*ವಧು ಬೇಕಾಗಿದೆ...*
ನಾನು ವಯಸ್ಸಿಗೆ ಬಂದ ವರ
ಮದುವೆಯಾಗಲು ನನಗೊಂದು ವಧು ಬೇಕಾಗಿದೆ
ನಾನೇನೂ ಸಂತನಲ್ಲ ನನ್ನ ಸಂತಾನ ಅಭಿವೃದ್ಧಿಮಾಡಿಕೊಳ್ಳಲು ವಧು ಬೇಕಾಗಿದೆ.
ನೇಗಿಲ ಯೋಗಿ, ದೇಶದ ಬೆನ್ನೆಲುಬು
ಹೀಗೆ ಏನೋನೋ ಹೊಗಳಿ ಅಟ್ಟಕ್ಕೇರಿಸುವ ನೀವು ನನಗೆ ಹೆಣ್ಣು ಕೊಡುವಾಗ ಮಾತ್ರ ಹಿಂಜರಿಯದಿರಿ
ನನ್ನ ಸಂಸಾರದ ನೊಗಕ್ಕೆ ಹೆಗಲು ಕೊಡೋ ವಧು ಬೇಕಾಗಿದೆ.
ರಟ್ಟೆಯಲಿ ಶಕ್ತಿಇದೆ,ದುಡಿದುಣ್ಣೋ ಬುದ್ದಿ ಇದೆ
ಕೆಟ್ಟಗುಣಗಳೇನೂ ಇಲ್ಲ ಒಟ್ಟಾರೆ ರಾಣಿಯಂತೆ ನೋಡಿಕೊಳ್ಳುವೆ ದಯವಿಟ್ಟು ಕೊಟ್ಟು ಬಿಡಿ ನನಗೂ ವಧು ಬೇಕಾಗಿದೆ.
ನಗರದವರೇ ಬೇಕು, ನಗದವರೇಬೇಕು ಎಂಬ ಹಠವೇಕೆ ನಗು ನಗು ನಗುತಾ ಭೂತಾಯಿ ಸೇವೆ ಮಾಡುವ ನನಗೂ ಒಂದು ವಧು ಬೇಕಾಗಿದೆ.
ಸರಕಾರಿ ನೌಕರಿ ನಮಗಿಲ್ಲ ,ನಮ್ಮ ತರಕಾರಿ ಇಲ್ಲದಿರೆ ನಿಮ್ಮ ಅಡುಗೆ ರುಚಿಇಲ್ಲ ತಿಂಗಳ ಪಗಾರವಿಲ್ಲದಿದ್ದರೂ ತಿಂಗಳ ಬೆಳಕಿನಲ್ಲಿ ನನ್ನವಳ ಮುದ್ದಿಸಿ ಸಂಸಾರ ನಡೆಸಲು ನನಗೆ ವಧು ಬೇಕಾಗಿದೆ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment