08 February 2023

ಸಮಾಧಾನಿಯಾಗಿರಿ...


 


ಸಮಾಧಾನಿಯಾಗಿರಿ...
ಪುಸ್ತಕ ಪರಿಚಯ...

ಇತ್ತೀಚೆಗೆ ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ  ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪಡೆಯಲು ಹಾಜರಾಗಿ ಪ್ರಶಸ್ತಿ ಸ್ವೀಕರಿಸಿದ್ದು ಬಹಳ ಸಂತಸ ನೀಡಿತು.ಅದಕ್ಕಿಂತ ಮುಖ್ಯವಾಗಿ ಡಾ .ಸಿ ಆರ್ ಚಂದ್ರಶೇಖರ್ ರವರನ್ಬು ಹತ್ತಿರದಿಂದ ನೋಡುವ ಸೌಭಾಗ್ಯ! ಅಷ್ಟೇ ಅಲ್ಲ ನನ್ನ ಹತ್ತನೇ ಕೃತಿಯನ್ನು ಅವರೇ ಲೋಕಾರ್ಪಣೆ ಮಾಡಿದ್ದು! ಇನ್ನೇನು ಬೇಕು ನನಗೆ.ಒಟ್ಟಾರೆ ಆ ಇಡಿ ದಿನ ಸಂತಸದಲ್ಲಿ ತೇಲಿದ್ದೆ.ಆ ಕ್ಷಣಗಳನ್ನು ಈಗಲೂ ಪದೇ ಪದೇ ಮೆಲುಕು ಹಾಕುತ್ತಲೇ ಇರುವೆ.
280 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರ ಬಗ್ಗೆ ಸರ್ವರಿಗೂ ಪರಿಚಯವಿದೆ.
 ಅವರು ಮಾನಸಿಕ ಆರೋಗ್ಯ ತಜ್ಞರು. ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದೆವ್ವ, ಭೂತ, ಭಾನಾಮತಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಆ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದಾರೆ  ಸಾವಿರಾರು ಭಾಷಣಗಳನ್ನು ನೀಡಿದ್ದಾರೆ. 750ಕ್ಕೂ ಹೆಚ್ಚು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ.   ಮಾನಸಿಕ ಆರೋಗ್ಯ, ಸಾಮಾನ್ಯ ಆರೋಗ್ಯ, ಲೈಂಗಿಕ ವಿಜ್ಞಾನ, ವೈಚಾರಿಕ ಸಾಹಿತ್ಯ, ಕಾದಂಬರಿ, ಸಣ್ಣ ಕತೆ, ಅನುವಾದ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. 1986ರಲ್ಲೇ ಸ್ಥಾಪಿತವಾಗಿದ್ದ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿಗೆ 1994ರಲ್ಲಿ ಪುನಃಶ್ಚೇತನ ನೀಡಿದರು. ಹಲವಾರು ವಿದೇಶಗಳಿಗೆ ತಜ್ಞ ವೈದ್ಯರಾಗಿಯೂ ಮತ್ತು ಪ್ರವಾಸಿಗರಾಗಿಯೂ ಹೋಗಿಬಂದಿದ್ದಾರೆ.
ಅಂದಿನ ಸಮಾರಂಭದಲ್ಲಿ ನನಗೆ ಮತ್ತು ಪ್ರಶಸ್ತಿ ಪುರಸ್ಕೃತರಿಗೆ ಅವರ ಇತ್ತೀಚಿನ ಪುಸ್ತಕ "ಸಮಾಧಾನಿಯಾಗಿರಿ" ಉಚಿತವಾಗಿ ನೀಡಿದರು. ಮನೆಗೆ ಬಂದು  ಪುಸ್ತಕ ಓದಿದಾಗ ಪಕ್ಕದಲ್ಲೇ ಕುಳಿತು ಅಣ್ಣ ಅಥವಾ ತಂದೆ ನಮಗೆ ವ್ಯಕ್ತಿತ್ವ ಕುರಿತಾದ ಪಾಠ ಹೇಳಿದಂತಿತ್ತು. ಒಬ್ಬ ಶಿಕ್ಷಕ ಮಕ್ಕಳಿಗೆ ಮುದ್ದಿಸಿ ಜೀವನದ ಪಾಠ ಹೇಳಿದಂತಿತ್ತು.ಒಬ್ಬ ಅಜ್ಜಿ ತನ್ನ ಅನುಭವಗಳನ್ನು ಮೊಮ್ಮಕ್ಕಳಿಗೆ ಪ್ರೀತಿಯಿಂದ ಹೇಳಿದಂತಿತ್ತು. 
ಈ ಪುಸ್ತಕದಲ್ಲಿ ಒಟ್ಟು ಮೂವತ್ತು  ಲೇಖನಗಳಿವೆ.
ಆರೋಗ್ಯ ಜೀವನ ಕ್ರಮ,ಔಷಧಿಗಳು
, ಮಾನಸಿಕ ಆರೋಗ್ಯ,ಮಕ್ಕಳ ವಿಕಾಸ ,ಮಕ್ಕಳ ನಡೆವಳಿಕೆಗಳು, ಹರೆಯದವರ ಮನೋ ತಲ್ಲಣ,ಕುಟುಂಬದ ಸಬಲೀಕರಣ
,ನಿದ್ರಾ ತೊಂದರೆಗಳು,ಹೆಚ್ಚುತ್ತಿರುವ ಆತ್ಮಹತ್ಯೆ ಮಾನಸಿಕ ಸಮಸ್ಯೆಗಳು,ಪುರುಷರ ಮಾನಸಿಕ ಸಮಸ್ಯೆಗಳು ಸ್ಪೈಸ್ ಟೆನ್ಷನ್  ಕಿರಿಕಿರಿಯಿಂದ ಪಾರಾಗುವುದು ಹೇಗೆ?, ಏಕಿಷ್ಟು ಆತಂಕ?,ಸಾವು: ಭಯ ಬೇಕೆ?,ಸ್ಕಿಜೋಫ್ರೀನಿಯಾ, ಗೀಳು ಮನೋರೋಗ,ಸುಖ ಪಡುವ ಚಟ ,ಅಶ್ಲೀಲ ಚಿತ್ರಗಳ ವೀಕ್ಷಣೆಯ ಚಟ,ಹಿಸ್ಟ್ರಿಯಾನಿಕ್ ವ್ಯಕ್ತಿತ್ವ, ಹದಗೆಡುತ್ತಿರುವ ವೃದ್ಧರ ಮನಸ್ಸು,ಮನೋರೋಗಗಳಿಗೆ ಮದ್ದು,ಸಂಗೀತ ಚಿಕಿತ್ಸೆ, ದಾನ- ಧರ್ಮ ಪರೋಪಕಾರ, ದೆವ್ವ-ಭೂತಗಳಿವೆಯೇ?,ದೇವರಲ್ಲಿ ನಂಬಿಕೆ ಎಷ್ಟಿರಬೇಕು ಹೇಗಿರಬೇಕು? ,ನಂಬಿಕೆಗಳು - ವೈಜ್ಞಾನಿಕ ಮನೋಭಾವ,ಸ್ವಗೌರವ - ಸ್ವಾಭಿಮಾನ, ಪಾಸಿಟಿವ್ ಸೈಕಾಲಜಿ, ಕೋವಿಡ್-19ರಿಂದಾಗಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳು, ನಿಮ್ಮ ಮನಸ್ಸಿನ ನೋವಿಗೆ ಪರಿಹಾರ, ಬೈಪೋಲಾರ್ ಅಫೆಕ್ಟಿವ್  ಡಿಸಾರ್ಡರ್,ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಿ ...
ಹೀಗೆ ವಿವಿಧ ವಿಷಯಗಳ ಅದ್ಯಾಯಗಳು ಓದಿಸಿಕೊಂಡು ಸಾಗುತ್ತವೆ. ಈ ಪುಸ್ತಕ ನನಗಾಗಿಯೇ ಬರೆದಿದೆಯೇನೋ ಎನಿಸದಿರದು.ಇದರಲ್ಲಿ ಬಾಲಕರಿಂದ ಹಿಡಿದು ವೃದ್ಧ ರವರೆಗೆ ಎಲ್ಲರಿಗೂ ಅನ್ವಯಿಸುವ ಲೇಖನಗಳಿವೆ ಇವೆಲ್ಲವೂ  ಪದೇ ಪದೇ ನಮ್ಮನ್ನು ಕಾಡುತ್ತವೆ.ಈ ಪುಸ್ತಕ ಪದೇ ಪದೇ ಓದಿ ಮನನ ಮಾಡಿಕೊಳ್ಳುವ ಮತ್ತು ಈ ಎಲ್ಲಾ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ.

ಡಾ ಸಿ ಆರ್ ಸಿ ರವರ ಮಾತುಗಳಲ್ಲೇ ಹೇಳುವುದಾದರೆ..
"ಕಣ್ಣಿಗೆ ಕಾಣದ, ಕೈಗೆ ಸಿಗದ ಮನಸ್ಸನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ.ಆದರೆ ಈ ಮನಸ್ಸೇ ದೇಹದ ಸಾರಥಿ, ನಮ್ಮ ನಡೆ ನುಡಿಗಳು, ಎಲ್ಲಾ ಕ್ರಿಯೆ-ಪ್ರತಿಕ್ರಿಯೆ ಗಳನ್ನು ನಿಯಂತ್ರಿಸುತ್ತದೆ. ಮನಸ್ಸು ದೃಢವಾಗಿದ್ದರೆ, ಪ್ರಶಾಂತವಾಗಿದ್ದರೆ, ನಮ್ಮ ದೇಹ ಆರೋಗ್ಯವಾಗಿರುತ್ತದೆ. ನಮ್ಮ ಸಾಮರ್ಥ್ಯ ಹೆಚ್ಚಿರುತ್ತದೆ. ಹಲವು ಕಾರಣಗಳಿಂದ ಮನಸು ಪ್ರಕ್ಷುಬ್ಧ ವಾಗುತ್ತದೆ. ರೋಗಗ್ರಸ್ತವಾಗುತ್ತದೆ ಅದಕ್ಕೆ ಚಿಕಿತ್ಸೆ ಪರಿಹಾರವು ಇದೆ".
ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ ಪ್ರತಿ ಅದ್ಯಾಯದ ಕೊನೆಯಲ್ಲಿ ಉಳಿದ ಪುಟದಲ್ಲಿ ಒಂದು ಕವಿತೆ ಅಥವಾ ಚಿಂತನೆಗೆ ಹಚ್ಚುವ ಸಾಲುಗಳ ಮುದ್ರಣ ಮಾಡಿರುವುದು .ಆ ಸಾಲುಗಳು ಚಿಂತಿಸುವ  ನಮ್ಮನ್ನು  ಚಿಂತನ ಮಂಥನ ಮಾಡುವಂತೆ ಪ್ರೇರೇಪಿಸುತ್ತವೆ.
ಅದಕ್ಕೆ ಉದಾಹರಣೆ ಈ ಸಾಲುಗಳು

"ರೋಗಿಗೆ ಬೇಕು ಏನು?
ಔಷಧಿ ಮಾತ್ರವಲ್ಲ, ಔಷಧಿಯ ಜೊತೆ ಬೇಕು ಸುಲಭ ಜೀರ್ಣವಾಗುವ ಮುಷ್ಟಿ ಆಹಾರ, ಸಾಂತ್ವನ– ಭರವಸೆಯ ಮಾತುಗಳು, ಸಹಾನುಭೂತಿ- ಸಹನೆಯ ಆರೈಕೆ ಆರೇಳು ಗಂಟೆಗಳ ಸುಖ ನಿದ್ರೆ. ಸ್ವಚ್ಛತೆ,ವೈಯಕ್ತಿಕ ಮತ್ತು ಪರಿಸರ ಸಂಗೀತ ಶ್ರವಣ, ಮೌನ - ಧ್ಯಾನ. ಸಕಾರಾತ್ಮಕ ಚಿಂತನೆ – ಭರವಸೆ ಸಮಯದ ಶಿಸ್ತು – ಔಷಧ ಸೇವನೆ ಲಘು ವ್ಯಾಯಾಮ - ನಡಿಗೆ - ಚಲನೆ, ನಗು - ಹಾಸ್ಯ - ಸಂತೋಷಕರ ಸಂಭಾಷಣೆ ಅವಧಿ ಗೊಂದಾವರ್ತಿ ವೈದ್ಯರ ಸಲಹೆ. ಆತಂಕ - ಗೊಂದಲಗಳ ನಿವಾರಣೆ. ಅತಿ ಅನುಕಂಪ - ಅಯ್ಯೋ ಪಾಪ ಎನ್ನ ಬೇಡಿ ರೋಗದ ವಿರುದ್ಧ ಹೋರಾಟದಲ್ಲಿ ಜಯ ನಿನ್ನದೇ ಎನ್ನಿ."
ಎಷ್ಟು ಅರ್ಥಪೂರ್ಣ ಅಲ್ಲವೇ ಸ್ನೇಹಿತರೆ..
ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಹೇರುವ ಒತ್ತಡದ ಬಗ್ಗೆ ಸಿ ಆರ್ ಸಿ ರವರು ಹೀಗೆ ಸಲಹೆ ನೀಡಿದ್ದಾರೆ
"  ನಿಮ್ಮ ಮಕ್ಕಳು ಓದಿ ಏನಾಗ ಬೇಕು? ಡಾಕ್ಟರ್, ಇಂಜಿನೀಯರ್ , ಆಫೀಸರ್ , ಉದ್ಯಮಿ, ವ್ಯಾಪಾರಿ, ಕೋಟ್ಯಾಧಿಪತಿ ಸಮಾಜದಲ್ಲಿ ಅತಿ ಗಣ್ಯ ವ್ಯಕ್ತಿ ,ಎ.ಐ.ಪಿ? ಅವರುಏನೇ ಆಗಲಿ ಅವರಿಗೇ ಬಿಡಿ .ಅವರು ಸದಾ ಅರೋಗ್ಯ ವಂತರಾಗಿರಲಿ. ಸ್ವಾಭಿಮಾನಿಗಳಾಗಿರಲಿ, ಸ್ವಾವಲಂಬಿಗಳಾಗಲಿ ಗುಣವಂತರಾಗಿ, ಮನುಷ್ಯರಾಗಿ ಬಾಳಲಿ ದುಡಿಯುವವರಾಗಲಿ."
ದೇವ ಬಗ್ಗೆ ಅವರು ಪುಸ್ತಕದಲ್ಲಿ ಬರೆದ ಕವನ ನನಗೆ ಬಹಳ ಇಷ್ಟವಾಯಿತು ಅದನ್ನು ನೀವು ಒಮ್ಮೆ ಓದಿ
"ದೇವರು ನಗುತ್ತಾನೆ...
ಪರಮೇಶ್ವರ ಪರೀಕ್ಷೆಯಲ್ಲಿ ಪಾಸ್ ಮಾಡಿಸಪ್ಪ, ಹುಡುಗಿಯನ್ನು ಪ್ರೀತಿಸಿದ್ದೇನೆ,ಮದುವೆ ಮಾಡಿಸಪ್ಪ, ಉದ್ಯೋಗ ಬೇಗ ಸಿಗುವಂತೆ ಹರಸಪ್ಪ, ವ್ಯಾಪಾರ ಪ್ರಾರಂಭಿಸಿದ್ದೇನೆ, ಲಾಭ ತರಿಸಪ್ಪ, ಟೆಂಡರ್ ಹಾಕಿದ್ದೇನೆ, ಗುತ್ತಿಗೆ ನನಗೆ ಸಿಗಲಪ್ಪ, ಚುನಾವಣೆಗೆ ನಿಂತಿದ್ದೇನೆ, ನನ್ನನ್ನೇ ಗೆಲ್ಲಿಸಪ್ಪ ಮನೆ ನಿರ್ಮಾಣ, ಮಗಳ ಮದುವೆ ನಿರ್ವಿಘ್ನವಾಗಿ ನಡೆಯಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೇವೆ, ಬೇಗ ಸಿಗಲಿ. ಕೊಲೆ ಕಳ್ಳತನಕ್ಕೆ ಹೊರಟಿದ್ದೇನೆ.  ಸಿಕ್ಕಿಹಾಕಿಕೊಳ್ಳದಿರಲಿ, ಮೋಸ ಮಾಡಿ ಹಣ ಆಸ್ತಿ ಕಬಳಿಸುವೆ. ಅವು ನನಗೆ ದಕ್ಕಲಿ. ತೆರಿಗೆ ಕಟ್ಟಿಲ್ಲ. ಐಟಿ- ಇಡಿ ದಾಳಿ ಆಗದಿರಲಿ. ಪರಸ್ತ್ರೀ ಸಂಗವಿದೆ. ನನ್ನ ಪತ್ನಿಗೆ/ ಪತಿಗೆ ಅದು ತಿಳಿಯದಿರಲಿ.
ಅಪಾರ ಸಂಪತ್ತಿನ ಸಂಗ್ರಹ ಸಂಗ್ರಹವಿದೆ. ಕಳ್ಳಕಾಕರ ಪಾಲಾಗದಿರಲಿ. ನನ್ನ ಶತಾಯುಷಿ ಮಾಡಿ, ಮರಿ ಮೊಮ್ಮಗನ ಮದುವೆ ಕಾಣಲಿ. ಇಷ್ಟೆಲ್ಲಾ ಇಷ್ಟಾರ್ಥ ಪೂರೈಸಿದ್ದರೆ ನಿನಗೆ ಚಿನ್ನದ ಕಿರೀಟ! ಭಕ್ತರ ಬೇಡಿಕೆಗಳ ಹಿಂಡನ್ನು ಕಂಡು ದೇವರು ನಗುತ್ತಾನೆ. ಈಡೇರಿಸುವುದು ಸಾಧ್ಯವಿಲ್ಲ. ಕಣ್ಣು ಮುಚ್ಚಿ ಕಲ್ಲಾಗಿ ಕೂತಿದ್ದಾನೆ".

ಹೀಗೆ ಲೇಖನಗಳಿಂದ ,ಕವನಗಳಿಂದ ಸಮೃದ್ಧ ವಾದ ಈ ಪುಸ್ತಕ ಮಾನಸಿಕ ಆರೋಗ್ಯದ ಬೈಬಲ್ ಎಂದರೂ ತಪ್ಪಾಗಲಾರದು.  ಎಲ್ಲರ ಮನೆಯಲ್ಲಿ ಈ ಪುಸ್ತಕವಿರಬೇಕು  ಎಲ್ಲರೂ ಈ ಪುಸ್ತಕವನ್ನು ಆಗಾಗ್ಗೆ ಓದುತ್ತಿರಬೇಕು.
ಬೆಂಗಳೂರಿನ ಸಮಾಧಾನ ಸಲಹಾ ಕೇಂದ್ರ ಪ್ರಕಾಶನ ಮಾಡಿರುವ 128 ಪುಟಗಳ ಈ ಪುಸ್ತಕ ಕೈಗೆಟುಕುವ ಬೆಲೆ ಅಂದರೆ ಕೇವಲ ನೂರು ರೂಪಾಯಿಗೆ ದೊರೆಯುತ್ತದೆ. 2021 ರಲ್ಲಿ ಪ್ರಕಟವಾದ ಈ ಪುಸ್ತಕ ಒಂದೇ ವರ್ಷದಲ್ಲಿ ಮರುಮುದ್ರಣ ಕಂಡಿದೆ.
ಪುಸ್ತಕ ಎಲ್ಲಾ ಪುಸ್ತಕ ಮಳಿಗೆಗೆಳಲ್ಲಿ ಲಭ್ಯ. ಪುಸ್ತಕ ಬೇಕಾದವರು 9845605615 ಸಂಪರ್ಕ ಮಾಡಬಹುದು. ಇನ್ನೇಕೆ ತಡ
ಪುಸ್ತಕ ಓದಿರಿ.ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಿ .ಸಮಾಧಾನಿಯಾಗಿರಿ!

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
ತುಮಕೂರು.


No comments: