24 April 2023


 

*ವೀರಲೋಕ ಬುಕ್ಸ್ ನ ರಾಧಿಕಾ ಮೇಡಂ ರವರು ನನ್ನ ಕ್ಯಾತ್ಸಂದ್ರ ಟು ಕ್ಯಾತನಮಕ್ಕಿ ಪುಸ್ತಕದ ಬಗ್ಗೆ ಹೀಗೆ ಹೇಳಿದ್ದಾರೆ*

ಸಿಹಿಜೀವಿ ಎಂದೇ ಪರಿಚಿತವಾಗಿರುವ ಸಿ ಜಿ ವೆಂಕಟೇಶ್ವರ ರವರು ವೃತ್ತಿಯಲ್ಲಿ ಶಿಕ್ಷಕರು . ಇಪ್ಪತ್ಮೂರು ವರ್ಷಗಳ ಬೋಧನಾ ಅನುಭವಿರುವ ಇವರು ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಹಾಡುವುದು, ಅಭಿನಯ ಗಾಯನ, ಲೇಖನ ಹೀಗೆ ಬಹುಮುಖ ಪ್ರತಿಭೆ ಹೊಂದಿರುವ ಇವರ ಬರಹಗಳು ನಾಡಿನ ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಕಥೆ,ಕವನ,  ಕಾದಂಬರಿ, ಹನಿಗವನ, ವಿಮರ್ಶೆ, ಪರಾಮರ್ಶನ ಗ್ರಂಥ, ಮಕ್ಕಳ ಕವಿತೆಗಳು, ಹೀಗೆ ಹದಿನಾಲ್ಕು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ಶ್ರೀಯುತರು ಈಗ ಒಂದು ಪ್ರವಾಸ ಕಥನವನ್ನು ನಮ್ಮ ಕೈಗಿತ್ತಿದ್ದಾರೆ. ಅದೇ" ಕ್ಯಾತ್ಸಂದ್ರ ಟು ಕ್ಯಾತನಮಕ್ಕಿ " ಪುಸ್ತಕದ ಶೀರ್ಷಿಕೆಯೇ ನಮ್ಮಲ್ಲಿ ಕುತೂಹಲ ಉಂಟು ಮಾಡುತ್ತದೆ.
ಈ ಪುಸ್ತಕದಲ್ಲಿ ಒಟ್ಟು ಹದಿನಾರು ಪ್ರವಾಸ ಕಥನಗಳಿವೆ ಒಂದಕ್ಕಿಂತ ಒಂದು ಉತ್ತಮ ಲೇಖನಗಳನ್ನು ನೀವು ಓದಿಯೇ ಸವಿಯಬೇಕು.
ರಾಣಿಝರಿ,ಮಣ್ಣೆ,ಸೂರ್ಯ ದೇವಾಲಯ, ಮಾರಿಕಣಿವೆ, ಹಿಕ್ಕಲ್ಲಪ್ಪನ ಬೆಟ್ಟ, ಮಂದರಗಿರಿ, ವಿದುರಾಶ್ವತ್ಥ, ನಾಮದಚಿಲುಮೆ,
ದುರ್ಗದ ವೈಭವ  ಹೀಗೆ ನಾವು ನೋಡಿರುವ ಹಾಗೂ ನೋಡಿರದ ಸ್ಥಳಗಳ ಪ್ರವಾಸದ ಅನುಭವವನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಜೊತೆಗೆ ಆಕರ್ಷಕ ಪೋಟೋಗಳು ಸಹ ಗಮನ ಸೆಳೆಯುತ್ತವೆ.  ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಸಿಹಿಜೀವಿಯವರು ದೇಶಸುತ್ತಿದ ಅನುಭವವನ್ನು ತಮ್ಮ ಕೋಶದಲ್ಲಿ ದಾಖಲಿಸಿದ್ದಾರೆ ವಾಲಾಜಿ ಪ್ರಕಾಶನದಿಂದ ಈ ಪುಸ್ತಕ ಪ್ರಕಟವಾಗಿದ್ದು ಮೂರು ಇಡ್ಲಿ ಒಂದು ವಡೆಗೆ ಕೊಡುವ ಕೈಗೆಟುಕುವ ದರದಲ್ಲಿ ಪುಸ್ತಕ ಲಭ್ಯವಿದೆ. ಕೊಂಡು ಓದಿ..ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ...
ಪುಸ್ತಕದ ಬೆಲೆ 95₹  ಅಂಚೆ ವೆಚ್ಚ ಉಚಿತ...
ಪುಸ್ತಕ ಖರೀದಿಸಲು 9900925529
ಈ ನಂಬರ್ ಗೆ ಪೊನ್ ಪೇ ಅಥವಾ ಗೂಗಲ್ ಪೇ ಮಾಡಿ ವಿಳಾಸ ಕಳಿಸಿ..

ರಾಧಿಕಾ
ವೀರಲೋಕ ಬುಕ್ಸ್
ಬೆಂಗಳೂರು.

ವೀರಲೋಕ... ಪುಸ್ತಕಪ್ರೀತಿ...ಪುಸ್ತಕ ಬಿಡುಗಡೆ....


 

#ಪುಸ್ತಕ_ಲೋಕಾರ್ಪಣೆ
#BBC(BOOKS BERGER coffee)
#VEERALOKA

#ವಾಲಾಜಿ_ಪ್ರಕಾಶನ

ಮೊದಲಿಗೆ ಓದುಗ ದೊರೆಗಳಿಗೆ ನಮನಗಳು...
ಏನೇಳಲಿ ಈ ಪುಸ್ತಕ ಪ್ರೀತಿಗೆ...
ನಾನ್ಯಾರೋ ಸರ್ಜಾಪುರದ ಅಪ್ಪಟ ಕನ್ನಡ ಮನಗಳಾರೋ ಇಂದು ವೀರಲೋಕ ದ ಮೂಲಕ ಶಶಿಕಾಂತ್ ರವರ ಪರಿಚಯವಾಯಿತು...
ಅವರ ಗೆಳೆಯರ ಬಳಗ ನನ್ನ ಹೊಸ ಕೃತಿ #ಕ್ಯಾತ್ಸಂದ್ರ_ಟು_ಕ್ಯಾತನಮಕ್ಕಿ
ಬಿಡುಗಡೆ ಗೆ ಸಾಕ್ಷಿಯಾದರೂ ಅಷ್ಟೇ ಅಲ್ಲ ಅವರೆಲ್ಲರೂ ನನ್ನ ಇಂದು ಬಿಡುಗಡೆಯಾದ ಪುಸ್ತಕವನ್ನು ಹಣ ಕೊಟ್ಟು ಖರೀದಿ ಮಾಡಿದರು ವಿಶ್ವ ಪುಸ್ತಕ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು...

ಪುಷ್ಪ ಸರ್ಜಾಪುರ..
ಸುನಿತಾ ಸರ್ಜಾಪುರ..
ಚಂದ್ರಶೇಖರ ಸರ್ಜಾಪುರ
ಸಾಕರಾಜು  ತಾವರೆಕರೆ..
ಶ್ರೀನಿವಾಸ್ ಸಂಪಂಗೆರೆ...
ಸಂತೋಷ  ರವರು ತಮಿಳುನಾಡು...  ಇಂದು ಭೇಟಿಯಾಗಿ ಎಷ್ಟೋ ವರ್ಷಗಳ ಪರಿಚಯವೇನೋ ಎಂಬಂತೆ ಮಾತನಾಡಿಸಿ  ಇವರು ನನ್ನ ಹತ್ತಕ್ಕೂ ಹೆಚ್ಚು ಕೃತಿಗಳ ಖರೀದಿಸಿದರು.. ಇದೇ ಪುಸ್ತಕ ಬಂಧ..ಸಂಬಂಧ ನಿಜಕ್ಕೂ ಇಂದು ನನಗೆ ನನ್ನ ಕೃತಿ ಬಿಡುಗಡೆಯ ಆನಂದಕ್ಕಿಂತ ಆ ಕನ್ನಡದ ಮನಗಳ ಅಕ್ಷರ ಪ್ರೀತಿ ಮನಗೆದ್ದಿತು. ಓದುಗ ದೊರೆಗಳೆ ನಿಮಗೆ ನಮನಗಳು...

ಇನ್ನೂ ಇಂದಿನ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ರಾಧಿಕಾ ಮೇಡಂ ರವರಿಗೆ ಧನ್ಯವಾದಗಳನ್ನು ಹೇಳದೇ ಇರಲಾರೆ.
ಬಿಬಿಸಿ ವೀರಲೋಕ ಮೇನೇಜರ್ ಆದ ಹರ್ಷಿತ ಮೇಡಂ ರವರಿಗೆ ಧನ್ಯವಾದಗಳು.
ಪುಸ್ತಕ ಲೋಕಾರ್ಪಣೆ ಮಾಡಿ ನನ್ನ ಕೃತಿಯ ಬಗ್ಗೆ ಮೆಚ್ಚುಗೆ ಸೂಚಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದರು ಹಾಗೂ ಆತ್ಮೀಯರಾದ ಕೋಟೆ ಕುಮಾರ್ ರವರಿಗೆ ನಮನ ಸಲ್ಲಿಸಲೇಬೇಕು.ಬೇರೊಂದು ಕಾರ್ಯಕ್ರಮದ ನಡುವೆಯೂ ನಮ್ಮ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಹಾಜರಾಗಿ ನನ್ನ ಕೃತಿ ವಿಮರ್ಶೆ ಮಾಡಿ ಹಣ ಕೊಟ್ಟು ಕೊಂಡು ಪುಸ್ತಕ ಪ್ರೀತಿ ಮೆರೆದ  ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು, ಹಿರಿಯ ಕವಿಗಳು,ಲೇಖಕರು ಕಾದಂಬರಿಕಾರರಾ ಡಾ. ಸಿದ್ದಗಂಗಯ್ಯ ಹೊಲತಾಳರಿಗೆ ಧನ್ಯವಾದ ಹೇಳದೇ ಇರಲಾರೆ.
ಸದಾ ನನ್ನ ಪುಸ್ತಕಗಳ ಬಗ್ಗೆ ಮೆಚ್ಚುಗೆ ಸೂಚಿಸುವ ಆತ್ಮೀಯರು ಲೇಖಕರು ಆದ ಪ್ರೊಫೆಸರ್ ವಿ ಎಲ್ ಪ್ರಕಾಶ್ ರವರಿಗೆ ಧನ್ಯವಾದಗಳನ್ನು ಅರ್ಪಿಸುವೆ..
ನನ್ನ ಪುಸ್ತಕ ಪ್ರಕಾಶನದಲ್ಲಿ ಸಲಹೆ ಮಾರ್ಗದರ್ಶನ ಮಾಡುವ ಲೇಖಕರು ಹಾಗೂ ಪ್ರಕಾಶಕರಾದ ಎಂ ವಿ ಶಂಕರಾನಂದ ರವರಿಗೆ ಧನ್ಯವಾದಗಳು..
ಇದುವರೆಗೆ ನನ್ನ ಎಲ್ಲಾ ಪುಸ್ತಕ ಓದಿ ಹರಸಿ ಹಾರೈಸಿದ ಎಲ್ಲಾ ಓದುಗ ಬಂಧಗಳಿಗೆ ನನ್ನ ಕುಟುಂಬ ವರ್ಗಕ್ಕೆ ನಮನಗಳು..
ನಿಮಗೂ ಕ್ಯಾತ್ಸಂದ್ರ ಟು ಕ್ಯಾತನಮಕ್ಕಿ ಪ್ರವಾಸ ಕಥನ ಬೇಕಿದ್ದರೆ
9900925529
ಈ ನಂಬರ್ ಗೆ 95 ರೂ ಪಾವತಿಸಿ ವಿಳಾಸ ಕಳಿಸಿ....
ಮತ್ತೊಮ್ಮೆ
ಪುಸ್ತಕದಿನ
ಅಕ್ಷಯ ತೃತೀಯ
ಬಸವಜಯಂತಿಯ ಶುಭಾಶಯಗಳು
ಶುಭ ರಾತ್ರಿ

22 April 2023

ನಂಬರ್ ಒನ್ ...

 


ಜನಸಂಖ್ಯೆ ಅಷ್ಟೇ ಅಲ್ಲ ಆರ್ಥಿಕವಾಗಿಯೂ ನಂಬರ್ ಒನ್ ಆಗಬಹುದು.


ಸುಮಾರು ಆರು ತಿಂಗಳಿನಿಂದ ಮಾಧ್ಯಮಗಳಲ್ಲಿ ಭಾರತ ಜನಸಂಖ್ಯೆಯಲ್ಲಿ ನಂಬರ್ ಒನ್ ಆಗಲಿದೆ ಎಂಬ ವರದಿಗಳು ಹರಿದಾಡುತ್ತಿದ್ದವು .ಈಗ ಅಧಿಕೃತವಾಗಿ ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯಾ ಅಂದಾಜು ವರದಿ ಖಚಿತಪಡಿಸಿದೆ.ನಾವೇ ನಂಬರ್ ಒನ್ ಎಂದು!


ಈ ವರ್ಷದ ಜೂನ್ ವೇಳೆಗೆ 

ಭಾರತ 142.86 ಕೋಟಿ ಜನಸಂಖ್ಯೆ ಹೊಂದಲಿದೆ  ಎಂದು ವಿಶ್ವಸಂಸ್ಥೆ ಅಂಕಿಅಂಶಗಳು ಹೇಳುತ್ತಿವೆ. ಇದುವರೆಗೂ ಮೊದಲ ಸ್ಥಾನದಲ್ಲಿದ್ದ ಚೀನಾ ಜನಸಂಖ್ಯೆ 142.57 ಕೋಟಿಯಷ್ಟಾಗಲಿದೆ. ಎಂದು ತಿಳಿದುಬಂದಿದೆ. 

ಕೋವಿಡ್ ಜನಕನೆಂಬ ಕುಖ್ಯಾತಿಗೆ ಕಾರಣವಾದ ಚೀನಾದಲ್ಲಿ ಮಾಡಿದ್ದುಣ್ಣೋ ಮಹರಾಯ ಎಂಬಂತೆ ಕೋಟ್ಯಂತರ ಜನ ಅಸುನೀಗಿದರು. ಅದರ ಪರಿಣಾಮವಾಗಿ ಜನಸಂಖ್ಯೆ ಇಳಿಯುತ್ತಲೇ ಸಾಗಿತು.ಇದನ್ನು ಮನಗಂಡ ಚೀನಾ ತನ್ನ ಜನಸಂಖ್ಯೆಯ ಒಂದು ಮಗುವಿನ ಪಾಲಿಸಿಗೆ ತಿದ್ದುಪಡಿ ತಂದು ಜನಸಂಖ್ಯೆ ಹೆಚ್ವಳ ಕ್ರಮಗಳನ್ನು ಘೋಷಿಸಿತು .ಮದುವೆ ಹನಿಮೂನ್ ಗೆ ವಿಶೇಷ ಪ್ಯಾಕೇಜ್ ಘೋಷಿಸಿತು. ಇವ್ಯಾವೂ ಇನ್ನೂ ಫಲಕೊಟ್ಟಿಲ್ಲ .ಭಾರತ ಮಾತ್ರ ಜನಸಂಖ್ಯೆಯಲ್ಲಿ ನಂಬರ್ ಒನ್ ಆಗಿರುವುದು ಡ್ರಾಗನ್ ನ ಹೊಟ್ಟೆ ಉರಿಗೆ ಕಾರಣವಾಗಿದೆ.ಗಾಯದ ಮೇಲೆ ಬರೆ ಎಳೆದಂತೆ ಚೀನಾದಲ್ಲಿ ಮುದುಕರ ಸಂಖ್ಯೆ ಹೆಚ್ಚಾಗಿ ಯುವಕರ ಸಂಖ್ಯೆ ಕಡಿಮೆಯಾಗಿ  ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಕ್ಷೀಣಿಸಿ, ಉತ್ಪಾದಕತೆ ಕಡಿಮೆಯಾಗಿ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ಚೀನಾದಿಂದ ಕಾಲ್ತೆಗೆದು  ಬೇರೆ ದೇಶಗಳ ಕಡೆ ಮುಖಮಾಡಿವೆ .

ಇದೇ ಸಂದರ್ಭದಲ್ಲಿ 

ಭಾರತದಲ್ಲಿರುವ ಜನಸಂಖ್ಯೆಯಲ್ಲಿ ಕಾಲು ಭಾಗ 14 ವರ್ಷದ ಒಳಗಿವರಾಗಿದ್ದಾರೆ. ಇನ್ನು ಶೇಕಡಾ 68 ರಷ್ಟು ಮಂದಿ 15 ರಿಂದ 64 ವಯಸ್ಸಿನ ನಡುವಿನವರು ಎಂದು ತಿಳಿದುಬಂದಿದೆ. ಶೇಕಡಾ 7ರಷ್ಟು ಜನ ಮಾತ್ರ 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಭಾರತದಲ್ಲಿ ಯುವ ಸಮುದಾಯ ಹೆಚ್ಚಿದೆ. ಆದ್ರೆ ಚೀನಾದಲ್ಲಿ ವಯಸ್ಸಾದವರು ಹೆಚ್ಚಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.


ಚೀನಾದಲ್ಲಿ ಮಕ್ಕಳ ಜನನ ಪ್ರಮಾಣ ಸಾಕಷ್ಟು ಕುಸಿತ ಕಂಡಿರುವುದರಿಂದ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ತಿಳಿದುಬಂದಿದೆ.

ಜನಸಂಖ್ಯೆ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ದೊಡ್ಡ ಪೈಪೋಟಿ ಇತ್ತು. ಕೆಲವು ವರ್ಷಗಳ ಹಿಂದೆಯೇ ಭಾರತ ಜನಸಂಖ್ಯೆ ವಿಚಾರದಲ್ಲಿ ಚೀನಾವನ್ನ ಹಿಂದಿಕ್ಕುವ ನಿರೀಕ್ಷೆ ಮೂಡಿತ್ತು. ಆದ್ರೆ ಅದು ಈಗ ಅಧಿಕೃತವಾಗಿ ಸಾಧ್ಯವಾಗಿದ್ದು, ಚೀನಾ ಸೋತು ಹೋಗಿದೆ. ಮೊದಲೇ ಜನಸಂಖ್ಯೆ ಕುಸಿತದ ಭೀತಿಯಲ್ಲಿರುವ ಡ್ರ್ಯಾಗನ್ ರಾಷ್ಟ್ರ, ಈ ಸುದ್ದಿಯಿಂದ ಮತ್ತಷ್ಟು ಭಯದಲ್ಲಿ ಮುಳುಗಿದೆ. 2020ರ ನಂತರ ಅಂದರೆ ಕೊರೊನಾ ಅಪ್ಪಳಿಸಿದ ಬಳಿಕ ಚೀನಾ ಜನಸಂಖ್ಯೆ ವಿಚಾರದಲ್ಲಿ ಭಾರಿ ಕುಸಿತ ದಾಖಲಿಸುತ್ತಾ, ಅಪಾಯಕ್ಕೆ ಸಿಲುಕಿದೆ. 

ಚೀನಾದಲ್ಲಿ ಹೀಗೆ ದಿಢೀರ್ ಇಷ್ಟು ಪ್ರಮಾಣದಲ್ಲಿ ಜನಸಂಖ್ಯೆ ಕುಸಿತ ಕಾಣಲು ಕಾರಣ ತಾನೇ ಕೈಗೊಂಡಿದ್ದ ನಿರ್ಧಾರ. ಚೀನಾದಲ್ಲಿ ಒಂದು ಜೋಡಿಗೆ ಒಂದೇ ಮಗು ಎಂಬ ನಿಯಮ ಇತ್ತು. ಹೀಗಾಗಿ ಹಲವು ದಶಕಗಳ ಕಾಲ ಇಲ್ಲಿ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನಿಯಮ ಇತ್ತು. ಈ ಕಾರಣಕ್ಕೆ ಭಾರಿ ಪ್ರಮಾಣದಲ್ಲಿ ಜನಸಂಖ್ಯೆ ಕುಸಿತ ದಾಖಲಿಸಿತ್ತು ಚೀನಾ. ಈ ಸತ್ಯ ಅರ್ಥವಾಗಿದ್ದೇ ತಡ ಎಚ್ಚೆತ್ತ ಚೀನಾ, ಕೆಲವು ವರ್ಷಗಳ ಹಿಂದೆ ತನ್ನ 'ಒಂದು ಮಗು' ನೀತಿ ಬದಲಿಸಿ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಮುಂದಾಗಿತ್ತು.

ಅದ್ಯಾವುದೂ ಫಲ ಕೊಟ್ಟಂತೆ ಕಾಣುತ್ತಿಲ್ಲ. ವಿಶ್ವ ಸಂಸ್ಥೆಯ ಅಧಿಕೃತವಾದ ಮಾಹಿತಿ ಹೊರಬೀಳುತ್ತಿದ್ದಂತೆ ಚೀನಾ ಬೇಸರದಿಂದಲೇ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಹೆಚ್ಚಳದ ನಂಬರ್ ಮುಖ್ಯ ಅಲ್ಲ ಗುಣಮಟ್ಟ ಮುಖ್ಯ ಎಂದು ಉಳಿ ದ್ರಾಕ್ಷಿ ಕಥೆ ಹೇಳಿದೆ.

ಆದರೂ ಚೀನಾದ ವಾದವನ್ನು ಸಂಪೂರ್ಣವಾಗಿ ತೆಗದುಹಾಕುವಂತಿಲ್ಲ. ನಾವು ಚಿಕ್ಕವರಿದ್ದಾಗ ಓದಿದಂತೆ ನಮ್ಮೆಲ್ಲಾ ಸಮಸ್ಯೆಗಳಿಗೆ ಜನಸಂಖ್ಯೆಯೇ ಕಾರಣ ಎಂಬ ಅರ್ಧ ಸತ್ಯ ಈಗ ನಿಚ್ಚಳವಾಗಿದೆ. ಜನಸಂಖ್ಯೆಯನ್ನು ಉತ್ತಮ ಮಾನವ ಸಂಪನ್ಮೂಲ ಮಾಡಲು ಆ ದೇಶಗಳಲ್ಲಿ ಇರುವ ಶಿಕ್ಷಣ, ಆರೋಗ್ಯ ,ಜನರ ಜೀವನಮಟ್ಟ, ಸರ್ಕಾರದ ನೀತಿಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹೆಮ್ಮೆಯನ್ನು ಎತ್ತಿ ಹಿಡಿದು ಮಾನವ ಸಂಪನ್ಮೂಲ ಸೃಜನೆ ಮಾಡಲು ಪಣ ತೊಡಬೇಕಿದೆ ತನ್ಮೂಲಕ ಆರ್ಥಿಕವಾಗಿಯೂ ನಾವು ನಂಬರ್ ಒನ್ ಆಗಲು ಪ್ರಯತ್ನ ಪಟ್ಟರೆ ಮುಂದೊಂದು ದಿನ ಭಾರತ ಅಭಿವೃದ್ಧಿಶೀಲ ದೇಶಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು. ಶಿಕ್ಷಕರು




18 April 2023

ರಾಮ ಮನೋಹರ ಲೋಹಿಯಾ..


 


ರಾಮ ಮನೋಹರ ಲೋಹಿಯಾ...

ಭಾನುವಾರ ತುಮಕೂರಿನ ಬಾಯರ್ಸ್ ಕ್ಯಾಂಟೀನ್ ನಲ್ಲಿ ಕಾಫಿ ಕುಡಿದು ನನ್ನ ಇತ್ತೀಚಿನ ಪುಸ್ತಕ "ಕ್ಯಾತ್ಸಂದ್ರ ಟು ಕ್ಯಾತನಮಕ್ಕಿ"ಯನ್ನು  ಲೇಖಕರು ,ಚಿಂತಕರು,ನಿವೃತ್ತ ಪ್ರೊಫೆಸರ್ ಹಾಗೂ ಆತ್ಮೀಯರಾದ ಎಂ ಜಿ ಸಿ ಸರ್ ರವರಿಗೆ ನೀಡಿ ಓದಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಕೇಳಿದೆ.ನನ್ನ ಪುಸ್ತಕವನ್ನು ಅವರ ಕೈಚೀಲದಲ್ಲಿ ಇಟ್ಟುಕೊಂಡು ಚೀಲದಿಂದ ಮತ್ತೊಂದು ಪುಸ್ತಕ ನನಗೆ ನೀಡಿ ಓದಲು ಹೇಳಿದರು.
ಆ ಪುಸ್ತಕವೇ ಡಿ ಎಸ್ ನಾಗಭೂಷಣ ರವರ "ರಾಮ ಮನೋಹರ ಲೋಹಿಯಾ "
ಕಾರ್ ಸರ್ವಿಸ್ ಗೆ ಬಿಟ್ಟು ಓದಲು ಕುಳಿತ ನನಗೆ ಪುಸ್ತಕ ಓದಿ ಮುಗಿಸಿದಾಗ ಕಾರ್ ಸರ್ವೀಸ್ ಮುಗಿದಿತ್ತು. ಕಾರ್ ಹೊಸದಾಗಿ ಕಾಣುತ್ತಿತ್ತು.  ನನ್ನ ಮನದಲ್ಲಿ ಹೊಸ ಆಲೋಚನೆಗಳು ಮತ್ತು ಚಿಂತನೆಗಳು  ಹರಿದಾಡಲಾರಂಭಿಸಿದವು.
ಪುಸ್ತಕ ಪೂರ್ಣ ಓದಿದ ಬಳಿಕ ಲೋಹಿಯಾರವರ  ಬಗ್ಗೆ ಇನ್ನೂ ಗೌರವ ಹೆಚ್ಚಾಯಿತು.

ಬರೀ ಮಜಾ ಮಾಡುವುದೇ ಜೀವನದ ಗುರಿಯೆಂಬ ಮಜಾವಾದಿಗಳ ,ಚಾರ್ವಾಕ ಬುದ್ಧಿಯ ಪೀಳಿಗೆ ಕಂಡಾಗ ಸಮಾನತೆಗಿಂತ ಸಮತೆ ಬೇಕು ಎಂದು ಸಾರಿದ ಲೋಹಿಯಾರವರ ಚಿಂತನೆಗಳು ಇಂದು ಸಮಾಜಕ್ಕೆ ಅತಿ ತುರ್ತಾದ ಅಗತ್ಯ ಎನಿಸಿತು.

ನಾಲ್ಕು ಅಧ್ಯಾಯ ಹೊಂದಿರುವ ಈ ಪುಸ್ತಕ, ರಾಮಮನೋಹರ ಲೋಹಿಯಾ,ಲೋಹಿಯಾ ಸಮಾಜವಾದ: ಮುಂದೇನು?, ಹೊಸ ಸಮಾಜವಾದ ಇಂದಿನ ಅಗತ್ಯ: ಒಂದು ಸಂದರ್ಶನ, ರಾಮಮನೋಹರ ಲೋಹಿಯಾ - ಬದುಕಿನ ಘಟ್ಟಗಳನ್ನು ಒಳಗೊಂಡಿದೆ.
ಅರವತ್ನಾಲ್ಕು ಪುಟಗಳ ಕಿರು ಕೈದೀವಿಗೆ ಓದುವಾಗ ಬೇಡವೆಂದರೂ ಇಂದಿನ ರಾಜಕೀಯ ,ಸಾಮಾಜಿಕ ಆರ್ಥಿಕ ಸಮಸ್ಯೆಗಳು ಮತ್ತು ಅವುಗಳಿಗೆ ಲೋಹಿಯಾರವರು ಸೂಚಿಸಿದ  ಪರಿಹಾರಗಳು  ನಮ್ಮನ್ನು  ಕಾಡುತ್ತವೆ .

ಪ್ರಸ್ತುತ ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಅಭ್ಯರ್ಥಿಗಳು ಘೋಷಿಸಿಕೊಂಡ ಆದಾಯ ಸಾವಿರಾರು ಕೋಟಿಗಳು! ಅದೇ ವೇಳೆಯಲ್ಲಿ ಹಸಿವೆಯಿಂದ ಬಡತನದಲ್ಲಿ ನರಳುವ ಜನರ ಬಗ್ಗೆಯೂ ನಾವು ನೋಡುತ್ತೇವೆ. ಈ ಚಿತ್ರಣವನ್ನು ಅರವತ್ತು ವರ್ಷಗಳ ಹಿಂದೆ ಕಂಡ ಲೋಹಿಯಾರವರು
ಕುಟುಂಬದ ಆದಾಯ ಮತ್ತು ವೆಚ್ಚಗಳ ಮೇಲೆ ಕಾನೂನುಬದ್ಧ ಮಿತಿ ಇರಬೇಕೆಂದು ಸೂಚಿಸಿದರು. ಈ ಮಾತನ್ನು ಹೇಳಿದ 60ರ ದಶಕದಲ್ಲಿ ಅವರು ಈ ಮಿತಿ ತಿಂಗಳಿಗೆ 1500 ರೂಪಾಯಿಗಳಿರಬೇಕೆಂದು ಸಲಹೆ ಮಾಡಿದ್ದರು. ಹಾಗೇ ಸಮಾನತೆಯನ್ನು ಗುರಿಯಾಗುಳ್ಳ ಯಾವುದೇ ಒಂದು ಸಮಾಜದಲ್ಲಿ ಅಸಮಾನತೆಯ ಪ್ರಮಾಣ 1:10 ಅನುಪಾತವನ್ನು ಮೀರದಂತೆ ಆರ್ಥಿಕತೆಯನ್ನು ನಿರ್ವಹಿಸಬೇಕೆಂಬುದು ಅವರ ಇನ್ನೊಂದು ಸಲಹೆಯಾಗಿತ್ತು. ಎಂತಹ ಅದ್ಬುತ ಸಲಹೆ ಲೋಹಿಯಾರವರಲ್ಲಿ ಒಬ್ಬ ದಕ್ಷ ಆಡಳಿತಗಾರ ಮತ್ತು ಅರ್ಥಶಾಸ್ತ್ರಜ್ಞ ಇದ್ದ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?

ನಾನು ಹಳ್ಳಿಗೆ ಹೋದಾಗ ನನ್ನ ಅಣ್ಣ ಹೇಳುವ ಒಂದೇ ಮಾತು ಕೂಲಿಯಾಳುಗಳ ಅಲಭ್ಯತೆ.ಇದಕ್ಕೂ ಲೋಹಿಯಾರವರು ಹೀಗೆ ಸಲಹೆ ನೀಡಿದ್ದರು.
ಕೃಷಿ ಆಸ್ತಿಯನ್ನು ಕಟ್ಟುನಿಟ್ಟಾದ ಭೂಸುಧಾರಣಾ ಕ್ರಮಗಳ ಮೂಲಕ ವಿಕೇಂದ್ರೀಕರಣಕ್ಕೊಳಪಡಿಸುವ ಆಶಯ ಅವರದಾಗಿತ್ತು. ಭೂಮಿಯನ್ನು ಐದು ಜನರ ಕುಟುಂಬವೊಂದು ಹೊರಗಿನ ಆಳಿನ ನೆರವಿಲ್ಲದೆ ಬೇಸಾಯ ಮಾಡಬಲ್ಲ ಜಮೀನಿನ ಮೂರರಷ್ಟಕ್ಕೆ ನಿಗದಿ ಮಾಡಬೇಕೆಂಬುದು ಅವರ ಸಲಹೆಯಾಗಿತ್ತು. ಹೆಚ್ಚುವರಿ ಭೂಮಿಯನ್ನು ಆಯಾ ಹಳ್ಳಿಗಳ ಭೂರಹಿತರಿಗೆ ಹಂಚಬೇಕೆಂದೂ ಅವರು ಸೂಚಿಸಿದ್ದರು. ಭಾರತದಲ್ಲಿ ಇರುವ ಬರಡು ಭೂಮಿಯನ್ನು ಹಸನುಗೊಳಿಸಿ ಕೃಷಿಯೋಗ್ಯ ಮಾಡಲು ಕೃಷಿ ಕಾರ್ಮಿಕರನ್ನೊಳಗೊಂಡು ಭೂಸೇನೆಯೊಂದರ ರಚನೆಯನ್ನೂ ಅವರು ಪ್ರತಿಪಾದಿಸಿದ್ದರು. ಎಂತಹ ಒಳ್ಳೆಯ ಸಲಹೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುವ ಈ ಕಾಲದಲ್ಲೂ ಇಂತಹ ಕ್ರಾಂತಿಕಾರಿ ಸುಧಾರಣೆಗಳು ಜಾರಿಯಾಗಿಲ್ಲವೆಂದು ಲೋಹಿಯಾರವರ ಆತ್ಮ ಕೊರಗುತ್ತಿರಬಹುದು.
ಈ ಆಧುನಿಕತೆಯ ಕಾಲದಲ್ಲೂ ಜಾತಿ ಪದ್ದತಿಯು ವಿಜೃಂಭಿಸುವಾಗ ಈ ಪುಸ್ತಕದಲ್ಲಿ ಜಾತಿಯ ಬಗ್ಗೆ ಲೋಹಿಯಾರವರ ಚಿಂತನೆ ಓದಿದಾಗ  ಹೌದಲ್ಲವಾ ಎನಿಸಿತು.ಅವರ ಪ್ರಕಾರ
ಭಾರತದಲ್ಲಿ ಬ್ರಾಹ್ಮಣ ಮತ್ತು ಶೂದ್ರರಿಬ್ಬರೂ ಜಾತಿಪದ್ಧತಿಗೆ ಸಿಕ್ಕಿ ಅರೆಜೀವವಾಗಿ ಬಿದ್ದಿದ್ದು, ಶೂದ್ರ ಬೀಜವಾಗಿ, ಬ್ರಾಹ್ಮಣ ಗೊಬ್ಬರವಾಗಿ ಸಮಾಜವಾದಿ ಬೆಳೆ  ತೆಗೆಯಬೇಕಾಗಿದೆ .ಎಂಬ ಮಾತನ್ನು ನಾವ್ಯಾರು ಇನ್ನೂ ಅರ್ಥೈಸಿಕೊಂಡಿಲ್ಲ.
ಲಿಂಗ ತಾರತಮ್ಯ,
ಮಹಿಳೆಯರ ಅಸಮಾನತೆ ಮುಂತಾದವುಗಳ ಬಗ್ಗೆ ಪ್ರಸ್ತಾಪಿಸಿದ ಲೋಹಿಯಾರವರು ಭಾರತೀಯ ಮಹಿಳೆಗೆ ಪತಿ ಭಕ್ತಿಯ ಪ್ರತೀಕವಾದ ಸಾವಿತ್ರಿ ಆದರ್ಶಳಾಗದೆ, ಛಲ, ವಿವೇಕ ಮತ್ತು ಜಾಣ್ಮೆಗಳ ಮೂಲಕ ಸ್ತ್ರೀಶಕ್ತಿಯ ಸಂಕೇತದಂತಿರುವ ದ್ರೌಪದಿ ಸ್ಫೂರ್ತಿಯಾಗಬೇಕೆಂದು ಅವರು ಸೂಚಿಸಿದರು. ಹೆಣ್ಣಿನ ಶೋಷಣೆಯ ಸಣ್ಣ ವಿವರಗಳ ಕಡೆಗೂ ತಮ್ಮ ಗಮನ ಹರಿಸಿದ ಲೋಹಿಯಾ, ನಮ್ಮ ಅಡಿಗೆ ಮನೆಗಳು ಅಷ್ಟೇಕೆ ಕಿರಿದಾಗಿರಬೇಕು ಎಂದು ಪ್ರಶ್ನಿಸಿದರು .

ಲೋಹಿಯಾರವರು  ಜಗತ್ತಿನಲ್ಲಿ ಏಳು ರೀತಿಯ ಅನ್ಯಾಯಗಳನ್ನು ಗುರುತಿಸಿದ್ದರು. ಸಮಾಜವಾದದ ಮೂಲಕ ಇವುಗಳ ನಿವಾರಣೆಗಾಗಿ 'ಸಪ್ತಕ್ರಾಂತಿ' ಕಲ್ಪನೆಯನ್ನು ಮುಂದಿಟ್ಟಿದ್ದರು ಅವುಗಳೆಂದರೆ
ಗಂಡು ಮತ್ತು ಹೆಣ್ಣಿನ ನಡುವೆ ಸಮಾನತೆ. ಎಲ್ಲ ರೀತಿಯ ರಾಜಕೀಯ ಗುಲಾಮಗಿರಿ ಹಾಗೂ ಸಾಮ್ರಾಜ್ಯಶಾಹಿಯ ನಾಶ.
ದೇಶದ ಜನತೆಯ ನಡುವೆ ಮತ್ತು ದೇಶಗಳ ನಡುವೆ ಆರ್ಥಿಕ ಸಮಾನತೆ.
ಸಾಮೂಹಿಕತೆಯ ಅತಿಗಳ ವಿರುದ್ಧ ಮನುಷ್ಯನ ಖಾಸಗಿತನದ ರಕ್ಷಣೆ.  ವಿಶೇಷ ಪ್ರಾಶಸ್ತ್ಯದ  ಮೂಲಕ ಜಾತಿ ನಿರ್ಮೂಲನೆ.
ನಿಶಸ್ತ್ರೀಕರಣ ಮತ್ತು ನಾಗರಿಕ ಅಸಹಕಾರ ಸತ್ಯಾಗ್ರಹದ ಬಳಕೆ.
ಎಲ್ಲ ಬಣ್ಣಗಳ ಜನತೆಯ ನಡುವೆ ಸಮಾನತೆ ಮತ್ತು ಸೌಂದರ್ಯ
ಮೀಮಾಂಸೆಯಲ್ಲಿ ಕ್ರಾಂತಿ
ಈ ಸಪ್ತಕ್ರಾಂತಿಗಳು ಇನ್ನೂ ಕ್ರಾಂತಿಯ ಹಂತದಲ್ಲಿಯೇ ಇವೆ ಎಂಬುದು ನಮಗೆ ತಿಳಿದೇ ಇದೆ ಆದರೂ ಕ್ರಾಂತಿಯೆಡಗೆ ಹೆಜ್ಜೆ ಇರಿಸಿದ್ದೇವೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.

ಪ್ರತಿಯೊಬ್ಬ ಭಾರತೀಯನೂ ಇಂತಹ ಪುಸ್ತಕ ಓದಬೇಕು ತನ್ಮೂಲಕ ಸಕಾರಾತ್ಮಕ ಬೆಳವಣಿಗೆಗೆ ಕಾರಣರಾಗಬೇಕು ಎಂಬುದು ನನ್ನ ಅನಿಸಿಕೆ .ನಿರ್ದಿಷ್ಟ ದಿಕ್ಕು ದಿಸೆಯಿಲ್ಲದೆ ಒಣಹರಟೆಯಲ್ಲೆ ಕಾಲಹರಣ ಮಾಡುವ ಎಲ್ಲಾ ಯುವಕರಿಗೆ ಇಂತಹ ಪುಸ್ತಕಗಳು ತಲುಪಬೇಕಿವೆ.
ನಿಮಗೂ ಈ ಪುಸ್ತಕ ಓದಬೇಕು ಎನಿಸಿದರೆ ಸವಿತಾ ನಾಗಭೂಷಣ ರವರನ್ನು 9481351079 ಸಂಪರ್ಕಿಸಿ 70 ರೂಪಾಯಿ ಕೊಟ್ಟು ಖರೀದಿಸಿ ಓದಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.


15 April 2023

ನೋವು ನಲಿವು..

 



*ನೋವು ನಲಿವು*


ಬಾಳಿನಲ್ಲಿ ಸಾಮಾನ್ಯ

ನೋವು, ನಲಿವು |

ಈ ಎರಡೂ ಎಂದಿಗೂ

ಶಾಶ್ವತವಾಗಿ ಇರವು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

12 April 2023

ಹಾಯ್ಕುಗಳು...

 




ಹಾಯ್ಕಗಳು..



ಸುಂಧರ ಧರೆ 

ಸಕಲಜೀವಿಗಳ 

ಆವಾಸಸ್ಥಾನ .




ಆವಾರದಲಿ 

ಮಕ್ಕಳಾಟವ ನೋಡಿ

ಆನಂದ ಪಡು .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

08 April 2023

ರಚನಾತ್ಮಕ ಟೀಕೆಗಳನ್ನು ಸ್ವೀಕರಿಸೊಣ...

 


ರಚನಾತ್ಮಕ ಟೀಕೆಗಳನ್ನು ಸ್ವೀಕರಿಸೋಣ.


ಒಂದು ದಿನ ಬುದ್ಧನು   ಭಿಕ್ಷಾಟನೆ ಮಾಡುತ್ತಾ ಮನೆಯೊಂದರ ಮುಂದೆ ನಿಲ್ಲುತ್ತಾನೆ. ಮೊದಲೇ ಸಿಡಿಮಿಡಿಗೊಳ್ಳುತ್ತಾ ಮನೆಯಿಂದ ಹೊರಗೆ ಬಂದ ಮನೆಯೊಡತಿ ಎದುರಲ್ಲಿ ನಿಂತಿದ್ದ ಬುದ್ಧನನ್ನು ನೋಡಿ ಕೆಂಡಾಮಂಡಲವಾದಳು. "ನೋಡೋದಕ್ಕೆ ಒಳ್ಳೆ ಗೂಳಿ ತರಹ ಇದ್ದೀಯಾ, ಏನಾದರೂ ಕೆಲಸ ಮಾಡಿಕೊಂಡು ಬದುಕುಬಹುದಲ್ಲಾ…ನೀನು ಸೋಮಾರಿಯಾಗುವುದಲ್ಲದೆ ನಿನ್ನ ಶಿಷ್ಯರು ಎಂದು ಹೇಳಿಕೊಳ್ಳುತ್ತಿರುವ ಇವರನ್ನೂ ಸೋಮಾರಿಗಳನ್ನಾಗಿ ಮಾಡುತ್ತಿದ್ದೀಯಾ" ಎಂದು ಬಾಯಿಗೆ ಬಂದಂತೆ ಬೈಯುತ್ತಾಳೆ.


ಆದರೆ ಬುದ್ಧನು ಆಕೆಯ ಕೋಪದ,ತಾಪದ, ಅವಹೇಳನದ ಮಾತುಗಳನ್ನು ಕೇಳುತ್ತಾ ಕಿರುನಗೆ ಬೀರಿದನೇ ಹೊರತು ಮರು ಮಾತನಾಡಲಿಲ್ಲ. ಆದರೆ ಅವರ ಶಿಷ್ಯರು ಮಾತ್ರ ಕೋಪದಿಂದ ಬುಸುಗುಡುತ್ತಿದ್ದರು. ಆಗ  ಬುದ್ಧ ಅವರಿಗೆ ಸಮಾಧಾನ ಹೇಳಿದ,ನಂತರ

ಆಕೆಯನ್ನು ಉದ್ದೇಶಿಸಿ ಪ್ರಸನ್ನ ವದನನಾಗಿ…" ಮಾತೆ! ನನ್ನ ಸಣ್ಣ ಸಂದೇಹವೊಂದನ್ನು ನಿವಾರಿಸುತ್ತೀರಾ? " ಎಂದು ಕೇಳಿದ. ಅದಕ್ಕೆ ಆಕೆ "ಅವಶ್ಯವಾಗಿ ನಿನ್ನ ಸಂದೇಹ ತೀರಿಸುತ್ತೇನೆ" ಎಂದಳು. ಬುದ್ಧನು ತನ್ನ ಕೈಯಲ್ಲಿನ ಭಿಕ್ಷಾಪಾತ್ರೆಯನ್ನು ತೋರುತ್ತಾ… "ತಾಯಿ! ನಾನು ನಿನಗೆ ಒಂದು ವಸ್ತುವನ್ನು ಕೊಟ್ಟಾಗ ಅದನ್ನು ತಿರಸ್ಕರಿಸಿದರೆ ಅದು ಯಾರಿಗೆ ಸೇರುತ್ತದೆ? "ಎಂದು ಕೇಳಿದ. ಅದಕ್ಕೆ ಆಕೆ "ನಾನು ತೆಗೆದುಕೊಳ್ಳದೆ ತಿರಸ್ಕರಿಸಿದೆನಾದ್ದರಿಂದ ಆ ವಸ್ತು ನಿನಗೇ ಸೇರುತ್ತದೆ" ಉತ್ತರ ಕೊಟ್ಟಳು.


"ಹಾಗೆಯೇ…ತಾಯಿ! ನಾನು ನಿನ್ನ ಬೈಗುಳ ಸ್ವೀಕರಿಸುತ್ತಿಲ್ಲ" ಎನ್ನುತ್ತಿದ್ದಂತೆ ಆಕೆ ತನ್ನ ತಪ್ಪಿನ ಅರಿವಾಗಿ ನಾಚಿಕೆಯಿಂದ ತಲೆತಗ್ಗಿಸಿದಳು. 


ಕೆಲವೊಮ್ಮೆ ಅನವಶ್ಯಕವಾಗಿ  ಕೆಲವರು  ನಮ್ಮನ್ನು ಅವಹೇಳನ ಮಾಡುವವರು, ಆಡಿಕೊಳ್ಳುವವರು. ಕೆಲವರು ಬಹಿರಂಗವಾಗಿ ಟೀಕಿಸಿದರೆ, ಇನ್ನೂ ಕೆಲವರು ಹಿಂದೆ ಆಡಿಕೊಳ್ಳುತ್ತಾರೆ. ಒಟ್ಟಾರೆ ಬೇರೆಯವರ ಬಗ್ಗೆ ಆಡಿಕೊಳ್ಳದಿದ್ದರೆ  ಪಾಪ.. ಅವರು ತಿಂದ ಅನ್ನ ಜೀರ್ಣವಾಗುವುದಿಲ್ಲ. ಅಂತಹ ವಿಘ್ನ ಸಂತೋಷಿಗಳ ಬಗ್ಗೆ ನಾವು ತಲೆಕೆಡಿಸೊಕೊಳ್ಳಬೇಕಿಲ್ಲ. ನಮ್ಮ ಹಿಂದೆ ನಮ್ಮ ಬಗ್ಗೆ ಮಾತನಾಡಲು ಜನ ಶುರುಮಾಡಿದ್ಧಾರೆ ಎಂದರೆ ಅವರಿಗಿಂತ ನಾವು ಅಷ್ಟರಮಟ್ಟಿಗೆ ಮುಂದಿದ್ದೇವೆ ಎಂದರ್ಥ. ನಿಂದಕರಿರಬೇಕು ಹಂದಿಯ ಹಾಗೆ ಎಂಬ ಮಾತಿನಂತೆ ಸಕಾರಣ, ಸಕಾರಾತ್ಮಕ, ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಿ ನಡೆಯೋಣ .ಕಾಲೆಳೆಯುತ್ತಾ ಇತರರ ಬಗ್ಗೆ ಕಾಲಹರಣ ಮಾಡುವವರ ನಿರ್ಲಕ್ಷಿಸೋಣ. ಹೊಟ್ಟೆ ಕಿಚ್ಚಿನ ಟೀಕೆಗಳನ್ನು ಮೆಟ್ಟಿ ನಿಂತು ಸಾಧಿಸಿ ತೋರಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಶಿಕ್ಷಕರು.



07 April 2023

ಮಾನವರಾಗೋಣ...

 


ಮಾನವರಾಗೋಣ ೬ 


ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.

ಮೊದಲನೇಯದು,   ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.

ಎರಡು,  ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.

ಮೂರು, ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.

ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಪ್ರಶ್ನಿಸಿದ.

ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!

ಪ್ರಪಂಚದಲ್ಲಿಯೇ  ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು. ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ವಜ್ರ, ಬಂಗಾರ ಮುಂತಾದ ಸಂಪತ್ತನ್ನು ಭೂಮಿಗೆ  ಎಸಯಲಿಕ್ಕೆ ಹೇಳಿದೆ.

ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶವೆಂದರೆ 

ಪ್ರಪಂಚವನ್ನು ಗೆದ್ದ ಅಲೆಕ್ಸಾಂಡರ್ ಸತ್ತಾಗ ಅವನ ಕೈಯಲ್ಲಿ ಏನೂ ಇರಲಿಲ್ಲ ಎಂಬುದು ಪ್ರಜೆಗಳಿಗೆ ತಿಳಿಯಲಿ ಎಂದು.

ಈ ಉತ್ತರಗಳು ನಾವು ಪ್ರತಿಯೊಬ್ಬರೂ ಪ್ರತಿದಿನ ಚಿಂತನ ಮಂಥನ ಮಾಡಬೇಕಾದ ಅಂಶಗಳು.

ಕಾಲಾಯ ತಸ್ಮೈನಮಃ ಎಂಬಂತೆ ನಮ್ಮ ಕೈಯಲ್ಲಿ ಏನೂ ಇಲ್ಲ. ಜಾತಸ್ಯ ಮರಣಂ  ಧ್ರುವಂ ಎಂಬಂತೆ  ಹುಟ್ಟು ಆಕಸ್ಮಿಕ ಮರಣ ಖಚಿತ . ನಮ್ಮ ಸರದಿ ಬಂದಾಗ ನಾವು ಹೋಗಲೇಬೇಕು ಆ ಸಮಯದಲ್ಲಿ ನಾವು ಜೀವಿಸಿದ ಪರಿಯನ್ನು ನಾವು ಆತ್ಮಾವಲೋಕನ ಮಾಡಿಕೊಂಡು ಒಳಿತೆನೆಡೆಗೆ ಸಾಗಬೇಕಿದೆ. 


ಅಲೆಕ್ಸಾಂಡರ್ ನ ಎರಡನೇ ಮತ್ತು ಮೂರನೇ ಉತ್ತರ ಪರಸ್ಪರ ಸಂಬಂಧವನ್ನು ಹೊಂದಿವೆ .ಅನಾದಿ ಕಾಲದಿಂದಲೂ ಜನ ಹೆಣ್ಣು, ಮಣ್ಣು, ಹೊನ್ನಿಗಾಗಿ ಹಾತೊರೆದು ತೊಳಲಾಡಿ ,ಬಡಿದಾಡಿ ಬರಿಗೈಯಲಿ  ಅಳಿದುಹೋಗಿರುವುದು ನಮಗೇ ತಿಳಿದೇ ಇದೆ.ಆದರೂ ನಾವು ಈಗಲೂ 

ಭೌತಿಕ ಸಂಪತ್ತಿನ ಹಿಂದೆ ಓಡುತ್ತಾ, ಅನೈತಿಕವಾಗಿ ಆಸ್ತಿ ಮಾಡುವುದನ್ನು ನಿಲ್ಲಿಸುವುದೇ ಇಲ್ಲ. ಆಗಾಗ್ಗೆ ಸ್ಮಶಾನ ವೈರಾಗ್ಯದಂತೆ ಆಸೆಗೆ ಮಿತಿ ಹೇರಿಕೊಂಡರೂ ಮತ್ತೆ ಅತಿಯಾಸೆಯಿಂದ ಅಕ್ರಮದಲ್ಲಿ ತೊಡಗಿ ಬೆಂಕಿಯ ಕಡೆ ಪತಂಗದ ಪಯಣ ಮಾಡುವಂತೆ ಓಡುತ್ತೇವೆ.

ಪ್ರತಿದಿನವೂ ಅಲೆಕ್ಸಾಂಡರ್ ನ ಮಾತುಗಳನ್ನು ಮೆಲುಕು ಹಾಕೋಣ .

ನಿಜವಾದ ಶಾಂತಿ ನೆಮ್ಮದಿ ಹಣ ಐಶ್ವರ್ಯದಲ್ಲಿ ಇಲ್ಲ ಅದು ನಮ್ಮ ಒಳಗೆ ಇದೆ ಅದನ್ನು ಹುಡುಕುವ ಪ್ರಯತ್ನ ಮಾಡೋಣ.ಮಾನವರಾಗೋಣ .


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು.

05 April 2023

ದರ್ಪಣ ಸುಂದರಿ...

 

ಪದೇ ಪದೇ ತಲೆ ಬಾಚುವಳು 

ಅಲಂಕಾರ ಮಾಡಿಕೊಳ್ಳುವಳು 

ಮತ್ತೊಮ್ಮೆ ಕನ್ನಡಿಯಲ್ಲಿ 

ನೋಡಿಕೊಳ್ಳುವಳು 

ಅಂದು ಕೊಳ್ಳುವಳು

 ನಾನೇ ಸುಂದರಿ|

ಕನ್ನಡಿಯ ಮುಂದೆ

ಅತಿ ಹೆಚ್ಚು ಕಾಲ ಕಳೆವ

ಇವಳು ನಿಜಕ್ಕೂ ದರ್ಪಣ ಸುಂದರಿ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


01 April 2023

ಒಳಿತು ಮಾಡೋಣ...

 


*ಒಳಿತು ಮಾಡಿ ಬಿಡೋಣ*


ಅವನಿಗೆ ಬಿಟ್ಟು 

ಯಾರಿಗೂ ತಿಳಿದಿಲ್ಲ 

ಎಂದು ನಮ್ಮ ಅಂತಿಮ ಯಾನ |

ನಾಲ್ಕು ಜನಕ್ಕಾದರೂ 

ಒಳಿತು ಮಾಡಿಬಿಡೋಣ

ಅಪೇಕ್ಷಿಸದೇ  ಮಾನ ಸಮ್ಮಾನ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