21 December 2023

ಅಕ್ಷರ ಸಂತ ಡಾ.ಕವಿತಾ ಕೃಷ್ಣ















 

*ಅಕ್ಷರ ಸಂತ ಡಾ.ಕವಿತಾ ಕೃಷ್ಣ*

ವಿದ್ಯಾ ವಾಚಸ್ಪತಿ ,ಸರ್ವೊತ್ತಮ ಆಚಾರ್ಯ ಡಾ. ಕವಿತಾ ಕೃಷ್ಣ ರವರು ನಮ್ಮೊಂದಿಗೆ ಇರುವ ಸರಳತೆಯ ಸಾಕಾರ ಮೂರ್ತಿ,  ಜ್ಞಾನದ ಆಗರ, ಪ್ರಖರ ವಾಗ್ಮಿ,  ಅಕ್ಷರ ಸಂತ.

ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರೆದ ಮಹಾನ್ ಜ್ಞಾನ ಶಿಖರ ಇವರು.ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಪಡೆದ ಇವರು ಆದರ್ಶ ಶಿಕ್ಷಕರು, ಕಾದಂಬರಿಕಾರರು, ಮಕ್ಕಳ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿದವರು,  ಕರ್ನಾಟಕ ಶಾಲಾ ಶಿಕ್ಷಣ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿದ್ದವರು, ಉತ್ತಮ ಸಂಘಟಕರು ,ಪ್ರಕಾಶಕರು, ಪ್ರಖರ ವಾಗ್ಮಿ, ಜನಾನುರಾಗಿ, ಯುವ ಬರಹಗಾರರ ಬೆನ್ತಟ್ಟುವ ಗುರುಗಳು. ಇನ್ನೂ ಇವರ ಬಗ್ಗೆ ಹೇಳುತ್ತಾ ಹೋದರೆ ಗ್ರಂಥಗಳನ್ನೇ ಬರೆಯಬೇಕಾದೀತು.

20ಕವನ ಸಂಕಲನಗಳು,20 ನಾಟಕಗಳು,10 ಅಭಿನಂದನಾ ಗ್ರಂಥಗಳು, 42 ಜೀವನ ಚರಿತ್ರೆಗಳು,25 ಮಕ್ಕಳ ಸಾಹಿತ್ಯ ಕೃತಿಗಳು,2 ಕಾದಂಬರಿಗಳು,14 ಮಹಾನ್ ಕೃತಿಗಳು, 26 ಸಂಪಾದನಾ ಕೃತಿಗಳು,13 ಶೈಕ್ಷಣಿಕ ಕೃತಿಗಳು,6 ಸಂಶೋಧನಾ ಕೃತಿಗಳು ಸೇರಿ ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ 30 ಕ್ಕು ಹೆಚ್ಚು ಕೃತಿಗಳು ಸದ್ಯದಲ್ಲೇ ಪ್ರಕಟಗೊಳ್ಳಲಿವೆ. ಇದನ್ನು ನೋಡಿದಾಗ ನಮಗೆ ಡಾ ಕವಿತಾ ಕೃಷ್ಣ ರವರು ಸಾಹಿತ್ಯದ ಮೇರು ಪರ್ವತ ಎಂದರೆ ಅತಿಶಯವೇನಲ್ಲ.

ಇವರ ಮಹಾನ್ ಕೃತಿಗಳಾದ ವಾಲ್ಮೀಕಿ ವಚನ ರಾಮಾಯಣ,  ಹಾಗೂ ವ್ಯಾಸ ಭಾರತ ಕೃತಿಗಳು ಹಲವಾರು ಮರುಮುದ್ರಣ ಕಂಡಿವೆ. ನಾಡಿನೆಲ್ಲೆಡೆ ಸಹೃದಯರು ಈ ಪುಸ್ತಕಗಳನ್ನು ಓದಿ ಪುನೀತರಾಗಿದ್ದಾರೆ.
ತಮ್ಮದೇ ಕವಿತಾ ಪ್ರಕಾಶನ ಆರಂಭಿಸಿ ಏಕಕಾಲಕ್ಕೆ ಅವರು ಬರೆದ 30 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ್ದು ಒಂದು ದಾಖಲೆಯಾಗಿ ಉಳಿದಿದೆ.ತಾನೂ ಬೆಳೆದು ಇತರರ ಬೆಳೆಸುವ ಉದಾತ್ತ ಗುಣದ ಇವರು ನಾಡಿನ ಉದಯೋನ್ಮುಖ ಬರಹಗಾರರಿಗೆ ತಮ್ಮ ಪ್ರಕಾಶನದ ವತಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಪುಸ್ತಕ ಪ್ರಕಾಶನ ಮಾಡಿಸಿದ ಪ್ರೋತ್ಸಾಹ ನೀಡುವ ಕವಿಸ್ನೇಹಿ ನಮ್ಮ ಕವಿತಾ ಕೃಷ್ಣ ರವರು.
ಸುಮಾರು ನಾಲ್ಕು ನೂರು ಕೃತಿಗಳಿಗೆ ಅವರು ಮುನ್ನುಡಿ ಬೆನ್ನುಡಿ ಬರೆದಿರುವುದು  ಸಾಹಿತಿಗಳಿಗೆ ಅವರು  ಬೆಂಬಲ ನೀಡುತ್ತಿರುವುದಕ್ಕೆ  ಮತ್ತೊಂದು  ಉದಾಹರಣೆ.

