ಯಾರು ಹೊಣೆ...
ಅವನ ತಂದೆ ಸರ್ಕಾರಿ ನೌಕರಿಯಲ್ಲಿದ್ದರು.ಅವರ ಅಕಾಲಿಕ ಮರಣದಿಂದ ಆ ಹುಡುಗನ ಅಕ್ಕನಿಗೆ ಅನುಕಂಪದ ಸರ್ಕಾರಿ ನೌಕರಿ ದೊರೆಯಿತು. ನೌಕರಿಯ ಬಲದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಯಿತು. ಹೋಗಿ ಬರುವ ಪಯಣ
ಸುಮಾರು 100 ಕಿಲೋಮೀಟರ್ ಆದರೂ ಕೆಲಸ ಸಿಕ್ಕ ಖುಷಿಯಲ್ಲಿ ಅದೇನು ಅಷ್ಟು ತೊಂದರೆ ಎನಿಸಲಿಲ್ಲ. ತನ್ನ ಹಳ್ಳಿಯಿಂದ ನಗರಕ್ಕೆ, ಪುನಃ ನಗರದಿಂದ ಮತ್ತೊಂದು ನಗರಕ್ಕೆ ಕೆಲಸ ಮಾಡಲು ಹೋಗಿ ಬರಬೇಕಾಗಿತ್ತು. ಆರಂಭದಲ್ಲಿ ಇದು ಕಷ್ಟವಾದರೂ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಅಷ್ಟೇ ಸಾಕು ಎಂದು ಬರು ಬರುತ್ತಾ ಕಷ್ಟದ ಜೀವನಕ್ಕೆ ಹೊಂದಿಕೊಂಡಿದ್ದಳು. ದೂರದ ಪ್ರಯಾಣವಾದ್ದರಿಂದ ಬಸ್ ಗಳು ಸಕಾಲದಲ್ಲಿ ಸಿಗದೆ ಕೆಲವೊಮ್ಮೆ ನಗರಕ್ಕೆ ತಲುಪುವುದೇ ರಾತ್ರಿ ಒಂಭತ್ತರ ಮೇಲಾಗುತ್ತಿತ್ತು.ಅಲ್ಲಿಂದ ಹಳ್ಳಿಯ ಮನೆ ಸೇರಲು ಮತ್ತೆ ಕಾಲು ಗಂಟೆ ಬೇಕಾಗುತ್ತಿತ್ತು.
ಕೆಲವು ದಿನ ಡ್ಯೂಟಿಯಿಂದ ರಾತ್ರಿ ಲೇಟಾಗಿ ಬಂದರೆ ನಗರದಿಂದ ಅಕ್ಕನ ಕರೆತರಲು ಹತ್ತನೇ ತರಗತಿಯಲ್ಲಿ ಓದುವ ತಮ್ಮ ಪಕ್ಕದ ಮನೆಯ ಗೆಳೆಯ ನನ್ನು ಕರೆದುಕೊಂಡು ತನಗೆ ಪರಿಚಿತವಾಗಿರುವ ಅಂಕಲ್ ನಿಂದ ಬೈಕ್ ಕೇಳಿ ಪಡೆದು ನಗರದಿಂದ ಹಳ್ಳಿಗೆ ಕರೆ ತರುತ್ತಿದ್ದ. ರಾತ್ರಿ ಹತ್ತರ ನಂತರ ಬರುವ ಮಗಳ ಸ್ಥಿತಿಯನ್ನು ನೋಡಿ " ಅಲ್ಲೇ ಟೌನ್ ನಲ್ಲಿ ಒಂದು ರೂಮೋ ಪಿ ಜಿ ನೋ ಮಾಡ್ಕಂಡಿರಮ್ಮ ರಾತ್ರಿ ಹೊತ್ತು ಇಂಗ್ ಬಂದ್ರೆ ಎಂಗಮ್ಮ" ಎಂದು ತಾಯಿ ಸಲಹೆ ನೀಡಿದ್ದರು. ಮಗಳು ಇದನ್ನು ನಯವಾಗಿಯೇ ನಿರಾಕರಿಸಿದ್ದಳು.
ತಂದೆಯ ಅನುಪಸ್ಥಿತಿಯಲ್ಲಿ ತಾಯಿ, ಮಗಳು, ಮಗ ಸಂತೋಷವಾಗಿ ಜೀವನ ಸಾಗಿಸುತ್ತಿದ್ದರು. ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ..
ಅಂದು ರಾತ್ರಿ ಒಂಭತ್ತು ಗಂಟೆಗೆ ಅಕ್ಕ ಪೋನ್ ಮಾಡಿದರು.ತಮ್ಮನು ಪಕ್ಕದ ಮನೆಯ ಅಂಕಲ್ ನಿಂದ ಬೈಕ್ ಪಡೆದು ತನ್ನ ಗೆಳೆಯನ ಜೊತೆಯಲ್ಲಿ ನಗರದ ಕಡೆ ಸ್ವಲ್ಪ ಜೋರಾಗಿಯೇ ಎಕ್ಸಲೇಟರ್ ಒತ್ತಿದ.
