ರಾಮ ಮನೋಹರ ಲೋಹಿಯಾ...
ಭಾನುವಾರ ತುಮಕೂರಿನ ಬಾಯರ್ಸ್ ಕ್ಯಾಂಟೀನ್ ನಲ್ಲಿ ಕಾಫಿ ಕುಡಿದು ನನ್ನ ಇತ್ತೀಚಿನ ಪುಸ್ತಕ "ಕ್ಯಾತ್ಸಂದ್ರ ಟು ಕ್ಯಾತನಮಕ್ಕಿ"ಯನ್ನು ಲೇಖಕರು ,ಚಿಂತಕರು,ನಿವೃತ್ತ ಪ್ರೊಫೆಸರ್ ಹಾಗೂ ಆತ್ಮೀಯರಾದ ಎಂ ಜಿ ಸಿ ಸರ್ ರವರಿಗೆ ನೀಡಿ ಓದಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಕೇಳಿದೆ.ನನ್ನ ಪುಸ್ತಕವನ್ನು ಅವರ ಕೈಚೀಲದಲ್ಲಿ ಇಟ್ಟುಕೊಂಡು ಚೀಲದಿಂದ ಮತ್ತೊಂದು ಪುಸ್ತಕ ನನಗೆ ನೀಡಿ ಓದಲು ಹೇಳಿದರು.
ಆ ಪುಸ್ತಕವೇ ಡಿ ಎಸ್ ನಾಗಭೂಷಣ ರವರ "ರಾಮ ಮನೋಹರ ಲೋಹಿಯಾ "
ಕಾರ್ ಸರ್ವಿಸ್ ಗೆ ಬಿಟ್ಟು ಓದಲು ಕುಳಿತ ನನಗೆ ಪುಸ್ತಕ ಓದಿ ಮುಗಿಸಿದಾಗ ಕಾರ್ ಸರ್ವೀಸ್ ಮುಗಿದಿತ್ತು. ಕಾರ್ ಹೊಸದಾಗಿ ಕಾಣುತ್ತಿತ್ತು. ನನ್ನ ಮನದಲ್ಲಿ ಹೊಸ ಆಲೋಚನೆಗಳು ಮತ್ತು ಚಿಂತನೆಗಳು ಹರಿದಾಡಲಾರಂಭಿಸಿದವು.
ಪುಸ್ತಕ ಪೂರ್ಣ ಓದಿದ ಬಳಿಕ ಲೋಹಿಯಾರವರ ಬಗ್ಗೆ ಇನ್ನೂ ಗೌರವ ಹೆಚ್ಚಾಯಿತು.
ಬರೀ ಮಜಾ ಮಾಡುವುದೇ ಜೀವನದ ಗುರಿಯೆಂಬ ಮಜಾವಾದಿಗಳ ,ಚಾರ್ವಾಕ ಬುದ್ಧಿಯ ಪೀಳಿಗೆ ಕಂಡಾಗ ಸಮಾನತೆಗಿಂತ ಸಮತೆ ಬೇಕು ಎಂದು ಸಾರಿದ ಲೋಹಿಯಾರವರ ಚಿಂತನೆಗಳು ಇಂದು ಸಮಾಜಕ್ಕೆ ಅತಿ ತುರ್ತಾದ ಅಗತ್ಯ ಎನಿಸಿತು.
ನಾಲ್ಕು ಅಧ್ಯಾಯ ಹೊಂದಿರುವ ಈ ಪುಸ್ತಕ, ರಾಮಮನೋಹರ ಲೋಹಿಯಾ,ಲೋಹಿಯಾ ಸಮಾಜವಾದ: ಮುಂದೇನು?, ಹೊಸ ಸಮಾಜವಾದ ಇಂದಿನ ಅಗತ್ಯ: ಒಂದು ಸಂದರ್ಶನ, ರಾಮಮನೋಹರ ಲೋಹಿಯಾ - ಬದುಕಿನ ಘಟ್ಟಗಳನ್ನು ಒಳಗೊಂಡಿದೆ.
ಅರವತ್ನಾಲ್ಕು ಪುಟಗಳ ಕಿರು ಕೈದೀವಿಗೆ ಓದುವಾಗ ಬೇಡವೆಂದರೂ ಇಂದಿನ ರಾಜಕೀಯ ,ಸಾಮಾಜಿಕ ಆರ್ಥಿಕ ಸಮಸ್ಯೆಗಳು ಮತ್ತು ಅವುಗಳಿಗೆ ಲೋಹಿಯಾರವರು ಸೂಚಿಸಿದ ಪರಿಹಾರಗಳು ನಮ್ಮನ್ನು ಕಾಡುತ್ತವೆ .
ಪ್ರಸ್ತುತ ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಅಭ್ಯರ್ಥಿಗಳು ಘೋಷಿಸಿಕೊಂಡ ಆದಾಯ ಸಾವಿರಾರು ಕೋಟಿಗಳು! ಅದೇ ವೇಳೆಯಲ್ಲಿ ಹಸಿವೆಯಿಂದ ಬಡತನದಲ್ಲಿ ನರಳುವ ಜನರ ಬಗ್ಗೆಯೂ ನಾವು ನೋಡುತ್ತೇವೆ. ಈ ಚಿತ್ರಣವನ್ನು ಅರವತ್ತು ವರ್ಷಗಳ ಹಿಂದೆ ಕಂಡ ಲೋಹಿಯಾರವರು
ಕುಟುಂಬದ ಆದಾಯ ಮತ್ತು ವೆಚ್ಚಗಳ ಮೇಲೆ ಕಾನೂನುಬದ್ಧ ಮಿತಿ ಇರಬೇಕೆಂದು ಸೂಚಿಸಿದರು. ಈ ಮಾತನ್ನು ಹೇಳಿದ 60ರ ದಶಕದಲ್ಲಿ ಅವರು ಈ ಮಿತಿ ತಿಂಗಳಿಗೆ 1500 ರೂಪಾಯಿಗಳಿರಬೇಕೆಂದು ಸಲಹೆ ಮಾಡಿದ್ದರು. ಹಾಗೇ ಸಮಾನತೆಯನ್ನು ಗುರಿಯಾಗುಳ್ಳ ಯಾವುದೇ ಒಂದು ಸಮಾಜದಲ್ಲಿ ಅಸಮಾನತೆಯ ಪ್ರಮಾಣ 1:10 ಅನುಪಾತವನ್ನು ಮೀರದಂತೆ ಆರ್ಥಿಕತೆಯನ್ನು ನಿರ್ವಹಿಸಬೇಕೆಂಬುದು ಅವರ ಇನ್ನೊಂದು ಸಲಹೆಯಾಗಿತ್ತು. ಎಂತಹ ಅದ್ಬುತ ಸಲಹೆ ಲೋಹಿಯಾರವರಲ್ಲಿ ಒಬ್ಬ ದಕ್ಷ ಆಡಳಿತಗಾರ ಮತ್ತು ಅರ್ಥಶಾಸ್ತ್ರಜ್ಞ ಇದ್ದ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?
ನಾನು ಹಳ್ಳಿಗೆ ಹೋದಾಗ ನನ್ನ ಅಣ್ಣ ಹೇಳುವ ಒಂದೇ ಮಾತು ಕೂಲಿಯಾಳುಗಳ ಅಲಭ್ಯತೆ.ಇದಕ್ಕೂ ಲೋಹಿಯಾರವರು ಹೀಗೆ ಸಲಹೆ ನೀಡಿದ್ದರು.
ಕೃಷಿ ಆಸ್ತಿಯನ್ನು ಕಟ್ಟುನಿಟ್ಟಾದ ಭೂಸುಧಾರಣಾ ಕ್ರಮಗಳ ಮೂಲಕ ವಿಕೇಂದ್ರೀಕರಣಕ್ಕೊಳಪಡಿಸುವ ಆಶಯ ಅವರದಾಗಿತ್ತು. ಭೂಮಿಯನ್ನು ಐದು ಜನರ ಕುಟುಂಬವೊಂದು ಹೊರಗಿನ ಆಳಿನ ನೆರವಿಲ್ಲದೆ ಬೇಸಾಯ ಮಾಡಬಲ್ಲ ಜಮೀನಿನ ಮೂರರಷ್ಟಕ್ಕೆ ನಿಗದಿ ಮಾಡಬೇಕೆಂಬುದು ಅವರ ಸಲಹೆಯಾಗಿತ್ತು. ಹೆಚ್ಚುವರಿ ಭೂಮಿಯನ್ನು ಆಯಾ ಹಳ್ಳಿಗಳ ಭೂರಹಿತರಿಗೆ ಹಂಚಬೇಕೆಂದೂ ಅವರು ಸೂಚಿಸಿದ್ದರು. ಭಾರತದಲ್ಲಿ ಇರುವ ಬರಡು ಭೂಮಿಯನ್ನು ಹಸನುಗೊಳಿಸಿ ಕೃಷಿಯೋಗ್ಯ ಮಾಡಲು ಕೃಷಿ ಕಾರ್ಮಿಕರನ್ನೊಳಗೊಂಡು ಭೂಸೇನೆಯೊಂದರ ರಚನೆಯನ್ನೂ ಅವರು ಪ್ರತಿಪಾದಿಸಿದ್ದರು. ಎಂತಹ ಒಳ್ಳೆಯ ಸಲಹೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುವ ಈ ಕಾಲದಲ್ಲೂ ಇಂತಹ ಕ್ರಾಂತಿಕಾರಿ ಸುಧಾರಣೆಗಳು ಜಾರಿಯಾಗಿಲ್ಲವೆಂದು ಲೋಹಿಯಾರವರ ಆತ್ಮ ಕೊರಗುತ್ತಿರಬಹುದು.
ಈ ಆಧುನಿಕತೆಯ ಕಾಲದಲ್ಲೂ ಜಾತಿ ಪದ್ದತಿಯು ವಿಜೃಂಭಿಸುವಾಗ ಈ ಪುಸ್ತಕದಲ್ಲಿ ಜಾತಿಯ ಬಗ್ಗೆ ಲೋಹಿಯಾರವರ ಚಿಂತನೆ ಓದಿದಾಗ ಹೌದಲ್ಲವಾ ಎನಿಸಿತು.ಅವರ ಪ್ರಕಾರ
ಭಾರತದಲ್ಲಿ ಬ್ರಾಹ್ಮಣ ಮತ್ತು ಶೂದ್ರರಿಬ್ಬರೂ ಜಾತಿಪದ್ಧತಿಗೆ ಸಿಕ್ಕಿ ಅರೆಜೀವವಾಗಿ ಬಿದ್ದಿದ್ದು, ಶೂದ್ರ ಬೀಜವಾಗಿ, ಬ್ರಾಹ್ಮಣ ಗೊಬ್ಬರವಾಗಿ ಸಮಾಜವಾದಿ ಬೆಳೆ ತೆಗೆಯಬೇಕಾಗಿದೆ .ಎಂಬ ಮಾತನ್ನು ನಾವ್ಯಾರು ಇನ್ನೂ ಅರ್ಥೈಸಿಕೊಂಡಿಲ್ಲ.
ಲಿಂಗ ತಾರತಮ್ಯ,
ಮಹಿಳೆಯರ ಅಸಮಾನತೆ ಮುಂತಾದವುಗಳ ಬಗ್ಗೆ ಪ್ರಸ್ತಾಪಿಸಿದ ಲೋಹಿಯಾರವರು ಭಾರತೀಯ ಮಹಿಳೆಗೆ ಪತಿ ಭಕ್ತಿಯ ಪ್ರತೀಕವಾದ ಸಾವಿತ್ರಿ ಆದರ್ಶಳಾಗದೆ, ಛಲ, ವಿವೇಕ ಮತ್ತು ಜಾಣ್ಮೆಗಳ ಮೂಲಕ ಸ್ತ್ರೀಶಕ್ತಿಯ ಸಂಕೇತದಂತಿರುವ ದ್ರೌಪದಿ ಸ್ಫೂರ್ತಿಯಾಗಬೇಕೆಂದು ಅವರು ಸೂಚಿಸಿದರು. ಹೆಣ್ಣಿನ ಶೋಷಣೆಯ ಸಣ್ಣ ವಿವರಗಳ ಕಡೆಗೂ ತಮ್ಮ ಗಮನ ಹರಿಸಿದ ಲೋಹಿಯಾ, ನಮ್ಮ ಅಡಿಗೆ ಮನೆಗಳು ಅಷ್ಟೇಕೆ ಕಿರಿದಾಗಿರಬೇಕು ಎಂದು ಪ್ರಶ್ನಿಸಿದರು .
ಲೋಹಿಯಾರವರು ಜಗತ್ತಿನಲ್ಲಿ ಏಳು ರೀತಿಯ ಅನ್ಯಾಯಗಳನ್ನು ಗುರುತಿಸಿದ್ದರು. ಸಮಾಜವಾದದ ಮೂಲಕ ಇವುಗಳ ನಿವಾರಣೆಗಾಗಿ 'ಸಪ್ತಕ್ರಾಂತಿ' ಕಲ್ಪನೆಯನ್ನು ಮುಂದಿಟ್ಟಿದ್ದರು ಅವುಗಳೆಂದರೆ
ಗಂಡು ಮತ್ತು ಹೆಣ್ಣಿನ ನಡುವೆ ಸಮಾನತೆ. ಎಲ್ಲ ರೀತಿಯ ರಾಜಕೀಯ ಗುಲಾಮಗಿರಿ ಹಾಗೂ ಸಾಮ್ರಾಜ್ಯಶಾಹಿಯ ನಾಶ.
ದೇಶದ ಜನತೆಯ ನಡುವೆ ಮತ್ತು ದೇಶಗಳ ನಡುವೆ ಆರ್ಥಿಕ ಸಮಾನತೆ.
ಸಾಮೂಹಿಕತೆಯ ಅತಿಗಳ ವಿರುದ್ಧ ಮನುಷ್ಯನ ಖಾಸಗಿತನದ ರಕ್ಷಣೆ. ವಿಶೇಷ ಪ್ರಾಶಸ್ತ್ಯದ ಮೂಲಕ ಜಾತಿ ನಿರ್ಮೂಲನೆ.
ನಿಶಸ್ತ್ರೀಕರಣ ಮತ್ತು ನಾಗರಿಕ ಅಸಹಕಾರ ಸತ್ಯಾಗ್ರಹದ ಬಳಕೆ.
ಎಲ್ಲ ಬಣ್ಣಗಳ ಜನತೆಯ ನಡುವೆ ಸಮಾನತೆ ಮತ್ತು ಸೌಂದರ್ಯ
ಮೀಮಾಂಸೆಯಲ್ಲಿ ಕ್ರಾಂತಿ
ಈ ಸಪ್ತಕ್ರಾಂತಿಗಳು ಇನ್ನೂ ಕ್ರಾಂತಿಯ ಹಂತದಲ್ಲಿಯೇ ಇವೆ ಎಂಬುದು ನಮಗೆ ತಿಳಿದೇ ಇದೆ ಆದರೂ ಕ್ರಾಂತಿಯೆಡಗೆ ಹೆಜ್ಜೆ ಇರಿಸಿದ್ದೇವೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.
ಪ್ರತಿಯೊಬ್ಬ ಭಾರತೀಯನೂ ಇಂತಹ ಪುಸ್ತಕ ಓದಬೇಕು ತನ್ಮೂಲಕ ಸಕಾರಾತ್ಮಕ ಬೆಳವಣಿಗೆಗೆ ಕಾರಣರಾಗಬೇಕು ಎಂಬುದು ನನ್ನ ಅನಿಸಿಕೆ .ನಿರ್ದಿಷ್ಟ ದಿಕ್ಕು ದಿಸೆಯಿಲ್ಲದೆ ಒಣಹರಟೆಯಲ್ಲೆ ಕಾಲಹರಣ ಮಾಡುವ ಎಲ್ಲಾ ಯುವಕರಿಗೆ ಇಂತಹ ಪುಸ್ತಕಗಳು ತಲುಪಬೇಕಿವೆ.
ನಿಮಗೂ ಈ ಪುಸ್ತಕ ಓದಬೇಕು ಎನಿಸಿದರೆ ಸವಿತಾ ನಾಗಭೂಷಣ ರವರನ್ನು 9481351079 ಸಂಪರ್ಕಿಸಿ 70 ರೂಪಾಯಿ ಕೊಟ್ಟು ಖರೀದಿಸಿ ಓದಬಹುದು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
No comments:
Post a Comment