆಗಾಗ್ಗೆ ಪ್ರವಾಸ ಹೋಗ್ತೀಯಾ, ಪ್ರೋಗ್ರಾಮ್ ಆರ್ಗನೈಸ್ ಮಾಡ್ತೀಯಾ ಇದಕ್ಕೆಲ್ಲ ಟೈಮ್ ಹೇಗೆ ಸಿಗುತ್ತೆ?"
ಇವು   ನನ್ನ ಆತ್ಮೀಯರು ಮತ್ತು ಸ್ನೇಹಿತರು ನನಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು. ಅದಕ್ಕೆ ನನ್ನ ಉತ್ತರ ಪ್ರತಿ ದಿನ ಬೇಗ ಏಳುವುದು ಯೋಜನಾ ಬದ್ಧವಾಗಿ ಕೆಲಸ ಮಾಡುವುದು.
ಅದರ ಜೊತೆಯಲ್ಲಿ ಈ ಕೆಳಕಂಡ ಅಂಶಗಳನ್ನು ಅಳವಡಿಸಿಕೊಳ್ಳುವುದು. ಈ ಅಂಶಗಳು ನಿಮಗೆ ಇಷ್ಟವಾದರೆ ನೀವೂ ಅಳವಡಿಸಿಕೊಳ್ಳಬಹುದು. ಪ್ರಯತ್ನಿಸಿ.

1. ಸ್ಪಷ್ಟ . ಉದ್ದೇಶ

ನಮ್ಮ ದಿನವನ್ನು  ಸ್ಪಷ್ಟವಾದ ಉದ್ದೇಶದೊಂದಿಗೆ ಪ್ರಾರಂಭಿಸೋಣ.
ನಮ್ಮ ಆದ್ಯತೆಗಳನ್ನು ಪ್ರತಿಬಿಂಬಿಸಲು ಮತ್ತು ದಿನಕ್ಕೆ ನಮ್ಮ ಉದ್ದೇಶಗಳನ್ನು ಹೊಂದಿಸಲು ಪ್ರತಿ ಬೆಳಿಗ್ಗೆ ಕೆಲವು ನಿಮಿಷಗಳನ್ನು ತೆಗೆದುಕೊಳ್ಳೋಣ . ಇದು ನಮಗೆ ಏಕಾಗ್ರತೆಯಲ್ಲಿರಲು ಮತ್ತು ನಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. 

2. ಒಂದು ಸಮಯದಲ್ಲಿ ಒಂದೇ  ಕಾರ್ಯ.

  ನಾವು ಒಂದೇ ಬಾರಿಗೆ ಹಲವಾರು ಕೆಲಸಗಳನ್ನು ಮಾಡಲು ಪ್ರಯತ್ನಿಸಿದಾಗ  ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ ಮತ್ತು ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.  ಬದಲಾಗಿ  ಒಂದು ಸಮಯದಲ್ಲಿ ಒಂದು ಕಾರ್ಯವನ್ನು ಕೇಂದ್ರೀಕರಿಸಿ ಮತ್ತು ನಮ್ಮ ಸಂಪೂರ್ಣ ಗಮನವನ್ನು ನೀಡಿದರೆ ಆ ಕಾರ್ಯ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ.

3.ವೇಳಾಪಟ್ಟಿಯಿರಲಿ.

ನಮ್ಮ ದೈನಂದಿನ ಕಾರ್ಯಗಳನ್ನು ನಿಗದಿಪಡಿಸಿಕೊಂಡು ಒಂದು ವೇಳಾಪಟ್ಟಿಯಂತೆ ಕಾರ್ಯನಿರ್ವಾಹಿಸಬೇಕು.  ಅದು ಲಿಖಿತವಾಗಿರಬೇಕಿಲ್ಲ.ಮನದಲ್ಲಿ ಮಾಡಿಕೊಂಡರೂ ಆದೀತು.   ಇದು ನಮಗೆ ನಿಗದಿತ ಸಮಯದಲ್ಲಿ ನಿಗದಿತ ಕೆಲಸ ಮಾಡಲು ಮತ್ತು ಆಲಸ್ಯವನ್ನು ತಪ್ಪಿಸಲು ಸಹಾಯ ಮಾಡುತ್ತದೆ.

4. ಸಹಕಾರ ಸಮನ್ವಯ

ಕೆಲವೊಮ್ಮೆ ಎಲ್ಲಾ ಕೆಲಸಗಳನ್ನು ನಾವೇ ಮಾಡಲು ಹೋಗುತ್ತೇವೆ.
ಎಲ್ಲವನ್ನೂ ನಾವೇ ಮಾಡಬೇಕು ಎಂದು ಭಾವಿಸಬೇಡಿ.  ಸಾಧ್ಯವಾದಾಗಲೆಲ್ಲಾ ಕಾರ್ಯಗಳನ್ನು ಇತರರಿಗೆ ನಿಯೋಜಿಸಿ.  ಇದು ನಮ್ಮ ಸಮಯವನ್ನು ಉಳಿಸುತ್ತದೆ ಇದರಿಂದ ನಮ್ಮ ಪ್ರಮುಖ ಆದ್ಯತೆಗಳ ಮೇಲೆ ನಾವು ಗಮನಹರಿಸಬಹುದು.

