ಮಾನವರಾಗೋಣ ೬
ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ತನ್ನ ಮರಣ ಕಾಲದ ಒಂದು ದಿನ ತನ್ನ ಸೇನಾಧಿಪತಿಯನ್ನು ಕರೆದು "ಮೂರು" ಅಪ್ಪಣೆ ಮಾಡಿದ.
ಮೊದಲನೇಯದು, ನನ್ನ ಮರಣದ ನಂತರ, ನನ್ನ ಶವ ಪೆಟ್ಟಿಗೆಯನ್ನು ಇಡೀ ದೇಶಗಳಲ್ಲಿನ ಪ್ರಸಿದ್ದ ವೈದ್ಯರಾದವರು ಹೊರಬೇಕು.
ಎರಡು, ನನ್ನ ಅಧಿಕಾರದ ಅವಧಿಯಲ್ಲಿ ಸಂಪಾದನೆ ಮಾಡಿದ ಎಲ್ಲ ಹೊನ್ನು, ವಜ್ರ, ಬೆಲೆ ಬಾಳುವ ಮಣಿ ಗಳನ್ನು, ನನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವ ದಾರಿಯುದ್ದಕ್ಕೂ ಎಸೆದು ಚಲ್ಲಬೇಕು.
ಮೂರು, ನನ್ನ ಎರಡೂ ಕೈಗಳು ಶವಪೆಟ್ಟಿಯ ಹೊರಗೆ ಎಲ್ಲರಿಗೂ ಕಾಣಿಸುವಂತೆ ಇರಿಸಬೇಕು.
ಅರ್ಥವಾಗದ ಸೇನಾಧಿಪತಿ , ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಪ್ರಶ್ನಿಸಿದ.
ಅಲೆಕ್ಸಾಂಡರ್ ನ ಉತ್ತರ ಹೀಗಿತ್ತು!
ಪ್ರಪಂಚದಲ್ಲಿಯೇ ಪ್ರಖ್ಯಾತರಾದ ವೈದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ಪ್ರಖ್ಯಾತ ವೈದ್ಯರು ನನ್ನ ಶವ ಪೆಟ್ಟಿಗೆ ಹೊರಲು ಹೇಳಿದೆ.ನನ್ನ ಆಡಳಿತ ಕಾಲದಲ್ಲಿ ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು ಅದನ್ನು ನಾನು ಕೊಂಡೊಯ್ಯಲಾಗದು. ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ ಎಂಬುದನ್ನು ಪ್ರಜೆಗಳಿಗೆ ತಿಳಿಸಲೆಂದು ವಜ್ರ, ಬಂಗಾರ ಮುಂತಾದ ಸಂಪತ್ತನ್ನು ಭೂಮಿಗೆ ಎಸಯಲಿಕ್ಕೆ ಹೇಳಿದೆ.
ಇನ್ನು ಶವಪೆಟ್ಟಿಯ ಹೊರಗಿಟ್ಟ ನನ್ನ ಎರಡೂ ಕೈಗಳನ್ನೂ ಪ್ರಜೆಗಳು ನೋಡುವ ಉದ್ದೇಶವೆಂದರೆ
ಪ್ರಪಂಚವನ್ನು ಗೆದ್ದ ಅಲೆಕ್ಸಾಂಡರ್ ಸತ್ತಾಗ ಅವನ ಕೈಯಲ್ಲಿ ಏನೂ ಇರಲಿಲ್ಲ ಎಂಬುದು ಪ್ರಜೆಗಳಿಗೆ ತಿಳಿಯಲಿ ಎಂದು.
ಈ ಉತ್ತರಗಳು ನಾವು ಪ್ರತಿಯೊಬ್ಬರೂ ಪ್ರತಿದಿನ ಚಿಂತನ ಮಂಥನ ಮಾಡಬೇಕಾದ ಅಂಶಗಳು.
ಕಾಲಾಯ ತಸ್ಮೈನಮಃ ಎಂಬಂತೆ ನಮ್ಮ ಕೈಯಲ್ಲಿ ಏನೂ ಇಲ್ಲ. ಜಾತಸ್ಯ ಮರಣಂ ಧ್ರುವಂ ಎಂಬಂತೆ ಹುಟ್ಟು ಆಕಸ್ಮಿಕ ಮರಣ ಖಚಿತ . ನಮ್ಮ ಸರದಿ ಬಂದಾಗ ನಾವು ಹೋಗಲೇಬೇಕು ಆ ಸಮಯದಲ್ಲಿ ನಾವು ಜೀವಿಸಿದ ಪರಿಯನ್ನು ನಾವು ಆತ್ಮಾವಲೋಕನ ಮಾಡಿಕೊಂಡು ಒಳಿತೆನೆಡೆಗೆ ಸಾಗಬೇಕಿದೆ.
ಅಲೆಕ್ಸಾಂಡರ್ ನ ಎರಡನೇ ಮತ್ತು ಮೂರನೇ ಉತ್ತರ ಪರಸ್ಪರ ಸಂಬಂಧವನ್ನು ಹೊಂದಿವೆ .ಅನಾದಿ ಕಾಲದಿಂದಲೂ ಜನ ಹೆಣ್ಣು, ಮಣ್ಣು, ಹೊನ್ನಿಗಾಗಿ ಹಾತೊರೆದು ತೊಳಲಾಡಿ ,ಬಡಿದಾಡಿ ಬರಿಗೈಯಲಿ ಅಳಿದುಹೋಗಿರುವುದು ನಮಗೇ ತಿಳಿದೇ ಇದೆ.ಆದರೂ ನಾವು ಈಗಲೂ
ಭೌತಿಕ ಸಂಪತ್ತಿನ ಹಿಂದೆ ಓಡುತ್ತಾ, ಅನೈತಿಕವಾಗಿ ಆಸ್ತಿ ಮಾಡುವುದನ್ನು ನಿಲ್ಲಿಸುವುದೇ ಇಲ್ಲ. ಆಗಾಗ್ಗೆ ಸ್ಮಶಾನ ವೈರಾಗ್ಯದಂತೆ ಆಸೆಗೆ ಮಿತಿ ಹೇರಿಕೊಂಡರೂ ಮತ್ತೆ ಅತಿಯಾಸೆಯಿಂದ ಅಕ್ರಮದಲ್ಲಿ ತೊಡಗಿ ಬೆಂಕಿಯ ಕಡೆ ಪತಂಗದ ಪಯಣ ಮಾಡುವಂತೆ ಓಡುತ್ತೇವೆ.
ಪ್ರತಿದಿನವೂ ಅಲೆಕ್ಸಾಂಡರ್ ನ ಮಾತುಗಳನ್ನು ಮೆಲುಕು ಹಾಕೋಣ .
ನಿಜವಾದ ಶಾಂತಿ ನೆಮ್ಮದಿ ಹಣ ಐಶ್ವರ್ಯದಲ್ಲಿ ಇಲ್ಲ ಅದು ನಮ್ಮ ಒಳಗೆ ಇದೆ ಅದನ್ನು ಹುಡುಕುವ ಪ್ರಯತ್ನ ಮಾಡೋಣ.ಮಾನವರಾಗೋಣ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು.
No comments:
Post a Comment