ಜನಸಂಖ್ಯೆ ಅಷ್ಟೇ ಅಲ್ಲ ಆರ್ಥಿಕವಾಗಿಯೂ ನಂಬರ್ ಒನ್ ಆಗಬಹುದು.
ಸುಮಾರು ಆರು ತಿಂಗಳಿನಿಂದ ಮಾಧ್ಯಮಗಳಲ್ಲಿ ಭಾರತ ಜನಸಂಖ್ಯೆಯಲ್ಲಿ ನಂಬರ್ ಒನ್ ಆಗಲಿದೆ ಎಂಬ ವರದಿಗಳು ಹರಿದಾಡುತ್ತಿದ್ದವು .ಈಗ ಅಧಿಕೃತವಾಗಿ ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯಾ ಅಂದಾಜು ವರದಿ ಖಚಿತಪಡಿಸಿದೆ.ನಾವೇ ನಂಬರ್ ಒನ್ ಎಂದು!
ಈ ವರ್ಷದ ಜೂನ್ ವೇಳೆಗೆ
ಭಾರತ 142.86 ಕೋಟಿ ಜನಸಂಖ್ಯೆ ಹೊಂದಲಿದೆ ಎಂದು ವಿಶ್ವಸಂಸ್ಥೆ ಅಂಕಿಅಂಶಗಳು ಹೇಳುತ್ತಿವೆ. ಇದುವರೆಗೂ ಮೊದಲ ಸ್ಥಾನದಲ್ಲಿದ್ದ ಚೀನಾ ಜನಸಂಖ್ಯೆ 142.57 ಕೋಟಿಯಷ್ಟಾಗಲಿದೆ. ಎಂದು ತಿಳಿದುಬಂದಿದೆ.
ಕೋವಿಡ್ ಜನಕನೆಂಬ ಕುಖ್ಯಾತಿಗೆ ಕಾರಣವಾದ ಚೀನಾದಲ್ಲಿ ಮಾಡಿದ್ದುಣ್ಣೋ ಮಹರಾಯ ಎಂಬಂತೆ ಕೋಟ್ಯಂತರ ಜನ ಅಸುನೀಗಿದರು. ಅದರ ಪರಿಣಾಮವಾಗಿ ಜನಸಂಖ್ಯೆ ಇಳಿಯುತ್ತಲೇ ಸಾಗಿತು.ಇದನ್ನು ಮನಗಂಡ ಚೀನಾ ತನ್ನ ಜನಸಂಖ್ಯೆಯ ಒಂದು ಮಗುವಿನ ಪಾಲಿಸಿಗೆ ತಿದ್ದುಪಡಿ ತಂದು ಜನಸಂಖ್ಯೆ ಹೆಚ್ವಳ ಕ್ರಮಗಳನ್ನು ಘೋಷಿಸಿತು .ಮದುವೆ ಹನಿಮೂನ್ ಗೆ ವಿಶೇಷ ಪ್ಯಾಕೇಜ್ ಘೋಷಿಸಿತು. ಇವ್ಯಾವೂ ಇನ್ನೂ ಫಲಕೊಟ್ಟಿಲ್ಲ .ಭಾರತ ಮಾತ್ರ ಜನಸಂಖ್ಯೆಯಲ್ಲಿ ನಂಬರ್ ಒನ್ ಆಗಿರುವುದು ಡ್ರಾಗನ್ ನ ಹೊಟ್ಟೆ ಉರಿಗೆ ಕಾರಣವಾಗಿದೆ.ಗಾಯದ ಮೇಲೆ ಬರೆ ಎಳೆದಂತೆ ಚೀನಾದಲ್ಲಿ ಮುದುಕರ ಸಂಖ್ಯೆ ಹೆಚ್ಚಾಗಿ ಯುವಕರ ಸಂಖ್ಯೆ ಕಡಿಮೆಯಾಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಕ್ಷೀಣಿಸಿ, ಉತ್ಪಾದಕತೆ ಕಡಿಮೆಯಾಗಿ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ಚೀನಾದಿಂದ ಕಾಲ್ತೆಗೆದು ಬೇರೆ ದೇಶಗಳ ಕಡೆ ಮುಖಮಾಡಿವೆ .
ಇದೇ ಸಂದರ್ಭದಲ್ಲಿ
ಭಾರತದಲ್ಲಿರುವ ಜನಸಂಖ್ಯೆಯಲ್ಲಿ ಕಾಲು ಭಾಗ 14 ವರ್ಷದ ಒಳಗಿವರಾಗಿದ್ದಾರೆ. ಇನ್ನು ಶೇಕಡಾ 68 ರಷ್ಟು ಮಂದಿ 15 ರಿಂದ 64 ವಯಸ್ಸಿನ ನಡುವಿನವರು ಎಂದು ತಿಳಿದುಬಂದಿದೆ. ಶೇಕಡಾ 7ರಷ್ಟು ಜನ ಮಾತ್ರ 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಭಾರತದಲ್ಲಿ ಯುವ ಸಮುದಾಯ ಹೆಚ್ಚಿದೆ. ಆದ್ರೆ ಚೀನಾದಲ್ಲಿ ವಯಸ್ಸಾದವರು ಹೆಚ್ಚಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.
ಚೀನಾದಲ್ಲಿ ಮಕ್ಕಳ ಜನನ ಪ್ರಮಾಣ ಸಾಕಷ್ಟು ಕುಸಿತ ಕಂಡಿರುವುದರಿಂದ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ತಿಳಿದುಬಂದಿದೆ.
