ರಚನಾತ್ಮಕ ಟೀಕೆಗಳನ್ನು ಸ್ವೀಕರಿಸೋಣ.
ಒಂದು ದಿನ ಬುದ್ಧನು ಭಿಕ್ಷಾಟನೆ ಮಾಡುತ್ತಾ ಮನೆಯೊಂದರ ಮುಂದೆ ನಿಲ್ಲುತ್ತಾನೆ. ಮೊದಲೇ ಸಿಡಿಮಿಡಿಗೊಳ್ಳುತ್ತಾ ಮನೆಯಿಂದ ಹೊರಗೆ ಬಂದ ಮನೆಯೊಡತಿ ಎದುರಲ್ಲಿ ನಿಂತಿದ್ದ ಬುದ್ಧನನ್ನು ನೋಡಿ ಕೆಂಡಾಮಂಡಲವಾದಳು. "ನೋಡೋದಕ್ಕೆ ಒಳ್ಳೆ ಗೂಳಿ ತರಹ ಇದ್ದೀಯಾ, ಏನಾದರೂ ಕೆಲಸ ಮಾಡಿಕೊಂಡು ಬದುಕುಬಹುದಲ್ಲಾ…ನೀನು ಸೋಮಾರಿಯಾಗುವುದಲ್ಲದೆ ನಿನ್ನ ಶಿಷ್ಯರು ಎಂದು ಹೇಳಿಕೊಳ್ಳುತ್ತಿರುವ ಇವರನ್ನೂ ಸೋಮಾರಿಗಳನ್ನಾಗಿ ಮಾಡುತ್ತಿದ್ದೀಯಾ" ಎಂದು ಬಾಯಿಗೆ ಬಂದಂತೆ ಬೈಯುತ್ತಾಳೆ.
ಆದರೆ ಬುದ್ಧನು ಆಕೆಯ ಕೋಪದ,ತಾಪದ, ಅವಹೇಳನದ ಮಾತುಗಳನ್ನು ಕೇಳುತ್ತಾ ಕಿರುನಗೆ ಬೀರಿದನೇ ಹೊರತು ಮರು ಮಾತನಾಡಲಿಲ್ಲ. ಆದರೆ ಅವರ ಶಿಷ್ಯರು ಮಾತ್ರ ಕೋಪದಿಂದ ಬುಸುಗುಡುತ್ತಿದ್ದರು. ಆಗ ಬುದ್ಧ ಅವರಿಗೆ ಸಮಾಧಾನ ಹೇಳಿದ,ನಂತರ
ಆಕೆಯನ್ನು ಉದ್ದೇಶಿಸಿ ಪ್ರಸನ್ನ ವದನನಾಗಿ…" ಮಾತೆ! ನನ್ನ ಸಣ್ಣ ಸಂದೇಹವೊಂದನ್ನು ನಿವಾರಿಸುತ್ತೀರಾ? " ಎಂದು ಕೇಳಿದ. ಅದಕ್ಕೆ ಆಕೆ "ಅವಶ್ಯವಾಗಿ ನಿನ್ನ ಸಂದೇಹ ತೀರಿಸುತ್ತೇನೆ" ಎಂದಳು. ಬುದ್ಧನು ತನ್ನ ಕೈಯಲ್ಲಿನ ಭಿಕ್ಷಾಪಾತ್ರೆಯನ್ನು ತೋರುತ್ತಾ… "ತಾಯಿ! ನಾನು ನಿನಗೆ ಒಂದು ವಸ್ತುವನ್ನು ಕೊಟ್ಟಾಗ ಅದನ್ನು ತಿರಸ್ಕರಿಸಿದರೆ ಅದು ಯಾರಿಗೆ ಸೇರುತ್ತದೆ? "ಎಂದು ಕೇಳಿದ. ಅದಕ್ಕೆ ಆಕೆ "ನಾನು ತೆಗೆದುಕೊಳ್ಳದೆ ತಿರಸ್ಕರಿಸಿದೆನಾದ್ದರಿಂದ ಆ ವಸ್ತು ನಿನಗೇ ಸೇರುತ್ತದೆ" ಉತ್ತರ ಕೊಟ್ಟಳು.
"ಹಾಗೆಯೇ…ತಾಯಿ! ನಾನು ನಿನ್ನ ಬೈಗುಳ ಸ್ವೀಕರಿಸುತ್ತಿಲ್ಲ" ಎನ್ನುತ್ತಿದ್ದಂತೆ ಆಕೆ ತನ್ನ ತಪ್ಪಿನ ಅರಿವಾಗಿ ನಾಚಿಕೆಯಿಂದ ತಲೆತಗ್ಗಿಸಿದಳು.
ಕೆಲವೊಮ್ಮೆ ಅನವಶ್ಯಕವಾಗಿ ಕೆಲವರು ನಮ್ಮನ್ನು ಅವಹೇಳನ ಮಾಡುವವರು, ಆಡಿಕೊಳ್ಳುವವರು. ಕೆಲವರು ಬಹಿರಂಗವಾಗಿ ಟೀಕಿಸಿದರೆ, ಇನ್ನೂ ಕೆಲವರು ಹಿಂದೆ ಆಡಿಕೊಳ್ಳುತ್ತಾರೆ. ಒಟ್ಟಾರೆ ಬೇರೆಯವರ ಬಗ್ಗೆ ಆಡಿಕೊಳ್ಳದಿದ್ದರೆ ಪಾಪ.. ಅವರು ತಿಂದ ಅನ್ನ ಜೀರ್ಣವಾಗುವುದಿಲ್ಲ. ಅಂತಹ ವಿಘ್ನ ಸಂತೋಷಿಗಳ ಬಗ್ಗೆ ನಾವು ತಲೆಕೆಡಿಸೊಕೊಳ್ಳಬೇಕಿಲ್ಲ. ನಮ್ಮ ಹಿಂದೆ ನಮ್ಮ ಬಗ್ಗೆ ಮಾತನಾಡಲು ಜನ ಶುರುಮಾಡಿದ್ಧಾರೆ ಎಂದರೆ ಅವರಿಗಿಂತ ನಾವು ಅಷ್ಟರಮಟ್ಟಿಗೆ ಮುಂದಿದ್ದೇವೆ ಎಂದರ್ಥ. ನಿಂದಕರಿರಬೇಕು ಹಂದಿಯ ಹಾಗೆ ಎಂಬ ಮಾತಿನಂತೆ ಸಕಾರಣ, ಸಕಾರಾತ್ಮಕ, ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಿ ನಡೆಯೋಣ .ಕಾಲೆಳೆಯುತ್ತಾ ಇತರರ ಬಗ್ಗೆ ಕಾಲಹರಣ ಮಾಡುವವರ ನಿರ್ಲಕ್ಷಿಸೋಣ. ಹೊಟ್ಟೆ ಕಿಚ್ಚಿನ ಟೀಕೆಗಳನ್ನು ಮೆಟ್ಟಿ ನಿಂತು ಸಾಧಿಸಿ ತೋರಿಸೋಣ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಶಿಕ್ಷಕರು.
No comments:
Post a Comment