31 December 2023

ಸೋಮನಗೌಡರ ಮೋತಿ.


 





ಸೋಮನಗೌಡರ ಮೋತಿ.


ಕೆಲವು ಪ್ರಾಣಿಗಳು ಮಾನವರಿಗಿಂತಲೂ ಸೂಕ ಸಂವೇದನೆ ಹೊಂದಿರುತ್ತವೆ.ನಾಯಿಯಂತಹ ಪ್ರಾಣಿಗಳು ನಿಯತ್ತಿಗೆ ಹೆಸರುವಾಸಿ.ಅನ್ನ ಹಾಕಿದ ಮನೆಗೆ ಕನ್ನ ಹಾಕಲು ಬಂದ ಕಳ್ಳರ ಸಂಚನ್ನು ಬಯಲು ಮಾಡಿ ಮಾಲೀಕನ ಸಂಪತ್ತನ್ನು ರಕ್ಷಣೆ ಮಾಡಿದ ಮೋತಿಯ ಕಥೆ   ನಾವು ಪ್ರಾಥಮಿಕ ಹಂತದಲ್ಲಿ ಓದುವಾಗ ನಮ್ಮ ಪಠ್ಯ ವಾಗಿತ್ತು ಈ ಕಥೆಯನ್ನು ನೀವೂ ಓದಿರುತ್ತೀರಿ. ಮತ್ತೊಮ್ಮೆ ಜ್ಞಾಪಿಸಿಕೊಳ್ಳೋಣ.

ಸೋಮನಗೌಡರು ಊರಿಗೆಲ್ಲ ದೊಡ್ಡ ಶ್ರೀಮಂತರು. ಅವರು ಒಂದು ನಾಯಿಯನ್ನು ಸಾಕಿದ್ದರು. ಅದರ ಹೆಸರು ಮೋತಿ, ಮೋತಿ ಬಲು ನಂಬಿಗೆಯ ಪ್ರಾಣಿ. ಜಾಣತನಕ್ಕೆ ಅದು ಊರಿಗೆಲ್ಲ ಹೆಸರಾಗಿತ್ತು. ಗೌಡರ ಮನೆ ಊರ ಹೊರಗೆ ಇತ್ತು. ಪ್ರತಿ ರಾತ್ರಿಯೆಲ್ಲ ಎಚ್ಚರವಾಗಿದ್ದು ಮನೆ ಕಾಯುತ್ತಿತ್ತು. 


ಒಂದು ದಿನ ಆಪ್ತರ ಮದುವೆಗೆ ಗೌಡರ ಮನೆಯವರೆಲ್ಲ ನೆರೆಯೂರಿಗೆ ಹೋದರು. ಮೋತಿಯನ್ನು ಮನೆ ಕಾಯಲು ಬಿಟ್ಟು ಹೋದರು. ಗೌಡರ ಮನೆಯಲ್ಲಿ ಬಹಳ ಬಂಗಾರವಿತ್ತು, ಕಳ್ಳರು ಸಮಯ ಸಾಧಿಸುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಈ ಸಮಯ ನೋಡಿ ಗೌಡರ ಮನೆಗೆ ಹಿಂಬದಿಯಿಂದ ಕನ್ನ ಹಾಕಿದರು. ಕಳ್ಳರ ಗುಂಪಿನಲ್ಲಿ ಮೂರು ನಾಲ್ಕು ಜನರಿದ್ದರು. ಮೋತಿ ಅವರನ್ನು ನೋಡಿತು. ಆದರೆ ಬೊಗಳಲಿಲ್ಲ. ಎಲ್ಲವನ್ನು ನೋಡುತ್ತ ಮರೆಯಲ್ಲಿ ನಿಂತಿತು.

  

ಗೌಡರ ಬಂಗಾರ ಮತ್ತು ಹಣ ತುಂಬಿದ ಪೆಟ್ಟಿಗೆ ಭಾರವಾಗಿತ್ತು. ಕಳ್ಳರಿಗೆ ಅವಸರದಲ್ಲಿ ದೂರ ಒಯ್ಯಲು ಸಾಧ್ಯವಾಗಲಿಲ್ಲ. ಅವರಿಗೆ ಏನು ಮಾಡಬೇಕೆಂದು ತಿಳಿಯದಾಯಿತು. ಅಷ್ಟರಲ್ಲಿ ಬೆಳಗಾಗುತ್ತ ಬಂತು. ಬಹಳ ಯೋಚನೆ ಮಾಡಿದರು. ಕೊನೆಗೆ ಊರ ಹೊರಗಿನ ಗುಡ್ಡದ ಸಮೀಪ ಅದನ್ನು ಒಯ್ದರು. ಅಲ್ಲಿ ಅದನ್ನು ಹೂಳಿಟ್ಟರು. ಮೋತಿ ಗೊತ್ತಾಗದಂತೆ ಅವರನ್ನು ಹಿಂಬಾಲಿಸಿತು. ಹೂಳಿಟ್ಟ ಸ್ಥಳವನ್ನು ನೋಡಿತು. ಮರುದಿನ ಪೆಟ್ಟಿಗೆಯನ್ನು ಒಡೆದು ಕಳ್ಳರು ಅದನ್ನು ಹಂಚಿಕೊಳ್ಳುವವರಿದ್ದರು.


ಮದುವೆ ಮುಗಿಸಿ ಗೌಡರು ಮನೆಗೆ ಬಂದರು. ಮೋತಿ ಎಂದಿನಂತೆ ಒಡೆಯನನ್ನು ಸ್ವಾಗತಿಸಲಿಲ್ಲ. ಮೋತಿಯ ಜೋಲುಮೋರೆ ನೋಡಿ ಗೌಡರಿಗೆ ಗಾಬರಿಯಾಯಿತು, ಬಾಗಿಲು ತೆಗೆದು ಒಳಗೆ ಬಂದರು. ಹಿಂಬದಿಯ ಗೋಡೆ ಒಡೆದಿತ್ತು. ಪೆಟ್ಟಿಗೆ ಮಾಯವಾಗಿತ್ತು.


ಮೋತಿ ದೀನ ಸ್ವರದಿಂದ ಕೂಗಿತು. ಗೌಡರು ಹೊರಗೆ ಬಂದರು. ಮೋತಿ ಗೌಡರ ಧೋತರವನ್ನು ಹಿಡಿದೆಳೆಯಿತು. ಗೌಡರು ಮೋತಿಯ ಹಿಂದೆ ಹೋದರು. ಮೋತಿ ಪೆಟ್ಟಿಗೆ ಹುಗಿದ ಸ್ಥಳವನ್ನು ಕಾಲಿನಿಂದ ಕೆದರಿತು. ಗೌಡರಿಗೆ ಅನುಮಾನ ಬಂದಿತು. ತಮ್ಮ ಆಳುಗಳನ್ನು 

ಕರೆಯಿಸಿದರು. ಆ ಸ್ಥಳದಲ್ಲಿ ಅಗೆಯಿಸಿದರು. ಅಲ್ಲಿ ಅವರಿಗೆ ತಮ್ಮ ಪೆಟ್ಟಿಗೆಯು ಕಾಣಿಸಿತು. ಆಳುಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಗೌಡರ ಮನೆಗೆ ತಂದರು. ಗೌಡರು ಮೋತಿಯ ಜಾಣತನಕ್ಕೆ ಮೆಚ್ಚಿದರು. ಪ್ರೀತಿಯಿಂದ ಮೈಮೇಲೆ ಕೈಯಾಡಿಸಿದರು. ಮೋತಿಗೆ ಸಂತೋಷವಾಯಿತು.


ಇಂದಿನ ಪ್ರಸ್ತುತ ಸಮಾಜದಲ್ಲಿ ಬಹುತೇಕ ಕಡೆಯಲ್ಲಿ ಕಾಣಸಿಗುವ ಅಪ್ರಮಾಣಿಕತೆ, ಸೋಮಾರಿತನ, ಕಾರ್ಯಬದ್ದತೆಯ ಕೊರತೆ ಮುಂತಾದವುಗಳ ನೋಡಿ ಯಾಕೋ ಸೋಮನ ಗೌಡರ ಮೋತಿ ನೆ‌ನಪಾಯಿತು..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

1 comment:

ಕನ್ನಡನುಡಿಸಿರಿ said...

ಸೋಮನಗೌಡರ ಮೋತಿ ಸಮಯಪ್ರಜ್ಞೆ ಮತ್ತು ಕಾರ್ಯದಕ್ಷತೆ ಹಾಗೂ ಪ್ರಾಮಾಣಿಕತೆಯೇ ಮತ್ತಷ್ಟು ತನ್ನತನ ಮೆರೆದಿದೆ.