5. ಇಲ್ಲ ಎಂದು ಬಿಡಿ

ಕೆಲವೊಮ್ಮೆ ಯಾವುದೋ ಮುಲಾಜಿಗೆ ಬಿದ್ದು ನಮ್ಮ ಇಷ್ಟವಿಲ್ಲದ ಕಾರ್ಯ ಒಪ್ಪಿಕೊಂಡು ಒದ್ದಾಡುತ್ತೇವೆ. ಅದಕ್ಕೆ ಬದಲಾಗಿ
ನಮ್ಮ ಗುರಿಗಳೊಂದಿಗೆ ಹೊಂದಿಕೆಯಾಗದ ಬದ್ಧತೆಗಳಿಗೆ ಇಲ್ಲ ಎಂದು ಹೇಳಿಬಿಡೋಣ.  ನಮ್ಮ ವೇಳಾಪಟ್ಟಿಗೆ ಹೊಂದಿಕೆಯಾಗದ ಅಥವಾ ನಮ್ಮ ಗುರಿಗಳಿಗೆ ಹೊಂದಿಕೆಯಾಗದ ವಿಷಯಗಳಿಗೆ ಇಲ್ಲ ಎಂದು ಹೇಳುವುದು ಸರಿ.  ನಮ್ಮ ಸಮಯ ಮತ್ತು ಶಕ್ತಿಯನ್ನು ರಕ್ಷಿಸಲು ಹಿಂಜರಿಯದಿರೋಣ.

6. ವಿರಾಮವೂ ಇರಲಿ

ನಿರಂತರವಾದ ಕೆಲಸ ಮೈ ಮನಗಳಿಗೆ ಒತ್ತಡ ತಂದು ನಮ್ಮ ಕಾರ್ಯದಕ್ಷತೆಯನ್ನು ಕಡಿಮೆಮಾಡುತ್ತವೆ.ಅದಕ್ಕಾಗಿ
ಸೂಕ್ತ ಕಾಲದಲ್ಲಿ  ವಿರಾಮಗಳನ್ನು ತೆಗೆದುಕೊಳ್ಳೋಣ.  ನಮ್ಮ ಮನಸ್ಸು ಮತ್ತು ದೇಹವನ್ನು ರಿಫ್ರೆಶ್ ಮಾಡಲು ಕನಿಷ್ಠ ಪ್ರತಿ ಗಂಟೆಗೊಮ್ಮೆ  ವಿಶ್ರಾಂತಿ ಪಡೆಯೋಣ.ವಿಶ್ರಾಂತಿ ಎಂದರೆ ಬರೀ ಮಲಗುವುದು ,ಸುಮ್ಮನೆ ಕೂರುವುದಲ್ಲ.ಕೆಲಸದ ಬದಲಾವಣೆಯೂ ವಿಶ್ರಾಂತಿಯೇ.  ವಿರಾಮಗಳನ್ನು ತೆಗೆದುಕೊಳ್ಳುವುದು ನಮಗೆ ದಿನವಿಡೀ ಉಲ್ಲಸಿತವಾಗಿರಲು  ಮತ್ತು ಹೆಚ್ಚು  ಉತ್ಪಾದಕವಾಗಿರಲು ಸಹಾಯ ಮಾಡುತ್ತದೆ.

7. ಯಶಸ್ಸನ್ನು ಸಂಭ್ರಮಿಸೋಣ

ಆ ದಿನದಂದು ನಮಗೆ ಚಿಕ್ಕ ಯಶಸ್ಸು ಸಿಕ್ಕರೆ ಅದನ್ನು ಸಂಭ್ರಮಿಸೋಣ.
ಆತ್ಮೀಯರೊಂದಿಗೆ ,ಸಮಾನ ಮನಸ್ಕರೊಂದಿಗೆ  ಯಶಸ್ಸನ್ನು ಆಚರಿಸೋಣ.  ನಮ್ಮ ಸಾಧನೆಗಳನ್ನು ಶ್ಲಾಘಿಸಲು ಸಮಯ ತೆಗೆದುಕೊಳ್ಳೋಣ  ಅವುಗಳು ಎಷ್ಟೇ ಚಿಕ್ಕ ಚಿಕ್ಕ ಯಶಸ್ಸುಗಳಾದರೂ     ಅವು ನಮ್ಮನ್ನು ಪ್ರೇರೇಪಿಸಲು ಮತ್ತು ಮುಂದುವರಿಯಲು ಸಹಾಯ ಮಾಡುತ್ತದೆ.

8. ತಪ್ಪುಗಳಿಂದ ಕಲಿಯೋಣ 

ನಮ್ಮ ದೈನಂದಿನ ಜೀವನದಲ್ಲಿ ತಿಳಿದು ತಿಳಿಯದೇ ಅನೇಕೆ ತಪ್ಪುಗಳನ್ನು ಮಾಡುತ್ತೇವೆ.ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನು ಮನುಜ ಎಂಬಂತೆ ನಮ್ಮ ತಪ್ಪುಗಳಿಂದ ಪಾಠಗಳನ್ನು  ಕಲಿಯೋಣ.  ನಮ್ಮ ತಪ್ಪುಗಳ  ಮೇಲೆ ನಮ್ಮನ್ನು ಕೈಲಾಗದವರು ಸೋತವರೆಂದು ಹಣೆಪಟ್ಟಿ ಕಟ್ಟಿಕೊಳ್ಳುವುದು ಬೇಡ  ಬದಲಿಗೆ ತಪ್ಪುಗಳನ್ನು ಸರಿಪಡಿಸಿಕೊಂಡು  ಸುಧಾರಿಸಿಕೊಂಡು  ಅವಕಾಶವಾಗಿ ಬಳಸಿಕೊಳ್ಳೋಣ.

9. ಧನಾತ್ಮಕ ಜನರು

ಕೆಲವರು ಯಾವಾಗಲೂ ಋಣಾತ್ಮಕವಾಗಿ ಮಾತನಾಡುವ ಮೂಲಕ ನಮ್ಮ ಕಾರ್ಯಗಳಲ್ಲಿ ಆತ್ಮವಿಶ್ವಾಸ ಕಡಿಮೆಯಾಗುವಂತೆ ಮಾಡುತ್ತಾರೆ. ನಮ್ಮ ಸುತ್ತ ಯಾವಾಗಲೂ ಧನಾತ್ಮಕ ಚಿಂತನೆ ಜನರಿರುವಂತೆ ನೋಡಿಕೊಳ್ಳೋಣ.
ನಾವು ಸಮಯ ಕಳೆಯುವ ಜನರು ನಮ್ಮ ಯಶಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರಬಹುದು.  ನಮ್ಮನ್ನು ಮತ್ತು ನಮ್ಮ ಗುರಿಗಳನ್ನು ನಂಬುವ ಸಕಾರಾತ್ಮಕವಾಗಿ  ಬೆಂಬಲ ನೀಡುವ ಜನರೊಂದಿಗಿರೋಣ. 

10.  ದೈಹಿಕ ಮತ್ತು ಮಾನಸಿಕ ಆರೋಗ್ಯ

ಆರೋಗ್ಯವೇ ಭಾಗ್ಯ. ನಮ್ಮ ಆರೋಗ್ಯವು ನಮ್ಮ ಪ್ರಮುಖ ಆಸ್ತಿಯಾಗಿದೆ.  ಪ್ರತಿದಿನ ಸಾಕಷ್ಟು ನಿದ್ದೆ ಮಾಡಬೇಕು.ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ನಿಯಮಿತವಾಗಿ ಯೋಗ ಧ್ಯಾನ ಪ್ರಾಣಾಯಾಮ ಮಾಡುತ್ತಾ   ವಿಶ್ರಾಂತಿಯನ್ನು ಪಡೆಯುತ್ತಾ  ಒತ್ತಡವನ್ನು ನಿವಾರಿಸಿಕೊಳ್ಳೋಣ. ಇದರ ಪರಿಣಾಮವಾಗಿ ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯ ನಮ್ಮದಾಗುತ್ತದೆ.

ಈ ಮೇಲಿನ ದಶ ಸೂತ್ರಗಳನ್ನು    ಅನುಸರಿಸುವ ಮೂಲಕ, ನಮ್ಮ ದೈನಂದಿನ ಕಾರ್ಯಸೂಚಿಯನ್ನು ನಾವು ಹೆಚ್ಚು ಬಳಸಿಕೊಳ್ಳಬಹುದು ಮತ್ತು ನಮ್ಮ ಗುರಿಗಳನ್ನು ಸಾಧಿಸಬಹುದು.  ನೆನಪಿಡಿ, ಯಶಸ್ಸು ಕಷ್ಟಪಟ್ಟು ಕೆಲಸ ಮಾಡುವುದಲ್ಲ. ಇದರ ಬದಲಾಗಿ ಸ್ಮಾರ್ಟ್ ವರ್ಕ್ ಮಾಡಬೇಕು. ದಿನಕರನು ದಿನವೂ ತನ್ನ ಕಾರ್ಯವನ್ನು ನಿಲ್ಲಿಸದೇ ಕ್ರಮಬದ್ಧವಾಗಿ ಮಾಡುವನು ನಾವು ಸಹ ನಮ್ಮ ಮುಂದಿನ ಯಶಸ್ಸು ಗಳಿಸಲು ಈ ದಿನವನ್ನು ಫಲದಾಯಕವಾಗಿ ಮಾಡಿಕೊಳ್ಳೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529