ಮನೆಯನ್ನೇ ಸಾಹಿತ್ಯ ಮಂದಿರವನ್ನಾಗಿ ಪರಿವರ್ತಿಸಿರುವ ಅವರು ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ನುಡಿಸೇವೆಗೈದ ಇವರು ವಿದೇಶಗಳಲ್ಲೂ ಕನ್ನಡ ಪಸರಿಸುವ ಕಾಯಕ ಮಾಡಿದ್ದಾರೆ.ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಕನ್ನಡದ ಕಟ್ಟಾಳು ನಮ್ಮ ಡಾ. ಕವಿತಾ ಕೃಷ್ಣ ರವರು.

ತಮ್ಮ ಎಪ್ಪತೈದನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾಡಿನ ಇಬ್ಬರು ಮಹಾನ್ ಸ್ವಾಮೀಜಿಗಳು ಅವರನ್ನು ಆಶೀರ್ವದಿಸಿದ ಕ್ಷಣಗಳನ್ನು ಅವರು ಸಂತಸದಿಂದ ನೆನೆಯುತ್ತಾರೆ. ನಡೆದಾಡುವ ದೈವ ಶ್ರೀ ಶ್ರೀ  ಡಾ. ಶಿವಕುಮಾರ ಸ್ವಾಮೀಜಿಯವರು,ಜ್ಞಾನ ದಾಸೋಹಿ ಚುಂಚನಗಿರಿ ಕ್ಷೇತ್ರದ ಶ್ರೀ ಡಾ. ಬಾಲ ಗಂಗಾಧರನಾಥ ಸ್ವಾಮೀಜಿಯವರು ಅಂದು ಇವರನ್ನು ಆಶೀರ್ವದಿಸಿದ್ದರು.
ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು  ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ನೀಡಿ ಗೌರವಿಸಿದೆ. ಅವರ ಸಮ್ಮೇಳನದ ಭಾಷಣವನ್ನು ಈಗಲೂ ಹಲವರು ಉಲ್ಲೇಖ ಮಾಡುವುದುಂಟು.

ಇವರ ಸಾಹಿತ್ಯ ಮತ್ತು  ಸಂಘಟನಾ ಶಕ್ತಿ ಗುರುತಿಸಿ ದೇಶ ವಿದೇಶಗಳಲ್ಲಿ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ.

ಅವುಗಳಲ್ಲಿ ಪ್ರಮುಖವಾದ
ನವದೆಹಲಿಯ ಭಾರತೀಯ ವಿದ್ಯಾಭವನ ನೀಡುವ ಸರ್ವೋತ್ತಮ ಆಚಾರ್ಯ ಪುರಸ್ಕಾರವು ಬಹಳ ಅತ್ಯನ್ನತವಾದುದು. ಡಾ.ರಾಧಾಕೃಷ್ಣನ್ ರಂತವರಿಗೆ ಇಂತಹ ಪುರಸ್ಕಾರ ನೀಡಲಾಗುತ್ತು ಎಂಬುದನ್ನು ಸ್ಮರಿಸಿಕೊಳ್ಳಬಹುದು. ದಕ್ಷಿಣ ಭಾರತದ ಕೆಲವೇ ಕೆಲವರಿಗೆ ಇಂತಹ ಪುರಸ್ಕಾರ ಲಭಿಸಿರುವುದು. 
ಇದರ ಜೊತೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಇವರ ಸಾಹಿತ್ಯ ಸೇವೆಯನ್ನು ಗುರ್ತಿಸಿ ಸನ್ಮಾನಿಸಿವೆ. ಇಂತಹ ಮಹಾನ್ ಸಾಹಿತಿ ನಮ್ಮ ಕಾಲಘಟ್ಟದಲ್ಲಿ ಇದ್ದು ನಮಗೆ ಸಲಹೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬುದೇ ನಮಗೆ ಸಂತಸದ ವಿಷಯ.  ಇಳಿ ವಯಸ್ಸಿನಲ್ಲೂ ಅವರದು ಯುವಕನ ಚೈತನ್ಯ. ಇಂತಹ ಮಹಾನ್ ಚೇತನ ನಮ್ಮೊಂದಿಗೆ ನೂರ್ಕಾಲ ಬಾಳಲಿ ಎಂದು ಎಲ್ಲಾ ಸಾಹಿತ್ಯಾಭಿಮಾನಿಗಳ ಪರವಾಗಿ ದೇವರಲ್ಲಿ ಬೇಡುವೆ....

*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
9900925529

No comments: