ಸಮಯ
ಬಹು ಕಠಿಣ ಸಮಸ್ಯೆಯೂ
ಕೆಲವೊಮ್ಮೆ ಕರಗುವುದು
ಆದಂತೆ ಮಾಯ |
ಎಲ್ಲದಕ್ಕೂ ಒಂದಲ್ಲ
ಒಂದು ಪರಿಹಾರ ಸೂಚಿಸುತ್ತದೆ
ಅದೇ ಸಮಯ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸಮಯ
ಬಹು ಕಠಿಣ ಸಮಸ್ಯೆಯೂ
ಕೆಲವೊಮ್ಮೆ ಕರಗುವುದು
ಆದಂತೆ ಮಾಯ |
ಎಲ್ಲದಕ್ಕೂ ಒಂದಲ್ಲ
ಒಂದು ಪರಿಹಾರ ಸೂಚಿಸುತ್ತದೆ
ಅದೇ ಸಮಯ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಯುದ್ಧ ನಿಲ್ಲುವುದಾವಾಗ?
ರಷ್ಯಾ ,ಉಕ್ರೇನ್ ಯುದ್ಧ
ಶುರುವಾಗಿ ಉರುಳಿಹೋಗಿವೆ
ದಿನಗಳು ಮುನ್ನೂರ ಅರವತ್ತೈದು|
ಯುದ್ಧದಾಯಿ ನಾಯಕರಿಗೆ
ಬುದ್ಧಿ ಹೇಳುವರಾರು ಬೈದು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಅಂತರ್ಜಾಲದ ಮಾಯಾಲೋಕ
"ಬಿಟ್ಟೆನೆಂದರೂ ಬಿಡದೀ ಮಾಯೆ" ಎಂಬಂತೆ ಅಂತರ್ಜಾಲದ ಮಾಯಾಲೋಕ ನಮ್ಮನ್ನು ಆವರಿಸಿದೆ. ಹುಟ್ಟಿನಿಂದ ಚಟ್ಟದ ವರೆಗೂ ಅದು ಕಬಂಧ ಬಾಹುಗಳು ವಿಸ್ತಾರವಾಗುತ್ತಲೇ ಇವೆ.
ಅಂತರ್ಜಾಲ ಎಲ್ಲರ ಕೈಸೇರಿದ ಪರಿಣಾಮ
ತಂತ್ರಜ್ಞಾನದ ಬೆಳವಣಿಗೆಯೂ ಜೊತೆಗೂಡಿ ಮೊಬೈಲ್ ಬಳಕೆ ಮತ್ತು ಮೊಬೈಲ್ ಡಾಟಾ ಕೈಗೆಟುಕುವಂತಾದಾಗ ಮಾಯಾಲೋಕ ಎಲ್ಲರ ಸೆಳೆದು ತನ್ನ ತೆಕ್ಕೆಗೆ ಹಾಕಿಕೊಂಡಿತು.
ಇದರಿಂದಾಗಿ ಸ್ವಲ್ಪ ಮಟ್ಟಿಗೆ ಅನುಕೂಲಗಳಾದರೂ ಖದೀಮರಿಗೆ ಸುಗ್ಗಿಯ ಕಾಲವಾಯಿತು.
ಅಪರಾಧಗಳ ಹೆಚ್ಚಳ, ಹಾಕಿಂಗ್, ದೇಶದ್ರೋಹ ಚಟುವಟಿಕೆಗಳು ಅಂತರಜಾಲದ ನೆರವು ಪಡೆದು ಈಗ ದೇಶಗಳ ಆರ್ಥಿಕ ಚಟುವಟಿಕೆಗಳನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದಿರುವುದು ದುರದೃಷ್ಟಕರ.
ಅದರಲ್ಲೂ ಸೈಬರ್ ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಿ ಬಡವರ ಬೆವರಿನ ಹಣ, ಮದ್ಯಮ ವರ್ಗದ ಸಂಬಳದಾರರ ಹಣ ಕ್ಷಣಾರ್ಧದಲ್ಲಿ ಖದೀಮರ ಪಾಲಾಗುತ್ತಿರುವುದನ್ನು ಪ್ರತಿ ದಿನ ಪತ್ರಿಕೆಯಲ್ಲಿ ಓದುವಾಗ ಬೇಸರವಾಗುತ್ತದೆ.
ಜನವರಿ 2023 ರ ಜನವರಿ ತಿಂಗಳೊಂದರಲ್ಲೆ ಕರ್ನಾಟಕದಲ್ಲಿ
36 ಕೋಟಿ ರೂಗಳನ್ನು ಈ ಸೈಬರ್ ವಂಚಕರು ನುಂಗಿ ನೀರು ಕುಡಿದಿದ್ದಾರೆ ! ಅದರಲ್ಲಿ ಕೇವಲ 1 ಕೋಟಿ ರಿಕವರಿ ಮಾಡಿಕೊಡಲಾಗಿದೆ.ಇದು ಸೈಬರ್ ಕ್ರೈಮ್ ಕರಾಳತೆಯ ಒಂದು ಉದಾಹರಣೆ ಮಾತ್ರ. 2019 ರಲ್ಲಿ 71 ಕೋಟಿ ಹಣ , 2022 ರಲ್ಲಿ 363 ಕೋಟಿ ಹಣ ಸೈಬರ್ ಕಳ್ಳರ ವಶವಾಗಿದೆ ಎಂದು ಅಧಿಕೃತವಾಗಿ ಘೋಷಣೆಗಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ.
ನಮ್ಮ ಖಾತೆಗಳ ವಿವರ, ಅಧಾರ್ ,ಓಟಿಪಿ, ಪಿನ್, ಮುಂತಾದ ವೈಯಕ್ತಿಕ ವಿವರಗಳನ್ನು ಅಪರಿಚಿತರ ಬಳಿ ಹಂಚಿಕೊಳ್ಳದಿರೋಣ .
ಇನ್ನೂ ಬೇರೆ ಬೇರೆ ಸೈಬರ್ ಅಪರಾಧಗಳ ಮೂಲ ನಮ್ಮ ಅಂತರ್ಜಾಲ ಅಂತರ್ಜಾಲವನ್ನು ವಿವೇಚನೆಯಿಂದ ಬಳಸೋಣ ವಂಚನೆಯ ಜಾಲಕ್ಕೆ ಸಿಲುಕದಿರೋಣ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಬದುಕು
ಹಿಂದಿನ ಚಿಂತೆ ಬಿಡು
ಮುಂದಿನ ಆತಂಕ ದೂಡು
ಈ ಕ್ಷಣದಲಿ ಬದುಕು |
ನಾವಂದು ಕೊಂಡಂತಲ್ಲ .
ನಿತ್ಯ ನೂತನ ಈ ಬದುಕು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಆಗಾಗ್ಗೆ
ನನ್ನವಳು ಸದಾ ನಗುವಳು
ಹೊಗಳುವಳು ಮಾತನಾಡುತ್ತಾ
ನನ್ನ ಬಗ್ಗೆ |
ಇಂತಹ ಸುಂದರ
ಸ್ವಪ್ನಗಳು ಬೀಳುತ್ತವೆ
ನನಗೆ ಆಗಾಗ್ಗೆ ||
ಸಿಹಿಜೀವಿ
*ಶಸ್ತ್ರ*
ನಿನ್ನ ಹಕ್ಕು ಅನ್ನ ,ವಸತಿ ,ವಸ್ತ್ರ
ಪ್ರತಿಭಟನೆ ಆಗಬೇಕಿದೆ ಅಸ್ತ್ರ
ಬರದಿದ್ದರೂ ಚಿಂತೆಯಿಲ್ಲ ಶಾಸ್ತ್ರ
ಅಗತ್ಯವಿದ್ದಾಗ ಹಿಡಿ ನೀ ಶಸ್ತ್ರ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಸ್ನೇಹದ ವರತೆ*
ವಾಟ್ಸಪ್ ಬಂದು ನೂರಾರು ಬಳಗಗಳು ನಮ್ಮ ಸಮಯವನ್ನು ಹಾಳು ಮಾಡುವುದನ್ನು ಕಂಡು ಇತ್ತೀಚೆಗೆ ಕೆಲ ಬಳಗಗಳಿಂದ ಕೆಲಸದ ಒತ್ತಡದ ನೆಪ ಹೇಳಿ ಹೊರಬಂದ ಉದಾಹರಣೆ ಇವೆ. ಮೊನ್ನೆ ಇಂತದೇ ಒಂದು ಬಳಗಕ್ಕೆ ಸೇರಿಸಿದ ಕೂಡಲೇ ಹೊರಬರುವ ಮನಸಾಗಿ ಒಮ್ಮೆ ಗ್ರೂಪ್ ಇನ್ಪೋ ನೋಡಿದೆ..ಪರಿಚಿತ ಗೆಳೆಯ ಶಾಂತಪ್ಪ ಮತ್ತು ನನ್ನ ಬಾಲ್ಯದಲ್ಲಿ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸರೋಜಿನಿ ರವರ ಹೆಸರು ಇದ್ದದ್ದು ನೋಡಿ ಸಂತಸವಾಗಿ ಗುಂಪಿನಲ್ಲೇ ಉಳಿದೆ.
ಅಷ್ಟರಲ್ಲಾಗಲೇ ಹದಿನೆಂಟು ನಮ್ಮ ಹೈಸ್ಕೂಲ್ ಗೆಳೆಯ ಗೆಳತಿಯರ ನಂಬರ್ ಕಲೆಕ್ಟ್ ಮಾಡಿ ನಮ್ಮ ಬಳಗಕ್ಕೆ ಸೇರಿಸಿದ್ದರು. ನಾನು ಖುಷಿಯಿಂದಲೇ ಬಳಗಕ್ಕೆ ಮೊದಲ ಪೋಸ್ಟ್ ಹಾಕಿದೆ ಅದು ಹೀಗಿತ್ತು..
"ಮೊದಲು ನಮ್ಮ ಬಳಗದ ಸರ್ವರಿಗೂ ಸಿಹಿಜೀವಿಯ ನಮನಗಳು...
ಬಹಳ ವರ್ಷಗಳ ನಂತರ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಸೌಭಾಗ್ಯ ದೊರೆತಿದೆ...
ನೆನಪುಗಳು ಒತ್ತರಿಸಿಕೊಂಡು ಬರುತ್ತಿವೆ...ನಿಜ ಆ ದಿನಗಳೇ ಗೋಲ್ಡನ್ ಡೇಸ್.ಇಂದು ನಾವೇನಾಗಿರುವೆವೋ ಅದಕ್ಕೆ ಆ ದಿನಗಳೇ ಕಾರಣ .ಅಂದು ಕಲಿತ ಶಾಲೆ ,ಒಡನಾಡಿಗಳು ,ಊರು ಇವುಗಳನ್ನು ಮರೆಯಲು ಸಾದ್ಯವೇ ಇಲ್ಲ.
ಮತ್ತೊಮ್ಮೆ ನಮ್ಮನ್ನು ಬೆಸೆಯಲು ಶ್ರಮ ಮತ್ತು ಕ್ರಮ ವಹಿಸಿದ ಶಾಂತಪ್ಪ ಮತ್ತು ಸರೋಜಿನಿ ರವರಿಗೆ ನನ್ನ ಮನದಾಳದ ಕೃತಜ್ಞತೆಗಳು.ನಿಮ್ಮ ಪ್ರಯತ್ನದ ಫಲವಾಗಿ ಈಗ ನಮಗೆ ಹದಿನೆಂಟು ಅಮೂಲ್ಯ ಬಾಲ್ಯದ ರತ್ನಗಳು ದೊರೆತಿವೆ . (ಈಗ ಗ್ರೂಪ್ ಸಂಖ್ಯೆ18)
ನನಗೀಗ ಸಿಕ್ಕಿವೆ
ಬಾಲ್ಯದ ಅಮೂಲ್ಯ
ರತ್ನಗಳು ಹದಿನೆಂಟು|
ಮೆಲಕು ಹಾಕುತಲಿರುವೆ
ಆ.. ದಿನಗಳಲ್ಲಿ ನಾವಾಡಿದ
ತರಲೆ ,ಕೀಟಲೆ ,ಸವಿನೆನೆಪುಗಳ.
ಮರೆಯುವುದಾದರೂ ಹೇಗೆ
ನಮ್ಮ ಅಮೂಲ್ಯ ಸ್ನೇಹದ ನಂಟು ||
ಇನ್ನೂ ನನ್ನ ಕಿರು ಸಾಹಿತ್ಯದ ಹಾದಿಗೆ
ಶಾಂತಪ್ಪ ಮತ್ತು ಸರೋಜಿನ ನಿಮ್ಮ ಮೆಚ್ಚುಗೆ ಮಾತನಾಡಿ ಪ್ರೋತ್ಸಾಹ ನೀಡಿರುವಿರಿ ನಿಮ್ಮ ಹಾರೈಕೆಗೆ ಧನ್ಯವಾದಗಳು..
ಮೊದ ಮೊದಲು ಕೊರಗಿತ್ತು
ಎಲ್ಲಾ ಸ್ನೇಹಿತರ ಭೇಟಿಯಾಗಲಿಲ್ಲ
ಎಂಬ ಕೊರತೆ |
ಈಗ ಚಿಮ್ಮುತಿದೆ
ಸ್ನೇಹದ ವರತೆ ||
ಎಲ್ಲರೂ ಒಂದೆಡೆ ಮುಖತಃ ಸೇರಿ ನಮ್ಮ ಬಾಲ್ಯದ ದಿನಗಳ ನೆನಪುಗಳು ನೆನದು ಸಂಭ್ರಮಿಸೋಣ..."
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಳಗದ ಕೆಲ ಸ್ನೇಹಿತರು ನಾವು ಮರೆತಿರುವ ನಮ್ಮ ಹೈಸ್ಕೂಲ್ ಸಹಪಾಠಿಗಳ ಹೆಸರನ್ನು ಪಟ್ಟಿ ಮಾಡಿ ಹಾಕಿದರು. ಅವರ ಜ್ಞಾಪಕ ಶಕ್ತಿಯನ್ನು ಹೊಗಳದೇ ಇರಲಾಗಲಿಲ್ಲ .
ಅವರ ಹೆಸರುಗಳೆಂದರೆ ಮಹೇಶ,ಮಂಜುನಾಥ,ಇಂದ್ರಮ್ಮ
,ಗೌರಮ್ಮ,ಶಾರದಮ್ಮ,ಯಶೋದಾ,ಸಿದ್ದಪ್ಪ,ಪ್ರಭು ,ರಾಜಪ್ಪ, ಭಾಗ್ಯಮ್ಮ, ರಂಗನಾಥ, ಅಂಜಿನಪ್ಪ, ಫಯಾಜ್,ಗೀತಾ, ಗೋವಿಂದರಾಜು, ಗಿರಿಜಮ್ಮ, ಗುರು ಸಿದ್ದಪ್ಪ, ಲಕ್ಷ್ಮಣ ಮೀನಾಕ್ಷಿ, ಹೊರಕೇರಪ್ಪ, ನೇತ್ರಾವತಿ, ನಂಜುಂಡಸ್ವಾಮಿ,ನಾಗವೇಣಿ, ಪುಷ್ಪಾವತಿ, ಪ್ರಕಾಶ, ರಿಯಾಜ್,ರಾಜೇಶ್ವರಿ,ಸನಾವುಲ್ಲಾ, ರಾಜಮ್ಮ,ರೇಖಾಮಣಿ, ಶೇಕ್ ಅಹಮದ್ ,ಶಿವಕುಮಾರ್, ಸುಲೋಚನಾ, ಸುಧಾಮಣಿ ಸಾವಿತ್ರಮ್ಮ,ಸಣ್ಣತಿಮ್ಮಪ್ಪ, ಜೆ ತಿಪ್ಪೇಸ್ವಾಮಿ, ಉಷಾ ರಾಣಿ ...ಹೀಗೆ ಸುಮಾರು ಐವತ್ತು ಬಾಲ್ಯದ ಮುಖಗಳು ಕಣ್ಮುಂದೆ ಹಾದು ಹೋದವು ಆಗಾಗ್ಗೆ ಕಂಡ ಕೆಲ ಮುಖಗಳು ಸ್ಪಷ್ಟವಾಗಿ ಕಂಡರೆ ಕೆಲ ಮುಖಗಳು ಅಸ್ಪಷ್ಟವಾಗಿ ಕಾಣಿಸಿದವು. ಆ ಎಲ್ಲ ನನ್ನ ಬಾಲ್ಯದ ಒಡನಾಡಿಗಳನ್ನು ಮುಖತಃ ಭೇಟಿಯಾಗುವ ಕಾಲ ಸದ್ಯದಲ್ಲೇ ಬರಲೆಂದು ಕಾತರದಿಂದ ಕಾಯುತ್ತಿದ್ದೇನೆ....
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಕಾಯುತಿದೆ ನನ್ನ ಗಲ್ಲ. ಮಂಗಳ
ನೀ ನನ್ನ ಮುತ್ತು
ನಿನ್ನ ಮುತ್ತಿಗಾಗಿ
ಕಾಯುತಿದೆ ನನ್ನ ಗಲ್ಲ|
ಬೇರೇನಿದೆ ನನಗೆ
ನೀನೇ ನನಗೆಲ್ಲ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ನಿನ್ನ ನೆನೆಪೇ...
ನಿನ್ನ ನೋಡದಿರೆ
ಹೇಳತೀರದು ನನ್ನ ಪಾಡು |
ಮುಟ್ಟಿ ನೋಡುವೆನು
ನೀ ನಡೆದ ಜಾಡು
ನಿನ್ನ ನೆನಪೇ ಲಾಲಿಹಾಡು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ನನ್ನೊಡನೆ ನೀನಿರಲು...
ಭಯವಿಲ್ಲ ನನಗೆ
ಬಂದರೂ ನೂರಾರು ಕಷ್ಟಗಳು |
ಕಣ್ಣೀರು ಪನ್ನೀರಾಗುವುದು
ನನ್ನೊಡನೆ ನೀನಿರಲು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಒಬ್ಬಂಟಿ ಯಾನ...
ಬಿಗಿದಪ್ಪಿ ಬಿಸಿ
ಮಾಡಲು ಬಾ ಗೆಳತಿ
ನಡುಗುತಿದೆ ಮೈಮನ|
ಸಾಕಾಗಿ ಹೋಗಿದೆ
ಚಳಿಯ ಬೆಳಗಿನ
ಒಬ್ಬಂಟಿ ಯಾನ ||
ಸಿಹಿಜೀವಿ
*ಸತ್ಯ ,ಸುಳ್ಳು*
ವಿಜೃಂಭಿಸುವುದು ಆಗಾಗ್ಗೆ
ಜಗದಲಿ (ಸುಳ್ಳು)ಅನೃತ |
ಸತ್ಯಕ್ಕೆ ಸಾವಿಲ್ಲ ದೇದೀಪ್ಯಮಾನವಾಗಿ
ಪ್ರಜ್ವಲಿಸುವುದು ಅನವರತ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸತ್ಯ ,ಸುಳ್ಳು*
ಕಪ್ಪಿನಂತೆ ವಿಜೃಂಭಿಸುವುದು
ಆಗಾಗ್ಗೆ ಜಗದಲಿ (ಸುಳ್ಳು)ಅನೃತ |
ಸತ್ಯಕ್ಕೆ ಸಾವಿಲ್ಲ ಶುಭ್ರವಾದ ಬಟ್ಟೆಯಂತೆ
ಹೊಳೆಯುವುದು ಅನವರತ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಸಮಾಧಾನಿಯಾಗಿರಿ...
ಪುಸ್ತಕ ಪರಿಚಯ...
ಇತ್ತೀಚೆಗೆ ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪಡೆಯಲು ಹಾಜರಾಗಿ ಪ್ರಶಸ್ತಿ ಸ್ವೀಕರಿಸಿದ್ದು ಬಹಳ ಸಂತಸ ನೀಡಿತು.ಅದಕ್ಕಿಂತ ಮುಖ್ಯವಾಗಿ ಡಾ .ಸಿ ಆರ್ ಚಂದ್ರಶೇಖರ್ ರವರನ್ಬು ಹತ್ತಿರದಿಂದ ನೋಡುವ ಸೌಭಾಗ್ಯ! ಅಷ್ಟೇ ಅಲ್ಲ ನನ್ನ ಹತ್ತನೇ ಕೃತಿಯನ್ನು ಅವರೇ ಲೋಕಾರ್ಪಣೆ ಮಾಡಿದ್ದು! ಇನ್ನೇನು ಬೇಕು ನನಗೆ.ಒಟ್ಟಾರೆ ಆ ಇಡಿ ದಿನ ಸಂತಸದಲ್ಲಿ ತೇಲಿದ್ದೆ.ಆ ಕ್ಷಣಗಳನ್ನು ಈಗಲೂ ಪದೇ ಪದೇ ಮೆಲುಕು ಹಾಕುತ್ತಲೇ ಇರುವೆ.
280 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರ ಬಗ್ಗೆ ಸರ್ವರಿಗೂ ಪರಿಚಯವಿದೆ.
ಅವರು ಮಾನಸಿಕ ಆರೋಗ್ಯ ತಜ್ಞರು. ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದೆವ್ವ, ಭೂತ, ಭಾನಾಮತಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಆ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದಾರೆ ಸಾವಿರಾರು ಭಾಷಣಗಳನ್ನು ನೀಡಿದ್ದಾರೆ. 750ಕ್ಕೂ ಹೆಚ್ಚು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಮಾನಸಿಕ ಆರೋಗ್ಯ, ಸಾಮಾನ್ಯ ಆರೋಗ್ಯ, ಲೈಂಗಿಕ ವಿಜ್ಞಾನ, ವೈಚಾರಿಕ ಸಾಹಿತ್ಯ, ಕಾದಂಬರಿ, ಸಣ್ಣ ಕತೆ, ಅನುವಾದ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. 1986ರಲ್ಲೇ ಸ್ಥಾಪಿತವಾಗಿದ್ದ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿಗೆ 1994ರಲ್ಲಿ ಪುನಃಶ್ಚೇತನ ನೀಡಿದರು. ಹಲವಾರು ವಿದೇಶಗಳಿಗೆ ತಜ್ಞ ವೈದ್ಯರಾಗಿಯೂ ಮತ್ತು ಪ್ರವಾಸಿಗರಾಗಿಯೂ ಹೋಗಿಬಂದಿದ್ದಾರೆ.
ಅಂದಿನ ಸಮಾರಂಭದಲ್ಲಿ ನನಗೆ ಮತ್ತು ಪ್ರಶಸ್ತಿ ಪುರಸ್ಕೃತರಿಗೆ ಅವರ ಇತ್ತೀಚಿನ ಪುಸ್ತಕ "ಸಮಾಧಾನಿಯಾಗಿರಿ" ಉಚಿತವಾಗಿ ನೀಡಿದರು. ಮನೆಗೆ ಬಂದು ಪುಸ್ತಕ ಓದಿದಾಗ ಪಕ್ಕದಲ್ಲೇ ಕುಳಿತು ಅಣ್ಣ ಅಥವಾ ತಂದೆ ನಮಗೆ ವ್ಯಕ್ತಿತ್ವ ಕುರಿತಾದ ಪಾಠ ಹೇಳಿದಂತಿತ್ತು. ಒಬ್ಬ ಶಿಕ್ಷಕ ಮಕ್ಕಳಿಗೆ ಮುದ್ದಿಸಿ ಜೀವನದ ಪಾಠ ಹೇಳಿದಂತಿತ್ತು.ಒಬ್ಬ ಅಜ್ಜಿ ತನ್ನ ಅನುಭವಗಳನ್ನು ಮೊಮ್ಮಕ್ಕಳಿಗೆ ಪ್ರೀತಿಯಿಂದ ಹೇಳಿದಂತಿತ್ತು.
ಈ ಪುಸ್ತಕದಲ್ಲಿ ಒಟ್ಟು ಮೂವತ್ತು ಲೇಖನಗಳಿವೆ.
ಆರೋಗ್ಯ ಜೀವನ ಕ್ರಮ,ಔಷಧಿಗಳು
, ಮಾನಸಿಕ ಆರೋಗ್ಯ,ಮಕ್ಕಳ ವಿಕಾಸ ,ಮಕ್ಕಳ ನಡೆವಳಿಕೆಗಳು, ಹರೆಯದವರ ಮನೋ ತಲ್ಲಣ,ಕುಟುಂಬದ ಸಬಲೀಕರಣ
,ನಿದ್ರಾ ತೊಂದರೆಗಳು,ಹೆಚ್ಚುತ್ತಿರುವ ಆತ್ಮಹತ್ಯೆ ಮಾನಸಿಕ ಸಮಸ್ಯೆಗಳು,ಪುರುಷರ ಮಾನಸಿಕ ಸಮಸ್ಯೆಗಳು ಸ್ಪೈಸ್ ಟೆನ್ಷನ್ ಕಿರಿಕಿರಿಯಿಂದ ಪಾರಾಗುವುದು ಹೇಗೆ?, ಏಕಿಷ್ಟು ಆತಂಕ?,ಸಾವು: ಭಯ ಬೇಕೆ?,ಸ್ಕಿಜೋಫ್ರೀನಿಯಾ, ಗೀಳು ಮನೋರೋಗ,ಸುಖ ಪಡುವ ಚಟ ,ಅಶ್ಲೀಲ ಚಿತ್ರಗಳ ವೀಕ್ಷಣೆಯ ಚಟ,ಹಿಸ್ಟ್ರಿಯಾನಿಕ್ ವ್ಯಕ್ತಿತ್ವ, ಹದಗೆಡುತ್ತಿರುವ ವೃದ್ಧರ ಮನಸ್ಸು,ಮನೋರೋಗಗಳಿಗೆ ಮದ್ದು,ಸಂಗೀತ ಚಿಕಿತ್ಸೆ, ದಾನ- ಧರ್ಮ ಪರೋಪಕಾರ, ದೆವ್ವ-ಭೂತಗಳಿವೆಯೇ?,ದೇವರಲ್ಲಿ ನಂಬಿಕೆ ಎಷ್ಟಿರಬೇಕು ಹೇಗಿರಬೇಕು? ,ನಂಬಿಕೆಗಳು - ವೈಜ್ಞಾನಿಕ ಮನೋಭಾವ,ಸ್ವಗೌರವ - ಸ್ವಾಭಿಮಾನ, ಪಾಸಿಟಿವ್ ಸೈಕಾಲಜಿ, ಕೋವಿಡ್-19ರಿಂದಾಗಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳು, ನಿಮ್ಮ ಮನಸ್ಸಿನ ನೋವಿಗೆ ಪರಿಹಾರ, ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್,ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಿ ...
ಹೀಗೆ ವಿವಿಧ ವಿಷಯಗಳ ಅದ್ಯಾಯಗಳು ಓದಿಸಿಕೊಂಡು ಸಾಗುತ್ತವೆ. ಈ ಪುಸ್ತಕ ನನಗಾಗಿಯೇ ಬರೆದಿದೆಯೇನೋ ಎನಿಸದಿರದು.ಇದರಲ್ಲಿ ಬಾಲಕರಿಂದ ಹಿಡಿದು ವೃದ್ಧ ರವರೆಗೆ ಎಲ್ಲರಿಗೂ ಅನ್ವಯಿಸುವ ಲೇಖನಗಳಿವೆ ಇವೆಲ್ಲವೂ ಪದೇ ಪದೇ ನಮ್ಮನ್ನು ಕಾಡುತ್ತವೆ.ಈ ಪುಸ್ತಕ ಪದೇ ಪದೇ ಓದಿ ಮನನ ಮಾಡಿಕೊಳ್ಳುವ ಮತ್ತು ಈ ಎಲ್ಲಾ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ.
ಡಾ ಸಿ ಆರ್ ಸಿ ರವರ ಮಾತುಗಳಲ್ಲೇ ಹೇಳುವುದಾದರೆ..
"ಕಣ್ಣಿಗೆ ಕಾಣದ, ಕೈಗೆ ಸಿಗದ ಮನಸ್ಸನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ.ಆದರೆ ಈ ಮನಸ್ಸೇ ದೇಹದ ಸಾರಥಿ, ನಮ್ಮ ನಡೆ ನುಡಿಗಳು, ಎಲ್ಲಾ ಕ್ರಿಯೆ-ಪ್ರತಿಕ್ರಿಯೆ ಗಳನ್ನು ನಿಯಂತ್ರಿಸುತ್ತದೆ. ಮನಸ್ಸು ದೃಢವಾಗಿದ್ದರೆ, ಪ್ರಶಾಂತವಾಗಿದ್ದರೆ, ನಮ್ಮ ದೇಹ ಆರೋಗ್ಯವಾಗಿರುತ್ತದೆ. ನಮ್ಮ ಸಾಮರ್ಥ್ಯ ಹೆಚ್ಚಿರುತ್ತದೆ. ಹಲವು ಕಾರಣಗಳಿಂದ ಮನಸು ಪ್ರಕ್ಷುಬ್ಧ ವಾಗುತ್ತದೆ. ರೋಗಗ್ರಸ್ತವಾಗುತ್ತದೆ ಅದಕ್ಕೆ ಚಿಕಿತ್ಸೆ ಪರಿಹಾರವು ಇದೆ".
ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ ಪ್ರತಿ ಅದ್ಯಾಯದ ಕೊನೆಯಲ್ಲಿ ಉಳಿದ ಪುಟದಲ್ಲಿ ಒಂದು ಕವಿತೆ ಅಥವಾ ಚಿಂತನೆಗೆ ಹಚ್ಚುವ ಸಾಲುಗಳ ಮುದ್ರಣ ಮಾಡಿರುವುದು .ಆ ಸಾಲುಗಳು ಚಿಂತಿಸುವ ನಮ್ಮನ್ನು ಚಿಂತನ ಮಂಥನ ಮಾಡುವಂತೆ ಪ್ರೇರೇಪಿಸುತ್ತವೆ.
ಅದಕ್ಕೆ ಉದಾಹರಣೆ ಈ ಸಾಲುಗಳು
"ರೋಗಿಗೆ ಬೇಕು ಏನು?
ಔಷಧಿ ಮಾತ್ರವಲ್ಲ, ಔಷಧಿಯ ಜೊತೆ ಬೇಕು ಸುಲಭ ಜೀರ್ಣವಾಗುವ ಮುಷ್ಟಿ ಆಹಾರ, ಸಾಂತ್ವನ– ಭರವಸೆಯ ಮಾತುಗಳು, ಸಹಾನುಭೂತಿ- ಸಹನೆಯ ಆರೈಕೆ ಆರೇಳು ಗಂಟೆಗಳ ಸುಖ ನಿದ್ರೆ. ಸ್ವಚ್ಛತೆ,ವೈಯಕ್ತಿಕ ಮತ್ತು ಪರಿಸರ ಸಂಗೀತ ಶ್ರವಣ, ಮೌನ - ಧ್ಯಾನ. ಸಕಾರಾತ್ಮಕ ಚಿಂತನೆ – ಭರವಸೆ ಸಮಯದ ಶಿಸ್ತು – ಔಷಧ ಸೇವನೆ ಲಘು ವ್ಯಾಯಾಮ - ನಡಿಗೆ - ಚಲನೆ, ನಗು - ಹಾಸ್ಯ - ಸಂತೋಷಕರ ಸಂಭಾಷಣೆ ಅವಧಿ ಗೊಂದಾವರ್ತಿ ವೈದ್ಯರ ಸಲಹೆ. ಆತಂಕ - ಗೊಂದಲಗಳ ನಿವಾರಣೆ. ಅತಿ ಅನುಕಂಪ - ಅಯ್ಯೋ ಪಾಪ ಎನ್ನ ಬೇಡಿ ರೋಗದ ವಿರುದ್ಧ ಹೋರಾಟದಲ್ಲಿ ಜಯ ನಿನ್ನದೇ ಎನ್ನಿ."
ಎಷ್ಟು ಅರ್ಥಪೂರ್ಣ ಅಲ್ಲವೇ ಸ್ನೇಹಿತರೆ..
ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಹೇರುವ ಒತ್ತಡದ ಬಗ್ಗೆ ಸಿ ಆರ್ ಸಿ ರವರು ಹೀಗೆ ಸಲಹೆ ನೀಡಿದ್ದಾರೆ
" ನಿಮ್ಮ ಮಕ್ಕಳು ಓದಿ ಏನಾಗ ಬೇಕು? ಡಾಕ್ಟರ್, ಇಂಜಿನೀಯರ್ , ಆಫೀಸರ್ , ಉದ್ಯಮಿ, ವ್ಯಾಪಾರಿ, ಕೋಟ್ಯಾಧಿಪತಿ ಸಮಾಜದಲ್ಲಿ ಅತಿ ಗಣ್ಯ ವ್ಯಕ್ತಿ ,ಎ.ಐ.ಪಿ? ಅವರುಏನೇ ಆಗಲಿ ಅವರಿಗೇ ಬಿಡಿ .ಅವರು ಸದಾ ಅರೋಗ್ಯ ವಂತರಾಗಿರಲಿ. ಸ್ವಾಭಿಮಾನಿಗಳಾಗಿರಲಿ, ಸ್ವಾವಲಂಬಿಗಳಾಗಲಿ ಗುಣವಂತರಾಗಿ, ಮನುಷ್ಯರಾಗಿ ಬಾಳಲಿ ದುಡಿಯುವವರಾಗಲಿ."
ದೇವರ ಬಗ್ಗೆ ಅವರು ಈ ಪುಸ್ತಕದಲ್ಲಿ ಬರೆದ ಕವನ ನನಗೆ ಬಹಳ ಇಷ್ಟವಾಯಿತು ಅದನ್ನು ನೀವು ಒಮ್ಮೆ ಓದಿ
"ದೇವರು ನಗುತ್ತಾನೆ...
ಪರಮೇಶ್ವರ ಪರೀಕ್ಷೆಯಲ್ಲಿ ಪಾಸ್ ಮಾಡಿಸಪ್ಪ, ಹುಡುಗಿಯನ್ನು ಪ್ರೀತಿಸಿದ್ದೇನೆ,ಮದುವೆ ಮಾಡಿಸಪ್ಪ, ಉದ್ಯೋಗ ಬೇಗ ಸಿಗುವಂತೆ ಹರಸಪ್ಪ, ವ್ಯಾಪಾರ ಪ್ರಾರಂಭಿಸಿದ್ದೇನೆ, ಲಾಭ ತರಿಸಪ್ಪ, ಟೆಂಡರ್ ಹಾಕಿದ್ದೇನೆ, ಗುತ್ತಿಗೆ ನನಗೆ ಸಿಗಲಪ್ಪ, ಚುನಾವಣೆಗೆ ನಿಂತಿದ್ದೇನೆ, ನನ್ನನ್ನೇ ಗೆಲ್ಲಿಸಪ್ಪ ಮನೆ ನಿರ್ಮಾಣ, ಮಗಳ ಮದುವೆ ನಿರ್ವಿಘ್ನವಾಗಿ ನಡೆಯಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೇವೆ, ಬೇಗ ಸಿಗಲಿ. ಕೊಲೆ ಕಳ್ಳತನಕ್ಕೆ ಹೊರಟಿದ್ದೇನೆ. ಸಿಕ್ಕಿಹಾಕಿಕೊಳ್ಳದಿರಲಿ, ಮೋಸ ಮಾಡಿ ಹಣ ಆಸ್ತಿ ಕಬಳಿಸುವೆ. ಅವು ನನಗೆ ದಕ್ಕಲಿ. ತೆರಿಗೆ ಕಟ್ಟಿಲ್ಲ. ಐಟಿ- ಇಡಿ ದಾಳಿ ಆಗದಿರಲಿ. ಪರಸ್ತ್ರೀ ಸಂಗವಿದೆ. ನನ್ನ ಪತ್ನಿಗೆ/ ಪತಿಗೆ ಅದು ತಿಳಿಯದಿರಲಿ.
ಅಪಾರ ಸಂಪತ್ತಿನ ಸಂಗ್ರಹ ಸಂಗ್ರಹವಿದೆ. ಕಳ್ಳಕಾಕರ ಪಾಲಾಗದಿರಲಿ. ನನ್ನ ಶತಾಯುಷಿ ಮಾಡಿ, ಮರಿ ಮೊಮ್ಮಗನ ಮದುವೆ ಕಾಣಲಿ. ಇಷ್ಟೆಲ್ಲಾ ಇಷ್ಟಾರ್ಥ ಪೂರೈಸಿದ್ದರೆ ನಿನಗೆ ಚಿನ್ನದ ಕಿರೀಟ! ಭಕ್ತರ ಬೇಡಿಕೆಗಳ ಹಿಂಡನ್ನು ಕಂಡು ದೇವರು ನಗುತ್ತಾನೆ. ಈಡೇರಿಸುವುದು ಸಾಧ್ಯವಿಲ್ಲ. ಕಣ್ಣು ಮುಚ್ಚಿ ಕಲ್ಲಾಗಿ ಕೂತಿದ್ದಾನೆ".
ಹೀಗೆ ಲೇಖನಗಳಿಂದ ,ಕವನಗಳಿಂದ ಸಮೃದ್ಧ ವಾದ ಈ ಪುಸ್ತಕ ಮಾನಸಿಕ ಆರೋಗ್ಯದ ಬೈಬಲ್ ಎಂದರೂ ತಪ್ಪಾಗಲಾರದು. ಎಲ್ಲರ ಮನೆಯಲ್ಲಿ ಈ ಪುಸ್ತಕವಿರಬೇಕು ಎಲ್ಲರೂ ಈ ಪುಸ್ತಕವನ್ನು ಆಗಾಗ್ಗೆ ಓದುತ್ತಿರಬೇಕು.
ಬೆಂಗಳೂರಿನ ಸಮಾಧಾನ ಸಲಹಾ ಕೇಂದ್ರ ಪ್ರಕಾಶನ ಮಾಡಿರುವ 128 ಪುಟಗಳ ಈ ಪುಸ್ತಕ ಕೈಗೆಟುಕುವ ಬೆಲೆ ಅಂದರೆ ಕೇವಲ ನೂರು ರೂಪಾಯಿಗೆ ದೊರೆಯುತ್ತದೆ. 2021 ರಲ್ಲಿ ಪ್ರಕಟವಾದ ಈ ಪುಸ್ತಕ ಒಂದೇ ವರ್ಷದಲ್ಲಿ ಮರುಮುದ್ರಣ ಕಂಡಿದೆ.
ಪುಸ್ತಕ ಎಲ್ಲಾ ಪುಸ್ತಕ ಮಳಿಗೆಗೆಳಲ್ಲಿ ಲಭ್ಯ. ಪುಸ್ತಕ ಬೇಕಾದವರು 9845605615 ಸಂಪರ್ಕ ಮಾಡಬಹುದು. ಇನ್ನೇಕೆ ತಡ
ಪುಸ್ತಕ ಓದಿರಿ.ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಿ .ಸಮಾಧಾನಿಯಾಗಿರಿ!
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
ತುಮಕೂರು.
ಕಂಪ್ಯೂಟರ್
ಎಲ್ಲೇ ಹೋದರೂ ನಮ್ಮ
ಹಿಂಬಾಲಿಸುತ್ತಲೇ ಇದೇ ಗಣಕಯಂತ್ರ ಅದು ಶಾಲೆ, ಬ್ಯಾಂಕು ಕಛೇರಿ ಎಲ್ಲೇ ಇರಲಿ
ಅದು ಇರಲೇಬೇಕು |
ನಮಗರಿವಿಲ್ಲದೇ ಈಗ
ಕಂಪ್ಯೂಟರ್ ಜೊತೆಗೇ ಸಾಗುತ್ತಿದೆ ನಮ್ಮ ಬದುಕು ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಲಕ್ಷ್ಮೀ ನರಸಿಂಹಸ್ವಾಮಿಯ ಗುಂಡಿನ ಸೇವೆ ಮತ್ತು ಅನ್ನದ ಕೋಟೆ ಉತ್ಸವ
ಹೊರಕೇದೇಪುರ ! ನಮ್ಮೂರು ಕೊಟಗೇಣಿಯಿಂದ ಐದು ಕಿಲೋಮೀಟರ್ ಪಶ್ಚಿಮಕ್ಕೆ ಇರುವ ಐತಿಹಾಸಿಕ, ಪೌರಾಣಿಕ ಮತ್ತು ಭಕ್ತಿ ಪ್ರಧಾನವಾದ ದೇಗುಲದ ಊರು.ದಾಖಲೆಗಳಲ್ಲಿ ಹೊರ ಕೆರೆ ದೇವರಪುರ ಎಂದು ಇದ್ದರೂ ನಾವು ಈಗಲೂ ಕರೆಯುವುದೇ ಹೊರಕೇದೇಪುರ. ನನ್ನ ಬಾಲ್ಯಕ್ಕೂ ಹೊರಕೇದೇಪುರಕ್ಕೂ ಅವಿನಾಭಾವ ಸಂಬಂಧವಿದೆ. ಅಲ್ಲಿನ ರಂಗಪ್ಪ ದೇವಾಲಯಕ್ಕೆ ಆಗಾಗ ಹೋಗಿ ಆಶೀರ್ವಾದ ಪಡೆಯುವುದು, ಶನಿವಾರದ ಸಂತೆಯಲ್ಲಿ ಅಮ್ಮನ ಜೊತೆಯಲ್ಲಿ ಹೋಗಿ ಕಾರಮಂಡಕ್ಕಿ ತಿಂದದ್ದು ಗೆಳೆಯರ ಜೊತೆಯಲ್ಲಿ ರಾತ್ರಿ ಟೆಂಟ್ ನಲ್ಲಿ ಸಿನೆಮಾ ನೋಡಿ ಐದು ಕಿಲೋಮೀಟರ್ ನಡೆದುಕೊಂಡು ಮನೆ ಸೇರಿದ ನೆನಪುಗಳು ಒಂದೇ ಎರಡೇ ಹೊರಕೆದೇಪುರ ಎಂದರೆ ನನ್ನ ಬಾಲ್ಯದ ನೂರಾರು ನೆನಪುಗಳು ಒತ್ತರಿಸಿಕೊಂಡು ಬರುತ್ತವೆ .ಈಗಲೂ ನಾನು ಊರಿಗೆ ಹೋದಾಗ ಹೊರಕೆದೇಪುರಕ್ಕೆ ಹೋಗಿಯೇ ಬರುವೆ .ಮೊನ್ನೆ ಊರಿಗೆ ಹೋದಾಗ ಹೊರಕೆದೇಪುರ ವಿಶೇಷವಾದ ಅಲಂಕಾರಕ್ಕೆ ಸಿದ್ಧವಾಗುತ್ತಿತ್ತು .ದೊಡ್ಡ ದೊಡ್ಡ ಪ್ಲೆಕ್ಸ್ ನಮ್ಮನ್ನು ಸ್ವಾಗತಿಸಿದವು ಅದರ ಮಾಹಿತಿ ಓದಿದಾಗ "ಗುಂಡಿನ ಸೇವೆ ಮತ್ತು ಅನ್ನದ ಕೋಟೆ" ನನ್ನ ಗಮನ ಸೆಳೆಯಿತು. ಮತ್ತು ಬಾಲ್ಯದಲ್ಲಿ ನಮ್ಮ ರಂಗಜ್ಜಿ ಮತ್ತು ಅಮ್ಮ ಗುಂಡಿನ ಸೇವೆಗೆ ಕರೆದುಕೊಂಡು ಹೋದ ಘಟನೆ ಮತ್ತು ಗುಂಡಿನ ಸೇವೆ ಮತ್ತು ಅನ್ನದ ಕೋಟೆಯ ಬಗ್ಗೆ ನಮ್ಮಜ್ಜಿ ಹೇಳಿದ ಕಥೆ ನೆನಪಆಗಿದೆ .
ದೇವರು ನೀಡಿದ ಶಿಕ್ಷೆಯನ್ನೇ ಇಲ್ಲಿ ಉತ್ಸವವಾಗಿ ಆಚರಿಸಲಾಗುತ್ತದೆ. ನಂದರಾಜ ಪಟ್ಟಣ ಈಗ ಅದು ನಂದನಹೊಸೂರು ಆಗಿದೆ ಅದು ಬೆಂಕಿಯಿಂದ ಭಸ್ಮವಾದಾಗ ಕೃಷ್ಣಾಚಲ ಬೆಟ್ಟದಲ್ಲಿ ದನ ಕಾಯುತ್ತಿದ್ದ ಹುಡುಗರು ಭಯಭೀತರಾಗಿ ಮುಂದೇನಾಗುವುದೋ ಎಂದು ಕಂಗಾಲಾಗಿರುತ್ತಾರೆ. ಆಗ ಸ್ವಾಮಿಯು ಸಾಧು ವೇಷದಲ್ಲಿ ಬಂದು ದನ ಕಾಯುವ ಹುಡುಗರಲ್ಲಿ ಒಬ್ಬನನ್ನು ಕರೆದು "ನಿಮ್ಮ ಪಟ್ಟಣವು ಸುಟ್ಟು ಹೋಗಿದೆ. ಈಗ ನೀವು ಎಲ್ಲಿಗೆ ಹೋಗುತ್ತೀರಿ? ಊಟಕ್ಕೆ ಏನು ಮಾಡುತ್ತೀರಿ? ನಿಮ್ಮ ಜತೆ ನನಗೂ ಊಟ ಸಿಗಬಹುದೇ?" ಎಂದು ಕೇಳುತ್ತಾರೆ.
ಆಗ ಆ ಹುಡುಗನಿಗೆ ಸಿಟ್ಟು ಬಂದು "ಇದೇ ಬೆಟ್ಟದ ಹಿಂದೆ ಇರುವ ತಾಳ್ಯದ ಆಂಜನೇಯಸ್ವಾಮಿ ದೇವರಿಗೆ ನೂರೊಂದೆಡೆ ಹಾಕಿದ್ದಾರೆ. ನೀನು ಅಲ್ಲಿಗೆ ಹೋದರೆ ಊಟ ಸಿಗುತ್ತದೆ" ಎಂದು ಹೇಳುತ್ತಾನೆ. ಆಗ ಸ್ವಾಮಿಗೆ ಈ ಹುಡುಗ ಸುಳ್ಳು ಹೇಳುತ್ತಿದ್ದಾನೆ ಎಂದು ಗೊತ್ತಾಗುತ್ತದೆ.
"ಹಸಿವಿನ ವಿಚಾರದಲ್ಲಿ ಸುಳ್ಳು ಹೇಳಬಾರದು. ನಿನ್ನ ಸುಳ್ಳಿಗೆ ಶಿಕ್ಷೆ ಆಗಲೇಬೇಕು. ನೀನು ಹೇಳಿದ ಜಾಗದಲ್ಲೇ ನಾನು ನೂರೊಂದೆಡೆ ಹಾಕಿಸಿಕೊಳ್ಳುತ್ತೇನೆ. ನಿನ್ನ ಸುಳ್ಳಿಗೆ ಶಿಕ್ಷೆಯಾಗಿ ನಿನ್ನ ಎದೆಯ ಮೇಲೆ ಮೂರು ಗುಂಡುಗಳನ್ನು ಇರಿಸಿ ತಾಳ್ಯದ ಆಂಜನೇಯ ಸ್ವಾಮಿಯ ಎದುರಿನಲ್ಲಿ ಚಮಟಿಗೆಯಿಂದ ನಿಮ್ಮವರಿಂದಲೇ ಹೊಡೆಸಿ, ನಿನ್ನನ್ನು ನನ್ನ ದಾಸಯ್ಯನನ್ನಾಗಿ ಮಾಡಿಕೊಳ್ಳುತ್ತೇನೆ. ಸುತ್ತಲಿನ ಹತ್ತಾರು ಗ್ರಾಮಗಳ ದೇವರುಗಳ ಸಮ್ಮುಖದಲ್ಲಿ ಅನ್ನದ ಕೋಟೆ ಮಾಡಿಸಿ ಅನ್ನ ಹಾಕಿಸುತ್ತೇನೆ" ಎಂದು ಹೇಳುತ್ತಾರೆ. ಇದರಂತೆ ಪ್ರತಿ 12 ವರ್ಷಗಳಿಗೆ ಒಮ್ಮೆ ಗುಂಡಿನ ಸೇವೆ ಹಾಗೂ ಅನ್ನ ಕೋಟೆ ಉತ್ಸವ ನಡೆಯುತ್ತದೆ.
ಹಿಂದಿನಿಂದಲೂ ನಂದನಹೊಸೂರಿನ ದಾಸಯ್ಯನ ವಂಶಸ್ಥರು ಗುಂಡಿನ ದಾಸಯ್ಯನಾಗಿ ಆಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಗುಂಡಿನ ಸೇವೆ ಧಾರ್ಮಿಕ ಕಾರ್ಯಕ್ಕೆ ನೇಮಿಸುವ ದಾಸಯ್ಯನು ತಮ್ಮ ಮನೆದೈವ ಆಂಜನೇಯಸ್ವಾಮಿಗೆ ಮೊದಲ ಪೂಜೆ ಸಲ್ಲಿಸಿ 9 ದಿನ ಹಾಲು, ಹಣ್ಣು ಸೇವನೆ ಮಾಡಿ ನೇಮದಿಂದ ಇದ್ದು ಗುಂಡಿನ ಸೇವೆ ಆಚರಣೆಯಲ್ಲಿ ತೊಡಗುತ್ತಾರೆ .
ನಮ್ಮೂರಿನ ಚೌಡಮ್ಮ ಮತ್ತು ಪಾತೇದೇವರು ಸೇರಿ ಸುತ್ತ ಮುತ್ತಲಿನ ಮೂವತ್ಮೂರು ಹಳ್ಳಿಗಳ ಗ್ರಾಮ ದೇವ ದೇವತೆಗಳನ್ನು ಗುಂಡಿನ ಸೇವೆ ಮತ್ತು ಅನ್ನದ ಕೋಟೆಯ ದಿನದಂದು ಒಂದೆಡೆ ನೋಡಿ ಕಣ್ತುಂಬಿಕೊಳ್ಳುವುದೇ ಒಂದು ಅದೃಷ್ಟ.
ಇದೇ ತಿಂಗಳ ಆರು ಮತ್ತು ಏಳರಂದು ಗುಂಡಿನ ಸೇವೆ ಮತ್ತು ಅನ್ನದ ಕೋಟೆ ಉತ್ಸವ ನಡೆಯುತ್ತಿದೆ.ಮತ್ತೆ ಈ ಉತ್ಸವ ನಡೆಯುವುದು ಹನ್ನೆರಡು ವರ್ಷಗಳ ನಂತರ ಸಾಧ್ಯವಾದರೆ ಈ ಉತ್ಸವದಲ್ಲಿ ನೀವೂ ಪಾಲ್ಗೊಳ್ಳಿ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಕಲ್ಪನೆ .
ಒಮ್ಮೆ ಚಂದಿರನ ಚುಂಬಿಸಿ ಬರುವ,
ಮತ್ತಮ್ಮೆ ಹಿಮಾಲಯವನೇರಿ ಹಾಕೋಣ ಕೇಕೆ |
ಅದಕೇನು ದುಡ್ಡ ಕೊಡಬೇಕೆ ?
ಕಲ್ಪನೆಗೆ ಮಿತಿ ಏಕೆ ?||
ಸಿಹಿಜೀವಿ
ಜೋಡಿಗಳು...
ನಾವಿಬ್ಬರೂ ಅಪೂರ್ವ ಗೆಳೆಯರು
ಒಬ್ಬರನ್ನೊಬ್ವರು ಅಗಲದವರು
ಜೊತೆಯಲ್ಲಿಯೇ ಪಯಣ
ಜೊತೆಯಲ್ಲಿಯೇ ನಿಲುಗಡೆಯು.
ಕಲ್ಲು ಮುಳ್ಳಿನ ಭಯವಿಲ್ಲದೇ
ಎಲ್ಲೆಡೆ ಸುತ್ತಿದ್ದೆವು
ಯಾವಾಗಲಾದರೊಮ್ಮೆ ಬೇರಾದಾಗ
ಸತ್ತು ಬದುಕಿದ ಭಾವ ಅನುಭವಿಸಿದ್ದೆವು.
ಕೆಲವರ ಮನೆಯೊಳಗೆಲ್ಲ ಓಡಾಡಿ ಬಂದೆವು
ಹಲವರ ಮನೆಯ ಹೊಸಿಲ ಹೊರಗಡೆಯೇ ನಿಂತಿದ್ದೆವು ಆಗಲೂ ಜೊತೆಯಾಗಿಯೇ ಇದ್ದೆವು.
ನಮಗೆ ನೋವಾದರೂ ನಮ್ಮ ಜೊತೆಗಿರುವವರ ಹಿತ ಕಾಪಾಡಿ
ಪರೋಪಕಾರಿಗಳಾದೆವು.
ನಮ್ಮನ್ನು ಕೀಳಾಗಿ ಕಂಡರೂ
ಪರರ ರಕ್ಷಣೆಗೆ ಮುಂದಾದೆವು.
ಇಂದೇಕೋ ಮನಕೆ ಬೇಸರವಾಗಿದೆ
ಜೋಡಿಯನಗಲಿದ ಜೋಡು ಎಲ್ಲಿದೆ?
ಯಾರು ಸಂತೈಸುವರು ನನ್ನನೀಗ
ನಾನೊಂದು ಅನಾಥ ಚಪ್ಪಲಿ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