ಜನಸಂಖ್ಯೆ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ದೊಡ್ಡ ಪೈಪೋಟಿ ಇತ್ತು. ಕೆಲವು ವರ್ಷಗಳ ಹಿಂದೆಯೇ ಭಾರತ ಜನಸಂಖ್ಯೆ ವಿಚಾರದಲ್ಲಿ ಚೀನಾವನ್ನ ಹಿಂದಿಕ್ಕುವ ನಿರೀಕ್ಷೆ ಮೂಡಿತ್ತು. ಆದ್ರೆ ಅದು ಈಗ ಅಧಿಕೃತವಾಗಿ ಸಾಧ್ಯವಾಗಿದ್ದು, ಚೀನಾ ಸೋತು ಹೋಗಿದೆ. ಮೊದಲೇ ಜನಸಂಖ್ಯೆ ಕುಸಿತದ ಭೀತಿಯಲ್ಲಿರುವ ಡ್ರ್ಯಾಗನ್ ರಾಷ್ಟ್ರ, ಈ ಸುದ್ದಿಯಿಂದ ಮತ್ತಷ್ಟು ಭಯದಲ್ಲಿ ಮುಳುಗಿದೆ. 2020ರ ನಂತರ ಅಂದರೆ ಕೊರೊನಾ ಅಪ್ಪಳಿಸಿದ ಬಳಿಕ ಚೀನಾ ಜನಸಂಖ್ಯೆ ವಿಚಾರದಲ್ಲಿ ಭಾರಿ ಕುಸಿತ ದಾಖಲಿಸುತ್ತಾ, ಅಪಾಯಕ್ಕೆ ಸಿಲುಕಿದೆ.
ಚೀನಾದಲ್ಲಿ ಹೀಗೆ ದಿಢೀರ್ ಇಷ್ಟು ಪ್ರಮಾಣದಲ್ಲಿ ಜನಸಂಖ್ಯೆ ಕುಸಿತ ಕಾಣಲು ಕಾರಣ ತಾನೇ ಕೈಗೊಂಡಿದ್ದ ನಿರ್ಧಾರ. ಚೀನಾದಲ್ಲಿ ಒಂದು ಜೋಡಿಗೆ ಒಂದೇ ಮಗು ಎಂಬ ನಿಯಮ ಇತ್ತು. ಹೀಗಾಗಿ ಹಲವು ದಶಕಗಳ ಕಾಲ ಇಲ್ಲಿ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನಿಯಮ ಇತ್ತು. ಈ ಕಾರಣಕ್ಕೆ ಭಾರಿ ಪ್ರಮಾಣದಲ್ಲಿ ಜನಸಂಖ್ಯೆ ಕುಸಿತ ದಾಖಲಿಸಿತ್ತು ಚೀನಾ. ಈ ಸತ್ಯ ಅರ್ಥವಾಗಿದ್ದೇ ತಡ ಎಚ್ಚೆತ್ತ ಚೀನಾ, ಕೆಲವು ವರ್ಷಗಳ ಹಿಂದೆ ತನ್ನ 'ಒಂದು ಮಗು' ನೀತಿ ಬದಲಿಸಿ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಮುಂದಾಗಿತ್ತು.
ಅದ್ಯಾವುದೂ ಫಲ ಕೊಟ್ಟಂತೆ ಕಾಣುತ್ತಿಲ್ಲ. ವಿಶ್ವ ಸಂಸ್ಥೆಯ ಅಧಿಕೃತವಾದ ಮಾಹಿತಿ ಹೊರಬೀಳುತ್ತಿದ್ದಂತೆ ಚೀನಾ ಬೇಸರದಿಂದಲೇ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಹೆಚ್ಚಳದ ನಂಬರ್ ಮುಖ್ಯ ಅಲ್ಲ ಗುಣಮಟ್ಟ ಮುಖ್ಯ ಎಂದು ಉಳಿ ದ್ರಾಕ್ಷಿ ಕಥೆ ಹೇಳಿದೆ.
ಆದರೂ ಚೀನಾದ ವಾದವನ್ನು ಸಂಪೂರ್ಣವಾಗಿ ತೆಗದುಹಾಕುವಂತಿಲ್ಲ. ನಾವು ಚಿಕ್ಕವರಿದ್ದಾಗ ಓದಿದಂತೆ ನಮ್ಮೆಲ್ಲಾ ಸಮಸ್ಯೆಗಳಿಗೆ ಜನಸಂಖ್ಯೆಯೇ ಕಾರಣ ಎಂಬ ಅರ್ಧ ಸತ್ಯ ಈಗ ನಿಚ್ಚಳವಾಗಿದೆ. ಜನಸಂಖ್ಯೆಯನ್ನು ಉತ್ತಮ ಮಾನವ ಸಂಪನ್ಮೂಲ ಮಾಡಲು ಆ ದೇಶಗಳಲ್ಲಿ ಇರುವ ಶಿಕ್ಷಣ, ಆರೋಗ್ಯ ,ಜನರ ಜೀವನಮಟ್ಟ, ಸರ್ಕಾರದ ನೀತಿಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹೆಮ್ಮೆಯನ್ನು ಎತ್ತಿ ಹಿಡಿದು ಮಾನವ ಸಂಪನ್ಮೂಲ ಸೃಜನೆ ಮಾಡಲು ಪಣ ತೊಡಬೇಕಿದೆ ತನ್ಮೂಲಕ ಆರ್ಥಿಕವಾಗಿಯೂ ನಾವು ನಂಬರ್ ಒನ್ ಆಗಲು ಪ್ರಯತ್ನ ಪಟ್ಟರೆ ಮುಂದೊಂದು ದಿನ ಭಾರತ ಅಭಿವೃದ್ಧಿಶೀಲ ದೇಶಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು. ಶಿಕ್ಷಕರು
No comments:
Post a Comment