ಅತ್ತ ಅಕ್ಕ ಕಾಯುತ್ತಿದ್ದರು.ಈ ಮಧ್ಯ ರಾತ್ರಿ ಹತ್ತರ ಸಮಯದಲ್ಲಿ ಒಂಟಿ ಯುವತಿ ನಿಂತಿರುವುದನ್ನು ಕಂಡ ಪುಂಡರ ಗುಂಪು ಚುಡಾಯಿಸಲಾರಂಭಿಸಿದೆ.ಯುವತಿ ಅಲ್ಲಿಂದ ನಿಧಾನವಾಗಿ ಮುಂದೆ ಚಲಿಸಿದ್ದಾಳೆ. ಗಾಬರಿಯಿಂದ ತಮ್ಮನಿಗೆ ಮತ್ತೆ ಕರೆ ಮಾಡಿದಳು.ಕರೆ ಸ್ವೀಕರಿಸಿದ ತಮ್ಮ ಗಾಡಿಯ ಎಕ್ಸಲೇಟರ್ ಮತ್ತೂ ಒತ್ತಿದ. ಸ್ಪೀಡೋಮೀಟರ್ ಮುಳ್ಳು ಏರುತ್ತಾ ಬೈಕ್ ಮುಂದೆ ಚಲಿಸಿತು.ಆಗಲೇ ಅವಘಡ ಸಂಭವಿಸಿದ್ದು! ಕ್ಷಣಾರ್ಧದಲ್ಲಿ ಅತಿ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕರು ಆರು ಅಡಿ ಜಿಗಿದು ದೂರದಲ್ಲಿ ಬಿದ್ದರು. ರಸ್ತೆ ಅಕ್ಕ ಪಕ್ಕದ ಜನರು ಸೇರಿ ಮಕ್ಕಳ ಎತ್ತಿದ್ದರು.ಅಷ್ಟರಲ್ಲಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿತ್ತು. ಕಾರಿನ ಚಾಲಕನೂ ಗಾಯಗೊಂಡು ಆಸ್ಪತ್ರೆ ಸೇರಿದ.ಸ್ಥಳಕ್ಕೆ ಬಂದ ಪೋಲಿಸರು ಮಹಜರು ಮಾಡಿ ಬೈಕ್ ಮಾಲೀಕನನ್ನು ಪತ್ತೆ ಹಚ್ಚಿ ಅಪ್ರಾಪ್ತ ಬಾಲಕರಿಗೆ ಬೈಕ್ ಕೊಟ್ಟ ಅರೋಪದ ಮೇಲೆ ಬಂದಿಸಲಾಯಿತು.
ಸ್ಥಳದಲ್ಲಿದ್ದ ಜನ ಆ ಬಾಲಕರ ಸ್ಥಿತಿಯನ್ನು ಕಂಡು ಮರುಗುತ್ತಿದ್ದರು.ಕೆಲವರು ಅದು ಕಾರ್ ನ ಚಾಲಕನ ಅಜಾಗರೂಕತೆಯಿಂದ ಆದ ಅವಘಡ ಎಂದರೆ ಕೆಲವರು ಅಪ್ರಾಪ್ತ ಮಕ್ಕಳು ಬೈಕ್ ಯಾಕೆ ಓಡಿಸಬೇಕಿತ್ತು? ಎಂದು ಮಾತನಾಡುವ ವೇಳೆಯಲ್ಲಿ ಸ್ಥಳಕ್ಕೆ ಬಂದ ಸಹೋದರಿ ಈ ದುರ್ಘಟನೆಗೆ ನಾನೇ ಕಾರಣವೆಂದು ಗೋಳಾಡತೊಡಗಿದಳು.ಅಂಬುಲೆನ್ಸ್ ಶಬ್ದ ದೂರದಲ್ಲಿ ಕೇಳುತ್ತಿತ್ತು... ಪಾಪ ಈ ಹುಡುಗ್ರ ಸಾವಿಗೆ ಯಾರ್ ಹೊಣೆ ಎಂದು ಪ್ರಶ್ನಿಸುತ್ತಿರುವಾಗ ಮೂಲೆಯಲ್ಲಿ ಬೆಡ್ ಶೀಟ್ ಹೊದ್ದು ನಿಂತ ವಯೋವೃದ್ದರು ಹಣೆ ಬರಹಕ್ಕೆ ಯಾರು ಹೊಣೆನಪ್ಪ? ಎಂದಾಗ ನೀರವ ಮೌನ ಆವರಿಸಿತು..
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment