04 February 2023

ಗುಂಡಿನ ಸೇವೆ...

 

ಲಕ್ಷ್ಮೀ ನರಸಿಂಹಸ್ವಾಮಿಯ ಗುಂಡಿನ ಸೇವೆ ಮತ್ತು ಅನ್ನದ ಕೋಟೆ ಉತ್ಸ  

ಹೊರಕೇದೇಪುರ ! ನಮ್ಮೂರು  ಕೊಟಗೇಣಿಯಿಂದ ಐದು ಕಿಲೋಮೀಟರ್ ಪಶ್ಚಿಮಕ್ಕೆ ಇರುವ ಐತಿಹಾಸಿಕ, ಪೌರಾಣಿಕ ಮತ್ತು ಭಕ್ತಿ ಪ್ರಧಾನವಾದ ದೇಗುಲದ ಊರು.ದಾಖಲೆಗಳಲ್ಲಿ ಹೊರ ಕೆರೆ ದೇವರಪುರ ಎಂದು ಇದ್ದರೂ ನಾವು ಈಗಲೂ ಕರೆಯುವುದೇ  ಹೊರಕೇದೇಪುರ. ನನ್ನ ಬಾಲ್ಯಕ್ಕೂ ಹೊರಕೇದೇಪುರಕ್ಕೂ ಅವಿನಾಭಾವ ಸಂಬಂಧವಿದೆ. ಅಲ್ಲಿನ ರಂಗಪ್ಪ ದೇವಾಲಯಕ್ಕೆ ಆಗಾಗ ಹೋಗಿ ಆಶೀರ್ವಾದ ಪಡೆಯುವುದು, ಶನಿವಾರದ ಸಂತೆಯಲ್ಲಿ ಅಮ್ಮನ ಜೊತೆಯಲ್ಲಿ ಹೋಗಿ ಕಾರಮಂಡಕ್ಕಿ ತಿಂದದ್ದು ಗೆಳೆಯರ ಜೊತೆಯಲ್ಲಿ ರಾತ್ರಿ ಟೆಂಟ್ ನಲ್ಲಿ ಸಿನೆಮಾ ನೋಡಿ ಐದು ಕಿಲೋಮೀಟರ್ ನಡೆದುಕೊಂಡು ಮನೆ ಸೇರಿದ ನೆನಪುಗಳು ಒಂದೇ  ಎರಡೇ ಹೊರಕೆದೇಪುರ ಎಂದರೆ ನನ್ನ ಬಾಲ್ಯದ ನೂರಾರು ನೆನಪುಗಳು ಒತ್ತರಿಸಿಕೊಂಡು ಬರುತ್ತವೆ .ಈಗಲೂ ನಾನು ಊರಿಗೆ ಹೋದಾಗ ಹೊರಕೆದೇಪುರಕ್ಕೆ ಹೋಗಿಯೇ ಬರುವೆ .ಮೊನ್ನೆ ಊರಿಗೆ ಹೋದಾಗ ಹೊರಕೆದೇಪುರ ವಿಶೇಷವಾದ ಅಲಂಕಾರಕ್ಕೆ ಸಿದ್ಧವಾಗುತ್ತಿತ್ತು .ದೊಡ್ಡ ದೊಡ್ಡ ಪ್ಲೆಕ್ಸ್ ನಮ್ಮನ್ನು ಸ್ವಾಗತಿಸಿದವು ಅದರ ಮಾಹಿತಿ ಓದಿದಾಗ "ಗುಂಡಿನ ಸೇವೆ ಮತ್ತು ಅನ್ನದ ಕೋಟೆ" ನನ್ನ ಗಮನ ಸೆಳೆಯಿತು. ಮತ್ತು ಬಾಲ್ಯದಲ್ಲಿ ನಮ್ಮ ರಂಗಜ್ಜಿ ಮತ್ತು ಅಮ್ಮ ಗುಂಡಿನ ಸೇವೆಗೆ ಕರೆದುಕೊಂಡು ಹೋದ ಘಟನೆ ಮತ್ತು ಗುಂಡಿನ ಸೇವೆ ಮತ್ತು ಅನ್ನದ ಕೋಟೆಯ ಬಗ್ಗೆ ನಮ್ಮಜ್ಜಿ ಹೇಳಿದ ಕಥೆ ನೆನಪಆಗಿದೆ .

ದೇವರು ನೀಡಿದ ಶಿಕ್ಷೆಯನ್ನೇ ಇಲ್ಲಿ ಉತ್ಸವವಾಗಿ ಆಚರಿಸಲಾಗುತ್ತದೆ. ನಂದರಾಜ ಪಟ್ಟಣ ಈಗ ಅದು  ನಂದನಹೊಸೂರು ಆಗಿದೆ ಅದು ಬೆಂಕಿಯಿಂದ ಭಸ್ಮವಾದಾಗ ಕೃಷ್ಣಾಚಲ ಬೆಟ್ಟದಲ್ಲಿ ದನ ಕಾಯುತ್ತಿದ್ದ ಹುಡುಗರು ಭಯಭೀತರಾಗಿ ಮುಂದೇನಾಗುವುದೋ ಎಂದು ಕಂಗಾಲಾಗಿರುತ್ತಾರೆ. ಆಗ ಸ್ವಾಮಿಯು ಸಾಧು ವೇಷದಲ್ಲಿ ಬಂದು ದನ ಕಾಯುವ ಹುಡುಗರಲ್ಲಿ ಒಬ್ಬನನ್ನು ಕರೆದು "ನಿಮ್ಮ ಪಟ್ಟಣವು ಸುಟ್ಟು ಹೋಗಿದೆ. ಈಗ ನೀವು ಎಲ್ಲಿಗೆ ಹೋಗುತ್ತೀರಿ? ಊಟಕ್ಕೆ ಏನು ಮಾಡುತ್ತೀರಿ? ನಿಮ್ಮ ಜತೆ ನನಗೂ ಊಟ ಸಿಗಬಹುದೇ?" ಎಂದು ಕೇಳುತ್ತಾರೆ. 

ಆಗ ಆ ಹುಡುಗನಿಗೆ ಸಿಟ್ಟು ಬಂದು "ಇದೇ ಬೆಟ್ಟದ ಹಿಂದೆ ಇರುವ ತಾಳ್ಯದ ಆಂಜನೇಯಸ್ವಾಮಿ ದೇವರಿಗೆ ನೂರೊಂದೆಡೆ ಹಾಕಿದ್ದಾರೆ. ನೀನು ಅಲ್ಲಿಗೆ ಹೋದರೆ ಊಟ ಸಿಗುತ್ತದೆ" ಎಂದು ಹೇಳುತ್ತಾನೆ. ಆಗ ಸ್ವಾಮಿಗೆ ಈ ಹುಡುಗ ಸುಳ್ಳು ಹೇಳುತ್ತಿದ್ದಾನೆ   ಎಂದು ಗೊತ್ತಾಗುತ್ತದೆ.

"ಹಸಿವಿನ ವಿಚಾರದಲ್ಲಿ ಸುಳ್ಳು ಹೇಳಬಾರದು. ನಿನ್ನ ಸುಳ್ಳಿಗೆ ಶಿಕ್ಷೆ ಆಗಲೇಬೇಕು. ನೀನು ಹೇಳಿದ ಜಾಗದಲ್ಲೇ ನಾನು ನೂರೊಂದೆಡೆ ಹಾಕಿಸಿಕೊಳ್ಳುತ್ತೇನೆ. ನಿನ್ನ ಸುಳ್ಳಿಗೆ ಶಿಕ್ಷೆಯಾಗಿ ನಿನ್ನ ಎದೆಯ ಮೇಲೆ ಮೂರು ಗುಂಡುಗಳನ್ನು ಇರಿಸಿ ತಾಳ್ಯದ ಆಂಜನೇಯ ಸ್ವಾಮಿಯ ಎದುರಿನಲ್ಲಿ ಚಮಟಿಗೆಯಿಂದ ನಿಮ್ಮವರಿಂದಲೇ ಹೊಡೆಸಿ, ನಿನ್ನನ್ನು ನನ್ನ ದಾಸಯ್ಯನನ್ನಾಗಿ ಮಾಡಿಕೊಳ್ಳುತ್ತೇನೆ. ಸುತ್ತಲಿನ ಹತ್ತಾರು ಗ್ರಾಮಗಳ ದೇವರುಗಳ ಸಮ್ಮುಖದಲ್ಲಿ ಅನ್ನದ ಕೋಟೆ ಮಾಡಿಸಿ ಅನ್ನ ಹಾಕಿಸುತ್ತೇನೆ" ಎಂದು ಹೇಳುತ್ತಾರೆ. ಇದರಂತೆ ಪ್ರತಿ 12 ವರ್ಷಗಳಿಗೆ ಒಮ್ಮೆ ಗುಂಡಿನ ಸೇವೆ ಹಾಗೂ ಅನ್ನ ಕೋಟೆ ಉತ್ಸವ ನಡೆಯುತ್ತದೆ.
ಹಿಂದಿನಿಂದಲೂ ನಂದನಹೊಸೂರಿನ ದಾಸಯ್ಯನ ವಂಶಸ್ಥರು ಗುಂಡಿನ ದಾಸಯ್ಯನಾಗಿ ಆಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಗುಂಡಿನ ಸೇವೆ ಧಾರ್ಮಿಕ ಕಾರ್ಯಕ್ಕೆ ನೇಮಿಸುವ ದಾಸಯ್ಯನು ತಮ್ಮ ಮನೆದೈವ ಆಂಜನೇಯಸ್ವಾಮಿಗೆ ಮೊದಲ ಪೂಜೆ ಸಲ್ಲಿಸಿ 9 ದಿನ ಹಾಲು, ಹಣ್ಣು ಸೇವನೆ ಮಾಡಿ ನೇಮದಿಂದ ಇದ್ದು ಗುಂಡಿನ ಸೇವೆ ಆಚರಣೆಯಲ್ಲಿ ತೊಡಗುತ್ತಾರೆ .
ನಮ್ಮೂರಿನ ಚೌಡಮ್ಮ ಮತ್ತು ಪಾತೇದೇವರು ಸೇರಿ ಸುತ್ತ ಮುತ್ತಲಿನ ಮೂವತ್ಮೂರು ಹಳ್ಳಿಗಳ ಗ್ರಾಮ ದೇವ ದೇವತೆಗಳನ್ನು ಗುಂಡಿನ ಸೇವೆ ಮತ್ತು ಅನ್ನದ ಕೋಟೆಯ ದಿನದಂದು ಒಂದೆಡೆ ನೋಡಿ  ಕಣ್ತುಂಬಿಕೊಳ್ಳುವುದೇ ಒಂದು ಅದೃಷ್ಟ.
ಇದೇ ತಿಂಗಳ ಆರು ಮತ್ತು ಏಳರಂದು  ಗುಂಡಿನ ಸೇವೆ ಮತ್ತು ಅನ್ನದ ಕೋಟೆ ಉತ್ಸವ ನಡೆಯುತ್ತಿದೆ.ಮತ್ತೆ ಈ ಉತ್ಸವ ನಡೆಯುವುದು ಹನ್ನೆರಡು ವರ್ಷಗಳ ನಂತರ ಸಾಧ್ಯವಾದರೆ ಈ ಉತ್ಸವದಲ್ಲಿ ನೀವೂ ಪಾಲ್ಗೊಳ್ಳಿ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


No comments: