*ಶುಭತರಲಿ*
ನಮ್ಮ ಪ್ರಯತ್ನಗಳು ನಿರಂತರವಾಗಿರಲಿ
ಕಷ್ಟಗಳಿದ್ದರೂ ನೂರಾರು |
ಸರ್ವರಿಗೂ ಶುಭ ತರಲಿ
ಬರುವ ಎರಡು ಸಾವಿರದ ಇಪ್ಪತ್ಮೂರು ||
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು💐🌹🌷
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಶುಭತರಲಿ*
ನಮ್ಮ ಪ್ರಯತ್ನಗಳು ನಿರಂತರವಾಗಿರಲಿ
ಕಷ್ಟಗಳಿದ್ದರೂ ನೂರಾರು |
ಸರ್ವರಿಗೂ ಶುಭ ತರಲಿ
ಬರುವ ಎರಡು ಸಾವಿರದ ಇಪ್ಪತ್ಮೂರು ||
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು💐🌹🌷
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
2023 ಕ್ಕೆ ನನ್ನ ಸಂಕಲ್ಪಗಳು...
ಹೊಸ ವರ್ಷ ಅಂತ ಅಲ್ಲದಿದ್ದರೂ ಒಂದು ಕ್ಯಾಲೆಂಡರ್ ಇಯರ್ ಲೆಕ್ಕದಲ್ಲಿ ನಾವು ಮಾಡಲೇಬೇಕಾದ ಕೆಲಸಗಳ ಪಟ್ಟಿ ಮಾಡಲು ಮತ್ತು ಪುನಃ ಜ್ಞಾಪಿಸಿಕೊಂಡು ಮೈ ಕೊಡವಿಕೊಂಡು ಕಾರ್ಯ ಪ್ರವೃತ್ತವಾಗಲು ಈ ಸಂಕಲ್ಪಗಳು ನಮಗೆ ಬೇಕು. ಕಳೆದ ನಾಲ್ಕಾರು ವರ್ಷಗಳ ಈ ಹವ್ಯಾಸ ಈಗ ಅಭ್ಯಾಸವಾಗಿ ವರ್ಕೌಟ್ ಆಗ್ತಾಯಿದೆ ಅನಸ್ತಾಇದೆ.
2022 ರಲ್ಲಿ ನನ್ನ ಸಂಕಲ್ಪಗಳು ಹೀಗಿದ್ದವು.
ನನ್ನ ತರಗತಿಯನ್ನು ಇನ್ನೂ ಆಕರ್ಷಕವಾಗಿ ಮಾಡಿ ಮಕ್ಕಳಿಗೆ ಇನ್ನೂ ಉತ್ತಮ ಕಲಿಕೆ ಮಾಡಿಸುವುದು.ಕನಿಷ್ಟಪಕ್ಷ ೫ ಹೊಸ ಪುಸ್ತಕಗಳನ್ನು ಬರೆದು ಪ್ರಕಟ ಮಾಡುವುದು.ಕಡಿಮೆಯೆಂದರೂ ೨೫ ಪುಸ್ತಕಗಳನ್ನು ಓದುವುದು.ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಮಾಡುವುದು .
ಹಿಂತಿರುಗಿ ನೋಡಿದಾಗ ಬಹುತೇಕ ಸಂಕಲ್ಪಗಳು ಈಡೇರಿವೆ ಕೆಲವು ಗುರಿಮೀರಿದ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳಬಹುದು. ಮೊದಲನೆಯದಾಗಿ ಶಿಕ್ಷಕನಾದ ನಾನು ನನ್ನ ತರಗತಿಯನ್ನು ಹೆಚ್ಚು ಆಸಕ್ತಿಕರವಾಗಿ ಮಾಡಲು ಪಣ ತೊಟ್ಟಿದ್ದೆ ಆ ನಿಟ್ಟಿನಲ್ಲಿ ಸಾಗಿ ಮಕ್ಕಳಿಗೆ ಉತ್ತಮ ಕಲಿಕೆ ಉಂಟಾಗಲು ಒಬ್ಬ ಅನುಕೂಲಕಾರನಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ನನಗಿದೆ.ಈ ಕಾರ್ಯದಲ್ಲಿ ನಮ್ಮ ಶಾಲೆಯ ಮುಖ್ಯ ಶಿಕ್ಷಕರು, ಸಹೋದ್ಯೋಗಿ ಮಿತ್ರರು, ಇಲಾಖೆಯ ಅಧಿಕಾರಿ ಬಂಧುಗಳ ಸಲಹೆ ಮಾರ್ಗದರ್ಶನ ಮರೆಯಲಾಗುವುದಿಲ್ಲ.ಇದೆಲ್ಲದರ ಪರಿಣಾಮವಾಗಿ ನಮ್ಮ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ಬಂದಿದೆ! ನನ್ನ ಸಮಾಜ ವಿಜ್ಞಾನ ವಿಷಯದಲ್ಲಿ ಗುಣಮಟ್ಟದ ಫಲಿತಾಂಶದೊಂದಿಗೆ ಒಂಭತ್ತು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದದ್ದು ಒಂದು ಅವಿಸ್ಮರಣೀಯ ಘಟನೆ.
ನಮ್ಮ ಶಾಲೆಯ ಎಲ್ಲರ ಸಹಕಾರದಿಂದ ನಮ್ಮ ಶಾಲೆಯ ಮಕ್ಕಳು ಜಿಲ್ಲಾ ಮತ್ತು ತಾಲ್ಲೂಕು ಹಂತದ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಉತ್ತಮ ಬಹುಮಾನ ಪಡೆದದ್ದು ಮತ್ತೊಂದು ಸಂತಸದ ಸಂಗತಿ.
ಇನ್ನೂ ನನ್ನ ಎರಡನೇ ಸಂಕಲ್ಪವಾದ ಕನಿಷ್ಟ ಐದು ಪುಸ್ತಕ ಬರೆದು ಪ್ರಕಟಿಸಬೇಕು ಎಂಬ ವಿಚಾರಕ್ಕೆ ಬಂದರೆ ಇದರಲ್ಲಿ ಗುರಿಮೀರಿದ ಸಾಧನೆ ಮಾಡಿರುವುದು ತೃಪ್ತಿ ಇದೆ. ಈ ವರ್ಷ
ರಂಗಣ್ಣನ ಗುಡಿಸಲು ಎಂಬ ಕಥಾಸಂಕಲನ ,
ಉದಕದೊಳಗಿನ ಕಿಚ್ಚು ಎಂಬ ಕಾದಂಬರಿ ,ಶಿಕ್ಷಣವೇ ಶಕ್ತಿ ಎಂಬ ಶೈಕ್ಷಣಿಕ ಲೇಖನಗಳ ಸಂಕಲನ,
ಬಾರೋ ಬಾರೋ ಗುಬ್ಬಚ್ಚಿ ಎಂಬ ಶಿಶುಗೀತೆಗಳ ಸಂಕಲನ,
ಭಾಷಣ ಕಲೆ ಎಂಬ ಮಕ್ಕಳ ಪುಸ್ತಕ
ಬಹುಮುಖಿ ಎಂಬ ವಿಮರ್ಶೆ ಕೃತಿ ಸೇರಿ ಒಟ್ಟು ಆರು ಪುಸ್ತಕಗಳನ್ನು ಸಹೃದಯ ಗೆಳೆಯರ ಸಹಾಯದಿಂದ ಪ್ರಕಟಿಸಲು ಸಾದ್ಯವಾಗಿರುವುದು ಬಹಳ ಸಂತಸ ತಂದಿದೆ. ಈ ಪುಸ್ತಕಗಳು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರ ಮತ್ತು ಕವಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಗೊಂಡಾಗ ಸಾರ್ಥಕ ಭಾವ ಮೂಡಿತು.
ದೇಶ ಸುತ್ತುವುದು ಹಾಗೂ ಕೋಶ ಓದುವುದು ನನ್ನ ಸಂಕಲ್ಪದಲ್ಲಿ ಸೇರಿದ್ದವು ಕನಿಷ್ಟ25 ಪುಸ್ತಕ ಓದಲು ಸಂಕಲ್ಪ ಮಾಡಿದ್ದೆ ಅದರಲ್ಲೂ ಗುರಿ ಮೀರಿದ ಸಾಧನೆ ಮಾಡಿ 52 ಪುಸ್ತಕಗಳ ಓದಿ ಆ ಪುಸ್ತಕಗಳ ವಿಮರ್ಶೆ ಮಾಡಿ "ಬಹುಮುಖಿ "ಎಂಬ ವಿಮರ್ಶಾ ಕೃತಿ ಹೊರತಂದಿರುವೆ.
ಇನ್ನೂ ದೇಶ ಸುತ್ತುವ ವಿಚಾರದಲ್ಲಿ ಕೆಲ ಐತಿಹಾಸಿಕ ಕೆಲ ಪಾರಂಪರಿಕ ತಾಣಗಳಲ್ಲಿ ಸಮಾನ ಮನಸ್ಕರೊಂದಿಗೆ ಅಲೆದಾಡಿ ಆ ಅನುಭವ ಕುರಿತಾದ ಲೇಖನಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆಯನ್ನು ಪಡೆದ ಖುಷಿ ಮರೆಯಲಾಗದು.
ಇದರ ಜೊತೆಯಲ್ಲಿ ವಿವಿಧ ವಿಷಯಗಳ ಲೇಖನ ,ಕಥೆ, ಕವಿತೆ ಹನಿಗವನ ಮುಂತಾದ80 ಕ್ಕೂ ಹೆಚ್ಚು ಬರೆಹಗಳು ರಾಜ್ಯದ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದಾಗ ಆನಂದ ಪಟ್ಟಿದ್ದೇನೆ.
ಅದರಲ್ಲೂ ಈ ವರ್ಷ ಪ್ರಜಾ ಪ್ರಗತಿ ಪತ್ರಿಕೆಯ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪುರಸ್ಕಾರಕ್ಕೆ ಪಾತ್ರವಾದ ಖುಷಿಯನ್ನು ಆಗಾಗ್ಗೆ ಮೆಲುಕು ಹಾಕುತ್ತೇನೆ.
ಈ ವರ್ಷದಲ್ಲಿ ಕೆಲ ಸಂಘ ಸಂಸ್ಥೆಗಳು ನನ್ನ ಕಿರು ಸಾಧನೆಯನ್ನು ಗುರ್ತಿಸಿ ಸನ್ಮಾನಿಸಿವೆ ತೆಲುಗು ಜಂಗಮ ಅಭಿವೃದ್ಧಿ ಟ್ರಸ್ಟ್ ನವರು ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರೆ, ವಿಶ್ವ ಮಾನವ ಟ್ರಸ್ಟ್ ನವರು ಬೆಸ್ಟ್ ಟೀಚರ್ ಎಂದು ಗುರ್ತಿಸಿ ಬಹುಮಾನ ನೀಡಿವೆ ಆ ಸಂಸ್ಥೆಗೆ ನನ್ನ ಧನ್ಯವಾದಗಳು .ನನ್ನೆಲ್ಲ ಈ ಕಿರು ಸಾಧನೆಗೆ ನನ್ನ ಕುಟುಂಬದ ಎಲ್ಲಾ ಸದಸ್ಯರ ಬೆಂಬಲ ಸಹಕಾರ ನೆನೆಯದೇ ಇರುವುದಾದರೂ ಹೇಗೆ ?
ಅನೇಕ ಏಳು ಬೀಳುಗಳ ನಡುವೆ 2022 ಸಮಾಧಾನ ತಂದ ವರ್ಷ ಬಹುತೇಕ ಸಂಕಲ್ಪಗಳು ಈಡೇರಿದ ವರ್ಷ ಇದೇ ಜೋಷ್ ನಲ್ಲಿ ಮುಂಬರುವ 2023 ರಲ್ಲಿ ನನ್ನ ಸಂಕಲ್ಪಗಳು ಹೀಗಿವೆ...
ನನ್ನ ತರಗತಿಯನ್ನು ಇನ್ನೂ ಆಕರ್ಷಕವಾಗಿ ಮಾಡಿ ಮಕ್ಕಳಿಗೆ ಇನ್ನೂ ಉತ್ತಮ ಕಲಿಕೆ ಮಾಡಿಸುವುದು ಮತ್ತು ನಮ್ಮ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು.
ಕನಿಷ್ಟಪಕ್ಷ ೫ ಹೊಸ ಪುಸ್ತಕಗಳನ್ನು ಬರೆದು ಪ್ರಕಟ ಮಾಡುವುದು.
ಕಡಿಮೆಯೆಂದರೆ 50 ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳುವುದು.
ಸಾಧ್ಯವಾದಷ್ಟು ಪ್ರವಾಸ ಮಾಡುತ್ತಾ ಹೊಸ ಸ್ಥಳಗಳ ಪರಿಚಯ ಮಾಡಿಕೊಳ್ಳುವುದು. ಕುಟುಂಬದೊಂದಿಗೆ ಗುಣಾತ್ಮಕ ಸಮಯ ಕಳೆಯುತ್ತಾ ಮಕ್ಕಳಿಗೆ ಸಲಹೆ ಮಾರ್ಗದರ್ಶನ ನೀಡುವುದು. ಯೋಗ ,ಧ್ಯಾನ ,ಪ್ರಾಣಾಯಾಮ ಮತ್ತು ಪ್ರಾರ್ಥನೆ ಮುಂತಾದವುಗಳನ್ನು ಮಾಡುವುದನ್ನು ಮುಂದುವರೆಸಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಈ ಸಂಕಲ್ಪಗಳೊಂದಿಗೆ ಹೊಸ ಕ್ಯಾಲೆಂಡರ್ ವರ್ಷ 2023 ಸ್ವಾಗತಿಸುತ್ತಿದ್ದೇನೆ ..
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ವಿಶ್ವ ಮಾನವರಾಗೋಣ...
ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಲ್ಕು ದಿನಗಳ ಕುವೆಂಪು ನಾಟಕೋತ್ಸವದಲ್ಲಿ ಪ್ರೇಕ್ಷಕನಾಗಿ ಕುವೆಂಪು ಕೃತಿಗಳ ಕಣ್ತುಂಬಿಕೊಳ್ಳುವ ಸದವಕಾಶ ಲಭಿಸಿತ್ತು. ಹಿರಿಯ ರಂಗಕರ್ಮಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಆದ ಸಿ ಲಕ್ಷ್ಮಣ ರವರ ಮಗ ಓಹಿಲೇಶ್ವರ ಬಹಳ ಅಚ್ಚುಕಟ್ಟಾಗಿ ನಾಟಕಗಳ ಪ್ರದರ್ಶನ ಆಯೋಜಿಸಿದ್ದರು ಎಲ್ಲಾ ನಾಟಕ ತಂಡಗಳ ಅಭಿನಯ ಪ್ರೇಕ್ಷಕರ ಮನಗೆದ್ದಿತು. ರಂಗಭೂಮಿಗೆ ಭವಿಷ್ಯವಿಲ್ಲ ಇದು ಟಿ ವಿ ಸಿನಿಮಾಗಳ ಕಾಲ ಎಂಬ ಕೂಗಿನ ನಡುವೆ ಎಲ್ಲಾ ದಿನಗಳಲ್ಲಿ ಕಲಾಕ್ಷೇತ್ರ ತುಂಬಿದ ಪ್ರೇಕ್ಷಕರಿಂದ ಕಂಗೊಳಿಸಿದ್ದು ನನಗೆ ಅತೀವ ಸಂತೋಷ ಉಂಟುಮಾಡಿತು. ಮನದಲ್ಲೆ ಅಂದುಕೊಂಡೆ ಯಾವ ಮಾದ್ಯಮ ಬಂದರೂ ರಂಗಭೂಮಿ ಮಣಿಸಲು ಸಾದ್ಯವಿಲ್ಲ.
ಬೊಮ್ಮನ ಹಳ್ಳಿ ಕಿಂದರಿಜೋಗಿ, ಮೋಡಣ್ಣನ ತಮ್ಮ, ಯಮನಸೋಲು ,ಸ್ಮಶಾನ ಕುರುಕ್ಷೇತ್ರ ಮುಂತಾದ ನಾಟಕಗಳನ್ನು ಕಲಾವಿದರು ಅಭಿನಯಿಸುವಾಗ ಪ್ರತಿ ದೃಶ್ಯದ ಕೊನೆಗೆ ಪ್ರೇಕ್ಷಕರ ಕರತಾಡನ ಕಲಾಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿತ್ತು.
ನಾನು ಈಗಾಗಲೇ ಈ ಕೃತಿಗಳನ್ನು ಹಲವಾರು ಬಾರಿ ಓದಿದ್ದರೂ ,ನಾಟಕಗಳನ್ನು ಕೆಲವು ಸಲ ನೋಡಿದ್ದರೂ ಆ ನಾಟಕಗಳ ಸಂಭಾಷಣೆಗಳು ಇಂದು ನನಗೆ ಹೊಸ ದಾಗಿ ಕಂಡವು .ಚಿಂತನೆಗೆ ಹಚ್ಚಿದವು.ಅದೇ ಅಲ್ಲವೇ ಕುವೆಂಪು ಸಾಹಿತ್ಯದ ತಾಕತ್ತು!
ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ
ಕುವೆಂಪುರವರು ಎಲ್ಲಾ ತರಹದ ಸಾಹಿತ್ಯ ರಚಿಸಿದ್ದಾರೆ.ಅವರ ಸಾಹಿತ್ಯ ಓದಿದವರಿಗೆ ಅವರ ಸಾಹಿತ್ಯದ ಗಟ್ಟಿತನ ತಿಳಿಯುತ್ತದೆ. ಪ್ರತೀ ಪುಸ್ತಕದ ಕೆಲ ಸಂಭಾಷಣೆಗಳು, ಹೇಳಿಕೆಗಳು ಪ್ರತಿ ದಿನ ನಮಗೆ ಮಾರ್ಗದರ್ಶನ ಮಾಡುತ್ತವೆ .ಎಚ್ಚರಿಸುತ್ತವೆ. ಪ್ರೇರೇಪಿಸುತ್ತವೆ.
ಅದಕ್ಕೆ ಉದಾಹರಣೆ ನೀಡುವುದಾರೆ
ಸ್ಮಶಾನ ಕುರುಕ್ಷೇತ್ರ ದ ಎರಡು ಪಾತ್ರಗಳ ಸಂಭಾಷಣೆಯ ನಡುವೆ ಪರಸ್ಪರ ವಿರೋಧ ಗುಂಪುಗಳಾದ ಪಾಂಡವರ ಮತ್ತು ಕೌರವರ ಸೈನಿಕರ ಮರಣದ ವಿಷಯ ತಿಳಿದು ನಾವು ಪರಸ್ಪರ ವಿರೋಧ ಗುಂಪುಗಳಲ್ಲವೇ ಎಂದು ಮಹಿಳೆ ಕೇಳಿದಾಗ ಅಜ್ಜಿ ನೀಡುವ ಉತ್ತರ
"ನಮಗೆಂತಹ ಹಗೆ ನಾವು ಅವರ ಕೈಗೊಂಬೆಗಳು...ಅವರು ಅಧಿಕಾರಕ್ಕೆ ನಮ್ಮ ಕುಟುಂಬದ ಬಲಿಯಾಗುತ್ತಿವೆ " ಎಂಬ ಮಾತುಗಳು ನನ್ನನ್ನು ಬಹಳ ಕಾಡಿದವು.
ಅದೇ ರೀತಿಯಲ್ಲಿ ಯಮನ ಸೋಲು ನಾಟಕ ಸಂಭಾಷಣೆಯ ಮಾತುಗಳಲ್ಲಿ ಸಾವಿತ್ರಿಯ
"ಕರುಣೆಯಿರದ ಕಾಲ ಚಕ್ರ ಇದು..
ನಿನ್ನ ಧರ್ಮ ನೀನು ಮಾಡು ನನ್ನ ಧರ್ಮವ ನಾನು ಮಾಡುವೆ..
ಧರ್ಮದಿಂ ಧರ್ಮವ ಗೆಲ್ವೆನ್ ....
ನರಕ ನಾಕಗಳನು ಸೃಜಿಸುವುದು ಮನಸು..." ಮುಂತಾದ ಮಾತುಗಳು ಈಗಲೂ ಕಿವಿಯಲ್ಲಿ ಅನುರಣಿಸುತ್ತವೆ.
ಹೀಗೆ ಕುವೆಂಪು ರವರ ಪ್ರತಿ ಕೃತಿಯಲ್ಲೂ ನಮ್ಮನ್ನು ಚಿಂತನೆಗೆ ಹಚ್ಚುವ ಕೆಲ ಸಾಲುಗಳಿವೆ. ಅವುಗಳನ್ನು ಮೆಲುಕು ಹಾಕುತ್ತಾ ಇರಬೇಕು.ಕೆಲ ಮೂಲಗಳಿಂದ ಸಂಗ್ರಹಿಸಿದ ಅಂತಹ ಸಾರಂಶಯುಕ್ತ ಸಾಲುಗಳನ್ನು ಒಂದೆಡೆ ತರುವ ಪ್ರಯತ್ನ ಮಾಡಿರುವೆ...
ಮನುಜ ಮತ ವಿಶ್ವ ಪಥ ಪುಸ್ತಕದಲ್ಲಿ ಬರುವ
"ಪಾಶ್ಚಾತ್ಯರಲ್ಲಿ ಅನೇಕರು, ವಿಶ್ವವಿದ್ಯಾನಿಲಯಗಳ ಮೆಟ್ಟಿಲನ್ನು ಕೂಡ ಹತ್ತದೇ ಇರುವವರು, ಎಷ್ಟೋಜನ ವಿಜ್ಞಾನದಲ್ಲಿ ದೊಡ್ಡ ಆವಿಷ್ಕಾರಗಳನ್ನು ಮಾಡಿದ್ದಾರೆ. ಕಾರಣ ಏನೆಂದರೆ ಅವರವರ ಭಾಷೆಗಳಲ್ಲಿ ಅವರು ಚಿಂತನೆ ನಡೆಸಿದ್ದಾರೆ" ಎಂಬುದು ನಮ್ಮ ಭಾಷೆಯ ಮಹತ್ವ ಸಾರುತ್ತವೆ.
ಇತ್ತೀಚಿನ ದಿನಗಳಲ್ಲಿ ಮುಗಿಯದ ಭಾಷಾ ಸಂಘರ್ಷಗಳನ್ನು ಗಮನಿಸಿದಾಗ ಕುವೆಂಪುರವರ ಮನುಜಮತ ವಿಶ್ವ ಪಥ ಪುಸ್ತಕದ ಮಾತುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.ಅವರೇ ಹೇಳುವಂತೆ
" ಹಿಂದಿಯನ್ನಾಗಲಿ, ಇಂಗ್ಲೀಷನ್ನಾಗಲಿ ಎಲ್ಲರೂ ಕಲಿಯಬೇಕು ಅನ್ನುವಂಥ ಅವಿವೇಕ ಮತ್ತೊಂದಿಲ್ಲ.
ಆದರ್ಶಗಳ ಬಗ್ಗೆ ತಮ್ಮ ಅಣ್ಣನ ನೆನಪು ಪುಸ್ತಕದ ಮಾತು ಎಲ್ಲರೂ ನೆನೆಯಲೇಬೇಕು.
"ಆದರ್ಶಗಳು ನಾವು ದಿನಾ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು".
ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಪುಸ್ತಕದಲ್ಲಿ ಅವರು ಅಂದು ಹೇಳಿದ ಮಾತುಗಳು ಇಂದಿನ ಸಮಾಜ ನೋಡಿಯೇ ಹೇಳಿದಂತಿದೆ.
"ಮತಭಾವನೆ ಪ್ರಚೋದಿಸಿರುವ ಜಾತಿಭೇದ ಬುದ್ಧಿ, ಮತ್ತು ಚುನಾವಣೆ ಅನುಸರಿಸುತ್ತಿರುವ ಕುಟೀಲ ಕುನೀತಿ. ಈ ಎರಡು ಜನಕ ಅನಿಷ್ಟಗಳನ್ನೂ ನೀವು ತೊಲಗಿಸಿದರೆ ಉಳಿದ ಎಲ್ಲ ಜನ್ಯ ಅನಿಷ್ಟಗಳನ್ನೂ ಬಹುಬೇಗನೆ ತೊಲಗಿಸಲು ನೀವು ಖಂಡಿತವಾಗಿಯೂ ಸಮರ್ಥರಾಗುತ್ತೀರಿ". ಹೌದಲ್ಲವೇ ಎಷ್ಟೊಂದು ಸತ್ಯ.
ಕೊಳಲು ಕವನ ಸಂಕಲನದ ನೇಗಿಲಯೋಗಿ ಕವಿತೆ ನೀಡುವ ಸಂದೇಶ ಅನನ್ಯ
"ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ
ನೇಗಿಲಕುಳದೊಳಗಡಗಿದೆ ಕರ್ಮ
ನೇಗಿಲ ಮೇಲಿಯೆ ನಿಂತಿದೆ ಧರ್ಮ"
ನಮ್ಮ ಅನ್ನದಾತನ ಮಹತ್ವವನ್ನು ನಾವು ಇನ್ನಾದರೂ ಮನಗಾಣಬೇಕಿದೆ.
ಇನ್ನೂ ಕುವೆಂಪುರವರ ಸಂದೇಶಗಳನ್ನು ನೋಡುವುದಾದರೆ
"ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು
ನೀ ಮೆಟ್ಟುವ ನೆಲ-ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ" ಎನ್ನುತ್ತಾ ನಾಡು ನುಡಿಯ ಬಗ್ಗೆ ತಿಳಿಹೇಳಿದ್ದಾರೆ.
ಸಂಕುಚಿತ ಬುದ್ದಿ ಬಿಟ್ಟು ವಿಶಾಲ ಮನೋಭಾವ ಬೆಳೆಸಿಕೋ ಎನ್ನುತ್ತಾ
ಓ ನನ್ನ ಚೇತನ
ಆಗು ನೀ ಅನಿಕೇತನ ಎಂದರು ನಮ್ಮ ರಸ ಋಷಿ.
ಹೀಗೆ ಕುವೆಂಪುರವರ ವಿಚಾರಗಳನ್ನು ಹೇಳುತ್ತಾ ಹೋದರೆ ಕೊನೆಯೆಂಬುದಿಲ್ಲ ವಿಶ್ವ ಮಾನವ ದಿನದ ಅಂಗವಾಗಿ ಇವೆಲ್ಲವೂ ನೆನಪಾದವು. ಕುವೆಂಪುರವರ ಸಾಹಿತ್ಯ ಓದೋಣ ,ಓದಿಸೋಣ, ಅವರ ಬಗ್ಗೆ ಅವರ ಕೃತಿಗಳ ಬಗ್ಗೆ ಚರ್ಚಿಸೋಣ.ಚಿಂತನಮಂಥನ ಮಾಡೋಣ. ರಸ ಋಷಿಯ ಸಂದೇಶಗಳಲ್ಲಿ ಕೆಲವನ್ನಾದರೂ ನಾವು ಅಳವಡಿಕೊಂಡರೆ ನಾವು ವಿಶ್ವಮಾನವರಾಗುವುದರಲ್ಲಿ ಸಂದೇಹವಿಲ್ಲ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529.
ಪ್ರಿಯೆ ಹೀಗೇಕೆ ಮಾಡಿದೆ? ಇನ್ನೂ ಆರಿಲ್ಲ ನೀ ಬರೆದ ಪ್ರೇಮ ಪತ್ರದ ಶಾಯಿ| ಇನ್ನೊಬ್ಬನ ಮದುವೆಯಾಗಿ ಆಗುವಿಯಲ್ಲ ಅವನ ಮಗುವಿನ ತಾಯಿ || ಸಿಹಿಜೀವಿ ಸಿ ಜಿ ವೆಂಕಟೇಶ್ವರ ...
ಮಹಾನ್ ಪತ್ತೇದಾರ..
ನಾನು ಮಾಡಿದ ಅನೀತಿ ,ಅಕ್ರಮ
ಯಾರಿಗೂ ಗೊತ್ತಾಗಿಲ್ಲ ಎಂದು
ಮನದಲೇ ಬಡಬಡಿಸಬೇಡ
ನಾನೊಬ್ಬ ಮಹಾನ್ ನಟ, ಮೋಸಗಾರ, ಚತುರ ನಾಟಕಕಾರ |
ನಿನ್ನೆಲ್ಲಾ ಆಟೋಟೋಪ ನೋಡುತ
ಮೇಲೆ ಕೂತಿರುವ ಮಹಾನ್ ಪತ್ತೇದಾರ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
What I did was wrong, illegal
That no one knows
Don't beat yourself up
I am a great actor, a trickster, a clever dramatist
See you all autotopa
The great detective sitting above ||
sweet creature
CG Venkateswara.
ನನ್ನ ನೌಕರಿಗೆ ವಯೋಸಹಜ
ಕಾರಣದಿಂದ ಪಡೆದಿರುವೆ ನಿವೃತ್ತಿ|
ಕ್ರಿಯಾಶೀಲತೆ, ಸಹಕಾರ,ಸಹಾಯ
ಮುಂತಾದವು ನಿಂತಿಲ್ಲ ಇವೆಲ್ಲವೂ
ನನ್ನ ಹೆಮ್ಮೆಯ ಪ್ರವೃತ್ತಿ ||
ಪುಟ್ಬಾಲ್ ನಲ್ಲಿ ದಂತಕಥೆಗಳಾಗಿದ್ದರೂ
ಪೀಲೆ ಮತ್ತು ಮರಡೋನ |
ಮೆಸ್ಸಿಯ ಕಾಲ್ಚೆಳಕಕ್ಕೆ ಬೆರಗಾದ
ಜಗವು ಮಾಡುತ್ತಿದೆ ಅವರ ಗುಣಗಾನ ||
ಪುಟ್ಬಾಲ್ ಪೈನಲ್ ಪ್ರಶ್ನೆ.
ಸಮಬಲದ ಹೋರಾಟದಲ್ಲಿ
ಗೆಲುವು ಪಡೆದು ಬೀಗಿತು ಅರ್ಜೆಂಟೈನಾ|
ಪ್ರಾನ್ಸ್ ಹೋರಾಟ ಮಾಡುತ್ತಾ
ಪ್ರಶ್ನಿಸಿತು ಗೆಲ್ಲಲು ನಿಮಗೆ ಅಷ್ಟು ಅರ್ಜೇಂಟೇನಾ?
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಸೋತೆನೆಂದು ಹತಾಶನಾಗಿ
ಕುಗ್ಗಿಸಿಕೊಳ್ಳದಿರು ನಿನ್ನ ಮನ
ನಿರಂತರ ಪ್ರಯತ್ನದಿ, ಧೈರ್ಯದಿ
ಮುನ್ನುಗ್ಗು ಗೆದ್ದೇ ಗೆಲ್ಲುವೆ ಒಂದುದಿನ||
ಬರಹ ಕೂಟ..
ನಮ್ಮ ಅಭಿಪ್ರಾಯಗಳನ್ನು ಬಹಳ ಜನರಿಗೆ ತಲುಪಿಸಲು ಪತ್ರಿಕೆಗಳಲ್ಲಿ ಬರೆಯುವುದನ್ನು ಹಲವಾರು ರೂಢಿಸಿಕೊಂಡಿರುತ್ತಾರೆ ಹಾಗೆ ಬರೆದ
ಲೇಖನ ಕವಿತೆ ಮತ್ತು ಇನ್ನಿತರ ಬರೆಹಗಳು ಪತ್ರಿಕೆಯಲ್ಲಿ ಪ್ರಕಟವಾದಾಗ ಲೇಖಕರಿಗೆ ಆಗುವ ಖುಷಿ ವರ್ಣಿಸಲಸದಳ.
ಕೆಲ ಲೇಖನಗಳು ಮತ್ತು ಕವಿತೆಗಳು ಇಂತಹ ದಿನದಂದೇ ಪ್ರಕಟವಾಗುತ್ತವೆ ಎಂಬುದು ಬಹುತೇಕ ಎಲ್ಲ ಲೇಖಕರಿಗೂ ತಿಳಿಯುವುದಿಲ್ಲ. ಎಲ್ಲರಿಗೂ ತಮ್ಮ ಲೇಖನಗಳ ಪ್ರಕಟವಾದ ಸುದ್ದಿ ತಿಳಿಸಲು ಸುದ್ದಿ ವಿಭಾಗದವರಿಗೂ ಸುಲಭವಾದ ಕೆಲಸವಲ್ಲ.
ಈ ನಿಟ್ಟಿನಲ್ಲಿ ಯೋಚಿಸಿದ ಕವಿಗಳು, ಲೇಖಕರು, ಹಾಗೂ ಶಿಕ್ಷಕರಾದ ಮುಗಿಲ ಹಕ್ಕಿ ಕಾವ್ಯನಾಮದಿಂದ ಪರಿಚಿತವಾಗಿರುವ ಮೈಲಾರಪ್ಪ ಬೂದಿಹಾಳ್ ರವರು ತಂತ್ರಜ್ಞಾನ ಉಪಯೋಗಿಸಿಕೊಂಡು ರಾಜ್ಯದ ಪ್ರಮುಖ ಬರಹಗಾರರನ್ನು ಒಳಗೊಂಡ ಒಂದು ವಾಟ್ಸಪ್ ಬಳಗ ರಚಿಸಿದ್ದಾರೆ. ನನ್ನನ್ನು ಸಹ ಬಳಗದಲ್ಲಿ ಸದಸ್ಯರನ್ನಾಗಿ ಮಾಡಿದ್ದಾರೆ. ನನ್ನ ಬರಹ ಯಾವುದೇ ಪತ್ರಿಕೆಯಲ್ಲಿ ಪ್ರಕಟವಾದರೂ ಮೊದಲು ಮುಗಿಲ ಹಕ್ಕಿ ಬಳಗದಲ್ಲಿ ಹಂಚಿಕೊಂಡು ನನಗೆ ಮಾಹಿತಿ ನೀಡುತ್ತದೆ. ಅದೇ ರೀತಿಯಲ್ಲಿ ನನ್ನಂತೆ ನಮ್ಮ ಬಳಗದ ಇತರ ಕವಿ ಮತ್ತು ಲೇಖಕರ ಎಲ್ಲಾ ದಿನಪತ್ರಿಕೆಗಳು, ವಾರಪತ್ರಿಕೆ, ಮತ್ತು ಮಾಸಿಕಗಳ ಬರಹಗಳನ್ನು ಬಳಗದಲ್ಲಿ ಹಂಚಿಕೊಳ್ಳುವುದರಿಂದ ಪರಸ್ಪರ ಓದಿ ವಿಮರ್ಶಿಸಿ ಮೆಚ್ಚುಗೆ ವ್ಯಕ್ತಪಡಿಸಲು ಸಹಾಯಕವಾಗಿ .ಇದು ಸಹ ಸಮಾಜಿಕ ಮಾಧ್ಯಮಗಳನ್ನು ಒಳ್ಳೆಯ ಕಾರಣಕ್ಕೆ ಬಳಕೆ ಮಾಡುತ್ತಿರುವ ಒಂದು ಉದಾಹರಣೆ ಎಂತಲೂ ಹೇಳಬಹುದು.
ಬಳಗದಲ್ಲಿ ಡಾಕ್ಟರ್ ವೆಂಕಟ ಗಿರಿ ದಳವಾಯಿ ,ರಾಜಶೇಖರ ಮಠಪತಿ ,ಡಾ ನಿಂಗೂ ಸೊಲಗಿ ,ಪ್ರಸನ್ ಕುಮಾರ್ ,ಶ್ರೀದೇವಿ ಕೆರೆಮನೆ ,ಅರುಣಾ ನರೇಂದ್ರ ,
ಅಕ್ಷತಾ ಕೃಷ್ಣ ಮೂರ್ತಿ ಹಾಗೂ ಇತರರು ಇದ್ದಾರೆ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಏರಿಕೆ ಕಾಣಲಿದೆ. ಇನ್ನೂ ಬಳಗದ ಅಡ್ಮಿನ್ ಆದ ಮುಗಿಲ ಹಕ್ಕಿ ರವರು ಕೆಲವೊಮ್ಮೆ ಪ್ರಕಟವಾದ ಲೇಖನ ಇರುವ ಪತ್ರಿಕೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಲೇಖರಿಗೆ ಕಳಿಸಿ ತಮ್ಮ ವಿಶೇಷವಾಗಿ ವ್ಯಕ್ತಿತ್ವ ಅನಾವರಣ ಮಾಡಿಬಿಡುತ್ತಾರೆ.
ನೀವು ಲೇಖಕರಾಗಿದ್ದಲ್ಲಿ ಬಳಗ ಸೇರಬಹುದು ಮುಗಿಲ ಹಕ್ಕಿ ರವರ ಸಂಪರ್ಕ ಸಂಖ್ಯೆ..9880942764..
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಬೊಂಬೆ ಅಂತಹ ನನ್ ಮೊಮ್ಮೊಗಳು ಅದಾಳೆ ನಮ್ ಮನೇಲಿ|
ನಾನ್ ತೊಗೊಂಡ್ ಹೋಗಿ ಕೊಡೋ ಈ ಗೊಂಬೆ ನೊಡಿ ನಗ್ತಾಳ್ ನೋಡು ಕಿಲಿಕಿಲಿ ||
ಸಿಹಿಜೀವಿ
ಕಾಯಿಸುತಾ ವಿಳಂಬವಾಗಿ ಬಂದೆನೆಂದು
ಹುಸಿಕೋಪ ತೋರುತಾ
ದೂರ ತಳ್ಳದಿರು ರಾಧಾ |
ನಿನ್ನ ನೋಡಲು ಬರುವಾಗ
ನೂರಾರು ಗೋಪಿಕೆಯರು
ಸಿಕ್ಕರು ನೋಡಿ ಸುಮ್ಮನಿರೋದಾ? ||
#ಸಿಹಿಜೀವಿ
ಸ್ಮಾರಕಗಳನ್ನು ಸಂರಕ್ಷಿಸೋಣ..
ಪ್ರಾಗೈತಿಹಾಸಿಕ ಆಧಾರಗಳು ಇತಿಹಾಸ ರಚನೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಅದರಲ್ಲೂ ಐತಿಹಾಸಿಕ ಮಹತ್ವದ ಸ್ಮಾರಕಗಳು ನಮ್ಮ ಪರಂಪರೆಯ ಹೆಮ್ಮೆಯ ಪ್ರತೀಕವೂ ಆಗಿವೆ. ಇಂತಹ ಸ್ಮಾರಕಗಳ ಮಹತ್ವ ತಿಳಿಯದೆ ಬಹುತೇಕ ಸ್ವಾರಕಗಳು ಇಂದು ಅನಾಥವಾಗಿವೆ.ಕೆಲವು ಕಡೆ ಶಾಸನಗಳು ಮತ್ತು ಸ್ಮಾರಕಗಳನ್ನು ಬಟ್ಟೆ ಒಗೆಯೊ ಕಲ್ಲುಗಳಾಗಿ ದನ ಕಟ್ಟುವ ಗೂಟಗಳಾಗಿ ಬಳಕೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ.ಇತ್ತೀಚೆಗೆ ಸ್ನೇಹಿತರ ಜೊತೆಯಲ್ಲಿ ಗಂಗರ ರಾಜಧಾನಿಯಾಗಿದ್ದ ಮಣ್ಣೆ ಗೆ ಹೋದಾಗ ಅಲ್ಲಿಯ ಸ್ಮಾರಕಗಳ ದುಸ್ತಿತಿ ಕಂಡು ಮನಸ್ಸಿಗೆ ಬಹಳ ಬೇಸರವಾಗಿ ಅಂತಹ ಸ್ಮಾರಕಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂಬುವ ಆಗ್ರಹಪೂರ್ವಕ ಲೇಖನ ಬರೆದಿದ್ದೆ.ಇದಕ್ಕೆ ಇತಿಹಾಸ ಪ್ರಿಯರು ಮತ್ತು ಸ್ಮಾರಕಗಳ ಬಗ್ಗೆ ಆಸಕ್ತಿ ಇರುವವರು ದನಿಗೂಡಿಸಿದ್ದರು.
ಆಶಾದಾಯಕ ಬೆಳವಣಿಗೆಯಂತೆ ಕಳೆದ ವಾರ ಕರ್ನಾಟಕ ಸರ್ಕಾರ
21 ತಾಲ್ಲೂಕುಗಳಲ್ಲಿ “ಸಂರಕ್ಷಣ್" ಹೆಸರಿನಲ್ಲಿ ಪಾರಂಪರಿಕ ಮಹತ್ವದ ಸ್ಮಾರಕಗಳನ್ನು ಗುರುತಿಸಿ, ಸಂರಕ್ಷಣೆಗೆ ಯೋಜನೆ ರೂಪಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.
2022- 23ನೇ ಸಾಲಿನಲ್ಲಿ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಗಾಗಿ ಪುರಾತತ್ವ ಇಲಾಖೆಯು ರಾಜ್ಯದಲ್ಲಿ 844 ರಾಜ್ಯ ಸಂರಕ್ಷಿತ ಹಾಗೂ 65 ಕೇಂದ್ರ ಸಂರಕ್ಷಿತ ಸ್ಮಾರಕಗಳನ್ನು ಗುರುತಿಸಲಾಗಿದೆ.
ಸಾವಿರಕ್ಕೂ ಹೆಚ್ಚು ಪ್ರಕಾರದ ಅಸಂರಕ್ಷಿತ ಸ್ಮಾರಕಗಳಿವೆ. ಅವುಗಳ ವ್ಯವಸ್ಥಿತ ಅಧ್ಯಯನ ಮತ್ತು ಸಮೀಕ್ಷೆ ಮಾಡಿ ಸಂರಕ್ಷಣೆಗೆ ನಿಖರವಾದ ಮಾಹಿತಿ ಸಂಗ್ರಹದ ಅಗತ್ಯವಿದೆ . ಮೂರೂವರೆ ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಉದ್ದೇಶವಿದೆ. ಸಮೀಕ್ಷೆಯ ನಂತರ ಒಂದೂವರೆ ತಿಂಗಳು ದಾಖಲೆಗಳ ಕ್ರೂಢೀಕರಣ ನಡೆಯಲಿದೆ.
ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮಾಗಡಿ, ದೇವನ ಹಳ್ಳಿ ರಾಣೆಬೆನ್ನೂರು, 'ಶಹಬಾದ್ ಕಂಪ್ಲಿ, ಸಂಡೂರು, ಚಿಕ್ಕಮಗಳೂರು, ಸೋಮವಾರಪೇಟೆ, ಕುಶಾಲನಗರ, ಪಾಂಡವಪುರ ಹಾಗೂಭದ್ರಾವತಿ,
ಪುತ್ತೂರು,ಹಿರಿಯೂರು ತಾಲ್ಲೂಕುಗಳಲ್ಲಿ ಈಗ ಸಮೀಕ್ಷೆ ಆರಂಭವಾಗಲಿದೆ.ಈ ಉದ್ದೇಶಕ್ಕಾಗಿ ಸರ್ಕಾರ 35 ಲಕ್ಷ ಅನುದಾನ ಒದಗಿಸಿದೆ. ಅಧಿಕಾರಿಗಳು, ಕ್ಯುರೇಟರ್ಗಳು, ಸಿಬ್ಬಂದಿ, ತಜ್ಞರು, ಪರಂಪರೆಯ ವಿಷಯ ದಲ್ಲಿ ಸ್ನಾತಕೋತ್ತರ ಪದವೀಧರರು, ಪದವೀಧರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರು
ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥ ರೊಂದಿಗೆ ಚರ್ಚೆ ನಡೆಸಲಿವೆ, ಅಲ್ಲಿರುವ ವೀರಗಲ್ಲು, ಮಾಸ್ತಿಗಲ್ಲು, ಮಂಟಪ, ದೇವಸ್ಥಾನಗಳು ಮೊದಲಾದ ರಚನೆಗಳ ಮಾಹಿತಿಯನ್ನು ದಾಖಲಿಸ ಲಾಗುತ್ತದೆ. ಅವು ಯಾವ ಸ್ಥಿತಿಯಲ್ಲಿವೆ ಎಂಬುದನ್ನು
ನಮೂದಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ದೇಗುಲವಿದ್ದರೆ ವಿಶೇಷವಾಗಿ ದಾಖಲಿಸಲಾಗುತ್ತದೆ. ನಿಗದಿತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತದೆ.
ದೇಶದ ಬದಲಾಯಿಸಲಾಗದ ಮತ್ತು ನವೀಕರಿಸಲಾಗದ ಸಾಂಸ್ಕೃತಿಕ ಸಂಪನ್ಮೂಲಗಳಾದ ಸ್ಮಾರಕಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲು ಪುರಾತತ್ವ ಇಲಾಖೆ ಮತ್ತು ಸರ್ಕಾರ ಕೈಗೊಂಡಿರುವ ಈ ಕಾರ್ಯಕ್ಕೆ ನಾಗರೀಕರ ಮತ್ತು ಸಮಾಜದ ಬೆಂಬಲ ಅಗತ್ಯವಿದೆ. ತನ್ಮೂಲಕ ನಮ್ಮ ದೇಶದ ಭವ್ಯ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ಮಾರ್ಗಸೂಚಿ ಫಲಕ
ಜೀವನವೆಂಬ ದಾರಿಯನ್ನು
ಕ್ರಮಿಸಲು ನಾವು ಯಾವಾಗಲೂ
ಆಗಿರಬೇಕು ಜಾಗರೂಕ ಚಾಲಕ |
ಇದರ ಜೊತೆಗೆ ಗಮನಿಸಲೇಬೇಕು ಅನುಭವಸ್ತರು ನಮಗಾಗಿ
ನೆಟ್ಟಿರುವ ಮಾರ್ಗಸೂಚಿ ಫಲಕ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಮಾನವ ಹಕ್ಕುಗಳ ದಿನ ...
ಇಂದು ವಿಶ್ವದಲ್ಲಿ ಬಹುತೇಕ ದೇಶಗಳು ಸ್ವತಂತ್ರವಾದರೂ ಯಾವ ದೇಶದಲ್ಲೂ ಹಿಂಸೆ, ದೌರ್ಜನ್ಯ ಇತ್ಯಾದಿಗಳು ಕಡಿಮೆಯಾಗಿಲ್ಲ ಪರಸ್ಪರ ಅಪನಂಬಿಕೆ ,ಹಿಂಸೆ ಹೆಸರಲ್ಲಿ ಎರಡು ವಿಧ್ವಂಸಕ ವಿಶ್ವ ಸಮರ ಕಂಡರೂ ಪರಸ್ಪರ ಕಚ್ಚಾಟ ಮಾಡುತ್ತ ಮಾನವ ತನ್ನ ಹಕ್ಕುಗಳನ್ನು ತಾನೇ ಉಲ್ಲಂಘನೆ ಮಾಡುವ ಪ್ರಕರಣಗಳು ಈಗಲೂ ಮುಂದುವರೆದಿರುವುದು ವಿಪರ್ಯಾಸ.
ವಿಶ್ವ ಮಾನವ ಹಕ್ಕುಗಳ ದಿನದಂದು ಹೀಗೊಂದು ಚಿಂತನೆ ನನ್ನ ಮನದಿ ಬಂದು ಹೋಯಿತು.
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1948 ನವೆಂಬರ್ 10 ರಂದು ಮಾನವ ಹಕ್ಕುಗಳನ್ನು ಅಂಗೀಕಾರ ಮಾಡಲಾಯಿತು ಅದರ ನೆನಪಿಗಾಗಿ ಪ್ರತಿವರ್ಷ ನಾವು ಈ ದಿನವನ್ನು ಮಾನವ ಹಕ್ಕುಗಳ ದಿನ ಎಂದು ಆಚರಿಸುತ್ತೇವೆ.
ಭಾರತದ ಸಂವಿಧಾನದಲ್ಲಿ ನಮ್ಮ ಹಕ್ಕುಗಳಿಗೆ ವಿಶೇಷವಾದ ಒತ್ತು ನೀಡಿರುವುದು ನಮಗೆ ತಿಳಿದೇ ಇದೆ.
ಮಾನವ ಹಕ್ಕುಗಳ ಪರಿಧಿ ವ್ಯಾಪಕ ಸ್ವರೂಪದ್ದು.ಇದು ನಾಗರಿಕ ರಾಜಕೀಯ, ಮತ್ತು ಆರ್ಥಿಕ ಹಕ್ಕುಗಳನ್ನು ಒಳಗೊಂಡಿರುವುದು. ಇವುಗಳಲ್ಲಿ ಅತಿ ಮುಖ್ಯವಾದವು ಸಮಾನತೆಯ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣಿ ರಹಿತ ಆರೋಗ್ಯಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು, ತಮ್ಮ ಆಯ್ಕೆಯ ವೃತ್ತಿ, ಕಲಕೆಯ ಹಕ್ಕು, ಭಾರತದ ಯಾವುದೇ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿ ವಾಸಿಸಲು, ಆತ್ಮಸಾಕ್ಷಿ ಸ್ವಾತಂತ್ರ್ಯ, ನಂಬಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಸ್ಪೃಶ್ಯತೆ ಅಥವಾ ಜಾತಿ ಮತ ಅಥವಾ ಲಿಂಗ ಆಧಾರಿತ ತಾರತಮ್ಯದಿಂದ ಮುಕ್ತಿ ಇತ್ಯಾದಿ...
ಈ ಮಹತ್ತರ ಚಿಂತನೆಯ ಮೇರೆಗೆ ಮಾನವ ಹಕ್ಕುಗಳ ರಕ್ಷಣಿಗೆ ಮತ್ತು ಅವುಗಳ ಪರಿಣಾಮಕಾರಿ ಜಾರಿಗಾಗಿ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ, 1993ರ ಅನ್ವಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ರಚನೆ ಮಾಡಲಾಗಿದೆ.
ಪ್ರತಿಯೊಬ್ಬ ಪ್ರಜೆಯ ಮಾನವ ಹಕ್ಕುಗಳನ್ನು ರಕ್ಷಿಸುವುದು ರಾಜ್ಯದ ಮತ್ತು ಇದರ ಎಲ್ಲಾ ಸಂಸ್ಥೆಗಳ ಆದ್ಯ ಕರ್ತವ್ಯ, ರಾಜ್ಯದ ಯಾವುದೇ ಕಛೇರಿಯಿಂದಾಗಲೇ ಅಥವಾ ಸಂಸ್ಥೆಯಿಂದಾಗಲೀ' ಯಾವುದೇ ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಪಕ್ಷದಲ್ಲಿ ಅಥವಾ ಮಾನವ ಹಕ್ಕುಗಳ ರಕ್ಷಣೆ ಮಾಡಲು ವಿಫಲವಾಗಿರುವ ಸಂದರ್ಭಗಳಲ್ಲಿ ತೊಂದರೆಗೆ ಒಳಗಾದವರಾಗಲೀ ಅಥವಾ ಆತನ/ಆಕೆಯ ಪರವಾಗಿ ಬೇರೆ ಯಾರಾದರಾಗಲೀ ಅವರ ಕುಂದು ಕೊರತೆಗಳನ್ನು ಪರಿಹರಿಸಲು, ನ್ಯಾಯ ದೊರಕಿಸಿಕೊಡಲು ಮಾನವ ಹಕ್ಕುಗಳ ಆಯೋಗವನ್ನು ಸ್ಥಾಪಿಸಲಾಗಿದೆ.ನಮ್ಮ ಸುತ್ತ ಮುತ್ತ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೆ ಸೂಕ್ತ ಪ್ರಾಧಿಕಾರಕ್ಕೆ ಮಾಹಿತಿಯನ್ನು ನೀಡೋಣ. ನಾವು ಮಾನವರಾಗಿ ಮಾನವ ಹಕ್ಕುಗಳ ಸಂರಕ್ಷಕರಾಗೋಣ...
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಜೇನು.
ಎಷ್ಟೇ ಅಡೆ ತಡೆಗಳು
ಸವಾಲುಗಳು ಬಂದರೂ
ನಿಲ್ಲಿಸಬೇಡ ಪ್ರಯತ್ನವ ನೀನು|
ಯಾರೋ ಕಿಡಿಗೇಡಿಗಳು
ಕಿತ್ತುಹಾಕಿದರೆಂದು ಗೂಡು ಕಟ್ಟುವುದ
ನಿಲ್ಲಿಸುವದೇ ಜೇನು ||
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಹೃದಯವ ಮೀಟಿದವಳೆ ...
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ
ಅನುಕ್ಷಣವೂ ಮುದ್ದಿಸಿ ಹೃದಯವ ಮೀಟಿದವಳೆ
ನವಭಾವ ತುಂಬಿ ನನ ಮದಗೊಳಿಸಿದವಳೆ
ಕವಿಭಾವಗಳನು ಅರಳಿಸಿ ಕವಿತೆ ಸೃಷ್ಟಿಸಿದವಳೆ
ಚೈತ್ರದಲಿ ಪ್ರೀತಿಯ ಚಿಗುರಿಸಿ ಆಶಾಡದಲೂ ರಮಿಸಿದವಳೆ
ಮಾಘದ ಚಳಿಯಲಿ ಬಾಗಿ ಮುದ್ದಿಸಿ ಬಿಸಿಯಪ್ಪಿಗೆ ನೀಡಿದವಳೆ
ಹೀಗೆಯೇ ಸರ್ವ ಋತುಗಳಲೂ ನನ್ನೊಂದಿಗೆ ನೀನಿದ್ದರೆ ಸಾಕು
ಸ್ವರ್ಗವೆಂಬ ಲೋಕ ಅಲ್ಲಲ್ಲೋ ಇರುವುದಂತೆ ಅದೇಕೆ ಬೇಕು?
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
*ವಧು ಬೇಕಾಗಿದೆ...*
ನಾನು ವಯಸ್ಸಿಗೆ ಬಂದ ವರ
ಮದುವೆಯಾಗಲು ನನಗೊಂದು ವಧು ಬೇಕಾಗಿದೆ
ನಾನೇನೂ ಸಂತನಲ್ಲ ನನ್ನ ಸಂತಾನ ಅಭಿವೃದ್ಧಿಮಾಡಿಕೊಳ್ಳಲು ವಧು ಬೇಕಾಗಿದೆ.
ನೇಗಿಲ ಯೋಗಿ, ದೇಶದ ಬೆನ್ನೆಲುಬು
ಹೀಗೆ ಏನೋನೋ ಹೊಗಳಿ ಅಟ್ಟಕ್ಕೇರಿಸುವ ನೀವು ನನಗೆ ಹೆಣ್ಣು ಕೊಡುವಾಗ ಮಾತ್ರ ಹಿಂಜರಿಯದಿರಿ
ನನ್ನ ಸಂಸಾರದ ನೊಗಕ್ಕೆ ಹೆಗಲು ಕೊಡೋ ವಧು ಬೇಕಾಗಿದೆ.
ರಟ್ಟೆಯಲಿ ಶಕ್ತಿಇದೆ,ದುಡಿದುಣ್ಣೋ ಬುದ್ದಿ ಇದೆ
ಕೆಟ್ಟಗುಣಗಳೇನೂ ಇಲ್ಲ ಒಟ್ಟಾರೆ ರಾಣಿಯಂತೆ ನೋಡಿಕೊಳ್ಳುವೆ ದಯವಿಟ್ಟು ಕೊಟ್ಟು ಬಿಡಿ ನನಗೂ ವಧು ಬೇಕಾಗಿದೆ.
ನಗರದವರೇ ಬೇಕು, ನಗದವರೇಬೇಕು ಎಂಬ ಹಠವೇಕೆ ನಗು ನಗು ನಗುತಾ ಭೂತಾಯಿ ಸೇವೆ ಮಾಡುವ ನನಗೂ ಒಂದು ವಧು ಬೇಕಾಗಿದೆ.
ಸರಕಾರಿ ನೌಕರಿ ನಮಗಿಲ್ಲ ,ನಮ್ಮ ತರಕಾರಿ ಇಲ್ಲದಿರೆ ನಿಮ್ಮ ಅಡುಗೆ ರುಚಿಇಲ್ಲ ತಿಂಗಳ ಪಗಾರವಿಲ್ಲದಿದ್ದರೂ ತಿಂಗಳ ಬೆಳಕಿನಲ್ಲಿ ನನ್ನವಳ ಮುದ್ದಿಸಿ ಸಂಸಾರ ನಡೆಸಲು ನನಗೆ ವಧು ಬೇಕಾಗಿದೆ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ನಮ್ಮ ದುರ್ಗ...
ನಾಲ್ಕನೇ ತರಗತಿಯಲ್ಲಿ ಓದುವಾಗ ಮೊದಲು ನೋಡಿದ್ದ ದುರ್ಗದ ಕೋಟೆಯನ್ನು ನಂತರ ಹತ್ತಾರು ಬಾರಿ ನೋಡಿದ್ದೆ.ದುರ್ಗಾಸ್ತಮಾನ, ದುರ್ಗದ ಬೇಡರ್ದಂಗೆ, ಗಂಡುಗಲಿ ಮದಕರಿ ನಾಯಕ ಮುಂತಾದ ಪುಸ್ತಕಗಳನ್ನು ಓದಿದ ಮೇಲೆ ಪುನಃ ಕೋಟೆ ನೋಡಬೇಕೆನಿಸಿ ಆತ್ಮೀಯರಾದ ಶಂಕರಾನಂದ ಅವರ ಜೊತೆಯಾಗಿ ಕೋಟೆ ನಾಡಿನ ಕಡೆ ಕಾರ್ ಓಡಿಸಿಯೇಬಿಟ್ಟೆ.
ಹೈವೇಯಲ್ಲಿ ಪಯಣ ಮಾಡುತ್ತಾ ಹಿರಿಯೂರು ದಾಟಿ ಬುರುಜಿನರೊಪ್ಪದ ಗಣೇಶನ ದರ್ಶನ ಪಡೆದು ಅಲ್ಲೇ ಇರುವ ಹೋಟೆಲ್ ನಲ್ಲಿ ಇಡ್ಲಿ , ಪಲಾವ್ ತಿಂದು ಮತ್ತೆ ಕಾರ್ ಏರಿ ದುರ್ಗದತ್ತ ಹೊರೆಟೆವು .
ದುರ್ಗ ತಲುಪಿದಾಗ ಹತ್ತುಗಂಟೆಯಾಗಿತ್ತು..
ಕಲ್ಲಿನ ಕೋಟೆಯ ಮುಂದೆ ನಿಂತು ಅದನ್ನು ನೋಡುವಾಗ ಈಗಾಗಲೇ ಎಷ್ಟೋ ಬಾರಿ ನೋಡಿದರೂ ಹೊಸದಾಗಿ ಕಂಡಿತು.ಟಿಕೆಟ್ ಪಡೆದು ಒಳಹೊಕ್ಕಾಗ ಮತ್ತೆ ನಮ್ಮ ಕೋಟೆಯ ಬಗ್ಗೆ ಮತ್ತೊಮ್ಮೆ ಹೆಮ್ಮೆ ಮೂಡಿತು.
ಚಿತ್ರದುರ್ಗದ ಕೋಟೆಯ ಒಳಹೊಕ್ಕ ನಮ್ಮನ್ನು ಬೃಹದಾಕಾರದ ಶಿಲೆಗಳು ಹಾಗೂ ಕಲ್ಲಿನ ಗೋಡೆಗಳು ಸ್ವಾಗತಿಸಿದವು ಅದರ ಮೇಲಿನ ನಾಗರಹಾವಿನ ಚಿತ್ರಗಳು ವಿಷ್ಣುವರ್ಧನ್ ,ಅಂಬರೀಶ್ ಮತ್ತು ಪುಟ್ಟಣ್ಣ ಹಾಗೂ ಆರತಿಯನ್ನು ನೆನಪು ಮಾಡಿದವು. ಬೃಹತ್ ಕಲ್ಲು, ಬೆಟ್ಟಗಳು ಹಾಗು ದೃಶ್ಯ ಕಣಿವೆಗಳು ಸುತ್ತಮುತ್ತಲಿನಿಂದ ಕಂಡು ಬರುತ್ತವೆ. ಈ ಕೋಟೆಯನ್ನು ಕಟ್ಟಲು ರಾಷ್ಟ್ರಕೂಟರು,ಚಾಲುಕ್ಯರು ಹಾಗು ದುರ್ಗದ ನಾಯಕರು ವಹಿಸಿದ ಶ್ರಮ ಎದ್ದು ಕಾಣುತ್ತದೆ
ಕನ್ನಡದಲ್ಲಿ ಈ ಕೋಟೆಯನ್ನು ಕಲ್ಲಿನ ಕೋಟೆ,ಉಕ್ಕಿನ ಕೋಟೆ ಹಾಗು ಏಳು ಸುತ್ತಿನ ಕೋಟೆ ಎಂದು ಸಹ ಕರೆಯುವ ಮಹಾನ್ ಸ್ಮಾರಕಕವನ್ನು ನೋಡಲು ಪ್ರವಾಸೋದ್ಯಮ ಇಲಾಖೆಯ ಮತ್ತು ಪುರಾತತ್ವ ಇಲಾಖೆಯು ಉತ್ತಮ ಮಾಹಿತಿ ಫಲಕಗಳನ್ನು ಹಾಕಿಸಿರುವುದು ಬಹಳ ಉತ್ತಮ ಅಂಶವಾಗಿದೆ.
ಆ ಫಲಕಗಳ ಆಧಾರದ ಮೇಲೆ ಕೋಟೆಯಲ್ಲಿ ಪ್ರಮುಖವಾಗಿ ಪ್ರವಾಸಿಗರು ನೋಡಬಹುದಾದ 25 ಪ್ರದೇಶಗಳ ಪಟ್ಟಿ ಮಾಡಿದ್ದಾರೆ.
ಅವುಗಳನ್ನು ನೋಡಲು ನಕ್ಷೆ ಮತ್ತು ಆ ಸ್ಥಳಗಳ ವಿವರ ನೀಡಿರುವುದು ಪ್ರಶಂಸನಾರ್ಹ .